Tag: ಅಡುಗೆ ಭಟ್ಟ

  • ಪಠಾಣ್ ಸೋತಿದ್ದರೆ ಹೋಟೆಲ್ ನಲ್ಲಿ ಅಡುಗೆ ಮಾಡ್ತಿದ್ದೆ : ಶಾರುಖ್ ಖಾನ್

    ಪಠಾಣ್ ಸೋತಿದ್ದರೆ ಹೋಟೆಲ್ ನಲ್ಲಿ ಅಡುಗೆ ಮಾಡ್ತಿದ್ದೆ : ಶಾರುಖ್ ಖಾನ್

    ಬಾಲಿವುಡ್ ನಟ ಶಾರುಖ್ ಖಾನ್ (Shah Rukh Khan) ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ. ಪಠಾಣ್ (Pathan) ಸಿನಿಮಾದ ಸಕ್ಸಸ್ (Success) ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಠಾಣ್ ಸಿನಿಮಾ ಒಂದು ವೇಳೆ ಸೋತಿದ್ದರೆ ತಾವು ಅಡುಗೆ (Cooking) ಭಟ್ಟ ಆಗುತ್ತಿದ್ದೆ ಎನ್ನುವ ಮಾತುಗಳನ್ನು ಆಡಿದ್ದಾರೆ. ಅದಕ್ಕಾಗಿಯೇ ಅವರು ಹೋಟೆಲ್ (Hotel) ಉದ್ಯಮಕ್ಕೆ ಕಾಲಿಡುತ್ತಿದ್ದ ಸಂಗತಿಯನ್ನೂ ತಿಳಿಸಿದ್ದಾರೆ.

    ಸತತ ನಾಲ್ಕು ವರ್ಷಗಳಿಂದ ಶಾರುಖ್ ಖಾನ್ ಅವರಿಗೆ ಯಾವುದೇ ಗೆಲುವು ಸಿಕ್ಕಿಲ್ಲ. ಪಠಾಣ್ ಸಿನಿಮಾದ ಬಗ್ಗೆ ನಿರೀಕ್ಷೆ ಇದ್ದರೂ, ಅದಕ್ಕೆ ಆದ ಅಡೆತಡೆಯಿಂದಾಗಿ ಸ್ವತಃ ಶಾರುಖ್ ಗಲಿಬಿಲಿಗೊಂಡಿದ್ದರಂತೆ. ಬಾಯ್ಕಾಟ್ ಹಾಗೂ ಮತ್ತಿತರ ಕಾರಣದಿಂದಾಗಿ ಪಠಾಣ್ ಸೋತಿದ್ದರೆ ತಾವು ತಮ್ಮದೇ ಹೋಟೆಲ್ ನಲ್ಲಿ ಅಡುಗೆ ಮಾಡುತ್ತಿರುವ ವಿಚಾರವನ್ನು ಹಂಚಿಕೊಂಡಿದ್ದಾರೆ. ಅಡುಗೆ ಮಾಡುವುದಕ್ಕಾಗಿಯೇ ಅವರು ತರಬೇತಿಯನ್ನು ಕೂಡ ಪಡೆದಿದ್ದರಂತೆ. ಇದನ್ನೂ ಓದಿ: ಟಾಲಿವುಡ್ ನಟ ನಾನಿಗೆ ಮೃಣಾಲ್ ಠಾಕೂರ್ ನಾಯಕಿ

    ಆದರೆ, ಪಠಾಣ್ ಅವರನ್ನು ಅಡುಗೆ ಮಾಡುವುದಕ್ಕೆ ಬಿಟ್ಟಿಲ್ಲ. ಕೇಳರಿಯದ ರೀತಿಯಲ್ಲಿ ಗೆಲುವು ತಂದುಕೊಟ್ಟಿದೆ. ಬಿಡುಗಡೆಯಾದ ಬಹುತೇಕ ಕಡೆ ಬಾಕ್ಸ್ ಆಫೀಸನ್ನು ಭರ್ತಿ ಮಾಡಿಸಿದೆ. ಈವರೆಗೂ ಅಂದಾಜು 500 ಕೋಟಿ ರೂಪಾಯಿ ಆದಾಯವನ್ನು ಅದು ತಂದುಕೊಟ್ಟಿದೆ ಎಂದು ಹೇಳಲಾಗುತ್ತಿದೆ. ಅಧಿಕೃತವಾಗಿ ಚಿತ್ರತಂಡದಿಂದ ಲಾಭದ ವಿಚಾರ ಬಹಿರಂಗವಾಗದೇ ಇದ್ದರೂ, ಸಿನಿ ಪಂಡಿತರು ಮಾತ್ರ ದಿನದ ಲೆಕ್ಕವನ್ನು ಕೊಡುತ್ತಲೇ ಇದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅಡುಗೆ ಭಟ್ಟನಿಗೆ ಕೊರೊನಾ- ಬೆಳಗ್ಗೆ ಮದುವೆ, ಸಂಜೆ ನವಜೋಡಿ ಕ್ವಾರಂಟೈನ್

    ಅಡುಗೆ ಭಟ್ಟನಿಗೆ ಕೊರೊನಾ- ಬೆಳಗ್ಗೆ ಮದುವೆ, ಸಂಜೆ ನವಜೋಡಿ ಕ್ವಾರಂಟೈನ್

    ತುಮಕೂರು: ದಿನೇ ದಿನೇ ಕೊರೊನಾ ತನ್ನ ಅಟ್ಟಹಾಸ ಮಿತಿಮೀರುತ್ತಿದೆ. ಮದುವೆ ಮನೆ ಅಡುಗೆ ಭಟ್ಟನಿಗೆ ಕೊರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ಮದುವೆಗೆ ಬಂದವರೆಲ್ಲಾ ಕ್ವಾರಂಟೈನ್ ಆಗಿದ್ದಾರೆ. ಬೆಳಗ್ಗೆ ತಾನೇ ಮದುವೆ ಮುಗಿಸಿದ ನವಜೋಡಿ ಕೊರೊನಾದಿಂದ ಸಂಜೆ ವೇಳೆಗೆ ಕ್ವಾರಂಟೈನ್‍ನಲ್ಲಿ ಲಾಕ್ ಆಗಿದ್ದಾರೆ.

    ಈ ಕೊರೊನಾ ಜಿಲ್ಲೆಯ ಗುಬ್ಬಿಯ ಹೇರೂರಿನ ನವ ಜೋಡಿಯೊಂದು ಕ್ವಾರಂಟೈನ್ ಸೇರುವಂತೆ ಮಾಡಿದೆ. ವಧುವರರಿಗೆ ಕೊರೊನಾ ಬಂದಿಲ್ಲ. ಬದಲಾಗಿ ಮದುವೆ ಮನೆಯಲ್ಲಿ ಅಡುಗೆ ಮಾಡಿದ್ದ ಅಡುಗೆ ಭಟ್ಟನಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಹೀಗಾಗಿ ನವ ಜೋಡಿ ಸೇರಿದಂತೆ ಮದುವೆಗೆ ಬಂದವರೆಲ್ಲಾ ಕ್ವಾರಂಟೈನ್ ಆಗಿದ್ದಾರೆ.

    ಹೇರೂರಿನ ವರ ಗಿರೀಶ್‍ಗೆ ಕಾಟೇನಹಳ್ಳಿಯ ವಧು ಮೀನಾಕ್ಷಿಯ ಜೊತೆ ವಿವಾಹವಾಗಿತ್ತು. ಹುಡುಗನ ಮನೆ ಆವರಣದಲ್ಲೇ ಮದುವೆ ನಡೆದಿದೆ. ಈ ಮದುವೆಗೆ ಅಡುಗೆ ಮಾಡಲು ಬಂದ ಭಟ್ಟ ಚಿಟ್ಟದ ಕುಪ್ಪೆ ನಿವಾಸಿ 50 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ. ಜೂನ್ 14 ರಂದು ಈತ ಸ್ವಾಬ್ ಕೊಟ್ಟು ಬಂದಿದ್ದ. ರಿಪೋರ್ಟ್ ಬರುವವರೆಗೂ ಈತನನ್ನು ಅಧಿಕಾರಿಗಳು ಕ್ವಾರಂಟೈನ್‍ನಲ್ಲಿ ಇಡಬೇಕಿತ್ತು. ಆದರೆ ಈತ ಎಲ್ಲಾ ಕಡೆ ಓಡಾಡಿಕೊಂಡು ಅಡುಗೆ ಕೆಲಸ ಮಾಡಿಕೊಂಡಿದ್ದ.

    ಜೂನ್ 18 ರಂದು ಅಡುಗೆ ಭಟ್ಟನ ಪಾಸಿಟಿವ್ ರಿಪೋರ್ಟ್ ಬಂದಿದೆ. ತಕ್ಷಣ ಎಚ್ಚೆತ್ತುಕೊಂಡ ಅಧಿಕಾರಿಗಳು ಅಡುಗೆ ಭಟ್ಟ ಇದ್ದ ಮದುವೆ ಮನೆಗೆ ದಾಳಿ ಮಾಡಿದ್ದಾರೆ. ಅಡುಗೆ ಭಟ್ಟ, ವಧುವರರು, ಕ್ಯಾಮೆರಾಮನ್, ವಧು ಮತ್ತು ವರನ ಹತ್ತಿರ ಸಂಪರ್ಕ ಇದ್ದವರು ಸೇರಿ ಒಟ್ಟು 56 ಜನರನ್ನು ಕ್ವಾರಂಟೈನ್ ಮಾಡಿದ್ದಾರೆ ಎಂದು ವರನ ಸಂಬಂಧಿ ಪಾತರಾಜು ಹೇಳಿದ್ದಾರೆ.

    ಅಂದಹಾಗೆ ಸೋಂಕಿತ ಅಡುಗೆ ಭಟ್ಟನ ಟ್ರಾವೆಲ್ ಹಿಸ್ಟರಿ ಏನೂ ಇಲ್ಲ. ಟಿ.ಬಿ ಹಾಗೂ ಹೃದಯ ಸಂಬಂಧಿ ಕಾಯಿಲೆ ಇದ್ದ ಈತ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಹೋಗಿದ್ದರು. ಅಲ್ಲಿಂದ ಸೋಂಕು ಈತನಿಗೆ ಹರಡಿರಬಹುದು ಎಂದು ಶಂಕಿಸಲಾಗಿದೆ.

  • ವಿಷ ಪ್ರಸಾದ ದುರಂತ: ಅಂಗವಿಕಲ ಮಗಳ ಸಾವಿಗೆ ಕಾರಣನಾದ್ನಾ ಅಡುಗೆ ಭಟ್ಟ ಪುಟ್ಟಸ್ವಾಮಿ?

    ವಿಷ ಪ್ರಸಾದ ದುರಂತ: ಅಂಗವಿಕಲ ಮಗಳ ಸಾವಿಗೆ ಕಾರಣನಾದ್ನಾ ಅಡುಗೆ ಭಟ್ಟ ಪುಟ್ಟಸ್ವಾಮಿ?

    ಮೈಸೂರು: ಚಾಮರಾಜನಗರದ ಕಿಚ್‍ಗುತ್ ಮಾರಮ್ಮ ದೇವಸ್ಥಾನದ ಪ್ರಸಾದದಲ್ಲಿ ವಿಷ ಬೆರೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಡುಗೆ ಭಟ್ಟ ಪುಟ್ಟಸ್ವಾಮಿ ಪೊಲೀಸರು ವಶಕ್ಕೆ ಪಡೆಯುವ ಸಾಧ್ಯತೆಗಳಿವೆ.

    ಘಟನೆ ಸಂಬಂಧ ಪುಟ್ಟಸ್ವಾಮಿ ಈಗಾಗಲೇ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಶೀಘ್ರವೇ ಚಾಮರಾಜನಗರ ಪೊಲೀಸರು ಅಲ್ಲಿಗೆ ತೆರಳಿ ವಶಕ್ಕೆ ಪಡೆಯಲಿದ್ದಾರೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಘಟನೆಯ ಬಳಿಕ ಯಾರಿಗೂ ಅನುಮಾನ ಬಾರದಿರಲಿ ಎಂದು ತನ್ನ ಮಗಳಿಗೂ ವಿಷ ಹಾಕಿ ಪುಟ್ಟಸ್ವಾಮಿ ಆಸ್ಪತ್ರೆಗೆ ದಾಖಲಾಗಿದ್ದಾನೋ ಎಂಬ ಅನುಮಾನವೊಂದು ಮೂಡಿದೆ. ಯಾಕಂದ್ರೆ ತಾನು ಪ್ರಸಾದ ತಿಂದಿದ್ದೇನೆ ಎಂದು ಆಸ್ಪತ್ರೆಯಲ್ಲಿ ಪುಟ್ಟಸ್ವಾಮಿ ಹೈಡ್ರಾಮಾ ಮಾಡಿದ್ದಾನೆ. ಹೀಗಾಗಿ ಪೊಲೀಸರು ಆಸ್ಪತ್ರೆಯ ವೈದ್ಯರ ಬಳಿ ಪುಟ್ಟಸ್ವಾಮಿ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಈ ವೇಳೆ ವೈದ್ಯರು ಪುಟ್ಟಸ್ವಾಮಿ ಸಂಪೂರ್ಣ ಆರೋಗ್ಯವಾಗಿದ್ದಾನೆ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಗ್ಯವಾಗಿರುವ ಕಾರಣ ವಶಕ್ಕೆ ಪಡೆಯುವ ಸಾಧ್ಯತೆಗಳಿವೆ.

    ಪುಟ್ಟಸ್ವಾಮಿ ಹೇಳಿದ್ದೇನು..?
    ಮಾರಮ್ಮನ ಮೇಲಾಣೆ…ಮಾದಪ್ಪನ ಮೇಲಾಣೆ.. ಅಡುಗೆಯಲ್ಲಿ ನಾನು ವಿಷ ಹಾಕಿಲ್ಲ. ನಾನು 2 ಸಾವಿರ ಸಂಬಳ ಕ್ಕೆ ಕೆಲಸಕ್ಕೆ ಹೋದವನು. ನಾನ್ಯಾಕೆ ಇಂತಹ ಕೆಲಸ ಮಾಡಲಿ. ನನಗೆ ಅಂಬಿಕಾ ಆಗಲಿ, ಅಂಬಿಕಾ ಪತಿಯಾಗಲಿ ಯಾರು ಅಷ್ಟು ಪರಿಚಯವಿಲ್ಲ. ಸಾಲೂರು ಬುದ್ಧಿಯನ್ನು ಇತ್ತೀಚೆಗೆ ನೋಡಿಯೇ ಇಲ್ಲ. ನನ್ನ ಮೇಲೆ ಅನುಮಾನ ಪಡಬೇಡಿ. ಯಾರೇ ತಪ್ಪು ಮಾಡಿದ್ದರು ಶಿಕ್ಷೆಯಾಗಲಿ. ನಾನೇ ತಪ್ಪು ಮಾಡಿದ್ದೇನೆ ಅಂದ್ರೂ ಶಿಕ್ಷೆ ಕೊಡಿ. ಆದರೆ ನಾನಂತೂ ವಿಷ ಹಾಕಿಲ್ಲ. ನನ್ನ ಮಗಳು ಅಂಗವಿಕಲೆ. ನನ್ನ ಒಬ್ಬಳು ಮಗಳಿಗೆ ಕಾಲು ಬರುತ್ತಿರಲಿಲ್ಲ. ನನಗೆ ಮೂವರು ಮಕ್ಕಳಿದ್ದಾರೆ ಎಂದು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತಿಳಿಸಿದ್ದಾನೆ.  ಇದನ್ನೂ ಓದಿ: ಸುಳ್ವಾಡಿ ದುರಂತ- ಮಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗದ ತಂದೆಯ ಕಣ್ಣೀರ ಕಥೆ ಓದಿ

    ಅಂಗವಿಕಲ ಮಗ್ಳನ್ನೇ ಕೊಲೆಗೈದ್ನಾ..?
    ಪುಟ್ಟಸ್ವಾಮಿ ಸುಳ್ವಾಡಿಯ ಮಾರಮ್ಮನ ದೇವಾಸ್ವಾನದಲ್ಲಿ ರೈಸ್‍ಬತ್ ಪ್ರಸಾದ ತಯಾರಿಸಿದ್ದನು. ಈ ಪ್ರಸಾದ ತಿಂದು ಆತನ 12 ವರ್ಷದ ಮಗಳು ಅನಿತಾ ಮೃತಪಟ್ಟಿದ್ದಳು. ಆದ್ರೆ ವಿಷ ಹಾಕಿದ ವಿಷಯ ತಿಳಿಯಬಾರದು ಎಂದು ಪುಟ್ಟಸ್ವಾಮಿ ತಾನೂ ಪ್ರಸಾದ ತಿಂದಿದ್ದಾನೆ. ಬಳಿಕ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆಯುವ ನಾಟಕವಾಡಿದ್ದಾನೆ ಅನ್ನೋ ಅನುಮಾನ ಮೂಡಿದೆ.

    ಒಟ್ಟಿನಲ್ಲಿ ಅಂಗವಿಕಲೆ ಮಗಳು ಪುಟ್ಟಸ್ವಾಮಿಗೆ ಭಾರವಾಗಿತ್ತು. ಹೀಗಾಗಿ ಅಡುಗೆ ಭಟ್ಟನೇ ವಿಷ ಹಾಕಿದ್ದಾನೆ ಅನ್ನೋ ಅನುಮಾನ ಪೊಲೀಸರಲ್ಲಿ ಬಲವಾಗಿ ಮೂಡಿದೆ.

    https://www.youtube.com/watch?v=gE3_7jm0p4M

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸುಳ್ವಾಡಿ ದುರಂತ- ಮಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗದ ತಂದೆಯ ಕಣ್ಣೀರ ಕಥೆ ಓದಿ

    ಸುಳ್ವಾಡಿ ದುರಂತ- ಮಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗದ ತಂದೆಯ ಕಣ್ಣೀರ ಕಥೆ ಓದಿ

    ಮೈಸೂರು: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಮಾರಮ್ಮ ದೇವಸ್ಥಾನದ ವಿಷಪ್ರಸಾದ ಸೇವಿಸಿ ಸಾವಿಗೀಡಾದವರ ಒಂದೊಂದು ಮನಕಲಕುವ ಘಟನೆಗಳನ್ನು ಕೇಳಿದ್ರೆ ನಿಮ್ಮ ಮನವೂ ಕಲಕುತ್ತದೆ. ದೇವಸ್ಥಾನದ ಅಡುಗೆ ತಯಾರಿಸಿದ ಪುಟ್ಟಸ್ವಾಮಿ ಸದ್ಯ ಚೇತರಿಸಿಕೊಳ್ಳುತ್ತಿದ್ದು, ಮಗಳನ್ನು ಉಳಿಸಿಕೊಳ್ಳಲು ಪರದಾಡಿದ ತಮ್ಮ ಕಣ್ಣೀರ ಕಥೆಯೊಂದನ್ನು ಪಬ್ಲಿಕ್ ಟಿವಿ ಜೊತೆ ಬಿಚ್ಚಿಟ್ಟಿದ್ದಾರೆ.

    ನನ್ನ ಹೊಟ್ಟೆಗೆ ವಿಷ ಪ್ರಸಾದ ಸೇರಿದೆ ಅಂತ ಗೊತ್ತಿದ್ರೂ ನನ್ನ ಮಗಳನ್ನು ಉಳಿಸಿಕೊಳ್ಳಲು ಶತ ಪ್ರಯತ್ನ ಮಾಡಿದ್ದೆ. ಆದ್ರೆ ಕೊನೆಗೂ ನನ್ನ ಮಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಅಷ್ಟು ಮಾತ್ರವಲ್ಲದೇ ಆಕೆಯ ಅಂತ್ಯಕ್ರಿಯೆಗೆ ಹೋಗುವ ಅವಕಾಶವನ್ನೂ ದೇವರು ನನಗೆ ನೀಡಿಲ್ಲ ಅಂತ ಪುಟ್ಟಸ್ವಾಮಿ ಕಣ್ಣೀರು ಹಾಕಿದ್ದಾರೆ.

    ಪುಟ್ಟಸ್ವಾಮಿ ಹೇಳಿದ್ದೇನು..?
    ನಾನು ರಾತ್ರಿ ಪಾಳಿಯದಲ್ಲಿ ಕೆಲಸ ಮಾಡುತ್ತಿದ್ದೆ. ಹೀಗಾಗಿ ಮಗಳು ನನ್ನ ನೋಡಲು ಬಂದಿದ್ದಳು. ಬೆಳಗ್ಗೆ ಗುದ್ದಲಿ ಪೂಜೆ ಇತ್ತು. ಆದ್ದರಿಂದ ಅಡುಗೆಗೆ ಸ್ವಲ್ಪ ಸಹಾಯ ಮಾಡಿದೆ. ಅಡುಗೆ ಆದ ಬಳಿಕ ನನ್ನ ಮಗಳು ಊಟ ಮಾಡಿದ್ದಾಳೆ. ಅವಳ ಊಟದಲ್ಲಿ ಅರ್ಧ ಉಳಿದಿತ್ತು. ಆವಾಗ ಆಕೆ ಅಪ್ಪ ನನಗೆ ಬೇಡ ನನಗೆ ಊಟ ಮಾಡಲು ಆಗುತ್ತಿಲ್ಲ ಅಂತ ಹೇಳಿದಳು. ನಾನೂ ಊಟ ಮಾಡಿದೆ ಅಂತ ಪುಟ್ಟಸ್ವಾಮಿ ಹೇಳಿದ್ರು.

    ಸ್ವಲ್ಪ ಹೊತ್ತು ಬಳಿಕ ನನ್ನ ಮಗಳು ಬಿದ್ದು ಒದ್ದಾಡುತ್ತಿದ್ದಳು. ಮಗಳು ಯಾಕೆ ಬಿದ್ದು ಒದ್ದಾಡುತ್ತಿದ್ದಾಳೆ ಅಂತ ಊರಿನ ಆಸ್ಪತ್ರೆಗೆ ಕರೆದುಕೊಂಡು ಬಂದೆ. ಸುಳ್ವಾಡಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಅಲ್ಲಿ ಬೇರೆ ಕಡೆ ಅಂಬುಲೆನ್ಸ್ ನಲ್ಲಿ ಕರೆದುಕೊಂಡು ಹೋಗಿ ಅಂದ್ರು. ಆದ್ರೆ ನಾನು ಬರುವಾಗಲೇ ಅಂಬುಲೆನ್ಸ್ ಹೊರಟಿತ್ತು. ಹೀಗಾಗಿ ನಾನು ಬೈಕಿನಲ್ಲಿ ಆಕೆಯನ್ನು ಸುಳ್ವಾಡಿಯಿಂದ 15 ಕಿ.ಮೀ ದೂರದಲ್ಲಿರುವ ರಾಮಾಪುರಕ್ಕೆ ಕರೆದುಕೊಂಡು ಬಂದೆ ಅಂತ ತಮ್ಮ ದುಃಖ ತೋಡಿಕೊಂಡರು.

    ನನ್ನ ಮಗಳನ್ನು ಆಸ್ಪತ್ರೆಗೆ ಸೇರಿಸಿದಾಗ ನನ್ನ ಹೊಟ್ಟೆಯೂ ತೊಳೆಸಿದಂತೆ ಆಗುತ್ತಿತ್ತು. ಆದ್ರೆ ಮೊದಲು ನನ್ನ ಮಗಳು ಚೆನ್ನಾಗಿರಬೇಕು. ನನಗೆ ಏನಾದ್ರೂ ಪರವಾಗಿಲ್ಲ. ಹೀಗಾಗಿ ಫಸ್ಟ್ ಮಗಳನ್ನು ತೋರಿಸಿ ಆಮೇಲೆ ನಾನು ಆಸ್ಪತ್ರೆಗೆ ಹೋಗುತ್ತೇನೆ ಅಂತ ಯೋಚಿಸಿದೆ. ಅದುವರೆಗೂ ನನ್ನ ಬಗ್ಗೆ ಯಾರ ಜೊತೆನೂ ಹೇಳಿಕೊಂಡಿಲ್ಲ. ಎಲ್ಲರ ಬಳಿಯೂ ನಾನು ಚೆನ್ನಾಗಿದ್ದೇನೆ ಅಂತಾನೇ ಹೇಳುತ್ತಾ ಬಂದೆ. ಆದ್ರೆ ಹೊಟ್ಟೆ ತೊಳೆಸುತ್ತಾ ಇತ್ತು. ವಾಂತಿ ಬರುವಂತೆ ಆಗುತ್ತಿತ್ತು. ನನ್ನ ಚಲನವಲನ ಕಂಡು ಸ್ಥಳೀಯರು ನೀನು ಮೊದಲು ಗಾಡಿ ಹತ್ತು ಅಂತ ಹೇಳುತ್ತಿದ್ದರು. ಆವಾಗ ನಾನು, ನನ್ನ ಮಗಳೇ ಹಿಂಗೆ ಇರುವಾಗ ನಾನು ಫಸ್ಟ್ ಗಾಡಿ ಹತ್ತಿ ಏನು ಮಾಡಲಿ ಅಂತ ಪ್ರಶ್ನಿಸಿದೆ. ನನಗೆ ಆಗಲೇ ತುಂಬಾ ಬೇಜಾರಾಗುತ್ತಿತ್ತು ಅಂತ ದುಃಖಿತರಾದ್ರು.

    ಕೊನೆಗೆ ನನ್ನ ಮಗಳು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಳು. ಆಕೆ ತೀರಿಕೊಂಡ ನಂತರ ನಾನು ಸತ್ತು ಹೋಗುತ್ತೆನೋ ಅಂತ ನನಗೂ ಹೊಟ್ಟೆ ತೊಳೆಸುತ್ತೆ, ವಾಂತಿ ಬಂದಂಗೆ ಆಗುತ್ತಿದೆ ಅಂತ ಹೇಳಿಕೊಂಡೆ. ಆಮೇಲೆ ಅವರು ನನ್ನನ್ನು ಆಸ್ಪತ್ರೆಗೆ ದಾಖಲಿಸಿದ್ರು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ಯಾರು ಎಂಬುದನ್ನು ಕಂಡುಹಿಡಿಯಬೇಕು. ಅಲ್ಲದೇ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಅಂತ ಹೇಳಿ ಗದ್ಗದಿತರಾದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv