Tag: ಅಗ್ನಿಶಾಮಕ ದಳ

  • ಮಂಜಿನ ನಗರಿಯಲ್ಲಿ ಹೊತ್ತಿ ಉರಿದ ಕುರುಚಲು ಕಾಡು

    ಮಂಜಿನ ನಗರಿಯಲ್ಲಿ ಹೊತ್ತಿ ಉರಿದ ಕುರುಚಲು ಕಾಡು

    ಮಡಿಕೇರಿ: ಮಂಜಿನ ನಗರಿ ಮಡಿಕೇರಿಯಲ್ಲಿ ವಿದ್ಯುತ್ ಟ್ರಾನ್ಸ್‌ಫರ್ಮರ್ ನಲ್ಲಿ ಉಂಟಾದ ಶಾರ್ಟ್ ಸಕ್ರ್ಯೂಟ್ ನ ಕಿಡಿ ಬೆಂಕಿಯಿಂದಾಗಿ ಕುರುಚಲು ಕಾಡು ಹೊತ್ತಿ ಉರಿದಿರುವ ಘಟನೆ ನಡೆದಿದೆ.

    ವಿದ್ಯುತ್ ಟ್ರಾನ್ಸ್‌ಫರ್ಮರ್ ಶಾರ್ಟ್ ಸಕ್ರ್ಯೂಟ್ ಉಂಟಾಗಿದೆ. ಆಗ ಕಿಡಿ ಬೆಂಕಿ ಎಕರೆಯಷ್ಟು ಕುರುಚಲು ಕಾಡು ಸುಟ್ಟು ಭಸ್ಮವಾಗಿದೆ. ಮಡಿಕೇರಿ ನಗರದ ಪ್ರಸಿದ್ಧ ನೆಹರು ಮಂಟಪದ ಸಮೀಪದಲ್ಲಿ ಬೆಂಕಿ ಹೊತ್ತಿ ಉರಿದಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದ್ದಾರೆ.

    ಶಾರ್ಟ್ ಸಕ್ರ್ಯೂಟ್ ನಿಂದ ಉಂಟಾದ ಬೆಂಕಿ ಕಿಡಿ ಕೆಳಗೆ ಬಿದ್ದಿದ್ದು, ಬಿಲಿಸಿನಿಂದ ಒಣಗಿದ್ದ ಹುಲ್ಲಿಗೆ ಬೆಂಕಿಯ ಹೊತ್ತಿ ಉರಿದಿದೆ. ಜೊತೆಗೆ ಭಾರೀ ಪ್ರಮಾಣದ ಗಾಳಿ ಬೀಸಿದ್ದರಿಂದ ಬೆಂಕಿಯ ಕೆನ್ನಾಲಿಗೆ ಕ್ಷಣಾರ್ಧದಲ್ಲಿ ವ್ಯಾಪಿಸಿದೆ. ಬೆಂಕಿ ಜೋರಾಗುತ್ತಿದ್ದರಂತೆ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬರುವಷ್ಟರಲ್ಲೇ ಎಕರೆಯಷ್ಟು ಪ್ರದೇಶದ ಕಿರುಚಲು ಅರಣ್ಯ ಸುಟ್ಟು ಭಸ್ಮವಾಗಿದೆ.

     

  • ಆಕಸ್ಮಿಕ ಬೆಂಕಿ ತಗುಲಿ ನಾಲ್ಕು ಲೋಡ್ ಹುಲ್ಲಿನ ರಾಶಿ ಭಸ್ಮ

    ಆಕಸ್ಮಿಕ ಬೆಂಕಿ ತಗುಲಿ ನಾಲ್ಕು ಲೋಡ್ ಹುಲ್ಲಿನ ರಾಶಿ ಭಸ್ಮ

    ಚಿಕ್ಕಬಳ್ಳಾಪುರ: ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ನಾಲ್ಕು ಲೋಡ್ ರಾಗಿ ಹುಲ್ಲಿನ ರಾಶಿ ಸುಟ್ಟು ಭಸ್ಮವಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಹಾಡೋನಹಳ್ಳಿ ಬಸ್ ನಿಲ್ದಾಣದ ಬಳಿ ಸಂಭವಿಸಿದೆ.

    ಗ್ರಾಮದ ಚೌಡಣ್ಣ ಎಂಬವರಿಗೆ ಸೇರಿದ ರಾಗಿ ಹುಲ್ಲಿನ ರಾಶಿಗೆ ಬೆಂಕಿ ತಗುಲಿದ್ದು, ಘಟನೆಯಲ್ಲಿ ಸಾವಿರಾರು ಮೌಲ್ಯದ ಹುಲ್ಲು ಬೆಂಕಿಗೆ ಆಹುತಿಯಾಗಿದೆ. ಬೆಂಕಿಯ ಕೆನ್ನಾಲಿಗೆ ಪೂರ್ತಿ ಹುಲ್ಲು ಸುಟ್ಟು ಭಸ್ಮವಾಗಿರುವ ಕಾರಣ ರೈತ ಚೌಡಣ್ಣ ಅವರು ಸಾಕಿರುವ ಹಸುಗಳಿಗೆ ಬೇರೆ ಹುಲ್ಲನ್ನು ಖರೀದಿ ಮಾಡಬೇಕಾದ ಅನಿರ್ವಾರ್ಯತೆ ಎದುರಾಗಿದೆ.

    ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸೇರಿ ಬೆಂಕಿ ನಂದಿಸಲು ಯಶಸ್ವಿಯಾಗಿದ್ದಾರೆ. ದೊಡ್ಡಬಳ್ಳಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಬೆಂಕಿ ತಗುಲಲು ಕಾರಣ ಏನೆಂದು ಪೊಲೀಸರ ತನಿಖೆಯಿಂದ ಹೊರಬರಬೇಕಾಗಿದೆ.

  • ಯುಜಿಡಿ ಕಾಮಗಾರಿ ಗುಂಡಿಯಲ್ಲಿ ಬಿದ್ದು ನರಳಾಡಿದ ಮೂಕ ಪ್ರಾಣಿ

    ಯುಜಿಡಿ ಕಾಮಗಾರಿ ಗುಂಡಿಯಲ್ಲಿ ಬಿದ್ದು ನರಳಾಡಿದ ಮೂಕ ಪ್ರಾಣಿ

    ಗದಗ: ಯುಜಿಡಿ ಕಾಮಗಾರಿಯ ಗುಂಡಿಯಲ್ಲಿ ಬಿದ್ದು ಗೂಳಿಯೊಂದು ನರಳಾಡಿದ ಘಟನೆ ಗದಗ ಜಿಲ್ಲೆಯ ಪುಟ್ಟರಾಜ ಗವಾಯಿಗಳ ವೃತ್ತದ ಬಳಿ ಕಂಡು ಬಂದಿದೆ. ಜಂಗಳಿ ಗೂಳಿಯೊಂದು ತಡರಾತ್ರಿನೇ ಈ ಗುಂಡಿನಲ್ಲಿ ಬಿದ್ದಿದೆ ಎಂದು ಹೇಳಲಾಗುತ್ತಿದೆ.

    ಗದಗ-ಬೆಟಗೇರಿ ಅವಳಿ ನಗರದಲ್ಲಿ ಅಮೃತ ಸಿಟಿ ಯೋಜನೆಯಡಿ ಯುಜಿಡಿ ಕಾಮಗಾರಿ ನಡೆಯುತ್ತಿದೆ. ಆದರೆ ಈ ಕಾಮಗಾರಿ ಆಮೆಗತಿನಲ್ಲಿ ಸಾಗುತ್ತಿದೆ. ಜೊತೆಗೆ ಹತ್ತಾರು ಅಡಿ ಆಳದ ಗುಂಡಿಯ ಪಕ್ಕ ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳಲ್ಲದ ಕಾರಣ ನಗರಸಭೆ ಅಧಿಕಾರಿಗಳು ಹಾಗೂ ಕಾಮಗಾರಿ ಗುತ್ತಿಗೆದಾರರ ನಿರ್ಲಕ್ಷ್ಯ ವಿರುದ್ಧ ಸಾರ್ವಜನಿಕರು ಇದೀಗ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಇಕ್ಕಟ್ಟಾದ ಗುಂಡಿಯೊಳಗೆ ಹರಿವಿನಲ್ಲಿ ಬಿದ್ದ ಗೂಳಿಯೊಂದು ಮಲಗಲೂ ಆಗದೇ, ತಿರುಗಲೂ ಆಗದೇ, ಮೇಲೆ ಬರಲೂ ಆಗದೆ ನರಳಾಡಿದೆ. ಬೆಳಗ್ಗೆ ಕೆಲಸಕ್ಕೆ ಹೋಗುವ ದಾರಿ ಹೋಕರು ಈ ಮೂಕ ಪ್ರಾಣಿಯ ರೋಧನೆ ಕೇಳಿ, ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ನಂತರ ಸ್ಥಳಕ್ಕೆ ಬಂದ 112 ಪೊಲೀಸ್ ಸಿಬ್ಬಂದಿ, ಅಗ್ನಿಶಾಮಕ ದಳ, ನಗರಸಭೆ ಸಿಬ್ಬಂದಿ ಕಾರ್ಯಾಚರಣೆಯಿಂದ ಗೂಳಿಯ ರಕ್ಷಣೆ ಮಾಡಲಾಯಿತು.

    ಅವಳಿ ನಗರದ ಅನೇಕ ಕಡೆಗಳಲ್ಲಿ ಹೀಗೆ ಸಾಕಷ್ಟು ಗುಂಡಿಗಳಿದ್ದು, ಸಾಕಷ್ಟು ಅವಾಂತರಗಳು ಸಂಭವಿಸಿವೆ. ಅಧಿಕಾರಿಗಳು ಮಾತ್ರ ನಮಗೆ ಸಂಬಂಧವೇ ಇಲ್ಲ ಎನ್ನುವ ರೀತಿ ವರ್ತಿಸುತ್ತಿದ್ದಾರೆ ಎಂಬ ಆಕ್ರೋಶ ಜನರದ್ದಾಗಿದೆ. ಈ ವಿಚಾರವಾಗಿ ಜನ ರೊಚ್ಚಿಗೇಳುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.

  • ಕೆಮಿಕಲ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ – ರಾತ್ರಿಯಿಡೀ ಕಾರ್ಯಾಚರಣೆ ನಡೆದ್ರೂ ಆರದ ಜ್ವಾಲೆ

    ಕೆಮಿಕಲ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ – ರಾತ್ರಿಯಿಡೀ ಕಾರ್ಯಾಚರಣೆ ನಡೆದ್ರೂ ಆರದ ಜ್ವಾಲೆ

    – ವಾಹನಗಳು ಧಗಧಗ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿರುವ ಹೊಸಗುಡ್ಡದಹಳ್ಳಿಯಲ್ಲಿರುವ ಕೆಮಿಕಲ್ ಫ್ಯಾಕ್ಟರಿಯಲ್ಲಿ ಸಂಭವಿಸಿದ ಅವಘಡದಲ್ಲಿ ಇನ್ನೂ ಬೆಂಕಿ ಸಂಪೂರ್ಣವಾಗಿ ನಂದಿಲ್ಲ. ಕಳೆದ 20 ಗಂಟೆಯಿಂದ ಬೆಂಕಿ ಧಗ ಧಗನೇ ಉರಿಯುತ್ತಿದೆ.

    ಸ್ಥಳಕ್ಕೆ ನೂರಾರು ಅಗ್ನಿ ಶಾಮಕ ಸಿಬ್ಬಂದಿ ದೌಡಾಯಿಸಿದ್ದು, ಕಾರ್ಯಾಚರಣೆ ನಡೆಯುತ್ತಿದೆ. ರಾತ್ರಿಯಿಡೀ ಬೆಂಕಿ ನಂದಿಸೋ ಕಾರ್ಯದಲ್ಲಿ ಸಿಬ್ಬಂದಿ ನಿರತರಾಗಿದ್ದರು. ಬೆಂಕಿ ಅವಘಡದಲ್ಲಿ 2 ರಿಂದ 3 ಕೋಟಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. 7 ವಾಹನಗಳು, 2 ವಿದ್ಯುತ್ ಕಂಬ ನಾಶವಾಗಿವೆ. ಘಟನೆ ಸಂಬಂಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಜಾಯ್ ಪಾಷ ಎಂಬವರ ದೂರಿನ ಮೇಲೆ ಈ ಕೇಸ್ ದಾಖಲಾಗಿದೆ.

    ನಿನ್ನೆ ಮಧ್ಯಾಹ್ನ ಕೆಮಿಕಲ್ ಫ್ಯಾಕ್ಟರಿಯಲ್ಲಿ ಬೃಹತ್ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಎಷ್ಟೇ ಪ್ರಯತ್ನಿಸಿದರೂ ಬೆಂಕಿ ನಿಯಂತ್ರಣಕ್ಕೆ ಬರುತ್ತಿರಲಿಲ್ಲ. ಬೃಹತ್ ಪ್ರಮಾಣದಲ್ಲಿ ವ್ಯಾಪಿಸಿರುವುದರಿಂದ ಅಕ್ಕ ಪಕ್ಕದ ಮನೆಗಳಿಗೆ ಬೆಂಕಿ ಹೊತ್ತಿಕೊಂಡಿತ್ತು. ಅಕ್ಕಪಕ್ಕದ ಮನೆಯವರನ್ನು ಸ್ಥಳಾಂತರಿಸಲು ಪೊಲೀಸರು ಮತ್ತು ಅಗ್ನಿ ಶಾಮಕ ಸಿಬ್ಬಂದಿ ಹರಸಾಹಸಪಟ್ಟಿದ್ದರು. ಇಡೀ ರಸ್ತೆಯಲ್ಲಿ ಎಲ್ಲಿ ನೋಡಿದರೂ ಬೆಂಕಿಮಯವಾಗಿದ್ದು, ಸಂಪೂರ್ಣ ಹೊಗೆ ಆವರಿಸಿಕೊಂಡಿತ್ತು. ಫ್ಯಾಕ್ಟರಿ ಅಕ್ಕ-ಪಕ್ಕ ನಿಲ್ಲಿಸಿದ್ದ ವಾಹನಗಳು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದ್ದವು.

  • ಮನೆ ಪಾಠಕ್ಕೆ ತೆರಳಿದ್ದ ಬಾಲಕನ ಶವ ಕೆರೆಯಲ್ಲಿ ಪತ್ತೆ

    ಮನೆ ಪಾಠಕ್ಕೆ ತೆರಳಿದ್ದ ಬಾಲಕನ ಶವ ಕೆರೆಯಲ್ಲಿ ಪತ್ತೆ

    ರಾಯಚೂರು: ಕೆರೆ ನೋಡಲು ಹೋಗಿದ್ದ ಬಾಲಕ ನೀರು ಪಾಲಾಗಿರುವ ಘಟನೆ ಜಿಲ್ಲೆಯ ಕೃಷ್ಣಗಿರಿ ಹಿಲ್ಸ್‌ನಲ್ಲಿರುವ  ಕೆರೆಯಲ್ಲಿ ನಡೆದಿದೆ.

    ಆದರ್ಶ್ (13) ಮೃತ ಬಾಲಕ. ಆದರ್ಶ್ 8ನೇ ತರಗತಿ ವಿದ್ಯಾರ್ಥಿಯಾಗಿದ್ದು, ಶನಿವಾರ ಬೆಳಗ್ಗೆ 8 ಗಂಟೆಗೆ ಮನೆ ಪಾಠಕ್ಕೆಂದು ಹೋಗಿದ್ದನು. ಆದರೆ ಸಂಜೆಯಾದರೂ ಆದರ್ಶ್ ಮನೆಗೆ ವಾಪಸ್ ಬಂದಿರಲಿಲ್ಲ. ಆದರೆ ಇಂದು ಕೆರೆಯಲ್ಲಿ ಆದರ್ಶ್ ಶವ ಪತ್ತೆಯಾಗಿದೆ.

    ಆದರ್ಶ್ ಮನೆ ಪಾಠ ಮುಗಿಸಿದ ನಂತರ ಸ್ನೇಹಿತರೊಂದಿಗೆ ಕೆರೆಗೆ ತೆರಳಿದ್ದನು ಎನ್ನಲಾಗಿದೆ. ಯಾಕೆಂದರೆ ಕೆರೆ ದಡದಲ್ಲಿ ಬೈಕ್ ಮತ್ತು ಬಟ್ಟೆ ಪತ್ತೆಯಾಗಿದ್ದವು. ನಂತರ ಪೋಷಕರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿದೆ ಅಗ್ನಿಶಾಮಕ ದಳ ಬಾಲಕನಿಗಾಗಿ ಕೆರೆಯಲ್ಲಿ ಶೋಧಕಾರ್ಯ ನಡೆಸಿದೆ. ಈ ವೇಳೆ ಆದರ್ಶ್ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ.

    ಸದರಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸ್ಥಳದಲ್ಲಿ ಕುಟುಂಬಸ್ಥರು ಆಕ್ರಂದನ ಮುಗಿಲು ಮುಟ್ಟಿದೆ. ಕೆರೆಯಲ್ಲಿ ಈಜಲು ಹೋಗಿ ಬಾಲಕ ಸಾವನ್ನಪ್ಪಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

  • ಹೆದ್ದಾರಿಗೆ ಅಡ್ಡಲಾಗಿ ಗ್ಯಾಸ್ ತುಂಬಿದ್ದ ಟ್ಯಾಂಕರ್ ಪಲ್ಟಿ

    ಹೆದ್ದಾರಿಗೆ ಅಡ್ಡಲಾಗಿ ಗ್ಯಾಸ್ ತುಂಬಿದ್ದ ಟ್ಯಾಂಕರ್ ಪಲ್ಟಿ

    ಕಾರವಾರ: ಚಾಲಕನ ನಿಯಂತ್ರಣ ತಪ್ಪಿ ಗ್ಯಾಸ್ ತುಂಬಿದ್ದ ಟ್ಯಾಂಕರ್ ಪಲ್ಟಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ರಾಷ್ಟ್ರೀಯ ಹೆದ್ದಾರಿ 66ರ ಹಂದಿಗೋಣ ಬಳಿ ನಡೆದಿದೆ.

    ಮಂಗಳೂರಿನಿಂದ ಹುಬ್ಬಳ್ಳಿಗೆ ಹೊರಟಿದ್ದ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಕುಮಟಾದ ರಾಷ್ಟ್ರೀಯ ಹೆದ್ದಾರಿ 66ರ ಹಂದಿಗೋಣ ಬಳಿ ಪಲ್ಟಿಯಾಗಿದೆ. ಪರಿಣಾಮ ಹೆದ್ದಾರಿಗೆ ಅಡ್ಡಲಾಗಿ ಗ್ಯಾಸ್ ಟ್ಯಾಂಕರ್ ಬಿದ್ದಿದ್ದು, ಟ್ಯಾಂಕರಿನಲ್ಲಿದ್ದ ಗ್ಯಾಸ್ ಸೋರಿಕೆಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

    ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸ್ ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ದೌಡಾಯಿಸಿದ್ದಾರೆ. ನಂತರ ಯಾವುದೇ ಅನಾಹುತ ಸಂಭವಿಸದಂತೆ ಮುಂಜಾಗೃತ ಕ್ರಮವಾಗಿ ಹೆದ್ದಾರಿ ಸಂಚಾರ ಬಂದ್ ಮಾಡಲಾಗಿದೆ. ಸ್ಥಳೀಯರನ್ನ ಹತ್ತಿರಕ್ಕೆ ತೆರಳದಂತೆ ಪೊಲೀಸರು ತಡೆದಿದ್ದಾರೆ. ಹೀಗಾಗಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ.

    ಕುಮಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಭೀಮಾ ನದಿಯಲ್ಲಿ ನೀರು ಪಾಲಾಗಿದ್ದ ನಾಲ್ವರು ಸ್ನೇಹಿತರ ಮೃತದೇಹ ಪತ್ತೆ

    ಭೀಮಾ ನದಿಯಲ್ಲಿ ನೀರು ಪಾಲಾಗಿದ್ದ ನಾಲ್ವರು ಸ್ನೇಹಿತರ ಮೃತದೇಹ ಪತ್ತೆ

    ಯಾದಗಿರಿ: ಭೀಮಾ ನದಿಯಲ್ಲಿ ಈಜಾಡಲು ತೆರಳಿ ನೀರು ಪಾಲಾಗಿದ್ದ ನಾಲ್ವರು ಹುಡುಗರ ಶವ ಪತ್ತೆಯಾಗಿವೆ. ಎನ್‌ಡಿಆರ್‌ಎಫ್ ತಂಡ, ಅಗ್ನಿಶಾಮಕ ದಳ ಮತ್ತು ನುರಿತ ಮೀನುಗಾರರ ತಂಡಗಳು ನಡೆಸಿದ ಜಂಟಿ ಶೋಧ ಕಾರ್ಯಾಚರಣೆಯಲ್ಲಿ ನಾಲ್ವರು ಹುಡುಗರ ಮೃತದೇಹವನ್ನು ಪತ್ತೆ ಮಾಡಲಾಗಿದೆ. ಇದನ್ನೂ ಓದಿ: ಈಜಲು ಭೀಮಾ ನದಿಗಿಳಿದ ನಾಲ್ವರು ನೀರುಪಾಲು

    ಅಮಾನ್ (16), ಅಯಾನ್ (16), ರೆಹಮಾನ್ (16), ಕಲಬುರಗಿ ಮೂಲದ ರೆಹಮಾನ್ (15) ಮೃತ ಹುಡುಗರು. ಜಿಲ್ಲೆಯ ವಡಗೇರಾ ತಾಲೂಕಿನ ಗುರುಸಣಗಿ ಗ್ರಾಮದ ಸಮೀಪದ ಭೀಮಾ ನದಿಯಲ್ಲಿ ನಾಲ್ವರು ಸ್ನೇಹಿತರು ಭಾನುವಾರ ಸಂಜೆ ಈಜಾಡಲು ಹೋಗಿ ನೀರು ಪಾಲಾಗಿದ್ದರು.

    ಹುಡುಗರ ಪತ್ತೆಗಾಗಿ ಇಂದು ಬೆಳಗ್ಗೆಯಿಂದ ಹೈದರಾಬಾದಿನ ಎನ್‌ಡಿಆರ್‌ಎಫ್ ಮತ್ತು ಅಗ್ನಿಶಾಮಕ ದಳ ಭೀಮಾನದಿಯಲ್ಲಿ ಬೋಟ್‍ಗಳ ಮೂಲಕ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ನೀರು ಪಾಲಾಗಿದ್ದ ಅಮಾನ್, ಅಯಾನ್, ರೆಹಾನ್, ಇರ್ಫಾನ್ ಹುಡುಗರ ಶವ ಪತ್ತೆ ಮಾಡಲಾಗಿದೆ.

    ಜಿಲ್ಲಾಧಿಕಾರಿ ಡಾ.ರಾಗಾಪ್ರಿಯಾ, ಎಸ್‍ಪಿ ಋಷಿಕೇಶ್ ಭಗವಾನ್ ಸೋನವಣೆ, ಎಸಿ ಶಂಕರಗೌಡ ಸೋಮನಾಳ ಅವರ ಮಾರ್ಗದರ್ಶನದಲ್ಲಿ ಈ ಶೋಧ ಕಾರ್ಯಾಚರಣೆ ನಡೆದಿದೆ. ಮೃತದೇಹಗಳನ್ನು ಹೊರತರುತ್ತಿದ್ದಂತೆ ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ವಡಗೇರಾ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

  • ಕೃಷ್ಣಾ ನದಿಯಲ್ಲಿ ನಾಪತ್ತೆಯಾದ ನಾಲ್ವರಿಗಾಗಿ ಶೋಧ ಕಾರ್ಯ ಆರಂಭ

    ಕೃಷ್ಣಾ ನದಿಯಲ್ಲಿ ನಾಪತ್ತೆಯಾದ ನಾಲ್ವರಿಗಾಗಿ ಶೋಧ ಕಾರ್ಯ ಆರಂಭ

    – ದಿನಸಿ ತೆಗೆದುಕೊಂಡು ವಾಪಸ್ ಬರುವಾಗ ನಾಪತ್ತೆ

    ರಾಯಚೂರು: ಕೃಷ್ಣಾ ನದಿಯಲ್ಲಿ ನಾಪತ್ತೆಯಾಗಿರುವ ರಾಯಚೂರಿನ ಕುರ್ವಕಲಾ ನಡುಗಡ್ಡೆ ಗ್ರಾಮದ ನಾಲ್ವರಿಗಾಗಿ ಶೋಧ ಕಾರ್ಯ ಬೆಳಗ್ಗೆಯಿಂದ ಆರಂಭವಾಗಿದೆ. ಇದನ್ನೂ ಓದಿ: ದಿನಸಿ ತರಲು ತೆಪ್ಪದಲ್ಲಿ ತೆರಳಿದ್ದವರಲ್ಲಿ ನಾಲ್ವರು ಕೃಷ್ಣಾ ನದಿಯಲ್ಲಿ ನಾಪತ್ತೆ

    ತೆಲಂಗಾಣದ ಪಂಚಮಪಾಡ್ ಬಳಿ ಕೃಷ್ಣಾ ನದಿಯಲ್ಲಿ ಮುಳುಗಿದ್ದ ತೆಪ್ಪದಲ್ಲಿನ 9 ಜನರನ್ನ ಸೋಮವಾರ ರಕ್ಷಿಸಲಾಗಿತ್ತು, ಇನ್ನೂ ನಾಲ್ವರು ನಾಪತ್ತೆಯಾಗಿದ್ದಾರೆ. ಇಂದು ಬೆಳಗ್ಗೆ ಎನ್‌ಡಿಆರ್‌ಎಫ್ ಹಾಗೂ ಅಗ್ನಿಶಾಮಕ ದಳ ನಾಪತ್ತೆಯಾಗಿರುವ ನಾಲ್ವರ ಶೋಧಕಾರ್ಯವನ್ನು ತೆಲಂಗಾಣದ ಪಂಚಮಪಾಡ್ ಬಳಿ ಆರಂಭಿಸಿದೆ.

    ಎನ್‍ಡಿಆರ್‍ಎಫ್‍ನ 23 ಜನ, ಅಗ್ನಿಶಾಮಕ ದಳದ 12 ಜನ ಸಿಬ್ಬಂದಿ, 3 ಬೋಟ್ ಮೂಲಕ ರಕ್ಷಣೆ ಕಾರ್ಯದಲ್ಲಿ ತೊಡಗಿದ್ದಾರೆ. ಸೋಮವಾರ ದಿನಸಿ ತರಲು ಪಂಚಮಪಾಡ್‍ಗೆ ತೆಪ್ಪದಲ್ಲಿ ತೆರಳಿದ್ದ 13 ಜನ ವಾಪಸ್ ನಡುಗಡ್ಡೆಗೆ ಮರಳುವಾಗ ತೆಪ್ಪ ಮುಗಚಿ ಬಿದ್ದಿತ್ತು. ಕೂಡಲೇ ನದಿ ದಡದಲ್ಲಿದ್ದ ಅಂಬಿಗರು 9 ಜನರನ್ನ ರಕ್ಷಿಸಿದ್ದರು.

    ಮೂವರು ಮಹಿಳೆಯರು ಹಾಗೂ ಓರ್ವ ಬಾಲಕಿ ನೀರಿನ ಸೆಳೆತಕ್ಕೆ ನಾಪತ್ತೆಯಾಗಿದ್ದಾರೆ. ಕುರ್ವಕಲಾ ಗ್ರಾಮದ ಪಾರ್ವತಿ (55), ನರಸಮ್ಮ (36), ಸುಮಲತಾ (32), ರೋಜಾ (10) ನಾಪತ್ತೆಯಾದವರು. ಸದ್ಯ ಕೃಷ್ಣಾ ನದಿಯಲ್ಲಿ ನೀರಿನ ಹರಿವು ಸ್ವಲ್ಪ ಮಟ್ಟಿಗೆ ತಗ್ಗಿದ್ದು, ಶೋಧ ಕಾರ್ಯ ಮುಂದುವರಿದಿದೆ.

  • ಹೆದ್ದಾರಿಯಲ್ಲಿ ಎರಡು ಕಾರುಗಳು ಮುಖಾಮುಖಿ ಡಿಕ್ಕಿ – ಐವರು ದುರ್ಮರಣ, ನಾಲ್ವರು ಗಂಭೀರ

    ಹೆದ್ದಾರಿಯಲ್ಲಿ ಎರಡು ಕಾರುಗಳು ಮುಖಾಮುಖಿ ಡಿಕ್ಕಿ – ಐವರು ದುರ್ಮರಣ, ನಾಲ್ವರು ಗಂಭೀರ

    – ಡಿಕ್ಕಿಯ ರಭಸಕ್ಕೆ ಕಾರುಗಳು ನಜ್ಜುಗುಜ್ಜು

    ಗಾಂಧಿನಗರ: ಎರಡು ಕಾರುಗಳು ಡಿಕ್ಕಿ ಹೊಡೆದ ಪರಿಣಾಮ ಐದು ಮಂದಿ ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುಜರಾತ್‍ನ ಖೇಡಾ ಜಿಲ್ಲೆಯ ನಾಡಿಯಾಡ್‍ ರಾಷ್ಟ್ರೀಯ ಹೆದ್ದಾರಿ 8ರಲ್ಲಿ ನಡೆದಿದೆ.

    ಅಹಮದಾಬಾದ್-ವಡೋದರಾ ರಾಷ್ಟ್ರೀಯ ಹೆದ್ದಾರಿ 8ರಲ್ಲಿ ಈ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಕಾರುಗಳು ಸಂಪೂರ್ಣವಾಗಿ ನಜ್ಜುಗುಜ್ಜಾಗಿವೆ. ಪರಿಣಾಮ ಐದು ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ನಾಡಿಯಾಡ್ ಅಗ್ನಿಶಾಮಕ ಸಿಬ್ಬಂದಿ ಹೇಳಿದ್ದಾರೆ.

    ಅಪಘಾತದ ಮಾಹಿತಿ ತಿಳಿದ ಕೂಡಲೇ ಅಗ್ನಿಶಾಮಕ ದಳದ ತಂಡ, ಮೂರು ಅಂಬುಲೆನ್ಸ್‌ಗಳು ಮತ್ತು ಖೇಡಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ರಕ್ಷಣೆ ಕಾರ್ಯ ಮಾಡಿದ್ದಾರೆ. ಮೃತರೆಲ್ಲರೂ ಅಹಮದಾಬಾದ್ ಮೂಲದವರು ಎಂದು ತಿಳಿದು ಬಂದಿದೆ.

    ಎರಡು ಕಾರುಗಳು ಡಿಕ್ಕಿ ಹೊಡೆದ ಪರಿಣಾಮ ಐದು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ನಾಡಿಯಾಡ್‍ನ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯಕ್ಕೆ ಅಪಘಾತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಹೀಗಾಗಿ ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಬ್ರಹ್ಮಗಿರಿ ಬೆಟ್ಟ ಕುಸಿದು ಇಂದಿಗೆ ಆರು ದಿನ – ಆಸ್ಟ್ರೇಲಿಯಾದಿಂದ ಬಂದ ಮಕ್ಕಳ ಆಕ್ರಂದನ

    ಬ್ರಹ್ಮಗಿರಿ ಬೆಟ್ಟ ಕುಸಿದು ಇಂದಿಗೆ ಆರು ದಿನ – ಆಸ್ಟ್ರೇಲಿಯಾದಿಂದ ಬಂದ ಮಕ್ಕಳ ಆಕ್ರಂದನ

    – ಕಾರ್ಯಾಚರಣೆ ಮುಂದುವರಿಕೆ

    ಮಡಿಕೇರಿ: ಕೊಡಗಿನ ಭಾಗಮಂಡಲದ ಬ್ರಹ್ಮಗಿರಿ ಬೆಟ್ಟ ಕುಸಿದು ಆರು ದಿನಗಳಾಗಿವೆ. ದುರಂತದಲ್ಲಿ ಐವರು ಭೂ ಸಮಾಧಿಯಾಗಿದ್ದಾರೆ. ಇದುವರೆಗೂ ಒಂದು ಮೃತ ದೇಹ ಮಾತ್ರ ಪತ್ತೆಯಾಗಿದೆ. ಇಂದು ಕೂಡ ಮೃತದೇಹ ಹುಡುಕುವ ಕಾರ್ಯಾಚರಣೆ ಮುಂದುವರಿಯಲಿದೆ.

    ಕೊಡಗಿನಲ್ಲಿ ಸುರಿದ ಭಾರೀ ಮಳೆ ಪರಿಣಾಮ ಭಾಗಮಂಡಲದ ಬ್ರಹ್ಮಗಿರಿ ಬೆಟ್ಟದ ಒಂದು ಭಾಗ ಕುಸಿದಿತ್ತು. ಪರಿಣಾಮ ಬೆಟ್ಟದಲ್ಲಿ ಮನೆ ಕೊಂಡಿದ್ದ ಅರ್ಚಕ ನಾರಾಯಣ್ ಆಚಾರ್ ಅವರ ಮನೆಯೂ ಈ ಬೆಟ್ಟದ ಮಣ್ಣಿನಲ್ಲಿ ಮುಚ್ಚಿ ಹೋಗಿ ಮನೆಯಲ್ಲಿದ್ದ ಅರ್ಚಕರು ಸೇರಿದಂತೆ ಐವರು ಮೃತಪಟ್ಟಿದ್ದರು. ಇದರಲ್ಲಿ ಓರ್ವರ ಶವ ಪತ್ತೆಯಾಗಿದೆ. ಉಳಿದ ನಾಲ್ವರ ಶವದ ಹುಡುಕಾಟ ನಿರಂತರವಾಗಿ ನಡೆಯುತ್ತಿದೆ. ಆದರೆ ಕಾರ್ಯಾಚರಣೆಗೆ ಫಲ ಸಿಗುತ್ತಿಲ್ಲ.

    ಮಳೆ ಕಡಿಮೆಯಾಗಿದ್ದರೂ ಕೂಡ ಮಂಜು ಆಗಾಗ ಆವರಿಸಿ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ. ಎನ್‌ಡಿಆರ್‌ಎಫ್ ತಂಡ, ಎಸ್‌ಡಿಆರ್‌ಎಫ್ ತಂಡ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಈ ಪತ್ತೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಬಹು ದೊಡ್ಡ ಮಟ್ಟದಲ್ಲಿ ಬೆಟ್ಟ ಕುಸಿದಿರುವ ಕಾರಣ ಮಣ್ಣು, ಕಲ್ಲಿನ ರಾಶಿ ದೊಡ್ದದಿದ್ದು, ಇದರ ಅಡಿಯಲ್ಲಿ ಮೃತದೇಹಗಳು ಸಿಲುಕಿವೆ. ಈ ಮಣ್ಣನ್ನು ತೆಗೆಯಲು ಎರಡು ಹಿಟಾಚಿ ಬಳಸಲಾಗಿದೆ.

    ಆಸ್ಟ್ರೇಲಿಯಾದಿಂದ ಬಂದ ಮಕ್ಕಳ ಆಕ್ರಂದನ
    ಈ ನಡುವೆ ಸೋಮವಾರ ಮೃತ ಅರ್ಚಕರ ಇಬ್ಬರು ಹೆಣ್ಣು ಮಕ್ಕಳು ಹಾಗೂ ಮೊಮ್ಮಕ್ಕಳು ಆಸ್ಟ್ರೇಲಿಯಾದಿಂದ ಬಂದಿದ್ದಾರೆ. ಬಂದವರು ನೇರವಾಗಿ ತಮ್ಮ ಮನೆಯಿದ್ದ ಜಾಗಕ್ಕೆ ಭೇಟಿ ನೀಡಿದರು. ಕಾರ್ಯಾಚರಣೆ ವೇಳೆ ಸಿಕ್ಕಿರುವ ಮನೆಯ ಸಾಮಾಗ್ರಿಗಳನ್ನು ನೋಡುತ್ತಾ ಮಕ್ಕಳು ಕಣ್ಣೀರಿಟ್ಟರು.

    ದುರಂತಕ್ಕೆ ಮುನ್ನ ನಾರಾಯಣ ಆಚಾರ್ ಎರಡು ದಿನ ಬಿಟ್ಟು ಮನೆ ಖಾಲಿ ಮಾಡುವ ಚಿಂತನೆ ನಡೆಸಿದ್ದರು. ಮನೆಯಲ್ಲಿದ್ದ 30 ಕ್ವಿಂಟಾಲ್ ಕಾಳುಮೆಣಸು, 5 ಕ್ವಿಂಟಾಲ್‍ನಷ್ಟು ಏಲಕ್ಕಿ ಬಿಟ್ಟು ಹೋಗೋದು ಹೇಗೆ ಎಂಬ ಚಿಂತೆಯಲ್ಲಿದ್ದರು ಎಂದು ಅರ್ಚಕರ ಕಾರು ಚಾಲಕರಾಗಿದ್ದ ಜಯಂತ್ ತಿಳಿಸಿದ್ದಾರೆ.

    ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಕೆ.ಜೆ. ಬೋಪಯ್ಯ ಕಾರ್ಯಾಚರಣೆ ಸ್ಥಳದಲ್ಲಿ ಮೊಕ್ಕಾಂ ಹೂಡಿ ಕಾರ್ಯಾಚರಣೆ ಪರಿಶೀಲಿಸುತ್ತಿದ್ದಾರೆ. ಇಂದು ಕೂಡ ಕಾರ್ಯಾಚರಣೆ ಮುಂದುವರಿಯಲಿದೆ.