Tag: ಅಟೋಮೊಬೈಲ್

  • ಟಾಟಾ ಮೋಟಾರ್ಸ್ ಷೇರು ಮೌಲ್ಯ 40% ಕುಸಿತವಾದ್ರೂ ಆತಂಕ ಪಡೋ ಅಗತ್ಯವಿಲ್ಲ: ನಿಜವಾಗಿ ಆಗಿದ್ದೇನು?

    ಟಾಟಾ ಮೋಟಾರ್ಸ್ ಷೇರು ಮೌಲ್ಯ 40% ಕುಸಿತವಾದ್ರೂ ಆತಂಕ ಪಡೋ ಅಗತ್ಯವಿಲ್ಲ: ನಿಜವಾಗಿ ಆಗಿದ್ದೇನು?

    – ಎರಡು ಕಂಪನಿಗಳಾಗಿ ಟಾಟಾ ಮೋಟಾರ್ಸ್‌ ವಿಭಜನೆ

    ಮುಂಬೈ: ಟಾಟಾ ಮೋಟಾರ್ಸ್ (Tata Motors) ತನ್ನ ಪ್ರಯಾಣಿಕ ಮತ್ತು ವಾಣಿಜ್ಯ ವಾಹನ ವಿಭಾಗಗಳನ್ನು ಪ್ರತ್ಯೇಕಿಸಿದೆ. ಮಂಗಳವಾರ ಅಧಿಕೃತವಾಗಿ ವಿಭಜನೆಯಾದ ಬೆನ್ನಲ್ಲೇ ಟಾಟಾ ಮೋಟಾರ್ಸ್‌ ಷೇರಿನ ಮೌಲ್ಯ ಶೇ. 40 ರಷ್ಟು ಇಳಿಕೆಯಾಗಿದೆ.

    ಇನ್ನು ಮುಂದೆ  ಪ್ರಯಾಣಿಕ ವಾಹನ ವಿಭಾಗ ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ (TMPV) ಆಗಿ ಬದಲಾದರೆ ವಾಣಿಜ್ಯ ವಿಭಾಗ ಟಾಟಾ ಮೋಟಾರ್ಸ್‌ ಕಮರ್ಷಿಯಲ್ ವೆಹಿಕಲ್ಸ್ (TMLCV) ಆಗಿ ಕಾರ್ಯನಿರ್ವಹಿಸಲಿದೆ.

    ಇಂದಿನಿಂದ ಮಾತೃ ಕಂಪನಿಯು ವಾಣಿಜ್ಯ ವಾಹನಗಳ ವಿಭಾಗವನ್ನು ಪ್ರತಿಬಿಂಬಿಸದೇ ವ್ಯಾಪಾರ ಮಾಡಲಿದೆ. TMPV ಪ್ರಯಾಣಿಕ ವಾಹನಗಳು, ವಿದ್ಯುತ್ ವಾಹನಗಳು ಮತ್ತು ಜಾಗ್ವಾರ್ ಲ್ಯಾಂಡ್ ರೋವರ್ (JLR) ವಾಹನಗಳ ಕಾರ್ಯಾಚರಣೆ ನೋಡಿಕೊಳ್ಳಲಿದೆ.  ಇದನ್ನೂ ಓದಿ:  ಮುಂದಿನ 4-6 ತಿಂಗಳಿನಲ್ಲಿ ಪೆಟ್ರೋಲ್‌ ಕಾರು ದರದಲ್ಲಿ ಇವಿ ಸಿಗುತ್ತೆ: ಗಡ್ಕರಿ

     

    ತಾತ್ಕಾಲಿಕ ಕುಸಿತ
    ಷೇರಿನ ಮೌಲ್ಯ ನಿಜವಾಗಿ ಕುಸಿದಿಲ್ಲ. ವ್ಯವಹಾರ ವಿಭಜನೆಯಿಂದಾದ ಮೌಲ್ಯದ ಹೊಂದಾಣಿಕೆಯಿಂದ ಆಗಿರುವ ಕುಸಿತ ಇದಾಗಿದೆ. ಸೋಮವಾರ ಷೇರು ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್‌ ಒಂದು ಷೇರು 660.75 ರೂ.ನಲ್ಲಿ ದಿನದ ವ್ಯವಹಾರ ಮಗಿಸಿತ್ತು. ಇಂದು ಸುಮಾರು ಶೇ. 40.22 ರಷ್ಟು(265.75 ರೂ.) ಕುಸಿತಗೊಂಡು ದಿನದ ಕೊನೆಯಲ್ಲಿ 395 ರೂ. ನಲ್ಲಿ ವ್ಯವಹಾರ ಮುಗಿಸಿದೆ.

    ಟಾಟಾ ಮೋಟಾರ್ಸ್‌ ಕಂಪನಿಯು ಅಕ್ಟೋಬರ್ 14 ಅನ್ನು ವಿಭಜನೆಯ ದಿನಾಂಕವನ್ನಾಗಿ ನಿಗದಿಪಡಿಸಿತ್ತು. ಇದರ ಅನ್ವಯ ಈ ದಿನಾಂಕದಂದು ಟಾಟಾ ಮೋಟಾರ್ಸ್ ಷೇರುಗಳನ್ನು ಹೊಂದಿದ್ದ ಷೇರುದಾರರು ವಿಭಜನೆಯ ಪ್ರಯೋಜನ ಪಡೆಯಲು ಅರ್ಹರಾಗಿರುತ್ತಾರೆ. ಅರ್ಹ ಷೇರುದಾರರು ತಾವು ಹೊಂದಿರುವ ಪ್ರತಿ ಟಾಟಾ ಮೋಟಾರ್ಸ್ ಷೇರಿಗೆ ಬದಲಾಗಿ ಹೊಸದಾಗಿ ರಚನೆಯಾದ ವಾಣಿಜ್ಯ ವಾಹನ ಕಂಪನಿಯಾದ TMLCV ಒಂದು ಷೇರನ್ನು ಹೆಚ್ಚುವರಿಯಾಗಿ ಪಡೆಯಲಿದ್ದಾರೆ. ಇದನ್ನೂ ಓದಿ:  ಕಾರುಗಳ ಬೆಲೆ ಭಾರೀ ಇಳಿಕೆ- ಯಾವ ಕಾರುಗಳ ಬೆಲೆ ಎಷ್ಟು ಇಳಿಕೆ? ಇಲ್ಲಿದೆ ಕಂಪ್ಲೀಟ್‌ ಮಾಹಿತಿ

    TMLCV ಕಂಪನಿಯ ಷೇರುಗಳನ್ನು 30–45 ದಿನಗಳಲ್ಲಿ ಡಿಮ್ಯಾಟ್ ಖಾತೆಗಳಿಗೆ ಜಮೆಯಾಗಲಿದೆ. ಸೆಬಿಯ ಎಲ್ಲಾ ಅನುಮೋದನೆಗಳು ಪೂರ್ಣಗೊಂಡ ನಂತರ ಹೊಸ ಕಂಪನಿ ರಾಷ್ಟ್ರೀಯ ಷೇರುಪೇಟೆ(NSE) ಮತ್ತು ಬಾಂಬೆ ಷೇರುಪೇಟೆಯಲ್ಲಿ(BSE) ಪ್ರತ್ಯೇಕವಾಗಿ ಪಟ್ಟಿಯಾಗಲಿದೆ.

  • ಮಾರುತಿ ವಿಕ್ಟೋರಿಸ್‌ಗೆ 5 ಸ್ಟಾರ್ ಸೇಫ್ಟಿ ರೇಟಿಂಗ್ – ಬೆಲೆ, ಮೈಲೇಜ್‌ ಎಷ್ಟು?

    ಮಾರುತಿ ವಿಕ್ಟೋರಿಸ್‌ಗೆ 5 ಸ್ಟಾರ್ ಸೇಫ್ಟಿ ರೇಟಿಂಗ್ – ಬೆಲೆ, ಮೈಲೇಜ್‌ ಎಷ್ಟು?

    ಮಾರುತಿ ಸುಜುಕಿ (Maruthi Suzuki) ಕಂಪನಿಯ ಹೊಸ ಕಾರು ವಿಕ್ಟೋರಿಸ್ (Victoris) 5 ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದುಕೊಂಡಿದೆ. ಗ್ಲೋಬಲ್ ಎನ್‌ಸಿಎಪಿ (Global NCAP) ನಡೆಸಿದ ಸುರಕ್ಷತಾ ಪರೀಕ್ಷೆಯ ವಯಸ್ಕರ ರಕ್ಷಣೆ ವಿಭಾಗದಲ್ಲಿ (Adult Occupant Protection) 34ಕ್ಕೆ 33.32 ಅಂಕಗಳನ್ನು ಗಳಿಸುವ ಮೂಲಕ ವಿಕ್ಟೋರಿಸ್ 5-ಸ್ಟಾರ್ ರೇಟಿಂಗ್ ಪಡೆದಿದೆ. ಅದೇ ರೀತಿ ಮಕ್ಕಳ ರಕ್ಷಣೆ ವಿಭಾಗದಲ್ಲಿ (Child Occupant Protection) 49ಕ್ಕೆ 41 ಅಂಕಗಳನ್ನು ಪಡೆದು 5-ಸ್ಟಾರ್ ರೇಟಿಂಗನ್ನು ತನ್ನದಾಗಿಸಿಕೊಂಡಿದೆ.

    ವಿಕ್ಟೋರಿಸ್ ಕಾರು 6-ಏರ್‌ಬ್ಯಾಗ್‌ಗಳು, 360 ಡಿಗ್ರಿ ಕ್ಯಾಮೆರಾ, ಲೆವಲ್ 2 ADAS ಸಿಸ್ಟಮ್, ಫ್ರಂಟ್ ಪಾರ್ಕಿಂಗ್ ಅಸಿಸ್ಟ್ ಸೆನ್ಸರ್, EBD ಜೊತೆ ABS, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), 3-ಪಾಯಿಂಟ್ ಸೀಟ್‌ಬೆಲ್ಟ್‌ಗಳು, ISOFIX ಆಂಕರೇಜ್‌ಗಳು, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್, ಮುಂತಾದ ಗರಿಷ್ಠ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ.

    K15 ಎಂಜಿನ್ ಹೊಂದಿರುವ ಈ ಪೆಟ್ರೋಲ್ ಕಾರು 103.06 Ps ಶಕ್ತಿ ಮತ್ತು 139 Nm ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ಸ್ಮಾರ್ಟ್ ಹೈಬ್ರಿಡ್ ಸಿಸ್ಟಮ್ ಜೊತೆ ಬರಲಿದೆ. M15D ಕೋಡ್ ಹೊಂದಿರುವ ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಮಾದರಿಯಲ್ಲೂ ವಿಕ್ಟೋರಿಸ್ ಲಭ್ಯವಿದೆ. ಈ ಎಂಜಿನ್ 92.45 Ps ಶಕ್ತಿ ಮತ್ತು 122 Nm ಟಾರ್ಕ್ ಉತ್ಪಾದಿಸುತ್ತದೆ. ಪೆಟ್ರೋಲ್+CNG ಎಂಜಿನ್ ಹೊಂದಿರುವ ಕಾರು ಪೆಟ್ರೋಲ್ ಆಯ್ಕೆಯಲ್ಲಿ 100.6 Ps ಶಕ್ತಿ ಉತ್ಪಾದಿಸಿದರೆ CNG ಆಯ್ಕೆಯಲ್ಲಿ 64.9 Ps ಶಕ್ತಿ ಉತ್ಪಾದಿಸುತ್ತದೆ. ವಿಕ್ಟೋರಿಸ್ 4 ಸ್ಪೀಡ್ ಮಾನ್ಯುಯಲ್ ಗೇರ್ ಬಾಕ್ಸ್, 6 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಮತ್ತು e-CVT ಗೇರ್ ಬಾಕ್ಸ್ ಆಯ್ಕೆಗಳಲ್ಲಿ ಲಭ್ಯವಿದೆ. ಇದನ್ನೂ ಓದಿ: ಟೊಯೋಟಾ ಫಾರ್ಚುನರ್ ಬೆಲೆ 3.49 ಲಕ್ಷ ಇಳಿಕೆ; ಥಾರ್ ಬೆಲೆ 1.55 ಲಕ್ಷ ಕಡಿತ

    LED ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, LED ಡೇ ಟೈಮ್ ರನ್ನಿಂಗ್ ಲೈಟ್‌ಗಳು, LED ಫಾಗ್ ಲ್ಯಾಂಪ್‌ಗಳು, 17 ಇಂಚಿನ ಅಲಾಯ್ ವೀಲ್ಸ್, ಒಳಾಂಗಣದಲ್ಲಿ 64 ಕಲರ್ ಹೊಂದಿರುವ ಆಂಬಿಯಂಟ್‌ ಲೈಟಿಂಗ್, ಲೆದರೇಟ್ ಸೀಟ್‌ಗಳು, 10.25 ಇಂಚಿನ ಡಿಜಿಟಲ್‌ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಪ್ಯಾನರೋಮಿಕ್ ಸನ್‌ರೂಫ್‌, 10.1 ಇಂಚಿನ ಸ್ಮಾರ್ಟ್ ಪ್ಲೇ ಪ್ರೋ X HD ಟಚ್‌ಸ್ಕ್ರೀನ್‌ ಸಿಸ್ಟಮ್, ಮುಂತಾದ ವೈಶಿಷ್ಟ್ಯಗಳು ವಿಕ್ಟೋರಿಸ್ ಕಾರಿನಲ್ಲಿವೆ.

    ಈ ಕಾರು ಪೆಟ್ರೋಲ್ ಅವತರಣಿಕೆಯಲ್ಲಿ ಪ್ರತಿ ಲೀಟರ್‌ಗೆ 21.18 ಕಿಲೋಮೀಟರ್ ಮೈಲೇಜ್ ನೀಡಿದರೆ, ಹೈಬ್ರಿಡ್ ಅವತರಣಿಕೆಯಲ್ಲಿ 28.32 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಪ್ರತಿ ಕೆಜಿ CNGಗೆ 27.02 ಕಿಲೋಮೀಟರ್ ಮೈಲೇಜ್ ವಿಕ್ಟೋರಿಸ್ ನೀಡುತ್ತದೆ ಎಂದು ಕಂಪನಿ ಘೋಷಿಸಿಕೊಂಡಿದೆ. 7 ಅತ್ಯಾಕರ್ಷಕ ಬಣ್ಣಗಳಲ್ಲಿ ಈ ಕಾರು ಲಭ್ಯವಿದೆ. ವಿಕ್ಟೋರಿಸ್ ಕಾರಿನ ಬೆಲೆ 10.49  ಲಕ್ಷದಿಂದ ಆರಂಭವಾಗಿದೆ 19.98 ಲಕ್ಷ ರೂ.ವರೆಗೆ ನಿಗದಿಯಾಗಿದೆ.

     

  • ಕೊನೆಗೂ ಭಾರತಕ್ಕೆ ಬಂತು ಟೆಸ್ಲಾ| ಮುಂದಿನ ವಾರ ಶೋರೂಂ ಓಪನ್‌ –  EV ಕಾರಿನ ಬೆಲೆ ಎಷ್ಟು?

    ಕೊನೆಗೂ ಭಾರತಕ್ಕೆ ಬಂತು ಟೆಸ್ಲಾ| ಮುಂದಿನ ವಾರ ಶೋರೂಂ ಓಪನ್‌ – EV ಕಾರಿನ ಬೆಲೆ ಎಷ್ಟು?

    ಮುಂಬೈ: ಎಲಾನ್ ಮಸ್ಕ್ (Elon Musk) ನೇತೃತ್ವದ ಎಲೆಕ್ಟ್ರಿಕ್‌ ಕಾರು (Electric Car) ಕಂಪನಿ ಟೆಸ್ಲಾ (Tesla) ಮುಂದಿನ ವಾರ ಭಾರತದಲ್ಲಿ (India) ತನ್ನ ಮೊದಲ ಶೋರೂಂ ತೆರೆಯಲಿದೆ.

    ಜುಲೈ 15 ರಂದು ಮುಂಬೈನಲ್ಲಿ ತನ್ನ ಮೊದಲ ಶೋರೂಂ ತೆರೆಯಲಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಈ ಮೂಲಕ ಎಲೆಕ್ಟ್ರಿಕ್ ವಾಹನ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಟೆಸ್ಲಾ ವಿಶ್ವದ ಮೂರನೇ ಅತಿದೊಡ್ಡ ಅಟೋಮೊಬೈಲ್‌ ಮಾರುಕಟ್ಟೆಯಾದ (Automobile Market) ಭಾರತದಲ್ಲಿ ಅಧಿಕೃತ ಕಾರ್ಯಾಚರಣೆಯನ್ನು ಪ್ರಾರಂಭಿಸುವತ್ತ ಒಂದು ಹೆಜ್ಜೆ ಇಟ್ಟಿದೆ.

    ಮಾರ್ಚ್‌ನ ಆರಂಭದಲ್ಲಿ, ಟೆಸ್ಲಾ ಮುಂಬೈನಲ್ಲಿ ತನ್ನ ಮೊದಲ ಶೋರೂಂ ಸ್ಥಳಕ್ಕಾಗಿ ಗುತ್ತಿಗೆ ಒಪ್ಪಂದವನ್ನು ಅಂತಿಮಗೊಳಿಸಿದೆ ಎಂದು ವರದಿಯಾಗಿತ್ತು. ಯುರೋಪ್ ಮತ್ತು ಚೀನಾದಲ್ಲಿ ಟೆಸ್ಲಾ ಕಾರುಗಳ ಮಾರಾಟ ಕಡಿಮೆಯಾಗುತ್ತಿರುವ ಸಂದರ್ಭದಲ್ಲೇ ಟೆಸ್ಲಾ ಭಾರತಕ್ಕೆ ಎಂಟ್ರಿಯಾಗುತ್ತಿದೆ. ಇದನ್ನೂ ಓದಿ: ಭಾರತ್NCAP ನಲ್ಲಿ ಟಾಟಾ ಹ್ಯಾರಿಯರ್ EVಗೆ ಸಿಕ್ತು 5 ಸ್ಟಾರ್ ರೇಟಿಂಗ್

    ಕೆಲವು ತಿಂಗಳ ಹಿಂದೆ ಟೆಸ್ಲಾ ತನ್ನ ಭಾರತೀಯ ಕಾರ್ಯಾಚರಣೆಗಳಿಗಾಗಿ ತನ್ನ ನೇಮಕಾತಿ ಪ್ರಕ್ರಿಯೆ ಆರಂಭಿಸಿತ್ತು. ದೆಹಲಿ-ಎನ್‌ಸಿಆರ್‌ನಲ್ಲಿ ಮತ್ತೊಂದು ಶೋರೂಂ ತೆರೆಯುವ ನಿರೀಕ್ಷೆಯಿದೆ.

    ಕೇಂದ್ರ ಕೈಗಾರಿಕಾ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರು ಟೆಸ್ಲಾ ಭಾರತದಲ್ಲಿ ಉತ್ಪದನಾ ಘಟಕ ತೆರೆಯುವುದಿಲ್ಲ ಎಂದು ಹೇಳಿದ್ದರು. ಡೊನಾಲ್ಡ್‌ ಟ್ರಂಪ್‌ ಅವರು ಅಮೆರಿಕದ ಕಂಪನಿಗಳು ಭಾರತದಲ್ಲಿ ಉತ್ಪದನಾ ಘಟಕೆ ತೆರೆಯಬಾರದು. ಅಮೆರಿಕದಲ್ಲೇ ಉತ್ಪದನಾ ಘಟಕ ತೆರೆಯುವಂತೆ ಒತ್ತಡ ಹಾಕುತ್ತಿರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಟೆಸ್ಲಾ ಭಾರತದಲ್ಲಿ ಘಟಕ ತೆರೆಯುತ್ತಿಲ್ಲ.

    ಬೆಲೆ ಎಷ್ಟು?
    ಬ್ಲೂಮ್‌ಬರ್ಗ್ ವರದಿಯ ಪ್ರಕಾರ ಚೀನಾದಲ್ಲಿ ತಯಾರಾದ ಕಾರುಗಳನ್ನು ಭಾರತದಲ್ಲಿ ಮಾರಾಟ ಮಾಡಲು ಟೆಸ್ಲಾ ಮುಂದಾಗಿದೆ. ಪ್ರಸ್ತುತ ವಿಶ್ವದ ಅತ್ಯಂತ ಜನಪ್ರಿಯ ಎಲೆಕ್ಟ್ರಿಕ್ ಕ್ರಾಸ್‌ಓವರ್‌ ಎಸ್‌ಯುವಿ ಮಾಡೆಲ್‌ ವೈ ಕಾರುಗಳನ್ನು ಆರಂಭದಲ್ಲಿ ಭಾರತದಲ್ಲಿ ಮಾರಾಟ ಮಾಡಲು ಟೆಸ್ಲಾ ಸಿದ್ಧತೆ ನಡೆಸಿದೆ. ಇದನ್ನೂ ಓದಿ: 14.89 ಲಕ್ಷಕ್ಕೆ ಹೋಂಡಾ ಸಿಟಿ ಸ್ಪೋರ್ಟ್ ಎಡಿಷನ್ ಬಿಡುಗಡೆ ಕಾರ್‌ನಲ್ಲಿ ಏನು ಬದಲಾವಣೆಯಾಗಿದೆ?

    ಈಗಾಗಲೇ ಟೆಸ್ಲಾ ತನ್ನ ಶಾಂಘೈ ಸ್ಥಾವರದಿಂದ ಐದು ಮಾಡೆಲ್ ವೈ ವಾಹನಗಳನ್ನು ಮುಂಬೈಗೆ ತಂದಿದೆ. ಈ ವಾಹನದ ಮೂಲ ಬೆಲೆ 27.70 ಲಕ್ಷ ರೂ. ಇದೆ. ಚೀನಾದಿಂದ ಭಾರತಕ್ಕೆ ಬಂದ ವೆಚ್ಚ, ಆಮದು ಸುಂಕ ವಿಧಿಸಿದ ಬಳಿಕ ಈ ಕಾರಿನ ದರ ಎಷ್ಟಿರಬಹುದು ಎನ್ನುವುದು ಅಧಿಕೃತವಾಗಿ ಮುಂದಿನ ದಿನಗಳಲ್ಲಿ ತಿಳಿಯಲಿದೆ. ಟೆಸ್ಲಾ ಕಾರಿನ ಬೆಲೆ 40 ಲಕ್ಷ ರೂ.ಗಿಂತ ಕಡಿಮೆ ಇರಬಹುದು ಎಂದು ಮಾಧ್ಯಮಗಳು ವರದಿ ಮಾಡಿವೆ.

    ಹೊಸ ಇವಿ ನೀತಿಯಲ್ಲಿ ಏನಿದೆ?
    ಅಟೋ ಕಂಪನಿಗಳು ಭಾರತದಲ್ಲೇ ಉತ್ಪದನಾ ಘಟಕ ತೆರೆಯಬೇಕು ಎನ್ನುವುದು ಕೇಂದ್ರ ಸರ್ಕಾರದ ವಾದವಾಗಿತ್ತು. ಆದರೆ ಈಗ ಈ ನೀತಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿದೆ. ಭಾರತದ 2024 ರಲ್ಲಿ ಹೊಸ ಎಲೆಕ್ಟ್ರಿಕ್‌ ವಾಹನ ನೀತಿಯನ್ನು ಅಳವಡಿಸಿದೆ. ಈ ನೀತಿಯ ಪ್ರಕಾರ ಯಾವುದಾದರು ಕಂಪನಿ ಭಾರತದಲ್ಲಿ 4,150 ಕೋಟಿ ರೂ. ಹೂಡಿಕೆ ಮಾಡಿದರೆ ಆ ಕಂಪನಿಯ 35 ಸಾವಿರ ಡಾಲರ್‌ ಅಥವಾ 30 ಲಕ್ಷ ರೂ. ಮತ್ತು ಅದಕ್ಕಿಂತ ಹೆಚ್ಚಿನ ಬೆಲೆಯ ಕಾರುಗಳ ಮೇಲೆ ಸುಂಕ ರಿಯಾಯಿತಿಗಳನ್ನು ಪಡೆಯಬಹುದು. ಈ ನೀತಿಯ ಅನ್ವಯ ವರ್ಷಕ್ಕೆ 8,000 ಕಾರುಗಳ ಮೇಲೆ 15% ಸುಂಕ ವಿಧಿಸಲಾಗುತ್ತದೆ.

    ಹೊಸ ಎಲೆಕ್ಟ್ರಿಕಲ್‌ ಕಾರು ನೀತಿಯಲ್ಲಿ ಕೆಲ ಷರತ್ತು ಸಹ ಇದೆ. ಕಂಪನಿಯು ಕಾರ್ಯಾಚರಣೆಯ ಮೂರನೇ ವರ್ಷದ ವೇಳೆಗೆ ಭಾರತದಲ್ಲಿ ಕಾರುಗಳನ್ನು ತಯಾರಿಸಲು ಪ್ರಾರಂಭಿಸಬೇಕು ಎಂಬ ಷರತ್ತು ವಿಧಿಸಲಾಗಿದೆ. ಈ ಯೋಜನೆಯಡಿಯಲ್ಲಿ ಕಂಪನಿಯು ಅನುಮೋದನೆ ಪಡೆದರೆ ರಿಯಾಯಿತಿ ದರದ 15% ಸುಂಕ ಮತ್ತು 5% ಜಿಎಸ್‌ಟಿ ಹಾಕಲಾಗುತ್ತದೆ. ಅಂದರೆ 35 ಸಾವಿರ ಡಾಲರ್‌ ಕಾರಿನ ಬೆಲೆ ಸುಮಾರು 36 ಲಕ್ಷ ರೂ. ಆದರೆ ಆಮದು ಮಾಡಿದ 50 ಸಾವಿರ ಡಾಲರ್‌ ಕಾರಿನ ಬೆಲೆಗೆ 52 ಲಕ್ಷ ರೂ. ಆಗಲಿದೆ.

     

  • ಬೆಂಗಳೂರು ಕಂಪನಿಯಿಂದ ದೇಶದ ಮೊದಲ ಎಐ ಆಧಾರಿತ ಆಟೋಪೈಲಟ್ ಕಾರು ಅಭಿವೃದ್ಧಿ

    ಬೆಂಗಳೂರು ಕಂಪನಿಯಿಂದ ದೇಶದ ಮೊದಲ ಎಐ ಆಧಾರಿತ ಆಟೋಪೈಲಟ್ ಕಾರು ಅಭಿವೃದ್ಧಿ

    ಬೆಂಗಳೂರು ಮೂಲದ ಮೈನಸ್ ಝೀರೋ (Minus ಜಿರ್) ಎಂಬ ಸ್ಟಾರ್ಟಪ್ ಕಂಪನಿಯು ದೇಶದ ಮೊದಲ AI ಆಧಾರಿತ ಸ್ವಯಂಚಾಲಿತ ಕಾರನ್ನು ಅಭಿವೃದ್ಧಿಪಡಿಸಿದೆ. ಸಾಮಾನ್ಯ ವಾಹನಗಳನ್ನು ಚಲಾಯಿಸುವುದೇ ಸವಾಲಾಗಿರುವ ಬೆಂಗಳೂರಿನಲ್ಲಿ ಭಾರತದ ಮೊದಲ ಆಟೋಪೈಲಟ್ ವ್ಯವಸ್ಥೆಯ (Auto Pilot System) ಕಾರನ್ನು ಮೈನಸ್ ಝೀರೋ ತಂಡ ಪರೀಕ್ಷಿಸಿ ಯಶಸ್ವಿಯಾಗಿದೆ.

    ಮೈನಸ್ ಝೀರೋ ಕಂಪನಿಯ ಸಹ ಸಂಸ್ಥಾಪಕ ಗುರುಸಿಮ್ರನ್ ಕಲ್ರಾ (Gursimran Kalra) ತಮ್ಮ ಎಕ್ಸ್ ಖಾತೆಯಲ್ಲಿ AI ಆಧಾರಿತ ಸ್ವಯಂಚಾಲಿತ ಕಾರಿನ ವಿಡಿಯೋವನ್ನು ಹಂಚಿಕೊಂಡಿದ್ದಾರೆ. 3 ನಿಮಿಷ 27 ಸೆಕೆಂಡ್ ಇರುವ ಈ ವಿಡಿಯೋದಲ್ಲಿ ಡಿವೈಡರ್ ಇಲ್ಲದೇ ಇರುವ ರಸ್ತೆಯಲ್ಲೂ ಸಹ ಮುಂದೆ ಇರುವ ವಾಹನ, ಎದುರುಗಡೆ ಇಂದ ಬರುವ ವಾಹನಗಳನ್ನು ಗುರುತಿಸಿವುದನ್ನು ಕಾಣಬಹುದು. ಎದುರಿಗಿರುವ ಕಾರು ಬ್ರೇಕ್ ಹಾಕಿ ವೇಗವನ್ನು ತಗ್ಗಿಸಿದಾಗ, ಈ ಕಾರ್ ಕೂಡ ತನ್ನ ಸ್ಪೀಡ್ ಕಡಿಮೆಗೊಳಿಸುತ್ತಾ ಮುಂದೆ ಸಾಗುತ್ತದೆ. ಅಕ್ಕಪಕ್ಕ ಬರುವ ವಾಹನಗಳನ್ನು ಕೂಡ ಗುರುತಿಸಿ ಕಾರು ಚಾಲನೆ ಆಗುತ್ತಿರುವುದನ್ನು ನೀವು ಈ ವಿಡಿಯೋದಲ್ಲಿ ಕಾಣಬಹುದಾಗಿದೆ. ಹಸು, ಆಟೋಗಳು, ಗೂಡ್ಸ್ ವಾಹನ, ತಳ್ಳುವ ಗಾಡಿ, ಡೆಡ್ ಎಂಡ್ ರೋಡ್ ಹೀಗೆ ತನಗೆ ಎದುರಾದ ಎಲ್ಲಾ ಸವಾಲುಗಳನ್ನು ಈ ಸ್ವಯಂಚಾಲಿತ ಕಾರು ಯಶಸ್ವಿಯಾಗಿ ಎದುರಿಸಿದೆ.  ಇದನ್ನೂ ಓದಿ: ಭಾರತ ಕೊಟ್ಟ ಏಟಿಗೆ ಡಿಆರ್‌ಎಸ್‌ ನಿಯಮವನ್ನೇ ಕೈಬಿಟ್ಟ ಪಿಎಸ್‌ಎಲ್‌

    ಈಗಿರುವ ಸಾಂಪ್ರದಾಯಿಕ ಎಐ ವ್ಯವಸ್ಥೆಗಳಿಗಿಂತ ಭಿನ್ನವಾಗಿ, AI ಮಾದರಿಯನ್ನು ಮೈನಸ್ ಝೀರೋ ಅಭಿವೃದ್ಧಿಪಡಿಸಿದೆ. ಹೈ-ಡೆಫಿನೆಷನ್ ನಕ್ಷೆ ಅಥವಾ ಈಗಾಗಲೇ ಲಭ್ಯವಿರುವ ಡೇಟಾ ಸಹಾಯವಿಲ್ಲದೆ, ಸ್ವಯಂ-ಮೇಲ್ವಿಚಾರಣೆ ರೀತಿಯಲ್ಲಿ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿ ಅಳವಡಿಸಲಾಗಿದೆ. ಭಾರತದಲ್ಲಿ ಸದ್ಯ ADAS (Advanced driver-assistance system) ಲೆವೆಲ್ 1 ಮತ್ತು ಲೆವೆಲ್ 2 ಹಂತದಲ್ಲಿ ಮಾತ್ರ ಇದೆ. ಲೆವೆಲ್ 2+, ಲೆವೆಲ್ 2++ ಮತ್ತು ಲೆವೆಲ್ 3 ತಂತ್ರಜ್ಞಾನದತ್ತ ಮುಂದುವರಿಯಲು ಇದು ಸಕಾಲ ಏನು ಮೈನಸ್ ಝೀರೊ ಕಂಪನಿ ತಿಳಿಸಿದೆ. ಇದನ್ನೂ ಓದಿ: ಸಿಂಧೂ ನದಿ ನೀರು ನಿಲ್ಲಿಸಿದ್ರೆ ನಿಮ್ಮ ಉಸಿರು ನಿಲ್ಲಿಸ್ತೀವಿ, ಉಗ್ರ ಹಫೀಜ್‌ನ ಮಾತನ್ನೇ ಪುನರುಚ್ಚರಿಸಿದ ಪಾಕ್‌ ಸೇನಾ ವಕ್ತಾರ

    ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಟೆಸ್ಲಾದ FSD, ಮರ್ಸಿಡಿಸ್‌ನ ಡ್ರೈವ್ ಪೈಲಟ್, GMನ ಸೂಪರ್ ಕ್ರೂಸ್, BYD ಗಾಡ್ಸ್ ಐ ಕಾರುಗಳಲ್ಲಿ ಈಗಾಗಲೇ L2+ ಮತ್ತು L3 ವ್ಯವಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದರೂ, ಭಾರತ ಮತ್ತು ಇತರ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಈ ತರಹದ ಆಟೋಪೈಲಟ್ ವ್ಯವಸ್ಥೆಗಳನ್ನು ಸಕ್ರಿಯಗೊಳಿಸುವುದು ಬಹಳ ಸವಾಲಿನ ಕೆಲಸವಾಗಿದೆ.

     

    90% ರಷ್ಷು ADAS ಸಿಸ್ಟಮ್ ಕೆಲವು ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಮಾತ್ರ ಉಪಯೋಗಿಸಲಾಗುತ್ತಿದೆ. ವಿಶ್ವದ 85% ರಸ್ತೆ ಅಪಘಾತಗಳು ಅಭಿವೃದ್ಧಿ ಕಾಣುತ್ತಿರುವ ದೇಶಗಳಲ್ಲಿ ಆಗುತ್ತಿವೆ ಎಂದು ವರದಿಗಳು ಹೇಳುತ್ತವೆ. ಇಂತಹ ದೇಶಗಳಲ್ಲಿ ADASನಂತಹ ಸುಧಾರಿತ ಚಾಲನಾ ಸಹಾಯ ವ್ಯವಸ್ಥೆಗಳ ಅಗತ್ಯ ಹೆಚ್ಚಾಗಿದೆ ಎಂದು ಸಂಸ್ಥೆ ಹೇಳಿದೆ.

    ಈ ಮೊದಲು ಮೈನಸ್ ಝೀರೊ ಕಂಪನಿಯು ಕ್ಯಾಂಪಸ್ ಒಳಗಡೆ ಆಟೋಪೈಲಟ್ ಕಾರಿನ ಪ್ರಾಯೋಗಿಕ ಸಂಚಾರವನ್ನು ನಡೆಸಿತ್ತು. ಈಗ ಮುಂದಿನ ಹಂತಕ್ಕೆ ಹೋಗಿರುವ ಕಂಪನಿ ಭಾರತ ರಸ್ತೆಗೆ ಪೂರ್ಣ ಪ್ರಮಾಣದ ಸ್ವಯಂಚಾಲಿತ ಕಾರನ್ನು ಇಳಿಸಲು ಮುಂದಾಗಿದೆ.

  • ಮುಂದಿನ 5 ವರ್ಷದಲ್ಲಿ ಆಟೋಮೊಬೈಲ್ ಉದ್ಯಮದಲ್ಲಿ ವಿಶ್ವದಲ್ಲೇ ಭಾರತ ನಂಬರ್‌ 1: ಗಡ್ಕರಿ ಭವಿಷ್ಯ

    ಮುಂದಿನ 5 ವರ್ಷದಲ್ಲಿ ಆಟೋಮೊಬೈಲ್ ಉದ್ಯಮದಲ್ಲಿ ವಿಶ್ವದಲ್ಲೇ ಭಾರತ ನಂಬರ್‌ 1: ಗಡ್ಕರಿ ಭವಿಷ್ಯ

    ನವದೆಹಲಿ: ಮುಂದಿನ ಐದು ವರ್ಷಗಳಲ್ಲಿ ಭಾರತೀಯ ಆಟೋಮೊಬೈಲ್ ಉದ್ಯಮವು (Indian Automobile Business) ವಿಶ್ವದಲ್ಲೇ ಮೊದಲ ಸ್ಥಾನದಲ್ಲಿರುತ್ತದೆ ಎಂಬ ವಿಶ್ವಾಸ ನನಗಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ (Nitin Gadkari) ಭವಿಷ್ಯ ನುಡಿದಿದ್ದಾರೆ.

    ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಕಷ್ಟು ಮಾನವಶಕ್ತಿ, ಕಚ್ಚಾ ಸಾಮಗ್ರಿಗಳು ಇಲ್ಲೇ ದೊರೆಯುವುದರಿಂದ ಭಾರತದ ಆಟೋಮೊಬೈಲ್ ಉದ್ಯಮವು ವೇಗವಾಗಿ ಬೆಳವಣಿಗೆಯಾಗುತ್ತಿದೆ ಎಂದು ಹೇಳಿದರು.

    ಪಳೆಯುಳಿಕೆ ಇಂಧನ ಚಾಲಿತ ವಾಹನಗಳಿಂದ ಎಲೆಕ್ಟ್ರಿಕ್ ವಾಹನಗಳಿಗೆ ಬದಲಾಗುವುದರಿಂದ ಆರ್ಥಿಕವಾಗಿ ಲಾಭದಾಯಕವಾಗಲಿದೆ ಎಂದು ಕೇಂದ್ರ ಸಚಿವರು ಹೇಳಿದರು.  ಇದನ್ನೂ ಓದಿ: ಇಂದು ಎಸ್‌ಎಂಕೆ ಅಂತ್ಯಕ್ರಿಯೆ – ಮೊಮ್ಮಗ ಅಮರ್ಥ್ಯ ಸಿದ್ದಾರ್ಥ್‌ರಿಂದ ಚಿತೆಗೆ ಅಗ್ನಿಸ್ಪರ್ಶ

    ದೇಶದಲ್ಲಿ ವಾಹನ ಫಿಟ್‌ನೆಸ್ ಕೇಂದ್ರಗಳು ಮತ್ತು ಚಾಲನಾ ಕೇಂದ್ರಗಳಿಗೆ ಹೊಸ ಯೋಜನೆ ಪರಿಚಯಿಸುವ ಕುರಿತು ಮಾತನಾಡಿದ ಅವರು, ನಾವು ಈ ಉಪಕ್ರಮಕ್ಕಾಗಿ ಹೊಸ ಯೋಜನೆಯನ್ನು ಪ್ರಾರಂಭಿಸುತ್ತಿದ್ದೇವೆ, ದೇಶದ ಪ್ರತಿ ಜಿಲ್ಲೆಯಲ್ಲಿ ನಾಲ್ಕರಿಂದ ಐದು ಫಿಟ್‌ನೆಸ್ ಕೇಂದ್ರಗಳಿದ್ದರೆ, ಹತ್ತರಿಂದ ಇಪ್ಪತ್ತು ಚಾಲಕ ತರಬೇತಿ ಕೇಂದ್ರಗಳು ಇರುತ್ತವೆ ಎಂದು ಅವರು ತಿಳಿಸಿದರು.

    ಭಾರತೀಯ ರಸ್ತೆಗಳಿಂದ ಹಳೆಯ ಮತ್ತು ಯೋಗ್ಯವಲ್ಲದ ವಾಹನಗಳನ್ನು ತೆಗೆದುಹಾಕುವ ಉದ್ದೇಶದಿಂದ ವೆಹಿಕಲ್ ಸ್ಕ್ರ್ಯಾಪಿಂಗ್ ನೀತಿಯನ್ನು 2021 ರಲ್ಲಿ ಪ್ರಾರಂಭಿಸಲಾಗಿದೆ. ಮಾಲಿನ್ಯವನ್ನು ಕಡಿಮೆ ಮಾಡುವುದು ಮತ್ತು ಸ್ವಚ್ಛವಾದ ಸಾರಿಗೆ ವಿಧಾನಗಳನ್ನು ಉತ್ತೇಜಿಸಲು ಉದ್ದೇಶವನ್ನು ಈ ನೀತಿ ಹೊಂದಿದೆ.

     

  • 7.99 ಲಕ್ಷಕ್ಕೆ ಅತ್ಯಾಕರ್ಷಕ ಹೊಸ ಅಮೇಜ್ ಕಾರು ಬಿಡುಗಡೆ

    7.99 ಲಕ್ಷಕ್ಕೆ ಅತ್ಯಾಕರ್ಷಕ ಹೊಸ ಅಮೇಜ್ ಕಾರು ಬಿಡುಗಡೆ

    ಹೋಂಡಾ ಕಾರ್ಸ್ ಇಂಡಿಯಾ (Honda Cars India) ಕಂಪನಿಯು ಬಹು ನಿರೀಕ್ಷಿತ 3ನೇ ತಲೆಮಾರಿನ ಅಮೇಜ್ (Honda Amaze) ಸೆಡಾನ್ ಕಾರನ್ನು ಬಿಡುಗಡೆಗೊಳಿಸಿದೆ. ಈ ಸೆಗ್ಮೆಂಟ್‌ನ ಕಾರುಗಳಲ್ಲಿ ಪ್ರಪ್ರಥಮ ಬಾರಿಗೆ ADAS ಹೊಂದಿರುವ ಕಾರು ಅಮೇಜ್ ಆಗಿದೆ. ಕಾರಿನ ಪರಿಚಯಾತ್ಮಕ ಬೆಲೆ 7.99 ಲಕ್ಷ ರೂ.ನಿಂದ ಶುರುವಾಗಿ 10.90 ಲಕ್ಷ ರೂ.ವರೆಗೆ ನಿಗದಿಪಡಿಸಲಾಗಿದೆ.

    ಅಮೇಜ್ ಹೊರಾಂಗಣ ವಿನ್ಯಾಸ ಆಕರ್ಷಕವಾಗಿದ್ದು ಸಿಗ್ನೇಚರ್ ಚೆಕರ್ಡ್ ಫ್ಲ್ಯಾಗ್ ಪ್ಯಾಟರ್ನ್ ಗ್ರಿಲ್ ಹೊಂದಿರುವ ಫ್ರಂಟ್ ಬಂಪರ್, DRL ಮತ್ತು ಟರ್ನ್ ಇಂಡಿಕೇಟರ್ ಒಳಗೊಂಡ LED ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, LED ಪ್ರೊಜೆಕ್ಟರ್ ಫಾಗ್ ಲ್ಯಾಂಪ್, 15 ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್‌ಗಳು, ಶಾರ್ಕ್ ಫಿನ್ ಆಂಟೆನಾ ಮತ್ತು ರೆಕ್ಕೆ ಆಕಾರದಲ್ಲಿರುವ ಹಿಂಬದಿ LED ಲೈಟ್‌ಗಳು ಅಂದವನ್ನು ಹೆಚ್ಚಿಸಿವೆ.

    ಒಳಾಂಗಣ ವಿನ್ಯಾಸ ಕೂಡ ಹೊಸತನದಿಂದ ಕೂಡಿದ್ದು ಎಲ್ಲಾ ಪ್ರಯಾಣಿಕರಿಗೆ ಉತ್ತಮ ಸ್ಥಳಾವಕಾಶವುಳ್ಳ ಆಸನದ ವ್ಯವಸ್ಥೆ ಹೊಂದಿದೆ. 8 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, 7 ಇಂಚಿನ TFT MID ಮೀಟರ್, ವಯರ್ಲೆಸ್ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, ವಯರ್ಲೆಸ್ ಸ್ಮಾರ್ಟ್ ಫೋನ್ ಚಾರ್ಜರ್, 6 ಸ್ಪೀಕರ್ ಸೌಂಡ್ ಸಿಸ್ಟಮ್, PM 2.5 ಕ್ಯಾಬಿನ್ ಏರ್ ಫಿಲ್ಟರ್, ಹಿಂಬದಿ AC ವೆಂಟ್ಸ್, ಪೂರ್ತಿ ಆಟೋಮ್ಯಾಟಿಕ್ ಏರ್ ಕಂಡೀಷನಿಂಗ್ ವ್ಯವಸ್ಥೆ, ಪುಶ್ ಸ್ಟಾರ್ಟ್ ಅಂಡ್ ಸ್ಟಾಪ್ ಬಟನ್ ಮುಂತಾದ ವೈಶಿಷ್ಟ್ಯಗಳನ್ನು ಅಮೇಜ್ ಹೊಂದಿದೆ. ಈ ಸೆಗ್ಮೆಂಟ್ ಕಾರುಗಳಲ್ಲಿ ಅತ್ಯಂತ ಹೆಚ್ಚು ಅಂದರೆ 416 ಲೀಟರ್ ಬೂಟ್ ಸ್ಪೇಸ್ ಹೊಂದಿರುವ ಕಾರು ಅಮೇಜ್.

    1.2 ಲೀಟರ್ ಸಾಮರ್ಥ್ಯದ i-VTEC ಎಂಜಿನ್ ಹೊಂದಿರುವ ಹೊಸ ಅಮೇಜ್ ಕಾರು 90 ಪಿಎಸ್ ಪವರ್ ಮತ್ತು 110 nm ಟಾರ್ಕ್ ಉತ್ಪಾದಿಸುತ್ತದೆ. ಮಾನ್ಯುಯಲ್ ಗೇರ್ ಬಾಕ್ಸ್ ಮತ್ತು CVT ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಕಾರು ಲಭ್ಯವಿದೆ. ಅಮೇಜ್ ಮ್ಯಾನ್ಯುಯೆಲ್ ಗೇರ್ ಬಾಕ್ಸ್‌ನಲ್ಲಿ ಒಂದು ಲೀಟರ್ ಪೆಟ್ರೋಲ್‌ಗೆ 18.65 ಕಿಲೋಮೀಟರ್ ಮೈಲೇಜ್ ಮತ್ತು CVT ಗೇರ್ ಬಾಕ್ಸ್‌ನಲ್ಲಿ 19.46 ಕಿಲೋಮೀಟರ್ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇದನ್ನೂ ಓದಿ: 3 ಮಹಿಂದ್ರಾ ಕಾರುಗಳಿಗೆ ಸಿಕ್ತು 5 ಸ್ಟಾರ್ ಸೇಫ್ಟಿ ರೇಟಿಂಗ್

    ಅಮೇಜ್ ಹೋಂಡಾ ಸೆನ್ಸಿಂಗ್ ADAS (Honda Sensing ADAS) ಹೊಂದಿದ್ದು, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ವಾಚ್ ಕ್ಯಾಮೆರಾ, 6 ಏರ್ ಬ್ಯಾಗ್ ಗಳು, ಹಿಲ್ ಸ್ಟಾರ್ಟ್ ಅಸಿಸ್ಟ್, ವೆಹಿಕಲ್ ಸ್ಟೆಬಿಲಿಟಿ ಅಸಿಸ್ಟ್, ಹಿಂಬದಿ ಕ್ಯಾಮೆರಾ, ISOFIX ಸೀಟ್‌ಗಳು ಮತ್ತು ಇನ್ನಿತರ ಅತ್ಯಾಧುನಿಕ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ.

    ಹೊಸ ಹೋಂಡಾ ಅಮೇಜ್ ಸೆಡಾನ್‌ನ ಡೆಲಿವರಿ ಜನವರಿ 2025ರಿಂದ ಶುರುವಾಗಲಿದೆ. ಇತ್ತೀಚಿಗೆ ಬಿಡುಗಡೆಯಾದ ಮಾರುತಿ ಸುಜುಕಿ ಡಿಜೈರ್‌ (Maruti Suzuki Dzire), ಹ್ಯುಂಡೈ ಔರಾ (Hyundai Aura) ಮತ್ತು ಟಾಟಾ ಟಿಗೋರ್ (Tata Tigor) ಕಾರುಗಳು ಅಮೇಜ್‌ಗೆ ಪ್ರಬಲ ಪ್ರತಿಸ್ಪರ್ಧಿಗಳಾಗಿವೆ.

     

  • 3 ಮಹಿಂದ್ರಾ ಕಾರುಗಳಿಗೆ ಸಿಕ್ತು 5 ಸ್ಟಾರ್ ಸೇಫ್ಟಿ ರೇಟಿಂಗ್

    3 ಮಹಿಂದ್ರಾ ಕಾರುಗಳಿಗೆ ಸಿಕ್ತು 5 ಸ್ಟಾರ್ ಸೇಫ್ಟಿ ರೇಟಿಂಗ್

    ಭಾರತದ ಪ್ರಮುಖ SUV ತಯಾರಕರಾದ ಮಹೀಂದ್ರಾ ಅಂಡ್ ಮಹೀಂದ್ರಾ (Mahindra & Mahindra) ಕಂಪನಿಯು ಮತ್ತೊಂದು ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಭಾರತ್ ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಂ (Bharath NCAP)ನಲ್ಲಿ ಥಾರ್ ರಾಕ್ಸ್ (Thar ROXX), ಎಕ್ಸ್‌ಯುವಿ 3ಎಕ್ಸ್‌ಒ (XUV 3XO) ಮತ್ತು ಎಕ್ಸ್‌ಯುವಿ 400 (XUV400) ಕಾರುಗಳು 5-ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದುಕೊಂಡಿವೆ.

    ಮಹಿಂದ್ರಾ ಥಾರ್ ರಾಕ್ಸ್
    ಭಾರತ್ ಎನ್‌ಸಿಎಪಿ (Bharath NCAP) ನಡೆಸಿದ ಸುರಕ್ಷತಾ ಪರೀಕ್ಷೆಯ ವಯಸ್ಕರ ರಕ್ಷಣೆ ವಿಭಾಗದಲ್ಲಿ (Adult Occupant Protection) 39ಕ್ಕೆ 31.09 ಅಂಕಗಳನ್ನು ಗಳಿಸಿದರೆ, ಮಕ್ಕಳ ರಕ್ಷಣೆ ವಿಭಾಗದಲ್ಲಿ (Child Occupant Protection) 49ಕ್ಕೆ 45 ಅಂಕಗಳನ್ನು ಪಡೆದು ಥಾರ್ ರಾಕ್ಸ್ 5-ಸ್ಟಾರ್ ರೇಟಿಂಗ್ ಪಡೆದಿದೆ. ಥಾರ್ ರಾಕ್ಸ್ 5-ಸ್ಟಾರ್ ಭಾರತ್-ಎನ್‌ಸಿಎಪಿ ರೇಟಿಂಗ್ ಪಡೆದುಕೊಂಡ ಮೊದಲ ಬಾಡಿ-ಆನ್-ಫ್ರೇಮ್ ಎಸ್‌ಯುವಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆರು ಏರ್‌ಬ್ಯಾಗ್‌ಗಳು, ಎಲ್ಲಾ ಸೀಟ್‌ಗಳಿಗೆ 3-ಪಾಯಿಂಟ್ ಸೀಟ್‌ಬೆಲ್ಟ್‌ಗಳು, ABS, EBD, CBC, ISOFIX ಚೈಲ್ಡ್ ಸೀಟ್ ಆಂಕರ್‌ಗಳು ಮಹೀಂದ್ರಾ ಥಾರ್ ರಾಕ್ಸ್ ಕಾರಿನ ಸ್ಟ್ಯಾಂಡರ್ಡ್ ಸೇಫ್ಟಿ ಫೀಚರ್‌ಗಳಾಗಿವೆ.

    XUV 3XO
    XUV 3XO

    ಮಹೀಂದ್ರಾ XUV 3XO
    ವಯಸ್ಕ ಪ್ರಯಾಣಿಕರ ರಕ್ಷಣೆಯಲ್ಲಿ 32 ಅಂಕಗಳಿಗೆ 29.36 ಅಂಕಗಳು ಮತ್ತು ಮಕ್ಕಳ ರಕ್ಷಣೆಯಲ್ಲಿ 49 ಅಂಕಗಳಿಗೆ 43 ಅಂಕಗಳನ್ನು ಗಳಿಸುವ ಮೂಲಕ XUV 3XO 5-ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ. ಆರು ಏರ್‌ಬ್ಯಾಗ್‌ಗಳು, ಎಲ್ಲಾ ಸೀಟ್‌ಗಳಿಗೆ 3-ಪಾಯಿಂಟ್ ಸೀಟ್‌ಬೆಲ್ಟ್‌ಗಳು, ISOFIX ಚೈಲ್ಡ್ ಸೀಟ್ ಆಂಕರ್‌ಗಳು ಮಹೀಂದ್ರಾ XUV 3XO ಕಾರಿನ ಸ್ಟ್ಯಾಂಡರ್ಡ್ ಸೇಫ್ಟಿ ಫೀಚರ್‌ಗಳಾಗಿವೆ. ಇದನ್ನೂ ಓದಿ: 6.79 ಲಕ್ಷಕ್ಕೆ 5 ಸ್ಟಾರ್ ಸೇಫ್ಟಿ ರೇಟೆಡ್ ಡಿಸೈರ್ ಕಾರು ಬಿಡುಗಡೆ

    XUV400 EV
    XUV400 EV

    ಮಹೀಂದ್ರಾ XUV400 EV
    ಭಾರತ್ ಎನ್‌ಸಿಎಪಿ ಸುರಕ್ಷತಾ ಪರೀಕ್ಷೆಯಲ್ಲಿ XUV400 EV ವಯಸ್ಕ ಪ್ರಯಾಣಿಕರ ರಕ್ಷಣೆಯಲ್ಲಿ 32 ಅಂಕಗಳಿಗೆ 30.38 ಅಂಕಗಳು ಹಾಗೂ ಮಕ್ಕಳ ರಕ್ಷಣೆಯಲ್ಲಿ 49 ಅಂಕಗಳಿಗೆ 43 ಅಂಕಗಳನ್ನು ಗಳಿಸುವ ಮೂಲಕ 5-ಸ್ಟಾರ್ ರೇಟಿಂಗ್ ಪಡೆದಿದೆ. 2 ಏರ್‌ಬ್ಯಾಗ್‌ಗಳು, ESP, TPMS, ISOFIX ಚೈಲ್ಡ್ ಸೀಟ್ ಆಂಕರ್‌ಗಳು, ಎಲ್ಲಾ ವೀಲ್‌ಗಳಲ್ಲಿ ಡಿಸ್ಕ್ ಬ್ರೇಕ್‌ಗಳನ್ನು XUV400 EV ಕಾರು ಹೊಂದಿದೆ.

    ಇತ್ತೀಚೆಗಷ್ಟೇ ಗ್ಲೋಬಲ್ ಎನ್‌ಸಿಎಪಿ (Global NCAP) ನಡೆಸಿದ ಸುರಕ್ಷತಾ ಪರೀಕ್ಷೆಯಲ್ಲಿ ಮಾರುತಿ ಸುಜುಕಿ ಕಂಪನಿಯ ಹೊಸ ಡಿಸೈರ್ 5 ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದಿತ್ತು.

  • ಕಾರು ಮಾರಾಟ ಭಾರೀ ಕುಸಿತ – 7.90 ಲಕ್ಷ ವಾಹನಗಳು ಸಿದ್ದವಾಗಿದ್ದರೂ ಖರೀದಿಸುತ್ತಿಲ್ಲ ಜನ

    ಕಾರು ಮಾರಾಟ ಭಾರೀ ಕುಸಿತ – 7.90 ಲಕ್ಷ ವಾಹನಗಳು ಸಿದ್ದವಾಗಿದ್ದರೂ ಖರೀದಿಸುತ್ತಿಲ್ಲ ಜನ

    ನವದೆಹಲಿ: ದೀಪಾವಳಿ (Deepavali) ಹಬ್ಬದ ಸಮಯದಲ್ಲಿ ಕಾರು ಮಾರಾಟ (Car Sales) ಕುಸಿತಗೊಂಡಿದೆ. ಒಟ್ಟಾರೆ ಸದ್ಯ ಈಗ 79 ಸಾವಿರ ಕೋಟಿ ರೂ.ಮೌಲ್ಯದ 7.90 ಲಕ್ಷ ವಾಹನಗಳು ಮಾರಾಟಕ್ಕೆ ಸಿದ್ದವಾಗಿದ್ದರೂ  ಗ್ರಾಹಕರಿಂದ ಬುಕ್ಕಿಂಗ್‌ ಆಗುತ್ತಿಲ್ಲ.

    ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ಸ್ (FADA) ಮಾಹಿತಿಯ ಪ್ರಕಾರ, ಕಡಿಮೆ ಮಾರಾಟ ಇರುವಾಗಲೂ ಕಂಪನಿಗಳು ಭಾರೀ ಪ್ರಮಾಣದಲ್ಲಿ ಕಾರನ್ನು ಉತ್ಪಾದನೆ ಮಾಡಿದ್ದರಿಂದ ಮಾರಾಟ 18.81% ಕುಸಿದಿದೆ.

    ಕುತೂಹಲದ ವಿಶೇಷ ಏನೆಂದರೆ 10-25 ಲಕ್ಷ ರೂ. ಬೆಲೆಯ ಕಾರುಗಳ ಮಾರಾಟವೂ ಕುಸಿತಗೊಂಡಿದೆ. ಕೋವಿಡ್‌ (Covid) ನಂತರ ಈ ಕಾರುಗಳ ಮಾರಾಟ ಭಾರೀ ಏರಿಕೆ ಕಂಡಿತ್ತು.

    ಕಾರು ಖರೀದಿಯನ್ನು ಗ್ರಾಹಕರು ಮುಂದೂಡಲು ಹಲವು ಕಾರಣಗಳನ್ನು ನೀಡಬಹುದು. ಒಂದನೇಯದಾದಾಗಿ ಈ ವರ್ಷ ಲೋಕಸಭಾ ಚುನಾವಣೆ ಇತ್ತು. ಹೀಗಾಗಿ ಆರ್ಥಿಕ ಚಟುವಟಿಕೆಗಳು ಕಡಿಮೆ ಇತ್ತು. ಇದರ ಜೊತೆ ಹವಾಮಾನ ವೈಪರೀತ್ಯಗಳಿಂದಲೂ ಮಾರಾಟ ಕುಸಿತವಾಗಿದೆ. ಮೊದಲ 6 ತಿಂಗಳು ವಿಪರೀತ ಬೇಸಿಗೆ ಇದ್ದರೆ ನಂತರ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಾಗುತ್ತಿದೆ. ಇದೆಲ್ಲದರ ಪರಿಣಾಮ ಕಾರು ಖರೀದಿಗೆ ಗ್ರಾಹಕರು ಹಿಂದೇಟು ಹಾಕುತ್ತಿದ್ದಾರೆ. ಇದನ್ನೂ ಓದಿ: ಟೆಸ್ಲಾದಿಂದ ಸ್ಟೀರಿಂಗ್ ವೀಲ್‌ ಇಲ್ಲದ AI ಆಧಾರಿತ ರೋಬೋಟ್ಯಾಕ್ಸಿ ಬಿಡುಗಡೆ

    ಇನ್ನೊಂದು ಮುಖ್ಯ ಕಾರಣ ಏನೆಂದರೆ ಕೆಲವರು ಎಲೆಕ್ಟ್ರಿಕ್‌ ಅಥವಾ ಪೆಟ್ರೋಲ್‌/ಡೀಸೆಲ್‌ ಎಂಜಿನ್‌ ಮಧ್ಯೆ ಯಾವ ಕಾರು ಖರೀದಿಸಬೇಕೆಂಬ ಗೊಂದಲದಲ್ಲಿದ್ದಾರೆ. ಹೀಗಿದ್ದರೂ ಹೊಸದಾಗಿ ಬಿಡುಗಡೆಯಾದ ಸುಜುಕಿ ಫ್ರಾಕ್ಸ್‌ ಮತ್ತು ಟಾಟಾ ಕರ್ವ್‌ಗೆ ಬೇಡಿಕೆಯಿದೆ.

    ಕಾರುಗಳ ದರ ಇಳಿಕೆಗೆ ಹಲವು ಕಾರಣ ನೀಡಬಹುದು. ಅದರಲ್ಲೂ ಮುಖ್ಯವಾಗಿ ಕಾರು ಸಾಲ ದುಬಾರಿಯಾಗಿರುವುದು. ಭಾರತ ವಿಶ್ಯಾದ್ಯಂತ ಕೇಂದ್ರೀಯ ಬ್ಯಾಂಕ್‌ಗಳು ಬಡ್ಡಿ ದರವನ್ನು ಏರಿಸಿವೆ. ಹಣದುಬ್ಬರವನ್ನು ನಿಯಂತ್ರಿಸಲು ಭಾರತದಲ್ಲಿ ಆರ್‌ಬಿಐ (RBI) ಬಡ್ಡಿ ದರ ಏರಿಸುತ್ತಾ ಹೋಗಿದೆ. ಕೊರೊನಾ ನಂತರ ದೇಶದ ಅರ್ಥವ್ಯವಸ್ಥೆಯನ್ನು ಸ್ಥಿರವಾಗಿಡಲು ಆರ್‌ಬಿಐ ಈ ಕ್ರಮ ಕೈಗೊಂಡಿದೆ.

    ಭಾರತ ಮಾತ್ರವಲ್ಲ ವಿಶ್ವದೆಲ್ಲೆಡೆ ಕಾರುಗಳ ಮಾರಾಟ ಕಡಿಮೆಯಾಗುತ್ತಿದೆ. ಕೆಲ ಕಂಪನಿಗಳು ತನ್ನ ಉತ್ಪಾದನಾ ಘಟಕವನ್ನೇ ಬಂದ್‌ ಮಾಡಲು ಮುಂದಾಗಿದೆ. ವಿಶ್ವದ ಅತಿ ದೊಡ್ಡ ಕಾರು ತಯಾರಿಕಾ ಕಂಪನಿ ವೋಕ್ಸ್‌ ವಾಗನ್‌ ಬೆಲ್ಜಿಯಂ ಬ್ರುಸೆಲ್ಸ್‌ನಲ್ಲಿರುವ ಉತ್ಪಾದನಾ ಘಟಕವನ್ನು ಮುಚ್ಚಲು ಮುಂದಾಗುತ್ತಿದೆ. ಒಂದು ವೇಳೆ ಮುಚ್ಚಿದರೆ ಕಳೆದ 4 ದಶಕಗಳಲ್ಲಿ ವೋಕ್ಸ್‌ವಾಗನ್‌ ಮುಚ್ಚುತ್ತಿರುವ ಮೊದಲ ಘಟಕ ಇದಾಗಲಿದೆ. ಇದರ ಜೊತೆ ಜರ್ಮನಿಯ ಘಟಕವನ್ನು ಮುಚ್ಚಲು ಸಿದ್ಧತೆ ನಡೆದಿದೆ.

    ವಿಶ್ವದಲ್ಲಿ ಅತಿ ಹೆಚ್ಚು ಕಾರುಗಳು ಅಮೆರಿಕ, ಕೆನಡಾ, ಯುರೋಪ್‌ ದೇಶಗಳಲ್ಲಿ ಆಗುತ್ತಿದೆ. ಭಾರತದಲ್ಲಿ ಒಂದು ಕಾರು ತೆಗೆದುಕೊಂಡರೆ ಕನಿಷ್ಟ 7-8 ವರ್ಷಗಳ ಕಾಲ ಬಳಕೆ ಮಾಡಲಾಗುತ್ತದೆ. ಆದರೆ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ 4-5 ವರ್ಷಗಳಲ್ಲಿ ಹೊಸ ಕಾರನ್ನು ಜನ ಖರೀದಿ ಮಾಡುತ್ತಿದ್ದಾರೆ. ಆದರೆ ರಷ್ಯಾ ಉಕ್ರೇನ್‌ ಯುದ್ಧದ ಬಳಿಕ ಯುರೋಪ್‌ ದೇಶಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಅಮೆರಿಕದಲ್ಲೂ ಹಣದುಬ್ಬರ ಜಾಸ್ತಿ ಇದೆ. ಈ ಕಾರಣಕ್ಕೆ ಕಾರು ಮಾರಾಟ ವಿಶ್ವದಲ್ಲೇ ಕಡಿಮೆಯಾಗುತ್ತಿದೆ.

     

  • ಟೆಸ್ಲಾದಿಂದ ಸ್ಟೀರಿಂಗ್ ವೀಲ್‌ ಇಲ್ಲದ AI ಆಧಾರಿತ ರೋಬೋಟ್ಯಾಕ್ಸಿ ಬಿಡುಗಡೆ

    ಟೆಸ್ಲಾದಿಂದ ಸ್ಟೀರಿಂಗ್ ವೀಲ್‌ ಇಲ್ಲದ AI ಆಧಾರಿತ ರೋಬೋಟ್ಯಾಕ್ಸಿ ಬಿಡುಗಡೆ

    ಲಾಸ್‌ ಏಂಜಲೀಸ್‌: ಸ್ಟೀರಿಂಗ್ ವೀಲ್‌, ಪೆಡಲ್‌ ಹೊಂದಿರದ ಸ್ವಯಂ-ಚಾಲನೆ ಮಾಡುವ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಆಧಾರಿತ ಎಲೆಕ್ಟ್ರಿಕ್‌ ರೋಬೋಟ್ಯಾಕ್ಸಿಯನ್ನು (Robotaxi) ಟೆಸ್ಲಾ (Tesla) ಕಂಪನಿ ಬಿಡುಗಡೆ ಮಾಡಿದೆ.

    ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಇಒ ಎಲಾನ್‌ ಮಸ್ಕ್‌ (Elon Musk), ಈ ಕಾರಿನ ಬೆಲೆ 30 ಸಾವಿರ ಡಾಲರ್‌(ಅಂದಾಜು 25 ಲಕ್ಷ ರೂ.) ಅಥವಾ ಅದಕ್ಕಿಂತಲೂ ಕಡಿಮೆ ಇರಲಿದೆ. ವೈರ್‌ಲೆಸ್ ಚಾರ್ಜ್‌ ಮಾಡಬಹುದಾದ ಈ ಕಾರು ಮಾನವ ಚಾಲಿತ ಕಾರುಗಳಿಗಿಂದ 10 ರಿಂದ 20 ಪಟ್ಟು ಸುರಕ್ಷಿತವಾಗಿರಲಿದೆ ಎಂದು ತಿಳಿಸಿದರು.

    ಎರಡು ಆಸನ, ಚಿಟ್ಟೆಯಂತೆ ತೆರೆಯಬಹುದಾದ ಬಾಗಿಲು(Butterfly Doors) ಹೊಂದಿರುವ ಈ ಕಾರಿನ ಉತ್ಪಾದನೆ 2026ರಲ್ಲಿ ಆರಂಭವಾಗಲಿದೆ. ಮಾರಾಟ ಜಾಸ್ತಿಯಾದಂತೆ ಬೆಲೆಯೂ ಕಡಿಮೆಯಾಗಲಿದೆ. 2027ರಲ್ಲಿ ಈ ಕಾರು ಮಾರುಕಟ್ಟೆಯಲ್ಲಿ (Car Market) ಲಭ್ಯವಿರಲಿದೆ ಎಂದು ಹೇಳಿದರು. ಇದನ್ನೂ ಓದಿ: ಮಧ್ಯಮ ವರ್ಗದ ಭಾರತೀಯರ ಕನಸು ನನಸು ಮಾಡಿದ್ದ ರತನ್‌ – ಮೊದಲ ದೇಶೀ ಕಾರು ಮಾರುಕಟ್ಟೆಗೆ ಬಂದಿದ್ದು ಯಾವಾಗ?

    ಸುಮಾರು 10 ವರ್ಷದ ಹಿಂದೆ ಮಸ್ಕ್‌ ಸ್ವಯಂ ಚಾಲನಾ ಸಾಮರ್ಥ್ಯ ಇರುವ ರೋಬೋಟ್ಯಾಕ್ಸಿಯ ಬಗ್ಗೆ ಮಾತನಾಡಿದ್ದರು. ಇದನ್ನೂ ಓದಿ: ನ್ಯಾನೋ ಕಾರು ತಯಾರಿಸಿದ್ದು ಯಾಕೆ? ಪಶ್ಚಿಮ ಬಂಗಾಳದಿಂದ ಗುಜರಾತ್‌ಗೆ ಘಟಕ ಶಿಫ್ಟ್‌ ಆಗಿದ್ದು ಯಾಕೆ?

    ಈ ಕಾರ್ಯಕ್ರಮದಲ್ಲೇ ದಿ ರೋಬೋವನ್ (The Robovan) ಎಂದು ಕರೆಯುವ ಚಾಲಕರ ರಹಿತ ಪ್ರಯಾಣಿಕ ವಾಹನವನ್ನು ಸಹ ಪ್ರದರ್ಶಿಸಲಾಯಿತು. ಈ ವ್ಯಾನಿನಲ್ಲೂ ಸ್ಟೀರಿಂಗ್ ವೀಲ್, ಪೆಡಲ್ ಇಲ್ಲ. ಇದರಲ್ಲಿ ಇದು 20 ಜನರು ಕುಳಿತುಕೊಂಡು ಪ್ರಯಾಣ ಮಾಡಬಹುದು. ಅಷ್ಟೇ ಅಲ್ಲದೇ ಸರಕುಗಳನ್ನು ಸಾಗಿಸುವ ವ್ಯಾನ್‌ ಆಗಿಯೂ ಪರಿವರ್ತಿಸಬಹುದು.

    ಎಲಾನ್‌ ಮಸ್ಕ್‌ ಅವರು ಈ ವ್ಯಾನ್‌ ಉತ್ಪಾದನೆ ಸೇರಿದಂತೆ ಬಿಡುಗಡೆಯ ಬಗ್ಗೆ ಯಾವುದೇ ವಿವರಗಳನ್ನು ನೀಡಲಿಲ್ಲ.

  • ನ್ಯಾನೋ ಕಾರು ತಯಾರಿಸಿದ್ದು ಯಾಕೆ? ಪಶ್ಚಿಮ ಬಂಗಾಳದಿಂದ ಗುಜರಾತ್‌ಗೆ ಘಟಕ ಶಿಫ್ಟ್‌ ಆಗಿದ್ದು ಯಾಕೆ?

    ನ್ಯಾನೋ ಕಾರು ತಯಾರಿಸಿದ್ದು ಯಾಕೆ? ಪಶ್ಚಿಮ ಬಂಗಾಳದಿಂದ ಗುಜರಾತ್‌ಗೆ ಘಟಕ ಶಿಫ್ಟ್‌ ಆಗಿದ್ದು ಯಾಕೆ?

    ತನ್‌ ಟಾಟಾ (Ratan Tata) ಅವರಿಗೆ ನ್ಯಾನೋ ಕಾರನ್ನು (Nano Car) ತಯಾರಿಸುವ ಕಲ್ಪನೆ ಹೊಳೆದಿದ್ದೆ ರೋಚಕ. ಮುಂಬೈನಲ್ಲಿ ಭಾರೀ ಮಳೆಗೆ 4 ಮಂದಿ ಬೈಕಿನಲ್ಲಿ ತೆರಳುತ್ತಿದ್ದರು. ಈ ದೃಶ್ಯವನ್ನು ನೋಡಿದ ರತನ್‌ ಟಾಟಾ ಅವರ ಮನಸ್ಸು ಮಿಡಿಯಿತು.

    ತಂದೆ, ತಾಯಿ ಮಧ್ಯೆ ಕುಳಿತಿದ್ದ ಮಕ್ಕಳು ಬೈಕಿನಿಂದ ರಸ್ತೆಗೆ ಬೀಳುವನ್ನು ಕೇಳಿದ್ದ ರತನ್‌ ಟಾಟಾ ಸಾಮಾನ್ಯ ವರ್ಗದವರಿಗೆ ಕಡಿಮೆ ದರದಲ್ಲಿ ಕಾರು ನಿರ್ಮಿಸಿಕೊಡಬೇಕೆಂದು ಪಣ ತೊಟ್ಟರು. ಈ ಕಲ್ಪನೆಯನ್ನು ಸಾಕಾರಗೊಳಿಸಲು ನ್ಯಾನೋ ಕಾರನ್ನು ಉತ್ಪಾದನೆ ಮಾಡಲು ರತನ್‌ ಟಾಟಾ ಮುಂದಾದರು.

    ಜನವರಿ 10, 2008 ರಂದು ನ್ಯಾನೋ ಕಾರನ್ನು ಬಿಡುಗಡೆ ಮಾಡಲಾಯಿತು. ಈ ಕಾರಿಗೆ 1 ಲಕ್ಷ ರೂ. ದರ ನಿಗದಿ ಪಡಿಸಿದ್ದರಿಂದ ವಿಶ್ವದ ಅಗ್ಗದ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಈ ಮೂಲಕ ರತನ್‌ ಟಾಟಾ ಅವರು ಬಡವರು, ಸಾಮಾನ್ಯ ವರ್ಗದವರು ಕಾರು ಖರೀದಿಸಬೇಕೆಂಬ ಕನಸನ್ನು ನನಸು ಮಾಡುವಲ್ಲಿ ಯಶಸ್ವಿಯಾದರು. ಇದನ್ನೂ ಓದಿ: ರತನ್ ಟಾಟಾಗೆ ಭಾರತ ರತ್ನ ನೀಡುವಂತೆ ಕೇಂದ್ರಕ್ಕೆ ಮಹಾರಾಷ್ಟ್ರ ಸರ್ಕಾರದ ಶಿಫಾರಸು

    ರತನ್‌ ಟಾಟಾ ಅವರು ವಿಶ್ವದ ಅಗ್ಗದ ನ್ಯಾನೋ ಕಾರನ್ನು ಪಶ್ಚಿಮ ಬಂಗಾಳದಲ್ಲಿ (Wet Bengal) ನಿರ್ಮಾಣ ಮಾಡುವ ಕನಸು ಕಂಡಿದ್ದರು. ಆದರೆ ಕಾರು ನಿರ್ಮಾಣದ ವೇಳೆ ಟಾಟಾ ಕಂಪನಿ ಬಹಳ ಸಂಕಷ್ಟ ಎದುರಾಗಿತ್ತು. 2006 ರಲ್ಲಿ ಕಮ್ಯೂನಿಸ್ಟ್‌ ಪಕ್ಷ ಪಶ್ಚಿಮ ಬಂಗಾಳದಲ್ಲಿ ಮತ್ತೆ ಅಧಿಕಾರಕ್ಕೆ ಬಂದಿತು. ಮುಖ್ಯಮಂತ್ರಿಯಾಗಿದ್ದ ಬುದ್ಧದೇವ್ ಭಟ್ಟಾಚಾರ್ಯ ಅವರು ವಿಶ್ವದ ಅತ್ಯಂತ ಅಗ್ಗದ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ನ್ಯಾನೋ ಉತ್ಪಾದನಾ ಘಟಕ ಸ್ಥಾಪಿಸಲು ಹೂಗ್ಲಿ ಬದಿಯಲ್ಲಿರುವ ಸಿಂಗೂರಿನಲ್ಲಿ ಟಾಟಾಗೆ ಸುಮಾರು 1,000 ಎಕರೆ ಜಾಗ ನೀಡುವುದಾಗಿ ಘೋಷಿಸಿದ್ದರು.

    ಸರ್ಕಾರ ಜಾಗ ನೀಡಲು ಮುಂದಾಗುತ್ತಿದ್ದಂತೆ ಭಾರೀ ಹೋರಾಟ ಆರಂಭವಾಯಿತು. ಫಲವತ್ತಾದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತದೆ ಎಂದು ಆರೋಪಿಸಿ ರೈತರು ಪ್ರತಿಭಟನೆ ಆರಂಭಿಸಿದರು. ಪ್ರತಿಭಟನೆ ನಡೆದರೂ ಸ್ವಾಧಿನ ಪ್ರಕ್ರಿಯೆ ಪೂರ್ಣಗೊಂಡು ಕಾರು ನಿರ್ಮಾಣದ ಫ್ಯಾಕ್ಟರಿ ಕೆಲಸ ಆರಂಭವಾಯಿತು. ಇದನ್ನೂ ಓದಿ: ಮಧ್ಯಮ ವರ್ಗದ ಭಾರತೀಯರ ಕನಸು ನನಸು ಮಾಡಿದ್ದ ರತನ್‌ – ಮೊದಲ ದೇಶೀ ಕಾರು ಮಾರುಕಟ್ಟೆಗೆ ಬಂದಿದ್ದು ಯಾವಾಗ?

    ಫ್ಯಾಕ್ಟರಿ ಕೆಲಸ ಆರಂಭವಾಗುತ್ತಿದ್ದಾಗ 2007 ರಲ್ಲಿ ಮಮತಾ ಬ್ಯಾನರ್ಜಿ (Mamata Banerjee) ಪ್ರತಿಭಟನೆಯ ನೇತೃತ್ವ ವಹಿಸಿದರು. ಪೊಲೀಸರು ಮತ್ತು ಟಿಎಂಸಿ ಕಾರ್ಯಕರ್ತರ ಮಧ್ಯೆ ಸಂಘರ್ಷ ನಡೆಯಿತು. ಘಟಕದ ವಿರುದ್ಧ ಮಮತಾ 26 ದಿನಗಳ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದರು. ಈ ಪ್ರತಿಭಟನೆಗೆ ಹಲವು ಪರಿಸರ ಸಂಘಟನೆಗಳು ಸಾಥ್‌ ನೀಡಿದವು.

    ಪ್ರತಿಭಟನೆ ತೀವ್ರ ವಿವಾದವಾಗುತ್ತಿದ್ದಂತೆ ಸರ್ಕಾರ, ರಾಜ್ಯಪಾಲರು ನಡೆಸಿದ ಮಾತುಕತೆ ವಿಫಲವಾಯಿತು. ಉದ್ವಿಗ್ನ ಪರಿಸ್ಥಿತಿ ಹೆಚ್ಚಾಗುತ್ತಿದ್ದಂತೆ ಅಂದಿನ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ (Narendra Modi) ಅವರು ರತನ್‌ ಟಾಟಾ ಅವರಿಗೆ ರಾಜ್ಯದಲ್ಲಿ ಹೂಡಿಕೆ ಮಾಡುವಂತೆ ಆಹ್ವಾನಿಸಿದರು. ರತನ್‌ ಟಾಟಾ ಅವರು ಮೋದಿಯ ಆಫರ್‌ ಒಪ್ಪಿದರು. ಅಂತಿಮವಾಗಿ ಅಕ್ಟೋಬರ್‌ 03, 2008 ರಂದು ಘಟಕವನ್ನು ಅಹಮದಾಬಾದ್‌ನಲ್ಲಿರುವ ಸನಂದಕ್ಕೆ ಸ್ಥಳಾಂತರ ಮಾಡುವುದಾಗಿ ಟಾಟಾ ಮೋಟಾರ್ಸ್‌ ಘೋಷಿಸಿತು.

    ಉತ್ಪಾದನಾ ಘಟಕವನ್ನು ಬಂದ್‌ ಮಾಡಿದ ನಂತರ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ರಾಜಕೀಯವಾಗಿ ಶಕ್ತಿಯುತವಾದರು. ಅಂತಿಮವಾಗಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಆದರೆ ಆರ್ಥಿಕವಾಗಿ ಪಶ್ಚಿಮ ಬಂಗಾಳ ನಷ್ಟ ಅನುಭವಿಸಿತು. ನಂತರದ ವರ್ಷಗಳಲ್ಲಿ ಬೇರೆ ರಾಜ್ಯಗಳು ಕಂಪನಿಗಳನ್ನು ಆಕರ್ಷಿಸಿದರೆ ಪಶ್ಚಿಮ ಬಂಗಾಳ ಹೂಡಿಕೆದಾರರನ್ನು ಸೆಳೆಯುವಲ್ಲಿ ವಿಫಲವಾಯಿತು. ಇದನ್ನೂ ಓದಿ: ಬೆಂಗಳೂರಿನಲ್ಲಿ ಎಫ್‌16 ಯುದ್ಧ ವಿಮಾನ ಹಾರಿಸಿದ್ದ ರತನ್‌ ಟಾಟಾ

    ಕಾನೂನು ಸಮರದಲ್ಲಿ ಗೆದ್ದ ಟಾಟಾ ಮೋಟಾರ್ಸ್‌
    ಸಿಂಗೂರಿನಲ್ಲಿ ಟಾಟಾ ಫ್ಯಾಕ್ಟರಿ ಸ್ಥಾಪನೆಗೆ ಜಾಗ ನೀಡಿ ಹೂಡಿಕೆ ಮಾಡಿ ನಷ್ಟ ಉಂಟು ಮಾಡಿದ್ದಕ್ಕೆ ಟಾಟಾ ಕಂಪನಿ ಪಶ್ಚಿಮ ಬಂಗಾಳ ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ (WBIDC) ವಿರುದ್ಧ ಕೇಸ್‌ ದಾಖಲಿಸಿತ್ತು. ದಶಕಗಳಿಂದ ನಡೆದಿದ್ದ ಕಾನೂನು ಸಮರವನ್ನು ಟಾಟಾ ಮೋಟಾರ್ಸ್‌ ಗೆದ್ದುಕೊಂಡಿತ್ತು. ಟಾಟಾ ಮೋಟಾರ್ಸ್‌ಗೆ ನಷ್ಟ ಉಂಟು ಮಾಡಿದ್ದಕ್ಕೆ WBIDCಗೆ 766 ಕೋಟಿ ರೂ. ಪಾವತಿಸುವಂತೆ ಮಧ್ಯಸ್ಥಿಕೆ ನ್ಯಾಯಾಲಯ ಆದೇಶಿಸಿತ್ತು. ಇದನ್ನೂ ಓದಿ: ನ್ಯಾನೋ ಕೇಸ್‌, ಮಮತಾಗೆ ತೀವ್ರ ಮುಖಭಂಗ – ಕೊನೆಗೂ ಗೆದ್ದ ಟಾಟಾ ಮೋಟಾರ್ಸ್‌