Tag: ಅಗ್ನಿಶಾಮಕ ದಳ

  • ಮೀನು ಹಿಡಿಯಲು ಹೋದ ಇಬ್ಬರು ಮಕ್ಕಳು ನೀರು ಪಾಲು

    ಮೀನು ಹಿಡಿಯಲು ಹೋದ ಇಬ್ಬರು ಮಕ್ಕಳು ನೀರು ಪಾಲು

    ವಿಜಯಪುರ: ಕೆರೆಯಲ್ಲಿ ಮೀನು ಹಿಡಿಯಲು ಹೋದ ಇಬ್ಬರು ಮಕ್ಕಳು ನೀರು ಪಾಲಾಗಿರುವ ಘಟನೆ ಜಿಲ್ಲೆಯ ದೊಡ್ಡ ಕೆರೆಯಲ್ಲಿ ನಡೆದಿದೆ.

    12 ವರ್ಷದ ಲೋಕೇಶ್ ನಾಗರಾಜ ತಟ್ಟಿ ಎಂಬ ಬಾಲಕನ ಶವ ಪತ್ತೆಯಾಗಿದ್ದು, ಮತ್ತೊಬ್ಬನ ಶವ ಪತ್ತೆಯಾಗದ ಕಾರಣ ಬಾಲಕನ ಗುರುತು ಪತ್ತೆಯಾಗಿಲ್ಲ. ಆದರೆ ಇಬ್ಬರು ಮೃತರು ಮುದ್ದೇಬಿಹಾಳ ನಿವಾಸಿಗಳಾಗಿದ್ದಾರೆ. ಮುದ್ದೇಬಿಹಾಳ ಪಟ್ಟಣದ ಇಂದಿರಾ ಸರ್ಕಲ್ ಬಳಿಯ ದೊಡ್ಡ ಕೆರೆಯಲ್ಲಿ ಈ ಘಟನೆ ಸಂಭವಿಸಿದೆ.

    ಇಬ್ಬರು ಬಾಲಕರು ಶನಿವಾರ ಶಾಲೆ ಮುಗಿಸಿ ಮೀನು ಹಿಡಿಯಲು ಕೆರೆಗೆ ಹೋಗಿದ್ದಾರೆ. ಆದರೆ ಆಕಸ್ಮತಾಗಿ ಇಬ್ಬರು ಕಾಲುಜಾರಿ ಕೆರೆಗೆ ಬಿದ್ದಿದ್ದಾರೆ. ಸುತ್ತಮುತ್ತ ಇದ್ದವರು ನೋಡಿ ತಕ್ಷಣ ಪೊಲೀಸ್ ಠಾಣೆಗೆ ಹೋಗಿ ವಿಚಾರ ತಿಳಿಸಿದ್ದಾರೆ.

    ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಬಳಿಕ ಅಗ್ನಿಶಾಮಕ ದಳದವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ಶನಿವಾರ ಸಂಜೆಯಿಂದ ಶವಕ್ಕಾಗಿ ಶೋಧ ಕಾರ್ಯ ಮಾಡುತ್ತಿದ್ದಾರೆ. ಆದರೆ ಒಬ್ಬನ ಮೃತದೇಹ ಪತ್ತೆಯಾಗಿದ್ದು, ರಾತ್ರಿಯಾದ ಕಾರಣ ಶೋಧಕಾರ್ಯ ಮಾಡಲು ಸಾಧ್ಯವಾಗಿಲ್ಲ. ಇಂದು ಮುಂಜಾನೆಯಿಂದಲೇ ಮತ್ತೊಬ್ಬ ಬಾಲಕನ ಮೃತದೇಹಕ್ಕಾಗಿ ಅಗ್ನಿಶಾಮಕ ದಳ ಶೋಧಕಾರ್ಯ ನಡೆಸುತ್ತಿದೆ.

    ಈ ಘಟನೆ ಸಂಬಂಧ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮುಂಬೈ ಕಟ್ಟಡದಲ್ಲಿ ಅಗ್ನಿ ಅವಘಡ- ಇಬ್ಬರು ಮಕ್ಕಳು ಸೇರಿದಂತೆ ನಾಲ್ವರ ಸಾವು

    ಮುಂಬೈ ಕಟ್ಟಡದಲ್ಲಿ ಅಗ್ನಿ ಅವಘಡ- ಇಬ್ಬರು ಮಕ್ಕಳು ಸೇರಿದಂತೆ ನಾಲ್ವರ ಸಾವು

    ಮುಂಬೈ: ವಾಣಿಜ್ಯ ನಗರಿ ಮುಂಬೈಯಲ್ಲಿ ಮತ್ತೊಂದು ಅಗ್ನಿ ದುರಂತ ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ

    ನಗರದ ಮರೋಲ್‍ನ ಮೈಮೂನ್ ಕಟ್ಟಡದಲ್ಲಿ ಬುಧವಾರ ರಾತ್ರಿ ಈ ದುರಂತ ನಡೆದಿದೆ. ಕಟ್ಟಡದ ಮೂರನೇ ಮಹಡಿಯಲ್ಲಿ ರಾತ್ರಿ ಸುಮಾರು 1.30 ಕ್ಕೆ ಬೆಂಕಿ ಹೊತ್ತಿಕೊಂಡಿದೆ.

    ಅಂಧೇರಿ ಪೂರ್ವದಲ್ಲಿ ಮರೋಲ್‍ನ ಮೈಮೂನ್ ಮಂಝಿಲ್ ಕಟ್ಟಡದಲ್ಲಿ ಬೆಂಕಿ ಹೊತ್ತಿಕೊಂಡಿದೆ ಎಂದು ರಾತ್ರಿ ಸುಮಾರು 2.10ಕ್ಕೆ ಕರೆ ಬಂತು. ನಮ್ಮ ತಂಡ ಆಂಬುಲೆನ್ಸ್ ನೊಂದಿಗೆ ಸುಮಾರು 2.34 ಕ್ಕೆ ಸ್ಥಳಕ್ಕೆ ದೌಡಾಯಿಸಿತು. ಕಟ್ಟಡದಿಂದ 9 ಜನರನ್ನು ರಕ್ಷಿಸಲಾಯ್ತು. ಅದರಲ್ಲಿ 4 ಮಂದಿ ಮೃತಪಟ್ಟಿದ್ದು, ಗಾಯಗೊಂಡಿದ್ದ 5 ಜನರನ್ನ ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಗ್ನಿ ಶಾಮಕ ಸಿಬ್ಬಂದಿ ಮುಂಜಾನೆ 5 ಗಂಟೆ ವೇಳೆಗೆ ಸಂಪೂರ್ಣವಾಗಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಕಳೆದ ವಾರದಿಂದ ಮುಂಬೈನಲ್ಲಿ ಸಂಭವಿಸಿದ ಎರಡನೇ ಅಗ್ನಿ ದುರಂತ ಇದಾಗಿದೆ. ಡಿಸೆಂಬರ್ 28ರಂದು ನಗರದ ಲೋವರ್ ಪ್ಯಾರೆಲ್‍ನ ಕಮಲಾ ಮಿಲ್ಸ್ ಕಂಪೌಂಡ್‍ನಲ್ಲಿ ಅಗ್ನಿ ದುರಂತ ಸಂಭವಿಸಿತ್ತು. ಈ ಅವಘಡದಲ್ಲಿ 12 ಮಹಿಳೆಯರು ಸೇರಿದಂತೆ 14 ಮಂದಿ ಸಾವನ್ನಪ್ಪಿದ್ದು, 12 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.

    ಸಾವನ್ನಪ್ಪಿದವರಲ್ಲಿ ಬಹುತೇಕ ಮಹಿಳೆಯರು ರೂಫ್ ಟಾಪ್ ರೆಸ್ಟೊರೆಂಟೊಂದರಲ್ಲಿ ಹುಟ್ಟುಹಬ್ಬ ಆಚರಣೆಗಾಗಿ ಬಂದಿದ್ದರು. ಹುಟ್ಟುಹಬ್ಬ ಆಚರಿಸಿಕೊಳ್ತಿದ್ದ 28 ವರ್ಷದ ಮಹಿಳೆ ಕೂಡ ಸಾವನ್ನಪ್ಪಿದ್ದರು. ಸೇನಾಪತಿ ಬಾಪತಿ ಮಾರ್ಗ್ ನ ಈ ಕಟ್ಟಡದಲ್ಲಿ ಗುರುವಾರ ತಡರಾತ್ರಿ 12.30 ಕ್ಕೆ ಮೂರು ಮತ್ತು ನಾಲ್ಕನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬಳಿಕ ಇಡೀ ಕಟ್ಟಡಕ್ಕೆ ಆವರಿಸಿತ್ತೆಂದು ಪೊಲೀಸರು ತಿಳಿಸಿದ್ದರು. ಇದನ್ನು ಓದಿ: ಮುಂಬೈನಲ್ಲಿ ಅಗ್ನಿ ದುರಂತ- ಹುಟ್ಟುಹಬ್ಬ ಆಚರಿಸಿಕೊಳ್ತಿದ್ದ ಮಹಿಳೆ ಸೇರಿ 14 ಮಂದಿ ಸಾವು

     

  • ಕುಡಿತದ ಚಟ ಬಿಡಲಾಗದೆ ನೇಣು ಬಿಗಿದುಕೊಂಡು ಆಗ್ನಿಶಾಮಕ ದಳ ಸಿಬ್ಬಂದಿ ಆತ್ಮಹತ್ಯೆ?

    ಕುಡಿತದ ಚಟ ಬಿಡಲಾಗದೆ ನೇಣು ಬಿಗಿದುಕೊಂಡು ಆಗ್ನಿಶಾಮಕ ದಳ ಸಿಬ್ಬಂದಿ ಆತ್ಮಹತ್ಯೆ?

    ಚಿಕ್ಕಬಳ್ಳಾಪುರ: ಮನೆಯ ಮುಂಭಾಗದ ಹೊಂಗೆ ಮರಕ್ಕೆ ನೇಣು ಬಿಗಿದುಕೊಂಡು ಆಗ್ನಿಶಾಮಕ ದಳ ಸಿಬ್ಬಂದಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ಪಟ್ಟಣದಲ್ಲಿ ನಡೆದಿದೆ.

    ಗೌರಿಬಿದನೂರು ಆಗ್ನಿಶಾಮಕ ದಳ ಸಿಬ್ಬಂದಿ ನಾಗಯ್ಯ (58) ಆತ್ಮಹತ್ಯೆಗೆ ಶರಣಾದ ದುರ್ದೈವಿ. ಮೂಲತಃ ಕನಕಪುರ ತಾಲೂಕಿನವರಾದ ನಾಗಯ್ಯ ಹಲವು ವರ್ಷಗಳಿಂದ ಗೌರಿಬಿದನೂರು ಪಟ್ಟಣದ ನೇತಾಜಿ ಕ್ರೀಡಾಂಗಣದ ಬಳಿಯ ಆಗ್ನಿಶಾಮಕ ದಳ ಇಲಾಖೆಗೆ ಸೇರಿದ ವಸತಿ ಕಟ್ಟಡದಲ್ಲಿ ವಾಸವಾಗಿದ್ದರು.

    ಅತಿಯಾದ ಕುಡಿತದ ಚಟದಿಂದ ಅನಾರೋಗ್ಯಕ್ಕೆ ಗುರಿಯಾಗಿದ್ದ ನಾಗಯ್ಯನಿಗೆ ಕುಡಿತದ ಚಟ ಬಿಡುವಂತೆ ವೈದ್ಯರು ಬುದ್ಧಿವಾದ ಹೇಳಿದ್ದರು ಎನ್ನಲಾಗಿದೆ. ಆದ್ರೆ ಕುಡಿತಕ್ಕೆ ದಾಸನಾಗಿದ್ದ ನಾಗಯ್ಯ ಕುಡಿತದ ಚಟ ಬಿಡಲಾಗದೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಅಂತ ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಈ ಸಂಬಂಧ ಗೌರಿಬಿದನೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • ಕೆರೆಯಲ್ಲಿ ತೇಲುತ್ತಿದ್ದ ಪ್ಲಾಸ್ಟಿಕ್ ಬುಟ್ಟಿ ತರಲು ಹೋಗಿ ಯುವಕ ನೀರುಪಾಲು!

    ಕೆರೆಯಲ್ಲಿ ತೇಲುತ್ತಿದ್ದ ಪ್ಲಾಸ್ಟಿಕ್ ಬುಟ್ಟಿ ತರಲು ಹೋಗಿ ಯುವಕ ನೀರುಪಾಲು!

    ಗದಗ: ಕೆರೆಯಲ್ಲಿ ಕಾಣಿಸಿಕೊಂಡ ಪ್ಲಾಸ್ಟಿಕ್ ಬುಟ್ಟಿ ತರಲು ಹೋಗಿದ್ದ ಯುವಕನೊಬ್ಬ ಈಜಲು ಬಾರದೆ ಕೆರೆಯಲ್ಲಿ ಮುಳಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ 20 ವರ್ಷದ ಆನಂದ ರೋಣ ಮೃತ ದುರ್ದೈವಿ. ಗ್ರಾಮದ ಕೆಂಪ ಕೆರೆಯಲ್ಲಿ ಪ್ಲಾಸ್ಟಿಕ್ ಬುಟ್ಟಿ ಕಾಣಿಕೊಂಡಿದೆ. ಈ ವೇಳೆ ಆನಂದ ಆ ಬುಟ್ಟಿ ತೆಗೆದುಕೊಂಡು ಬರಲು ಕೆರೆಯ ಬಳಿ ಹೋಗಿದ್ದಾರೆ. ಬುಟ್ಟಿ ತೆಗೆದುಕೊಂಡು ವಾಪಸ್ ಬರುವ ವೇಳೆ ಈಜಲು ಸಾಧ್ಯವಾಗದೆ ನೀರಲ್ಲಿ ಮುಳಗಿ ಸಾವನ್ನಪ್ಪಿದ್ದಾರೆ.

    ಆನಂದ ಬುಟ್ಟಿ ತರಲು ಹೋಗಿದ್ದನ್ನು ಅಲ್ಲಿನ ಸ್ಥಳೀಯರು ನೋಡಿದ್ದಾರೆ. ಆದ್ರೆ ಬುಟ್ಟಿ ವಾಪಸ್ ತರುವಾಗ ಈಜಲು ಆಗದೇ ನೀರಿನಲ್ಲಿ ಮುಳುಗಿದ್ದಾರೆ. ಇದನ್ನು ನೋಡಿದ ಸ್ಥಳೀಯರು ಕೂಡಲೇ ಕೆರೆಗೆ ಧುಮುಕಿದ್ದಾರೆ. ಆದರೆ ಎಷ್ಟು ಹುಡುಕಿದರೂ ಆನಂದ ಸಿಗಲಿಲ್ಲ. ನಂತರ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ವಿಚಾರ ತಿಳಿಸಿದ್ದಾರೆ.

    ಘಟನೆ ನಡೆದ ಸ್ಥಳಕ್ಕೆ ಅಗ್ನಿಶಾಮಕದಳ ಸಿಬ್ಬಂದಿ ಬಂದು ಕಾರ್ಯಾಚರಣೆ ನಡೆಸಿ ಬಳಿಕ ಯುವಕನ ಮೃತ ದೇಹವನ್ನು ಹೊರತೆಗೆಯಲಾಗಿದೆ. ಈ ಕುರಿತು ಗದಗ ಜಿಲ್ಲೆ ನರೇಗಲ್ ಪೊಲೀಸ್ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

  • ಮೇವು ಸಾಗಾಟ ಮಾಡುತ್ತಿದ್ದಾಗ ಧಗಧಗನೆ ಹೊತ್ತಿ ಉರಿದ ಟ್ರ್ಯಾಕ್ಟರ್!

    ಮೇವು ಸಾಗಾಟ ಮಾಡುತ್ತಿದ್ದಾಗ ಧಗಧಗನೆ ಹೊತ್ತಿ ಉರಿದ ಟ್ರ್ಯಾಕ್ಟರ್!

    ರಾಯಚೂರು: ಮೇವು ಸಾಗಣೆ ಟ್ರ್ಯಾಕ್ಟರ್ ಗೆ ಆಕಸ್ಮಿಕ ಬೆಂಕಿ ಹತ್ತಿದ ಪರಿಣಾಮ ಸಾವಿರಾರು ರೂ. ಮೌಲ್ಯದ ಮೇವು ಭಸ್ಮ, ಟ್ರ್ಯಾಕ್ಟರ್ ಸುಟ್ಟು ಕರಕಲಾಗಿರುವ ಘಟನೆ ಜಿಲ್ಲೆಯ ದೇವದುರ್ಗದ ಜಾಗಟಗಲ್‍ನಲ್ಲಿ ಬಳಿ ನಡೆದಿದೆ.

    ಅರಕೇರಾ ಗ್ರಾಮದ ರಾಮಣ್ಣ ಎಂಬರಿಗೆ ಸೇರಿದ ಟ್ರ್ಯಾಕ್ಟರ್ ಇದಾಗಿದ್ದು, ಜಾಗಟಗಲ್ ನಿಂದ ಅರಕೇರಾಕ್ಕೆ ಮೇವು ಸಾಗಿಸುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಟ್ರ್ಯಾಕ್ಟರ್ ಗೆ ಬೆಂಕಿ ಹತ್ತಿದೆ.

    ಟ್ರ್ಯಾಕ್ಟರ್ ನಲ್ಲಿ ಬೆಂಕಿ ಹೊತ್ತಿಕೊಂಡಿರುವ ಕುರಿತು ಮಾಹಿತಿ ಪಡೆದ ಅಗ್ನಿ ಶಾಮಕ ದಳ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಗಬ್ಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಕಂಟೇನರ್ ಡಿಕ್ಕಿಗೆ ಅಪ್ಪಚ್ಚಿ ಆಯ್ತು ಟಿಟಿ – ಸ್ಥಳದಲ್ಲೇ 9 ಸಾವು, 6 ಮಂದಿ ಗಂಭೀರ

    ಕಂಟೇನರ್ ಡಿಕ್ಕಿಗೆ ಅಪ್ಪಚ್ಚಿ ಆಯ್ತು ಟಿಟಿ – ಸ್ಥಳದಲ್ಲೇ 9 ಸಾವು, 6 ಮಂದಿ ಗಂಭೀರ

    ಚೆನ್ನೈ: ಟೆಂಪೋ ಟ್ರಾವೆಲ್ಲರ್ ಮತ್ತು ಕಂಟೇನರ್ ನಡುವೆ ಭೀಕರ ಅಪಘಾತ ಸಂಭವಿಸಿ ಸ್ಥಳದಲ್ಲಿಯೇ 9 ಮಂದಿ ಮೃತಪಟ್ಟಿರುವ ಘಟನೆ ತಮಿಳುನಾಡಿನ ತಿರುಚ್ಚಿಯಲ್ಲಿ ನಡೆದಿದೆ.

    ಬುಧವಾರ ರಾತ್ರಿ ಸುಮಾರು 11 ಗಂಟೆಗೆ ತಿರುಚ್ಚಿ ಮತ್ತು ಮಧುರೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ. ಅಪಘಾತದಲ್ಲಿ ಮೂವರು ಮಹಿಳೆಯರು, ಇಬ್ಬರು ಮಕ್ಕಳು, ನಾಲ್ವರು ಪುರುಷರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಇನ್ನೂ ಆರು ಮಂದಿಯ ಸ್ಥಿತಿ ಗಂಭೀರವಾಗಿದೆ.

    ಮೃತಪಟ್ಟವರು ಮೂಲತಃ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯವರಾಗಿದ್ದು, ಇವರು ಒಟ್ಟಾಗಿ ತಿರುಪತಿಯ ವೆಂಕಟೇಶ್ವರ ದರ್ಶನಕ್ಕೆ ಟಿಟಿಯಲ್ಲಿ ತೆರಳಿದ್ದರು. ಈ ಸಂದರ್ಭದಲ್ಲಿ ತಿರುಚ್ಚಿ ಸಮೀಪದ ತುವರಂಕುರಿಚ್ಚಿಯಲ್ಲಿರುವ ರಾಷ್ಟ್ರಿಯ ಹೆದ್ದಾರಿಯಲ್ಲಿ ಟಿಟಿಗೆ ಕಂಟೇನರ್ ಬಂದು ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ 9 ಮಂದಿ ಮೃತಪಟ್ಟಿದ್ದಾರೆ.

    ಅಪಘಾತ ನಡೆದ ಸ್ಥಳಕ್ಕೆ ಪೊಲೀಸ್, ಅಗ್ನಿಶಾಮಕ ದಳ ಮತ್ತು ರಕ್ಷಣಾ ಪಡೆ ಬಂದು ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಟಿಟಿ ಚಾಲಕನನ್ನು ತಿರುಚಿಯ ಮಹಾತ್ಮ ಗಾಂಧಿ ಮೆಮೊರಿಯಲ್ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.

    ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಚಾಲಕ ವೇಗವಾಗಿ ಟಿಟಿಯನ್ನು ಚಲಾಯಿಸಿದ್ದರಿಂದ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ.

     

  • ಗೃಹಪ್ರವೇಶಕ್ಕೆಂದು ದಿನಸಿ ತಂದ ಕಾರಿನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ

    ಗೃಹಪ್ರವೇಶಕ್ಕೆಂದು ದಿನಸಿ ತಂದ ಕಾರಿನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ

    ಹಾಸನ: ಶಾರ್ಟ್ ಸರ್ಕ್ಯೂಟ್ ನಿಂದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಕಾರೊಂದು ಹೊತ್ತಿ ಉರಿದಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದಿದೆ.

    ಪಟ್ಟಣದ ಗಾಂಧಿ ವೃತ್ತದ ನಿವಾಸಿ ಜಯರಾಮ್ ಎಂಬುವರ ಮಾರುತಿ ಓಮ್ನಿ ಕಾರು ಅವಘಡದಿಂದ ಸುಟ್ಟು ಕರಕಲಾಗಿದೆ. ಜಯರಾಮ್ ಅವರು ತಮ್ಮ ಮನೆಯ ಗೃಹಪ್ರವೇಶಕ್ಕೆ ಬೇಕಾದ ವಸ್ತುಗಳನ್ನು ಕಾರಿನಲ್ಲಿಯೇ ತಂದು ಮನೆಯ ಬಳಿ ನಿಲ್ಲಿಸಿದ್ದರು. ನಂತರ ದಿನಸಿ ಸಾಮಾನುಗಳನ್ನು ಮನೆಯ ಒಳಗೆ ಸಾಗಿಸುವ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ.

    ಸಿಲಿಂಡರ್ ಸ್ಫೋಟದ ಪರಿಣಾಮ ನೋಡ ನೋಡುತ್ತಿದ್ದಂತೆ ಕಾರು ಹೊತ್ತಿ ಉರಿದಿದೆ. ಸ್ಥಳೀಯರು ಕೂಡಲೇ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ನಂತರ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ವಿಚಾರ ತಿಳಿಸಿದ್ದು, ಬಳಿಕ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಬಂದು ಬೆಂಕಿಯನ್ನು ನಂದಿಸಿದ್ದಾರೆ. ಆದರೆ ಅಷ್ಟರಲ್ಲಿ ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ. ಸದ್ಯಕ್ಕೆ ಈ ಅವಘಡದಿಂದ ಯಾವುದೇ ಅಪಾಯ ಸಂಭವಿಸಿಲ್ಲ.

  • ಈಜಲು ಹೋದ ಮೊರಾರ್ಜಿ ಕಾಲೇಜು ವಿದ್ಯಾರ್ಥಿ ನೀರು ಪಾಲು

    ಈಜಲು ಹೋದ ಮೊರಾರ್ಜಿ ಕಾಲೇಜು ವಿದ್ಯಾರ್ಥಿ ನೀರು ಪಾಲು

    ಬೀದರ್: ಈಜಲು ಹೋದ ವಿದ್ಯಾರ್ಥಿಯೊಬ್ಬ ನೀರು ಪಾಲಾಗಿರುವ ಘಟನೆ ಜಿಲ್ಲೆಯ ಕಮಠಾಣದಲ್ಲಿರುವ ಮೊರಾರ್ಜಿ ಕಾಲೇಜಿನ ಸಮೀಪದಲ್ಲಿ ನಡೆದಿದೆ.

    ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ಶಿವಕುಮಾರ ಶ್ರೀಮಂತ (17) ಮೃತಪಟ್ಟಿರುವ ವಿದ್ಯಾರ್ಥಿ. ಶನಿವಾರ ಮಧ್ಯಾಹ್ನದ ಊಟ ಮಾಡಿ ಕಾಲೇಜಿನ ಹಿಂಬದಿಯಿರುವ ನೀರಿನ ಹೊಂಡದಲ್ಲಿ ಈಜಲು ಹೋಗಿದ್ದಾನೆ. ಆದರೆ ಈಜಲು ಬಾರದೇ ಹೊಂಡದಲ್ಲಿಯೇ ಮುಳುಗಿ ಸಾವನ್ನಪ್ಪಿದ್ದಾನೆ.

    ಶಿವಕುಮಾರ್ ಮಧ್ಯಾಹ್ನ ತನ್ನ ಮೂವರು ಸ್ನೇಹಿತರೊಂದಿಗೆ ಹೊಂಡದಲ್ಲಿ ಈಜಾಡಲು ಹೋಗಿದ್ದಾನೆ. ಶಿವಕುಮಾರ್ ಈಜುಬಾರದೆ ನೀರಲ್ಲಿ ಮುಳುಗುತ್ತಿದ್ದಂತೆ ಸ್ನೇಹಿತರು ಭಯದಿಂದ ಓಡಿ ಹೋಗಿದ್ದಾರೆ. ಆದರೆ ಸರಿಯಾದ ಸಮಯಕ್ಕೆ ವಿಷಯ ತಿಳಿಸುವಲ್ಲಿ ಅವರು ವಿಳಂಬ ಮಾಡಿದ್ದಾರೆ. ಅಷ್ಟೇ ಅಲ್ಲದೇ ವಿದ್ಯಾರ್ಥಿ ಹೊಂಡದಲ್ಲಿ ಕಾಣೆಯಾಗಿದ್ದರೂ ಮೂರು ಗಂಟೆ ತಡವಾಗಿ ಸ್ಥಳಕ್ಕೆ ಪ್ರಾಚಾರ್ಯ ರವೀಂದ್ರ ಬಂದಿದ್ದಾರೆ. ಇದರಿಂದ ಕಾಲೇಜು ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ಶಿವಕುಮಾರ್ ಮೃತಪಟ್ಟಿದ್ದಾನೆ ಎಂದು ಸಂಬಂಧಿಕರು ಆರೋಪಿಸುತ್ತಿದ್ದಾರೆ.

    ಘಟನೆ ನಡೆದ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿದ್ದು, ಶವಕ್ಕಾಗಿ ರಾತ್ರಿ ಎಲ್ಲಾ ಹುಡುಕಾಟ ಮಾಡಿದ್ದಾರೆ. ಆದರೆ ಏನು ಪ್ರಯೋಜನವಾಗಿಲ್ಲ. ಕೊನೆಗೆ ಸತತ ಹುಟುಕಾಟದಿಂದ ಇಂದು ವಿದ್ಯಾರ್ಥಿಯ ಶವ ಪತ್ತೆಯಾಗಿದೆ. ಈ ಘಟನೆ ಸಂಬಂಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಧಗಧಗನೇ ಹೊತ್ತಿ ಉರಿದ ಶಾಲಾ ಬಸ್- ಅಪಾಯದಿಂದ 30 ವಿದ್ಯಾರ್ಥಿಗಳು ಪಾರು

    ಧಗಧಗನೇ ಹೊತ್ತಿ ಉರಿದ ಶಾಲಾ ಬಸ್- ಅಪಾಯದಿಂದ 30 ವಿದ್ಯಾರ್ಥಿಗಳು ಪಾರು

    ನವದೆಹಲಿ: ರಸ್ತೆಯಲ್ಲಿಯೇ ಶಾಲಾ ಬಸ್ ಒಂದು ಹೊತ್ತಿ ಉರಿದಿದ್ದು, ಸುಮಾರು 30 ವಿದ್ಯಾರ್ಥಿಗಳು ಅಪಾಯದಿಂದ ಪಾರಾಗಿರುವ ಘಟನೆ ದೆಹಲಿಯ ಡೌಲಾ ಕುವಾನ್ ಪ್ರದೇಶದಲ್ಲಿ ನಡೆದಿದೆ.

    ನಾರಾಯಣದಲ್ಲಿರುವ ಕೇಂದ್ರಿಯ ವಿದ್ಯಾಲಯ ಶಾಲೆಗೆ ಸೇರಿದ ಬಸ್ ಆಗಿದೆ. ಈ ಬಸ್ ಸುಮಾರು 30 ವಿದ್ಯಾರ್ಥಿಗಳನ್ನು ಕರೆದುಕೊಂಡು ಶಾಲೆಗೆ ತೆರಳುತ್ತಿತ್ತು. ಈ ಸಂದರ್ಭದಲ್ಲಿ ಡೌಲಾ ಕುವಾನ್ ಸಮೀಪದಲ್ಲಿ ಇದ್ದಕ್ಕಿದ್ದಂತೆ ಬಸ್‍ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.

    ಬಸ್‍ನಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ವಿದ್ಯಾರ್ಥಿಗಳು ಕಿರಿದಾದ ಮಾರ್ಗದಿಂದ ತಪ್ಪಿಸಿಕೊಂಡಿದ್ದಾರೆ. ತಾಂತ್ರಿಕ ದೋಷದಿಂದ ಬಸ್‍ಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗುತ್ತಿದೆ.

    ಘಟನೆ ನಡೆದ ಸ್ಥಳಕ್ಕೆ ತಕ್ಷಣ ಮಾಹಿತಿ ತಿಳಿದು ಮೂರು ಅಗ್ನಿಶಾಮಕ ದಳಗಳು ಬಂದು ಬೆಂಕಿಯನ್ನು ನಂದಿಸಿವೆ. ಸದ್ಯ ಎಲ್ಲಾ ವಿದ್ಯಾರ್ಥಿಗಳು ಸುರಕ್ಷಿತವಾಗಿದ್ದಾರೆ. ಯಾರೊಬ್ಬರಿಗೆ ಅಪಾಯ ಸಂಭವಿಸಿಲ್ಲ ಮಾಧ್ಯಮಗಳು ವರದಿ ಮಾಡಿವೆ.

    ಬಸ್‍ನ ಇಂಜಿನ್‍ನಲ್ಲಿ ತಾಂತ್ರಿಕ ದೋಷ ಉಂಟಾಗಿ ಈ ಅನಾಹುತ ಸಂಭವಿಸಿದೆ ಎಂದು ವರದಿಯಾಗಿದೆ. ಆದರೆ ಇನ್ನು ಈ ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.

  • ಬೆಂಕಿಯ ಕೆನ್ನಾಲಿಗೆಗೆ ಹೊತ್ತಿ ಉರಿದ ಗುಜರಿ ಅಂಗಡಿ

    ಬೆಂಕಿಯ ಕೆನ್ನಾಲಿಗೆಗೆ ಹೊತ್ತಿ ಉರಿದ ಗುಜರಿ ಅಂಗಡಿ

    ಉಡುಪಿ: ಗುಜರಿ ಅಂಗಡಿಗೆ ಬೆಂಕಿ ಬಿದ್ದು ಸಂಪೂರ್ಣ ಭಸ್ಮವಾಗಿರುವ ಘಟನೆ ಉಡುಪಿ ಜಿಲ್ಲೆ ಬ್ರಹ್ಮಾವರದಲ್ಲಿ ನಡೆದಿದೆ.

    ಕಳೆದ ತಡರಾತ್ರಿ ಶಾರ್ಟ್ ಸರ್ಕ್ಯೂಟ್ ನಿಂದ ಕಾಣಿಸಿಕೊಂಡ ಬೆಂಕಿ ಸಂಪೂರ್ಣ ಅಂಗಡಿಗೆ ಹತ್ತಿಕೊಂಡಿದೆ. ನೋಡ ನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆ ಆವರಿಸಿಕೊಂಡಿ ಸಂಪೂರ್ಣ ಅಂಗಡಿ ಹೊತ್ತಿ ಉರಿದಿದೆ. ಮಹಮ್ಮದ್ ಮೂಸ ಮತ್ತು ಅವರ ಮಗ ಸಮೀರ್ ಗುಜರಿ ವ್ಯವಹಾರವನ್ನು ನಡೆಸುತ್ತಿದ್ದರು.

    ಬುಧವಾರ ಸಂಜೆ ವ್ಯಾಪಾರ ಮುಗಿಸಿ ಹೋಗಿದ್ದರು. ರಾತ್ರಿ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಹತ್ತಿಕೊಂಡಿದೆ. ಕೂಡಲೇ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಎರಡು ಅಗ್ನಿಶಾಮಕ ವಾಹನ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಲು ಪ್ರಯತ್ನಪಟ್ಟರು ಅಂಗಡಿಯಲ್ಲಿದ್ದ ವಸ್ತುಗಳೆಲ್ಲಾ ಸುಟ್ಟು ಕರಕಲಾಗಿವೆ.

    ಅಂಗಡಿಯೊಳಗಿದ್ದ ಪ್ಲಾಸ್ಟಿಕ್, ಪೇಪರು- ಸಾವಿರಾರು ರಟ್ಟುಗಳಿಗೆ ಬೆಂಕಿ ಹತ್ತಿಕೊಂಡಿದ್ದರಿಂದ ಬೆಂಕಿ ನಂದಿಸಲು ಹರಸಾಹಸ ಪಡಬೇಕಾಯ್ತು. ಲಕ್ಷಾಂತರ ಮೌಲ್ಯದ ಗುಜರಿ ವಸ್ತುಗಳು ಅಂಗಡಿಯಲ್ಲಿದ್ದವು ಎಂಬ ಮಾಹಿತಿಯಿದೆ. ಬ್ರಹ್ಮಾವರ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.