Tag: ಅಗ್ನಿಶಾಮಕ ದಳ

  • ಬರ್ತ್ ಡೇ ಪಾರ್ಟಿಗೆ ಹೋಗಿ ಬಾವಿಯಲ್ಲಿ ಮುಳುಗಿ ಎಂಜಿನಿಯರಿಂಗ್ ವಿದ್ಯಾರ್ಥಿ ದುರ್ಮರಣ

    ಬರ್ತ್ ಡೇ ಪಾರ್ಟಿಗೆ ಹೋಗಿ ಬಾವಿಯಲ್ಲಿ ಮುಳುಗಿ ಎಂಜಿನಿಯರಿಂಗ್ ವಿದ್ಯಾರ್ಥಿ ದುರ್ಮರಣ

    ಬೆಂಗಳೂರು: ಈಜು ಬಾರದಿದ್ದರೂ ಬಾವಿಯಲ್ಲಿ ಈಜಲು ಹೋಗಿ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನಲ್ಲಿ ನಡೆದಿದೆ.

    ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳ ಮೂಲದ ಪ್ರವೀಣ್(24) ನೀರಿನಲ್ಲಿ ಮುಳುಗಿ ಮೃತಪಟ್ಟ ವಿದ್ಯಾರ್ಥಿ. ಆನೇಕಲ್ ಪಟ್ಟಣದ ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದನು. ಪ್ರವೀಣ್ ಸ್ನೇಹಿತನ ಬರ್ತ್ ಡೇ ಪಾರ್ಟಿಗೆ ಹೋಗಿದ್ದನು.

    ಪಾರ್ಟಿ ಮುಗಿಸಿಕೊಂಡು ತಾಲೂಕಿನ ಜಿಗಣಿ ಹೋಬಳಿಯ ಸಿತನಾಯಕನಹಳ್ಳಿಯಲ್ಲಿನ ತೆರೆದ ಬಾವಿಯಲ್ಲಿ ಐವರು ಸ್ನೇಹಿತರೊಂದಿಗೆ ಈಜಲು ತೆರಳಿದ್ದನು. ಈ ವೇಳೆ ಈಜು ಬಾರದ ಪ್ರವೀಣ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಬಳಿಕ ಸ್ನೇಹಿತರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.

    ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ನಂತರ ಗ್ರಾಮಸ್ಥರ ಸಹಾಯದೊಂದಿಗೆ ಅಗ್ನಿಶಾಮಕ ಸಿಬ್ಬಂದಿ ಮೃತ ಶವವನ್ನು ಹೊರತೆಗೆದಿದ್ದಾರೆ.

    ಈ ಘಟನೆ ಕುರಿತು ಜಿಗಣಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಚಲಿಸುತ್ತಿದ್ದಂತೆ ಹೊತ್ತಿ ಉರಿದ ರೈಲಿನ  ಬೋಗಿಗಳು – ವಿಡಿಯೋ

    ಚಲಿಸುತ್ತಿದ್ದಂತೆ ಹೊತ್ತಿ ಉರಿದ ರೈಲಿನ ಬೋಗಿಗಳು – ವಿಡಿಯೋ

    ನವದೆಹಲಿ: ಆಂಧ್ರ ಪ್ರದೇಶ ಎಕ್ಸ್ ಪ್ರೆಸ್ ರೈಲಿನ ನಾಲ್ಕು ಎಸಿ ಬೋಗಿಗಳಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿರುವ ಘಟನೆ ಮಧ್ಯ ಪ್ರದೇಶದ ಗ್ವಾಲಿಯರ್ ನ ಬಿರ್ಲಾ ನಗರ ರೈಲ್ವೇ ನಿಲ್ದಾಣದಲ್ಲಿ ಇಂದು ನಡೆದಿದೆ.

    ಈ ರೈಲು ದೆಹಲಿಯಿಂದ ಮಧ್ಯ ಪ್ರದೇಶದ ಗ್ವಾಲಿಯರ್ ಮಾರ್ಗದ ಮೂಲಕ ಆಂಧ್ರ ಪ್ರದೇಶದ ವಿಶಾಖಪಟ್ಟಣಂಗೆ ತೆರಳುತಿತ್ತು. ಈ ವೇಳೆ ಬಿರ್ಲಾ ನಗರ ರೈಲ್ವೇ ನಿಲ್ದಾಣದಲ್ಲಿ ಮೊದಲಿಗೆ ರೈಲಿನ ಬಿ6 ಎಸಿ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನಂತರ ಅದು ಬಿ7 ಬೋಗಿಗೂ ಆವರಿಸಿಕೊಂಡಿದೆ. ಪರಿಣಾಮ ಎರಡು ಬೋಗಿಗಳು ಸುಟ್ಟು ಹೋಗಿವೆ.

    ರೈಲಿಗೆ ಬೆಂಕಿ ಹೊತ್ತಿಕೊಂಡ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿದ್ದು, ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯಕ್ಕೆ ಈ ಅವಘಡದಿಂದ ಯಾವುದೇ ಪಾಣಾಪಾಯ ಸಂಭವಿಸಿಲ್ಲ. ಅದೃಷ್ಟವಶಾತ್ ಪ್ರಯಾಣಿಕರು ಭಾರೀ ಅನಾಹುತದಿಂದ ಪಾರಾಗಿದ್ದಾರೆ ಎಂದು ರೈಲ್ವೇ ಸಚಿವಾಲಯದ ವಕ್ತಾರ ವೇದ್ ಪ್ರಕಾಶ್ ಹೇಳಿದ್ದಾರೆ.

    ಸದ್ಯಕ್ಕೆ ರೈಲ್ವೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ ಇದುವರೆಗೂ ರೈಲಿಗೆ ಹೇಗೆ ಬೆಂಕಿ ಹೊತ್ತಿಕೊಂಡಿತು ಎಂಬ ಖಚಿತ ಮಾಹಿತಿ ಸಿಕ್ಕಲ್ಲ. ಆದರೆ ಶಾರ್ಟ್ ಸಕ್ರ್ಯೂಟ್ ನಿಂದ ರೈಲಿನಲ್ಲಿ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ. ಹೆಚ್ಚಿನ ತನಿಖೆ ಮುಂದುವರೆದಿದೆ.

    https://www.youtube.com/watch?v=mtX7vxMK-Xg

  • ನಡು ರಸ್ತೆಯಲ್ಲಿಯೇ ಹೊತ್ತಿ ಉರಿದ ಇಂಡಿಕಾ ಕಾರ್

    ನಡು ರಸ್ತೆಯಲ್ಲಿಯೇ ಹೊತ್ತಿ ಉರಿದ ಇಂಡಿಕಾ ಕಾರ್

    ಮಂಗಳೂರು: ಇಂಡಿಕಾ ಕಾರೊಂದು ರಸ್ತೆ ಮಧ್ಯೆಯೇ ಬೆಂಕಿ ಹತ್ತಿಕೊಂಡು ಉರಿದು ಘಟನೆ ಮಂಗಳೂರಿನ ಜ್ಯೋತಿ ವೃತ್ತದಲ್ಲಿ ನಡೆದಿದೆ.

    ಕಾರು ಜ್ಯೋತಿ ವೃತ್ತ ತಲುಪುತ್ತಿದ್ದಂತೆ ಕಾರಿನ ಮುಂಭಾಗದಿಂದ ಹೊಗೆ ಕಾಣಿಸಿಕೊಂಡಿದೆ. ಇದನ್ನು ಕಾರಿನಲ್ಲಿದ್ದವರು ಗಮನಿಸಿದ್ದು, ತಕ್ಷಣ ಕಾರಿನಿಂದ ಹೊರ ಬಂದಿದ್ದಾರೆ.

    ರಸ್ತೆಯ ಮಧ್ಯದ್ದಲ್ಲಿಯೇ ಎಲ್ಲರೂ ನೋಡ ನೋಡುತ್ತಿದ್ದಂತೆ ಕಾರು ಧಗಧಗನೆ ಹೊತ್ತಿಕೊಂಡು ಉರಿದಿದೆ. ನಂತರ ಸ್ಥಳದಲ್ಲಿದ್ದವರು ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ತಿಳಿದಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಮತ್ತು ಸ್ಥಳೀಯರು ಸೇರಿ ಕಾರಿಗೆ ನೀರು ಹಾಕಿ ಬೆಂಕಿ ನಂದಿಸಿದ್ದಾರೆ.

    ಸದ್ಯಕ್ಕೆ ಈ ಅವಘಡದಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಅಗ್ನಿಶಾಮಕ ಸಿಬ್ಬಂದಿ ಬರುವಷ್ಟರಲ್ಲಿ ಕಾರು ಬಹುತೇಕ ಉರಿದು ಹೋಗಿತ್ತು.

  • ಬಾತುಕೋಳಿ ಹಿಡಿಯಲು ಹೋಗಿ ಪ್ರಾಣ ಬಿಟ್ಟ ಯುವಕ!

    ಬಾತುಕೋಳಿ ಹಿಡಿಯಲು ಹೋಗಿ ಪ್ರಾಣ ಬಿಟ್ಟ ಯುವಕ!

    ಬೆಂಗಳೂರು: ಕೆರೆಯಲ್ಲಿ ಬಾತುಕೋಳಿ ಹಿಡಿಯಲು ಹೋಗಿ ಯುವಕನೊಬ್ಬ ಮೃತಪಟ್ಟಿರುವ ಘಟನೆ ಮಂಗಮ್ಮನ ಪಾಳ್ಯದಲ್ಲಿರುವ ಸುಂದರವಾದ ಕೆರೆಯಲ್ಲಿ ನಡೆದಿದೆ.

    ಸಲ್ಮಾನ್ ಮೃತ ದುರ್ದೈವಿ. ಬಾತುಕೋಳಿಯನ್ನು ನೋಡಿ ಆಸೆಯಿಂದ ಹಿಡಿಯಲು ಹೋಗಿ ಸಲ್ಮಾನ್ ನೀರಿನಲ್ಲಿ ಮುಳುಗಿದ್ದಾನೆ. ಘಟನೆಯಿಂದ ಯುವಕ ಪ್ರಾಣ ಬಿಟ್ಟರೆ, ಬಾತುಕೋಳಿ ಯುವಕನ ಕೈಯಿಂದ ಬಚಾವ್ ಆಗಿದೆ.

    ಘಟನೆ ವಿವರ: ಸಲ್ಮಾನ್ ಕೆರೆಯಲ್ಲಿ ಬಾತುಕೊಳಿಯನ್ನು ನೋಡಿದ್ದಾನೆ. ತಕ್ಷಣವೇ ಅದನ್ನು ಹಿಡಿಯಬೇಕು ಅಂತ ಕೆರೆಗೆ ಇಳಿದಿದ್ದಾನೆ. ಆದರೆ ದುರಾದೃಷ್ಟವಶಾತ್ ಸಲ್ಮಾನ್ ಖಾನ್ ಕಾಲು ಜಾರಿ ಕೆರೆಗೆ ಬಿದ್ದಿದ್ದಾನೆ. ಪರಿಣಾಮ ಈಜಲು ಬಾರದೇ ನೀರಿನಲ್ಲಿ ಮುಳುಗಿದ್ದಾನೆ. ಈ ಅವಘಡವನ್ನು ಗಮನಿಸಿದ ಸಲ್ಮಾನ್ ನ ಇಬ್ಬರು ಸ್ನೇಹಿತರು ರಕ್ಷಣೆ ಮಾಡಲು ಹೋಗಿದ್ದಾರೆ. ಆದ್ರೆ ಅಷ್ಟರಲ್ಲಿ ಸಲ್ಮಾನ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

    ಈ ಘಟನೆ ಬಗ್ಗೆ ಸ್ಥಳೀಯರು ಬಂಡೆಪಾಳ್ಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ಪೊಲೀಸರು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಸಲ್ಮಾನ್ ಮೃತದೇಹಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಆದರೆ ಇನ್ನು ಮೃತದೇಹ ಸಿಕ್ಕಿಲ್ಲ. ಇತ್ತ ಸಲ್ಮಾನ್ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

  • ನೀರಿನಲ್ಲಿ ಮುಳುಗುತ್ತಿದ್ದ ಮಗನನ್ನು ರಕ್ಷಿಸಿ ಪ್ರಾಣಬಿಟ್ಟ ತಂದೆ

    ನೀರಿನಲ್ಲಿ ಮುಳುಗುತ್ತಿದ್ದ ಮಗನನ್ನು ರಕ್ಷಿಸಿ ಪ್ರಾಣಬಿಟ್ಟ ತಂದೆ

    ಮಂಡ್ಯ: ನೀರಿನಲ್ಲಿ ಮುಳುಗುತ್ತಿದ್ದ ಒಂದು ವರ್ಷದ ಮಗನನ್ನು ರಕ್ಷಿಸಿ ತಂದೆ ಪ್ರಾಣಬಿಟ್ಟಿರುವ ಮನಕಲಕುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ನಾಗಮಂಗಲ ತಾಲೂಕಿನ ಬೀರೇಶ್ವರ ಗ್ರಾಮದ ಕೆರೆಯಲ್ಲಿ ಈ ಘಟನೆ ಸಂಭವಿಸಿದೆ. ಫಿರೋಜ್ ಮಗನನ್ನು ರಕ್ಷಿಸಲು ಹೋಗಿ ಮೃತಪಟ್ಟಿದ್ದಾರೆ.

    ಫಿರೋಜ್ ಪತ್ನಿ ಜಬಿನ್ ತಾಜ್ ಕೆರೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದರು. ಬಟ್ಟೆ ತೊಳೆಯುವ ಸಮಯದಲ್ಲಿ ಜಬಿನ್ ತಾಜ್ ಜೊತೆಯಲ್ಲಿ ಪತಿ ಫಿರೋಜ್ ಮತ್ತು ಒಂದು ವರ್ಷದ ಮಗ ಇದ್ದರು. ಈ ವೇಳೆ ಆಕಸ್ಮಿಕವಾಗಿ ಮಗ ನೀರಿಗೆ ಬಿದ್ದಿದ್ದಾನೆ. ಆಗ ಮಗನನ್ನು ರಕ್ಷಿಸಲು ಫಿರೋಜ್ ನೀರಿಗಿಳಿದಿದ್ದಾರೆ. ನಂತರ ಮಗನನ್ನು ರಕ್ಷಿಸಿದ್ದಾರೆ. ಆದರೆ ಸರಿಯಾಗಿ ಈಜು ಬಾರದೇ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

    ನಂತರ ಸ್ಥಳದಲ್ಲಿದ್ದವರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಬಳಿಕ ಘಟನೆ ನಡೆದ ಸ್ಥಳಕ್ಕೆ ಪೊಲೀಸ್ ಮತ್ತು ಅಗ್ನಿಶಾಮಕ ಸಿಬ್ಬಂದಿ ಬಂದು ಕಾರ್ಯಚರಣೆ ಮಾಡಿ ಮೃತದೇಹವನ್ನು ಕೆರೆಯಿಂದ ಹೊರ ತೆಗೆದಿದ್ದಾರೆ. ಇನ್ನು ನೀರಿನಲ್ಲಿ ಮುಳುಗಿದ್ದ ಮಗ ಅಸ್ವಸ್ಥನಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ನಾಗಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

  • 32 ಮಂದಿ ಪ್ರಯಾಣಿಕರಿದ್ದ ಐರಾವತ ಬಸ್ ನಲ್ಲಿ ಬೆಂಕಿ

    32 ಮಂದಿ ಪ್ರಯಾಣಿಕರಿದ್ದ ಐರಾವತ ಬಸ್ ನಲ್ಲಿ ಬೆಂಕಿ

    ಚಿಕ್ಕಬಳ್ಳಾಪುರ: ಐರಾವತ ಬಸ್ಸಿನ ಇಂಜಿನ್ ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದಲ್ಲಿ ನಡೆದಿದೆ.

    ಈ ಅವಘಡ ದೇವನಹಳ್ಳಿ ಪಟ್ಟಣದ ಹೊರವಲಯದ ರಾಣಿಕ್ರಾಸ್ ಬಳಿ ಸಂಭವಿಸಿದೆ. ಕೆಎ 57 ಎಫ್ 212 ಸಂಖ್ಯೆಯ ಐರಾವತ ಬಸ್ಸಿನಲ್ಲಿ ಬೆಂಕಿ ಕಾಣಿಕೊಂಡಿರುವುದು. ಈ ಬಸ್ 32 ಮಂದಿ ಪ್ರಯಾಣಿಕರನ್ನ ಬೆಂಗಳೂರಿನಿಂದ ಹೈದರಾಬಾದ್ ಗೆ ಕರೆದುಕೊಂಡು ಹೋಗುತ್ತಿತ್ತು.

    ಬಸ್ ರಾಣಿಕ್ರಾಸ್ ಬಳಿ ಹೋಗುತ್ತಿದ್ದಂತೆ ಇಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಸ್ ಗೆ ಬೆಂಕಿ ಹೊತ್ತಿಕೊಂಡಿರುವುದನ್ನು ಚಾಲಕ ಗಮನಿಸಿದ್ದಾರೆ. ಕೂಡಲೇ ಬಸ್ ನ್ನು ರಸ್ತೆ ಬದಿ ನಿಲ್ಲಿಸಿ ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ. ನಂತರ ಬಸ್ಸಿನ ತುಂಬಾ ದಟ್ಟ ಹೊಗೆ ಆವರಿಸಿಕೊಂಡಿದೆ. ಬಳಿಕ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ತಿಳಿಸಿದ್ದಾರೆ.

    ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಈ ಅವಘಡದಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಚಾಲಕನ ಮುಂಜಾಗ್ರತೆಯಿಂದ ಭಾರಿ ಅನಾಹುತ ತಪ್ಪಿದೆ. ಚಾಲಕನ ಸಮಯಪ್ರಜ್ಞೆಗೆ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಸುಟ್ಟು ಕರಕಲಾಯ್ತು 32 ಮಂದಿ ಪ್ರಯಾಣಿಕರಿದ್ದ ಖಾಸಗಿ ಬಸ್!

    ಸುಟ್ಟು ಕರಕಲಾಯ್ತು 32 ಮಂದಿ ಪ್ರಯಾಣಿಕರಿದ್ದ ಖಾಸಗಿ ಬಸ್!

    ಕೊಪ್ಪಳ: ಬ್ಯಾಟರಿ ಶಾರ್ಟ್ ಸರ್ಕ್ಯೂಟ್ ನಿಂದ ಖಾಸಗಿ ಬಸ್ ಸುಟ್ಟು ಕರಕಲಾಗಿರುವ ಘಟನೆ ಯಲಬುರ್ಗಾ ತಾಲೂಕಿನ ಗುನ್ನಾಳ ಕ್ರಾಸ್ ಬಳಿ ನಡೆದಿದೆ.

    ರಾಷ್ಟ್ರೀಯ ಹೆದ್ದಾರಿ 50 ಕ್ಕೆ ಹೊಂದಿಕೊಂಡಿರುವ ಗುನ್ನಾಳ ಕ್ರಾಸ್ ಬಳಿ ಈ ಅವಘಡ ಸಂಭವಿಸಿದೆ. ಸದ್ಯ ಈ ಅವಘಡದಿಂದ 32 ಮಂದಿ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಬಸ್ ಬೆಂಗಳೂರಿನಿಂದ ವಿಜಯಪುರಕ್ಕೆ ತೆರಳುತ್ತಿತ್ತು. ಆದರೆ ಗುನ್ನಾಳ ಕ್ರಾಸ್ ಬಳಿ ಏಕಾಏಕಿ ಬ್ಯಾಟರಿಯಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿದೆ.

    ಶಾರ್ಟ್ ಸರ್ಕ್ಯೂಟ್ ಆದ ಕುರಿತು ಚಾಲಕನ ಗಮನಕ್ಕೆ ಬಂದ ಕೂಡಲೇ ಅವರು ಪ್ರಯಾಣಿಕರು ಹಾಗೂ ಲಗೇಜ್ ಗಳನ್ನು ಕೆಳಗಿಳಿಸುವಂತೆ ಹೇಳಿದ್ದಾರೆ. ತಕ್ಷಣವೇ ಪ್ರಯಾಣಿಕರು ತಮ್ಮ ಲಗೇಜ್, ಬ್ಯಾಗ್ ಗಳೊಂದಿಗೆ ಬಸ್ ನಿಂದ ಇಳಿದಿದ್ದಾರೆ. ಹೀಗಾಗಿ ಪ್ರಯಾಣಿಕರು ಭಾರೀ ಅವಘಡದಿಂದ ಪಾರಾಗಿದ್ದು, ಬಸ್ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ. ಘಟನೆಯ ಮಾಹಿತಿ ಅರಿತ ಕುಷ್ಟಗಿ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ.

    ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಪುಟ್ಟಸ್ವಾಮಿ ನೇತೃತ್ವದಲ್ಲಿ ಬೆಂಕಿ ನಂದಿಸುವ ಕಾರ್ಯ ಯಶಸ್ವಿಯಾಗಿದೆ. ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ.

    ಈ ಘಟನೆ ಬೇವೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

  • ಅಯ್ಯೋ.. ಬಿಟ್ ಬಿಡ್ರೋ.. ನಾನು ಸಾಯ್ತಿನಿ -ಮೂರನೇ ಬಾರಿಗೆ ಕಾಳಿ ನದಿಗೆ ಹಾರಿದ ವ್ಯಕ್ತಿ

    ಅಯ್ಯೋ.. ಬಿಟ್ ಬಿಡ್ರೋ.. ನಾನು ಸಾಯ್ತಿನಿ -ಮೂರನೇ ಬಾರಿಗೆ ಕಾಳಿ ನದಿಗೆ ಹಾರಿದ ವ್ಯಕ್ತಿ

    ಕಾರವಾರ: ಕೌಟುಂಬಿಕ ಕಲಹದಿಂದ ಮಾನಸಿಕವಾಗಿ ಖಿನ್ನತೆಗೊಳಗಾಗಿದ್ದ ವ್ಯಕ್ತಿಯೊಬ್ಬ ಮೂರನೇ ಬಾರಿ ಕಾಳಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ಸದಾಶಿವ ಗಡದಲ್ಲಿ ನಡೆದಿದೆ.

    ಧಾರವಾಡ ಮೂಲದ ಶಂಕರ್ ಬಂಜಾರ ಎಂಬವರೇ ಮತ್ತೆ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಇವರು ಕಳೆದ ಮಾರ್ಚ್ 28 ರಂದು ಕಾಳಿ ನದಿಗೆ ಹಾರಿ ಆತ್ಮಹತ್ಯೆ ಯತ್ನಿಸಿದ್ದರು. ಇದೀಗ ಮತ್ತೆ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವುದಾಗಿದ್ದು, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

    ಈ ಹಿಂದೆ ತನ್ನ ಮಗುವಿನೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ್ದಾಗ ಧಾರವಾಡದ ಮಾನಸಿಕ ರೋಗಿಗಳ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಆದರೆ ಪುನಃ ಕಾರವಾರಕ್ಕೆ ಬಂದು ಕಾಳಿ ನದಿಗೆ ಧುಮುಕಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದನ್ನೂ ಓದಿ: 1 ವರ್ಷದ ಮಗುವಿನೊಂದಿಗೆ ಕಾಳಿ ನದಿಗೆ ಹಾರಿದ ತಂದೆ

    ಈ ಪ್ರಕರಣ ಸಂಬಂಧ ಚಿತ್ತಾಕುಲ ಠಾಣಾ ಪೊಲೀಸರು ಶಂಕರ್ ಅವರನ್ನು ವಶಕ್ಕೆ ಪಡೆದು ದೂರು ದಾಖಲಿಸಿಕೊಂಡಿದ್ದಾರೆ.

  • ಶಾಪಿಂಗ್ ಮಾಲ್ ನಲ್ಲಿ ಅಗ್ನಿ ದುರಂತ – 37 ಮಂದಿ ಸಜೀವ ದಹನ, 69 ಮಂದಿ ಕಣ್ಮರೆ

    ಶಾಪಿಂಗ್ ಮಾಲ್ ನಲ್ಲಿ ಅಗ್ನಿ ದುರಂತ – 37 ಮಂದಿ ಸಜೀವ ದಹನ, 69 ಮಂದಿ ಕಣ್ಮರೆ

    ಮಾಸ್ಕೋ: ರಷ್ಯಾದಲ್ಲಿ ಬೃಹತ್ ಶಾಪಿಂಗ್ ಮಾಲ್‍ವೊಂದರಲ್ಲಿ ಭಾರೀ ಅಗ್ನಿ ದುರಂತ ಸಂಭವಿಸಿದ ಪರಿಣಾಮ 37 ಮಂದಿ ಸಜೀವ ದಹನವಾಗಿದ್ದು, 69 ಜನ ಕಾಣೆಯಾಗಿದ್ದಾರೆ.

    ನಗರದ ವೆಸ್ಟರ್ನ್ ಸೈಬೀರಿಯಾದ ಕೆಮೆರಾವೋನಲ್ಲಿರುವ ವಿಂಟರ್ ಚೆರ್ರಿ ಶಾಪಿಂಗ್ ಸೆಂಟರ್ ನಲ್ಲಿ ಭಾನುವಾರ ಈ ಅವಘಡ ಸಂಭವಿಸಿದೆ. ಈ ಅವಘಡದಿಂದ 37 ಮಂದಿ ಸಾವನ್ನಪ್ಪಿದ್ದು, 40 ಮಕ್ಕಳು ಸೇರಿದಂತೆ ಸುಮಾರು 69 ಮಂದಿ ನಾಪತ್ತೆಯಾಗಿದ್ದಾರೆ ಎಂದು ರಷ್ಯಾ ತನಿಖಾ ಸಮಿತಿ ತಿಳಿಸಿದೆ.

    ಭಾನುವಾರ ಮಧ್ಯಾಹ್ನ ಶಾಂಪಿಂಗ್ ಮಾಲ್ ನ ಮಲ್ಟಿಪ್ಲೆಕ್ಸ್ ಸಿನಿಮಾ ಮತ್ತು ಬೌಲಿಂಗ್ ಆ್ಯಲಿ ಗೇಮ್ ಬಳಿ ಅಪಾರ ಸಂಖ್ಯೆಯಲ್ಲಿ ಜನ ಜಂಗುಳಿ ಸೇರಿತ್ತು. ಮಾಲ್ ನ ಟಾಪ್ ಫ್ಲೋರ್ ನಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿತ್ತು. ನಂತರ ಇಡೀ ಮಾಲ್‍ಗೆ ಹರಡಿಕೊಂಡಿದೆ. ನೂರಾರು ಗ್ರಾಹಕರು ಅಲ್ಲಿ ನೆರೆದಿದ್ದರು ಎಂದು ವರದಿಯಾಗಿದೆ.

    ದಿಢೀರನೆ ಬೆಂಕಿ ಕಾಣಿಸಿಕೊಂಡಿದ್ದರಿಂದ ಗ್ರಾಹಕರು ಗಾಬರಿಯಿಂದ ಓಡಿದ್ದಾರೆ. ಆದ್ರೆ ಬೆಂಕಿಯ ತೀವ್ರತೆ ಹೆಚ್ಚಾಗಿದ್ದರಿಂದ 37 ಮಂದಿ ಸಜೀವ ದಹನವಾಗಿದ್ದಾರೆ. ಅವಘಡದಲ್ಲಿ ಸುಮಾರು 43 ಮಂದಿಗೆ ಗಂಭೀರ ಸುಟ್ಟ ಗಾಯಗಳಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ತಕ್ಷಣವೇ ರವಾನಿಸಲಾಗಿದೆ. ಶಾಪಿಂಗ್ ಸೆಂಟರ್ ನಿಂದ ದಟ್ಟವಾದ ಹೊಗೆ ಬರುತ್ತಿರುವ ಫೋಟೋಗಳನ್ನು ರಷ್ಯಾದ ಮಾಧ್ಯಮಗಳು ಬಿತ್ತರಿಸಿವೆ. ತಕ್ಷಣ ಸ್ಥಳಕ್ಕೆ ಸುಮಾರು 300 ಅಗ್ನಿಶಾಮಕ ದಳ ವಾಹನಗಳು ಬಂದು ಬೆಂಕಿಯನ್ನು ನಂದಿಸಲು ಹರಸಾಹಸಪಟ್ಟಿದ್ದಾರೆ.

    ಅತೀ ದೊಡ್ಡದಾದ ಈ ಶಾಪಿಂಗ್ ಮಾಲ್ ನಲ್ಲಿ ಹಲವು ಮಹಡಿಗಳಿದ್ದು, ಭಾನುವಾರ ಮಧ್ಯಾಹ್ನ ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರು. ಶಾಪಿಂಗ್ ಸೆಂಟರ್ ನಲ್ಲಿ ಅಂದಾಜು ಎಷ್ಟು ಜನರಿದ್ದರು ಎಂಬ ಬಗ್ಗೆ ಮಾಹಿತಿಯಿಲ್ಲ. ಮಲ್ಟಿಪ್ಲೆಕ್ಸ್ ಸಿನಿಮಾ ಹಾಲ್ ನಲ್ಲಿ ಸಂಭವಿಸಿದ ಬೆಂಕಿ ಅವಘಡದಿಂದಾಗಿ ಸಾವಿರಾರು ಸ್ಕ್ವೇರ್ ಮೀಟರ್ ಬೆಂಕಿಗಾಹುತಿಯಾಗಿದೆ. ಸಿನಿಮಾ ಹಾಲ್ ನ ಎರಡು ಮೇಲ್ಛಾವಣಿ ಕುಸಿದು ಬಿದ್ದಿದೆ. ಸುಮಾರು 120 ಮಂದಿಯನ್ನು ಸಿನಿಮಾ ಹಾಲ್ ನಿಂದ ರಕ್ಷಿಸಲಾಗಿದೆ ಎಂದು ರಕ್ಷಣಾ ತಂಡ ತಿಳಿಸಿದೆ.

    ಈಗಾಗಲೇ 13 ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ತಿಳಿದುಬಂದಿದೆ. ಘಟನೆ ವೇಳೆ ಕೆಲವರು ಕಿಟಕಿಯಿಂದ ಹಾರಿ ಪ್ರಾಣ ಉಳಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಹಲವರು ಗಾಯಗೊಂಡಿದ್ದಾರೆಂದು ವರದಿಯಾಗಿದೆ

    2013 ರಲ್ಲಿ ನಿರ್ಮಾಣವಾಗಿರುವ ಈ ಮಾಲ್ 23,000 ಚದರ ಕಿ.ಮೀ ವಿಸ್ತೀರ್ಣ ಹೊಂದಿದೆ. ಶಾಪಿಂಗ್ ಸೆಂಟರ್, ಬೌಲಿಂಗ್ ಕ್ಲಬ್, ಮಕ್ಕಳ ಆಟದ ಏರಿಯಾ, ಸಿನೆಮಾ ಹಾಲ್ ಜೊತೆಗೆ ಸಾಕುಪ್ರಾಣಿ ಸಂಗ್ರಹಾಲಯವೂ ಈ ಮಾಲ್ ನಲ್ಲಿದೆ. ಈ ಮಾಲ್ ಮಾಸ್ಕೋದಿಂದ 3000 ಕಿಮೀ ದೂರದಲ್ಲಿದೆ.

  • ಗುಡ್ಡಕ್ಕೆ ಬೆಂಕಿ ಹಚ್ಚಿ ಪರಾರಿಯಾದ ಕಿಡಿಗೇಡಿಗಳು- ಸ್ಥಳೀಯ ನಿವಾಸಿಗಳಲ್ಲಿ ಆತಂಕ

    ಗುಡ್ಡಕ್ಕೆ ಬೆಂಕಿ ಹಚ್ಚಿ ಪರಾರಿಯಾದ ಕಿಡಿಗೇಡಿಗಳು- ಸ್ಥಳೀಯ ನಿವಾಸಿಗಳಲ್ಲಿ ಆತಂಕ

    ಯಾದಗಿರಿ: ಕಿಡಿಗೇಡಿಗಳು ಗುಡ್ಡಕ್ಕೆ ಬೆಂಕಿ ಹಂಚಿದ ಪರಿಣಾಮ ಹೊತ್ತಿ ಉರಿದ ಘಟನೆ ಜಿಲ್ಲೆಯ ನಾಯ್ಕಲ್ ಗ್ರಾಮದಲ್ಲಿ ನಡೆದಿದೆ.

    ಕಿಡಿಗೇಡಿಗಳು ಗುಡ್ಡದ ಮೇಲಿರುವ ಒಣಗಿದ ಮೇವಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಪರಿಣಾಮ ಗುಡ್ಡದ ಸುತ್ತಲೂ ಬೆಂಕಿ ಆವರಿಸಿದ್ದರಿಂದ ಗುಡ್ಡದ ಕೆಳ ಭಾಗದಲ್ಲಿ ವಾಸಿಸುತ್ತಿರುವ ಜನರಿಗೆ ಬೆಂಕಿ ಬಿದ್ದಿರುವ ವಿಚಾರ ತಿಳಿದಿದೆ. ಇದರಿಂದ ಗಾಬರಿಗೊಂಡು ಅವರು ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

    ಈ ಹಿನ್ನೆಲೆಯಲ್ಲಿ ವಿಷಯ ತಿಳಿದ ತಕ್ಷಣವೇ ಸ್ಥಳಕ್ಕೆ ಅಗ್ನಿಶಾಮಕ ದಳ ಮತ್ತು ಅರಣ್ಯಾ ಇಲಾಖೆ ಸಿಬ್ಬಂದಿ ದೌಡಾಯಿಸಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೇಸಿಗೆ ಇರುವ ಹಿನ್ನೆಲೆಯಲ್ಲಿ ಗುಡ್ಡದ ಮೇಲಿರುವ ಒಣಗಿದ ಮೇವಿಗೆ ಬೆಂಕಿ ಹತ್ತಿರುವುದರಿಂದ ಬೆಂಕಿಯ ಕೆನ್ನಾಲಿಗೆ ಗುಡ್ಡದ ಸುತ್ತಲೂ ವ್ಯಾಪಿಸಿದೆ. ಇದರಿಂದ ಸ್ಥಳೀಯರಲ್ಲಿ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು.

    ಘಟನೆ ನಡೆದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ವಡಗೇರಾ ಪಿಎಸ್‍ಐ ಮಹದೇವಪ್ಪ ದಿಡ್ಡಿಮನಿ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.