Tag: ಅಗ್ನಿಶಾಮಕ ದಳ

  • ಪ್ರಧಾನಿ ಮೋದಿ ನಿವಾಸದ ಬಳಿ ಅಗ್ನಿ ಆಕಸ್ಮಿಕ

    ಪ್ರಧಾನಿ ಮೋದಿ ನಿವಾಸದ ಬಳಿ ಅಗ್ನಿ ಆಕಸ್ಮಿಕ

    ನವದೆಹಲಿ: ಲೋಕ ಕಲ್ಯಾಣ ರಸ್ತೆಯ ಪ್ರಧಾನಿ ನರೇಂದ್ರ ಮೋದಿಯವರ ನಿವಾಸದ ಕಚೇರಿ ಸಂಕೀರ್ಣಕ್ಕೆ ಕೂಗಳತೆ ದೂರದಲ್ಲಿರುವ ಎಸ್‍ಪಿಜಿ ಕಟ್ಟಡದಲ್ಲಿ ಅಗ್ನಿ ಅವಘಡ ಸಂಭವಿಸಿದೆ.

    ರಾತ್ರಿ 7:25ರ ಸುಮಾರಿಗೆ ಬೆಂಕಿ ಹೊತ್ತಿಕೊಂಡಿರುವ ಕುರಿತು ಅಗ್ನಿಶಾಮಕ ದಳದ ಸಿಬ್ಬಂದಿಗೆ ಕರೆ ಬಂದಿದ್ದು, 9 ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ. ಸಂಜೆ 7:55ರ ಹೊತ್ತಿಗೆ ಬೆಂಕಿ ನಿಯಂತ್ರಣಕ್ಕೆ ತರಲು ಸಾಧ್ಯವಾಗಿದ್ದು, ಯಾವುದೇ ಸಾವು, ನೋವು ಹಾಗೂ ಆಸ್ತಿ ಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ.

    ಶಾರ್ಟ್ ಸಕ್ರ್ಯೂಟ್ ನಿಂದಾಗಿ ಸಣ್ಣ ಪ್ರಮಾಣದ ಬೆಂಕಿ ಕಾಣಿಸಿಕೊಂಡಿತ್ತು. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದ ಕಚೇರಿ ಬಳಿ ಬೆಂಕಿ ಕಾಣಿಸಿಕೊಂಡಿಲ್ಲ. ಬದಲಿಗೆ ಎಸ್‍ಪಿಜಿಯ ರಿಸೆಪ್ಷನ್ ಪ್ರದೇಶದಲ್ಲಿನ ಎಲ್‍ಕೆಎಂ ಕಾಂಪ್ಲೆಕ್ಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಇದೀಗ ಬೆಂಕಿ ಬಹುತೇಕ ನಿಯಂತ್ರಣಕ್ಕೆ ಬಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಾಲಯದ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

  • ದೆಹಲಿ ಅಗ್ನಿ ಅವಘಡ- ಕಟ್ಟಡದ ಮಾಲೀಕನ ಬಂಧನ

    ದೆಹಲಿ ಅಗ್ನಿ ಅವಘಡ- ಕಟ್ಟಡದ ಮಾಲೀಕನ ಬಂಧನ

    ನವದೆಹಲಿ: ಕೃಷಿ ಮಾರುಕಟ್ಟೆಯಲ್ಲಿ ಸಂಭವಿಸಿದ ಅಗ್ನಿ ಅವಘಡ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿದ್ದ ಕಟ್ಟಡ ಮಾಲೀಕನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ಇಂದು ಬೆಳಗಿನ ಜಾವ ರಾಣಿ ಝಾನ್ಸಿ ರಸ್ತೆ ಅನಾಜ್ ಮಂಡಿ ಕಾರ್ಖಾನೆಯಲ್ಲಿ ನಡೆದ ಅಗ್ನಿ ದುರಂತದಲ್ಲಿ 43 ಜನ ಸಾವನ್ನಪ್ಪಿದ್ದಾರೆ. ಸುಮಾರು 30 ಅಗ್ನಿ ಶಾಮಕ ವಾಹನಗಳು ಕಾರ್ಯನಿರ್ವಹಿಸಿ ಬೆಂಕಿಯನ್ನು ಹತೋಟಿಗೆ ತಂದಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಖಾನೆಯ ಮಾಲೀಕ ರೆಹಾನ್‍ನನ್ನು ಪೊಲೀಸರು ಬಂಧಿಸಿದ್ದಾರೆ.

    ಕಟ್ಟಡವು ಅಗ್ನಿಶಾಮಕ ಸುರಕ್ಷತಾ ಪರಿಕರಗಳನ್ನು ಹೊಂದಿರಲಿಲ್ಲ ಎಂದು ಆರೋಪಿಸಲಾಗಿತ್ತು. ಪ್ರಕರಣದ ಸಂಬಂಧ ಕಟ್ಟಡ ಮಾಲೀಕನ ವಿರುದ್ಧ ಐಪಿಸಿ ಸೆಕ್ಷನ್ 304(ಉದ್ದೇಶ ಪೂರ್ವಕ ಅಲ್ಲದ ಕೊಲೆ)ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

    ಉತ್ತರ ದೆಹಲಿಯ ರಾಣಿ ಜಾನ್ಸಿ ರಾಣಿ ರಸ್ತೆಯಲ್ಲಿರುವ ಅನಾಜ್ ಮಂಡಿ ಪ್ರದೇಶದ ಕಾರ್ಖಾನೆಯಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಈ ಘಟನೆಯಲ್ಲಿ ಹೊಗೆಯಿಂದ ಉಸಿರುಗಟ್ಟಿ 8 ಮಂದಿ ಆಸ್ಪತ್ರೆಗೆ ದಾಖಲಾದರೆ, ಸುಮಾರು 15 ಮಂದಿ ದುರ್ಘಟನೆಯಿಂದ ಗಾಯಗೊಂಡಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಓರ್ವನ ದೇಹ ಶೇ.80ರಷ್ಟು ಸುಟ್ಟಿದ್ದು, ಹೀಗೆ ಹಲವಾರು ಮಂದಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.

    ಅಗ್ನಿ ಅವಘಡದಲ್ಲಿ 43 ಜನ ಮೃತಪಟ್ಟಿದ್ದಾರೆ. ಮೃತರ ಕುಟುಂಬಗಳಿಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ 10 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ. ಇಂದು ಮುಂಜಾನೆ 5.22ರ ಸುಮಾರಿಗೆ ನಡೆದ ಈ ಅವಘಡ ಸಂಬಂಧ ತನಿಖೆ ನಡೆಸುವುದಾಗಿ ಸಿಎಂ ಭರವಸೆ ನೀಡಿದ್ದು, ವಾರದೊಳಗೆ ಸಂಪೂರ್ಣ ವರದಿ ನೀಡುವಂತೆ ಸೂಚಿಸಿದ್ದಾರೆ.

    ದುರ್ಘಟನೆ ನಡೆದ ವಿಚಾರ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ದೌಡಾಯಿಸಿದ ಸಿಎಂ, ಮೃತಪಟ್ಟ ಪ್ರತಿಯೊಬ್ಬ ಕಾರ್ಮಿಕನ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ ಹಾಗೂ ಗಾಯಗೊಂಡವರ ಕುಟುಂಬಕ್ಕೆ 1 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ. ಅಲ್ಲದೆ ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸುವುದಾಗಿ ತಿಳಿಸಿದ್ದಾರೆ.

    ಘಟನೆ ನಡೆದ ಬಳಿಕ ಅರವಿಂದ್ ಕೇಜ್ರಿವಾಲ್ ಸೇರಿದಂತೆ, ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್, ಗೃಹ ಸಚಿವ ಅಮಿತ್ ಶಾ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಸಂತಾಪ ಸೂಚಿಸಿದ್ದಾರೆ.

  • ಶಾರ್ಟ್ ಸರ್ಕ್ಯೂಟ್‍ನಿಂದ ಮನೆ ಬೆಂಕಿಗಾಹುತಿ – 1.25 ಲಕ್ಷ ನಗದು, ಒಡವೆ ಭಸ್ಮ

    ಶಾರ್ಟ್ ಸರ್ಕ್ಯೂಟ್‍ನಿಂದ ಮನೆ ಬೆಂಕಿಗಾಹುತಿ – 1.25 ಲಕ್ಷ ನಗದು, ಒಡವೆ ಭಸ್ಮ

    ಹಾಸನ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‍ನಿಂದಾಗಿ ಮನೆಗೆ ಬೆಂಕಿ ಬಿದ್ದು ಸುಮಾರು 1.25 ಲಕ್ಷ ನಗದು, ಒಡವೆ ಹಾಗೂ ಗೃಹಪಯೋಗಿ ವಸ್ತುಗಳೆಲ್ಲಾ ಸುಟ್ಟು ಭಸ್ಮವಾಗಿರುವ ಘಟನೆ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ದೊಡ್ಡಕಾಡನೂರು ಗ್ರಾಮದಲ್ಲಿ ನಡೆದಿದೆ.

    ದೊಡ್ಡಕಾಡನೂರು ಗ್ರಾಮದ ನಿವಾಸಿ ಮಂಜುಳಾ ಅವರ ಮನೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‍ ಸಂಭವಿಸಿದೆ. ಪರಿಣಾಮ ಮನೆಗೆ ಬೆಂಕಿ ಹೊತ್ತಿಕೊಂಡು ಗೃಹಪಯೋಗಿ ವಸ್ತುಗಳೆಲ್ಲಾ ಸುಟ್ಟು ಭಸ್ಮವಾಗಿದೆ. ಇದೇ ವೇಳೆ ಮನೆಯಲ್ಲಿಟ್ಟಿದ್ದ ಸುಮಾರು 1.25 ಲಕ್ಷ ರೂ. ಹಣ ಹಾಗೂ ಬಂಗಾರದ ಒಡವೆಗಳೆಲ್ಲಾ ಬೆಂಕಿಗೆ ಆಹುತಿಯಾಗಿದೆ.

    ಮಂಜುಳಾ ಅವರು ಬ್ಯೂಟಿ ಪಾರ್ಲರ್ ನಡೆಸುತಿದ್ದು, ತನ್ನ ತಾಯಿಯೊಂದಿಗೆ ಈ ಮನೆಯಲ್ಲಿ ವಾಸವಿದ್ದರು. ಆದರೆ ಅವಘಡ ಸಂಭವಿಸಿದ್ದ ವೇಳೆ ಮಂಜುಳಾ ಹಾಗೂ ಅವರ ತಾಯಿ ಮನೆಯಲ್ಲಿ ಇರಲಿಲ್ಲ. ಹೀಗಾಗಿ ಯಾವುದೇ ಪ್ರಾಣಹಾನಿ ಆಗಿಲ್ಲ. ಮನೆಗೆ ಬೆಂಕಿ ಬಿದ್ದಿರುವುದನ್ನು ಗಮನಿಸಿದ ಗ್ರಾಮಸ್ಥರು ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಆದರೆ ಅಷ್ಟರಲ್ಲಿ ಮನೆಯೊಳಗಿದ್ದ ಎಲ್ಲಾ ವಸ್ತುಗಳು ಸುಟ್ಟು ಕರಕಲಾಗಿದ್ದವು. ಆದರೆ ಅದೃಷ್ಟವಶಾತ್ ಮನೆಯಲ್ಲಿದ್ದ ಎರಡು ಭರ್ತಿಯಾಗಿದ್ದ ಗ್ಯಾಸ್ ಸಿಲಿಂಡರ್ ಗಳಿಗೆ ಬೆಂಕಿ ಹೊತ್ತಿಕೊಂಡಿರಲಿಲ್ಲ. ಒಂದು ವೇಳೆ ಸಿಲಿಂಡರ್ ಬ್ಲಾಸ್ಟ್ ಆಗಿದ್ದರೆ ಇನ್ನಷ್ಟು ಅನಾಹುತವಾಗುತ್ತಿತ್ತು.

    ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಗ್ರಾಮಸ್ಥರು ಹಾಗೂ ಅಗ್ನಿ ಶಾಮಕ ಸಿಬ್ಬಂದಿ ಸುಟ್ಟ ವಸ್ತುಗಳನ್ನು ಮನೆಯಿಂದ ಹೊರತಂದಿದ್ದಾರೆ.

  • ಎಲ್‍ಪಿಜಿ ಟ್ಯಾಂಕರ್‌ನಿಂದ ಅನಿಲ ಸೋರಿಕೆ – ಸಕಲೇಶಪುರದಲ್ಲಿ ಭಯದ ವಾತಾವರಣ

    ಎಲ್‍ಪಿಜಿ ಟ್ಯಾಂಕರ್‌ನಿಂದ ಅನಿಲ ಸೋರಿಕೆ – ಸಕಲೇಶಪುರದಲ್ಲಿ ಭಯದ ವಾತಾವರಣ

    ಹಾಸನ: ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಎಲ್‍ಪಿಜಿ ಟ್ಯಾಂಕರ್‌ನಿಂದ ಅನಿಲ ಸೋರಿಕೆಯಾಗಿ ಸಕಲೇಶಪುರದಲ್ಲಿ ಅತಂಕ ಮನೆಮಾಡಿದೆ.

    ಮಂಗಳೂರಿನಿಂದ ಬೆಂಗಳೂರಿಗೆ ಚಲಿಸುತ್ತಿದ್ದಾಗ ಮಧ್ಯಾಹ್ನ 12 ಗಂಟೆಯ ವೇಳೆಗೆ ಪಟ್ಟಣದ ಚೆಸ್ಕಾಂ ಕಚೇರಿ ಬಳಿ ಟ್ಯಾಂಕರಿನ ಮುಖ್ಯ ವಾಲ್ವ್ ನ ಬೋಲ್ಟ್ ತುಂಡಾದ ಪರಿಣಾಮ ಭಾರಿ ಪ್ರಮಾಣದ ಅನಿಲ ಸೋರಿಕೆ ಉಂಟಾಗಿದೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳದ ತಂಡ ಸತತವಾಗಿ ನೀರನ್ನು ಹಾಯಿಸಿ ಟ್ಯಾಂಕರ್ ಸ್ಫೋಟಗೊಳ್ಳದಂತೆ ಮಾಡುವಲ್ಲಿ ಯಶಸ್ವಿಯಾಗಿದೆ.

    ಸಮೀಪದ ಪದವಿ ಪೂರ್ವ ಕಾಲೇಜು, ಬಾಲಕಿಯರ ಕಾಲೇಜುಗಳಿಗೆ ರಜೆಯಿತ್ತು, ತೋಟಗಾರಿಕೆ, ಕೃಷಿ ಇಲಾಖೆ, ಬಾಲಕಿಯರ ವಸತಿ ನಿಲಯ, ಸೆಸ್ಕ್, ನಾಡಕಚೇರಿ, ಉರ್ದು ಶಾಲೆ ಎಲ್ಲವನ್ನೂ ಬಂದ್ ಮಾಡಿ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳನ್ನು ಹೊರಗೆ ಕಳುಹಿಸಲಾಗಿತ್ತು. ಅಲ್ಲದೆ ಮುನ್ನೆಚ್ಚರಿಕಾ ಕ್ರಮವಾಗಿ ಸುತ್ತಮುತ್ತ ಇರುವ ಬಡಾವಣೆಯಲ್ಲಿ ಒಲೆ ಹೊತ್ತಿಸದಂತೆ ಮನವಿ ಮಾಡಲಾಗಿದೆ.

    ಪಟ್ಟಣದ ಕುಶಾಲನಗರ, ಚಂಪಕನಗರ, ಮಲ್ಲಿಕಾರ್ಜುನ ನಗರ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಮನೆಗಳಲ್ಲಿ ಒಲೆ ಹಚ್ಚದಂತೆ, ಗ್ಯಾಸ್ ಉರಿಸದಂತೆ, ಲೈಟ್ ಸ್ವಿಚ್ ಹಾಕದಂತೆ, ಬೆಂಕಿ ಕಿಡಿ ಬಳಸದಂತೆ ಪೊಲೀಸರು ಧ್ವನಿವರ್ಧಕದ ಮೂಲಕ ಸಾರ್ವಜನಿಕರನ್ನು ಎಚ್ಚರಿಸಿದ್ದಾರೆ. ಜೊತೆಗೆ ಸಕಲೇಶಪುರ ಬಸ್ ನಿಲ್ದಾಣ ಸುತ್ತಮುತ್ತಲಿನ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿದ್ದಾರೆ.

    ಮೊಬೈಲ್ ಫೋನ್ ಬಳಸದಂತೆಯೂ ಸಹ ಎಲ್ಲರನ್ನೂ ಎಚ್ಚರಿಸುತ್ತಿದ್ದಾರೆ. ಪರಿಸ್ಥಿತಿ ನಿಯಂತ್ರಿಸುವ ತನಕ ರಾಷ್ಟ್ರೀಯ ಹೆದ್ದಾರಿಯಲ್ಲಿ ತಾತ್ಕಾಲಿಕವಾಗಿ ಸಂಚಾರವನ್ನು ಕೂಡ ತಡೆಹಿಡಿಯಲಾಗಿದೆ. ಹೆಚ್ಚುವರಿ ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ಕರೆಯಿಸಿಕೊಳ್ಳಲಾಗುತ್ತಿದೆ.

  • ಸರ್ಕಾರಿ ಕಚೇರಿಗಳಿರುವ ವಿಕಾಸ ಭವನ ಧಗ ಧಗ

    ಸರ್ಕಾರಿ ಕಚೇರಿಗಳಿರುವ ವಿಕಾಸ ಭವನ ಧಗ ಧಗ

    ನವದೆಹಲಿ: ನಗರದ ಕೇಂದ್ರ ಭಾಗದಲ್ಲಿರುವ ವಿಕಾಸ ಭವನ ಕಟ್ಟಡಕ್ಕೆ ಇಂದು ಸಂಜೆ ಬೆಂಕಿ ಹೊತ್ತಿಕೊಂಡಿದ್ದು, ಎಂಟು ಅಗ್ನಿ ಶಾಮಕ ವಾಹನಗಳು ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸುತ್ತಿವೆ.

    ವಿಕಾಸ ಭವನದ ಎರಡನೇ ಮಹಡಿಗೆ ಬೆಂಕಿ ಹೊತ್ತಿಕೊಂಡಿದ್ದು, ಯಾವುದೇ ಸಾವು ನೋವು ಸಂಭವಿಸಿರುವ ಕುರಿತು ವರದಿಯಾಗಿಲ್ಲ. ಅಲ್ಲದೆ, ಬೆಂಕಿ ಹೊತ್ತಿಕೊಳ್ಳಲು ಕಾರಣ ಏನೆಂಬುದು ಈ ವರೆಗೆ ತಿಳಿದು ಬಂದಿಲ್ಲ. ವಿಕಾಸ ಭವನ ಕಟ್ಟಡವು ಆದಾಯ ತೆರಿಗೆ ಇಲಾಖೆಯ ಎದುರುಗಡೆ ಇದ್ದು, ದೆಹಲಿ ಮಹಿಳಾ ಆಯೋಗದ ಕಚೇರಿ ಸೇರಿದಂತೆ ವಿವಿಧ ಸರ್ಕಾರಿ ಕಚೇರಿಗಳು ಅದೇ ಕಟ್ಟಡದಲ್ಲಿವೆ.

    ದೆಹಲಿ ಮಹಿಳಾ ಆಯೋಗ ಕಚೇರಿಯು ವಿಕಾಸ ಭವನದ ಎರಡನೇ ಮಹಡಿಯಲ್ಲೇ ಇದ್ದು, ಅದೇ ಮಹಡಿಯಲ್ಲಿ ಬೆಂಕಿ ಹೊತ್ತಿಕೊಂಡಿದೆ.

    ಈ ಕುರಿತು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಳಿವಾಳ್ ಪ್ರತಿಕ್ರಿಯಿಸಿ, ನಮ್ಮ ಕಚೇರಿಗೂ ಬೆಂಕಿ ಹೊತ್ತಿಕೊಂಡಿದೆ. ಎಷ್ಟು ಜನ ಕಟ್ಟಡದೊಳಗಡೆ ಸಿಲುಕಿಕೊಂಡಿದ್ದಾರೆ ಹಾಗೂ ಎಷ್ಟು ಜನ ಸುರಕ್ಷಿತವಾಗಿ ಹೊರಗೆ ಬರಲು ಸಾಧ್ಯವಾಗಿದೆ ಎಂಬುದು ಸ್ಪಷ್ಟವಾಗಿಲ್ಲ. ಕಚೇರಿಯಲ್ಲಿ ರೆಕಾರ್ಡ್ ರೂಂ ಇದ್ದು, ಅದಕ್ಕೆ ಬೆಂಕಿ ಹತ್ತಿಕೊಳ್ಳುವುದಿಲ್ಲ ಎಂದು ಭಾವಿಸುತ್ತೇವೆ ಎಂದು ತಿಳಿಸಿದ್ದಾರೆ.

  • ದೆಹಲಿಯ ಏಮ್ಸ್ ಆಸ್ಪತ್ರೆಯ ಕಟ್ಟಡದಲ್ಲಿ ಬೆಂಕಿ- 34 ಅಗ್ನಿಶಾಮಕ ವಾಹನಗಳಿಂದ ಕಾರ್ಯಾಚರಣೆ

    ದೆಹಲಿಯ ಏಮ್ಸ್ ಆಸ್ಪತ್ರೆಯ ಕಟ್ಟಡದಲ್ಲಿ ಬೆಂಕಿ- 34 ಅಗ್ನಿಶಾಮಕ ವಾಹನಗಳಿಂದ ಕಾರ್ಯಾಚರಣೆ

    ನವದೆಹಲಿ: ನಗರದ ಪ್ರಸಿದ್ಧ ಏಮ್ಸ್ ಆಸ್ಪತ್ರೆಯ ಕಟ್ಟಡದ ಎಮರ್ಜೆನ್ಸಿ ವಾರ್ಡ್ ಬಳಿ ಬೆಂಕಿ ಕಾಣಿಸಿಕೊಂಡಿದ್ದು, ಸುಮಾರು 34 ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಯುತ್ತಿವೆ.

    34 ಅಗ್ನಿಶಾಮಕ ವಾಹನಗಳು ಕಾರ್ಯಾಚರಣೆ ನಡೆಸಿದರೂ ಸಹ ಬೆಂಕಿ ಹತೋಟಿಗೆ ಬರುತ್ತಿಲ್ಲ. ಅಗ್ನಿಯು ಕ್ರಮೇಣವಾಗಿ ಕಟ್ಟಡವನ್ನು ಆವರಿಸಿಕೊಳ್ಳುತ್ತಿದೆ. ಬೆಂಕಿಯ ವ್ಯಾಪಕತೆ ಹೆಚ್ಚಿದ್ದರೂ ಸಹ ಈವರೆಗೆ ಯಾವುದೇ ಸಾವು ನೋವು ಸಂಭವಿಸಿರುವ ಕುರಿತು ವರದಿಯಾಗಿಲ್ಲ. ಆಸ್ಪತ್ರೆಯ ತುರ್ತು ವಾರ್ಡ್ ಬಳಿಯ ಕಟ್ಟಡವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ಸಿಬ್ಬಂದಿಯು ಕಟ್ಟಡದಿಂದ ಜನರನ್ನು ಸ್ಥಳಾಂತರಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಈ ಕಟ್ಟಡವು ರೋಗಿಗಳಿಲ್ಲದ ಬ್ಲಾಕ್ ಆಗಿದ್ದು, ವೈದ್ಯರ ಕೊಠಡಿ ಹಾಗೂ ಸಂಶೋಧನಾ ಪ್ರಯೋಗಾಲಯಗಳನ್ನು ಒಳಗೊಂಡಿದೆ. ಕಟ್ಟಡದ ಮೊದಲ ಮಹಡಿಯಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಹೊಗೆಯು ಎರಡನೇ ಮಹಡಿ ಸೇರಿದಂತೆ ಕಟ್ಟಡದ ತುಂಬ ಆವರಿಸಿಕೊಂಡಿದೆ. ಆಸ್ಪತ್ರೆಯ ಮೇಲ್ಭಾಗದಿಂದ ದಟ್ಟವಾದ ಹೊಗೆ ಕಂಡು ಬರುತ್ತಿದೆ ಎಂದು ಅಗ್ನಿಶಾಮಕದ ಹಿರಿಯ ಸಿಬ್ಬಂದಿ ತಿಳಿಸಿದ್ದಾರೆ.

    ಸುಮಾರು 5 ಗಂಟೆ ಹೊತ್ತಿಗೆ ಆಸ್ಪತ್ರೆಯ ಪಿಸಿ ಹಾಗೂ ಬೋಧಕ ವಿಭಾಗದ ಕಟ್ಟಡದಲ್ಲಿ ಬೆಂಕಿ ಹೊತ್ತಿಕೊಂಡಿರುವ ಕುರಿತು ಕರೆ ಬಂತು. ತಕ್ಷಣವೇ ಕಾರ್ಯಪ್ರವೃತ್ತರಾಗಿ ಸ್ಥಳಕ್ಕೆ ದೌಡಾಯಿಸಿದೆವು ಎಂದು ದೆಹಲಿ ಅಗ್ನಿಶಾಮಕ ದಳದ ಅಧಿಕಾರಿಗಳು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

    ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಸಹ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರು ಬೇರೆ ಕಟ್ಟಡದಲ್ಲಿ ದಾಖಲಾಗಿದ್ದಾರೆ. ಜೇಟ್ಲಿ ಅವರು ಆಗಸ್ಟ್ 9ರಿಂದ ಇನ್ಸೆಂಟಿವ್ ಕೇರ್ ಯುನಿಟ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ದಾಖಲಾಗಿರುವ ಕಟ್ಟಡಕ್ಕೂ ಹಾಗೂ ಬೆಂಕಿ ಹೊತ್ತಿಕೊಂಡಿರುವ ಕಟ್ಟಡಕ್ಕೂ ತುಂಬಾ ಅಂತರವಿದೆ ಎಂದು ತಿಳಿಸಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಬರಬೇಕಿದೆ.

  • ಹೈಟೆನ್ಷನ್ ಟವರ್ ಏರಿ ರಂಪಾಟ – ಇಳಿಸಲು ಅಗ್ನಿಶಾಮಕ ಸಿಬ್ಬಂದಿಯಿಂದ ಹರಸಾಹಸ

    ಹೈಟೆನ್ಷನ್ ಟವರ್ ಏರಿ ರಂಪಾಟ – ಇಳಿಸಲು ಅಗ್ನಿಶಾಮಕ ಸಿಬ್ಬಂದಿಯಿಂದ ಹರಸಾಹಸ

    ರಾಮನಗರ: ಮಾನಸಿಕ ಅಸ್ವಸ್ಥನೋರ್ವ ಹೈಟೆನ್ಷನ್ ವಿದ್ಯುತ್ ಕಂಬವೇರಿ ಸತತ ನಾಲ್ಕು ಗಂಟೆಗೂ ಹೆಚ್ಚು ಕಾಲ ರಂಪಾಟ ನಡೆಸಿದ್ದು, ಆತನನ್ನು ಕೆಳಗಿಳಿಸಲು ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಟ್ಟಿರುವ ಘಟನೆ ಮಾಗಡಿ ತಾಲೂಕಿನ ತಿಪ್ಪಸಂದ್ರದಲ್ಲಿ ನಡೆದಿದೆ.

    ತಮಿಳುನಾಡು ಮೂಲದ ಸುಮಾರು 35 ವರ್ಷ ವಯಸ್ಸಿನ ಮಾನಸಿಕ ಅಸ್ವಸ್ಥ ವ್ಯಕ್ತಿಯೋರ್ವ ಬೆಳಿಗ್ಗೆ 9ಗಂಟೆ ವೇಳೆಗೆ ತಿಪ್ಪಸಂದ್ರ ಗ್ರಾಮದ ಹೊರವಲಯದಲ್ಲಿನ ಹೈಟೆನ್ಷನ್ ವಿದ್ಯುತ್ ಕಂಬವನ್ನು ಏರಿದ್ದಾನೆ. ಬೆಳಿಗ್ಗೆ ಆತ ಹೈಟೆನ್ಷನ್ ಕಂಬವೇರುತ್ತಿರುವುದನ್ನ ಕಂಡ ಸ್ಥಳೀಯರು ಬೆಸ್ಕಾಂ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಕೂಡಲೇ ವಿದ್ಯುತ್ ಕಡಿತಗೊಳಿಸಲಾಗಿದೆ. ಇದೇ ವೇಳೆ ವಿದ್ಯುತ್ ಕಂಬದ ತುತ್ತ ತುದಿಗೇರಿದ ವ್ಯಕ್ತಿ ತಂತಿಯನ್ನು ಹಿಡಿದುಕೊಂಡು ಆತ್ಮಹತ್ಯೆಗೆ ಮುಂದಾಗಿದ್ದನು. ಆದರೆ ವಿದ್ಯುತ್ ಕಡಿತಗೊಂಡಿದ್ದ ಕಾರಣಕ್ಕೆ ಯಾವುದೇ ಅನಾಹುತ ಸಂಭವಿಸಿಲ್ಲ.

    ಹೈಟೆನ್ಷನ್ ಕಂಬವೇರಿದ ವ್ಯಕ್ತಿ ಸುಮಾರು ನಾಲ್ಕು ಗಂಟೆಗಳ ಕಾಲ ಕಂಬದ ಮೇಲೆಯೇ ಕುಳಿತ್ತಿದ್ದನು. ಅಲ್ಲದೇ ವಿದ್ಯುತ್ ತಂತಿಯನ್ನ ಹಿಡಿದು ಮಧ್ಯಕ್ಕೆ ಸಾಗುವ ಯತ್ನವನ್ನು ಕೂಡ ನಡೆಸಿದ್ದನು. ಸಾರ್ವಜನಿಕರು ಆತನ ಮನವೊಲಿಸಲು ಸಾಕಷ್ಟು ಪ್ರಯತ್ನಿಸಿದರೂ ಆತ ಮಾತ್ರ ಕೆಳಗಿಳಿಯಲಿಲ್ಲ. ಅಲ್ಲದೇ ಕೆಲವು ಬಾರಿ ಅರ್ಧ ಕಂಬ ಇಳಿದು ಮತ್ತೆ ಕಂಬದ ತುತ್ತ ತುದಿಗೇರಿ ಕುಳಿತುಕೊಳ್ಳುತ್ತಿದ್ದನು. ಕಂಬವನ್ನ ಯಾರಾದರೂ ಸಾರ್ವಜನಿಕರು ಹತ್ತಲು ಮುಂದಾದರೆ ಕಂಬದಿಂದ ತಂತಿಯ ಮೇಲೇರಿ ಹೆದರಿಸುತ್ತಿದ್ದನು.

    ಮಾಹಿತಿ ತಿಳಿದ ಬಳಿಕ ಕುದೂರು ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಮಾನಸಿಕ ಅಸ್ವಸ್ಥನನ್ನು ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಆತ ತನ್ನ ಸ್ಥಿಮಿತ ಕಳೆದುಕೊಂಡಿರುವ ಹಿನ್ನೆಲೆ ಆತನನ್ನು ಚಿಕಿತ್ಸೆಗಾಗಿ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಕಳುಹಿಸಿದ್ದಾರೆ.

  • ತಾವರೆಕೆರೆಯ ಗೋಡಾನ್‍ನಲ್ಲಿ ಅಗ್ನಿ ಅವಘಡ

    ತಾವರೆಕೆರೆಯ ಗೋಡಾನ್‍ನಲ್ಲಿ ಅಗ್ನಿ ಅವಘಡ

    ಬೆಂಗಳೂರು: ನಗರದ ಚಿಕ್ಕಗೊಲ್ಲರಹಟ್ಟಿಯ ನಿಶಾಂತ್ ಮೋಲ್ಡಿಂಗ್ಸ್ ಗೋಡಾನ್ ನಲ್ಲಿ ಭಾರೀ ಆಗ್ನಿ ಅವಘಡ ಸಂಭವಿಸಿದೆ.

    ಅದೃಷ್ಟವಶಾತ್ ಗೋಡಾನ್‍ನಲ್ಲಿದ್ದ ನಾಲ್ವರು ಕಾರ್ಮಿಕರು ಬಚಾವ್ ಆಗಿದ್ದಾರೆ. ಅವರನ್ನು ತಕ್ಷಣ ಸುಂಕದಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. 6 ಎಕರೆಯ ಈ ಗೋಡಾನ್ ನಲ್ಲಿ ವೇಸ್ಟೇಜ್ ವಸ್ತುಗಳಿಂದ ರಸಗೊಬ್ಬರ ತಯಾರಿಸಲಾಗುತ್ತಿತ್ತು. ಥಂಬಿಂಗ್ ಮಿಷನ್ ಸ್ಫೋಟಗೊಂಡಿರುವುದೇ ಈ ಅಗ್ನಿ ದುರಂತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

    ಬೆಂಕಿ ಹೊತ್ತಿಕೊಂಡಿರುವ ಮಾಹಿತಿ ತಿಳಿಯುತ್ತಿದ್ದಂತೆಯೇ 11 ಅಗ್ನಿಶಾಮಕ ವಾಹನಗಳು ಮತ್ತು ಸ್ಥಳೀಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿ ನಂದಿಸುವ ಕಾರ್ಯ ನಡೆಸಿದ್ದಾರೆ. ಸತತ ಎಂಟು ಗಂಟೆಗಳಿಂದ ಗೋಡಾನ್ ಹೊತ್ತಿ ಉರಿದಿದ್ದು, ಬೆಂಕಿಯ ಕೆನ್ನಾಲಿಗೆಗೆ ಒಂದು ಕಿ.ಮೀವರೆಗೂ ದಟ್ಟ ಹೊಗೆ ಹರಡಿದೆ.

    ಗೋಡಾನ್‍ನಲ್ಲಿ ಕೆಮಿಕಲ್ ಡ್ರಮ್‍ಗಳು ಸ್ಫೋಟಗೊಳ್ಳುತ್ತಿರುವುದರಿಂದ ಬೆಂಕಿ ನಂದಿಸುವ ಕಾರ್ಯಕ್ಕೆ ಅಡಚಣೆಯಾಗಿತ್ತು. ಈ ಸಂಬಂಧ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಶೌಚಾಲಯದ ಗುಂಡಿಗೆ ಬಿದ್ದು ನರಳಾಡುತ್ತಿದ್ದ ಹಸುವಿನ ರಕ್ಷಣೆ

    ಶೌಚಾಲಯದ ಗುಂಡಿಗೆ ಬಿದ್ದು ನರಳಾಡುತ್ತಿದ್ದ ಹಸುವಿನ ರಕ್ಷಣೆ

    ಕೋಲಾರ: ಶೌಚಾಲಯದ ಗುಂಡಿಗೆ ಬಿದ್ದು ನರಳಾಡುತ್ತಿದ್ದ ಹಸುವೊಂದನ್ನು ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ ಘಟನೆ ಕೋಲಾರದ ಗೌರಿಪೇಟೆಯಲ್ಲಿ ನಡೆದಿದೆ.

    ಗೌರೀಪೇಟೆ 4ನೇ ರಸ್ತೆಯಲ್ಲಿ ಖಾಲಿ ನಿವೇಶನದಲ್ಲಿದ್ದ ಗುಂಡಿಯ ಬಳಿ ಮೇಯಲು ಹೋದ ಹಸು ಆಯ ತಪ್ಪಿ ಗುಂಡಿಗೆ ಬಿದ್ದಿತ್ತು. ಕಿರುಚುತಿದ್ದ ಹಸುವನ್ನು ಕಂಡ ಸ್ಥಳೀಯರು ಕೂಡಲೇ ಅಗ್ನಿಶಾಮಕ ಸಿಬ್ಬಂದಿಗೆ ತಿಳಿಸಿದರು.

    ಈ ವೇಳೆ ತಕ್ಷಣ ಸ್ಥಳಕ್ಕೆ ಬಂದ ಅಗ್ನಶಾಮಕ ಸಿಬ್ಬಂದಿ ಜೆಸಿಬಿ ಹಾಗೂ ಹಗ್ಗದ ಸಹಾಯದಿಂದ ಹಸುವನ್ನು ಮೇಲೆತ್ತಿ ರಕ್ಷಣೆ ಮಾಡಿದರು. ಇದಕ್ಕೆ ಸ್ಥಳೀಯರು ಕೈ ಜೋಡಿಸಿ ಮಾನವೀಯತೆ ಮೆರೆದಿದ್ದಾರೆ.

  • ಬೆಳ್ಳಂಬೆಳಗ್ಗೆ ಗೋಡೆ ಕುಸಿದು 15 ಮಂದಿ ದುರ್ಮರಣ

    ಬೆಳ್ಳಂಬೆಳಗ್ಗೆ ಗೋಡೆ ಕುಸಿದು 15 ಮಂದಿ ದುರ್ಮರಣ

    ಪುಣೆ: ಭಾರೀ ಮಳೆಯಿಂದಾಗಿ ವಸತಿ ಕಟ್ಟಡದ ಗೋಡೆ ಕುಸಿದು ಬಿದ್ದ ಪರಿಣಾಮ 15 ಮಂದಿ ಮೃತಪಟ್ಟಿರುವ ದಾರುಣ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

    ಈ ದುರ್ಘಟನೆ ಇಂದು ಮುಂಜಾನೆ ಪುಣೆಯ ಕೊಂಧ್ವಾ ಪ್ರದೇಶದಲ್ಲಿ ಸಂಭವಿಸಿದೆ. ನಾಲ್ವರು ಮಕ್ಕಳು, ಓರ್ವ ಮಹಿಳೆ ಸೇರಿದಂತೆ 15 ಮಂದಿ ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ ಅನೇಕ ಕಾರುಗಳು ಸಹ ಜಖಂ ಆಗಿವೆ. ಅಪಾರ್ಟ್ ಮೆಂಟ್‍ನ ಪಕ್ಕದಲ್ಲಿ ಟಿನ್ ಶೆಡ್‍ಗಳ ಮೇಲೆ ಗೋಡೆ ಕುಸಿದ ಪರಿಣಾಮ ಪಾರ್ಕಿಂಗ್ ಲಾಟ್ ನಲ್ಲಿ ನಿಲ್ಲಿಸಿದ ಕಾರುಗಳು ಕುಸಿದ ಗೋಡೆಗಳ ಅವಶೇಷಗಳಡಿ ಸಿಕ್ಕಿ ಜಖಂ ಆಗಿವೆ.

    ಈ ಘಟನೆಯ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ (ಎನ್‌ಡಿಆರ್‌ಎಫ್‌) ಮತ್ತು ಅಗ್ನಿಶಾಮಕ ಇಲಾಖೆಯ ರಕ್ಷಣಾ ಸಿಬ್ಬಂದಿ ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಸದ್ಯಕ್ಕೆ ಗೋಡೆ ಕೆಳಗೆ ಸಿಲುಕಿಕೊಂಡಿರುವ ಜನರಿಗಾಗಿ ರಕ್ಷಣಾ ಸಿಬ್ಬಂದಿ ಶೋಧ ಕಾರ್ಯ ಮಾಡುತ್ತಿದ್ದಾರೆ. ಈ ಗೋಡೆ ಮುಂಜಾನೆ 1.45ಕ್ಕೆ ಕುಸಿದಿದ್ದು, ಈ ದುರಂತದಲ್ಲಿ ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಭಾರೀ ಮಳೆಯದಿಂದಾಗಿ ಗೋಡೆ ಕುಸಿದಿದೆ. ಆದರೂ ನಮ್ಮ ತಂಡವು ಗೋಡೆ ಕುಸಿತಕ್ಕೆ ನಿಖರ ಕಾರಣದ ಬಗ್ಗೆ ತನಿಖೆ ನಡೆಸುತ್ತಿದೆ. ಈ ಘಟನೆಗೆ ಯಾರು ಜವಾಬ್ದಾರರಾಗಿರುತ್ತಾರೋ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಮುಖ್ಯಸ್ಥ ಕೆ.ವೆಂಕಟೇಶಮ್ ತಿಳಿಸಿದರು.

    ಕಟ್ಟಡ ನಿರ್ಮಾಣ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗಾಗಿ ಆ ಶೆಡ್‍ಗಳನ್ನು ನಿರ್ಮಿಸಲಾಗಿತ್ತು. ವಸತಿ ಕಟ್ಟಡ ಕುಸಿದಾಗ ಗೋಡೆಯ ಭಗ್ನಾವಶೇಷಗಳು ಆ ಶೆಡ್‍ಗಳ ಮೇಲೆ ಬಿದ್ದಿವೆ. ಮಾಹಿತಿ ತಿಳಿದು ಅಗ್ನಿಶಾಮಕ ಇಲಾಖೆ, ಪುಣೆ ಪೊಲೀಸ್ ಮತ್ತು ಎನ್‌ಡಿಆರ್‌ಎಫ್‌ ಸ್ಥಳಕ್ಕೆ ಬಂದು ಜಂಟಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದೇವೆ ಎಂದು ಎನ್‌ಡಿಆರ್‌ಎಫ್‌ ಅಧಿಕಾರಿ ಸದಾನಂದ್ ಗಾವ್ಡೆ ಹೇಳಿದ್ದಾರೆ.

    ಪುಣೆಯಲ್ಲಿ ಶುಕ್ರವಾರ ಭಾರೀ ಮಳೆಯಾಗಿದ್ದು, ಗುರುವಾರದಿಂದಲೇ ನಗರದಲ್ಲಿ ಭಾರೀ ಮಳೆಯಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ 73.1 ಮಿಲಿಮೀಟರ್ ಮಳೆಯಾಗಿದೆ. ಇದು 2010 ರಿಂದ ಜೂನ್ ಬಳಿಕ ಅತಿ ಹೆಚ್ಚು ಪ್ರಮಾಣದ ಮಳೆ ಎಂದು ದಾಖಲಾಗಿದೆ. ಮಹಾರಾಷ್ಟ್ರದಲ್ಲಿ ಶುಕ್ರವಾರ ಮಳೆ ಸಂಬಂಧಿತ ಘಟನೆಯಿಂದ ಎಂಟು ಜನರು ಸಾವನ್ನಪ್ಪಿದ್ದಾರೆ ಮತ್ತು ಐದು ಮಂದಿ ಗಾಯಗೊಂಡಿದ್ದಾರೆ.

    ಇಂದು ಮುಂಜಾನೆ ಮುಂಬೈನ ಚೆಂಬೂರಿನಲ್ಲೂ ಗೋಡೆ ಕುಸಿದಿರುವ ಮೊತ್ತೊಂದು ಘಟನೆ ನಡೆದಿದೆ. ಪಾರ್ಕಿಂಗ್ ಮಾಡಿದ್ದ ಆಟೋರಿಕ್ಷಾದ ಮೇಲೆ ಗೋಡೆ ಕುಸಿದಿದೆ. ಸದ್ಯಕ್ಕೆ ಅಗ್ನಿಶಾಮಕ ದಳ ಸ್ಥಳಕ್ಕೆ ಹೋಗಿ ರಕ್ಷಣಾ ಕಾರ್ಯವನ್ನು ಮಾಡುತ್ತಿದೆ.