Tag: ಅಜ್ಮಲ್ ಕಸಬ್

  • ಪತ್ರಕರ್ತ ಕ್ಲಿಕ್ಕಿಸಿದ ಫೋಟೋದಿಂದ ಉಗ್ರ ಕಸಬ್‍ಗೆ ಗಲ್ಲು – ದಾಳಿ ಬಗ್ಗೆ ಫೋಟೋಗ್ರಾಫರ್ ಮಾತು

    ಪತ್ರಕರ್ತ ಕ್ಲಿಕ್ಕಿಸಿದ ಫೋಟೋದಿಂದ ಉಗ್ರ ಕಸಬ್‍ಗೆ ಗಲ್ಲು – ದಾಳಿ ಬಗ್ಗೆ ಫೋಟೋಗ್ರಾಫರ್ ಮಾತು

    ಮುಂಬೈ: ಇಂದಿಗೆ ಮುಂಬೈನಲ್ಲಿ ದಾಳಿ ಆಗಿ 11 ವರ್ಷ. ಈ ಘಟನೆಯಲ್ಲಿ 166 ಮಂದಿ ಮೃತಪಟ್ಟಿದ್ದು, 300ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದರು. ಈ ಪ್ರಕರಣದಲ್ಲಿ ಸಿಕ್ಕಿಬಿದ್ದ ಉಗ್ರ ಅಜ್ಮಲ್ ಕಸಬ್‍ನನ್ನು 2012ರಲ್ಲಿ ಗಲ್ಲಿಗೇರಿಸಲಾಗಿತ್ತು. ಉಗ್ರ ಕಸಬ್‍ನನ್ನು ಗಲ್ಲಿಗೇರಿಸುವಲ್ಲಿ ಪತ್ರಕರ್ತರೊಬ್ಬರು ಕ್ಲಿಕ್ಕಿಸಿದ ಫೋಟೋವೊಂದು ಮುಖ್ಯ ಪಾತ್ರವಹಿಸಿತ್ತು.

    2008, ನವೆಂಬರ್ 28ರಂದು ಮುಂಬೈನ ತಾಜ್ ಹೋಟೆಲ್‍ಗೆ ಉಗ್ರರು ನುಗ್ಗಿ ದಾಳಿ ಮಾಡಿದ್ದರು. ಅಂದು ಮುಂಬೈನಲ್ಲಿ ಫೈರಿಂಗ್ ಶಬ್ದ ಕೇಳಿಸುತ್ತಿತ್ತು. ಜನರನ್ನು ಮನೆಗಳಲ್ಲಿಯೇ ಬಂಧಿಸಲಾಗುತ್ತಿತ್ತು. ಪೊಲೀಸರ ವಾಹನ, ಅಂಬುಲೆನ್ಸ್ ಹಾಗೂ ಅಗ್ನಿಶಾಮಕ ವಾಹನದ ಸೈರನ್ ಶಬ್ದ ಪ್ರತಿ ಬೀದಿಗಳಲ್ಲಿ ಕೇಳಿಸುತಿತ್ತು. ಉಗ್ರರು ಹೋಟೆಲ್‍ಗೆ ನುಗ್ಗಿದ್ದಾರೆ ಎಂಬ ವಿಷಯ ತಿಳಿಯುತ್ತಿದ್ದಂತೆ ಪತ್ರಕರ್ತರು ಘಟನೆಯ ದೃಶ್ಯವನ್ನು ಸೆರೆ ಹಿಡಿಯುತ್ತಿದ್ದರು. ಅದರಲ್ಲಿ ಫೋಟೋ ಜರ್ನಲಿಸ್ಟ್ ಸೆಬಾಸ್ಟಿಯನ್ ಡಿಸೋಜಾ ಕೂಡ ಒಬ್ಬರು.

    ಸೆಬಾಸ್ಟಿಯನ್ ಡಿಸೋಜಾ ರೈಲ್ವೆ ನಿಲ್ದಾಣದ ಬಳಿಯಿರುವ ತಮ್ಮ ಕಚೇರಿಯಲ್ಲಿ ಇದ್ದರು. ಉಗ್ರರು ದಾಳಿ ನಡೆಸಿದ್ದಾರೆ ಎಂಬ ವಿಷಯ ತಿಳಿದ ತಕ್ಷಣ ಯಾವುದೇ ರಕ್ಷಣೆ ಇಲ್ಲದೆ ಫೋಟೋ ಕ್ಲಿಕ್ಕಿಸಲು ತಮ್ಮ ಕ್ಯಾಮೆರಾ ಹಾಗೂ ಲೆನ್ಸ್ ತೆಗೆದುಕೊಂಡು ಹೋಗಿದ್ದರು. ಸೆಬಾಸ್ಟಿಯನ್ ಅವರನ್ನು ‘ಸೇಬಿ’ ಎಂದು ಗುರುತಿಸುತ್ತಾರೆ. ಅವರು ಕ್ಲಿಕ್ಕಿಸಿದ ಫೋಟೋ ಹಾಗೂ ಸಾಕ್ಷ್ಯಗಳು 26/11 ಪ್ರಕರಣದ ವಿಚಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಈ ಸಾಕ್ಷಿಗಳಿಂದ 2012ರಲ್ಲಿ ಕಸಬ್‍ನನ್ನು ಗಲ್ಲಿಗೇರಿಸಲಾಯಿತು.

    ಸೇಬಿ 2012ರಲ್ಲಿ ನಿವೃತ್ತಿ ಪಡೆದಿದ್ದು, ಈಗ ಅವರು ಗೋವಾದಲ್ಲಿ ವಾಸಿಸುತ್ತಿದ್ದಾರೆ. ಈ ಘಟನೆಯನ್ನು ಮರೆಯಬೇಕು ಎಂದು ಸೇಬಿ ಹೇಳುತ್ತಾರೆ. ಅಲ್ಲದೆ ನಾನು ಪ್ಲಾಟ್‍ಫಾರಂನಲ್ಲಿ ನಿಂತಿದ್ದ ರೈಲಿನ ಬೋಗಿ ಬಳಿ ಓಡಿ ಹೋಗಿ ಫೋಟೋ ಕ್ಲಿಕ್ಕಿಸಲು ಯತ್ನಿಸಿದೆ. ಆದರೆ ನನಗೆ ಅಲ್ಲಿ ಸರಿಯಾಗಿ ಫೋಟೋ ಕ್ಲಿಕ್ಕಿಸಲು ಆಗಲಿಲ್ಲ. ಆಗ ನಾನು ಮತ್ತೊಂದು ಬೋಗಿಗೆ ಹೋಗಿ ಉಗ್ರರಿಗಾಗಿ ಕಾಯುತ್ತಿದ್ದೆ. ಫೋಟೋ ಕ್ಲಿಕ್ಕಿಸಲು ನನಗೆ ಕೇವಲ ಸ್ವಲ್ಪ ಸಮಯ ಮಾತ್ರವಿತ್ತು. ನನ್ನ ಪ್ರಕಾರ ಉಗ್ರರು ನಾನು ಫೋಟೋ ಕ್ಲಿಕ್ಕಿಸಿದನ್ನು ನೋಡಿದ್ದಾರೆ. ಆದರೆ ಅವರು ಅಷ್ಟು ಗಮನ ಹರಿಸಲಿಲ್ಲ ಎಂದರು.

    ಎಕೆ-47 ರೈಫಲ್ ಹಿಡಿದು ನಿಂತಿದ್ದ ಕಸಬ್‍ನ ಫೋಟೋವನ್ನು ಹತ್ತಿರದಿಂದ ಕ್ಲಿಕ್ಕಿಸಿದ ಸೇಬಿ ಅವರಿಗೆ ‘ವರ್ಲ್ಡ್ ಪ್ರೆಸ್ ಫೋಟೋ’ ಪ್ರಶಸ್ತಿ ನೀಡಿ ಗೌರವಿಸಿತ್ತು. ಸೇಬಿ ಈ ಫೋಟೋವನ್ನು ಛತ್ರಪತಿ ಶಿವಾಜಿ ಟರ್ಮಿನಲ್ ಬಳಿ ಕ್ಲಿಕ್ಕಿಸಿದ್ದಾರೆ. ಆ ಘಟನೆ ಬಗ್ಗೆ ನೆನಪಿಸಿಕೊಂಡು ಮಾತನಾಡಿದ ಸೇಬಿ, “ಆ ದಿನ ರೈಲ್ವೆ ನಿಲ್ದಾಣದಲ್ಲಿದ್ದ ಪೊಲೀಸ್ ಅಧಿಕಾರಿ ಕಸಬ್‍ನನ್ನು ಶೂಟ್ ಮಾಡಿದ್ದರೆ ಇಷ್ಟು ಜನ ಮೃತಪಡುತ್ತಿರಲಿಲ್ಲ” ಎಂದು ತಿಳಿಸಿದ್ದಾರೆ.

  • ಮುಂಬೈ ದಾಳಿಗೆ ಪಾಕಿಸ್ತಾನದ ಉಗ್ರ ಸಂಘಟನೆಗಳೆ ಕಾರಣ: ನವಾಜ್ ಷರೀಫ್

    ಮುಂಬೈ ದಾಳಿಗೆ ಪಾಕಿಸ್ತಾನದ ಉಗ್ರ ಸಂಘಟನೆಗಳೆ ಕಾರಣ: ನವಾಜ್ ಷರೀಫ್

    ಲಾಹೋರ್: ಪಾಕಿಸ್ತಾನದ ಪದಚ್ಯುತ ಪ್ರಧಾನಿ ನವಾಜ್ ಷರೀಫ್ ಅವರು 2008ರ ಮುಂಬೈ ಉಗ್ರ ದಾಳಿಯಲ್ಲಿ ಪಾಕಿಸ್ತಾನ ಭಯೋತ್ಪಾದಕ ಸಂಘಟನೆಗಳ ಪಾತ್ರ ಇದೆ ಎಂದು ಬಹಿರಂಗವಾಗಿ ಹೇಳಿದ್ದಾರೆ.

    ಪಾಕಿಸ್ತಾನದ ಡಾನ್ ಪತ್ರಿಕೆ ಜತೆ ಮಾತನಾಡಿರುವ ಅವರು, ಪಾಕಿಸ್ತಾನದಲ್ಲಿ ಭಯೋತ್ಪಾದಕ ಸಂಘಟನೆಗಳು ಸಕ್ರಿಯವಾಗಿವೆ. ಅವುಗಳು ಸರ್ಕಾರೇತರ ಶಕ್ತಿಗಳಾಗಿವೆ. ಗಡಿಯನ್ನು ದಾಟಿ ಮುಂಬೈಯಲ್ಲಿ 150ಕ್ಕೂ ಹೆಚ್ಚು ಜನರನ್ನು ಹತ್ಯೆ ಮಾಡಲು ಅವಕಾಶ ಮಾಡಿಕೊಡಬೇಕೆ ಎಂದು ಪ್ರಶ್ನಿಸಿದ್ದಾರೆ.

    10 ಜನ ಲಷ್ಕರ್-ಇ-ತೊಯ್ಬಾ ಉಗ್ರರು ನವೆಂಬರ್ 26, 2008 ರಿಂದ ನವೆಂಬರ್ 29 ರವರೆಗೆ ಮುಂಬೈಯಲ್ಲಿ ಸಂಘಟಿತ ಶೂಟಿಂಗ್ ಮತ್ತು ಬಾಂಬ್ ದಾಳಿ ಮಾಡಿದ್ದಾರೆ ಎಂದು ಹೇಳಿದ್ದಾರೆ.

    2008 ನವೆಂಬರ್ 26 ರಂದು ಆಗಿದ್ದೇನು?
    ನವೆಂಬರ್ 23 ರಂದು 10 ಜನ ಉಗ್ರರು ಕರಾಚಿಯಿಂದ ಅರೇಬಿಯನ್ ಸಮುದ್ರದ ಮೂಲಕ ದೋಣಿಯಲ್ಲಿ ಪ್ರಯಾಣ ಬೆಳೆಸಿದ್ದಾರೆ. ಮಾರ್ಗದ ಮಧ್ಯೆ ಭಾರತದ ಮೀನುಗಾರರ ದೋಣಿಯನ್ನು ಅಪಹರಿಸಿ, 4 ಜನರನ್ನು ಕೊಂದು ದೋಣಿಯ ಕ್ಯಾಪ್ಟನ್ ಅನ್ನು ಭಾರತಕ್ಕೆ ಕರೆದುಕೊಂಡು ಹೋಗುವಂತೆ ಹೇಳಿದ್ದಾರೆ. ಮುಂಬೈಗೆ 7 ಕಿಮೀ ಇರುವಂತೆ ಕ್ಯಾಪ್ಟನ್ ಅನ್ನು ಕೊಂದುಹಾಕಿ ಮುಂಬೈ ತಲಪುತ್ತಿದ್ದಂತೆ ತಂಡಗಳಾಗಿ ಬೇರೆ ಬೇರೆ ಹಾದಿಯಲ್ಲಿ ನಡೆದಿದ್ದಾರೆ.

    ನವೆಂಬರ್ 26 ರಂದು ಮೊಹಮ್ಮದ್ ಅಜ್ಮಲ್ ಕಸಬ್, ಇಸ್ಮಾಯಿಲ್ ಖಾನ್ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಮೇಲೆ ದಾಳಿ ಮಾಡಿ 58 ಜನರನ್ನು ಸಾಯಿಸಿದ್ದರು. ನಂತರ ನಾರಿಮನ್ ಹೌಸ್, ತಾಜ್, ಒಬೆರಾಯ್-ಟ್ರೈಡೆಂಟ್ ಹೋಟೆಲ್ ಮೇಲೆ ದಾಳಿ ಮಾಡಿ 100ಕ್ಕೂ ಹೆಚ್ಚು ಜನರನ್ನು ಹತ್ಯೆ ಮಾಡಿದ್ದರು.

    ಈ ಕೃತ್ಯವನ್ನು ಮಾಡಿರುವವರು ಉಗ್ರರೇ ಅವರಿಗೆ ಪಾಕಿಸ್ತಾನ ಬೆಂಬಲಿಸಿ ನೆಲೆಕೊಟ್ಟಿದೆ ಎಂದು ಭಾರತ ಪದೇ ಪದೇ ದಾಖಲೆ ಸಹಿತ ಆರೋಪ ಮಾಡುತ್ತಲೇ ಬಂದಿತ್ತು.