Tag: ಅಟೆಂಪ್ಟ್ ಟು ಮರ್ಡರ್

  • ಎಟಿಎಂ ಭರ್ಜರಿ ಪ್ರದರ್ಶನ!

    ಎಟಿಎಂ ಭರ್ಜರಿ ಪ್ರದರ್ಶನ!

    ಕನ್ನಡದಲ್ಲಿ ಸತ್ಯಕಥೆಗಳನ್ನಾಧರಿಸಿದ ಸಿನಿಮಾಗಳು ಆಗಾಗ ತೆರೆ ಕಾಣುತ್ತಿರುತ್ತವೆ. ಇದೀಗ ಅದೇ ಸಾಲಿನಲ್ಲಿ ಸೇರ್ಪಡೆಯಾಗಿರುವ ಚಿತ್ರ ಎಟಿಎಂ (ಅಟೆಂಪ್ಟ್ ಟು ಮರ್ಡರ್). 5 ವರ್ಷಗಳ ಹಿಂದೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದಂಥ ಬೆಂಗಳೂರಿನ ಎಟಿಎಂವೊಂದರಲ್ಲಿ ಮಹಿಳೆ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ಹಿನ್ನೆಲೆಯಾಗಿಟ್ಟುಕೊಂಡು ನಿರ್ಮಾಣವಾಗಿರುವ ಚಿತ್ರ ಇದಾಗಿದ್ದು, ಕಳೆದ ವಾರ ರಾಜ್ಯಾದ್ಯಂತ ತೆರೆಗೆ ಬಂದಿತ್ತು. ನೈಜ ಘಟನೆ ಆಧರಿಸಿ ಅಚ್ಚುಕಟ್ಟಾಗಿ ಸಿನಿಮಾ ಮಾಡಿರುವ ಕಾರಣಕ್ಕೆ ವಿಮರ್ಶಕರು ಮಾತ್ರವಲ್ಲದೆ ಪ್ರೇಕ್ಷಕರೂ ಎಟಿಎಂಗೆ ಫುಲ್ ಮಾರ್ಕ್ ನೀಡಿದ್ದಾರೆ. ಇದರ ಪ್ರತಿಫಲವೆಂಬಂತೆ ಎಟಿಎಂ ಬಿಡುಗಡೆಯಾದ ಸ್ಥಳಗಳಲ್ಲೆಲ್ಲಾ ಭರ್ಜರಿ ಪ್ರದರ್ಶನ ಕಾಣುತ್ತಿದೆ.

    ಈ ಚಿತ್ರಕ್ಕೆ ಅಮರ್ ಕಥೆ, ಚಿತ್ರಕಥೆ, ಸಂಭಾಷಣೆಗಳನ್ನು ಬರೆದು ನಿರ್ದೇಶನ ಮಾಡಿದ್ದಾರೆ, ಎಸ್.ವಿ. ನಾರಾಯಣ್ ಈ ಚಿತ್ರಕ್ಕೆ ಬಂಡವಾಳ ಹಾಕಿ ನಿರ್ಮಾಣ ಮಾಡಿದ್ದಾರೆ. ನಿರ್ದೇಶಕ ಅಮರ್ ಮಾಡಿಕೊಂಡಿದ್ದ ಈ ಕಥೆ ಕೇಳಿದಾಗ ಅದರಲ್ಲಿನ ವಿಶೇಷ ಅಂಶವನ್ನು ಗ್ರಹಿಸಿ, ಆ ಕಥೆಯಲ್ಲಿ ಏನೋ ಹೊಸತನವಿರುವುದನ್ನು ಕಂಡುಕೊಂಡು ಸಹೋದರ ಕೃಷ್ಣಮೂರ್ತಿ ಅವರ ಜೊತೆ ಚರ್ಚಿಸಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಎಟಿಎಂ ಚಿತ್ರದಲ್ಲಿ ಪ್ರಮುಖವಾಗಿ ಐದು ಜನ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರೂ ಚಿತ್ರದಲ್ಲಿ ಬರುವ ಎಲ್ಲಾ ಪಾತ್ರಗಳೂ ಅದರದೇ ಆದ ಪ್ರಾಮುಖ್ಯತೆ ಹೊಂದಿವೆ. ಚಿತ್ರದಲ್ಲಿರುವ ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಕಂಟೆಂಟ್ ಪ್ರೇಕ್ಷಕರನ್ನು ಹಿಡಿದು ಕೂರಿಸುವಂತಿದೆ.

    ನಿರ್ದೇಶಕ ಅಮರ್ ಒಂದಷ್ಟು ಕಿರುಚಿತ್ರಗಳನ್ನು ನಿರ್ದೇಶನ ಮಾಡಿದ್ದು, ಇದೇ ಮೊದಲ ಬಾರಿಗೆ ಕಮರ್ಷಿಯಲ್ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಇನ್ನು ಈ ಚಿತ್ರದ ನಾಯಕನಟ ವಿನಯ್ ಒಬ್ಬ ಪೊಲೀಸ್ ಅಧಿಕಾರಿಯಾಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಹೇಮಲತಾ ಅವರು ಒಬ್ಬ ಜರ್ನಲಿಸ್ಟ್ ಪಾತ್ರವನ್ನು ನಿರ್ವಹಿಸಿದ್ದಾರೆ.

  • ಎಟಿಎಂನಿಂದ ಹೀರೋ ಆದರು ವಿನಯ್ ಗೌಡ!

    ಎಟಿಎಂನಿಂದ ಹೀರೋ ಆದರು ವಿನಯ್ ಗೌಡ!

    ಬೆಂಗಳೂರು: ವಿನಯ್ ಗೌಡ ಗೊತ್ತಲ್ಲ. ಕನ್ನಡದ ಅನೇಕ ಸೀರಿಯಲ್‍ಗಳಲ್ಲಿ ನಟಿಸಿ ಹೆಸರು ಮಾಡಿದವರು. ಬಹುಶಃ ವಿನಯ್ ಅಂದರೆ ತಕ್ಷಣಕ್ಕೆ ಗುರುತು ಹತ್ತೋದು ಕಷ್ಟ. ಯಾಕೆಂದರೆ, ಅವರು ಬೇರೆ ಬೇರೆ ಪಾತ್ರಗಳ ಮೂಲಕವೇ ಪ್ರೇಕ್ಷಕರ ಮನಸಲ್ಲಿ ನೆಲೆಯೂರಿದ್ದಾರೆ. ಇಂಥಾ ವಿನಯ್ ಗೌಡ ಎಟಿಎಂ ಸಿನಿಮಾದ ಮೂಲಕ ಹೀರೋ ಆಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಹಾಸನ ವಿನಯ್ ಅವರ ಊರು. ಅಲ್ಲಿನ ದುದ್ದ ಹೋಬಳಿಯ ಹೆರಗು ವಿನಯ್ ಅವರ ಸ್ವಂತ ಊರು. ಆದರೆ ಓದಿ ಬೆಳೆದಿದ್ದೆಲ್ಲವೂ ಬೆಂಗಳೂರಿನಲ್ಲಿಯೇ. ಓದಿಗೂ ಇವರ ಆಸಕ್ತಿಗೂ ಎತ್ತಣಿಂದೆತ್ತ ಸಂಬಂಧವೂ ಇಲ್ಲ. ಹೇಳಿಕೊಳ್ಳುವಂಥಾ ಕಲೆಯ ವಾತಾವರಣ ಇರದಿದ್ದ ಕುಟುಂಬವೊಂದರಿಂದ ಬಂದಿರುವ ವಿನಯ್ ನಟನಾಗಿ ರೂಪುಗೊಂಡಿದ್ದೇ ಒಂದು ಅಚ್ಚರಿ. ಕೆಎಲ್‍ಇ ಕಾಲೇಜಿನಲ್ಲಿ ಪದವಿ ಮುಗಿಸಿಕೊಂಡು, ದಯಾನಂದ ಸಾಗರ್ ಕಾಲೇಜಿನಲ್ಲಿ ಎಂಬಿಎ ಮುಗಿಸಿಕೊಂಡ ವಿನಯ್ ಕಾಲೇಜು ದಿನಗಳಲ್ಲಿಯೇ ಮಾಡೆಲಿಂಗ್‍ನಲ್ಲಿ ಮಿಂಚಿದ್ದರು. ಓದೆಲ್ಲ ಮುಗಿಯುವ ಹೊತ್ತಿಗೆ ಅವರು ಆಕರ್ಷಿತರಾಗಿದ್ದು ರಂಗಭೂಮಿಯತ್ತ.

    ಜಯದೇವ್ ಅವರ ತ್ರಿಶಂಕು ತಂಡದ ಮೂಲಕ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ವಿನಯ್ ಅವರು ದುನಿಯಾ ವಿಜಯ್ ಮುಂತಾದ ನಟರೊಂದಿಗೇ ರಂಗ ತಾಲೀಮು ನಡೆಸಿದ್ದರು. ಹೀಗೆ ತರಬೇತಿ ಹೊಂದಿದ ವಿನಯ್ ಮೊದಲು ನಟಿಸಿದ ನಾಟಕ `ತ್ರಿಶಂಕು?. ಆ ಮೂಲಕ ನಟನೆಗೆ ಅಡಿಯಿರಿಸಿದ ವಿನಯ್ ಆ ನಂತರ ಹತ್ತಾರು ನಾಟಕಗಳಲ್ಲಿ ಅಭಿನಯಿಸಿದ್ದರು. ಅದರ ಬಲದಿಂದಲೇ ಮೊದಲ ಸಲ ವಿನು ಬಳಂಜ ನಿರ್ದೇಶನದ ಸೂಪರ್ ಹಿಟ್ ಧಾರಾವಾಹಿ ಜೋಗುಳದಲ್ಲಿಯೂ ಗಮನಾರ್ಹ ಪಾತ್ರದಲ್ಲಿ ನಟಿಸಿ ಸೈ ಅನ್ನಿಸಿಕೊಂಡಿದ್ದರು. ಆ ನಂತರ ನಿನ್ನೊಲುಮೆಯಿಂದಲೇ, ಮುಕ್ತ ಮುಕ್ತ ಮುಂತಾದ ಧಾರಾವಾಹಿಗಳ ಮೂಲಕ ಕಿರುತೆರೆ ಜಗತ್ತಿನಲ್ಲಿ ನೆಲೆ ನಿಂತಿದ್ದರು. ಈ ನಡುವೆ ಮತ್ತೆ ಮುಂಗಾರು ಚಿತ್ರದಲ್ಲಿಯೂ ಗಮನಾರ್ಹ ಪಾತ್ರವೊಂದರಲ್ಲಿ ವಿನಯ್ ಕಾಣಿಸಿಕೊಂಡಿದ್ದರು. ತಾನೊಬ್ಬ ಪರಿಪೂರ್ಣ ನಟನಾಗಿ ರೂಪುಗೊಳ್ಳಬೇಕೆಂಬ ಹಂಬಲ ಹೊಂದಿದ್ದ ವಿನಯ್ ನಾಯಕ ನಟನಾಗಲು ಒಂದೊಳ್ಳೆ ಕಥೆಯ ತಲಾಷಿನಲ್ಲಿದ್ದರು. ಅದೀಗ ಎಟಿಎಂ ಚಿತ್ರದ ಮೂಲಕ ಸಾಕಾರಗೊಂಡಿದೆ.

    ಎಟಿಎಂ ಚಿತ್ರದಲ್ಲಿ ವಿನಯ್ ಬಯಸಿದ್ದಂಥಾದ್ದೇ ಖಡಕ್ ಪೊಲೀಸ್ ಅಧಿಕಾರಿಯ ನಾಯಕನ ಪಾತ್ರ ಸಿಕ್ಕಿದೆ. ಇದುವೇ ಚಿತ್ರರಂಗದಲ್ಲಿ ಮತ್ತಷ್ಟು ಅವಕಾಶಗಳನ್ನು ಸೃಷ್ಟಿಸುತ್ತದೆ ಎಂಬ ಭರವಸೆಯೂ ವಿನಯ್ ಅವರಿಗಿದೆ. ರಗಡ್ ಲುಕ್ಕಿನ ಖಡಕ್ ಪಾತ್ರಗಳನ್ನು ಮಾಡುವ ಇರಾದೆ ಹೊಂದಿರುವ ಅವರು ಪೌರಾಣಿಕ ಪಾತ್ರಗಳನ್ನು ಮಾಡುವ ಕನಸನ್ನೂ ಹೊಂದಿದ್ದಾರೆ. ಪಾತ್ರ ಯಾವುದಾದರೇನು ನಟಿಸುವ ಛಾತಿ ಇರುವ ವಿನಯ್ ಕನ್ನಡ ಚಿತ್ರರಂಗದ ಪಾಲಿಗೆ ಉತ್ತಮ ಕಲಾವಿದನಾಗೋದಂತೂ ನಿಜ.

  • ಅಟೆಂಪ್ಟ್ ಟು ಮರ್ಡರ್ ಹವಾ ಜೋರು!

    ಅಟೆಂಪ್ಟ್ ಟು ಮರ್ಡರ್ ಹವಾ ಜೋರು!

    ಬೆಂಗಳೂರು: ಕನ್ನಡದಲ್ಲಿ ಸತ್ಯಕಥೆಗಳನ್ನಾಧರಿಸಿದ ಸಿನಿಮಾಗಳು ಆಗಾಗ ತೆರೆ ಕಾಣುತ್ತಿರುತ್ತವೆ. ಇದೀಗ ಅದೇ ಸಾಲಿನಲ್ಲಿ ಸೇರ್ಪಡೆಯಾಗುವ ಎಟಿಎಂ (ಅಟೆಂಪ್ಟ್ ಟು ಮರ್ಡರ್) ಚಿತ್ರ ಬಿಡುಗಡೆಯಾಗುವ ಸನ್ನಾಹದಲ್ಲಿದೆ.

    ಅಮರ್ ನಿರ್ದೇಶನದ ಈ ಚಿತ್ರದ ಹಾಡುಗಳು ಮತ್ತು ಟ್ರೇಲರ್ ಈಗಾಗಲೇ ಜನರನ್ನು ಸೆಳೆದಿವೆ. ಈಗಾಗಲೇ ರವಿ ದೇವ್ ಸಂಗೀತ ನಿರ್ದೇಶನದ ಮೂರು ಹಾಡುಗಳು ಟ್ರೆಂಡ್ ಸೆಟ್ ಮಾಡಿವೆ. ಅಂದಹಾಗೆ ಈ ಕಥೆಯಲ್ಲಿ ವಿಲನ್ ಪಾತ್ರದತ್ತಲೇ ಫೋಕಸ್ ಇರೋದರಿಂದ ವಿಲನ್ ಎಂಟ್ರಿಗೆಂದೇ ವಿಶೇಷವಾದೊಂದು ಹಾಡು ಮಾಡಲಾಗಿದೆಯಂತೆ. ಅದೂ ಕೂಡಾ ಜನರಿಗಿಷ್ಟವಾಗಿದೆ. ಆನಂದ್ ಆಡಿಯೋ ಹೊರ ತಂದಿರೋ ಈ ಹಾಡುಗಳೇ ಚಿತ್ರದ ಬಗ್ಗೆ ಪ್ರೇಕ್ಷಕರನ್ನು ಕಾತರರನ್ನಾಗಿಸುವಲ್ಲಿ ಯಶಸ್ವಿಯಾಗಿವೆ.

    ಇದು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನಡೆದು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಘಟನೆಯೊಂದನ್ನು ಆಧರಿಸಿದ ಚಿತ್ರ. ಕಾಪೋರೇಷನ್ ವೃತ್ತದಲ್ಲಿ ಎಟಿಎಂ ಒಂದರಲ್ಲಿ ಮಹಿಳೆಯ ಮೇಲೆ ಮಾರಣಾಂತಿಕವಾದ ಹಲ್ಲೆ ನಡೆದಿತ್ತಲ್ಲಾ? ಅದೇ ಘಟನೆಯನ್ನಾಧರಿಸಿ ಈ ಚಿತ್ರವನ್ನು ಮಾಡಲಾಗಿದೆ. ಕಮರ್ಷಿಯಲ್ ಅಂಶಗಳಾಚೆಗೆ ಈ ಚಿತ್ರವನ್ನು ಭಿನ್ನ ಬಗೆಯಲ್ಲಿ ರೂಪಿಸಲಾಗಿದೆಯಂತೆ.

    ಸದ್ಯ ಬಿಡುಗಡೆಯ ಸರದಿಯಲ್ಲಿ ನಿಂತಿರುವ ಚಿತ್ರಗಳಲ್ಲಿ ಅಟೆಂಪ್ಟ್ ಟು ಮರ್ಡರ್ (ಎಟಿಎಂ) ಪ್ರೇಕ್ಷಕರ ಗಮನ ಸೆಳೆದಿರುವ ಚಿತ್ರವಾಗಿ ಮುಖ್ಯವಾಗಿದೆ. ಬೆಂಗಳೂರಿನಲ್ಲಿ ವರ್ಷಾಂತರಗಳ ಹಿಂದೆ ನಡೆದು ದೇಶವನ್ನೇ ಬೆಚ್ಚಿಬೀಳಿಸಿದ್ದ ನೈಜ ಘಟನೆಯೊಂದನ್ನು ಆಧರಿಸಿ ಈ ಚಿತ್ರದ ಕಥೆ ಹೆಣೆಯಲಾಗಿದೆ ಅಂತ ನಿರ್ದೇಶಕ ಅಮರ್ ಆರಂಭದಲ್ಲಿ ಹೇಳಿಕೊಂಡಿದ್ದರು. ಹಾಗಾದರೆ ಅದು ಎಟಿಎಂಗೆ ನುಗ್ಗಿದ ದುಷ್ಕರ್ಮಿ ಮಹಿಳೆಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಪ್ರಕರಣವಾ? ಎಂಬ ಪ್ರಶ್ನೆ ಕಾಡೋದು ಸಹಜ. ಆದರೆ ಈ ವಿಚಾರದ ನಿಗೂಢವನ್ನು ಈವರೆಗೂ ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಒಂದು ವೇಳೆ ಅದೇ ಘಟನೆಯೇ ಆಗಿದ್ದರೂ ನಿರೀಕ್ಷೆ ಮಾಡದಂಥಾ ರೀತಿಯಲ್ಲಿ ಚಿತ್ರ ಮೂಡಿ ಬಂದಿದೆ ಎಂಬುದು ಚಿತ್ರತಂಡದ ಭರವಸೆ.

    ಇದು ಒಂದು ಕ್ರೈಂ ಓರಿಯಂಟೆಡ್ ಚಿತ್ರ ಎಂಬಂತೆ ಕಂಡರೂ ಈ ಚಿತ್ರದಲ್ಲೆಲ್ಲೂ ಕೊಲೆಗಳನ್ನು ವೈಭವೀಕರಿಸಿಲ್ಲವಂತೆ. ಅಸಲಿಗೆ ಕೊಲೆ ನಡೆಯುತ್ತದಾ ಎಂಬುದನ್ನೇ ಚಿತ್ರ ತಂಡ ಸಸ್ಪೆನ್ಸ್ ಆಗಿಟ್ಟಿದೆ. ಈ ನೈಜ ಘಟನೆಗೆ ಸಿನಿಮಾ ಟಚ್ ನೀಡಿರೋ ನಿರ್ದೇಶಕರು ಅದರ ಜೊತೆಗೆ ನವಿರಾದೊಂದು ಪ್ರೇಮ ಕಥೆಯನ್ನೂ ಹೇಳಿದ್ದಾರಂತೆ. ಈ ಕಾರಣದಿಂದಲೇ ಈ ಚಿತ್ರ ವಿಶೇಷವಾಗಿ ಮೂಡಿ ಬಂದಿದೆ ಎಂಬುದು ನಿರ್ದೇಶಕರ ಅಭಿಪ್ರಾಯ. ಇನ್ನುಳಿದಂತೆ ವಿನಯ್ ಈ ಚಿತ್ರದ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ನಾಯಕ ನಟನಾಗಬೇಕೆಂಬ ಕನಸು ಹೊತ್ತು ಆ ನಿಟ್ಟಿನಲ್ಲಿ ವರ್ಷಾಂತರಗಳ ಕಾಲ ಶ್ರಮ ವಹಿಸಿರುವ ವಿನಯ್ ಎಟಿಎಂ ಚಿತ್ರದ ಮೂಲಕ ಅದು ಕೈಗೂಡಿದ ಖುಷಿಯಲ್ಲಿದ್ದಾರೆ. ಈ ಚಿತ್ರದಲ್ಲಿ ಬಹು ಮುಖ್ಯವಾದ ಪಾತ್ರದಲ್ಲಿ ನಟಿಸಿರುವ ಧನ್ಯತೆ ವಿನಯ್ ಅವರಲ್ಲಿದೆ. ಈ ಚಿತ್ರದ ಮತ್ತೋರ್ವ ನಟ ಚಂದು ಗೌಡ. ಪ್ರಸ್ತುತ ಲಕ್ಷ್ಮೀಬಾರಮ್ಮ ಸೀರಿಯಲ್ ನಲ್ಲಿ ಮುಖ್ಯ ಪಾತ್ರ ನಿರ್ವಹಿಸುತ್ತಿರುವ ಇವರ ಪಾತ್ರದ ಹೆಸರೂ ಚಂದು. ಈ ಪಾತ್ರದ ಮೂಲಕವೇ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿರೋ ಇವರು ಎರಡು ವರ್ಷಗಳಿಂದ ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ. ಇವರಿಗಿಲ್ಲಿ ಶೋಭಿತಾ ಎಂಬಾಕೆ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಐಟಿ ಕಂಪೆನಿ ಹುಡುಗಿಯಾಗಿ ನಟಿಸಿರೋ ಶೋಭಿತಾಗೂ ಇದು ಮೊದಲ ಚಿತ್ರ.

  • ಹಾರ, ಸನ್ಮಾನ ನನಗೆ ಬೇಡ ದೇವ್ರಿಗೆ ಹಾಕಿ ಅಂದ್ರು ಕಿಚ್ಚ

    ಹಾರ, ಸನ್ಮಾನ ನನಗೆ ಬೇಡ ದೇವ್ರಿಗೆ ಹಾಕಿ ಅಂದ್ರು ಕಿಚ್ಚ

    ಬೆಂಗಳೂರು: ನನಗೆ ಹಾರ, ಸನ್ಮಾನ ಯಾವುದು ಬೇಡ ಎಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸರಳತೆ ಮೆರೆದಿದ್ದಾರೆ.

    ಸ್ಯಾಂಡಲ್‍ವುಡ್ ನಲ್ಲಿ ಹೊಸಬರ ತಂಡ ಸೇರಿ ಮಾಡಿರುವ ಎಟಿಎಂ (ಅಟೆಂಪ್ಟ್ ಟು ಮರ್ಡರ್) ಸಿನಿಮಾದ ಟ್ರೇಲರ್ ಅನ್ನು ಸುದೀಪ್ ಬಿಡುಗಡೆ ಮಾಡಿ ಶುಭ ಹಾರೈಸಿದರು.

    ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ ನಂತರ ಚಿತ್ರತಂಡ ಕಿಚ್ಚ ಸುದೀಪ್ ಅವರಗೆ ಸನ್ಮಾನ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ವೇದಿಕೆ ಮೇಲೆ ಶಾಲು ಹಾರ ತುರಾಯಿಗಳನ್ನಿಟ್ಟು ಸನ್ಮಾನಿಸಲು ಕರೆಯಬೇಕು ಎನ್ನುವ ವೇಳೆ ಇದರ ಸೂಕ್ಷ್ಮವನ್ನು ಗಮನಿಸಿದ ಅವರು ನನಗೆ ಹಾರ ಸನ್ಮಾನ ಯಾವುದು ಬೇಡ, ಈ ಹಾರವನ್ನು ದೇವರಿಗೆ ಹಾಕಿ ಎಂದು ಹೇಳಿ ಸಂಭವಿಸಬೇಕಿದ್ದ ಸನ್ಮಾನವನ್ನು ನಯವಾಗಿ ತಿರಸ್ಕರಿಸಿದರು.

    ಈ ಬಾರಿ ಸುದೀಪ್ ಅವರು ತಮ್ಮ ಹುಟ್ಟು ಹಬ್ಬದ ಸಂದರ್ಭದಲ್ಲೂ ಯಾವುದೇ ಸಂಭ್ರಮಾಚರಣೆ ಮಾಡುವುದಿಲ್ಲ ಎಂದು ಹೇಳಿದ್ದರು. ಅಲ್ಲದೇ ಅಭಿಮಾನಿಗಳು ಯಾರೂ ಹಾರ, ಕೇಕ್ ಗಳನ್ನು ತರದಿರಲು ಸೂಚಿಸಿದ್ದರು. ಅಲ್ಲದೇ ತಮ್ಮ ಸಿನಿಮಾವೊಂದರ ಬಿಡುಗಡೆಯ ಸಮಯದಲ್ಲೂ ಸಹ ಪೋಸ್ಟರ್ ಗಳಿಗೆ ಹಾಲು ಸುರಿದು ವ್ಯರ್ಥ ಮಾಡದೇ ಯಾವುದಾದರೂ ಅನಾಥಾಶ್ರಮಕ್ಕೆ ನೀಡಿ ಎಂದು ತಿಳಿಸಿದ್ದರು.

    ಸುದೀಪ್ ಅವರ ಇಂತಹ ಅಲೋಚನೆಗಳು ತಮ್ಮ ಅಭಿಮಾನಿಗಳನ್ನೇ ವಿರೋಧ ಕಟ್ಟಿಕೊಳ್ಳಬೇಕಾದ ಸಂದರ್ಭವನ್ನು ಸೃಷ್ಟಿಸಿತ್ತು. ಆದರೆ ಸುದೀಪ್ ಅವರ ನಿಜವಾದ ಅಭಿಮಾನಿಗಳು ಅವರ ಮಾತಿನ ಹಿಂದಿನ ಕಾಳಜಿಯನ್ನು ಅರ್ಥಮಾಡಿಕೊಂಡಿದ್ದರು. ಬಹುಪರಾಕುಗಳನ್ನೇ ಉಸಿರಾಗಿಸಿಕೊಂಡ ಸಿನಿಮಾ ರಂಗದಲ್ಲಿ ಇಂತಹ ಎಲ್ಲದರಿಂದ ದೂರ ಸರಿಯುತ್ತಿರುವ ಸುದೀಪ್ ನಿಜಕ್ಕೂ ಹೊಸ ಹೀರೋಗಳಿಗೆ ಮಾದರಿಯಾಗಿದ್ದಾರೆ.