Tag: ಅಗ್ನಿಶಾಮಕ ದಳ

  • ಆಸ್ಪತ್ರೆಯಲ್ಲಿ ಅಗ್ನಿ ಅವಘಡ – 8 ರೋಗಿಗಳು ಸಜೀವ ದಹನ

    ಆಸ್ಪತ್ರೆಯಲ್ಲಿ ಅಗ್ನಿ ಅವಘಡ – 8 ರೋಗಿಗಳು ಸಜೀವ ದಹನ

    – ಪ್ರಧಾನಿ ಮೋದಿ ಸಂತಾಪ

    ಗಾಂಧಿನಗರ: ಗುಜರಾತ್‍ನ ಅಹಮದಾಬಾದ್‍ನ ಶ್ರೇಯ್ ಆಸ್ಪತ್ರೆಯಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ ಪರಿಣಾಮ ಎಂಟು ಮಂದಿ ರೋಗಿಗಳು ಸಜೀವ ದಹನ ಆಗಿದ್ದಾರೆ.

    ಅಹಮದಾಬಾದ್‍ನ ನವರಂಗಪುರ ಪ್ರದೇಶದಲ್ಲಿರುವ ಶ್ರೇಯ್ ಆಸ್ಪತ್ರೆಯ ನಾಲ್ಕನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇಂದು ಮುಂಜಾನೆ ಸುಮಾರು 3 ಗಂಟೆಗೆ ಬೆಂಕಿ ಕಾಣಿಸಿಕೊಂಡಿದೆ. ಆಸ್ಪತ್ರೆಯಲ್ಲಿ ಸಂಭವಿಸಿದ ಬೆಂಕಿಯ ಅವಘಡದ ನಂತರ 35 ರೋಗಿಗಳನ್ನು ಇತರ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂದಿದೆ.

    ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಎಂಟು ಅಗ್ನಿಶಾಮಕ ವಾಹನ ಸ್ಥಳಕ್ಕೆ ಬಂದಿದ್ದು, ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೂ ಈ ಅಗ್ನಿ ಅವಘಡದಿಂದ ಎಂಟು ರೋಗಿಗಳು ಸಜೀವ ದಹನ ಆಗಿದ್ದಾರೆ. ಈ ಆಸ್ಪತ್ರೆ ಕೋವಿಡ್ 19 ಆಸ್ಪತ್ರೆಯಾಗಿ ಮಾರ್ಪಡಾಗಿತ್ತು.

    ಅಗ್ನಿ ಅವಘಡದ ಬಗ್ಗೆ ತಿಳಿದ ಪ್ರಧಾನಿ ನರೇಂದ್ರ ಮೋದಿ ಟ್ವಿಟ್ಟರ್ ಮೂಲಕ ಸಂತಾಪ ಸೂಚಿಸಿದ್ದಾರೆ. “ಅಹಮದಾವಾದ್‍ನ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ಅವಘಡದಿಂದ ತುಂಬಾ ನೋವಾಗಿದೆ. ಶೀಘ್ರದಲ್ಲಿಯೇ ಗಾಯಗೊಂಡವರು ಗುಣಮುಖರಾಗಲಿ. ಮೃತರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿಯನ್ನು ಆ ದೇವರು ನೀಡಲಿ” ಎಂದು ಸಂತಾಪ ಸೂಚಿಸಿದ್ದಾರೆ.

    ಅಲ್ಲದೇ ಗುಜರಾತ್ ಸಿಎಂ ವಿಜಯ್ ರೂಪಾನಿ ಮತ್ತು ಅಹಮದಾಬಾದ್ ಮೇಯರ್ ಬಿಜಾಲ್ ಪಟೇಲ್ ಅವರೊಂದಿಗೆ ಮಾತನಾಡಿದ್ದೇನೆ. ಹೀಗಾಗಿ ಮೃತರ ಕುಟುಂಬ ಮತ್ತು ಗಾಯಗೊಂಡಿರುವವರಿಗೆ ಸಹಾಯ ಮಾಡಲಾಗುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

  • ಸಿಲಿಕಾನ್ ಸಿಟಿ ಪೊಲೀಸರನ್ನು ಬೆಂಬಿಡದೆ ಕಾಡುತ್ತಿದೆ ಕೊರೊನಾ- ಇಂದು ನಾಲ್ವರಿಗೆ ಪಾಸಿಟಿವ್

    ಸಿಲಿಕಾನ್ ಸಿಟಿ ಪೊಲೀಸರನ್ನು ಬೆಂಬಿಡದೆ ಕಾಡುತ್ತಿದೆ ಕೊರೊನಾ- ಇಂದು ನಾಲ್ವರಿಗೆ ಪಾಸಿಟಿವ್

    – ಉಪ್ಪಾರಪೇಟೆ ಠಾಣೆ ಪಿಎಸ್‍ಐಗೆ ಸೋಂಕು
    – ಅಧಿಕಾರಿಗೆ ಸೋಂಕು, ಅಗ್ನಿಶಾಮಕ ಕೇಂದ್ರ ಕಚೇರಿ ಸೀಲ್‍ಡೌನ್

    ಬೆಂಗಳೂರು: ಸಿಲಿಕಾನ್ ಸಿಟಿ ಪೊಲೀಸರನ್ನು ಕೊರೊನಾ ಬೆಂಬಿಡದೆ ಕಾಡುತ್ತಿದ್ದು, ಪೊಲೀಸರ ಜೊತೆಗೆ ಇದೀಗ ಅಗ್ನಿಶಾಮಕ ಸಿಬ್ಬಂದಿಗೂ ವ್ಯಾಪಿಸುತ್ತಿದೆ. ಇಂದು ಇಬ್ಬರು ಪೊಲೀಸರು ಹಾಗೂ ಇಬ್ಬರು ಅಗ್ನಿಶಾಮಕ ದಳದ ಸಿಬ್ಬಂದಿಗೆ ಸೋಮಕು ತಗುಲಿದೆ.

    ಉಪ್ಪಾರಪೇಟೆ ಪೊಲೀಸ್ ಠಾಣೆಯ ಪಿಎಸ್‍ಐಗೆ ಹಾಗೂ ಹಲಸೂರು ಗೇಟ್ ಠಾಣೆಯ ಪೊಲೀಸ್ ಕಾನ್‍ಸ್ಟೇಬಲ್‍ಗೆ ಸೋಂಕು ದೃಢಪಟ್ಟಿದೆ. ಈ ಹಿಂದೆ ಉಪ್ಪಾರಪೇಟೆ ಪೊಲೀಸ್ ಠಾಣೆಯ ಸಿಬ್ಬಂದಿಗೆ ಪಾಸಿಟಿವ್ ಬಂದ ಹಿನ್ನೆಲೆ ಸೀಲ್ ಡೌನ್ ಮಾಡಲಾಗಿತ್ತು. ಇಂದು ಪಿಎಸ್‍ಐಗೆ ಪಾಸಿಟಿವ್ ಬಂದಿದ್ದು, ಸಂಪರ್ಕದಲ್ಲಿದ್ದ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಉಪ್ಪಾರಪೇಟೆ ಪೊಲೀಸ್ ಠಾಣೆಯನ್ನು ಮತ್ತೆ ಸೀಲ್ ಡೌನ್ ಮಾಡಲಾಗಿದೆ.

    ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ಕಾನ್‍ಸ್ಟೇಬಲ್‍ಗೆ ಸೋಂಕು ದೃಢಪಟ್ಟಿದೆ. ಇತ್ತ ಅಗ್ನಿಶಾಮಕ ದಳದ ಆರ್‍ಎಫ್‍ಓ ವಿದ್ಯಾರಣ್ಯಪುರದ ಚಾಮುಂಡೇಶ್ವರಿ ಲೇಔಟ್ ನಿವಾಸಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಪೋಸ್ಟಿಂಗ್ ಹಾಕದ ಹಿನ್ನೆಲೆ ಆರ್‍ಎಫ್‍ಓ ಮನೆಯಲ್ಲೇ ಇದ್ದರು. ವರ್ಗಾವಣೆ ಬಳಿಕ ಪೋಸ್ಟಿಂಗ್ ನೀಡಿರಲಿಲ್ಲ. ಹೀಗಾಗಿ ಅಧಿಕಾರಿ ಪೋಸ್ಟಿಂಗ್‍ಗೆ ಕಾಯುತಿದ್ದರು. ಇದೀಗ ಸೋಂಕು ತಗುಲಿದ ಹಿನ್ನೆಲೆ ಮನೆಯಲ್ಲಿದ್ದ ಕುಟುಂಬಸ್ಥರನಹ್ನು ಕ್ವಾರಂಟೈನ್ ಮಾಡಲಾಗಿದೆ.

    ಅಗ್ನಿಶಾಮಕ ದಳ ಅಧಿಕಾರಿಯೊಬ್ಬರಿಗೆ ಪಾಸಿಟಿವ್ ಬಂದ ಹಿನ್ನೆಲೆ ಹಲಸೂರು ಕೆರೆ ಬಳಿ ಇರುವ ರಾಜ್ಯ ಅಗ್ನಿಶಾಮಕದಳದ ಕೇಂದ್ರ ಕಚೇರಿಯನ್ನು ಸಹ ಸೀಲ್ ಡೌನ್ ಮಾಡಲಾಗಿದೆ. ಸಿಬ್ಬಂದಿ ಸೀಲ್‍ಡೌನ್ ಮಾಡಿದ್ದು, ಸ್ಯಾನಿಟೈಸಿಂಗ್ ಮಾಡಲಾಗುತ್ತಿದೆ.

    ಸಿಲಿಕಾನ್ ಸಿಟಿಯಲ್ಲಿ ಈ ವರೆಗೆ ಒಟ್ಟು 145 ಜನ ಪೊಲೀಸರಿಗೆ ಕೊರೊನಾ ಸೋಂಕು ತಗುಲಿದ್ದು, ಇನ್ನೂ 133 ಸಕ್ರಿಯ ಪ್ರಕರಣಗಳಿವೆ. ಅಲ್ಲದೆ ಈ ವರೆಗೆ ಕೊರೊನಾಗೆ 05 ಜನ ಪೊಲೀಸ್ ಸಿಬ್ಬಂದಿ ಬಲಿಯಾಗಿದ್ದಾರೆ.

  • ದೆಹಲಿ ಸ್ಲಂನಲ್ಲಿ ಅಗ್ನಿ ಅವಘಡ- 1,500 ಗುಡಿಸಲು ಭಸ್ಮ

    ದೆಹಲಿ ಸ್ಲಂನಲ್ಲಿ ಅಗ್ನಿ ಅವಘಡ- 1,500 ಗುಡಿಸಲು ಭಸ್ಮ

    ನವದೆಹಲಿ: ಆಗ್ನೇಯ ದೆಹಲಿಯ ತುಘಲಕಾಬಾದ್ ಪ್ರದೇಶದ ಕೊಳೆಗೇರಿಗಳಲ್ಲಿ ಸೋಮವಾರ ರಾತ್ರಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಇದರಿಂದ ಸುಮಾರು 1,500 ಗುಡಿಸಲುಗಳು ಸುಟ್ಟು ಭಸ್ಮವಾಗಿದ್ದು, ನೂರಾರು ಜನರು ನಿರಾಶ್ರಿತರಾಗಿದ್ದಾರೆ.

    ನಮಗೆ ಬೆಂಕಿ ಕಾಣಿಸಿಕೊಂಡ ಬಗ್ಗೆ ರಾತ್ರಿ 12.50ಕ್ಕೆ ಕರೆ ಬಂದಿದ್ದು, 28 ಅಗ್ನಿಶಾಮಕ ವಾಹನವನ್ನು ಸ್ಥಳಕ್ಕೆ ರವಾನಿಸಲಾಗಿದೆ ಎಂದು ಅಗ್ನಿಶಾಮಕ ಇಲಾಖೆ ಅಧಿಕಾರಿ ತಿಳಿಸಿದ್ದಾರೆ. ಹೆಚ್ಚಿನ ಜನರು ನಿದ್ರೆಯಲ್ಲಿ ಇದ್ದಾಗ ಈ ಅವಘಡ ಸಂಭವಿಸಿದೆ. ಆದರೆ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಹೇಳಲಾಗಿದೆ.

    ಈ ಬಗ್ಗೆ ಮಾಹಿತಿ ನೀಡಿರುವ ದೆಹಲಿ ದಕ್ಷಿಣದ ಉಪ ಪೊಲೀಸ್ ಆಯುಕ್ತ (ಡಿಸಿಪಿ) ರಾಜೇಂದ್ರ ಪ್ರಸಾದ್ ಮೀನಾ, ತುಘಲಕಾಬಾದ್‍ನ ಕೊಳೆಗೇರಿಗಳಲ್ಲಿ ನಸುಕಿನ ಜಾವ 1 ಗಂಟೆ ಸುಮಾರಿಗೆ ಬೆಂಕಿಯ ಕಾಣಿಸಿಕೊಂಡ ಬಗ್ಗೆ ನಮಗೆ ಮಾಹಿತಿ ಬಂದಿತ್ತು. ತಕ್ಷಣ ನಮ್ಮ ಎಲ್ಲ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಹೋಗಿದ್ದೆವು. ಸುಮಾರು 1,000-1,200 ಗುಡಿಸಲುಗಳು ಬೆಂಕಿಗೆ ಆಹುತಿಯಾಗಿವೆ ಎಂದು ಹೇಳಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

    ಸ್ಥಳೀಯರ ಪ್ರಕಾರ ಅಗ್ನಿ ಅವಘಡ ಹೇಗೆ ಸಂಭವಿಸಿತ್ತು ಎಂಬದರ ಬಗ್ಗೆ ಮಾಹಿತಿ ಇಲ್ಲ. ಆದರೆ ಬೆಂಕಿ ಕಾಣಿಸಿಕೊಂಡ ನಂತರ ಹೆಚ್ಚಿನ ಜನರು ತಮ್ಮ ಗುಡಿಸಲುಗಳಿಂದ ಹೊರಬಂದಿದ್ದಾರೆ. ಆದ್ದರಿಂದ ಯಾವುದೇ ಸಾವು ಸಂಭವಿಸಿಲ್ಲ. ಅಗ್ನಿಶಾಮಕ ದಳ ಮುಂಜಾನೆ 3:40ರ ಸುಮಾರಿಗೆ ಬೆಂಕಿಯನ್ನು ನಂದಿಸಿದ್ದು, ಇನ್ನೂ ಹೆಚ್ಚಿನ ಕಾರ್ಯಾಚರಣೆ ನಡೆಯುತ್ತಿದೆ.

  • ಈಜಲು ನದಿಗೆ ಧುಮುಕಿದ ಯುವಕ ನಾಪತ್ತೆ

    ಈಜಲು ನದಿಗೆ ಧುಮುಕಿದ ಯುವಕ ನಾಪತ್ತೆ

    – ಮೀನಿನ ಬಲೆಗೆ ಸಿಲುಕಿ ಸಾವನ್ನಪ್ಪಿರುವ ಶಂಕೆ

    ಯಾದಗಿರಿ: ಕೃಷ್ಣಾ ನದಿಯಲ್ಲಿ ಈಜಲು ತೆರಳಿದ್ದ ಮೂವರು ಯುವಕರ ಪೈಕಿ ಓರ್ವ ನಾಪತ್ತೆಯಾಗಿರುವ ಆಘಾತಕಾರಿ ಘಟನೆ ನಡೆದಿದೆ.

    ಜಿಲ್ಲೆಯ ಸುರಪುರ ತಾಲೂಕಿನ ಶೇಳ್ಳಗಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಚಂದಣ್ಣ ಗೊಂಡಿಕಾರ (35) ನಾಪತ್ತೆಯಾಗಿರುವ ಯುವಕ. ಜಿಲ್ಲೆಯಲ್ಲಿ ಬಿಸಿಲಿನ ತಾಪ ಹೆಚ್ಚಿರುವ ಕಾರಣ ಇಬ್ಬರು ಸ್ನೇಹಿತರೊಂದಿಗೆ ಚಂದಣ್ಣ ಗ್ರಾಮದ ಹತ್ತಿರದ ಕೃಷ್ಣಾನದಿಗೆ ಈಜಲು ತೆರಳಿದ್ದ. ಮೂವರಲ್ಲಿ ಇಬ್ಬರು ಈಜಿ ದಡ ಸೇರಿದ್ದಾರೆ. ಚಂದಣ್ಣ ನದಿಯಿಂದ ಹೊರ ಬರದೆ ನಾಪತ್ತೆಯಾಗಿದ್ದಾನೆ.

    ಶುಕ್ರವಾರ ಮಧ್ಯಾಹ್ನ ಘಟನೆ ನಡೆದಿದ್ದು, ನದಿಯಲ್ಲಿ ಮೀನಿನ ಬಲೆಗೆ ಸಿಲುಕಿ ಚಂದ್ರಣ್ಣ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ನಾಪತ್ತೆಯಾಗಿರುವ ಚಂದ್ರಣ್ಣನಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಗ್ರಾಮಸ್ಥರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಸುರಪುರ ಪೊಲೀಸ್ ಠಾಣೆ ವ್ಯಾಪ್ತಿ ಈ ಪ್ರಕರಣ ನಡೆದಿದೆ.

  • ರಾತ್ರಿ ಎಸಿ ಹಾಕೊಂಡು ಮಲಗಿದ್ದ ದಂಪತಿ ಸಾವು

    ರಾತ್ರಿ ಎಸಿ ಹಾಕೊಂಡು ಮಲಗಿದ್ದ ದಂಪತಿ ಸಾವು

    – ಕಿಟಿಕಿಯ ಕಬ್ಬಿಣದ ಗ್ರಿಲ್ ಕತ್ತರಿಸಿ ಒಳಗೆ ಎಂಟ್ರಿ

    ಲಕ್ನೋ: ಸೆಕೆ ಎಂದು ದಂಪತಿ ಬೆಡ್‍ರೂಮಿನಲ್ಲಿ ಎಸಿ ಹಾಕಿಕೊಂಡು ಮಲಗಿದ್ದರು. ಆದರೆ ಎಸಿಯಲ್ಲಿ ಶಾರ್ಟ್ ಸರ್ಕ್ಯೂಟ್‍ನಿಂದ  ಉಸಿರುಗಟ್ಟಿ ದಂಪತಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯಲ್ಲಿ ನಡೆದಿದೆ.

    ಅಜಯ್ ಮಿಶ್ರಾ (48) ಮತ್ತು ಪತ್ನಿ ನಿಶಾ ಮಿಶ್ರಾ (45) ಮೃತ ದಂಪತಿ. ಇವರು ತುಂಡ್ಲಾದಲ್ಲಿರುವ ಮೊಹಲ್ಲಾ ಭಗವಾನ್ ಆಶ್ರಮ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಈ ದಂಪತಿ ಬೆಡ್‍ರೂಮಿನಲ್ಲಿ ರಾತ್ರಿ ಮಲಗುವಾಗ ಎಸಿ ಆನ್ ಮಾಡಿಕೊಂಡು ಮಲಗಿದ್ದಾರೆ. ಆದರೆ ದಂಪತಿ ನಿದ್ದೆ ಮಾಡುತ್ತಿದ್ದಾಗ ಎಸಿಯಲ್ಲಿ ಶಾರ್ಟ್ ಸರ್ಕ್ಯೂಟ್‍ ಆಗಿದೆ. ಇದರಿಂದ ದಂಪತಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಶುಕ್ರವಾರ ಬೆಳಗ್ಗೆ ಈ ಘಟನೆ ಬೆಳಕಿಗೆ ಬಂದಿದ್ದು, ಸ್ಥಳೀಯರು ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದ ಪೊಲೀಸರು ಅಗ್ನಿಶಾಮಕ ಸಿಬ್ಬಂದಿ ಜೊತೆ ಬಂದಿದ್ದಾರೆ.

    ಬಾಗಿಲು ಲಾಕ್ ಆಗಿದ್ದರಿಂದ ದಂಪತಿ ವಾಸವಿದ್ದ ಮನೆಯ ಕಿಟಿಕಿಗೆ ಅಳವಡಿಸಿದ್ದ ಕಬ್ಬಿಣದ ಗ್ರಿಲ್ ಕತ್ತರಿಸಿ ಒಳಗೆ ಹೋಗಿ ದಂಪತಿಯ ಮೃತದೇಹವನ್ನು ಹೊರ ತೆಗೆದುಕೊಂಡು ಬಂದಿದ್ದಾರೆ. ಸದ್ಯಕ್ಕೆ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.

  • ಕುಡುಕರ ಎಡವಟ್ಟಿನಿಂದ ಮೂರ್ನಾಲ್ಕು ಬಣವೆಗಳಿಗೆ ಬೆಂಕಿ

    ಕುಡುಕರ ಎಡವಟ್ಟಿನಿಂದ ಮೂರ್ನಾಲ್ಕು ಬಣವೆಗಳಿಗೆ ಬೆಂಕಿ

    – ಎಮ್ಮೆಗಳಿಗೂ ಹೊತ್ತಿದ ಜ್ವಾಲಾಮುಖಿ

    ಬಳ್ಳಾರಿ: ಲಾಕ್‍ಡೌನ್ ಸಡಿಲಿಕೆ ಮಾಡಿ ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟಿದ್ದೆ ತಡ ಮದ್ಯಪ್ರಿಯರು ಮದ್ಯದಂಗಡಿ ಮುಂದೆ ಕ್ಯೂ ನಿಂತು ಖರೀದಿಸುತ್ತಿದ್ದಾರೆ. ಅಲ್ಲದೆ ಸಿಕ್ಕಿಸಿಕ್ಕ ಸ್ಥಳದಲ್ಲಿ ಮದ್ಯಪಾನ ಮಾಡುತ್ತಿದ್ದಾರೆ. ಇದೀಗ ಕುಡುಕರು ಮಾಡಿದ ಎಡವಟ್ಟಿನಿಂದಾಗಿ ಮೂರು ಬಣವೆಗಳು ಹೊತ್ತಿ ಉರಿದಿರುವ ಘಟನೆ ಬಳ್ಳಾರಿ ನಗರದ ಕಪ್ಪಗಲ್ಲು ರಸ್ತೆಯಲ್ಲಿ ನಡೆದಿದೆ.

    ಕಪ್ಪಗಲ್ಲು ರಸ್ತೆಯ ಡ್ರೀಮ್ ವರ್ಲ್ಡ್ ಶಾಲೆಯ ಹಿಂಭಾಗದ ಹೊಲದಲ್ಲಿರುವ ಮೂರು ಬಣವೆಗಳಿಗೆ ಬೆಂಕಿ ಬಿದ್ದಿದೆ. ಅಲ್ಲದೇ ಪಕ್ಕದಲ್ಲಿದ್ದ ಎಮ್ಮೆಗಳ ಮೈಗೂ ಬೆಂಕಿ ಹೊತ್ತಿಕೊಂಡಿದೆ. ಸುರೇಶ್ ಎಂಬವರ ಮೂರು ಬಣವೆಗಳಿಗೆ ಬೆಂಕಿಬಿದ್ದಿದೆ. ಜೊತೆಗೆ ದನದ ಕೊಟ್ಟಿಗೆಯಲ್ಲಿದ್ದ 12 ಎಮ್ಮೆಗಳ ಪೈಕಿ ಎರಡು ಎಮ್ಮೆಗಳ ಮೈಗೆ ಬೆಂಕಿ ಹೊತ್ತಿಕೊಂಡಿದ್ದು, ಸಣ್ಣಪುಟ್ಟ ಗಾಯಗಳಾಗಿವೆ.

    ಇಂದು ಬೆಳಗಿನ ಜಾವ ಈ ಘಟನೆ ನಡೆದಿದ್ದು, ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದವರು ಬಂದು ಬೆಂಕಿ ನಂದಿಸಲು ಹರಸಾಹಸಪಟ್ಟರು. ಮದ್ಯ ಅಮಲಿನಲ್ಲಿದ್ದವರು ಸಿಗರೇಟ್ ತುಂಡು ಬೀಸಾಡಿದ್ದರಿಂದ ಈ ಬೆಂಕಿ ತಗುಲಿದೆ. ಲಾಕ್‍ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಜನರು ಹೊಲ, ಗದ್ದೆ ಎಲ್ಲೆಂದರಲ್ಲಿ ಕುಳಿತು ಎಣ್ಣೆ ಹೊಡೆಯುವುದು ಹೆಚ್ಚಾಗಿದೆ. ಹೀಗಾಗಿ ವಿಪರೀತ ಮದ್ಯ ಸೇವನೆ ಮಾಡಿ ಸಿಗರೇಟ್‍ನಿಂದ ಬಣವೆಗಳಿಗೆ ಬೆಂಕಿ ಹೊತ್ತಿದೆ ಎನ್ನಲಾಗಿದೆ.

  • 17ನೇ ಮಹಡಿಯಿಂದ ಸಾಯಲು ಹೊರಟಿದ್ದ ಯುವತಿ ಬಚಾವ್

    17ನೇ ಮಹಡಿಯಿಂದ ಸಾಯಲು ಹೊರಟಿದ್ದ ಯುವತಿ ಬಚಾವ್

    – ಅಗ್ನಿಶಾಮಕ ಸಿಬ್ಬಂದಿಯಿಂದ ಮೆಚ್ಚುವಂತಹ ಕಾರ್ಯ

    ಬೆಂಗಳೂರು: 17ನೇ ಮಹಡಿಯಿಂದ ಸಾಯಲು ಹೊರಟಿದ್ದ ಯುವತಿಯನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಸ್ನೇಹಾ (ಹೆಸರು ಬದಲಾಯಿಸಲಾಗಿದೆ) ಎಂಬಾಕೆಯನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಶುಕ್ರವಾರ ಮಧ್ಯರಾತ್ರಿ ಸುಮಾರು 1 ಗಂಟೆಗೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಎಲೆಕ್ಟ್ರಾನಿಕ್ ಸಿಟಿಯ ಅಗ್ನಿಶಾಮಕ ಸಿಬ್ಬಂದಿಯ ವರ್ಗ ಯುವತಿಯನ್ನು ರಕ್ಷಣೆ ಮಾಡಿದ್ದಾರೆ.

    ನಡೆದಿದ್ದೇನು?
    ಸ್ನೇಹಾ ದೆಹಲಿ ಮೂಲದ ಯುವತಿಯಾಗಿದ್ದು, ಎಲೆಕ್ಟ್ರಾನಿಕ್ ಸಿಟಿಯ ಪ್ರೆಸ್ಟೀಜ್ ಸನ್‍ರೈಸ್ ಅಪಾರ್ಟ್‌ಮೆಂಟ್‌ನ ತನ್ನ ಸಂಬಂಧಿಕರ ಮನೆಗೆ ಬಂದಿದ್ದಳು. ಲಾಕ್‍ಡೌನ್ ಇದ್ದಿದ್ದರಿಂದ ದೆಹಲಿಗೆ ವಾಪಸ್ ಹೋಗಿಲ್ಲ. ಯುವತಿ ಕೆಲ ವರ್ಷಗಳ ಹಿಂದೆ ತನ್ನ ತಾಯಿಯನ್ನು ಕಳೆದುಕೊಂಡಿದ್ದಳು. ಆದರೆ ತನ್ನ ಸಂಬಂಧಿಯ ಮನೆಯಲ್ಲಿ ತಾಯಿಯ ವರ್ಷದ ಕಾರ್ಯ ನಡೆದಿತ್ತು. ಇದರಿಂದ ಸ್ನೇಹಾ ನೊಂದಿದ್ದಳು.

    ಇದರಿಂದ ಸ್ನೇಹಾ ಮಾನಸಿಕ ಖಿನ್ನತೆಗೊಳಾಗಿದ್ದು, ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧಾರ ಮಾಡಿದ್ದಳು. ಇದಕ್ಕಾಗಿ ಶುಕ್ರವಾರ ಮಧ್ಯರಾತ್ರಿ ಅಪಾರ್ಟ್‌ಮೆಂಟ್‌ನ 17ನೇ ಮಹಡಿಗೆ ಏರಿ ಕುಳಿತ್ತಿದ್ದಳು. ನಂತರ ಭಯದಲ್ಲಿ ಕಿಟಕಿಯ ಕೆಳ ಭಾಗದಲ್ಲಿ ಹೆದರಿ ಕುಳಿತ್ತಿದ್ದಳು. ಇದನ್ನು ಅಪಾರ್ಟ್‌ಮೆಂಟ್‌ನ ಅಸೋಸಿಯೇಷನ್ ವ್ಯಕ್ತಿ ಗಮನಿಸಿದ್ದಾರೆ. ತಕ್ಷಣ ಅವರು ಅಗ್ನಿಶಾಮಕ ಸಿಬ್ಬಂದಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ.

    ಮಾಹಿತಿ ತಿಳಿದ ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದಿದ್ದು, ಅವರ ತಾಳ್ಮೆ ಹಾಗೂ ಬುದ್ಧಿವಂತಿಕೆಯಿಂದ ಯುವತಿ ಬಚಾವ್ ಆಗಿದ್ದಾಳೆ. ಅಗ್ನಿಶಾಮಕ ಸಿಬ್ಬಂದಿಯ ಮಾತಿಗೆ ಸ್ನೇಹಾ ಸ್ಪಂದಿಸಿ ಕಿಟಕಿಯಿಂದ ಮೇಲೆ ಬಂದಿದ್ದಾಳೆ. ಈ ಮೂಲಕ ಯುವತಿಯನ್ನು ರಕ್ಷಿಸುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

  • ನರಗುಂದದಲ್ಲಿ ಮತ್ತೆ ಭೂಕುಸಿತ – 15 ಅಡಿ ಆಳದಲ್ಲಿ ಸಿಲುಕಿ ನರಳಾಡಿದ ಎತ್ತು

    ನರಗುಂದದಲ್ಲಿ ಮತ್ತೆ ಭೂಕುಸಿತ – 15 ಅಡಿ ಆಳದಲ್ಲಿ ಸಿಲುಕಿ ನರಳಾಡಿದ ಎತ್ತು

    ಗದಗ: ರೈತರೊಬ್ಬರ ಮನೆ ಮುಂದಿನ ರಸ್ತೆ ಪಕ್ಕದಲ್ಲಿ ಎತ್ತು ಕಟ್ಟಿದ್ದ ಸ್ಥಳದಲ್ಲಿಯೇ ಭೂಕುಸಿತ ಸಂಭವಿಸಿ, 15 ಅಡಿ ಆಳದಲ್ಲಿ ಎತ್ತು ಸಿಲುಕಿಕೊಂಡು ಒದ್ದಾಗಿದ ಘಟನೆ ಜಿಲ್ಲೆಯ ನರಗುಂದ ಪಟ್ಟಣದ ದಂಡಾಪೂರ ಮಸೀದಿ ಬಳಿ ನಡೆದಿದೆ.

    ನರಗುಂದ ನಿವಾಸಿ ಸಿದ್ದಪ್ಪ ಕುರಿ ಅವರಗೆ ಸೇರಿದ ಎತ್ತು ಭೂಕುಸಿತದಲ್ಲಿ ಸಿಲುಕಿಕೊಂಡಿತ್ತು. ಸುಮಾರು 15 ಅಡಿಯ ಆಳದವರೆಗೂ ಮಣ್ಣು ಕುಸಿದಿದ್ದು, ಎತ್ತು ಗುಂಡಿಯಲ್ಲಿ ಸಿಲುಕಿಕೊಂಡು ನರಳಾಡಿದೆ. ಎತ್ತು ಕೂಗುತ್ತಿದ್ದ ಶಬ್ಧ ಕೇಳಿ ಹೊರಗೆ ಬಂದ ರೈತ, ಭೂಕುಸಿತ ನೋಡಿ ದಿಗ್ಭ್ರಾಂತರಾಗಿದ್ದಾರೆ. ನಂತರ ಅಗ್ನಿಶಾಮಕದಳ ಸಿಬ್ಬಂದಿ ಹಾಗೂ ಸ್ಥಳಿಯರು ಭೂಕುಸಿತದ ಗುಂಡಿಯಲ್ಲಿ ಸಿಲುಕಿದ್ದ ಎತ್ತನ್ನು ಮೇಲೆಕ್ಕೆ ಕರೆತರಲು ಹರಸಾಹಸ ಪಟ್ಟಿದ್ದಾರೆ.

    ಘಟನೆ ನಡೆದ ಒಂದು ಗಂಟೆ ನಂತರ ಜೆಸಿಬಿ ಬಳಸಿಕೊಂಡು ಎತ್ತನ್ನು ರಕ್ಷಣೆ ಮಾಡಲಾಯಿತು. ಸ್ಥಳೀಯರು, ಅಗ್ನಿಶಾಮಕದಳ ಸಿಬ್ಬಂದಿ, ಪುರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಒಟ್ಟಾಗಿ ಕಾರ್ಯಾಚರಣೆ ನಡೆಸಿ ಎತ್ತನ್ನು ರಕ್ಷಣೆ ಮಾಡಿದರು. ನರಗುಂದ ಪಟ್ಟಣದಲ್ಲಿ ಪದೇ ಪದೇ ಭೂಕುಸಿತವಾಗುತ್ತಿದ್ದು, ಸ್ಥಳೀಯರಲ್ಲಿ ಸಾಕಷ್ಟು ಆತಂಕ ಮೂಡಿಸಿದೆ.

  • ಕರ್ಫ್ಯೂ ಪಾಲಿಸಿದರೆ ಮಾತ್ರ ವೈರಾಣು ಹರಡುವುದನ್ನು ನಿಯಂತ್ರಿಸಬಹುದು: ಜಗದೀಶ್ ಶೆಟ್ಟರ್

    ಕರ್ಫ್ಯೂ ಪಾಲಿಸಿದರೆ ಮಾತ್ರ ವೈರಾಣು ಹರಡುವುದನ್ನು ನಿಯಂತ್ರಿಸಬಹುದು: ಜಗದೀಶ್ ಶೆಟ್ಟರ್

    ಹುಬ್ಬಳ್ಳಿ: ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿರುವ 21 ದಿನಗಳ ಕರ್ಫ್ಯೂಗೆ ಸಾರ್ವಜನಿಕರು ಬೆಂಬಲಿಸಬೇಕು. ಸ್ವಯಂ ನಿಯಂತ್ರಣವನ್ನು ಹೇರಿಕೊಂಡು ಅನಗತ್ಯವಾಗಿ ಮನೆಯಿಂದ ಹೊರಬರದೆ ವೈರಾಣು ಹರಡುವುದನ್ನು ನಿಯಂತ್ರಿಸಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಮನವಿ ಮಾಡಿಕೊಂಡಿದ್ದಾರೆ.

    ಹುಬ್ಬಳ್ಳಿಯ ಹಳೆ ಬಸ್ ನಿಲ್ದಾಣದಲ್ಲಿ ಅಗ್ನಿಶಾಮಕದಳದಿಂದ ನಡೆಸಲಾದ ಡಿಸ್‍ಇನ್ಫೆಕ್ಷನ್ ಸ್ವಚ್ಛತಾ ಕಾರ್ಯ ವೀಕ್ಷಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಅಕ್ಷರಶಃ ಕರ್ಫ್ಯೂವನ್ನು ಪಾಲಿಸಿದಾಗ ಮಾತ್ರ ವೈರಾಣು ಹರಡುವುದನ್ನು ನಿಯಂತ್ರಿಸಬಹುದು. ಈ ಮೂಲಕ ನಾವು ವೈರಾಣುವಿನಿಂದ ಹರಡುವ ಸಾಂಕ್ರಾಮಿಕ ರೋಗದ ವಿರುದ್ಧ ಹೊರಾಟ ನಡೆಸಬಹುದು. ಯಾವುದೇ ರೀತಿಯ ಅಲಕ್ಷ್ಯ ಸಲ್ಲದು. ವೈಯಕ್ತಿಕ, ಕುಟುಂಬ ಹಾಗೂ ದೇಶದ ಹಿತದೃಷ್ಟಿಯಿಂದ ಇದನ್ನು ಮಾಡುವುದು ಅಗತ್ಯವಾಗಿದೆ. ಪ್ರಧಾನ ಮಂತ್ರಿಗಳು ಹೇಳಿದಂತೆ ನಾವು 21 ದಿನ ನಡೆದುಕೊಳ್ಳದಿದ್ದರೆ, 21 ವರ್ಷಗಳ ಕಾಲ ಹಿಂದೆ ಹೋಗುತ್ತೇವೆ. ವೈರಾಣುವಿನ ಹರಡುವಿಕೆ ಮೂರನೆ ಹಂತ ತಲುಪಿದರೆ ದೇಶಕ್ಕೆ ದೊಡ್ಡ ಗಂಡಾತರ ಒದಗಿ ಬರುತ್ತದೆ. ಆದರಿಂದ ಜನರು ಪ್ರಜ್ಞಾವಂತಿಕೆಯಿಂದ ವರ್ತಿಸಬೇಕು ಎಂದು ಕರೆ ನೀಡಿದರು.

    ಅಗ್ನಿಶಾಮಕ ಇಲಾಖೆಯಿಂದ ಹುಬ್ಬಳ್ಳಿ ಹಾಗೂ ಧಾರವಾಡ ನಗರಗಳಲ್ಲಿ ಪ್ರತ್ಯೇಕವಾಗಿ ಅಗ್ನಿಶಾಮಕ ವಾಹನಗಳನ್ನು ಬಳಸಿ ದೊಡ್ಡ ಪ್ರಮಾಣದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುತ್ತಿದೆ. ಸೋಡಿಯಂ ಹೈಪೋಕ್ಲೋರೈಡ್ ಮಿಶ್ರಿತ ದ್ರಾವಣವನ್ನು ಸಿಂಪಡಿಸುವುದರಿಂದ ವೈರಾಣು ಹಾಗೂ ಬ್ಯಾಕ್ಟೀರಿಯಾಗಳಿಂದ ಹರಡುವ ಕಾಯಿಲೆಗಳನ್ನು ನಿಯಂತ್ರಿಸಬಹುದಾಗಿದೆ. ಧಾರವಾಡ ಜಿಲ್ಲಾಡಳಿತ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಈ ನಿಟ್ಟಿನಲ್ಲಿ ಉತ್ತಮ ಕಾರ್ಯನಿರ್ವಹಿಸುತ್ತಿದೆ ಎಂದು ಶ್ಲಾಘಿಸಿದರು.

    ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ದೀಪಾ ಚೋಳನ್, ಹುಬ್ಬಳ್ಳಿ-ಧಾರವಾಡ ಪಾಲಿಕೆ ಆಯುಕ್ತ ಡಾ.ಸುರೇಶ್ ಇಟ್ನಾಳ್, ಮುಖ್ಯ ಅಗ್ನಿಶಾಮಕ ಅಧಿಕಾರಿ ಈಶ್ವರನಾಯ್ಕ, ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಶ್ರೀಕಾಂತ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಚಂದ್ರಶೇಕರ್, ಹುಬ್ಬಳ್ಳಿ ಶಹರ ತಹಶೀಲ್ದಾರ್ ಶಶಿಧರ್ ಮಾಡ್ಯಾಳ, ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರ್ ಪ್ರಕಾಶ್ ನಾಸಿ ಸೇರಿದಂತೆ ಇತರೆ ಅಗ್ನಿ ಶಾಮಕ ಸಿಬ್ಬಂದಿ ಉಪಸ್ಥಿತರಿದ್ದರು.

  • ಜಾತ್ರೆಗೆ ಬಂದವ ಕರೆಯಲ್ಲಿ ಈಜಲು ಹೋಗಿ ಮಸಣ ಸೇರಿದ

    ಜಾತ್ರೆಗೆ ಬಂದವ ಕರೆಯಲ್ಲಿ ಈಜಲು ಹೋಗಿ ಮಸಣ ಸೇರಿದ

    ಬೆಳಗಾವಿ(ಚಿಕ್ಕೋಡಿ): ಜಾತ್ರೆಯ ಅಂಗವಾಗಿ ಅಜ್ಜಿಯ ಮನೆಗೆ ಬಂದಿದ್ದ ಯುವಕ ಕೆರೆಯಲ್ಲಿ ಈಜಲು ಹೋಗಿ ನೀರುಪಾಲಾದ ದುರ್ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಾಡವಾಡಿ ಗ್ರಾಮದಲ್ಲಿ ನಡೆದಿದೆ.

    ಹುಕ್ಕೇರಿ ತಾಲೂಕಿನ ಕಣಗಲಾ ಗ್ರಾಮದ ಯುವಕ ಮದುಕರ ಮಾಳಗಿ(17) ಕಳೆದ ಎರಡು ದಿನದ ಹಿಂದೆ ಅಜ್ಜಿಯ ಊರಾದ ಮಾವನೂರ ಗ್ರಾಮಕ್ಕೆ ಜಾತ್ರೆಯ ನಿಮಿತ್ಯ ಬಂದಿದ್ದನು. ಮುಂಜಾನೆ ಸ್ನೇಹಿತರೊಡನೆ ಪಕ್ಕದ ಬಾಡವಾಡಿ ಗ್ರಾಮದ ಕೆರೆಗೆ ಸ್ನಾನಕ್ಕೆ ತೆರೆಳಿದ್ದನು. ಸ್ನೇಹಿತರು ಈಜುವುದನ್ನು ನೋಡಿ ತಾನು ಈಜಲು ಹೋಗಿದ್ದ ಯುವಕ ಈಜು ಬಾರದೆ ಕೆರೆಯಲ್ಲಿ ಮುಳುಗಿ ಪ್ರಾಣ ಬಿಟ್ಟಿದ್ದಾನೆ.

    ಯುವಕ ಮುಳುಗಿರುವುದನ್ನು ಕಂಡ ಸ್ಥಳೀಯರು ಕೂಡಲೇ ಅಗ್ನಿ ಶಾಮಕ ದಳ ಸಿಬ್ಬಂದಿಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕೆರೆಯಲ್ಲಿ ಮುಳುಗಿದ್ದ ಯುವಕನ ರಕ್ಷಣಾ ಕಾರ್ಯಾಚರಣೆಗೆ ಮುಂದಾದರು. ಆದರೆ 2 ದಿನ ಶೋಧದ ಬಳಿಕ ಇಂದು ಮಧ್ಯಾಹ್ನ ಯುವಕನ ಮೃತದೇಹ ಪತ್ತೆಯಾಗಿದ್ದು, ಕೆರೆಯಿಂದ ಶವ ಹೊರತೆಗೆಯಲಾಗಿದೆ. ಈ ಸಂಬಂಧ ಚಿಕ್ಕೋಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.