Tag: ಅಡ್ಮಿರಲ್

  • ಸಮುದ್ರದ ಒಳಗಡೆಯಿಂದ ಭಾರತಕ್ಕೆ ನುಸುಳಲು ಉಗ್ರರಿಗೆ ವಿಶೇಷ ತರಬೇತಿ

    ಸಮುದ್ರದ ಒಳಗಡೆಯಿಂದ ಭಾರತಕ್ಕೆ ನುಸುಳಲು ಉಗ್ರರಿಗೆ ವಿಶೇಷ ತರಬೇತಿ

    ನವದೆಹಲಿ: ಸಮುದ್ರದ ಒಳಗಡೆಯಿಂದ ಭಾರತಕ್ಕೆ ಉಗ್ರರು ನುಸುಳಲು ಮುಂದಾಗುತ್ತಿದ್ದಾರೆ ಎನ್ನುವ ಸ್ಫೋಟಕ ವಿಚಾರ ಈಗ ಬೆಳಕಿಗೆ ಬಂದಿದೆ.

    ಹೌದು. ಗಡಿಯಲ್ಲಿ ಉಗ್ರರು ನುಸುಳಲು ಒಂದು ಕಡೆ ಗುಂಡಿನ ದಾಳಿ ನಡೆಸಿ ಭಾರತದ ಸೈನ್ಯದ ಗಮನವನ್ನು ಸೆಳೆಯುತ್ತಿದ್ದ ಪಾಕ್ ತಂತ್ರ ಈಗಾಗಲೇ ವಿಫಲವಾಗಿದೆ. ಇದಾದ ಬಳಿಕ ಸುರಂಗದ ಮೂಲಕ ಪ್ರವೇಶಿಸುವ ಉಗ್ರರ ತಂತ್ರವನ್ನು ಭಾರತ ಬಯಲು ಮಾಡಿದೆ. ಮುಂಬೈ ದಾಳಿಯ ನಂತರ ನೌಕಾ ಸೇನೆ ಸಮುದ್ರದಲ್ಲಿ ಹದ್ದಿನ ಕಣ್ಣಿಟ್ಟಿದ್ದರಿಂದ ಬೋಟ್ ಮೂಲಕ ಭಾರತ ಪ್ರವೇಶಿಸವುದು ಅಷ್ಟು ಸುಲಭವಲ್ಲ ಎನ್ನುವುದು ಉಗ್ರರಿಗೆ ಗೊತ್ತಾಗಿದೆ. ಹೀಗಾಗಿ ಈಗ ನೀರಿನ ಅಡಿಯಲ್ಲಿ ಈಜಿಕೊಂಡು ಭಾರತ ಪ್ರವೇಶಿಸಲು ಈಗ ಉಗ್ರರು ಸಿದ್ಧತೆ ನಡೆಸುತ್ತಿದ್ದಾರೆ.

    ನೌಕಾ ಸೇನೆಯ ಮುಖ್ಯಸ್ಥ ಅಡ್ಮಿರಲ್ ಕರಂ ಬೀರ್ ಸಿಂಗ್ ಈ ವಿಚಾರವನ್ನು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಗುಪ್ತಚರ ಇಲಾಖೆ ನೀಡಿದ ಮಾಹಿತಿ ಪ್ರಕಾರ ಜೈಷ್ ಸಂಘಟನೆಯಲ್ಲಿ ಅಂಡರ್ ವಾಟರ್ ವಿಭಾಗವಿದೆ. ಈ ಸಂಘಟನೆ ನೀರಿನ ಮೂಲಕ ಸಾಗಿ ಭಾರತಕ್ಕೆ ಹೇಗೆ ನುಸುಳಬೇಕು ಎನ್ನುವುದರ ಬಗ್ಗೆ ತರಬೇತಿ ನೀಡುತ್ತಿದೆ. ಆದರೆ ಭಾರತಕ್ಕೆ ಏನು ಆಗದಂತೆ ನಾವು ಭರವಸೆ ನೀಡುತ್ತೇವೆ. ನಾವು ಯಾವಾಗಲೂ ಹೈ ಅಲರ್ಟ್ ಆಗಿದ್ದೇವೆ ಎಂದು ತಿಳಿಸಿದ್ದಾರೆ.

    ಕಳೆದ ವಾರ ಏರ್ ಚೀಫ್ ಮಾರ್ಷಲ್ ಬಿಎಸ್ ಧನೋವಾ ಮಾತನಾಡಿ, ಶತ್ರುಗಳ ಚಲನೆ ಇರಲಿ ಅಥವಾ ಇಲ್ಲದಿರಲಿ ವಾಯುಸೇನೆ ಯಾವಾಗಲೂ ಗಡಿಯಲ್ಲಿ ಎಚ್ಚರದಲ್ಲಿ ಇರುತ್ತದೆ. ನಾಗರಿಕ ವಿಮಾನಗಳು ರೇಖೆಯನ್ನು ದಾಟಿದರೂ ಸಹ ನಾವು ನಿಯಂತ್ರಣ ಸಾಧಿಸುತ್ತೇವೆ ಎಂದು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದರು.

    2019ರ ಪುಲ್ವಾಮಾ ದಾಳಿ ಬಳಿಕ ಸರ್ಕಾರ ಪ್ರತೀಕಾರ ತೀರಿಸಲು ಮೂರು ವಿಭಾಗಗಳ ಮುಖ್ಯಸ್ಥರ ಜೊತೆ ಸಭೆ ನಡೆಸಿತ್ತು. ಈ ಸಂದರ್ಭದಲ್ಲಿ ಬಿಪಿನ್ ರಾವತ್ ಭೂಸೇನೆ ಯಾವುದೇ ಕಾರ್ಯಾಚರಣೆಗೆ ಸಿದ್ಧವಾಗಿದೆ. ಅಗತ್ಯ ಬಿದ್ದರೆ ಗಡಿ ದಾಟಿ ಹೋರಾಟ ಮಾಡಲು ನಾವು ಪೂರ್ಣವಾಗಿ ತಯಾರಿದ್ದೇವೆ ಎಂಬುದಾಗಿ ಭರವಸೆ ನೀಡಿದ್ದ ವಿಚಾರವನ್ನು ಸೇನೆಯ ಇಬ್ಬರು ಹಿರಿಯ ಅಧಿಕಾರಿಗಳು ತಿಳಿಸಿದ್ದರು.

    ಪುಲ್ವಾಮಾ ದಾಳಿಯ ಬಳಿಕ ಯಾವ ರೀತಿ ಸಿದ್ಧಗೊಂಡಿದೆ ಎಂದು ಸರ್ಕಾರ ಸೇನೆಯನ್ನು ಕೇಳಿತ್ತು. ಈ ಪ್ರಶ್ನೆಗೆ ಬಿಪಿನ್ ರಾವತ್, 2016ರ ಉರಿ ಮೇಲಿನ ದಾಳಿಯ ಬಳಿ ಬಳಿಕ ಸಾಕಷ್ಟು ಮದ್ದುಗುಂಡುಗಳ ಸಂಗ್ರಹವನ್ನು ಮಾಡಿಕೊಂಡಿದ್ದೇವೆ. ಹೀಗಾಗಿ ಗಡಿಯನ್ನು ದಾಟಿಯೂ ಹೋರಾಟ ನಡೆಸಲು ಸೇನೆ ಪೂರ್ಣವಾಗಿ ತಯಾರಾಗಿದೆ ಎಂದು ಉತ್ತರಿಸಿದ್ದರು.