Tag: ಅಗ್ಲಿ ಲಾಂಗ್ವೇಜ್ ಆಫ್ ಇಂಡಿಯಾ

  • ಕನ್ನಡಿಗರಲ್ಲಿ ಕನ್ನಡದಲ್ಲೇ ಕ್ಷಮೆ ಕೇಳಿದ ಗೂಗಲ್

    ಕನ್ನಡಿಗರಲ್ಲಿ ಕನ್ನಡದಲ್ಲೇ ಕ್ಷಮೆ ಕೇಳಿದ ಗೂಗಲ್

    ನವದೆಹಲಿ: ಅಗ್ಲಿ ಲಾಂಗ್ವೇಜ್ ಆಫ್ ಇಂಡಿಯಾ ಎಂದು ಸರ್ಚ್ ಮಾಡಿದಾಗ ವೆಬ್‍ಸೈಟ್ ಒಂದು ಕನ್ನಡ ಎಂಬ ಫಲಿತಾಂಶ ತೋರಿಸುತ್ತಿದ್ದ ಕುರಿತು ಸಾಕಷ್ಟು ಚರ್ಚೆ ನಡೆದಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಅಭಿಯಾನವೇ ನಡೆದಿತ್ತು. ಗೂಗಲ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದಾದ ಬೆನ್ನಲ್ಲೇ ಗೂಗಲ್ ಇದೀಗ ಕನ್ನಡದಲ್ಲೇ ಕನ್ನಡಿಗರ ಕ್ಷಮೆಯಾಚಿಸಿದೆ.

    ಈ ಕುರಿತು ಟ್ವೀಟ್ ಮಾಡಿರುವ ಗೂಗಲ್, ಹುಡುಕುವುದು ಯಾವಾಗಲೂ ಪರಿಪೂರ್ಣವಾಗಿರುವುದಿಲ್ಲ. ಕೆಲವೊಮ್ಮೆ ಇಂಟರ್‍ನೆಟ್ ನಲ್ಲಿ ನಿರ್ದಿಷ್ಟವಾದ ಹುಡುಕಾಟಗಳಿಗೆ ಬರುವ ಫಲಿತಾಂಶಗಳು ಆಶ್ಚರ್ಯವನ್ನುಂಟು ಮಾಡುತ್ತವೆ. ಇದು ಸೂಕ್ತವಲ್ಲ ಎಂಬುದು ನಮಗೆ ಗೊತ್ತು. ಆದರೆ ಯಾವುದೇ ಒಂದು ಸಮಸ್ಯೆ ಎದುರಾದಾಗ ಮತ್ತು ನಮ್ಮ ಗಮನಕ್ಕೆ ಬಂದಾಗ ನಾವು ಕ್ಷಿಪ್ರವಾಗಿ ಸಮರ್ಪಕ ಕ್ರಮ ತೆಗೆದುಕೊಳ್ಳುತ್ತೇವೆ. ನಮ್ಮ ಅಲ್ಗೊರಿಧಂ ಅನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಸದಾ ಕ್ರಿಯಾಶೀಲವಾಗಿರುವುದನ್ನು ಮುಂದುವರಿಸಿದ್ದೇವೆ. ತಪ್ಪು ಅರ್ಥ ಬಂದಿರುವುದಕ್ಕೆ ಮತ್ತು ಯಾವುದೇ ಭಾವನೆಗಳಿಗೆ ಧಕ್ಕೆಯಾಗಿದ್ದರೆ ನಾವು ಕ್ಷಮೆಯಾಚಿಸುತ್ತೇವೆ ಎಂದು ಹೇಳಿದೆ. ಇದನ್ನೂ ಓದಿ: ಗೂಗಲ್ ಮಾಡಿದ ಈ ಪ್ರಮಾದ ಒಪ್ಪುವಂಥದ್ದಲ್ಲ: ಹೆಚ್‍ಡಿಕೆ ಕಿಡಿ

    ಅಗ್ಲಿ ಲಾಂಗ್ವೇಜ್ ಆಫ್ ಇಂಡಿಯಾ ಎಂದು ಸರ್ಚ್ ಮಾಡಿದಾಗ ವೆಬ್‍ಸೈಟ್ ಒಂದು ಕನ್ನಡ ಎಂಬ ಫಲಿತಾಂಶ ತೋರಿಸುತ್ತಿದ್ದ ಕುರಿತು ಸಾಕಷ್ಟು ಚರ್ಚೆ ನಡೆದಿತ್ತು. ಬಳಿಕ ವೆಬ್‍ಸೈಟ್ ಪೇಜ್ ಅನ್ನು ಗೂಗಲ್ ತನ್ನ ಸರ್ಚ್‍ನಿಂದಲೇ ತೆಗೆದು ಹಾಕಿತ್ತು.

    ಆಗಿದ್ದು ಏನು?
    www.debtconsolidationsquad.com ವೆಬ್‍ಸೈಟ್‍ Which is the ugliest language in india ಪ್ರಶ್ನೆಗೆ ಕನ್ನಡ ಉತ್ತರವನ್ನು ನೀಡಿತ್ತು. ಈ ಪುಟದಲ್ಲಿರುವ ಮಾಹಿತಿ ಗೂಗಲ್ ಸರ್ಚ್‍ನಲ್ಲಿ ಕಾಣುತ್ತಿತ್ತು.

    ಗೂಗಲ್ ಸರ್ಚ್‍ನಲ್ಲಿ ಈ ಮಾಹಿತಿ ಕಾಣುತ್ತಿದ್ದಂತೆ ಇಂದು ಭಾರೀ ಸಂಖ್ಯೆಯಲ್ಲಿ ಕನ್ನಡಿಗರು ರಿಪೋರ್ಟ್ ಮಾಡಲು ಆರಂಭಿಸಿದರು. ಜನರ ರಿಪೋರ್ಟ್ ಗಮನಿಸಿದ ಗೂಗಲ್ ಸರ್ಚ್ ಈಗ ಆ ಉತ್ತರ ಪ್ರದರ್ಶನವಾಗುತ್ತಿದ್ದ ಪುಟವನ್ನೇ ಸರ್ಚ್‍ನಿಂದ ತೆಗೆದು ಹಾಕಿದೆ. ಇದನ್ನೂ ಓದಿ:  ಕನ್ನಡ ಕೊಳಕು ಭಾಷೆ ಎಂದ ವೆಬ್‍ಸೈಟ್ – ಪೇಜ್ ಅನ್ನು ಸರ್ಚ್‍ನಿಂದ ಕಿತ್ತೆಸೆದ ಗೂಗಲ್

    ಗೂಗಲ್‍ನದ್ದು ತಪ್ಪಿಲ್ಲ:
    ಈ ಪ್ರಮಾದ ಗೂಗಲ್‍ನಿಂದ ಆಗಿದ್ದಲ್ಲ. ಬಳಕೆದಾರರು ಯಾವುದೇ ಮಾಹಿತಿ ಹುಡುಕಿದಾಗ ಅದಕ್ಕೆ ಸಂಬಂಧಿಸಿದ ಹತ್ತಿರದ ಮಾಹಿತಿಯನ್ನು ಗೂಗಲ್ ತನ್ನ ಸರ್ಚ್ ರಿಸಲ್ಟ್ ನಲ್ಲಿ ತೋರಿಸುತ್ತದೆ. ಹೀಗಾಗಿ www.debtconsolidationsquad.com ವೆಬ್‍ಸೈಟ್ ನಲ್ಲಿ Which is the ugliest language in India ಪ್ರಶ್ನೆ ಇದ್ದ ಕಾರಣ ಆ ವೆಬ್‍ಸೈಟ್ ತೋರಿಸಿದೆ. ಗೂಗಲ್ ಯಾವಾಗಲೂ ಸರ್ಚ್ ಮಾಡಿದ ಫಲಿತಾಂಶವನ್ನು ನೀಡುತ್ತದೆ ಹೊರತು ಉದ್ದೇಶಪೂರ್ವಕವಾಗಿ ಈ ರೀತಿಯ ಫಲಿತಾಂಶವನ್ನು ಪ್ರಕಟಿಸುವುದಿಲ್ಲ.

    ಬಳಕೆದಾರ ಹುಡುಕಿದಾಗ ಫಲಿತಾಂಶವನ್ನು ಗೂಗಲ್ ಸರ್ಚ್ ತೋರಿಸುತ್ತದೆಯೋ ಹೊರತು ಆ ಫಲಿತಾಂಶ ಸರಿ ಇದೆಯೋ ತಪ್ಪಿದೆಯೋ ಎಂಬುದನ್ನು ಪರಿಶೀಲಿಸುವುದಿಲ್ಲ. ಅಷ್ಟೇ ಅಲ್ಲದೇ ಇದು ಅಸಾಧ್ಯ. ಆದರೆ ಬಳಕೆದಾರರಿಗೆ ಆಯ್ಕೆಯನ್ನು ನೀಡಿದ್ದು ಒಂದು ವೇಳೆ ತಪ್ಪು ಮಾಹಿತಿಗಳು ಇದ್ದಲ್ಲಿ ಆ ಪೇಜ್ ಅನ್ನು ರಿಪೋರ್ಟ್ ಮಾಡಬಹುದಾಗಿದೆ. ರಿಪೋರ್ಟ್‍ಗಳ ಸಂಖ್ಯೆ ಜಾಸ್ತಿಯಾದರೆ ಗೂಗಲ್ ಸರ್ಚ್‍ನಲ್ಲಿ ಕೆಲಸ ಮಾಡುವವರು ಈ ವಿಚಾರವನ್ನು ಪರಿಶೀಲಿಸಿ ಅಂತಿಮ ನಿರ್ಧಾರ ಕೈಗೊಂಡು ಆ ಪೇಜ್‍ಗಳನ್ನು ಸರ್ಚ್‍ನಿಂದ ತೆಗೆದು ಹಾಕುತ್ತಾರೆ. ಗೂಗಲ್ ಸರ್ಚ್‍ನ ಕೊನೆಯಲ್ಲಿ ‘Send Feedback’ ಆಯ್ಕೆಯನ್ನು ಕ್ಲಿಕ್ ಮಾಡಿ ರಿಪೋರ್ಟ್ ಮಾಡಬಹುದಾಗಿದೆ.