Tag: ಅಚ್ಚರಿ

  • ಅವಧಿಗೂ ಮುನ್ನ ರೈತನ ತೋಟದಲ್ಲಿ ಮಾವು

    ಅವಧಿಗೂ ಮುನ್ನ ರೈತನ ತೋಟದಲ್ಲಿ ಮಾವು

    ಕೋಲಾರ: ಅವಧಿಗೂ ಮುನ್ನವೇ ತೋಟದಲ್ಲಿ ಬಾದಾಮಿ ಮಾವು ಹಾಗೂ ಬೇನಿಷ್(ಬಾಗಿನಪಲ್ಲಿ) ಮಾವು ಬೆಳೆದು ರೈತನ ಬಾಳನ್ನು ಬದಲಾಯಿಸಿದೆ.

    ಮಾವಿನ ನಗರಿ ಎಂದೇ ಪ್ರಸಿದ್ಧಿ ಪಡೆದಿರುವ ಶ್ರೀನಿವಾಸಪುರ ತಾಲೂಕಿನ ಬಂಡಪಲ್ಲಿ ಗ್ರಾಮದ ಕೆಂಪರೆಡ್ಡಿ ಅವರ ತೋಟದಲ್ಲಿ ಮಾವು ಬೆಳೆದಿದೆ. ಶ್ರೀನಿವಾಸಪುರದಲ್ಲಿ ಶೇ.80 ರಷ್ಟು ಜನ ರೈತರು ನಾನಾ ರೀತಿಯ ಮಾವು ಬೆಳೆಯುತ್ತಾರೆ. ಅದೆಲ್ಲವೂ ಸದ್ಯ ಹೂ ಬಿಟ್ಟಿದೆ. ಆದರೆ ವಿಚಿತ್ರ ಎಂಬಂತೆ ಬಂಡಪಲ್ಲಿಯ ಕೆಂಪರೆಡ್ಡಿ ಅವರ ತೋಟದಲ್ಲಿ ಬೆಳೆದಿರುವ ಬಾಗಿನಪಲ್ಲಿ ಹಾಗೂ ಬಾದಾಮಿ ಅಕಾಲಿಕ ಮಾವು ಸದ್ಯ ಅಚ್ಚರಿ ಮೂಡಿಸಿದೆ.

    ಸಾವಯವ ಗೊಬ್ಬರ ಬಳಕೆ ಮಾಡಿಕೊಂಡು ಸೀಸನ್ ಮಾವಿನ ಹಣ್ಣಿನ ನೈಜತೆಯಂತೆ ಉತ್ತಮ ಗುಣಮಟ್ಟದ ಮಾವು ಬೆಳೆದಿದ್ದಾರೆ. ತಮಗಿರುವ 6 ಎಕರೆ ಜಮೀನಿನ ಪೈಕಿ, ಅರ್ಧ ಎಕರೆ ಪ್ರದೇಶದಲ್ಲಿರುವ 30 ಮಾವಿನ ಗಿಡಗಳು ಡಿಸೆಂಬರ್-ಜನವರಿಯಲ್ಲಿ ಫಸಲು ಬಿಟ್ಟಿದ್ದು ಬಂಪರ್ ಬೆಲೆ ಸಿಕ್ಕಿದೆ. ಈಗಾಗಲೇ 2 ಟನ್‍ನಷ್ಟು ಮಾವನ್ನು ಮಾರಾಟ ಮಾಡಿರುವ ರೈತ ಕೆಂಪರೆಡ್ಡಿಗೆ ಎರಡೂವರೆ ಲಕ್ಷ ಲಾಭ ಸಿಕ್ಕಿದೆಯಂತೆ. ಒಂದೂವರೆ ಟನ್ ನಷ್ಟು ಫಸಲು ಮಾವಿನ ಗಿಡದಲ್ಲಿದ್ದು, 5 ಲಕ್ಷದಷ್ಟು ಲಾಭದ ನಿರೀಕ್ಷೆ ಇದ್ದು ಲಕ್ಕಿ ಮ್ಯಾಂಗೋ ಆಗಿ ಪರಿಣಮಿಸಿದೆ.

    ಅಕಾಲಿಕ ಮಾವು ಕಾಣಿಸಿಕೊಳ್ಳುತ್ತಿದ್ದಂತೆ ಮೊದಲಿಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ವಿಜ್ಞಾನಿಗಳು ರೈತ ಕೆಂಪರೆಡ್ಡಿ ತೋಟಕ್ಕೆ ಭೇಟಿ ನೀಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕಾಲಕಾಲಕ್ಕೆ ಮಾವು ಬೆಳೆಯಲು ಬೇಕಾದ ಸೂಕ್ತ ಮಾಹಿತಿಯೊಂದಿಗೆ, ಫಸಲಿನ ಪೋಷಣೆ, ರಕ್ಷಣೆ ಕುರಿತು ರೈತರಿಗೆ ಮಾಹಿತಿ ನೀಡಿದ್ದಾರೆ. ಇದೆಲ್ಲದರ ಮಧ್ಯೆ ಅನ್ ಸೀಸನ್ ಮ್ಯಾಂಗೋ ಬೆಳೆದಿದ್ದು ಅಚ್ಚರಿಯಾದರು, ಮಾರುಕಟ್ಟೆ ಸಮಸ್ಯೆಯಾದಾಗ ತೋಟಗಾರಿಕೆ ಇಲಾಖೆ ರೈತರ ನೆರವಿಗೆ ಬಂದಿದೆ.

    ಸಾವಯವ ಗೊಬ್ಬರ ಬಳಕೆ ಹಾಗೂ ಆರೋಗ್ಯಕ್ಕೆ ಹಾನಿಕಾರಕವಾಗದಂತೆ ಮಾವನ್ನು ಕೃತಕವಾಗಿ ಹಣ್ಣಾಗಿಸಿ ನಂತರ ಬೆಂಗಳೂರಿನ ಲಾಲ್‍ಬಾಗ್‍ನ ಫಲ ಪುಷ್ಪ ಪ್ರದರ್ಶನದಲ್ಲಿ ಮಾರಾಟ ಮಾಡಲು ಅನುವು ಮಾಡಿಕೊಟ್ಟಿದ್ದಾರೆ. ದಲ್ಲಾಳಿಗಳು ಹಾಗೂ ವ್ಯಾಪಾರಸ್ಥರ ಹಾವಳಿ ನಿಯಂತ್ರಣ ಮಾಡಿ ನೇರವಾಗಿ ರೈತರೇ ಲಾಲ್‍ಬಾಗ್ ನಲ್ಲಿ ವ್ಯಾಪಾರ ಮಾಡಿ ಲಾಭ ಪಡೆದಿದ್ದಾರೆ. ಸೀಸನ್ ಮಾವಿಗಾದರೆ ಕೆ.ಜಿ. ಗೆ 20 ರೂಪಾಯಿ ಮಾತ್ರ, ಆದರೆ ಈ ಮಾವು 250 ರೂ.ಗೆ ಮಾರಾಟ ಮಾಡಿ ಕೈ ತುಂಬಾ ಲಾಭ ಗಳಿಸಿದ್ದು, ಇದಕ್ಕೆ ಇಲಾಖೆ ಅಧಿಕಾರಿಗಳು ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಕಟಾವು ಮಾಡಿದ್ದ ಬಾಳೆಯ ಬುಡದಲ್ಲಿ ಬಾಳೆಗೊನೆ – ಗ್ರಾಮಸ್ಥರಲ್ಲಿ ಅಚ್ಚರಿ

    ಕಟಾವು ಮಾಡಿದ್ದ ಬಾಳೆಯ ಬುಡದಲ್ಲಿ ಬಾಳೆಗೊನೆ – ಗ್ರಾಮಸ್ಥರಲ್ಲಿ ಅಚ್ಚರಿ

    ಚಿಕ್ಕಬಳ್ಳಾಪುರ: ಬಾಳೆಗೆ ಒಂದೇ ಗೊನೆ. ರಾಗಿಗೆ ಒಂದೇ ತೆನೆ ಫಸಲು. ಆದರೆ ಬುಡದವರೆಗೂ ಕಟಾವು ಮಾಡಲಾಗಿದ್ದ ಬಾಳೆಯ ಬುಡದಲ್ಲಿ ಬಾಳೆಯ ಗೊನೆ ಬೆಳೆದಿದ್ದು, ಗ್ರಾಮಸ್ಥರಲ್ಲಿ ಅಚ್ಚರಿಯನ್ನು ಮೂಡಿಸಿದೆ.

    ಜಿಲ್ಲೆಯ ಚಿಂತಾಮಣಿ ತಾಲೂಕಿನ ಮುರಗಮಲ್ಲ ಗ್ರಾಮದ ಅಯ್ಯಪ್ಪನ ಸನ್ನಿಧಾನದ ಆವರಣದಲ್ಲಿ ಬಾಳೆಯ ಬುಡದಲ್ಲಿ ಬಾಳೆಗೊನೆ ಬೆಳೆದಿದೆ. ಹಿಂದೂ-ಮುಸ್ಲಿಮರ ಪವಿತ್ರ ಯಾತ್ರಾ ಸ್ಥಳವಾದ ಮುರಗಮಲ್ಲ ಗ್ರಾಮದಲ್ಲಿ ಒಂದೆಡೆ ದರ್ಗಾ ಮತ್ತೊಂದೆಡೆ ಮುಕ್ತೀಶ್ವರನ ದೇವಾಲಯ ಇವೆ. ಇವರೆಡೆರ ನಡುವೆ ಅಯ್ಯಪ್ಪನ ಆಲಯ ಇದೆ. ಅಯ್ಯಪ್ಪನ ಆಲಯದ ಆವರಣದಲ್ಲಿರುವ ಬಾಳೆಯ ಬುಡದಲ್ಲಿ ಈ ವಿಸ್ಮಯ ಜರುಗಿದೆ.

    ಎರಡು ವರ್ಷಗಳ ಹಿಂದೆ ನಿರ್ಮಾಣವಾದ ಆಯ್ಯಪ್ಪ ಆಲಯದಲ್ಲಿ ಇತ್ತೀಚೆಗೆ ಬಲಮುರಿ ಗಣಪತಿ ಹಾಗೂ ಸುಬ್ರಮಣ್ಯೇಶ್ವರನ ನೂತನ ಗುಡಿ ನಿರ್ಮಿಸಲಾಗಿದೆ. ಎರಡನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಈ ಬಾಳೆ ಗಿಡವನ್ನ ಕಟಾವು ಮಾಡಿ ದೇವರ ಅಲಂಕಾರಕ್ಕೆ ಬಳಸಲಾಗಿತ್ತಂತೆ. ಆದರೆ ಈಗ ಕಟಾವು ಮಾಡಲಾಗಿದ್ದ ಒಣಗಿದ ಬಾಳೆಯ ಬುಡದಲ್ಲೇ ಬಾಳೆಗೊನೆ ಬೆಳೆಯುತ್ತಿದ್ದು, ಅಚ್ಚರಿ ಮೂಡಿಸಿದೆ.

    ದೇವಾಲಯದ ಆವರಣದಲ್ಲಿ ಬಾಳೆಯ ಗಿಡಗಳಿದ್ದು, ಅದರಲ್ಲಿ ಇತ್ತೀಚೆಗೆ ದೇವರ ಕಾರ್ಯಕ್ಕೆ ಅಂತ ಬಾಳೆಗಿಡವನ್ನ ಕಟಾವು ಮಾಡಲಾಗಿತ್ತು. ಆದರೆ ಈಗ ಕಟಾವು ಮಾಡಲಾಗಿದ್ದ ಬಾಳೆಯ ಬುಡದಲ್ಲಿ ಹೂವಾಗಿ ಕಾಯಾಗಿ ಬಾಳೆಯ ಗೊನೆ ಬೆಳೆತಿರೋದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಇದೆಲ್ಲಾ ಅಯ್ಯಪ್ಪ ನ ಮಹಿಮೆ ಅಂತ ಇಲ್ಲಿಯ ಜನ ಭಕ್ತಿ ಭಾವದಿಂದ ಪೂಜೆ ಸಲ್ಲಿಸುತ್ತಿದ್ದಾರೆ ಎಂದು ಸ್ಥಳೀಯರಾದ ನಾಗರಾಜು ಹೇಳಿದ್ದಾರೆ.

  • ಮಂಡ್ಯ: ಏಕಕಾಲಕ್ಕೆ 3 ಮರಿಗಳಿಗೆ ಜನ್ಮ ನೀಡಿದ ಕುರಿ- ರೈತರಿಗೆ ಅಚ್ಚರಿ

    ಮಂಡ್ಯ: ಏಕಕಾಲಕ್ಕೆ 3 ಮರಿಗಳಿಗೆ ಜನ್ಮ ನೀಡಿದ ಕುರಿ- ರೈತರಿಗೆ ಅಚ್ಚರಿ

    ಮಂಡ್ಯ: ಕುರಿಗಳು ಒಮ್ಮೆಗೆ ಒಂದು ಮರಿ ಹಾಕೋದು ಸಾಮಾನ್ಯ. ಕೆಲವೊಮ್ಮೆ ಎರಡು ಮರಿಗೆ ಜನ್ಮ ನೀಡುತ್ತವೆ. ಆದರೆ ಮಂಡ್ಯದಲ್ಲಿ ಕುರಿಯೊಂದು ಏಕಕಾಲಕ್ಕೆ ಮೂರು ಮರಿಗಳಿಗೆ ಜನ್ಮ ನೀಡಿದ್ದು, ರೈತರ ಅಚ್ಚರಿಗೆ ಕಾರಣವಾಗಿದೆ.

    ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಹೊಸಕನ್ನಂಬಾಡಿ ಗ್ರಾಮದ ರೈತ ಸ್ವಾಮೀಗೌಡ ಸುಮಾರು 30 ವರ್ಷಗಳಿಂದ ಕುರಿ ಸಾಕುತ್ತಿದ್ದಾರೆ. ಇವರ ಬಳಿ 60 ಕ್ಕೂ ಹೆಚ್ಚು ಕುರಿಗಳಿವೆ. ಕಳೆದ ಮೂವತ್ತು ವರ್ಷಗಳಲ್ಲಿ ಇವರ ಬಳಿಯಿದ್ದ ಕುರಿಗಳು ಒಮ್ಮೆಗೆ ಹೆಚ್ಚು ಅಂದರೆ ಎರಡು ಮರಿಗೆ ಜನ್ಮ ನೀಡಿವೆ.

    ಎರಡು ದಿನಗಳ ಹಿಂದೆ ಕುರಿಯೊಂದು ಒಮ್ಮೆಗೆ ಬರೋಬ್ಬರಿ ಮೂರು ಹೆಣ್ಣು ಮರಿಗಳಿಗೆ ಜನ್ಮ ನೀಡಿದೆ. ಮೂರು ಮರಿಗಳೂ ಆರೋಗ್ಯವಾಗಿವೆ. ಕುರಿ ಮೂರು ಮರಿಗಳಿಗೆ ಜನ್ಮ ನೀಡಿರೋದು ರೈತರಿಗೆ ಅಚ್ಚರಿ ಜೊತೆಗೆ ಖುಷಿಗೆ ಕಾರಣವಾಗಿದೆ. ಗ್ರಾಮದ ರೈತರು ಸ್ವಾಮಿಗೌಡ ಅವರ ಮನೆಗೆ ಬಂದು ಕುರಿ ಹಾಗೂ ಮರಿಗಳನ್ನು ಕುತೂಹಲದಿಂದ ನೋಡಿಕೊಂಡು ಹೋಗುತ್ತಿರುವುದು ಸಾಮಾನ್ಯವಾಗಿದೆ.

  • 55 ವರ್ಷದಿಂದ ತುಂಬದ ಕೆರೆ 3 ದಿನದ ಮಳೆಗೆ ಭರ್ತಿಯಾಯ್ತು!

    55 ವರ್ಷದಿಂದ ತುಂಬದ ಕೆರೆ 3 ದಿನದ ಮಳೆಗೆ ಭರ್ತಿಯಾಯ್ತು!

    ಮೈಸೂರು: ಮೈಸೂರಿನಲ್ಲಿ ಕಳೆದ 3 ದಿನಗಳಿಂದ ನಿರಂತರ ಮಳೆ ಹಿನ್ನೆಲೆಯಲ್ಲಿ ಕಳೆದ 55 ವರ್ಷಗಳಿಂದ ಪೂರ್ಣವಾಗಿ ತುಂಬದ ಕೆರೆಯೊಂದು 3 ದಿನಕ್ಕೆ ಸಂಪೂರ್ಣವಾಗಿ ಭರ್ತಿಯಾಗಿದೆ.

    ನಂಜನಗೂಡು ತಾಲೂಕಿನ ಚುಂಚನಹಳ್ಳಿ ಗ್ರಾಮದ ಕೆರೆಯಲ್ಲಿ ಅಚ್ಚರಿಯ ಬೆಳವಣಿಗೆ ನಡೆದಿದ್ದು. ಸತತ ಮೂರು ದಿನದ ಮಳೆ 55 ವರ್ಷದ ಬಳಿಕ ಗ್ರಾಮದ ಮಾದಯ್ಯನಕೆರೆ ತುಂಬಿ ತುಳುಕಿದೆ. ಕಳೆದ 5 ದಶಕಗಳಿಂದ ಸಂಪೂರ್ಣ ಕೆರೆ ಈ ರೀತಿ ನೀರಿನಿಂದ ತುಂಬಿರಲಿಲ್ಲ. ಇದಕ್ಕಾಗಿ ಹಲವು ಆಚರಣೆಗಳನ್ನ ನಡೆಸಿದ್ರು ಯಾವುದೇ ಪ್ರಯೋಜನ ಆಗಿರಲಿಲ್ಲ.

    ಇತ್ತೀಚೆಗೆ ಸರ್ಕಾರದ ವತಿಯಿಂದ ಕೆರೆಯ ಹೂಳು ತೆಗೆದು ಸ್ವಚ್ಛಗೊಳಿಸಲಾಗಿತ್ತು. ಪರಿಣಾಮ ಕೆರೆಯಲ್ಲಿ 10 ರಿಂದ 11 ಅಡಿಗಳಷ್ಟು ನೀರು ಸಂಗ್ರಹವಾಗಿದ್ದು 5 ದಶಕಗಳ ನಂತರ ಚುಂಚನಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರ ನೀರಿನ ಬವಣೆಗೆ ಪರಿಹಾರ ಸಿಕ್ಕಿದಂತಾಗಿದೆ. ಕೆರೆಯ ಸುತ್ತಮುತ್ತ ಅಂತರ್ಜಲ ಪ್ರಮಾಣ ಸಹ ದಿಢೀರ್ ಹೆಚ್ಚಳವಾಗಿದ್ದು ಕೆರೆ ತುಂಬಿದ್ದರಿಂದ ಗ್ರಾಮದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದ್ದು. ನೀರು ತುಂಬಿದ್ದಕ್ಕಾಗಿ ವಿಶೇಷ ಆಚರಣೆಗೆ ಸಿದ್ಧವಾಗಿರುವ ಗ್ರಾಮಸ್ಥರು ಇನ್ನೆರಡು ದಿನದ ನಂತರ ವಿಶೇಷ ಹಬ್ಬ ನಡೆಸಿ ವಿಶೇಷ ಭೋಜನ ವ್ಯವಸ್ಥೆ ಮಾಡಲು ಸಿದ್ಧವಾಗುತ್ತಿದ್ದಾರೆ.