ಬೆಂಗಳೂರು: ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಲಾಂಛನದಲ್ಲಿ ಟಿ.ಆರ್.ಚಂದ್ರಶೇಖರ್ ಅವರು ನಿರ್ಮಿಸುತ್ತಿರುವ, ಅಜೇಯ್ ರಾವ್ ನಾಯಕರಾಗಿ ಅಭಿನಯಿಸುತ್ತಿರುವ ಪ್ರೊಡಕ್ಷನ್ ನಂ.7 ಚಿತ್ರಕ್ಕೆ ‘ಶೋಕಿವಾಲ’ ಎಂದು ಹೆಸರಿಡಲಾಗಿದೆ. ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದ್ದು, ಚನ್ನಪಟ್ಟಣ, ಮಾಗಡಿ, ಮಂಡ್ಯ ಮುಂತಾದ ಕಡೆ ಚಿತ್ರೀಕರಣ ನಡೆದಿದೆ.
ಜಾಕಿ (ಬಿ.ತಿಮ್ಮೇಗೌಡ) ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ‘ಭಾಗ್ಯದ ಬಳೆಗಾರ’, ‘ತಮಸ್ಸು’ ‘ದೇವರು ಕೊಟ್ಟ ತಂಗಿ’ ಮುಂತಾದ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ, ಲಕ್ಕಿ, ಅಧ್ಯಕ್ಷ, ರನ್ನ, ವಿಕ್ಟರಿ, ಕೆಜಿಎಫ್ ಚಿತ್ರಗಳಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿರುವ ತಿಮ್ಮೇಗೌಡ ಈ ಚಿತ್ರದ ಮೂಲಕ ಜಾಕಿ ಎಂದು ಹೆಸರು ಬದಲಿಸಿಕೊಂಡಿದ್ದಾರೆ. ಇದು ಇವರ ಚೊಚ್ಚಲ ನಿರ್ದೇಶನದ ಚಿತ್ರ.
ಈ ಚಿತ್ರಕ್ಕೆ ಪ್ರಶಾಂತ್ ರಾಚಪ್ಪ ಸಂಭಾಷಣೆ ಬರೆದಿದ್ದಾರೆ. ನವೀನ್ ಕುಮಾರ್ ಅವರ ಛಾಯಾಗ್ರಹಣವಿರುವ ಶೋಕಿವಾಲನಿಗೆ ಶ್ರೀಧರ್ ವಿ ಸಂಭ್ರಮ್ ಸಂಗೀತ ನಿರ್ದೇಶನವಿದೆ. ಜಯಂತ ಕಾಯ್ಕಿಣಿ, ಡಾ.ವಿ.ನಾಗೇಂದ್ರ ಪ್ರಸಾದ್, ಚೇತನ್ ಕುಮಾರ್ ಹಾಗೂ ಗೌಸ್‍ಪೀರ್ ಹಾಡುಗಳನ್ನು ರಚಿಸಿದ್ದಾರೆ. ಕೆ.ಎಂ.ಪ್ರಕಾಶ್ ಸಂಕಲನ, ವಿಕ್ರಂ ಮೋರ್ ಸಾಹಸ ನಿರ್ದೇಶನ ಹಾಗೂ ಮೋಹನ್ ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರಕ್ಕೆ ಬಾಲು ಕುಮುಟ ಅವರ ನಿರ್ಮಾಣ ಮೇಲ್ವಿಚಾರಣೆಯಿದೆ.
ಅಜೇಯ್ ರಾವ್ ಅವರಿಗೆ ನಾಯಕಿಯಾಗಿ ಸಂಜನ ಆನಂದ್ ಅಭಿನಯಿಸುತ್ತಿದ್ದಾರೆ. ಶರತ್ ಲೋಹಿತಾಶ್ವ, ಗಿರಿ ಮುನಿರಾಜು, ಪ್ರಮೋದ್ ಶೆಟ್ಟಿ, ತಬಲ ನಾಣಿ, ಅರುಣ ಬಾಲರಾಜ್, ನಾಗರಾಜಮೂರ್ತಿ, ಲಾಸ್ಯ, ವಾಣಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.




















