Tag: ಅಗ್ನಿಶಾಮಕ ದಳ

  • ಬೋರ್‌ವೆಲ್‌ ಪಕ್ಕ ಭೂಕುಸಿತ – 6 ಗಂಟೆ ಹೋರಾಡಿ ಸಾವನ್ನೇ ಗೆದ್ದ ಯುವಕ

    ಬೋರ್‌ವೆಲ್‌ ಪಕ್ಕ ಭೂಕುಸಿತ – 6 ಗಂಟೆ ಹೋರಾಡಿ ಸಾವನ್ನೇ ಗೆದ್ದ ಯುವಕ

    ಉಡುಪಿ: ಸಾವಿನ ಹೊಂಡದಲ್ಲಿ ಆರು ಗಂಟೆ ಒದ್ದಾಡಿ, ಕೊನೆಗೂ ಮೃತ್ಯುಂಜಯನಾಗಿ ರೋಹಿತ್ ಖಾರ್ವಿ ಬದುಕಿ ಬಂದಿದ್ದಾರೆ.

    ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಮರವಂತೆಯಲ್ಲಿ ಬೆಳಗ್ಗೆ 8:30ರ ವೇಳೆಗೆ ಬೋರ್‌ವೆಲ್‌ ಪಕ್ಕದ ಮಣ್ಣು ಕುಸಿದಿತ್ತು. ಪರಿಣಾಮ ಅಲ್ಲೇ ಕೆಲಸ ಮಾಡುತ್ತಿದ್ದ ರೋಹಿತ್ 15 ಅಡಿ ಆಳಕ್ಕೆ ಜಾರಿ ಬಿದ್ದಿದ್ದರು. ಆರಂಭದಲ್ಲಿ ಸ್ಥಳದಲ್ಲಿದ್ದ ಕಾರ್ಮಿಕರು ಕಾರ್ಯಾಚರಣೆ ನಡೆಸಿ, ತಕ್ಷಣ ಅಗ್ನಿಶಾಮಕ ದಳ, ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಗ್ಗದ ಮೂಲಕ 15 ಅಡಿ ಆಳಕ್ಕೆ ಇಳಿದು ರೋಹಿತ್‍ನನ್ನು ಸಂಪರ್ಕಿಸಿದ್ದರು.

    ಅಷ್ಟರೊಳಗೆ ಕುತ್ತಿಗೆ ಮಟ್ಟದವರೆಗೆ ಮಣ್ಣಿನ ಒಳಗೆ ರೋಹಿತ್ ಹುದುಗಿ ಹೋಗಿದ್ದರು. ತಕ್ಷಣವೇ ಆರೋಗ್ಯ ಇಲಾಖೆಯ ಮೂಲಕ ಹೊಂಡಕ್ಕೆ ಆಮ್ಲಜನಕದ ವ್ಯವಸ್ಥೆಯನ್ನು ಮಾಡಲಾಯಿತು. 11 ಗಂಟೆ ಸುಮಾರಿಗೆ ಅಗ್ನಿಶಾಮಕ ದಳದ ಅಧಿಕಾರಿಗಳು ರೋಹಿತ್‍ನನ್ನು ಮೇಲಕ್ಕೆತ್ತಲು ಆರಂಭಿಸಿದರು. ಮಣ್ಣು ತಲೆಯ ಮೇಲೆ ಕುಸಿಯದಂತೆ ದೊಡ್ಡದಾದ ಡ್ರಮ್ ಒಂದನ್ನು ಆತನ ಸುತ್ತಲೂ ಅಳವಡಿಸಿದರು. ರೋಹಿತ್ ಭೂಮಿಯೊಳಗೆ ಹುದುಗಿ ಹೋಗಿದ್ದರಿಂದ ಪಕ್ಕದಲ್ಲಿ ಜೆಸಿಬಿ ಮೂಲಕ ಮತ್ತೊಂದು ಹೊಂಡವನ್ನು ಕೊರೆಯಲಾಯಿತು.

    ಸುಮಾರು 3 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ಸಿಬ್ಬಂದಿ, ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ರೋಹಿತ್‍ನನ್ನು ಮೇಲಕ್ಕೆತ್ತಿದರು. ಘಟನೆ ಮಾಧ್ಯಮಗಳ ಮೂಲಕ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಸಾವಿರಾರು ಮಂದಿ ಜಮಾಯಿಸಿದ್ದರು. ರೋಹಿತ್ ಜೀವಂತವಾಗಿ ಮೇಲಕ್ಕೆ ಬರುತ್ತಿದ್ದಂತೆ ಸ್ಥಳದಲ್ಲಿ ಸೇರಿದ್ದ ಜನ ಹರ್ಷಾಚರಣೆ ಮಾಡಿದರು. ಹೊಂಡದಿಂದ ಮೇಲಕ್ಕೆತ್ತಿದ ಕೂಡಲೇ ರೋಹಿತ್‍ನನ್ನು ಪಕ್ಕದ ಆದರ್ಶ ಆಸ್ಪತ್ರೆಗೆ ರವಾನಿಸಲಾಯಿತು.

    ಆಸ್ಪತ್ರೆಗೆ ರೋಹಿತ್‍ನನ್ನು ಕರೆತರುವ ಮೊದಲೇ ತಜ್ಞ ವೈದ್ಯರು ಎಲ್ಲ ತಯಾರಿ ಮಾಡಿಕೊಂಡು ಐಸಿಯುನಲ್ಲಿ ರೋಹಿತ್‍ಗಾಗಿ ಕಾಯುತ್ತಿದ್ದರು. ಸುಮಾರು 6 ಗಂಟೆಗಳ ಕಾಲ ಭೂಮಿಯ ಒಳಗಿದ್ದ ರೋಹಿತ್ ಗೆ ಆರಂಭಿಕ ಅಗತ್ಯ ಚಿಕಿತ್ಸೆಗಳನ್ನು ನೀಡಲಾಯಿತು. ಸದ್ಯ ದೇಹದ ಸಂಪೂರ್ಣ ಪರೀಕ್ಷೆಯನ್ನು ಮಾಡಿದ ವೈದ್ಯರು ಡ್ರಿಪ್ಸ್ ಅಳವಡಿಸಿದ್ದಾರೆ. ರೋಹಿತ್ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಕೆಲ ಚಿಕಿತ್ಸೆ ನೀಡಬೇಕೆಂದು ವೈದ್ಯರು ತಿಳಿಸಿದ್ದಾರೆ. ಸಾವು ಬೆನ್ನತ್ತಿ ಬಂದಿದ್ದರೂ ರೋಹಿತ್ ಆಯಸ್ಸು ಗಟ್ಟಿಯಿತ್ತು. 6 ಗಂಟೆಗಳ ಕಾಲ ಸಾವು ಬದುಕಿನ ನಡುವೆ ಹೋರಾಟ ಮಾಡಿದ ರೋಹಿತ್ ಸಾವು ಗೆದ್ದ ವೀರನಾಗಿ ಹೊರಬಂದಿದ್ದಾರೆ ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ.

  • ಅಂಬಿಕಾ ನಗರದ ವಿದ್ಯುತ್ ಸಂಗ್ರಹಣಾಗಾರದಲ್ಲಿ ಸ್ಫೋಟ – ತಪ್ಪಿದ ಮಹಾ ದುರಂತ

    ಅಂಬಿಕಾ ನಗರದ ವಿದ್ಯುತ್ ಸಂಗ್ರಹಣಾಗಾರದಲ್ಲಿ ಸ್ಫೋಟ – ತಪ್ಪಿದ ಮಹಾ ದುರಂತ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಬಿಕಾ ನಗರದಲ್ಲಿ ಕಾಳಿ ನದಿಗೆ ಅಡ್ಡವಾಗಿ ಕಟ್ಟಿರುವ ಕಾಳಿ ವಿದ್ಯುತ್‍ಗಾರದ ವಿದ್ಯುತ್ ಸಂಗ್ರಹಣಾಗಾರದಲ್ಲಿ  ಟ್ರಾನ್ಸ್‌ಫಾರ್ಮ್‌ ಸ್ಫೋಟಗೊಂಡಿದೆ.

    ಸ್ಫೋಟದ ತೀವ್ರತೆಗೆ ಹಲವು ಟ್ರಾನ್ಸ್‌ಫಾರ್ಮ್‌ಗಳು ಸಂಪೂರ್ಣ ನಾಶವಾಗಿದ್ದು, ಅದೃಷ್ಟವಶಾತ್ ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರು ಹಾಗೂ ಇಂಜಿನಿಯರ್ ಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಟ್ರಾನ್ಸ್‌ಫಾರ್ಮ್‌ನಲ್ಲಿ ತಾಂತ್ರಿಕ ದೋಷ ಹಿನ್ನೆಲೆಯಲ್ಲಿ ಈ ಸ್ಟೋಟ ನಡೆದಿದೆ ಎನ್ನಲಾಗಿದ್ದು, ಸೋಮವಾರ ಸಂಜೆ ವೇಳೆ ಘಟನೆ ನಡೆದಿದ್ದು, ಕರ್ನಾಟಕ ವಿದ್ಯುತ್ ನಿಗಮದ ಅಧಿಕಾರಿಗಳು ಸ್ಫೋಟಗೊಂಡ ಮಾಹಿತಿಯನ್ನು ಗೌಪ್ಯವಾಗಿಟ್ಟಿದ್ದರು.

    ಸ್ಫೋಟಗೊಂಡ ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ದೊಡ್ಡ ಅನಾಹುತ ತಪ್ಪಿಸಿದ್ದಾರೆ. ಈ ಹಿಂದೆ ಜೋಗಾದ ಮಹಾತ್ಮ ಗಾಂಧಿ ವಿದ್ಯುತ್‍ಗಾರದಲ್ಲಿ ಬೆಂಕಿ ಅನಾಹುತವಾಗಿ ಕೋಟಿಗಟ್ಟಲೆ ರೂ. ನಷ್ಟವಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದ್ದು, ಇದೇ ಮಾದರಿಯಲ್ಲಿ ಕಾಳಿ ವಿದ್ಯುತ್‍ಗಾರದಲ್ಲೂ ಅಗ್ನಿ ಅವಗಡ ನಡೆದಿದೆ.

  • ಆಕಸ್ಮಿಕ ಬೆಂಕಿ- ಕೆನರಾ ಬ್ಯಾಂಕ್ ಕಟ್ಟಡ ನಾಶ

    ಆಕಸ್ಮಿಕ ಬೆಂಕಿ- ಕೆನರಾ ಬ್ಯಾಂಕ್ ಕಟ್ಟಡ ನಾಶ

    ಮಂಡ್ಯ: ಆಕಸ್ಮಿಕ ಬೆಂಕಿ ತಗುಲಿ ಕೆನರಾ ಬ್ಯಾಂಕ್ ಕಟ್ಟಡ ಬೆಂಕಿಗೆ ಆಹುತಿಯಾಗಿರುವ ಘಟನೆ ಜಿಲ್ಲೆಯ ನಾಗಮಂಗಲ ತಾಲೂಕಿನ ಅರಣಿ ಗ್ರಾಮದಲ್ಲಿ ಜರುಗಿದೆ.

    ಶನಿವಾರ ಮಧ್ಯ ರಾತ್ರಿ ಆಕಸ್ಮಿಕವಾಗಿ ಬೆಂಕಿ ತಗುಲಿದ ಅರಣಿ ಶಾಖೆಯ ಕೆನರಾ ಬ್ಯಾಂಕ್ ಕಟ್ಟಡ ಬೆಂಕಿಯಿಂದ ಹೊತ್ತಿ ಉರಿದಿದೆ. ಕಟ್ಟಡಕ್ಕೆ ಬೆಂಕಿ ಬಿದ್ದ ಕಾರಣ ಬ್ಯಾಂಕ್‍ನಲ್ಲಿ ಇದ್ದ ಕಡತಗಳು ಹಾಗೂ ಪೀಠೋಪಕರಣಗಳು ಸುಟ್ಟು ಕರಕಲಾಗಿವೆ. ಅಲ್ಲದೇ ಹಣವೂ ಸುಟ್ಟು ಹೋಗಿದ್ಯಾ ಎಂದು ತಿಳಿದುಬಂದಿಲ್ಲ.

    ಈ ಬೆಂಕಿ ಅವಘಡ ಶಾರ್ಟ್ ಸರ್ಕ್ಯೂಟ್‍ನಿಂದ ಆಗಿರಬಹುದು ಎನ್ನಲಾಗುತ್ತಿದ್ದು, ಯಾವ ಕಾರಣಕ್ಕೆ ಬೆಂಕಿ ಕಾಣಿಸಿಕೊಂಡಿದೆ ಎಂದು ನಿಖರವಾಗಿ ತಿಳಿದುಬಂದಿಲ್ಲ. ಮಧ್ಯರಾತ್ರಿ ಬೆಂಕಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಬರಲು ಸಾಧ್ಯವಾಗಿಲ್ಲ. ನಂತರ ಬೆಂಕಿ ಹೊತ್ತಿಕೊಂಡ ವಿಷಯ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ.

    ಈ ವೇಳೆಗೆ ಬ್ಯಾಂಕ್ ಕಟ್ಟಡ ಶೇ, 75 ರಷ್ಟು ಹೊತ್ತಿ ಉರಿದಿದೆ. ಬೆಳ್ಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ  ಘಟನೆ ನಡೆದಿದೆ.

  • ಕಲ್ಕೆರೆಯಲ್ಲಿ ಟೆಕ್ಕಿ ನಾಪತ್ತೆ ಪ್ರಕರಣ – 2ನೇ ದಿನವೂ ಮುಂದುವರಿದ ಶೋಧಕಾರ್ಯ

    ಕಲ್ಕೆರೆಯಲ್ಲಿ ಟೆಕ್ಕಿ ನಾಪತ್ತೆ ಪ್ರಕರಣ – 2ನೇ ದಿನವೂ ಮುಂದುವರಿದ ಶೋಧಕಾರ್ಯ

    ಬೆಂಗಳೂರು: ಕಲ್ಕೆರೆ ಕೆರೆಯಲ್ಲಿ ಟೆಕ್ಕಿ ನಾಪತ್ತೆ ಹಿನ್ನೆಲೆಯಲ್ಲಿ ಇಂದು ಕೂಡ ಎನ್‌ಡಿಆರ್‌ಎಫ್‌ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಜಂಟಿಯಾಗಿ ಹುಡುಕಾಟ ಶುರುಮಾಡಿದ್ದಾರೆ.

    ಶನಿವಾರ ಬೆಳಗಿನ ಜಾವ 3 ಗಂಟೆಗೆ ಸಚಿನ್ ಮತ್ತು ಉಲ್ಲಾಸ್ ಇಬ್ಬರು ಟೆಕ್ಕಿಗಳು ಕಲ್ಕೆರೆಯ ಕೆರೆಯಲ್ಲಿ ಮಧ್ಯದ ಐಲ್ಯಾಂಡ್‍ಗೆ ಹೊರಟಿದ್ದರು. ಸುಮಾರು ನೂರು ಮೀಟರ್ ಕೆರೆಯ ಒಳಗೆ ಹೋಗುತ್ತಿದ್ದಂತೆ ಹುಟ್ಟು ಜಾರಿ ಬಿದ್ದು, ಬರಿ ಕೈಯಲ್ಲಿ ತೆಪ್ಪ ತಳ್ಳುವ ವೇಳೆ ಮುಗುಚಿ ಬಿದ್ದು ಇಬ್ಬರು ನೀರಲ್ಲಿ ಮುಳುಗಿದರು. ಇದನ್ನೂ ಓದಿ: ಕೆರೆಯಲ್ಲಿ ತೆಪ್ಪ ಮುಗುಚಿ ಟೆಕ್ಕಿ ಕಣ್ಮರೆ – ಪಾರ್ಟಿ ಅಮಲಿನಲ್ಲಿ ಮುಳುಗಿದ್ರು

    ಟೆಕ್ಕಿ ಉಲ್ಲಾಸ್ ಈಜಿ ದಡ ಸೇರಿದರೆ, ಮತ್ತೊಬ್ಬ ಟೆಕ್ಕಿ ಸಚಿನ್ ನೀರಿನಲ್ಲಿ ಮುಳುಗಿದರು. ವಿಷಯ ತಿಳಿದು ಸ್ಥಳಕ್ಕೆ ಎನ್‌ಡಿಆರ್‌ಎಫ್‌ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಜಂಟಿಯಾಗಿ ಶನಿವಾರ ಇಡೀ ದಿನ ಕಾರ್ಯಾಚರಣೆ ನಡೆಸಿದರು. ಸಂಜೆ ವೇಳೆ ಮುಗುಚಿ ಬಿದ್ದ ತೆಪ್ಪ ಪತ್ತೆಯಾಗಿತ್ತು. ಆದರೆ ಟೆಕ್ಕಿ ಸಚಿನ್ ಎಲ್ಲೂ ಪತ್ತೆಯಾಗಿರಲಿಲ್ಲ.

    ಕತ್ತಲಾದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿದ ಸಿಬ್ಬಂದಿ ಇಂದು ಬೆಳಗಿನ ಜಾವ 6 ಗಂಟೆಯಿಂದಲೇ ಶೋಧ ಕಾರ್ಯ ಮುಂದುವರೆಸಿದ್ದಾರೆ. ಇಡೀ ಕೆರೆಯಲ್ಲಿ ಹುಡುಕಾಟ ನಡೆದಿದ್ದು, ಇಲ್ಲಿವರೆಗೂ ಟೆಕ್ಕಿ ಸಚಿನ್ ಪತ್ತೆಯಾಗಿಲ್ಲ. ಇಂದೂ ಕೂಡ ಮುಳುಗು ತಜ್ಞರು ಕೆರೆಯಲ್ಲಿ ಇಳಿಯಲಿದ್ದು, ಹೈ ಕ್ವಾಲಿಟಿ ಕ್ಯಾಮೆರಾ ಬಳಸಿ ಕೆರೆಯಲ್ಲಿ ಶೋಧ ನಡೆಸಲಿದ್ದಾರೆ.

  • ಹೊತ್ತಿ ಉರಿದ ಭತ್ತದ ಹುಲ್ಲು- ನದಿಗೆ ಲಾರಿ ಇಳಿಸಿದ ಚಾಲಕ

    ಹೊತ್ತಿ ಉರಿದ ಭತ್ತದ ಹುಲ್ಲು- ನದಿಗೆ ಲಾರಿ ಇಳಿಸಿದ ಚಾಲಕ

    ಹಾಸನ: ಭತ್ತದ ಹುಲ್ಲು ತುಂಬಿಕೊಂಡು ಹೋಗುತ್ತಿದ್ದ ಲಾರಿಗೆ ವಿದ್ಯುತ್ ತಂತಿ ಸ್ಪರ್ಶವಾಗಿ ಹುಲ್ಲು ಹೊತ್ತಿ ಉರಿದಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದ ಘಟನೆ ಜಿಲ್ಲೆ ಅರಕಲಗೂಡು ತಾಲೂಕಿನ ಚೌರಗಲ್ ಬಳಿ ನಡೆದಿದೆ.

    ಚಾಲಕ ಲಾರಿಯಲ್ಲಿ ಭತ್ತದ ಹುಲ್ಲು ತುಂಬಿಕೊಂಡು ಬರುತ್ತಿದ್ದನು. ಆದರೆ ಚೌರಗಲ್ ಬಳಿ ವಿದ್ಯುತ್ ಸ್ಪರ್ಶದಿಂದ ಭತ್ತದ ಹುಲ್ಲು ಹೊತ್ತಿಕೊಂಡು ಧಗಧಗ ಉರಿಯಲಾರಂಭಿಸಿದೆ. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣ ಚಾಲಕನಿಗೆ ಬೆಂಕಿ ಹೊತ್ತಿರುವ ಬಗ್ಗೆ ತಿಳಿಸಿದ್ದಾರೆ. ತಕ್ಷಣ ಚಾಲಕ ಹೆಚ್ಚಿನ ಅನಾಹುತ ತಪ್ಪಿಸಲು ಲಾರಿಯನ್ನು ಸಮೀಪದಲ್ಲಿ ಹರಿಯುತ್ತಿದ್ದ ಹೇಮಾವತಿ ನದಿಗೆ ಇಳಿಸಿದ್ದಾನೆ.

    ನಂತರ ಚಾಲಕ ಲಾರಿಯಿಂದ ಜಿಗಿದು ದಡಕ್ಕೆ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಬಗ್ಗೆ ಮಾಹಿತಿ ತಿಳಿದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಚಾಲಕನ ಸಮಯ ಪ್ರಜ್ಞೆಯಿಂದ ಬೆಂಕಿ ಹೊತ್ತಿದ್ದ ಲಾರಿಯನ್ನು ಹೇಮಾವತಿ ನದಿಗೆ ಇಳಿಸಿದ್ದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ.

  • ಕೆರೆಯಲ್ಲಿ ತೆಪ್ಪ ಮುಗುಚಿ ಟೆಕ್ಕಿ ಕಣ್ಮರೆ – ಪಾರ್ಟಿ ಅಮಲಿನಲ್ಲಿ ಮುಳುಗಿದ್ರು

    ಕೆರೆಯಲ್ಲಿ ತೆಪ್ಪ ಮುಗುಚಿ ಟೆಕ್ಕಿ ಕಣ್ಮರೆ – ಪಾರ್ಟಿ ಅಮಲಿನಲ್ಲಿ ಮುಳುಗಿದ್ರು

    – ಶವಕ್ಕಾಗಿ ಕಲ್ಕೆರೆ ಕೆರೆಯಲ್ಲಿ ತೀವ್ರ ಶೋಧ
    – ವಿಹಾರಕ್ಕೆ ಹೋಗಿದ್ದ ಟೆಕ್ಕಿಗಳು

    ಬೆಂಗಳೂರು: ಸಿಲಿಕಾನ್ ಸಿಟಿಯ ರಾಮಮೂರ್ತಿನಗರದ ಕಲ್ಕೆರೆ ಕೆರೆಯಲ್ಲಿ ತೆಪ್ಪ ಮುಗುಚಿ ಟೆಕ್ಕಿಯೊಬ್ಬರು ಕಣ್ಮರೆಯಾಗಿರುವ ಘಟನೆ ನಡೆದಿದೆ.

    ಕೊಡಗು ವಿರಾಜಪೇಟೆ ಮೂಲದ ಸಚಿನ್ ಕಣ್ಮರೆಯಾಗಿರುವ ಟೆಕ್ಕಿ. ಸಚಿನ್ ಮತ್ತು ಆರ್‌ಟಿ ನಗರದ ಉಲ್ಲಾಸ್ ಇಬ್ಬರೂ ಟೆಕ್ಕಿಗಳಾಗಿದ್ದು, ಶುಕ್ರವಾರ ರಾತ್ರಿ ಕಲ್ಕೆರೆಯಲ್ಲಿ ಪಾರ್ಟಿ ಮಾಡಿದ್ದರು. ಮುಂಜಾನೆ ಸುಮಾರು 3 ಗಂಟೆಗೆ ಇಬ್ಬರು ಕೆಲ್ಕೆರೆ ಕೆರೆ ಏರಿ ಮೇಲೆ ಬಂದಿದ್ದರು. ಈ ವೇಳೆ ಕೆರೆ ಏರಿ ಮೇಲೆ ತೆಪ್ಪ ಕಂಡು ತೆಪ್ಪದಲ್ಲಿ ವಿಹಾರಕ್ಕೆ ಹೊರಟ್ಟಿದ್ದರು.

    ತೆಪ್ಪದಲ್ಲಿ ಹೋಗುವಾಗ ಹುಟ್ಟು ಜಾರಿ ನೀರಿಗೆ ಬಿದ್ದಿದೆ. ಈ ವೇಳೆ ಕೈಯಲ್ಲಿ ತೆಪ್ಪ ನಡೆಸುವಾಗ ತೆಪ್ಪ ಮಗುಚಿ ಇಬ್ಬರು ಟೆಕ್ಕಿಗಳು ಕೆರೆಗೆ ಬಿದ್ದಿದ್ದಾರೆ. ಟೆಕ್ಕಿ ಉಲ್ಲಾಸ ಈಜಿ ದಡ ಸೇರಿದ ಬದುಕುಳಿದ್ದಾರೆ. ಆದರೆ ಸಚಿನ್ ಮಾತ್ರ ಎಲ್ಲೂ ಪತ್ತೆಯಾಗಿಲ್ಲ. ತಕ್ಷಣ ಉಲ್ಲಾಸ್ ತನ್ನ ಅಣ್ಣನಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಬಂದು ಕಲ್ಕೆರೆ ಕೆರೆಯಲ್ಲಿ ಟೆಕ್ಕಿ ಸಚಿನ್‍ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆದರೆ ಮಧ್ಯಾಹ್ನನವಾದರೂ ಸಚಿನ್ ಪತ್ತೆಯಾಗಿಲ್ಲ.

    ಉಲ್ಲಾಸ್ ಬ್ಯಾಗ್ ಹಾಕಿಕೊಂಡಿದ್ದರು. ಹೀಗಾಗಿ ಬ್ಯಾಗ್ ಹಾಕಿದ್ದರಿಂದ ಸೇಫ್ ಆಗಿ ಉಲ್ಲಾಸ್ ದಡ ಸೇರಿದ್ದಾರೆ. ರಾಮಮೂರ್ತಿನಗರ ಠಾಣಾ ವ್ಯಾಪ್ತಿಯಲ್ಲಿ ಈ ನಡೆದ ಘಟನೆ ನಡೆದಿದೆ. ಸಚಿನ್ ಮಾನ್ಯತಾ ಟೆಕ್ ಪಾರ್ಕ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು. ಅಲ್ಲದೇ ಸಚಿನ್‍ಗೆ ಈಜು ಬರುತ್ತಿತ್ತು ಎಂದು ಹೇಳಲಾಗುತ್ತಿದೆ. ಆದರೆ ತೆಪ್ಪ ಮಗುಚಿದಾಗ ಈಜಿ ದಡ ತಲುಪಲು ವಿಫಲರಾಗಿದ್ದಾರೆ.

    ರಾತ್ರಿ ಸುಮಾರು 12 ಗಂಟೆಗೆ ಬೀಟ್ ಬಂದಿದ್ದೆ. ಬಳಿಕ ಮತ್ತೆ 3 ಗಂಟೆಗೆ ಬೀಟ್‍ಗೆ ಬಂದೆ. ಆದರೆ ಈ ವೇಳೆ ರಸ್ತೆ ಪಕ್ಕ ಕುಳಿತುಕೊಂಡು ಓರ್ವ ಅಳುತಿದ್ದರು. ಏನಾಯ್ತು ಅಂತ ಕೇಳಿದಾಗ ಕೆರೆಯಲ್ಲಿ ಮುಳುಗಿರುವ ಬಗ್ಗೆ ಹೇಳಿದರು. ರಾತ್ರಿ ಪಾರ್ಟಿ ಮಾಡೊಕೆ ಬಂದಿದ್ದಾರೆ. ಕುಡಿದು ಹೋದಾಗ ಈ ಘಟನೆ ಆಗಿದೆ. ಶುಕ್ರವಾರ ನಾನೊಬ್ಬನೇ ಇದ್ದೆ. ನಾನು ಬರುವ ವೇಳೆಗಾಗಲೇ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದರು. ಯಾರನ್ನೂ ಕೂಡ ಕೆರೆ ಒಳಗೆ ಬಿಡೋದಿಲ್ಲ. ಇವರು ಕುಡಿದು ಬಂದು ತೆಪ್ಪ ತೆಗೆದುಕೊಂಡು ಹೋಗಿದ್ದಾರೆ ಎಂದು ಕೆರೆಯ ಸೆಕ್ಯೂರಿಟಿ ರಾಜೇಶ್ ಹೇಳಿದ್ದಾನೆ.

    ಅಪರೂಪಕ್ಕೆ ಗೆಳೆಯರು ಭೇಟಿ:
    ಸಚಿನ್ ಮತ್ತು ಉಲ್ಲಾಸ್ ಇಬ್ಬರ ಅಪರೂಪಕ್ಕೆ ಭೇಟಿಯಾಗಿದ್ದರು. ಈ ಹಿಂದೆ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಬಳಿಕ ಇಬ್ಬರು ಬೇರೆ ಕಂಪನಿಗೆ ಕೆಲಸ ಬದಲಾಯಿಸಿದ್ದರು. ಅದರಂತೆ ಸಚಿನ್ ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ಉದ್ಯೋಗದಲ್ಲಿದ್ದರು. ವೀಕೆಂಡ್ ಹಿನ್ನೆಲೆಯಲ್ಲಿ ಶುಕ್ರವಾರ ಇಬ್ಬರು ಭೇಟಿಯಾಗಿದ್ದರು. ಈ ವೇಳೆ ಪಾರ್ಟಿ ಮಾಡಿದ್ದರು. ಪಾರ್ಟಿ ಮುಗಿಸಿಕೊಂಡು ಕೆರೆಯಲ್ಲಿ ವಿಹಾರ ಮಾಡುವುದಕ್ಕೆ ಇಬ್ಬರು ಬಂದಿದ್ದರು. ಆಗ ಸಚಿನ್ ಬಲವಂತ ಮಾಡಿ ಉಲ್ಲಾಸ್ ಕರೆತಂದಿದ್ದರು. ಈ ಹಿಂದೆ ಒಂದು ಬಾರಿ ಇದೇ ರೀತಿ ತೆಪ್ಪದಲ್ಲಿ ವಿಹಾರ ಹೋಗಿ ಬಂದಿದ್ದರು. ಅದೇ ರೀತಿ ರಾತ್ರಿ ತೆಪ್ಪದಲ್ಲಿ ವಿಹಾರ ಮಾಡಲು ಬಂದಿದ್ದರು. ಇಬ್ಬರು ಬಂದ ವೇಳೆ ಈ ಅವಘಡ ಸಂಭವಿದೆ.

    ಉಲ್ಲಾಸ್ ಹಾಗೂ ಸಚಿನ್ ಕೆರೆ ಮಧ್ಯದ ಐಲ್ಯಾಂಡ್‍ಗೆ ತೆರಳಲು ಮುಂದಾಗಿದ್ದರು. ಆದರೆ ಸಚಿನ್ ಹೆಚ್ಚು ಭಾರವಿದ್ದ, ಹೀಗಾಗಿ ಒಂದೇ ಕಡೆ ತೆಪ್ಪ ವಾಲಿತ್ತು. ಆದ್ದರಿಂದ ಕೆರೆ ಏರಿಯಿಂದ 100 ಮೀಟರ್ ತೆರಳುತ್ತಿದ್ದಂತೆ ತೆಪ್ಪ ಆಯ ತಪ್ಪಿದೆ. ಈ ವೇಳೆ ನೀರಿನಲ್ಲೇ ಹುಟ್ಟನ್ನು ಬಿಟ್ಟಿದ್ದಾರು. ಆಗ ತೆಪ್ಪದೊಳಗೆ ನೀರು ತುಂಬಿ ಮುಗುಚಿ ಬಿದ್ದಿತ್ತು. ಇಬ್ಬರು ನುರಿತ ಈಜಿಗಾರರಲ್ಲ, ಸಾಧಾರಣ ಈಜು ಕಲಿತಿದ್ದರು. ಸಚಿನ್ ಹೆಚ್ಚು ಭಾರ ಹಾಗೂ ಮದ್ಯಪಾನ ಮಾಡಿದ್ದರಿಂದ ಈಜಲಾಗದೇ ನೀರಿನಲ್ಲಿ ಮುಳುಗಿರೋ ಸಾಧ್ಯತೆ ಇದೆ ಎಂದು ಶಂಕಿಸಲಾಗುತ್ತಿದೆ.

    ವರ್ಷದ ಹಿಂದೆ ಮದುವೆ:
    ಉಲ್ಲಾಸ್ ಹಾಗೂ ಸಚಿನ್ ಇಬ್ಬರೂ ವರ್ಷದ ಹಿಂದೆ ಮದುವೆಯಾಗಿದ್ದರು. ಕಲ್ಕೆರೆಯ ಯುವತಿಯನ್ನು ಉಲ್ಲಾಸ್ ಮದುವೆಯಾಗಿದ್ದರು. ಅಲ್ಲದೇ ಉಲ್ಲಾಸ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾರಾಯಣಸ್ವಾಮಿಯ ಸಹೋದರ ಕೃಷ್ಣಪ್ಪರ ಅಳಿಯರಾಗಿದ್ದಾರೆ. ಉಲ್ಲಾಸ್ ಹೆಂಡತಿ, ಉಲ್ಲಾಸ್ ಮತ್ತು ಅವರ ಸ್ನೇಹಿತ ಕೆರೆ ಬಳಿ ಹೋಗಿದ್ದರಂತೆ. ಆದರೆ ತೆಪ್ಪ ಮಗುಚಿ ಸಚಿನ್ ಕಾಣಿಸುತ್ತಿಲ್ಲ ಎಂದು ಅಪ್ಪನ ಬಳಿ ವಿಚಾರ ಹೇಳಿದ್ದಾರೆ. ಕೂಡಲೇ ಉಲ್ಲಾಸ್ ಮಾವ ಕೃಷ್ಣಪ್ಪ ಮೀನುಗಾರರಿಗೆ ಫೋನ್ ಮಾಡಿ ಕೆರೆ ಬಳಿ ಬಂದಿದ್ದಾರೆ. ಕಾರಿನಲ್ಲಿ ಇಡೀ ಪ್ರದೇಶವನ್ನು ಒಂದು ರೌಂಡ್ ಬಂದಿದ್ದಾರೆ. ಸಚಿನ್ ಕಾಣದಾದಾಗ ಅವರ ಪತ್ನಿ ಮತ್ತು ಕುಟುಂಬಸ್ಥರಿಗೆ ಕರೆ ಮಾಡಿದ್ದಾರೆ. ಈ ಘಟನೆಯ ಹಿನ್ನೆಲೆಯನ್ನು ಉಲ್ಲಾಸ್ ಮಾವ ಕೃಷ್ಣಪ್ಪ ಸಂಪೂರ್ಣವಾಗಿ ವಿವರಿಸಿದ್ದಾರೆ.

  • ಗ್ರಾಮದೇವಿ ಜಾತ್ರೆಗೆ ಬಂದ ಯುವಕ ತುಂಗಭದ್ರಾ ನದಿಯ ಪಾಲಾದ

    ಗ್ರಾಮದೇವಿ ಜಾತ್ರೆಗೆ ಬಂದ ಯುವಕ ತುಂಗಭದ್ರಾ ನದಿಯ ಪಾಲಾದ

    ಹಾವೇರಿ: ಗ್ರಾಮದೇವತೆ ಜಾತ್ರೆಗೆ ಬಂದಿದ್ದ ಯುವಕನೋರ್ವ ಸ್ನಾನಕ್ಕೆಂದು ತುಂಗಭದ್ರಾ ನದಿಗೆ ಇಳಿದು ನೀರು ಪಾಲಾದ ಘಟನೆ ಹಾವೇರಿ ತಾಲೂಕಿನ ಹಾವನೂರು ಗ್ರಾಮದ ಬಳಿ ನಡೆದಿದೆ.

    ಮೃತ ಯುವಕನನ್ನ ಮಂಜುನಾಥ ಕಾಸಿಕೋವಿ(19) ಎಂದು ಗುರುತಿಸಲಾಗಿದೆ. ಮಂಜುನಾಥ ಮೂಲತಃ ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಸೂರಣಗಿ ಗ್ರಾಮದ ನಿವಾಸಿ ಎನ್ನಲಾಗಿದೆ. ಬುಧವಾರ ಹಾವನೂರು ಗ್ರಾಮದೇವತೆ ಜಾತ್ರೆಗೆ ಬಂದಿದ್ದ ಯುವಕ ಸ್ನಾನಕ್ಕೆಂದು ತುಂಗಭದ್ರಾ ನದಿಯಲ್ಲಿ ಇಳಿದಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಯುವಕನ ಮೃತದೇಹವನ್ನ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳೀಯರ ನೆರವಿನಿಂದ ಹೊರತಗೆದಿದ್ದಾರೆ.

    ಸ್ಥಳಕ್ಕೆ ಹಾವೇರಿ ತಹಶೀಲ್ದಾರ್ ಶಂಕರ್ ಹಾಗೂ ಗುತ್ತಲ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಗುತ್ತಲ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

  • ಕಾಲುವೆಗೆ ಟ್ರ್ಯಾಕ್ಟರ್ ಬಿದ್ದು ಇಬ್ಬರು ಸಾವನ್ನಪ್ಪಿರುವ ಶಂಕೆ

    ಕಾಲುವೆಗೆ ಟ್ರ್ಯಾಕ್ಟರ್ ಬಿದ್ದು ಇಬ್ಬರು ಸಾವನ್ನಪ್ಪಿರುವ ಶಂಕೆ

    ಬಾಗಲಕೋಟೆ: ನಿಯಂತ್ರಣ ತಪ್ಪಿ ಘಟಪ್ರಭಾ ಎಡದಂಡೆ ಕಾಲುವೆಗೆ ಟ್ರ್ಯಾಕ್ಟರ್ ಎಂಜಿನ್ ಬಿದ್ದು, ಇಬ್ಬರು ಕಾಲುವೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆಂಬ ಶಂಕೆ ಜಿಲ್ಲೆ ಮುಧೋಳ ತಾಲೂಕಿನ ಕುಳಲಿ ಗ್ರಾಮದ ಬಳಿ ವ್ಯಕ್ತವಾಗಿದೆ.

    ಶಿವರುದ್ರಪ್ಪ ಪೋಳ (55) ಮತ್ತು ಪೈಗಂಬರ್ ಲಾಡಕನ್ (25) ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ. ಎಂಜಿನ್‍ನಲ್ಲಿ ಹೊರಟಿದ್ದ ಮೂವರು ಕಾಲುವೆಗೆ ಬಿದ್ದಾರೆ. ಅವರಲ್ಲಿ ಇಬ್ಬರು ಮುಳುಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಆದರೆ ಕಾಲುವೆಯಲ್ಲಿ ಬಿದ್ದ ಮೂವರಲ್ಲಿ  ಶಂಕ್ರಪ್ಪ ಕಾಲುವೆಯಿಂದ ಪಾರಾಗಿದ್ದಾರೆ.

    ಭಾನುವಾರ ತಡರಾತ್ರಿ ಹೊಲಕ್ಕೆ ಹೋಗಿ ಬರುವ ವೇಳೆ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಕಾಲುವೆಗೆ ಬಿದ್ದಿದೆ ಎನ್ನಲಾಗಿದೆ. ರಾತ್ರಿ ಈ ಘಟನೆ ಡೆದಿದರೂ ಇದೂವರೆಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿಲ್ಲ ಎಂದು ಆರೋಪಿಸಲಾಗುತ್ತಿದೆ.

    ಮಹಾಲಿಂಗಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಸ್ಥಳೀಯರು ಕಾಲುವೆ ಪಕ್ಕದಲ್ಲಿನ ಬಾರಿ ಗಿಡಕ್ಕೆ ಹಗ್ಗ ಕಟ್ಟಿ ಕಾಲುವೆಯಿಂದ ಶವ ಹುಡುಕಾಟ ನಡೆಸಿದ್ದಾರೆ. ಸ್ಥಳದಲ್ಲಿ ಕುಳಲಿ ಗ್ರಾಮಸ್ಥರು ಜಮಾಯಿಸಿದ್ದು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

  • ಹೆದ್ದಾರಿಯಲ್ಲೇ ಹೊತ್ತಿ ಉರಿದ 39 ಮಂದಿ ಪ್ರಯಾಣಿಕರಿದ್ದ ಬಸ್

    ಹೆದ್ದಾರಿಯಲ್ಲೇ ಹೊತ್ತಿ ಉರಿದ 39 ಮಂದಿ ಪ್ರಯಾಣಿಕರಿದ್ದ ಬಸ್

    – ತಪ್ಪಿದ ದೊಡ್ಡ ಅನಾಹುತ

    ಚಿತ್ರದುರ್ಗ/ಬೆಳಗಾವಿ: ಕೆಎಸ್ಆರ್‌ಟಿಸಿ ಕರೋನಾ ಬಸ್‍ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಬಸ್ ಹೊತ್ತಿ ಉರಿದ ಘಟನೆ ಜಿಲ್ಲೆ ಯ ಹಿರಿಯೂರು ತಾಲೂಕಿನ ಗಿಡ್ಡೋಬನಹಳ್ಳಿ ಬಳಿ ನಡೆದಿದೆ.

    ಬಸ್ ಬೆಳಗಾವಿಯಿಂದ ಬೆಂಗಳೂರಿಗೆ ತೆರಳುತ್ತಿತ್ತು. ಆದರೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯಿಂದ ಸುಟ್ಟು ಕರಕಲಾದ ವಸ್ತುಗಳ ದುರ್ವಾಸನೆ ಹರಡಿದ್ದರಿಂದ ಪ್ರಯಾಣಿಕರು ತಕ್ಷಣ ಚಾಲಕನಿಗೆ ತಿಳಿಸಿದ್ದಾರೆ. ವಿಷಯ ತಿಳಿದ ಸಿಬ್ಬಂದಿ ಬಸ್ ನಿಲ್ಲಿಸಿ ಪರಿಶೀಲಿಸಿದ ಸಂದರ್ಭದಲ್ಲಿ ಬೆಂಕಿ ಹೊತ್ತಿಕೊಂಡಿರುವುದು ಗಮನಕ್ಕೆ ಬಂದಿದೆ.

    ತಕ್ಷಣ ಪ್ರಯಾಣಿಕರು ಬಸ್ಸಿನಿಂದ ಕೆಳಗೆ ಇಳಿದಿದ್ದಾರೆ. ಹೀಗಾಗಿ ಬೆಂಕಿ ಕಾಣಿಸಿಕೊಂಡ ಕ್ಷಣಾರ್ಧದಲ್ಲೇ ರಾಷ್ಟ್ರೀಯ ಹೆದ್ದಾರಿ 4ರಲ್ಲಿಯೇ ಬಸ್ ಸಂಪೂರ್ಣ ಹೊತ್ತಿ ಉರಿದಿದೆ. ಆದರೆ ಅದೃಷ್ಟವಶಾತ್ ಬಸ್ಸಿನಲ್ಲಿದ್ದ 39 ಜನ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಈ ವಿಷಯ ತಿಳಿದಾಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿನಂದಿಸಲು ಹರಸಾಹಸ ಪಟ್ಟಿದ್ದಾರೆ. ಆದರೂ ಸಹ ಬಸ್ ಸಂಪೂರ್ಣವಾಗಿ ಸುಟ್ಟುಹೋಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಎಸ್‍ಪಿ ಅರುಣ್ ಹಾಗೂ ಹಿರಿಯೂರು ತಹಶೀಲ್ದಾರ್ ಸತ್ಯನಾರಾಯಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಐಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಅಚ್ಚರಿ ವಿಚಾರವೆಂದರೆ ಗಿಡ್ಡೋಬನಹಳ್ಳಿ ಹಾಗೂ ಆತಿಥ್ಯ ಹೋಟೆಲ್, ಟೋಲ್ ಗೇಟ್ ಮದ್ಯೆ ಇರುವ ಅಂತರದಲ್ಲೇ ಈ ರೀತಿಯ ಬೆಂಕಿಯ ಅವಘಡ ಎರಡನೇ ಬಾರಿಗೆ ನಡೆದಿದೆ. ಆದರೆ ಕಳೆದ ಬಾರಿ ಅವಘಡವಾದಾಗ ಐದು ಜನ ಖಾಸಗಿ ಬಸ್ಸಿನಲ್ಲಿ ಸಜೀವ ದಹನವಾಗಿದ್ದರು. ಈ ಬಾರಿ ಅದೃಷ್ಟವಶಾತ್ ಯಾವುದೇ ಸಾವು ಸಂಭವಿಸಿಲ್ಲ.

  • ದೇವಿ ಜಾತ್ರೆಗೆ ಬಂದ ಯುವಕ ಹೊಂಡದಲ್ಲಿ ಮುಳುಗಿ ಸಾವು

    ದೇವಿ ಜಾತ್ರೆಗೆ ಬಂದ ಯುವಕ ಹೊಂಡದಲ್ಲಿ ಮುಳುಗಿ ಸಾವು

    ಬಾಗಲಕೋಟೆ: ಸ್ನೇಹಿತರೊಂದಿಗೆ ಬನಶಂಕರಿ ದೇವಿ ಜಾತ್ರೆಗೆ ಆಗಮಿಸಿದ್ದ ಯುವಕ ಸ್ನಾನ ಮಾಡಲು ಹೋಗಿ ಹೊಂಡದಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಬದಾಮಿ ಪಟ್ಟಣದಲ್ಲಿ ನಡೆದಿದೆ.

    ಶಿವಕುಮಾರ್ ಗರಡ್ಡಿ (24) ಮೃತ ಯುವಕ. ಪಟ್ಟಣದ ಬನಶಂಕರಿ ದೇವಸ್ಥಾನದ ಎದುರಿನಲ್ಲಿರುವ ಹರಿದ್ರಾ ತೀರ್ಥ ಹೊಂಡದಲ್ಲಿ ಈ ಘಟನೆ ನಡೆದಿದೆ. ಮೃತ ಶಿವಕುಮಾರ್ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಹೊಸಳ್ಳಿ ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ.

    ಶಿವಕುಮಾರ್ ಸ್ನೇಹಿತರೊಂದಿಗೆ ಬನಶಂಕರಿ ದೇವಿಯ ಜಾತ್ರೆಗಾಗಿ ಬದಾಮಿಗೆ ಆಗಮಿಸಿದ್ದನು. ಇಂದು ಬೆಳಗ್ಗೆ ಸ್ನಾನ ಮಾಡಲು ಹೊಂಡಕ್ಕೆ ಇಳಿದಿದ್ದ. ಆಗ ಹೊಂಡದಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಈ ವಿಷಯ ತಿಳಿದ ಬದಾಮಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ  ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಅಗ್ನಿಶಾಮಕ ದಳ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾರೆ.

    ಬದಾಮಿ ಪಟ್ಟಣದ ಸುಪ್ರಸಿದ್ಧ ಬನಶಂಕರಿ ದೇವಿ ಜಾತ್ರೆ ಇದೇ 10ರಂದು ಆರಂಭವಾಗಿದೆ. ಒಂದು ತಿಂಗಳ ಕಾಲ ನಡೆಯುವ ದೇವಿಯ ಜಾತ್ರೆಗೆ ರಾಜ್ಯದ ನಾನಾ ಭಾಗದಿಂದ ಭಕ್ತರು ಇಲ್ಲಿಗೆ ಬರುತ್ತಾರೆ. ಜಾತ್ರೆಯಲ್ಲಿ ಸಂಜೆ ನಂತರ ಮನರಂಜನಾ ಕಾರ್ಯಕ್ರಮಗಳು ಇರುತ್ತವೆ. ಹೀಗಾಗಿ ಜಾತ್ರೆಗೆ ಆಗಮಿಸಿದ ಜನರು ನಾಟಕ ನೋಡಿಕೊಂಡು ಎಂಜಾಯ್ ಮಾಡಿ ಹಿಂದಿರುಗುತ್ತಾರೆ.

    ಅಲ್ಲದೇ ಬನಶಂಕರಿ ದೇವಿಯ ಮಹಿಮೆ ಅಪಾರ ಇರುವ ಕಾರಣ ದೂರದ ಊರುಗಳಿಂದ ದೇವಿ ದರ್ಶನಕ್ಕೆ ಬರುತ್ತಾರೆ. ಮೊದಲು ಹರಿದ್ರಾ ತೀರ್ಥ ಪುಷ್ಕರಣಿ ಹೊಂಡದಲ್ಲಿ ಮಿಂದೆದ್ದು, ನಂತರ ದರ್ಶನ ಪಡೆಯುವುದು ವಾಡಿಕೆಯಾಗಿದೆ. ಹೀಗಾಗಿ ನಾಲ್ಕೈದು ಸ್ನೇಹಿತರೊಂದಿಗೆ ಬಂದಿದ್ದ ಶಿವಕುಮಾರ್, ದೇವಿ ದರ್ಶನಕ್ಕೂ ಮುಂಚೆ ಪುಷ್ಕರ್ಣಿ ಹೊಂಡದಲ್ಲಿ ಸ್ನಾನಮಾಡಲು ಹೋದಾಗ ಈ ದುರ್ಘಟನೆ ನಡೆದಿದೆ. ಇದರಿಂದ ಭಕ್ತರು ಆತಂಕಗೊಂಡಿದ್ದು, ಸದ್ಯಕ್ಕೆ ಭಕ್ತರಿಗೆ ಹೊಂಡದಲ್ಲಿ ಇಳಿಯಲು ಅನುಮತಿ ನಿರಾಕರಿಸಲಾಗಿದೆ. ಶವ ಪತ್ತೆಯ ಕಾರ್ಯಚರಣೆಯ ನಂತರ ಭಕ್ತಾದಿಗಳ ಸ್ನಾನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ದೇವಸ್ಥಾನ ಆಡಳಿತ ಮಂಡಳಿಯವರು ಹಾಗೂ ಪೊಲೀಸರು ಹೇಳುತ್ತಿದ್ದಾರೆ.