Tag: ಅಗ್ನಿಶಾಮಕ ದಳ

  • ಓಮ್ನಿ ಕಾರಿಗೆ ಲಾರಿ ಡಿಕ್ಕಿಯಾಗಿ ನಾಲ್ವರ ಸಾವು- ಅಂತ್ಯಕ್ರಿಯೆಗೆ ತೆರಳುತ್ತಿದ್ದವರು ಶವವಾದ್ರು

    ಓಮ್ನಿ ಕಾರಿಗೆ ಲಾರಿ ಡಿಕ್ಕಿಯಾಗಿ ನಾಲ್ವರ ಸಾವು- ಅಂತ್ಯಕ್ರಿಯೆಗೆ ತೆರಳುತ್ತಿದ್ದವರು ಶವವಾದ್ರು

    ಬಳ್ಳಾರಿ: ಓಮ್ನಿ ಕಾರಿಗೆ ಲಾರಿ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲಿಯೇ ನಾಲ್ವರು ಸಾವನಪ್ಪಿರುವ ಘಟನೆ ಜಿಲ್ಲೆಯ ಹೊಸಪೇಟೆ ತಾಲೂಕಿನ ಪಿಕೆ ಹಳ್ಳಿ ಬಳಿ ನಡೆದಿದೆ.

    ಚಿತ್ರದುರ್ಗದ ಹಿರಿಯೂರಿನವರಾದ ಚಾಲಕ ಶ್ರೀನಿವಾಸ (46), ವೆಂಕಟಮ್ಮ (46), ನಳಿನಿ (30) ಹಾಗೂ ಮತ್ತೊಬ್ಬ ಮಹಿಳೆ ಮೃತ ದುರ್ದೈವಿಗಳು. ಘಟನೆಯಲ್ಲಿ 8 ಜನ ಗಾಯಗೊಂಡಿದ್ದು, ಅವರನ್ನ ಸ್ಥಳೀಯ ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

    ಹಿರಿಯೂರು ತಾಲೂಕಿನಿಂದ ಹೊಸಪೇಟೆಯ ಸಂಬಂಧಿಕರೊಬ್ಬರ ಅಂತಿಮ ದರ್ಶನಕ್ಕಾಗಿ ಕಾರಿನಲ್ಲಿ ಒಟ್ಟು 12 ಜನರು ತೆರಳುತ್ತಿದ್ದರು. ಆದರೆ ಪಿಕೆ ಹಳ್ಳಿಯ ಹೆದ್ದಾರಿ 14 ರಸ್ತೆಯಲ್ಲಿ ಕಾರಿಗೆ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಲಾರಿ ಚಾಲಕನ ನಿರ್ಲಕ್ಷ್ಯದಿಂದ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ಸ್ಥಳೀಯರು ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿ ಬಂದು ನುಜ್ಜುಗುಜ್ಜಾಗಿದ್ದ ಕಾರಿನಲ್ಲಿದ್ದವರನ್ನು ಹೊರ ತಗೆದು ರಕ್ಷಣೆ ಮಾಡಿ ಆಸ್ಪತ್ರೆಗೆ ರವಾನಿಸಿದ್ದಾರೆ.

    ಅಪಘಾತ ಸಂಭವಿಸಿದ ಸ್ಥಳಕ್ಕೆ ಹೊಸಪೇಟೆ ಪೊಲೀಸರು ಹಾಗೂ ಗಾದಿಗನೂರುಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

  • ಮಧ್ಯರಾತ್ರಿ ಫಾರ್ಮಸಿ ಬಿಲ್ಡಿಂಗ್‍ಗೆ ಬೆಂಕಿ- ಲಕ್ಷಾಂತರ ರೂ. ನಷ್ಟ

    ಮಧ್ಯರಾತ್ರಿ ಫಾರ್ಮಸಿ ಬಿಲ್ಡಿಂಗ್‍ಗೆ ಬೆಂಕಿ- ಲಕ್ಷಾಂತರ ರೂ. ನಷ್ಟ

    ದಾವಣಗೆರೆ: ಮಧ್ಯರಾತ್ರಿ ಫಾರ್ಮಸಿ ಬಿಲ್ಡಿಂಗ್‍ಗೆ ಬೆಂಕಿ ಬಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿರುವ ಘಟನೆ ನಗರದ ವಿದ್ಯಾರ್ಥಿ ಭವನ್ ಸರ್ಕಲ್ ಬಳಿ ನಡೆದಿದೆ.

    ವಿದ್ಯಾರ್ಥಿ ಭವನ್ ಸರ್ಕಲ್ ಬಳಿ ಇರುವ ಚೇತನಾ ಫಾರ್ಮಸಿ ಬಿಲ್ಡಿಂಗ್ ನ 1 ಮತ್ತು 2 ನೇ ಮಹಡಿಯಲ್ಲಿ ಮಧ್ಯರಾತ್ರಿ ಸುಮಾರು 1 ಗಂಟೆಗೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಒಂದೇ ಸಮನೆ ಧಗಧಗನೆ ಉರಿಯಲು ಪ್ರಾರಂಭಿಸಿದೆ. ಬೆಂಕಿಯನ್ನು ಕಂಡ ಸ್ಥಳೀಯರು ತಕ್ಷಣ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

    ಮಾಹಿತಿ ತಿಳಿದ ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಲು ಹರಸಾಹಸ ಪಟ್ಟಿದ್ದಾರೆ. ಫಾರ್ಮಸಿಯಲ್ಲಿದ್ದ ವಸ್ತುಗಳೆಲ್ಲಾ ಸುಟ್ಟು ಕರಕಲಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. ಬೆಂಕಿ ಅನಾಹುತಕ್ಕೆ ಕಾರಣ ತಿಳಿದುಬಂದಿಲ್ಲ.

    ಕಳೆದ ವರ್ಷವು ಸಹ ಲಕ್ಷ್ಮಿ ಪೂಜೆಯ ದಿನ ನಗರದ ತರಕಾರಿ ಮಾರ್ಕೆಟ್‍ಗೆ ಬೆಂಕಿ ತಗಲಿ ಅನಾಹುತವಾಗಿ ಸಾಕಷ್ಟು ನಷ್ಟ ಉಂಟಾಗಿತ್ತು. ಈ ಬಾರಿಯೂ ಅದೇ ರೀತಿ ಬೆಂಕಿ ಅನಾಹುತವಾಗಿರಬಹುದು ಎಂದು ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ್ದಾರೆ.

     

     

  • ಕೆರೆಯಲ್ಲಿ ಮೀನಿಗಾಗಿ ಬಲೆ ಬೀಸಲು ಹೋಗಿ ಪ್ರಾಣವನ್ನೇ ಕಳೆದುಕೊಂಡ್ರು

    ಕೆರೆಯಲ್ಲಿ ಮೀನಿಗಾಗಿ ಬಲೆ ಬೀಸಲು ಹೋಗಿ ಪ್ರಾಣವನ್ನೇ ಕಳೆದುಕೊಂಡ್ರು

    ರಾಮನಗರ: ಕೆರೆಯಲ್ಲಿ ಮೀನು ಹಿಡಿಯಲು ಬಲೆ ಬೀಸಲು ಹೋದ ಯುವಕರಿಬ್ಬರು ತೆಪ್ಪ ಮುಗುಚಿ ಸಾವನ್ನಪ್ಪಿರುವ ಘಟನೆ ರಾಮನಗರ ತಾಲೂಕಿನ ಬಿಡದಿ ಸಮೀಪದ ನೆಲ್ಲಿಗುಡ್ಡೆ ಕೆರೆಯಲ್ಲಿ ನಡೆದಿದೆ.

    ಬಿಡದಿ ಸಮೀಪದ ಅವರೆಗೆರೆ ಗ್ರಾಮದ ನಿವಾಸಿಗಳಾದ ರವಿ (20) ಹಾಗೂ ಉಮೇಶ್ (31) ಮೃತ ದುರ್ದೈವಿಗಳು.

    ಶನಿವಾರ ಸಂಜೆ ನೆಲ್ಲಿಗುಡ್ಡೆ ಕೆರೆಯಲ್ಲಿ ಮೀನು ಹಿಡಿಯುವ ಸಲುವಾಗಿ ಬಲೆ ಬೀಸಲು ತೆಪ್ಪದಲ್ಲಿ ತೆರಳಿದ್ದರು. ರಾತ್ರಿಯಾದರೂ ಸಹ ಇಬ್ಬರೂ ಮನೆಗೆ ಬಂದಿರಲಿಲ್ಲ. ಅಲ್ಲದೇ ಗ್ರಾಮದಲ್ಲೂ ಅವರಿಬ್ಬರ ಸುಳಿವು ಇರಲಿಲ್ಲ. ಇದರಿಂದ ಆತಂಕಗೊಂಡ ಪೋಷಕರು ಸ್ಥಳೀಯರಲ್ಲಿ ವಿಚಾರಿಸಿದಾಗ ಮೀನು ಹಿಡಿಯಲು ನೆಲ್ಲಿಗುಡ್ಡೆ ಕೆರೆಗೆ ಹೋಗಿದ್ದಾರೆ ಎಂದು ತಿಳಿಸಿದ್ದರು.

    ರವಿ ಹಾಗೂ ಉಮೇಶ್ ಕುಟುಂಬದವರು ಬಿಡದಿ ಪೋಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ನಂತರ ಪೊಲೀಸರು ಘಟನೆಯ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಆದರೆ ಸ್ಥಳದಲ್ಲಿ ಯಾವುದೇ ತೆಪ್ಪವೂ ಇರಲಿಲ್ಲ. ಇದರಿಂದ ತೆಪ್ಪ ಮುಗುಚಿ ಸಾವನ್ನಪ್ಪಿರಬಹುದು ಎಂದು ಶಂಕಿಸಿ ಸ್ಥಳಕ್ಕೆ ಅಗ್ನಿ ಶಾಮಕ ದಳವನ್ನು ಕರೆಸಿ ಶೋಧ ಕಾರ್ಯ ನಡೆಸಲು ಪ್ರಾರಂಭಿಸಿದ್ದಾರೆ. ಕೆರೆಯಲ್ಲಿ ಶವಶೋಧ ನಡೆಸುವ ವೇಳೆ ಮೊದಲಿಗೆ ತೆಪ್ಪ ಸಿಕ್ಕಿದೆ. ಬಳಿಕ ಇಬ್ಬರು ಸಾವನ್ನಪ್ಪಿರುವುದು ಖಾತ್ರಿಯಾಗಿ ಶೋಧ ನಡೆಸಿದಾಗ ಇಬ್ಬರ ಮೃತದೇಹಗಳು ಬಲೆಯಲ್ಲಿ ಸಿಲುಕಿದ್ದು, ಹೊರತೆಗೆಯಲಾಗಿದೆ.

    ಶನಿವಾರ ನಗರದಲ್ಲಿ ಮಳೆಯಾಗಿದ್ದು, ಇದರಿಂದ ಕೆರೆಗೆ ನೀರಿನ ಹರಿವು ಹೆಚ್ಚಾಗಿದೆ. ಏಕಾಏಕಿ ನೀರಿನ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ತೆಪ್ಪ ಮುಗುಚಿ ಇಬ್ಬರು ಬಲೆಯ ಒಳಗೆ ಸಿಲುಕಿ ಕೆರೆಯಲ್ಲಿ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ಬಿಡದಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

     

     

     

     

     

     

     

  • ಬೆಳ್ಳಂಬೆಳಗ್ಗೆ ರಸ್ತೆ ಮಧ್ಯೆಯೇ ಧಗಧಗನೆ ಹೊತ್ತಿ ಉರಿದ ಮಾರುತಿ 800!

    ಬೆಳ್ಳಂಬೆಳಗ್ಗೆ ರಸ್ತೆ ಮಧ್ಯೆಯೇ ಧಗಧಗನೆ ಹೊತ್ತಿ ಉರಿದ ಮಾರುತಿ 800!

    ಬೆಂಗಳೂರು: ಚಲಿಸುತ್ತಿದ್ದ ಮಾರುತಿ 800 ಕಾರಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ರಸ್ತೆಯ ಮಧ್ಯದಲ್ಲಿಯೇ ಹೊತ್ತಿ ಉರಿದ ಘಟನೆ ಬೆಂಗಳೂರು ಹೊರವಲಯ ನೆಲಮಂಗಲದ ನವಯುಗ ಟೋಲ್ ಬಳಿ ನಡೆದಿದೆ.

    ಬೆಂಗಳೂರು-ತುಮಕೂರು ರಸ್ತೆಯ 8ನೇ ಮೈಲಿ ಬಳಿ ಇರುವ ನವಯುಗ ಟೋಲ್ ಬಳಿ ಚಲಿಸುತ್ತಿದ್ದಂತೆಯೇ ಮಾರುತಿ 800 ಕಾರು ಧಗಧಗನೆ ಹೊತ್ತಿ ಉರಿದಿದೆ. ಘಟನೆಯಿಂದ ಅದೃಷ್ಟಾವಶಾತ್ ಕಾರಿನಲ್ಲಿದ್ದ ದಂಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಘಟನೆ ಸಂಭವಿಸಿದ ಸ್ಥಳಕ್ಕೆ ಪೀಣ್ಯ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಬೆಂಕಿಯನ್ನು ನಂದಿಸುವ ಕಾರ್ಯ ನಡೆಸಿದ್ದಾರೆ. ಈ ಘಟನೆಯಿಂದ ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗಂಟೆಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿದೆ.

    ಇದನ್ನು ಓದಿ:  ದೇವನಹಳ್ಳಿ ಏರ್ಪೋಟ್ ಟೋಲ್ ಬಳಿ ಧಗಧಗನೆ ಹೊತ್ತಿ ಉರಿದ ಮಾರುತಿ 800

    https://www.youtube.com/watch?v=dSl0_nNA_4c&feature=youtu.be

    https://www.youtube.com/watch?v=MbZJRbpd7jg

       

     

     

  • ಕ್ವಾರಿಯಲ್ಲಿ ಈಜಲು ಹೋಗಿ ಯುವಕ ನೀರು ಪಾಲು

    ಕ್ವಾರಿಯಲ್ಲಿ ಈಜಲು ಹೋಗಿ ಯುವಕ ನೀರು ಪಾಲು

    ಬೆಂಗಳೂರು: ಈಜಲು ಹೋಗಿ ಯುವಕನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ಬಳಿಯ ಜಿಗಣಿ ಸಮೀಪದ ಕಲ್ಲುಬಾಳ ಗ್ರಾಮದಲ್ಲಿರುವ ಬಾಲರ್ ಬಂಡೆ ಕ್ವಾರಿಯಲ್ಲಿ ನಡೆದಿದೆ.

    ನರೇಶ್ (18) ಕ್ವಾರಿಯಲ್ಲಿ ಈಜಲು ಹೋಗಿ ಮೃತಪಟ್ಟ ಯುವಕ.

    ಶುಕ್ರವಾರ ಸಂಜೆ ಸುಮಾರು 4.30ಕ್ಕೆ ನರೇಶ್ ಮತ್ತು ಆತನ ಜೊತೆ 8 ಜನ ಸ್ನೇಹಿತರು ಕಲ್ಲುಬಾಳು ಗ್ರಾಮದಲ್ಲಿರುವ ಬಾಲರ್ ಬಂಡೆ ಕ್ವಾರಿಯಲ್ಲಿ ಈಜುಲು ಹೋಗಿದ್ದಾರೆ. ಮೊದಲು ನರೇಶ್ ಜೊತೆ ಮೂವರು ಸ್ನೇಹಿತರು ಈಜಲು ಹೋಗಿದ್ದಾರೆ. ಆದರೆ ಕಲ್ಲು ಕ್ವಾರಿ ಸುಮಾರು 30-40 ಅಡಿ ಆಳ ಇದ್ದುದ್ದರಿಂದ ನರೇಶ್ ನೀರಿನಲ್ಲಿ ಮುಳುಗಿ ಹೋಗಿದ್ದಾನೆ. ನಂತರ ಸ್ನೇಹಿತರೆಲ್ಲರೂ ಭಯಗೊಂಡು ಓಡಿ ಹೋಗಿ ಪೋಷಕರಿಗೆ ವಿಚಾರ ತಿಳಿಸಿದ್ದಾರೆ.

    ಪೋಷಕರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸ್ ಸಿಬ್ಬಂದಿ ಅಗ್ನಿಶಾಮಕ ದಳದ ಜೊತೆ ಕ್ವಾರಿಯ ಬಳಿ ಹೋಗಿ ಶವಕ್ಕಾಗಿ ಶೋಧ ಕಾರ್ಯವನ್ನು ಪ್ರಾರಂಭಿಸಿದ್ದಾರೆ. ಆದರೆ ಕತ್ತಲಾಗಿದ್ದರಿಂದ ಹುಡುಕಾಟ ಮಾಡಲು ಸಾಧ್ಯವಾಗದೆ ಇಂದು ಬೆಳಿಗ್ಗೆ ಸುಮಾರು 11 ಗಂಟೆಗೆ ಶವ ಪತ್ತೆಯಾಗಿದೆ.

    ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಆನೇಕಲ್ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಈ ಘಟನೆಯ ಸಂಬಂಧ ಜಿಗಣಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದಾರೆ.

  • ಸಿಂಹದ ಮರಿ ಜೊತೆ ಸೆಲ್ಫೀ ತೆಗೆದು ಎಫ್‍ಬಿಯಲ್ಲಿ ಪೋಸ್ ಕೊಟ್ಟಿದ್ದ ವ್ಯಕ್ತಿ ಪೊಲೀಸರ ವಶಕ್ಕೆ

    ಸಿಂಹದ ಮರಿ ಜೊತೆ ಸೆಲ್ಫೀ ತೆಗೆದು ಎಫ್‍ಬಿಯಲ್ಲಿ ಪೋಸ್ ಕೊಟ್ಟಿದ್ದ ವ್ಯಕ್ತಿ ಪೊಲೀಸರ ವಶಕ್ಕೆ

    ಪ್ಯಾರಿಸ್: ಸಿಂಹದ ಮರಿಯನ್ನು ಬಾಡಿಗೆಗೆ ಪಡೆದು ಅದರ ಜೊತೆ ಸೆಲ್ಫೀ ತೆಗೆದುಕೊಂಡು ಫೇಸ್‍ಬುಕ್‍ನಲ್ಲಿ ಶೋ ಆಫ್ ಮಾಡಿದ್ದ ವ್ಯಕ್ತಿಯನ್ನ ಪೊಲೀಸರು ವಶಕ್ಕೆ ಪಡೆದ ಘಟನೆ ಫ್ರಾನ್ಸ್‍ನಲ್ಲಿ ನಡೆದಿದೆ.

    24 ವಯಸ್ಸಿನ ವ್ಯಕ್ತಿಯೊಬ್ಬ ಸಿಂಹದ ಮರಿ ಜೊತೆ ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಿಗೆ ಹಾಕಿದ್ದ. ಇದನ್ನ ನೋಡಿದ್ದ ಪೊಲೀಸರು ಆತನನ್ನು ಟ್ರೇಸ್ ಮಾಡಿ ಮನೆಗೆ ಎಂಟ್ರಿ ಕೊಟ್ಟಿದ್ರು. ಆದ್ರೆ ಆತ ಆ ಸಿಂಹದ ಮರಿಯನ್ನ ಬೇರೆಲ್ಲೋ ಬಿಟ್ಟು ಬಂದಿದ್ದ. ಕೊನೆಗೆ ಅಗ್ನಿಶಾಮಕ ಸಿಬ್ಬಂದಿ ಅಪಾರ್ಟ್‍ಮೆಂಟ್‍ವೊಂದರಲ್ಲಿ ಅನಾಥವಾಗಿ ಬಿಡಲಾಗಿದ್ದ ಸಿಂಹದ ಮರಿಯನ್ನ ರಕ್ಷಣೆ ಮಾಡಿದ್ದಾರೆ.

    ಬುಧವಾರ ಆತ ತಿಳಿಸಿದ್ದ ಖಾಲಿ ಅಪಾರ್ಟ್‍ಮೆಂಟ್ ಗೆ ತೆರಳಿದ ಅಗ್ನಿಶಾಮಕ ದಳದ ಸಿಬ್ಬಂದಿ ಆಹಾರವಿಲ್ಲದೆ ಸೊರಗಿದ್ದ ಸಿಂಹದ ಮರಿಯನ್ನು ರಕ್ಷಿಸಿ, ಅದನ್ನು ಈಗ ಪ್ರಾಣಿಗಳನ್ನು ಆರೈಕೆ ಮಾಡುವ ಕೇಂದ್ರಕ್ಕೆ ಒಪ್ಪಿಸಿದ್ದಾರೆ. ಕಾಡುಪ್ರಾಣಿಯನ್ನ ಅಕ್ರಮವಾಗಿ ಇರಿಸಿಕೊಂಡಿದ್ದ ಆರೋಪದ ಮೇಲೆ ಅ ವ್ಯಕ್ತಿಯನ್ನ ವಶಕ್ಕೆ ಪಡೆದಿದ್ದಾರೆ.

    ಪ್ಯಾರಿಸ್ ಅಗ್ನಿಶಾಮಕ ಸಿಬ್ಬಂದಿ ಸಿಂಹದ ಮರಿಯ ರಕ್ಷಣೆಯ ಫೋಟೋಗಳನ್ನ ಫೇಸ್‍ಬುಕ್‍ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಕಾಡು ಪ್ರಾಣಿಗಳೆಂದರೆ ಸಾಕು ಪ್ರಾಣಿಗಳಂತಲ್ಲ ಅಥವಾ ಗೊಂಬೆಗಳಲ್ಲ ಎಂದು ಪ್ರತಿಯೊಬ್ಬರಿಗೂ ನೆನಪಿಸುವುದು ಬಹಳ ಮುಖ್ಯ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಸಿಂಹದ ಮರಿಯನ್ನ ರಕ್ಷಿಸಿದ್ದಕ್ಕೆ ಜನರು, ತಾಯಿಯಿಂದ ಬೇರೆಯಾದ ಮರಿಯನ್ನು ಕಾಪಾಡಿದ್ದಕ್ಕೆ ಧನ್ಯವಾದ ಎಂದು ಪ್ರತಿಕ್ರಿಯಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಈ ಹಿಂದೆ 2016ರಲ್ಲಿ ಪ್ಯಾರಿಸ್‍ನಲ್ಲಿ ಇದೇ ರೀತಿ ಸಿಂಹದ ಮರಿಯೊಂದನ್ನ ಅನಾಥ ಮಾಡಲಾಗಿತ್ತು. ಡ್ರಗ್ ಡೀಲರ್‍ಗಳು ಒಂದು ಫೋಟೋಗೆ ಕೆಲವು ಯೂರೋ ನಿಗದಿಪಡಿಸಿ ಮರಿಯನ್ನ ಬಾಡಿಗೆ ಕೊಡುತ್ತಿದ್ದರು ಎಂದು ವರದಿಯಾಗಿದೆ.

  • ಗ್ಯಾಸ್ ಸಿಲಿಂಡರ್ ರೀಫಿಲ್ಲಿಂಗ್ ಮಾಡುವ ವೇಳೆ ಸ್ಫೋಟ – ತಪ್ಪಿದ ಬಾರೀ ಅನಾಹುತ

    ಗ್ಯಾಸ್ ಸಿಲಿಂಡರ್ ರೀಫಿಲ್ಲಿಂಗ್ ಮಾಡುವ ವೇಳೆ ಸ್ಫೋಟ – ತಪ್ಪಿದ ಬಾರೀ ಅನಾಹುತ

    ಬೆಂಗಳೂರು: ಗ್ಯಾಸ್ ಸಿಲಿಂಡರ್ ರೀಫಿಲ್ಲಿಂಗ್ ಮಾಡುವ ವೇಳೆ ಸಿಲಿಂಡರ್ ಸ್ಫೋಟಗೊಂಡು ಇಬ್ಬರು ಗಾಯಗೊಂಡಿದ್ದಾರೆ.

    ಪೀಣ್ಯ ಎನ್.ಟಿಟಿ.ಎಫ್ ಬಳಿ ಇರುವ ಮನೆಯ ಎರಡನೇ ಮಹಡಿಯಲ್ಲಿ ಅಕ್ರಮವಾಗಿ ಸಿಲಿಂಡರ್ ರೀಫಿಲ್ಲಿಂಗ್ ನಡೆಸುತ್ತಿದ್ದರು. ಈ ವೇಳೆ ಅವಘಡ ಸಂಭವಿಸಿದೆ. ಮನೆಯಲ್ಲಿ ಸುಮಾರು 15 ಕ್ಕೂ ಹೆಚ್ಚು ಸಿಲಿಂಡರ್‍ಗಳಿದ್ದವು. ಆದರೆ ಅದೃಷ್ಟವಶಾತ್ ಯಾವುದೇ ದೊಡ್ಡ ಅನಾಹುತ ಸಂಭವಿಸಿಲ್ಲ.

    ಘಟನೆ ನಡೆದ ಕೂಡಲೇ ಸ್ಥಳಕ್ಕೆ ಆಗಮಿಸಿದ ಎರಡು ಅಗ್ನಿಶಾಮಕ ದಳದ ವಾಹನದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಗಾಯಗೊಂಡ ಇಬ್ಬರ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೀಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

  • ಬಾವಿಯಲ್ಲಿ ಈಜಲು ಹೋಗಿ ಮೊಮ್ಮಕ್ಕಳ ಜೊತೆ ಅಜ್ಜನೂ ನೀರುಪಾಲು

    ಬಾವಿಯಲ್ಲಿ ಈಜಲು ಹೋಗಿ ಮೊಮ್ಮಕ್ಕಳ ಜೊತೆ ಅಜ್ಜನೂ ನೀರುಪಾಲು

    ಬೆಳಗಾವಿ: ತೆರೆದ ಬಾವಿಯಲ್ಲಿ ಇಬ್ಬರು ಮೊಮ್ಮಕ್ಕಳ ಜೊತೆ ಈಜಲೂ ಹೋಗಿ ಅಜ್ಜನೂ ನೀರು ಪಾಲಾಗಿರುವ ದಾರುಣ ಘಟನೆ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹಣ್ಣಿಕೇರಿ ಗ್ರಾಮದಲ್ಲಿ ನಡೆದಿದೆ.

    ಅಜ್ಜ ಶ್ರೀಶೈಲ ಚರಂತಿಮಠ (67) ಮೊಮ್ಮಕ್ಕಳಾದ ಸಮರ್ಥ(12) ಹಾಗೂ ಸೋಮಯ್ಯ (11) ಮೃತ ದುರ್ದೈವಿಗಳು.

    ಶಾಲೆಗೆ ರಜೆ ಇದ್ದ ಕಾರಣ ಮೊಮ್ಮಕ್ಕಳು ಸೀಗೆ ಹುಣ್ಣಿಮೆಯಲ್ಲಿರುವ ಅಜ್ಜನ ಮನೆಗೆ ಬಂದಿದ್ದಾರೆ. ಅಜ್ಜನ ಜೊತೆ ಇಬ್ಬರು ಮೊಮ್ಮಕ್ಕಳು ತೋಟಕ್ಕೆ ಹೋಗಿದ್ದಾರೆ. ಅಲ್ಲಿ ಬಾವಿಯನ್ನು ನೋಡಿ ಹಠ ಹಿಡಿದು ಬಾವಿಯಲ್ಲಿ ಈಜಲು ಅಜ್ಜನನ್ನು ಕರೆದುಕೊಂಡು ಹೋಗಿದ್ದಾರೆ. ಯಾರಿಗೂ ಈಜಲು ಬಾರದ ಕಾರಣ ಎಲ್ಲರೂ ನೀರು ಪಾಲಾಗಿದ್ದಾರೆ.

    ಅಜ್ಜ ಮತ್ತು ಓರ್ವ ಮೊಮ್ಮಗನ ಶವ ಪತ್ತೆಯಾಗಿದೆ. ಸ್ಥಳಕ್ಕೆ ನೇಸರ್ಗಿ ಠಾಣೆಯ ಪೊಲೀಸರು ಹಾಗೂ ಅಗ್ನಿಶಾಮಕ ದಳ ಭೇಟಿ ನೀಡಿ ಶೋಧಕಾರ್ಯ ನಡೆಸುತ್ತಿದ್ದಾರೆ.

  • ಗಂಡನ ಕುಡಿತದ ಚಟ ತಾಳಲಾರದೇ ಮೂವರು ಮಕ್ಕಳ ಜೊತೆ ತಾಯಿ ಆತ್ಮಹತ್ಯೆ

    ಗಂಡನ ಕುಡಿತದ ಚಟ ತಾಳಲಾರದೇ ಮೂವರು ಮಕ್ಕಳ ಜೊತೆ ತಾಯಿ ಆತ್ಮಹತ್ಯೆ

    ಕಲಬುರಗಿ: ಮೂವರು ಮಕ್ಕಳ ಜೊತೆ ತಾಯಿ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿ ತಾಲೂಕಿನ ಹಡಗಿಲ್ ಗ್ರಾಮದ ಹೊರವಲಯದಲ್ಲಿ ನಡೆದಿದೆ.

    ತಾಯಿ ಜಯಶ್ರೀ (40) ಮಕ್ಕಳಾದ ಪವಿತ್ರ (12), ಸುನೀಲ್(10), ಹಾಗೂ ಅನಿಲ್ (5) ಮೃತ ದುರ್ದೈವಿಗಳು. ಗಂಡ ಬಸವರಾಜನ ಕುಡಿತ ಚಟವನ್ನು ತಾಳಲಾರದೆ ಬೇಸತ್ತು ಜಯಶ್ರೀ ಮಕ್ಕಳ ಜೊತೆಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಘಟನೆ ನಡೆದ ಸ್ಥಳಕ್ಕೆ ಅಗ್ನಿಶಾಮಕ ದಳ ಬಂದು ಶೋಧಕಾರ್ಯ ನಡೆಸಿ ಮೃತದೇಹಗಳನ್ನು ಪತ್ತೆ ಮಾಡಿದ್ದಾರೆ. ನಂತರ ಶವಗಳನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಪ್ರಕರಣ ಫರಹತ್ತಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

     

  • ಮೂರು ದಿನ ಬಾವಿಯೊಳಗೆ ಇದ್ದು ಬದುಕಿ ಬಂದ ಬೆಂಗಳೂರಿನ ಹಿರಿಯ ವ್ಯಕ್ತಿ

    ಮೂರು ದಿನ ಬಾವಿಯೊಳಗೆ ಇದ್ದು ಬದುಕಿ ಬಂದ ಬೆಂಗಳೂರಿನ ಹಿರಿಯ ವ್ಯಕ್ತಿ

    ಚೆನ್ನೈ: ಆಕಸ್ಮಿಕವಾಗಿ ಸುಮಾರು 50 ಅಡಿ ಆಳದ ಬಾವಿಗೆ ಬಿದ್ದಿದ್ದ 74 ವಯಸ್ಸಿನ ವ್ಯಕ್ತಿಯೊಬ್ಬರನ್ನು ಮೂರು ದಿನಗಳ ನಂತರ ರಕ್ಷಿಸಿದ ಘಟನೆ ಚೆನ್ನೈನಿಂದ ಸುಮಾರು 80 ಕಿ.ಮೀ ದೂರದಲ್ಲಿರುವ ತಿರುತ್ತಣಿಯಲ್ಲಿ ನಡೆದಿದೆ.

    ಚಾಕುಗಳನ್ನು ಮಾರಾಟ ಮಾಡಿ ಜೀವನ ನಡೆಸುತ್ತಿದ್ದ ರಂಗರಾಜುಲು (74) ಗುರುವಾರ ಬಾವಿಗೆ ಬಿದ್ದಿದ್ದರು. ಮೂರು ದಿನಗಳ ಕಾಲ ಒಂದೂವರೆ ಅಡಿ ನೀರಿನ ಆಳದಲ್ಲಿ ನಿಂತಿದ್ದರು. ಪೋಲಿಸರು ಅಗ್ನಿಶಾಮಕ ದಳ ಮತ್ತು ರಕ್ಷಣಾ ಸೇವಾ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ನಂತರ ಅವರು ಸ್ಥಳಕ್ಕೆ ಬಂದು ಅವರನ್ನು ಮೇಲಕ್ಕೆತ್ತಿದ್ದಾರೆ.

    ಮೂರು ದಿನ ನೀರಿನಲ್ಲಿ ಇದ್ದುದ್ದರಿಂದ ಅವರ ಪಾದ ಉದಿಕೊಂಡಿತ್ತು. ಅಗ್ನಿಶಾಮಕ ಅಧಿಕಾರಿ ಎನ್. ಬಸ್ಕರನ್ ಅವರ ನೇತೃತ್ವದ ತಂಡವು ಸುಮಾರು ಒಂದು ಗಂಟೆಯ ಕಾಲ ಕಾರ್ಯಾಚರಣೆ ನಡೆಸಿ ಮೇಲಕ್ಕೆ ಎತ್ತಿದ್ದಾರೆ.

    ಮೊದಲು ಪಾಳು ಬಾವಿಯ ಸುತ್ತಾ ಬೆಳೆದಿದ್ದ ಸಸ್ಯ, ಮುಳ್ಳುಗಳನ್ನು ತೆರವು ಗೊಳಿಸಿದರು. ನಂತರ ಡ್ರೈವರ್ ಎಂ. ಶಿಕುಮಾರ್ ಮತ್ತು ಮೆಕ್ಯಾನಿಕ್ ಹರಿ ಕೃಷ್ಣ ಅವರನ್ನು ಮೊದಲಿಗೆ ಹಗ್ಗದ ಸಹಾಯದಿಂದ ಬಾವಿಯೊಳಗೆ ಕೆಳಗೆ ಇಳಿಸಿ ರಾಜುಲು ಅವರನ್ನು ಮೇಲಕ್ಕೆ ಕರೆತಂದರು ಎಂದು ಹೇಳಿದರು.

    ರಾಜು ಅವರನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿಸಿದ್ದು, ಸದ್ಯಕ್ಕೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಬಾವಿಗೆ ಬಿದ್ದ ತಕ್ಷಣ ನಾನು ಕೂಗಿದೆ. ಆದರೆ ಯಾರು ಇಲ್ಲದ ಕಾರಣ ಕೇಳಿಸಲಿಲ್ಲ. ಊಟ, ನಿದ್ದೆ ಇಲ್ಲದೆ ನನ್ನ ಧ್ವನಿಯನ್ನು ಕಳೆದುಕೊಂಡಿದ್ದೆ. ಬಾವಿಯ ನೀರು ಹಾಗೂ ಅಲ್ಲಿದ್ದ ಎಲೆಗಳನ್ನು ಸೇವಿಸುತ್ತಿದ್ದೆ ಎಂದು ತಾವು ಅನುಭವಿಸಿದ ಕಷ್ಟವನ್ನು ಅಧಿಕಾರಿಗೆ ಹೇಳಿಕೊಂಡರು.

    ಹೇಗಾಯಿತು?: ರಾಜುಲು ಮೂಲತಃ ಬೆಂಗಳೂರಿನ ಕೋರಮಂಗಲದವರು. ಅವರು ಸೆ.26 ರಂದು ಕತ್ತಿಗಳನ್ನು ಮಾರಾಟ ಮಾಡಲು ತಿರುತ್ತಣಿಗೆ ಹೋಗಿದ್ದರು. ವ್ಯಾಪಾರ ಮಾಡಿ ಹಿಂದಿರುಗುತ್ತಿದ್ದಾಗ ಅಲ್ಲೇ ಸಮೀಪದಲ್ಲಿದ್ದ ಎಂ.ಸಿ ಕೃಷ್ಣ ಬಾಬು ಅವರ ತೋಟಕ್ಕೆ ಶೌಚಾಲಯ ಮಾಡಲು ಹೋಗಿದ್ದಾರೆ. ಆಕಸ್ಮತಾಗಿ ಬಾವಿಗೆ ಬಿದ್ದಿದ್ದಾರೆ. ಕುಟುಂಬವು ಮನೆಗೆ ಬಾರದೆ ಇದ್ದುದ್ದರಿಂದ ಗಾಬರಿಯಾಗಿ ತಿರುತ್ತಣಿ ಪೊಲೀಸರಿಗೆ ದೂರು ನೀಡಿದ್ದಾರೆ.

    ಶನಿವಾರ ಕೃಷ್ಣ ಬಾಬುವಿನ ತೋಟದಲ್ಲಿ ಯಾರೋ ಪದೇ ಪದೇ ಕೂಗಿದ ಶಬ್ಧ ಕೇಳಿ ಬರುತ್ತಿತ್ತು. ನಂತರ ಕೃಷ್ಣ ಅವರು ನೋಡಿ ರಕ್ಷಣಾ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು.