Tag: ಅಗ್ನಿಶಾಮಕ ದಳ

  • ದೇವನಹಳ್ಳಿ ಏರ್ಪೋಟ್ ಟೋಲ್ ಬಳಿ ಧಗಧಗನೆ ಹೊತ್ತಿ ಉರಿದ ಮಾರುತಿ 800

    ದೇವನಹಳ್ಳಿ ಏರ್ಪೋಟ್ ಟೋಲ್ ಬಳಿ ಧಗಧಗನೆ ಹೊತ್ತಿ ಉರಿದ ಮಾರುತಿ 800

    ಬೆಂಗಳೂರು: ಏರ್ಪೋಟ್ ರಸ್ತೆ ಮಧ್ಯೆದಲ್ಲಿಯೇ ಮಾರುತಿ 800 ಕಾರು ಇದ್ದಕ್ಕಿದ್ದಾಗೆ ಹೊತ್ತಿ ಉರಿದಿರುವ ಘಟನೆ ದೇವನಹಳ್ಳಿ ಬಳಿಯ ಏರ್ಪೋಟ್ ಟೋಲ್ ಬಳಿ ನಡೆದಿದೆ.


    ಮಾರತ್ತಹಳ್ಳಿಯ ಜಗದೀಶ್ ಎಂಬವರು ತಮ್ಮ ಕಾರಿನಲ್ಲಿ ಬಳ್ಳಾರಿ ಕಡೆ ಹೋಗುತ್ತಿದ್ದರು. ದಾರಿ ಮಧ್ಯ ಅಂದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯ ನವಯುಗ ಟೋಲ್ ಬಳಿ ಟಿಕೆಟ್ ತೆಗೆದು ಮುಂದೆ ಪ್ರಯಾಣ ಬೆಳೆಸಿದರು. ಆದರೆ ಟೋಲ್ ಮಧ್ಯೆಯೇ ಇದ್ದಕ್ಕಿದ್ದಂತೆ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಎಚ್ಚೆತ್ತುಕೊಂಡ ಚಾಲಕ ಕಾರಿನಿಂದ ಕೆಳಗಿಳಿದ್ದಾರೆ.

    ನಂತರ ಕಾರು ಧಗಧಗನೆ ಉರಿಸಲು ಪ್ರಾರಂಭಿಸಿದೆ. ಇದನ್ನು ನೋಡಿ ಕೆಲ ಕಾಲ ಸ್ಥಳಿಯರಲ್ಲಿ ಆತಂಕ ಉಂಟಾಗಿತ್ತು. ಬೆಂಕಿಯ ತೀವ್ರತೆಗೆ ಕಾರು ಭಾಗಶಃ ಸುಟ್ಟು ಕರಕಲಾಗಿದೆ.

    ಘಟನೆ ನಡೆದ ಸ್ಥಳಕ್ಕೆ ದೇವನಹಳ್ಳಿ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬೆಂಕಿ ಅವಘಡದಿಂದ ಯಾರಿಗೂ ಯಾವುದೇ ಅಪಾಯ ಸಂಭವಿಸಿಲ್ಲ.

  • ದಾವಣಗೆರೆಯಲ್ಲಿ ಅಗ್ನಿಶಾಮಕದಳ ಕಚೇರಿಗೆ ನೀರು – 500ಕ್ಕೂ ಹೆಚ್ಚು ಮನೆಗಳು ಕುಸಿತ

    ದಾವಣಗೆರೆಯಲ್ಲಿ ಅಗ್ನಿಶಾಮಕದಳ ಕಚೇರಿಗೆ ನೀರು – 500ಕ್ಕೂ ಹೆಚ್ಚು ಮನೆಗಳು ಕುಸಿತ

    – ಬಾಗಲಕೋಟೆಯಲ್ಲಿ ಸೇತುವೆ ಜಲಾವೃತ

    ದಾವಣಗೆರೆ: ನಗರದಲ್ಲಿ ಕಳೆದ ರಾತ್ರಿಯಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದೆ. ಕೆಲ ಪ್ರದೇಶಗಳಲ್ಲಿ ನೀರು ನುಗ್ಗಿ ಜನರು ಪರದಾಡುವಂತಾಗಿದೆ.

    ರಾತ್ರಿ 9 ಗಂಟೆಯಿಂದ ಸುರಿದ ಮಳೆಗೆ ಸಾವಿರಾರು ಮನೆಗಳಿಗೆ ನೀರು ನುಗ್ಗಿದ್ದು, ಹಲವು ಮನೆಗಳ ಗೋಡೆ ಕುಸಿದಿವೆ. ಅದಲ್ಲದೆ ಅಗ್ನಿಶಾಮಕ ದಳ ಕಚೇರಿಯ ಮುಂಭಾಗ ಮೊಣಕಾಲು ಉದ್ದ ನೀರು ನಿಂತಿದ್ದು, ಕಚೇರಿಯ ಒಳಗೂ ಮಳೆ ನೀರು ನುಗ್ಗಿದೆ. ಹೀಗಾಗಿ ಅಲ್ಲಿರುವ ಪ್ರಮುಖ ಕಡತಗಳು ನೀರುಪಾಲಾಗಿವೆ. ಸ್ಥಳಕ್ಕೆ ಬಂದ ತಹಶೀಲ್ದಾರ್‍ರನ್ನ ತರಾಟೆಗೆ ತೆಗೆದುಕೊಂಡ ಸಾರ್ವಜನಿಕರು, ನಮಗೆ ಪರಿಹಾರ ಬೇಡ ಮನೆ ಕಟ್ಟಿಸಿಕೊಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.

    ವರ್ಷದಿಂದ ಇದೇ ಮೊದಲ ಬಾರಿಗೆ ದಾವಣಗೆರೆಯ ಸುತ್ತಮುತ್ತ ಉತ್ತಮ ಮಳೆಯಾಗಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಅಲ್ಲದೆ ಜಿಲ್ಲೆಯ ಮಾಯಕೊಂಡ ಹರಿಹರ ಸೇರಿದಂತೆ ಹಲವು ಕಡೆ ಉತ್ತಮ ಮಳೆಯಾಗಿದೆ. ನಗರದ ಶ್ರೀರಾಮ ಬಡಾವಣೆ, ಶಕ್ತಿನಗರ, ಎಸ್‍ಪಿಎಸ್ ನಗರ, ನೀಲಮ್ಮನ ತೋಟ ಸೇರಿದಂತೆ ವಿವಿಧ ಕಡೆ ಮನೆಗಳಿಗೆ ನೀರು ನುಗ್ಗಿ ಜನ ರಾತ್ರಿ ಇಡೀ ಜಾಗರಣೆ ಮಾಡುವಂತಾಯಿತು.

    ಕೆಲವು ಕಡೆ ನೀರಿನಲ್ಲಿ ಬೈಕು ಕಾರುಗಳು ಮುಳುಗಡೆಯಾಗಿ ವಾಹನ ಸವಾರರು ತೊಂದರೆ ಅನುಭವಿಸುವಂತಾಯಿತು. ಅಲ್ಲದೆ ಸಂಜೆಯಿಂದ ವಿದ್ಯುತ್ ಸಂಪರ್ಕವಿಲ್ಲದೆ ಜನರು ಪರದಾಡುವಂತಾಯಿತು. ಇನ್ನು ಎತ್ತಿನ ಸಂತೆ ಚಿಕ್ಕನಹಳ್ಳಿ ಸಂಪೂರ್ಣ ಮುಳುಗಡೆಯಾಗಿದೆ. ಮನೆಗೆ ನೀರು ನುಗ್ಗಿದ್ದರಿಂದ ಸ್ಥಳೀಯರು ಪೊಲೀಸ್ ಠಾಣೆಯಲ್ಲಿ ಆಶ್ರಯ ಪಡೆಯುವಂತಾಯಿತು. ಭಾರೀ ಮಳೆಯಿಂದಾಗಿ ರಸ್ತೆ ಕಾಣದೆ ಟೆಂಪೋ ಲಾರಿಗಳು ಪಲ್ಟಿ ಹೊಡೆದಿದ್ದವು. ಪೊಲೀಸರು ಸದ್ಯ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.

    500 ಮನೆಗಳ ಕುಸಿತ: ಕಳೆದ ರಾತ್ರಿ ಬಿದ್ದಂತಹ ಮಳೆಗೆ ಸಾವಿರಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ಸುಮಾರು ಐನೂರು ಮನೆಗಳು ಕುಸಿದು ಬಿದ್ದಿವೆ. ಮಳೆ ನೀರು ಸರಾಗವಾಗಿ ಹೋದ್ರೆ ಮನೆಗಳಿಗೆ ನೀರು ನುಗ್ಗುವುದಿಲ್ಲ. ಜಿಲ್ಲೆಯಲ್ಲಿ ಅಪಾರ ಪ್ರಮಾಣದ ನಷ್ಟವಾಗಿದೆ. ಸಂತ್ರಸ್ತರಿಗೆ ಅವರಗೊಳ್ಳ ಶಾಲೆಯಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಕೆಲ ಕಡೆ ಗಂಜಿ ಕೇಂದ್ರಗಳನ್ನು ತೆರೆಯಲಾಗಿದ್ದು. ಅದಷ್ಟು ಬೇಗ ಪರಿಹಾರ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಿಎಸ್ ರಮೇಶ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ಸೇತುವೆ ಜಲಾವೃತ: ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಗೋವನಕೊಪ್ಪ ಗ್ರಾಮದಲ್ಲಿ ಬೆಳಗಿನ ಜಾವದಿಂದಲೇ ಮಲಪ್ರಭಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವ ಪರಿಣಾಮ ಸೇತುವೆಯೊಂದು ಮುಳುಗಿ ಸಂಚಾರ ಸ್ಥಗಿತಗೊಂಡಿದೆ. ಹುಬ್ಬಳ್ಳಿ ಸೋಲ್ಹಾಪುರ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುತ್ತಿದ್ದ ಈ ಸೇತುವೆ ಮೇಲೆ ಅಪಾರ ಪ್ರಮಾಣದ ನೀರು ಬರುತ್ತಿದ್ದು, ಹಳೇ ಮಾಗ9ದ ಸಂಚಾರ ಸ್ಥಗಿತಗೊಂಡಿದೆ. ಹೀಗಾಗಿ ಹೊಸ ಸೇತುವೆ ಮೂಲಕ ಸಂಚಾರ ಆರಂಭಗೊಂಡಿದೆ. ಬ್ರಿಟಿಷರ ಕಾಲದಲ್ಲಿ ನಿಮಾ9ಣವಾಗಿದ್ದ ಈ ಸೇತುವೆ ಈಗ ಜಲಾವೃತಗಿದೆ. ನದಿ ನೀರು ಅಕ್ಕಪಕ್ಕದ ಹೊಲ ಗದ್ದೆಗಳಿಗೂ ನುಗ್ಗಿದ್ದು ಬೆಳೆ ಹಾನಿ ಭೀತಿ ಎದುರಾಗಿದೆ. ಈ ಮಧ್ಯೆ ನದಿ ಪಾತ್ರದ ಜನರು ಪ್ರವಾಹ ಭೀತಿ ಎದುರಿಸುವಂತಾಗಿದೆ.

     

  • ವಿಜಯಪುರದಲ್ಲಿ ಭಾರೀ ಮಳೆ: ಶಾಲೆಯಿಂದ ಬರುತ್ತಿದ್ದಾಗ ನೀರಿನಲ್ಲಿ ಕೊಚ್ಚಿ ಹೋದ್ಳು ಬಾಲಕಿ

    ವಿಜಯಪುರದಲ್ಲಿ ಭಾರೀ ಮಳೆ: ಶಾಲೆಯಿಂದ ಬರುತ್ತಿದ್ದಾಗ ನೀರಿನಲ್ಲಿ ಕೊಚ್ಚಿ ಹೋದ್ಳು ಬಾಲಕಿ

    ವಿಜಯಪುರ: ಮಳೆಯಿಂದ ಹಳ್ಳ ದಾಟುವ ವೇಳೆ ಇಬ್ಬರು ವಿದ್ಯಾರ್ಥಿನಿಯರ ಪೈಕಿ ಒಬ್ಬಳು ಕೊಚ್ಚಿ ಹೋಗಿ ಮೃತಪಟ್ಟಿರುವ ಘಟನೆ ವಿಜಯಪುರ ತಾಲೂಕಿನ ಕೊಟ್ಯಾಳ ಗ್ರಾಮದಲ್ಲಿ ನಡೆದಿದೆ.

    ಶಾಲೆಯಿಂದ ಮನೆಗೆ ಮರುಳುತ್ತಿದ್ದ ವೇಳೆ ಈ ದುರಂತ ನಡೆದಿದ್ದು, ಐಶ್ವರ್ಯಾ ಸೋಲಂಕರ್ (9) ಮೃತಪಟ್ಟಿದ್ದಾಳೆ.

    ಐಶ್ವರ್ಯಾ ಮತ್ತು ಗೀತಾ ಸೋಲಂಕರ್ ಶಾಲೆ ಮುಗಿಸಿ ಸಂಜೆ ಮನೆಗೆ ಬರುತ್ತಿದ್ದರು. ಕಿರು ಸೇತುವೆ ಮೇಲೆ ನಡೆಯುತ್ತಿದ್ದಾಗ ನೀರು ಬಂದಿದ್ದು ಇಬ್ಬರು ನೀರಿಗೆ ಬಿದ್ದಿದ್ದಾರೆ. ಇವರ ಹಿಂದೆಯೇ ಬರುತ್ತಿದ್ದ ಜನರು ಈ ದೃಶ್ಯವನ್ನು ನೋಡಿ ರಕ್ಷಣೆ ಮಾಡಲು ಯತ್ನಿಸಿದ್ದಾರೆ. ಅಷ್ಟರಲ್ಲಾಗಲೇಐಶ್ವರ್ಯಾ ನೀರಿಗೆ ಬಿದ್ದು ಕೊಚ್ಚಿ ಹೋಗಿದ್ದಳು. ನೀರಿನಲ್ಲಿ  ಸಹಾಯ ಬೇಡುತ್ತಿದ್ದ ಗೀತಾಳನ್ನು ಜನರು ಕೂಡಲೇ ರಕ್ಷಣೆ ಮಾಡಿದ್ದಾರೆ.

    ಕೂಡಲೇ ಬುಲಾವ್ ಬಂದ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸಿ ಐಶ್ವರ್ಯಾಳ ಶವವನ್ನು ನೀರಿನಿಂದ ಮೇಲಕ್ಕೆ ಎತ್ತಿದ್ದಾರೆ. ಸ್ಥಳಕ್ಕೆ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯ ಸಿಪಿಐ ರಾಮಚಂದ್ರ ಚೌಧರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮರಣೋತ್ತರ ಪರೀಕ್ಷೆ ನಡೆಸಲು ಐಶ್ವರ್ಯಾ ಶವವವನ್ನು ಜಿಲ್ಲಾಸ್ಪತ್ರೆಗೆ ತರಲಾಗಿದೆ.

    ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಹಳ್ಳಗಳು ತುಂಬಿ ಹರಿಯುತ್ತಿದೆ.

     

  • ಬೆಂಗಳೂರಿನ ಬೆಳ್ಳಂದೂರು ಕೆರೆಯಲ್ಲಿ ಬೆಂಕಿ: ವಿಡಿಯೋ ನೋಡಿ

    ಬೆಂಗಳೂರಿನ ಬೆಳ್ಳಂದೂರು ಕೆರೆಯಲ್ಲಿ ಬೆಂಕಿ: ವಿಡಿಯೋ ನೋಡಿ

    ಬೆಂಗಳೂರು: ಬೆಳ್ಳಂದೂರು ಕೆರೆಯಲ್ಲಿ ಮತ್ತೆ ಬೆಂಕಿ ಹೊತ್ತಿಕೊಂಡಿದೆ. ಕೆರೆಯ ಮಧ್ಯಭಾಗದಲ್ಲಿ ಬೆಂಕಿ ಹೊತ್ತಿಕೊಂಡಿದ್ದು ದಟ್ಟವಾದ ಹೊಗೆ ಕಾಣಿಸಿಕೊಂಡಿದೆ.

    ದಡದಿಂದ 150 ಮೀಟರ್ ದೂರದಲ್ಲಿ ಬೆಂಕಿ ಕಾಣಿಸಿಕೊಳ್ಳಲು ನೀರಿನಲ್ಲಿರುವ ರಾಸಾಯನಿಕ ಅಂಶವೇ ಕಾರಣ ಎಂದು ಸ್ಥಳೀಯರು ಹೇಳಿದ್ದಾರೆ.

    ಸ್ಥಳಕ್ಕೆ 2 ಅಗ್ನಿಶಾಮಕ ವಾಹನ ಆಗಮಿಸಿದೆ. ಆದರೆ ಕೆರೆಯ ಮಧ್ಯ ಭಾಗದಲ್ಲಿ ಬೆಂಕಿ ಹೊತ್ತಿಕೊಂಡಿರುವ ಕಾರಣ ಅದನ್ನು ನಂದಿಸುವುದು ಹೇಗೆ ಎನ್ನುವ ಚಿಂತೆಯಲ್ಲಿ ಸಿಬ್ಬಂದಿ ಇದ್ದಾರೆ.

    https://www.youtube.com/watch?v=j98T-w6QJ98

  • ರಾಯಚೂರು: ಅಗ್ನಿ ಅವಘಡದಿಂದ ಕಿರಾಣಿ ಅಂಗಡಿ ಭಸ್ಮ

    ರಾಯಚೂರು: ಶಾರ್ಟ್ ಸರ್ಕ್ಯೂಟ್ ನಿಂದ ಕಿರಾಣಿ ಅಂಗಡಿಯೊಂದು ಹೊತ್ತಿ ಉರಿದ ಘಟನೆ ನಗರದ ಬಸವನಬಾವಿ ವೃತ್ತದ ಬಳಿ ನಡೆದಿದೆ.

    ಮಧ್ಯರಾತ್ರಿ ಸುಮಾರು 1 ಗಂಟೆ ವೇಳೆ ಈ ಅವಘಢ ಸಂಭವಿಸಿದ್ದು, ಅಂಗಡಿಯಲ್ಲಿನ ವಸ್ತುಗಳೆಲ್ಲಾ ಸುಟ್ಟು ಹೋಗಿವೆ. ಅಶೋಕ್ ಎಂಬವರಿಗೆ ಸೇರಿದ ಕಿರಾಣಿ ಅಂಗಡಿ ಇದಾಗಿದ್ದು, ಅಂಗಡಿಯಲ್ಲಿನ ಪೀಠೋಪಕರಣ, ದವಸ ಧಾನ್ಯ ಸೇರಿ ಅಂದಾಜು 4 ಲಕ್ಷ ರೂ. ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿವೆ. ಬೆಂಕಿಯ ಪ್ರಖರತೆಗೆ ಅಂಗಡಿಯ ಕಟ್ಟಡ ಬಿರುಕು ಬಿಟ್ಟಿದೆ. ಅದೃಷ್ಟವಶಾತ್ ಅಂಗಡಿ ಮೇಲಿನ ಮನೆಯಲ್ಲಿದ್ದ ಕುಟುಂಬ ಪ್ರಾಣಾಪಾಯದಿಂದ ಪಾರಾಗಿದೆ.

    ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿಯನ್ನ ನಂದಿಸಿದ್ದು, ನೇತಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭಾರೀ ಪ್ರಮಾಣದ ಹಾನಿಯಾಗಿರುವುದರಿಂದ ಸರ್ಕಾರ ಪರಿಹಾರ ನೀಡಬೇಕು ಎಂದು ಅಂಗಡಿ ಮಾಲೀಕ ಅಶೋಕ್ ಕುಮಾರ್ ಮನವಿ ಮಾಡಿದ್ದಾರೆ.