Tag: ಅಗ್ನಿಶಾಮಕ ದಳ

  • ಬಟ್ಟೆ ತೊಳೆಯಲು ಬಾವಿಗೆ ಹೋದಾಗ ಕಾಲುಜಾರಿ ಇಬ್ಬರು ಬಾಲಕಿಯರ ದುರ್ಮರಣ

    ಬಟ್ಟೆ ತೊಳೆಯಲು ಬಾವಿಗೆ ಹೋದಾಗ ಕಾಲುಜಾರಿ ಇಬ್ಬರು ಬಾಲಕಿಯರ ದುರ್ಮರಣ

    ಕಲಬುರಗಿ: ಬಾವಿಗೆ ಬಟ್ಟೆ ತೊಳೆಯಲು ಹೋದಾಗ ಕಾಲು ಜಾರಿಬಿದ್ದ ಪರಿಣಾಮ ಇಬ್ಬರು ಬಾಲಕಿಯರು ಸಾವನ್ನಪ್ಪಿರುವ ಘಟನೆ ಜಿಲ್ಲೆ ಚಿಂಚೋಳಿ ತಾಲೂಕಿನ ಮೋಗಾ ತಾಂಡಾದಲ್ಲಿ ನಡೆದಿದೆ.

    ಘಟನೆಯಲ್ಲಿ ಮೋಗಾ ತಾಂಡಾ ನಿವಾಸಿಗಳಾದ ಜಯಶ್ರೀ(15) ಮತ್ತು ಲತಾ(13) ಮೃತಪಟ್ಟಿದ್ದಾರೆ. ಮಂಗಳವಾರ ಸಂಜೆ ಇಬ್ಬರು ಬಾಲಕಿಯರು ಬಟ್ಟೆ ತೊಳೆಯಲು ಬಾವಿಗೆ ಹೋಗಿದ್ದಾರೆ. ಈ ವೇಳೆ ಕಾಲುಜಾರಿ ಇಬ್ಬರು ಬಾಲಕಿಯ ಬಾವಿಗೆ ಬಿದ್ದಿದ್ದಾರೆ.

    ಬಟ್ಟೆ ತೊಳೆಯಲು ಹೋದ ಮಕ್ಕಳು ಸಂಜೆಯಾದರೂ ಮನೆಗೆ ಬಂದಿಲ್ಲ ಎಂದು ಬಾವಿ ಬಳಿ ಹೋದಾಗ ಇಬ್ಬರು ಕಾಣಲಿಲ್ಲ. ತಕ್ಷಣ ಪೋಷಕರು ಗಾಬರಿಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಮತ್ತು ಚಿಂಚೋಳಿ ಪೊಲೀಸರು ಬಂದಿದ್ದು, ಕಾರ್ಯಚರಣೆ ನಡೆಸಿ ಬಾವಿಯಲ್ಲಿನ ಮೃತ ದೇಹಗಳನ್ನು ಹೊರತಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

    ಈ ಬಗ್ಗೆ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಶಾರ್ಟ್ ಸರ್ಕ್ಯೂಟ್‍ನಿಂದ ಹೊತ್ತಿ ಉರಿದ ಗುಜರಿ ಅಂಗಡಿ

    ಶಾರ್ಟ್ ಸರ್ಕ್ಯೂಟ್‍ನಿಂದ ಹೊತ್ತಿ ಉರಿದ ಗುಜರಿ ಅಂಗಡಿ

    ಚಿಕ್ಕಬಳ್ಳಾಪುರ: ಶಾರ್ಟ್ ಸರ್ಕ್ಯೂಟ್‍ನಿಂದ ಗುಜರಿ ಅಂಗಡಿಗೆ ಬೆಂಕಿ ಬಿದ್ದ ಪರಿಣಾಮ ಅಂಗಡಿ ಹೊತ್ತಿ ಉರಿದು ಆತಂಕ ಸೃಷ್ಟಿಯಾದ ಘಟನೆ ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.

    ನಗರದ ಡಿ ಕ್ರಾಸ್ ಮುಖ್ಯರಸ್ತೆಯಲ್ಲಿರುವ ವೆಂಕಟೇಶ್ವರ ಬಾರ್ ಹಿಂಭಾಗ ರಾಜಸ್ಥಾನ ಮೂಲದ ಸುನೀಲ್ ಎಂಬುವವರಿಗೆ ಗುಜರಿ ಅಂಗಡಿ ಹೊತ್ತಿ ಉರಿದಿದೆ. ಇಂದು ಸಂಜೆ ಅಂಗಡಿಯಲ್ಲಿ ಇದ್ದಕ್ಕಿದ್ದಂತೆ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಹೊತ್ತಿಕೊಂಡು ಈ ಅವಘಡ ಸಂಭವಿಸಿದೆ.

    ಗುಜರಿ ಅಂಗಡಿಯಲ್ಲಿ ಹಳೆಯ ಪ್ಲಾಸ್ಟಿಕ್ ಸೇರಿದಂತೆ ಇನ್ನಿತರ ಕಬ್ಬಿಣ ವಸ್ತುಗಳು ಶೇಖರಣೆಯನ್ನ ಮಾಡಲಾಗಿತ್ತು. ಬೆಂಕಿಯ ಕೆನ್ನಾಲಿಗೆಯ ದಟ್ಟ ಹೊಗೆ ಪ್ರದೇಶದ ಸುತ್ತಮುತ್ತ ಹಬ್ಬಿದ್ದ ಕಾರಣ ನೂರಾರು ಜನ ಆತಂಕಗೊಂಡು ಘಟನಾ ಸ್ಥಳಕ್ಕೆ ಧಾವಿಸಿದ್ದರು. ಘಟನಾ ಸ್ಥಳಕ್ಕೆ ದೊಡ್ಡಬಳ್ಳಾಪುರ ನಗರ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವ ಕಾರ್ಯ ನಡೆಸಿದ್ದಾರೆ.

  • ವಿಸಿ ನಾಲೆಗೆ ಎತ್ತಿನಬಂಡಿ ಪಲ್ಟಿ: ಎತ್ತನ್ನ ರಕ್ಷಿಸಿ ಮಾನವೀಯತೆ ಮೆರೆದ ಸ್ಥಳೀಯರು

    ವಿಸಿ ನಾಲೆಗೆ ಎತ್ತಿನಬಂಡಿ ಪಲ್ಟಿ: ಎತ್ತನ್ನ ರಕ್ಷಿಸಿ ಮಾನವೀಯತೆ ಮೆರೆದ ಸ್ಥಳೀಯರು

    ಮಂಡ್ಯ: ಮೇವು ತುಂಬಿಕೊಂಡು ಬರುತ್ತಿದ್ದ ಎತ್ತಿನಗಾಡಿ ವಿಸಿ ನಾಲೆಗೆ ಪಲ್ಟಿಯಾಗಿ ಒಂದು ಎತ್ತು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೆ ಮತ್ತೊಂದು ಎತ್ತನ್ನು ಸ್ಥಳೀಯರು ರಕ್ಷಿಸಿ ಮಾನವೀಯತೆ ಮೆರೆದಿರುವ ಘಟನೆ ಜಿಲ್ಲೆಯ ಪಾಂಡವಪುರ ತಾಲೂಕಿನ ಗಾಣದಹೊಸೂರು ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಗಿರಿಗೌಡ ತಮ್ಮ ಜಮೀನಿನಿಂದ ಎತ್ತಿನಗಾಡಿಯಲ್ಲಿ ಮೇವು ತುಂಬಿಕೊಂಡು ವಿಸಿ ನಾಲೆಯ ಏರಿಮೇಲೆ ಬರುತ್ತಿದ್ದರು. ಈ ಸಂದರ್ಭದಲ್ಲಿ ವಿಸಿ ನಾಲೆಗೆ ಹಾಕಿದ್ದ ಪಂಪ್ ಸೆಟ್ ಶಬ್ದಕ್ಕೆ ಬೆದರಿ ಎತ್ತುಗಳು ವಿಸಿ ನಾಲೆಯ ಕಡೆ ಏಕಾಏಕಿ ನುಗ್ಗಿದ ಎತ್ತುಗಳು ಗಾಡಿ ಸಮೇತ ಹರಿಯುತ್ತಿರುವ ನೀರಿನೊಳಗೆ ಬಿದ್ದಿವೆ.

    ಈ ಘಟನೆಯನ್ನು ಕಂಡ ಸ್ಥಳೀಯರು ಕೂಡಲೇ ವಿಸಿ ನಾಲೆಗೆ ಜಿಗಿದು ಒಂದು ಎತ್ತಿನ ಮೂಗುದಾರವನ್ನು ಕತ್ತರಿಸಿದ್ದಾರೆ. ತಕ್ಷಣ ಆ ಎತ್ತು ಈಜಿ ದಡ ಸೇರಿದೆ. ಆದರೆ ಮತ್ತೊಂದು ಎತ್ತಿನ ಮೂಗುದಾರವನ್ನು ಕತ್ತರಿಸಲು ಸಾಧ್ಯವಾಗದಿದ್ದರಿಂದ ಎತ್ತು ನೀರಿನಲ್ಲಿ ಉಸಿರುಗಟ್ಟಿ ಸಾವನ್ನಪ್ಪಿದೆ. ಅಪಘಾತದಲ್ಲಿ ರೈತ ಗಿರಿಗೌಡರಿಗೆ ತಲೆಯ ಭಾಗಕ್ಕೆ ಗಾಯವಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ.

    ಈ ಬಗ್ಗೆ ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕಾಗಮಿಸಿದ್ದು, ನಂತರ ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಸ್ಥಳೀಯರ ಸಹಾಯದೊಂದಿಗೆ ವಿಸಿ ನಾಲೆಯಲ್ಲಿ ಮುಳುಗಿದ್ದ ಎತ್ತು ಹಾಗೂ ಗಾಡಿಯನ್ನು ಹೊರತೆಗೆದಿದ್ದಾರೆ.

     

  • ಭೀಕರ ಅಪಘಾತ- ಮದ್ವೆ ದಿಬ್ಬಣದ ಟ್ರಕ್ ಮೋರಿಗೆ ಉರುಳಿ 28 ಮಂದಿ ದಾರುಣ ಸಾವು

    ಭೀಕರ ಅಪಘಾತ- ಮದ್ವೆ ದಿಬ್ಬಣದ ಟ್ರಕ್ ಮೋರಿಗೆ ಉರುಳಿ 28 ಮಂದಿ ದಾರುಣ ಸಾವು

    ಗಾಂಧಿನಗರ: ಮದುವೆ ದಿಬ್ಬಣ ಹೊತ್ತು ತೆರಳುತ್ತಿದ್ದ ಟ್ರಕ್‍ವೊಂದು ಕಂದಕಕ್ಕೆ ಉರುಳಿ ಬಿದ್ದು ಸುಮಾರು 28 ಮಂದಿ ಮೃತಪಟ್ಟಿರುವ ಘಟನೆ ಗುಜರಾತ್‍ನ ಭಾವನಗರ್ ಜಿಲ್ಲೆಯಲ್ಲಿ ನಡೆದಿದೆ.

    ಮೃತರಲ್ಲಿ ಮಹಿಳೆಯರು ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಮಂಗಳವಾರ ಬೆಳಗ್ಗೆ ಗುಜರಾತ್‍ನ ಭಾವನಗರ-ರಾಜಕೋಟ್ ಹೆದ್ದಾರಿಯ ಉಮ್ರಾಲಾ ಬಳಿ ಈ ದುರಂತ ಸಂಭವಿಸಿದೆ.

    ಭೀಕರ ಅಪಘಾತದಲ್ಲಿ ಹಲವರು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಉರುಳಿಬಿದ್ದ ಟ್ರಕ್‍ನ ಅಡಿಯಲ್ಲಿ ಹಲವರು ಸಿಲುಕಿದ್ದಾರೆ. ಆದ್ದರಿಂದ ಮೃತರ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಂಭವವಿದೆ. ರಕ್ಷಣಾ ಪಡೆಯ ತಂಡವು ಟ್ರಕ್‍ನ ಕೆಳಗೆ ಸಿಲುಕಿದ್ದವರನ್ನು ಕಾಪಾಡಲು ಕಾರ್ಯಚರಣೆ ಮಾಡುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

    ಟ್ರಕ್ ನಲ್ಲಿ ಸುಮಾರು 60 ಮಂದಿ ಪ್ರಯಾಣಿಕರಿದ್ದು, ಇವರೆಲ್ಲರೂ ಮದುವೆಗೆ ಹೋಗುತ್ತಿದ್ದರು. ಟ್ರಕ್ ಭಾವ್‍ನಗರ್-ರಾಜ್‍ಕೋಟ್ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದಾಗ ಉಮ್ರಲಾ ಬಳಿ ಚಾಲಕನ ನಿಯಂತ್ರಣ ತಪ್ಪಿ ಒಣಗಿದ ಕಾಲುವೆಯ ಸೇತುವೆಗೆ ಡಿಕ್ಕಿ ಹೊಡೆದು ಬಳಿಕ 8 ಮೀಟರ್ ಕಂದಕಕ್ಕೆ ಉರುಳಿ ಬಿದ್ದಿದೆ. ಪರಿಣಾಮ ಟ್ರಕ್‍ನಲ್ಲಿದ್ದ ಸುಮಾರು 28 ಮಂದಿ ಸಾವನ್ನಪ್ಪಿದ್ದಾರೆ.

    ಈ ದುರಂತದ ಮಾಹಿತಿ ಬಂದ ಕೂಡಲೇ ಸ್ಥಳಕ್ಕೆ ಪೊಲೀಸರು, ಅಗ್ನಿ ಶಾಮಕ ಸಿಬ್ಬಂದಿ ದೌಡಾಯಿಸಿದ್ದಾರೆ. ಜಿಲ್ಲಾಡಳಿತ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದು, ಭಾವನಗರ, ಸಿಹೋರ್ ಮತ್ತು ಬೋಟಾಡ್‍ನಿಂದ ಕ್ರೇನ್ ಹಾಗೂ ಇತರ ಪರಿಕರಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ. ಅಗ್ನಿಶಾಮಕ ದಳವೂ ಕಾರ್ಯಾಚರಣೆಯಲ್ಲಿ ತೊಡಗಿದೆ. ಅಪಘಾತದಲ್ಲಿ ಗಾಯಗೊಂಡ ಗಾಯಾಳುಗಳನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಲಾಗುತ್ತಿದೆ ಎಂದು ಭಾವನಗರ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

    ಟ್ರಕ್‍ನಲ್ಲಿ ಸುಮಾರು 60 ಜನ ಪ್ರಯಾಣಿಕರಿದ್ದರು. ಮೃತರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳಿದ್ದಾರೆ ಎಂದು ಗುಜರಾತ್ ಪೊಲೀಸ್ ಇನ್‍ಸ್ಪೆಕ್ಟರ್ ಕೆ.ಜೆ. ಕದಪಾದ ತಿಳಿಸಿದ್ದಾರೆ.

  • ಪೂಜೆಗೆಂದು ಸ್ನಾನ ಮಾಡಲು ಹೋಗಿ ಕಲ್ಯಾಣಿಯಲ್ಲಿ ಮುಳುಗಿ ಯುವಕ ಸಾವು

    ಪೂಜೆಗೆಂದು ಸ್ನಾನ ಮಾಡಲು ಹೋಗಿ ಕಲ್ಯಾಣಿಯಲ್ಲಿ ಮುಳುಗಿ ಯುವಕ ಸಾವು

    ದಾವಣಗೆರೆ: ದೇವಸ್ಥಾನದ ಕಲ್ಯಾಣಿಯಲ್ಲಿ ಮುಳುಗಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಜಗಳೂರು ತಾಲೂಕಿನ ಕೊಡದ ಗುಡ್ಡ ಗ್ರಾಮದಲ್ಲಿ ನಡೆದಿದೆ.

    ರಕ್ಷಿತ್(18) ಮೃತ ದುರ್ದೈವಿ. ಯುವಕನನ್ನು ಚಿತ್ರದುರ್ಗ ತಾಲೂಕಿನ ಅರಳಿಕಟ್ಟೆ ಗ್ರಾಮದವನು ಎಂದು ಗುರುತಿಸಲಾಗಿದೆ.

    ಶುಕ್ರವಾರ ವೀರಭದ್ರ ದೇವರ ಜಾತ್ರೆ ನಡೆಯುತ್ತಿತ್ತು. ರಕ್ಷಿತ್ ಜಾತ್ರೆಗೆಂದು ತನ್ನೋರಿನಿಂದ ಬಂದಿದ್ದನು. ಶುಕ್ರವಾರ ಜಾತ್ರೆ ಮುಗಿಸಿ ಶನಿವಾರ ಮಧ್ಯಾಹ್ನ ಪೂಜೆಗೆಂದು ಸ್ನಾನ ಮಾಡಲು ದೇವಸ್ಥಾನದ ಕಲ್ಯಾಣಿಗೆ ಹೋಗಿದ್ದಾನೆ. ಈ ಸಂದರ್ಭದಲ್ಲಿ ಕಲ್ಯಾಣಿ ಆಳ ಇದ್ದುದರಿಂದ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

    ಇತ್ತ ಸ್ನಾನಕ್ಕೆ ಹೋದ ಯುವಕ ಹಿಂದಿರುಗಿ ಬಾರದಿದ್ದರಿಂದ ಆತಂಕಗೊಂಡ ಆತನ ಪೋಷಕರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಕೂಡಲೇ ಪೊಲೀಸರು ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಯುವಕನ ಮೃತ ದೇಹಕ್ಕಾಗಿ ಕಾರ್ಯಚರಣೆ ನಡೆಸುತ್ತಿದ್ದಾರೆ.

    ಈ ಘಟನೆ ಸಂಬಂಧ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಂದು ಕೂಡ ಕಾರ್ಯಾಚರಣೆ ನಡೆಯುತ್ತಿದ್ದು, ಮೃತ ದೇಹ ಇನ್ನೂ ಪತ್ತೆಯಾಗಿಲ್ಲ.

  • ಗುಡಿಸಲಿಗೆ ಆಕಸ್ಮಿಕ ಬೆಂಕಿ -ಬಟ್ಟೆ, ಚಿನ್ನಾಭರಣ, ನಗದು ಸೇರಿ 5 ಲಕ್ಷಕ್ಕೂ ಹೆಚ್ಚು ಹಾನಿ

    ಗುಡಿಸಲಿಗೆ ಆಕಸ್ಮಿಕ ಬೆಂಕಿ -ಬಟ್ಟೆ, ಚಿನ್ನಾಭರಣ, ನಗದು ಸೇರಿ 5 ಲಕ್ಷಕ್ಕೂ ಹೆಚ್ಚು ಹಾನಿ

    ಗದಗ: ಗುಡಿಸಲಿಗೆ ಆಕಸ್ಮಿಕ ಬೆಂಕಿ ತಗುಲಿ ಅಪಾರ ಪ್ರಮಾಣದ ವಸ್ತುಗಳು ಬೆಂಕಿಗಾಹುತಿಯಾಗಿರುವ ಘಟನೆ ಜಿಲ್ಲೆಯ ಶಿರಹಟ್ಟಿ ತಾಲೂಕಿನ ರಣತೂರು ಗ್ರಾಮದಲ್ಲಿ ನಡೆದಿದೆ.

    ಬಸಮ್ಮ ಬಳ್ಳಾರಿ ಅವರಿಗೆ ಸೇರಿದ ಗುಡಿಸಲಿಗೆ ಬೆಂಕಿ ತಗುಲಿದ್ದು, ಬೆಲೆ ಬಾಳುವ ವಸ್ತುಗಳು, ಬಟ್ಟೆ, ಚಿನ್ನಾಭರಣ, ನಗದು ಸೇರಿ 5 ಲಕ್ಷಕ್ಕೂ ಅಧಿಕ ಹಾನಿಯಾಗಿದೆ ಎನ್ನಲಾಗುತ್ತಿದೆ. ಗುರುವಾರ ಸಂಜೆ ಮನೆಯವರು ತೋಟಕ್ಕೆ ಹೋಗಿದ್ದ ಸಂದರ್ಭದಲ್ಲಿ ಗುಡಿಸಿಲಿಗೆ ಬೆಂಕಿ ಹೊತ್ತಿಕೊಂಡಿದೆ. ತಕ್ಷಣ ಗ್ರಾಮಸ್ಥರು ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದ್ದಾರೆ. ಆದರೆ ಗ್ರಾಮಸ್ಥರಿಂದ ಅದು ಸಾಧ್ಯವಾಗಿಲ್ಲ. ಕೊನೆಗೆ ಅವರು ಅಗ್ನಿಶಾಮಕ ದಳದವರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ.

    ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕದಳ ಸಿಬ್ಬಂದಿಗಳು ಮತ್ತು ಗ್ರಾಮಸ್ಥರು ಬೆಂಕಿಯನ್ನು ನಂದಿಸಿದ್ದಾರೆ. ಬೆಂಕಿಯ ಕೆನ್ನಾಲಿಗೆ ಪಕ್ಕದ ಮನೆಗಳಿಗೂ ತಗಲುವ ಸಾಧ್ಯತೆಗಳಿದ್ದರಿಂದ ಸೂಕ್ತ ಸಮಯಕ್ಕೆ ಬೆಂಕಿಯ ನಂದಿಸುವ ಮೂಲಕ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.

    ಬಳ್ಳಾರಿ ಕುಟುಂಬದ ಯಜಮಾನನ ಸಾವಿನಿಂದಾಗಿ ಸಂಪ್ರದಾಯದಂತೆ ಮನೆ ತೊರೆದು ಗುಡಿಸಲಲ್ಲಿ ವಾಸವಾಗಿದ್ದರು. ಆದರೆ ಬೆಂಕಿ ಕೆನ್ನಾಲಿಗೆಗೆ ಗುಡಿಸಲು ಆಹುತಿಯಾಗಿದೆ. ಇದೀಗ ಲಕ್ಷಾಂತರ ರೂಪಾಯಿ ಹಾನಿಯಿಂದ ಮತ್ತೆ ಬಳ್ಳಾರಿ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ತಲುಪಿದೆ.

    ಈ ಕುರಿತು ಗದಗ ಜಿಲ್ಲೆ ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಜೋಗ ಜಲಪಾತದ ಬುಡದಲ್ಲಿ ಪತ್ತೆಯಾದ ಸ್ಪೈಡರ್ ಮ್ಯಾನ್ ಕೋತಿರಾಜ್

    ಜೋಗ ಜಲಪಾತದ ಬುಡದಲ್ಲಿ ಪತ್ತೆಯಾದ ಸ್ಪೈಡರ್ ಮ್ಯಾನ್ ಕೋತಿರಾಜ್

    ಶಿವಮೊಗ್ಗ: ಜೋಗ ಜಲಪಾತದ ಬುಡದಲ್ಲಿ ನಾಪತ್ತೆಯಾಗಿದ್ದ ಸ್ಪೈಡರ್ ಮ್ಯಾನ್ ಜ್ಯೋತಿರಾಜ್ ಇಂದು ಪತ್ತೆಯಾಗಿದ್ದಾರೆ.

    ಇಂದು 8 ಗಂಟೆಯಿಂದ ಜ್ಯೋತಿರಾಜ್ ಗಾಗಿ ಪತ್ತೆ ಕಾರ್ಯಾಚರಣೆ ಆರಂಭವಾಗಿತ್ತು. ಜಲಪಾತದ ಕೆಳಗೆ ಅಗ್ನಿಶಾಮಕ ದಳ ಮತ್ತು ಸಾಗರ, ಸಿದ್ದಾಪುರ ಪೊಲೀಸರು ಕಾರ್ಯಚರಣೆ ನಡೆಸುತ್ತಿದ್ದರು. ಕೋತಿರಾಜ್ ಪತ್ತೆಗೆ ಡ್ರೋನ್ ಕ್ಯಾಮೆರಾ ಕೂಡ ಬಳಸಿದ್ದರು.

    ಜ್ಯೋತಿರಾಜ್ ಪೆಟ್ಟು ಬಿದ್ದು ಜಲಪಾತದ ನಡುವಿನ ಬಂಡೆಗಳ ನಡುವೆ ಸಿಲುಕಿಕೊಂಡಿದ್ದರು. ಕೈಗೆ ಗಾಯವಾಗಿ ಬಂಡೆ ಬಳಿಯ ಪೊಟರೆಯಲ್ಲಿ ಕುಳಿತಿದ್ದರು. ಡ್ರೋನ್ ಕ್ಯಾಮೆರಾ ಮೂಲಕ ಬಂಡೆಗಳಲ್ಲಿ ಸಿಲುಕಿಕೊಂಡಿದ್ದ ಜ್ಯೋತಿರಾಜ್ ಪತ್ತೆಯಾಗಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿ ಬಂಡೆಗಳಲ್ಲಿ ಸಿಲುಕಿಕೊಂಡಿದ್ದ ಜ್ಯೋತಿರಾಜ್ ರನ್ನು ರಕ್ಷಣೆ ಮಾಡಿ ಕರೆತಂದಿದ್ದಾರೆ. ಅಗ್ನಿಶಾಮಕ ದಳ, ಸಾಗರ ಮತ್ತು ಸಿದ್ದಾಪುರ ಪೊಲೀಸರು, ಕೋತಿ ರಾಜ್ ತಂಡದವರು ಮತ್ತು ಸ್ಥಳೀಯರು ಸೇರಿ ಐವತ್ತಕ್ಕೂ ಹೆಚ್ಚು ಜನ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಇದನ್ನು ಓದಿ: ನಾನು ಜೀವಂತವಾಗಿ ವಾಪಸ್ ಬರ್ತೀನೋ ಇಲ್ವೋ ಗೊತ್ತಿಲ್ಲ- ಜೋಗಕ್ಕೆ ತೆರಳುವ ಮುನ್ನ ಸೆಲ್ಫೀ ವಿಡಿಯೋ ಮಾಡಿದ್ದ ಕೋತಿರಾಜ್..

    ಮೂರು ದಿನಗಳ ಹಿಂದೆ ಬೆಂಗಳೂರಿನ ರಾಮಗೊಂಡನಹಳ್ಳಿಯ ಯುವಕನೊಬ್ಬ ಜೋಗ ಜಲಪಾತದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಎನ್ನಲಾಗಿತ್ತು. ಆದರೆ ಯುವಕನ ಮೃತದೇಹ ಪತ್ತೆಯಾಗಿರಲಿಲ್ಲ. ಹೀಗಾಗಿ ಯುವಕನ ಶವ ಹುಡುಕಲು ಬಂದಿದ್ದ ಜ್ಯೋತಿರಾಜ್ ಮಂಗಳವಾರ ಮಧ್ಯಾಹ್ನ ಸುಮಾರು 3 ಗಂಟೆಗೆ ಜಲಪಾತಕ್ಕೆ ಇಳಿದಿದ್ದರು. ಇದನ್ನು ಓದಿ: ಸ್ಪೈಡರ್ ಮ್ಯಾನ್ ಖ್ಯಾತಿಯ ಕೋತಿ ರಾಜ್ ಜೋಗದಲ್ಲಿ ನಾಪತ್ತೆ

     

     

  • ಬೆಂಗಳೂರಿನ ಮತ್ತೊಂದು ಬಾರ್ & ರೆಸ್ಟೊರೆಂಟ್ ನಲ್ಲಿ ಅಗ್ನಿ ಅವಘಡ

    ಬೆಂಗಳೂರಿನ ಮತ್ತೊಂದು ಬಾರ್ & ರೆಸ್ಟೊರೆಂಟ್ ನಲ್ಲಿ ಅಗ್ನಿ ಅವಘಡ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಬಾರ್ ಅಂಡ್ ರೆಸ್ಟೊರೆಂಟ್ ನಲ್ಲಿ ಬೆಂಕಿ ಅವಘಡ ಸಂಭವಿಸಿದೆ.

    ಮೈಸೂರು ರಸ್ತೆಯಲ್ಲಿರುವ ಗಜಾನನ ಬಾರ್ ಅಂಡ್ ರೆಸ್ಟೊರೆಂಟ್ ನಲ್ಲಿ ಇಂದು ನಸುಕಿನ ಜಾವ ಬೆಂಕಿ ಅವಘಡ ಸಂಭವಿಸಿದೆ. ಬಾರ್ ನ ಕೆಳ ಮಹಡಿಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಳಗಿನ ಜಾವ ಸುಮಾರು 3.30 ಕ್ಕೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕಂಡ ಕೂಡಲೇ ಸ್ಥಳೀಯರೊಬ್ಬರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ.

    ಮಾಹಿತಿ ತಿಳಿದ ಪೊಲೀಸರು ಅಗ್ನಿಶಾಮಕ ಸಿಬ್ಬಂದಿಗೆ ವಿಚಾರ ತಿಳಿಸಿ ಎರಡು ಅಗ್ನಿಶಾಮಕ ವಾಹನ ಜೊತೆ ಘಟನೆ ನಡೆದ ಸ್ಥಳಕ್ಕೆ ದೌಡಾಯಿಸಿದ್ದಾರೆ. ನಂತರ ಬೆಂಕಿಯನ್ನು ನಂದಿಸಿದ್ದಾರೆ. ಕೆಲಸ ಮುಗಿಸಿ ಮೇಲ್ಮಹಡಿಯಲ್ಲಿ ಬಾರ್ ನ ಸಿಬ್ಬಂದಿ ಮಲಗಿದ್ದ  ಬಾರ್ ಸಿಬ್ಬಂದಿಗಳನ್ನ ಪೊಲೀಸರು ಹೊರಗೆ ಕರೆತಂದಿದ್ದಾರೆ.

    ಘಟನೆ ನಡೆದ ಸ್ಥಳಕ್ಕೆ ಚಾಮರಾಜಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಅವಘಡದಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳೀಯರು ಹಾಗೂ ಪೊಲೀಸರ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ. ಆದರೆ ಈ ಘಟನೆಯಿಂದ ಗಜಾನನ ಬಾರ್ ನ ಕೆಳ ಮಹಡಿ ಸಂಪೂರ್ಣ ಭಸ್ಮವಾಗಿದೆ. ಈ ಹಿಂದೆ ಜನವರಿ 8 ರಂದು ಕೆ.ಆರ್ ಮಾರುಕಟ್ಟೆ ಬಳಿ ಇದ್ದ ಕೈಲಾಶ್ ಬಾರ್ ನಲ್ಲಿ ಅಗ್ನಿ ದುರಂತ ಸಂಭವಿಸಿ ಐವರು ಕಾರ್ಮಿಕರು ಸಜೀವ ದಹನವಾಗಿದ್ದರು.

  • ತಡೆಗೋಡೆಗೆ ಡಿಕ್ಕಿ ಹೊಡೆದು ನದಿಗೆ ಉರುಳಿ ಬಿದ್ದ ಮಿನಿ ಬಸ್ – 13 ಮಂದಿ ದುರ್ಮರಣ

    ತಡೆಗೋಡೆಗೆ ಡಿಕ್ಕಿ ಹೊಡೆದು ನದಿಗೆ ಉರುಳಿ ಬಿದ್ದ ಮಿನಿ ಬಸ್ – 13 ಮಂದಿ ದುರ್ಮರಣ

    ಕೊಲ್ಹಾಪುರ: ಚಾಲಕನ ನಿಯಂತ್ರಣ ತಪ್ಪಿ ಮಿನಿ ಬಸ್ಸೊಂದು ತಡೆಗೋಡೆಗೆ ಡಿಕ್ಕಿ ಹೊಡೆದು ನದಿಗೆ ಉರುಳಿ ಬಿದ್ದ ಪರಿಣಾಮ 13 ಮಂದಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ನಡೆದಿದೆ.

    ಮಿನಿ ಬಸ್‍ನಲ್ಲಿ ಒಟ್ಟು 16 ಪ್ರಯಾಣಿಕರಿದ್ದರು. ಎಲ್ಲಾ ಪ್ರಯಾಣಿಕರು ಪುಣೆಯ ಬಲೆವಾಡಿ ಪ್ರದೇಶದವರಾಗಿದ್ದು, ರತ್ನಾಗಿರಿ ಜಿಲ್ಲೆಯ ಗಣಪತಿಪುಲೆಯಿಂದ ಪುಣೆಗೆ ಈ ಮಿನಿಬಸ್ ತೆರಳುತಿತ್ತು ಎಂಬುದಾಗಿ ವರದಿಯಾಗಿದೆ.

    ಅಂತೆಯೇ ಶುಕ್ರವಾರ ತಡರಾತ್ರಿ ಸುಮಾರು 11.45 ಗಂಟೆಗೆ ಶಿವಾಜಿ ಬ್ರಿಡ್ಜ್ ಮೇಲೆ ಬಸ್ ತಲುಪಿದೆ. ಈ ವೇಳೆ ಬಸ್ ನಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದಿಂದ ಬಸ್ ಚಾಲಕನ ನಿಯಂತ್ರಣ ತಪ್ಪಿ ತಡೆಗೋಡೆಗೆ ರಭಸದಿಂದ ಡಿಕ್ಕಿ ಹೊಡೆದು ಪಂಚಗಂಗಾ ನದಿಗೆ ಉರುಳಿ ಬಿದ್ದಿದೆ. ಡಿಕ್ಕಿ ಹೊಡೆದು ಉರುಳಿ ಬಿದ್ದ ರಭಸಕ್ಕೆ ಸ್ಥಳದಲ್ಲಿಯೇ 12 ಮಂದಿ ಸಾವನ್ನಪ್ಪಿದ್ದಾರೆ. ಒಬ್ಬರು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಅಪಘಾತದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದು, ಶವಕ್ಕಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

  • ಒಣ ಹುಲ್ಲಿನಿಂದಾಗಿ ಕಾರಿಗೆ ಹತ್ತಿಕೊಳ್ತು ಬೆಂಕಿ-ಬೈಕ್ ಸವಾರನ ಸಮಯ ಪ್ರಜ್ಞೆಯಿಂದ ಕಾರಿನಲ್ಲಿದ್ದ ಐವರು ಬದುಕುಳಿದ್ರು

    ಒಣ ಹುಲ್ಲಿನಿಂದಾಗಿ ಕಾರಿಗೆ ಹತ್ತಿಕೊಳ್ತು ಬೆಂಕಿ-ಬೈಕ್ ಸವಾರನ ಸಮಯ ಪ್ರಜ್ಞೆಯಿಂದ ಕಾರಿನಲ್ಲಿದ್ದ ಐವರು ಬದುಕುಳಿದ್ರು

    ಮಂಡ್ಯ: ರಸ್ತೆಯಲ್ಲಿ ರಾಗಿ ಒಕ್ಕಣೆಗೆ ಹಾಕಿದ್ದ ಹುಲ್ಲಿನಿಂದ ಕಾರು ಹೊತ್ತಿ ಉರಿದು, ಐವರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ರಾಜೇನಹಳ್ಳಿ ಗ್ರಾಮದ ಬಳಿ ನಡೆದಿದೆ.

    ಬೆಂಗಳೂರು ಮೂಲದ ಐವರು ಭೂವರಹನಾಥಸ್ವಾಮಿ ದೇವಸ್ಥಾನಕ್ಕೆ ಹೋಗುತ್ತಿದ್ದರು. ಮಾರ್ಗ ಮಧ್ಯೆ ಬೂಕನಕೆರೆ ಹೋಬಳಿ ರಾಜೇನಹಳ್ಳಿ ಬಳಿ ರೈತರು ರಾಗಿಯನ್ನು ಒಕ್ಕಣೆ ಮಾಡಲು ರಸ್ತೆಯಲ್ಲಿ ಹಾಕಿದ್ದ ಹುಲ್ಲು ಕಾರಿನ ಇಂಜಿನ್ ಗೆ ಸುತ್ತಿಕೊಂಡಿದೆ. ಕಾರಿಗೆ ಸುತ್ತಿಕೊಂಡಿದ್ದ ಹುಲ್ಲಿಗೆ ಸಣ್ಣ ಪ್ರಮಾಣದಲ್ಲಿ ಬೆಂಕಿ ಹತ್ತಿಕೊಂಡಿದೆ. ಬೆಂಕಿ ಕಾಣಿಸಿಕೊಂಡ ವಿಚಾರ ತಿಳಿಯದ ಕಾರಿನವರು ತಮ್ಮ ಪಾಡಿಗೆ ತಾವು ಹೋಗುತ್ತಿದ್ದರು.

    ಈ ಸಮಯದಲ್ಲಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದನ್ನು ಗಮನಿಸಿದ ಬೈಕ್ ಸವಾರರೊಬ್ಬರು ಕಾರಿನಲ್ಲಿ ಪ್ರಯಾಣಿಸುತ್ತಿದ್ದವರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ ನಿಲ್ಲಿಸಿ ಐವರು ಹೊರ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಆದರೆ ಅಷ್ಟರಲ್ಲಿ ಕಾರು ಸಂಪೂರ್ಣ ಸುಟ್ಟು ಹೋಗಿದೆ. ಘಟನೆ ಸಂಬಂಧ ಕೆ ಆರ್ ಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.