Tag: ಅಡಿಪಾಯ

  • ರಾಮಮಂದಿರ ಕಟ್ಟಲು ಇದು ಸರಿಯಾದ ಸಮಯವಲ್ಲ: ಶಂಕರಾಚಾರ್ಯ ಸರಸ್ವತಿ

    ರಾಮಮಂದಿರ ಕಟ್ಟಲು ಇದು ಸರಿಯಾದ ಸಮಯವಲ್ಲ: ಶಂಕರಾಚಾರ್ಯ ಸರಸ್ವತಿ

    ನವದೆಹಲಿ: ಕೋಟ್ಯಂತರ ಹಿಂದೂಗಳ ಕನಸಿನ ರಾಮಮಂದಿರವನ್ನು ಕಟ್ಟಲು ಇದು ಸರಿಯಾದ ಸಮಯವಲ್ಲ ಎಂದು ಶಂಕರಾಚಾರ್ಯ ಸ್ವರೂಪಾನಂದ್ ಸರಸ್ವತಿ ಸ್ವಾಮೀಜಿಗಳು ಹೇಳಿದ್ದಾರೆ.

    ನೂರಾರು ವರ್ಷಗಳಿಂದ ಹಿಂದೂ ಸಮುದಾಯದ ಕನಸಿನ ದೇವಾಲಯವಾಗಿದ್ದ ರಾಮಮಂದಿರವನ್ನು ಕಟ್ಟಲು ಕಾಲ ಕೂಡಿಬಂದಿದೆ. ಇದಕ್ಕಾಗಿ ಮುಂದಿನ ತಿಂಗಳ ಆಗಸ್ಟ್ 5ಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಮಾಡಲು ಸಕಲ ಸಿದ್ಧತೆಗಳು ನಡೆದಿವೆ. ಆದರೆ ಈ ಪುಣ್ಯಕಾರ್ಯ ಮಾಡಲು ಇದು ಸರಿಯಾದ ಸಮಯವಲ್ಲ ಎಂದು ಶಂಕರಾಚಾರ್ಯ ಅಭಿಪ್ರಾಯ ಪಟ್ಟಿದ್ದಾರೆ. ಇದನ್ನೂ ಓದಿ: ರಾಮಮಂದಿರ ಶಿಲ್ಯಾನ್ಯಾಸಕ್ಕೆ ಬೆಳ್ಳಿ ಇಟ್ಟಿಗೆ- 50 ಮಂದಿ ವಿವಿಐಪಿಗಳು ಭಾಗಿ ಸಾಧ್ಯತೆ

    ನಾವು ಯಾವುದೇ ಸ್ಥಾನವನ್ನು ಅಥವಾ ರಾಮ ಮಂದಿರದ ಟ್ರಸ್ಟಿಯಾಗಲು ಬಯಸುವುದಿಲ್ಲ. ದೇವಾಲಯವನ್ನು ಸರಿಯಾಗಿ ನಿರ್ಮಿಸಬೇಕು ಮತ್ತು ಸರಿಯಾದ ಸಮಯದಲ್ಲಿ ಅಡಿಪಾಯ ಹಾಕಬೇಕು ಎಂದು ನಾವು ಬಯಸುತ್ತೇವೆ. ಆದರೆ ಇದು ಅಶುಭ ಸಮಯ ಈ ಸಮಯದಲ್ಲಿ ಅಡಿಪಾಯ ಹಾಕುವುದು ಬೇಡ ಎಂದು ಹೇಳಿದ್ದಾರೆ. ಆದರೆ ಯಾಕೆ ಅಶುಭ ಸಮಯ ಎಂಬ ಕಾರಣವನ್ನು ಸ್ವಾಮೀಜಿಯವರು ತಿಳಿಸಿಲ್ಲ.

    ನಾವು ರಾಮನ ಭಕ್ತರು, ಯಾರೇ ರಾಮನ ದೇವಾಲಯವನ್ನು ನಿರ್ಮಿಸಿದರೂ ನಾವು ಸಂತೋಷ ಪಡುತ್ತೇವೆ. ಆದರೆ ಅದಕ್ಕೆ ಸೂಕ್ತ ದಿನಾಂಕ ಮತ್ತು ಶುಭ ಸಮಯವನ್ನು ಆಯ್ಕೆ ಮಾಡಬೇಕು. ಇದರಲ್ಲಿ ರಾಜಕೀಯ ಇರಬಾರದು. ರಾಜಕೀಯದಿಂದಾಗಿ ಹಿಂದೂಗಳ ಸಮಸ್ಯೆಗಳು ಉಲ್ಭಣವಾಗಬಾರದು. ಸಾರ್ವಜನಿಕರ ಹಣದಿಂದ ಈ ದೇವಾಲಯವನ್ನು ನಿರ್ಮಿಸಲಾಗುತ್ತಿದೆ ಅವರ ಅಭಿಪ್ರಾಯವನ್ನೂ ಸಹ ಪಡೆಯಬೇಕು ಎಂದು ಶಂಕರಾಚಾರ್ಯ ಸರಸ್ವತಿ ಹೇಳಿದ್ದಾರೆ.

    ಕೊರೊನಾ ಕಾರಣದಿಂದ ಎರಡು ತಿಂಗಳು ತಡವಾಗಿದ್ದ ಶಿಲಾನ್ಯಾಸ ಕಾರ್ಯಕ್ರಮದ ಸಿದ್ಧತೆಗಳು ಅಯೋಧ್ಯೆಯಲ್ಲಿ ಈಗಾಗಲೇ ಶುರುವಾಗಿದೆ. ಆಗಸ್ಟ್ 5ಕ್ಕೆ ಈ ಕಾರ್ಯಕ್ರಮ ನಡೆಯಲಿದ್ದು, ಪ್ರಧಾನಿ ಮೋದಿ, ಆರ್.ಎಸ್.ಎಸ್ ಮೋಹನ್ ಭಗವತ್ ಸೇರಿ 50 ಮಂದಿ ವಿವಿಐಪಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಟ್ರಸ್ಟ್ ಹೇಳಿಕೊಂಡಿದೆ. ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ, ಬಿಹಾರ ಸಿಎಂ ನಿತೀಶ್ ಕುಮಾರ್ ಸೇರಿದಂತೆ ಬಿಜೆಪಿ ಹಿರಿಯ ನಾಯಕರು, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಭಾಗಿಯಾಗುವ ಸಾಧ್ಯತೆಯಿದೆ.

    ಆಗಸ್ಟ್ 3ರಿಂದಲೇ ಮೂರು ದಿನಗಳ ಕಾಲ ಧಾರ್ಮಿಕ ಕಾರ್ಯಗಳು ಆರಂಭವಾಗಲಿದೆ. ಕೊರೊನಾ ಕಾರಣದಿಂದ ಅತಿಥಿಗಳ ಪಟ್ಟಿಯನ್ನು ಕಡಿಮೆ ಮಾಡಲಾಗಿದ್ದು, ಅಯೋಧ್ಯೆಯ ವಿವಿಧ ಭಾಗಗಳಲ್ಲಿ ಭಕ್ತರು ಕಾರ್ಯಕ್ರಮ ವೀಕ್ಷಿಸಲು ಸ್ಕ್ರೀನ್‍ಗಳ ವ್ಯವಸ್ಥೆ ಮಾಡಲಾಗಿದೆ.

  • ಅಡಿಪಾಯ ತೋಡುವಾಗ ಪುರಾತನ ಕಲ್ಲಿನ ವಿಗ್ರಹ ಪತ್ತೆ

    ಅಡಿಪಾಯ ತೋಡುವಾಗ ಪುರಾತನ ಕಲ್ಲಿನ ವಿಗ್ರಹ ಪತ್ತೆ

    ಹಾಸನ: ಕಟ್ಟಡ ನಿರ್ಮಿಸುವ ನಿಮಿತ್ತ ಅಡಿಪಾಯ ತೋಡುವ ಸಂದರ್ಭದಲ್ಲಿ ಪುರಾತನವಾದ ಕಲ್ಲಿನಿಂದ ಕೆತ್ತನೆ ಇರುವ ಹೊಯ್ಸಳ ಕಾಲದ ನರಸಿಂಹ ವಿಗ್ರಹ ದೊರಕಿದೆ.

    ಹಾಸನ ನಗರದ ಮಹಾವೀರ ವೃತ್ತದ ಬಳಿ ಇರುವ ಕೇಂದ್ರ ಗ್ರಂಥಾಲಯ ಹಿಂಭಾಗ ನೂತನವಾಗಿ ಗ್ರಂಥಾಲಯವನ್ನು ನಿರ್ಮಿಸಲಾಗುತ್ತಿತ್ತು. ಹೀಗಾಗಿ ಈ ಕೆಲಸದಲ್ಲಿ ಗುಂಡಿ (ಪಾಯ) ತೋಡುವಾಗ ಚೌಕಟ್ಟಿನ ಕಲ್ಲಿನೊಂದರಲ್ಲಿ ಕೆತ್ತನೆಯಾಗಿರುವ ಹೊಯ್ಸಳ ಕಾಲದ ನರಸಿಂಹನ ವಿಗ್ರಹ ಪತ್ತೆಯಾಗಿದೆ.

    ಕೆಲಸದವರು ತಕ್ಷಣ ಕೇಂದ್ರ ಗ್ರಂಥಾಲಯದ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದಾರೆ. ನಂತರ ಆ ವಿಗ್ರಹವನ್ನು ಅಲ್ಲಿಂದ ಗ್ರಂಥಾಲಯಕ್ಕೆ ಸುರಕ್ಷಿತವಾಗಿ ತರಲಾಗಿದೆ. ಹಿಂದಿನ ಹೊಯ್ಸಳ ಕಾಲದಲ್ಲಿ ಕೆತ್ತನೆಯಾಗಿರುವ ಈ ಕಲ್ಲು ದಾಳಿಗೆ ಧ್ವಂಸವಾಗಿರಬಹುದಾ, ಇಲ್ಲವೇ ಇಲ್ಲೊಂದು ದೇವಾಲಯ ಇರಬಹುದಾ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ. ಪುರಾತನ ವಿಗ್ರಹವನ್ನು ಸಾರ್ವಜನಿಕರು ಕುತುಹಲದಿಂದ ವೀಕ್ಷಣೆ ಮಾಡಿದರು.

  • ರಾಮಮಂದಿರ ನಿರ್ಮಾಣಕ್ಕೆ ಈಗಾಗ್ಲೇ ಅಡಿಪಾಯ ಹಾಕಲಾಗಿದೆ: ಬೆಳ್ಳುಬ್ಬಿಗೆ ಪೇಜಾವರ ಶ್ರೀ ಟಾಂಗ್

    ರಾಮಮಂದಿರ ನಿರ್ಮಾಣಕ್ಕೆ ಈಗಾಗ್ಲೇ ಅಡಿಪಾಯ ಹಾಕಲಾಗಿದೆ: ಬೆಳ್ಳುಬ್ಬಿಗೆ ಪೇಜಾವರ ಶ್ರೀ ಟಾಂಗ್

    ಬಾಗಲಕೋಟೆ: ದಲಿತ ವ್ಯಕ್ತಿಯಿಂದ ರಾಮಮಂದಿರ ನಿರ್ಮಾಣಕ್ಕೆ ಅಡಿಪಾಯ ಹಾಕಲಾಗಿದೆ ಎಂದು ಹೇಳುವ ಮೂಲಕ ಪೇಜಾವರ ಶ್ರೀಗಳು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

    ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಶ್ರೀಗಳು, ರಾಮಮಂದಿರಕ್ಕೆ ಪಾಯ ಹಾಕಲಾಗಿದ್ದು, ಮಂದಿರದ ಕಟ್ಟಡ ಕಾರ್ಯ ಪೂರ್ಣವಾಗಿದೆ. ಸುಪ್ರೀಂ ಕೋರ್ಟ್ ತೀರ್ಪು ಹೊರ ಬರುತ್ತಿದ್ದಂತೆ ಅವುಗಳನ್ನು ತಂದು ಜೋಡಿಸುವುದು ಅಷ್ಟೇ ಬಾಕಿ ಇದೆ ಎಂದು ಹೇಳಿದರು. ಇದನ್ನು ಓದಿ: ರಾಮಮಂದಿರಕ್ಕೆ ಪಾಯ ಹಾಕಿ ಎಂಪಿ ಚುನಾವಣೆ ಎದುರಿಸಿ: ಮೋದಿಗೆ ಬೆಳ್ಳುಬ್ಬಿ ಸವಾಲ್

    ಮಾಜಿ ಸಿಎಂ ಸಿದ್ದರಾಮಯ್ಯ ಅವರೊಬ್ಬರೇ ಅಲ್ಲ, ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್, ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ, ಜೆಡಿಎಸ್ ವರಿಷ್ಠ ದೇವೇಗೌಡ, ಸಿಎಂ ಎಚ್.ಡಿ.ಕುಮಾರಸ್ವಾಮಿ ಎಲ್ಲರೂ ಕೃಷ್ಣ ಮಠಕ್ಕೆ ಬಂದಿದ್ದಾರೆ. ಅವರು ಮಠದ ಭಕ್ತರು ಎಂದು ಪ್ರತಿಕ್ರಿಯೆ ನೀಡಿದರು.

    ಬಜೆಟ್‍ನಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಕೇಳಿರುವೆ. ರಾಜ್ಯದಲ್ಲಿ ತಾರತಮ್ಯ ಸಲ್ಲದು, ಇದನ್ನು ಸರಿ ಮಾಡಬೇಕೇ ಹೊರತು ಪ್ರತ್ಯೇಕ ರಾಜ್ಯಕ್ಕೆ ಮುಂದಾಗಬಾರದು. ಉತ್ತರ ಕರ್ನಾಟಕ ಪ್ರತ್ಯೇಕತೆ ಕೂಗಿಗೆ ಹಾಗೂ ಪ್ರತ್ಯೇಕ ವೀರಶೈವ ಲಿಂಗಾಯತ ಧರ್ಮಕ್ಕೆ ನನ್ನ ಬೆಂಬಲವಿಲ್ಲ ಎಂದು ಸ್ಪಷ್ಟನೆ ನೀಡಿದರು.