Tag: ಅಗ್ನಿಶಾಮಕ ದಳ

  • ಹುಲ್ಲು ತುಂಬಿದ್ದ ಲಾರಿಗೆ ಬೆಂಕಿ – ಜಮೀನಿನ ತುಂಬಾ ಲಾರಿ ಚಾಲನೆ

    ಹುಲ್ಲು ತುಂಬಿದ್ದ ಲಾರಿಗೆ ಬೆಂಕಿ – ಜಮೀನಿನ ತುಂಬಾ ಲಾರಿ ಚಾಲನೆ

    ಕೊಪ್ಪಳ: ವಿದ್ಯುತ್ ತಂತಿ ತಗುಲಿ ಭತ್ತದ ಹುಲ್ಲು ತುಂಬಿದ್ದ ಲಾರಿಗೆ ಬೆಂಕಿ ಹೊತ್ತಿಕೊಂಡ ಘಟನೆ ಕೊಪ್ಪಳದಲ್ಲಿ ನೆಡದಿದೆ.

    ಗಂಗಾವತಿ ತಾಲೂಕಿನ ಗುಂಡೂರು ಕ್ಯಾಂಪ್‍ನ ಮಲ್ಲಿಕಾರ್ಜುನ ಕಾಲೋನಿಯಲ್ಲಿ ಈ ಅವಘಡ ಸಂಭವಿಸಿದ್ದು, ಲಾರಿ ಚಾಲಕ ಸಾಯಪ್ಪನ ಜಾಣ್ಮೆ ಮತ್ತು ಧೈರ್ಯದಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಜಮೀನಿನಲ್ಲಿ ಹುಲ್ಲು ತುಂಬಿಕೊಂಡು ಬರುವಾಗ ಹೊಲದಲ್ಲಿದ್ದ ವಿದ್ಯುತ್ ಕಂಬದ ತಂತಿಗಳು ಹುಲ್ಲಿಗೆ ತಾಗಿ ಬೆಂಕಿ ಹತ್ತಿಕೊಂಡಿದೆ.

    ತಕ್ಷಣ ಧೃತಿಗೆಡದೆ ಲಾರಿ ಡ್ರೈವರ್ ಜಮೀನಿನ ತುಂಬಾ ಬೆಂಕಿ ಹತ್ತಿದ ಲಾರಿಯನ್ನು ಚಾಲಾಯಿಸಿದ್ದಾನೆ. ಇದರಿಂದ ಗಾಳಿಗೆ ಬೆಂಕಿ ಪ್ರಮಾಣ ಇಳಿಮುಖವಾಗಿ ಬಾರೀ ಅನಾಹುತವನ್ನು ತಪ್ಪಿಸಿದ್ದಾನೆ. ಅಗ್ನಿಶಾಮಕ ಸ್ಥಳಕ್ಕೆ ಆಗಮಿಸುವವರೆಗೂ ಲಾರಿಯನ್ನು ಜಮೀನಿನಲ್ಲಿ ಸುತ್ತು ಹಾಕಿದ್ದಾನೆ.

    ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದವರು ಸಂಪೂರ್ಣ ಬೆಂಕಿ ನಂದಿಸಿದ್ದಾರೆ. ಲಾರಿ ಡ್ರೈವರ್ ಚಾಣಕ್ಷತನದಿಂದ ಸುಟ್ಟು ಕರಕಲಾಗಬೇಕಿದ್ದ ಲಾರಿ ಸುರಕ್ಷಿತವಾಗಿದೆ. ಈ ಘಟನೆ ಕಾರಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ಭುವನೇಶ್ವರ ಬೌಂಡ್ ರಾಜಧಾನಿ  ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬೆಂಕಿ – ಸುಟ್ಟು ಕರಕಲಾದ ಬೋಗಿ

    ಭುವನೇಶ್ವರ ಬೌಂಡ್ ರಾಜಧಾನಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬೆಂಕಿ – ಸುಟ್ಟು ಕರಕಲಾದ ಬೋಗಿ

    ನವದೆಹಲಿ: ಭುವನೇಶ್ವರ ಬೌಂಡ್ ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ ಇಂದು ಮಧ್ಯಾಹ್ನ 1 ಗಂಟೆ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡು ಒಂದು ಬೋಗಿ ಸಂಪೂರ್ಣ ಸುಟ್ಟು ಕರಕಲಾಗಿದೆ.

    ಎಂದಿನಂತೆ ರಾಜಧಾನಿ ಎಕ್ಸ್‌ಪ್ರೆಸ್‌ ನವದೆಹಲಿಯಿಂದ ಭುವನೇಶ್ವರ್ ನತ್ತ ಪ್ರಯಾಣ ಬೆಳೆಸಿತ್ತು. ಈ ವೇಳೆ ಮಾರ್ಗ ಮಧ್ಯೆ ಒಡಿಶಾದ ಬಾಲಸೋರ್ ಮತ್ತು ಸೊರೊ ನಿಲ್ದಾಣಗಳ ನಡುವೆ ರೈಲಿಗೆ ವಿದ್ಯುತ್ ಪೂರೈಕೆ ಮಾಡುವ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಆ ಬೋಗಿಯನ್ನು ಅಧಿಕಾರಿಗಳು ರೈಲಿನಿಂದ ಬೇರೆ ಮಾಡಿದ ಕಾರಣ ಉಳಿದ ಯಾವ ಬೋಗಿಗೂ ಬೆಂಕಿ ತಗುಲಿಲ್ಲ. ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

    ಖರಗಪುರದ ಆಗ್ನೇಯ ರೈಲ್ವೆ ವಿಭಾಗದ ಖಂತಪಾಡ ಎಂಬ ಊರಿನಲ್ಲಿ ಈ ಘಟನೆ ನಡೆದಿದೆ. ಈ ರೈಲಿನಲ್ಲಿ ಕೇವಲ ಒಂದು ವಿದ್ಯುತ್ ಪೂರೈಕೆ ಮಾಡುವ ಘಟಕ ಮಾತ್ರ ಇದ್ದು ಆ ಬೋಗಿಯಲ್ಲೇ ಬೆಂಕಿ ಕಾಣಿಸಿಕೊಂಡಿದೆ. ಸುರಕ್ಷತೆಯ ಕ್ರಮವಾಗಿ ವಿದ್ಯುತ್ ಘಟಕದಿಂದ ರೈಲಿಗೆ ನೀಡಲಾದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ.

    ಈ ಘಟನೆ ತಿಳಿದು ತಕ್ಷಣ ಸ್ಥಳಕ್ಕೆ ಬಂದ ಮೂರು ಅಗ್ನಿಶಾಮಕ ದಳದ ವಾಹನಗಳು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದೆ. ರೈಲು ಬೇರೆ ಜನರೇಟರ್ ಘಟಕದ ಸಹಾಯದಿಂದ 2:59 ಕ್ಕೆ ಖಂತಪಾಡದಿಂದ ಎಲ್ಲಾ ಪ್ರಯಾಣಿಕರೊಂದಿಗೆ ಭುವನೇಶ್ವರ್‍ನತ್ತ ಹೊರಟಿದೆ.

  • 40ಕ್ಕೂ ಹೆಚ್ಚು ಮಂದಿ ಪ್ರಯಾಣಿಕರಿದ್ದ ಬಸ್ಸಿಗೆ ಬೆಂಕಿ – ಬೆಂಗಳೂರಿಗೆ ಬರ್ತಿದ್ದ ಬಸ್ ಸುಟ್ಟು ಕರಕಲು

    40ಕ್ಕೂ ಹೆಚ್ಚು ಮಂದಿ ಪ್ರಯಾಣಿಕರಿದ್ದ ಬಸ್ಸಿಗೆ ಬೆಂಕಿ – ಬೆಂಗಳೂರಿಗೆ ಬರ್ತಿದ್ದ ಬಸ್ ಸುಟ್ಟು ಕರಕಲು

    ತುಮಕೂರು: ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಖಾಸಗಿ ಬಸ್ ಸುಟ್ಟು ಕರಕಲಾಗಿದ್ದರೂ ಪ್ರಯಾಣಿಕರು ಅಪಾಯದಿಂದ ಪಾರಾಗಿರುವ ಘಟನೆ ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

    ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಇಂದು ಬೆಳಗ್ಗೆ ಸುಮಾರು 5 ಗಂಟೆಯ ವೇಳೆ ಈ ಘಟನೆ ನಡೆದಿದೆ. ಶುಕ್ರವಾರ ಸಂಜೆ 6:15ಕ್ಕೆ ಎಸ್‍ಆರ್‍ಎಸ್ ಬಸ್ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿಯಿಂದ ಬೆಂಗಳೂರಿಗೆ ಬರುತಿತ್ತು.

    ಇಂದು ಬೆಳಗ್ಗೆ 7 ಗಂಟೆಗೆ ಬೆಂಗಳೂರಿಗೆ ಬಸ್ ತಲುಪಬೇಕಿತ್ತು. ಆದರೆ ತುಮಕೂರಿನಲ್ಲಿ ಆಕಸ್ಮಿಕವಾಗಿ ಬಸ್‍ಗೆ ಬೆಂಕಿ ಹೊತ್ತಿಕೊಂಡಿದೆ. ಮುದ್ದೆಬಿಹಾಳ ಮೂಲದ ಪ್ರಯಾಣಿಕರೊಬ್ಬರು ಬಸ್ಸಿಗೆ ಬೆಂಕಿ ಹೊತ್ತಿಕೊಂಡಿರುವುದನ್ನು ನೋಡಿ ನಿದ್ದೆಯಲ್ಲಿದ್ದ ಉಳಿದ ಪ್ರಯಾಣಿಕರನ್ನು ಎಬ್ಬಿಸಿ ಕೆಳಗಿಳಿಸಿದ್ದಾರೆ. ಇದರಿಂದಾಗಿ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.

    ಪ್ರಯಾಣಿಕರು ಪೊಲೀಸ್ ಮತ್ತು ಅಗ್ನಿಶಾಮಕ ದಳದವರಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ದಳದವರು ದೌಡಾಯಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಸ್ಸಿನಲ್ಲಿ ಸುಮಾರು 40ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಸದ್ಯಕ್ಕೆ ಅವರೆಲ್ಲರೂ ಬೆಂಕಿ ಅವಘಡದಿಂದ ಪಾರಾಗಿದ್ದಾರೆ. ಬೆಂಕಿಯ ರಭಸಕ್ಕೆ ಬಸ್ ಸಂಪೂರ್ಣ ಸುಟ್ಟು ಕರಕಲಾಗಿದೆ.

  • ಟ್ರಾಕ್ಟರ್ ಟಯರ್‌​ಗಳ ಗೋಡೌನ್ ನಲ್ಲಿ ಬೆಂಕಿ – ಮುಗಿಲೆತ್ತರಕ್ಕೆ ಆವರಿಸಿದ ಹೊಗೆ

    ಟ್ರಾಕ್ಟರ್ ಟಯರ್‌​ಗಳ ಗೋಡೌನ್ ನಲ್ಲಿ ಬೆಂಕಿ – ಮುಗಿಲೆತ್ತರಕ್ಕೆ ಆವರಿಸಿದ ಹೊಗೆ

    ಚಿಕ್ಕಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಟಫೆ ಟ್ರಾಕ್ಟರ್ ತಯಾರಿಕಾ ಕಾರ್ಖಾನೆಯಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದೆ.

    ಹೆದ್ದಾರಿ ಪಕ್ಕದ ಮಮತಾ ಪೆಟ್ರೋಲ್ ಬಂಕ್‍ಗೆ ಹೊಂದಿಕೊಂಡಿರುವ ಟ್ರಾಕ್ಟರ್ ತಯಾರಿಕಾ ಕಾರ್ಖಾನೆಯ ಆವರಣದಲ್ಲಿನ ಟ್ರಾಕ್ಟರ್ ಟಯರ್‌ಗಳ ಗೋಡೌನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ಸಾವಿರಾರು ಟ್ರಾಕ್ಟರ್‌ನ ಟಯರ್‌ಗಳು ಬೆಂಕಿಗಾಹುತಿಯಾಗಿದ್ದು, ಧಗಧಗನೆ ಹೊತ್ತಿ ಉರಿದಿವೆ.

    ಅಗ್ನಿ ಅವಘಡದಿಂದ ಭಾರೀ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದ್ದು, ಹೊಗೆ ಮುಗಿಲೆತ್ತರಕ್ಕೆ ಆವರಿಸಿದೆ. ಅಗ್ನಿ ಅವಘಡದ ವಿಷಯ ತಿಳಿದು ಸ್ಥಳಕ್ಕೆ ಆಗ್ನಿಶಾಮಕ ದಳ ಸಿಬ್ಬಂದಿ ದೌಡಾಯಿಸಿದ್ದು, ಹರಸಾಹಸ ಪಟ್ಟು ಬೆಂಕಿನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. 4 ಅಗ್ನಿ ಶಾಮಕ ವಾಹನಗಳ ಮೂಲಕ ಬೆಂಕಿನಂದಿಸುವ ಕಾರ್ಯ ಸಾಗಿದ್ದು, ಬೆಂಕಿ ಹತೋಟಿಗೆ ತರಲು ಹರಸಾಹಸ ಪಡುವಂತಾಗಿದೆ.

    ಟಯರ್ ಸುಟ್ಟು ವಾಸನೆಯಿಂದ ಜನ ಕಸಿವಿಸಿಗೊಂಡಿದ್ದಾರೆ. ಮತ್ತೊಂದೆಡೆ ಪೆಟ್ರೋಲ್ ಬಂಕ್ ಸಹ ಪಕ್ಕದಲ್ಲೇ ಇರುವ ಕಾರಣ ಸಾಕಷ್ಟು ಆತಂಕ ಸಹ ಮನೆ ಮಾಡಿದ್ದು, ಸಾರ್ವಜನಿಕರನ್ನ ಹತ್ತಿರ ಸುಳಿಯಲು ಸಹ ಪೊಲೀಸರು ಬಿಟ್ಟಿಲ್ಲ. ಇನ್ನೂ ಈ ಟಯರ್ ಗೋಡೌನ್ ಪಕ್ಕದಲ್ಲೇ ತಯಾರಾದ ಹೊಚ್ಚ ಹೊಸ ಟ್ರಾಕ್ಟರ್​​ಗಳನ್ನ ನಿಲ್ಲಿಸಲಾಗಿದ್ದು, ಅದೃಷ್ಟವಶಾತ್ ಬೆಂಕಿ ನಂದಿಸುವ ಕಾರ್ಯ ನಡೆಸಿ ಟ್ರಾಕ್ಟರ್​​ಗಳಿಗೆ ಬೆಂಕಿ ತಗುಲದಂತೆ ತಡೆಯಲಾಗಿದೆ.

    ಬೆಂಕಿ ಅನಾಹುತಕ್ಕೆ ಕಾರಣ ಏನು ಎಂಬುದು ನಿಖರವಾಗಿ ತಿಳಿದಿಲ್ಲ. ಆದರೆ ಶಾರ್ಟ್ ಸರ್ಕ್ಯೂಟ್ ಸಂಭವಿಸುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗುತ್ತಿದ್ದು, ಕಿಡಿಗೇಡಿಗಳು ಯಾರಾದರೂ ಬೆಂಕಿ ಹಚ್ಚಿದ್ದಾರ ಎನ್ನುವ ಅನುಮಾನ ಮೂಡಿದೆ. ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ಲಾಡ್ಜ್‌ನಲ್ಲಿ ಏಸಿ ಬ್ಲಾಸ್ಟ್- ತಪ್ಪಿತು ಭಾರೀ ಅವಘಡ!

    ಲಾಡ್ಜ್‌ನಲ್ಲಿ ಏಸಿ ಬ್ಲಾಸ್ಟ್- ತಪ್ಪಿತು ಭಾರೀ ಅವಘಡ!

    ಚಿಕ್ಕಮಗಳೂರು: ಲಾಡ್ಜ್‌ನಲ್ಲಿದ್ದ ಏಸಿ ಬ್ಲಾಸ್ಟ್ ಆದ ಪರಿಣಾಮ ರೂಂನಲ್ಲಿದ್ದ ಕಾಟ್, ಬೆಡ್ ಹಾಗೂ ಸೋಫಾ ಸೆಟ್ ಸುಟ್ಟು ಕರಕಲಾಗಿರುವ ಘಟನೆ ಲೋಟಸ್ ಲಾಡ್ಜ್‌ನಲ್ಲಿ ನಡೆದಿದೆ.

    ನಗರದ ಐಜಿ ರಸ್ತೆಯಲ್ಲಿರುವ ಲೋಟಸ್ ಹೋಟಲ್‍ನ ರೂಂ ನಂಬರ್ 205ರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಹೋಟೆಲ್‍ನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಸಿಬ್ಬಂದಿ ಭಯದಿಂದ ಹೊರ ಓಡಿ ಬಂದಿದ್ದು, ತಕ್ಷಣ ಅಗ್ನಿಶಾಮಕ ದಳದವರಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ.

    ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಹೋಟೆಲ್ ಮಾಲೀಕರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಗರದ ಬಹುತೇಕ ಹೋಟೆಲ್ ಮಾಲೀಕರು ಅಗ್ನಿ ಸುರಕ್ಷತಾ ಪತ್ರವನ್ನೇ ಪಡೆದಿಲ್ಲ. ಅಗ್ನಿ ದುರಂತವಾದರೆ ನಾವು ಜವಾಬ್ದಾರರಲ್ಲ, ಕೂಡಲೇ ಅಗ್ನಿ ಸುರಕ್ಷತಾ ಪತ್ರ ಪಡೆಯುವಂತೆ ಹೋಟೆಲ್ ಮಾಲೀಕರಿಗೆ ಮನವಿ ಮಾಡಿದ್ದಾರೆ.

    ಈ ಅವಘಡದಿಂದ ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ಮೂಲಕ ಕೂದಲೆಳೆ ಅಂತರದಲ್ಲಿ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.

  • ನಿಂತಲ್ಲಿಯೇ ಸುಟ್ಟು ಭಸ್ಮವಾದ ಬಸ್

    ನಿಂತಲ್ಲಿಯೇ ಸುಟ್ಟು ಭಸ್ಮವಾದ ಬಸ್

    ಹಾವೇರಿ: ನಿಂತಲ್ಲಿಯೇ ಖಾಸಗಿ ಬಸ್ ಧಗಧಗನೆ ಹೊತ್ತಿ ಉರಿದು ಸುಟ್ಟು ಭಸ್ಮವಾದ ಘಟನೆ ಹಾವೇರಿ ನಗರದ ಮುರುಘರಾಜೇಂದ್ರ ಮಠದ ಬಳಿ ನಡೆದಿದೆ.

    ಖಾಸಗಿ ಬಸ್ ಇಂದು ಮುಂಜಾನೆ ಮಂಗಳೂರಿನಿಂದ ಸುಮಾರು 7 ಗಂಟೆಗೆ ಬಂದು ನಿಂತಿತ್ತು. ಆದರೆ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಬಸ್ ಹೊತ್ತಿಕೊಂಡು ಧಗಧಗನೇ ಉರಿದಿದೆ. ಇದನ್ನೂ ನೋಡಿ ಸ್ಥಳೀಯರು ಗಾಬರಿಗೊಂಡು ತಕ್ಷಣ ಅಗ್ನಿಶಾಮಕ ದಳದವರಿಗೆ ಫೋನ್ ಮಾಡಿ ತಿಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ.

    ಸದ್ಯ ಬಸ್ಸಿನ ಪಕ್ಕದಲ್ಲಿಯೇ ಪೆಟ್ರೋಲ್ ಬಂಕ್ ಇತ್ತು. ಇದರಿಂದ ಬೆಂಕಿ ನಂದಿಸುವರೆಗೂ ಜನರು ಆತಂಕಗೊಂಡಿದ್ದರು. ಬಸ್ಸಿನಲ್ಲಿ ನಿರ್ವಾಹಕ ರಾಜು ಮಲಗಿದ್ದರು. ಆದರೆ ಅದೃಷ್ಟವಶಾತ್ ಬೆಂಕಿ ಕಾಣಿಸಿಕೊಂಡ ನಂತರ ಹೊರಗೆ ಬಂದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಬಸ್ ಇಂಜಿನ್‍ನಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಈ ಘಟನೆ ಹಾವೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • 7 ದಿನ ಕಾರ್ಯಾಚರಣೆ – 19 ಮಂದಿ ದುರ್ಮರಣ, 57ಕ್ಕೂ ಹೆಚ್ಚು ಜನರ ರಕ್ಷಣೆ

    7 ದಿನ ಕಾರ್ಯಾಚರಣೆ – 19 ಮಂದಿ ದುರ್ಮರಣ, 57ಕ್ಕೂ ಹೆಚ್ಚು ಜನರ ರಕ್ಷಣೆ

    – ಧಾರವಾಡ ಜನತೆ, ಮಾಧ್ಯಮದವರಿಗೆ ಜಿಲ್ಲಾಧಿಕಾರಿ ಧನ್ಯವಾದ
    – ಶ್ರಮಿಸಿದ ಸಿಬ್ಬಂದಿಗೆ ಸೂಕ್ತ ಬಹುಮಾನ

    ಧಾರವಾಡ: ಕಟ್ಟಡ ದುರಂತದಲ್ಲಿ ಸಾವನ್ನಪ್ಪಿದ ಸಂಖ್ಯೆ 19 ಕ್ಕೆ ಏರಿಕೆಯಾಗಿದ್ದು, ಕಳೆದ 7 ದಿನಗಳಿಂದ ಅಗ್ನಿ ಶಾಮಕ ದಳ, ಎನ್‍ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ನಡೆಸಿದ ಕಾರ್ಯಾಚರಣೆಯಲ್ಲಿ 19 ಶವಗಳನ್ನ ಹೊರ ತೆಗೆಯಲಾಗಿದ್ದು, 57 ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ.

    ಇನ್ನು ಇಂದು ಹೊರ ತೆಗೆದ 3 ಜನರನ್ನು ನವಲು ಝಾರೆ, ವಾಘೂ ಜಾರೆ ಹಾಗೂ ಸಹದೇವ ಸಾಳುಂಕೆ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಕಾಣೆಯಾದ ಈ ಮೂವರನ್ನು ಹುಡುಕುವ ಕಾರ್ಯ ಕಳೆದ 7 ದಿನಗಳಿಂದ ನಡೆದಿತ್ತು. ಆದರೆ ಈ ಮೂವರನ್ನು ಹೊರತು ಪಡಿಸಿ ಉಳಿದವರ ಶವಗಳು ಪತ್ತೆಯಾಗಿದ್ದವು. ತಡ ರಾತ್ರಿ ಕೂಡಾ ಕಾರ್ಯಾಚರಣೆ ನಡೆಸಿ ಈ ಮೂರು ಶವಗಳನ್ನು ಹೊರ ತೆಗೆಯುವಲ್ಲಿ ಅಗ್ನಿ ಶಾಮಕ ದಳ ಸಫಲವಾಗಿದೆ.

    ಇಂದು ಸಿಕ್ಕ ಮೂರು ಶವಗಳಲ್ಲಿ ಕಟ್ಟಡದ ಸೂಪರ್ ವೈಸರ್ ಸಹದೇವ ಸಳುಂಕೆ, ವಾಘು ಜಾರೆ ಹಾಗೂ ನವಲೂ ಜಾರೆಯ ಶವಗಳನ್ನ ಹೊರ ತೆಗೆಯಲಾಯಿತು. ಇದರಲ್ಲಿ ವಾಘು ಹಾಗೂ ನವಲೂ ಇಬ್ಬರು ಕಾಕಾ ಚಿಕ್ಕಪ್ಪನ ಮಕ್ಕಳು ಎಂದು ತಿಳಿದು ಬಂದಿದೆ.

    ಕಟ್ಟಡದ ದುರಂತ ಸ್ಥಳದಲ್ಲಿ ಶೇ.90ರಷ್ಟು ತೆರವು ಕಾರ್ಯಾಚರಣೆ ಆಗಿದೆ. ಗಾಯಾಳುಗಳಿಗೆ ಜಿಲ್ಲಾ ಆಸ್ಪತ್ರೆ ಹಾಗೂ ಹುಬ್ಬಳ್ಳಿ ಕಿಮ್ಸ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಂಜೆಯೊಳಗೆ ಎಲ್ಲ ಕೆಲಸ ಮುಗಿಯಲಿದೆ. ಈ ಘಟನೆಯಲ್ಲಿ ಸ್ಥಳೀಯರು ಬಹಳ ಜನರ ಜೀವ ಉಳಿಸಿದ್ದಾರೆ. ಜಿಲ್ಲಾಡಳಿತದಿಂದ ನಾವು ಅವರ ಮೇಲೆ ಚಿರರುಣಿಯಾಗಿರುತ್ತೇವೆ. ಜನರಿಗೆ ಮಾಹಿತಿ ಮುಟ್ಟಿಸಿದ ಮಾಧ್ಯಮದವರು ಕೂಡಾ ನಮಗೆ ಸಹಾಯ ಮಾಡಿದ್ದಾರೆ ಅವರಿಗೂ ಧನ್ಯವಾದ. ನಾವು ಉಳಿದ ಕಟ್ಟಡಗಳ ಗುಣಮಟ್ಟದ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದ್ದು, 7 ದಿನ ನಡೆದ ರಕ್ಷಣಾ ಖರ್ಚನ್ನು ಜಿಲ್ಲಾಡಳಿತ ಭರಿಸಲಿದೆ. ಮುಂದೆ ಮಾಲಿಕರಿಂದ ವಸೂಲಿ ಮಾಡಲಾಗುವುದು ಎಂದು ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ಕೃತಜ್ಞತೆ ಹೇಳಿದ್ದಾರೆ.

    ಕಟ್ಟಡ ದುರಂತ ಕಾರ್ಯಾಚರಣೆಯಲ್ಲಿ 288 ಅಗ್ನಿಶಾಮಕ ದಳ ಮತ್ತು 32 ಎಸ್‌ಡಿಆರ್‌ಎಫ್ ತಂಡದ ಸದಸ್ಯರು ಭಾಗವಹಿಸಿದ್ದಾರೆ. ಇದುವರೆಗೂ ಇಂಥ ಕಾರ್ಯಾಚರಣೆ ನಡೆದಿಲ್ಲ. ದೇಶದಲ್ಲಿಯೇ ಇಂತಹ ಘಟನೆ ನಡೆದಿಲ್ಲ. ಈ ಕಾರ್ಯಚರಣೆಯಲ್ಲಿ 57 ಜನರ ಜೀವ ಉಳಿಸಲಾಗಿದೆ. 19 ಜನರ ಶವ ಹೊರತೆಗೆಯಲಾಗಿದೆ. ಈ ಕಾರ್ಯಚರಣೆಯಲ್ಲಿ ಪ್ರತಿಯೊಬ್ಬರೂ ಚೆನ್ನಾಗಿ ಕೆಲಸ ಮಾಡಿದ್ದಾರೆ. ಜನರು ಕೂಡ ಉತ್ತಮ ಸ್ಪಂದನೆ ನೀಡಿದ್ದಾರೆ. ಶ್ರಮಿಸಿದ ಸಿಬ್ಬಂದಿಗೆ ಸೂಕ್ತ ಬಹುಮಾನ ಕೊಡಲು ನಿರ್ಧರಿಸಿದ್ದು, ಸರ್ಕಾರದಿಂದ ಸೂಚನೆ ಬಂದಿದೆ. ಈಗಾಗಲೇ ಸರ್ಕಾರಕ್ಕೆ ಸಿಬ್ಬಂದಿ ಪಟ್ಟಿ ಕಳಿಸುತ್ತಿದ್ದೇವೆ ಎಂದು ಅಗ್ನಿಶಾಮಕ ದಳದ ಡಿಐಜಿ ರವಿಕಾಂತೇಗೌಡ ತಿಳಿಸಿದ್ದಾರೆ.

  • ಓರ್ವನನ್ನು ರಕ್ಷಿಸಲು ಹೋಗಿ ಒಂದೇ ಕುಟುಂಬದ ನಾಲ್ವರು ನೀರುಪಾಲು

    ಓರ್ವನನ್ನು ರಕ್ಷಿಸಲು ಹೋಗಿ ಒಂದೇ ಕುಟುಂಬದ ನಾಲ್ವರು ನೀರುಪಾಲು

    ಚಿಕ್ಕಮಗಳೂರು: ಈಜಲು ಹೋಗಿದ್ದ ಒಂದೇ ಕುಟುಂಬದ ನಾಲ್ವರು ನೀರು ಪಾಲಾಗಿರುವ ಘಟನೆ ಜಿಲ್ಲೆಯ ಶೃಂಗೇರಿ ತಾಲೂಕಿನ ವಿದ್ಯಾರಣ್ಯಪುರದ ತುಂಗಾ ನದಿಯಲ್ಲಿ ನಡೆದಿದೆ.

    ನಾಗೇಂದ್ರ, ಪ್ರದೀಪ್, ರಾಮಣ್ಣ ಮತ್ತು ರತ್ನಾಕರ್ ಮೃತ ದುರ್ದೈವಿಗಳು. ಮೂವರು ಸಂಬಂಧಿಗಳು ರಾಮಣ್ಣ ಮನೆಗೆ ಕಾರ್ಯಕ್ರಮಕ್ಕಾಗಿ ಬಂದಿದ್ದರು. ಹಾಗೆಯೇ ಎಲ್ಲರೂ ಇಂದು ತುಂಗಾ ನದಿಗೆ ಈಜಲು ಹೋಗಿದ್ದಾರೆ. ಆಗ ಪ್ರದೀಪ್ ನದಿಯಲ್ಲಿ ಸುಳಿಗೆ ಸಿಲುಕೊಂಡಿದ್ದಾರೆ. ಇದನ್ನು ಗಮನಿಸಿದ ಮೂವರು ಅವರನ್ನ ರಕ್ಷಿಸಲು ಹೋಗಿದ್ದು, ಪ್ರದೀಪ್ ಜೊತೆ ರಕ್ಷಿಸಲು ಹೋದ ಮೂವರೂ ನೀರು ಪಾಲಾಗಿದ್ದಾರೆ. ರತ್ನಾಕರ್ ಕೊಪ್ಪ ತಾಲೂಕಿನ ಬಾಳೆಹಕ್ಲು ಗ್ರಾಮದವರು ಎನ್ನಲಾಗಿದೆ.

    ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಶೃಂಗೇರಿ ಪೊಲೀಸರು, ಅಗ್ನಿ ಶಾಮಕ ಸಿಬ್ಬಂದಿ ಹಾಗೂ ನುರಿತ ಈಜು ತಜ್ಞರು ಬಂದು ಹುಡುಕಾಟ ಶುರುಮಾಡಿದ್ದಾರೆ. ಸದ್ಯಕ್ಕೆ ಮೂವರ ಮೃತ ದೇಹ ಪತ್ತೆಯಾಗಿದ್ದು, ಇನ್ನೂ ಉಳಿದ ಓರ್ವನ ಮೃತದೇಹಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ.

    ಈ ಘಟನೆ ಶೃಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ಆಕಸ್ಮಿಕ ಬೆಂಕಿಯಿಂದ ಪೆಟ್ರೋಲ್ ಬಂಕ್ ಸ್ಫೋಟ

    ಆಕಸ್ಮಿಕ ಬೆಂಕಿಯಿಂದ ಪೆಟ್ರೋಲ್ ಬಂಕ್ ಸ್ಫೋಟ

    ಚಾಮರಾಜನಗರ: ಆಕಸ್ಮಿಕ ಬೆಂಕಿ ತಗುಲಿ ಪೆಟ್ರೋಲ್ ಬಂಕ್ ಬ್ಲಾಸ್ಟ್ ಆಗಿರುವ ಘಟನೆ ಗಡಿ ಜಿಲ್ಲೆಯಲ್ಲಿ ನಡೆದಿದೆ.

    ಭುವನೇಶ್ವರಿ ವೃತ್ತದಲ್ಲಿರುವ ಹೆಚ್‍ಪಿ ಪೆಟ್ರೋಲ್ ಬಂಕ್‍ನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಇಡೀ ಪೆಟ್ರೋಲ್ ಬಂಕ್ ಸ್ಫೋಟವಾಗಿ ಸುಟ್ಟು ಕರಕಲಾಗಿದೆ. ಮಧ್ಯಾಹ್ನ ಸುಮಾರು 1.30ಕ್ಕೆ ವೇಳೆ ಪೆಟ್ರೋಲ್ ಹಾಕುವ ವೇಳೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ.

    ಬೆಂಕಿ ಕಾಣಿಸಿಕೊಂಡ ತಕ್ಷಣ ಬಂಕ್‍ನ ಸಿಬ್ಬಂದಿ ಹಾಗೂ ಗ್ರಾಹಕರು ಪೆಟ್ರೋಲ್ ಬಂಕ್‍ನಿಂದ ಆಚೆ ಓಡಿ ಬಂದಿದ್ದಾರೆ. ನಂತರ ಪೆಟ್ರೋಲ್ ಬಂಕ್ ಬ್ಲಾಸ್ಟ್ ಆಗಿದೆ. ಈ ವಿಷಯ ತಿಳಿದ ಅಗ್ನಿಶಾಮಕ ಸಿಬ್ಬಂದಿ ಬಂದು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಈ ವೇಳೆ ಪೆಟ್ರೋಲ್ ಹಾಕಿಸಿಕೊಳ್ಳಲು ಬಂದಿದ್ದ ಪೊಲೀಸ್ ಪೇದೆ ವಸಂತ್ ಕುಮಾರ್ ಮತ್ತು ಪತ್ನಿಗೆ ಸಣ್ಣ ಪುಟ್ಟಗಾಯಗಳಾಗಿದ್ದು, ಅವರನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಇದಲ್ಲದೇ ಎರಡು ಬೈಕ್‍ಗಳು ಬೆಂಕಿಯ ಕಿನ್ನಾಲೆಗೆ ಸಿಲುಕಿ ಸುಟ್ಟು ಕರಕಲಾಗಿವೆ. ಸದ್ಯಕ್ಕೆ ಬೆಂಕಿ ಹೇಗೆ ಕಾಣಿಸಿಕೊಂಡಿದೆ ಎಂದು ಕಾರಣ ತಿಳಿದು ಬಂದಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಮುಂಜಾನೆ ಸಿಲಿಂಡರ್ ಸ್ಫೋಟಗೊಂಡು ಹೊತ್ತಿ ಉರಿದ ಮನೆ!

    ಮುಂಜಾನೆ ಸಿಲಿಂಡರ್ ಸ್ಫೋಟಗೊಂಡು ಹೊತ್ತಿ ಉರಿದ ಮನೆ!

    ಮಂಡ್ಯ: ಬೆಳ್ಳಂಬೆಳಗ್ಗೆ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಮನೆಯೊಂದು ಹೊತ್ತಿ ಉರಿದ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣದ ರಂಗನಾಥ ಬಡಾವಣೆಯಲ್ಲಿ ಇಂದು ನಡೆದಿದೆ.

    ಇಂದು ಮುಂಜಾನೆ ರಂಗನಾಥ ಬಡಾವನೆಯ ನಿವಾಸಿ ಅರ್ಜುನ್ ಕುಮಾರ್ ಎಂಬವರ ಮನೆಯಲ್ಲಿ ಈ ಅವಘಡ ಸಂಭವಿಸಿದೆ. ವೃತ್ತಿಯಲ್ಲಿ ಅರ್ಜುನ್ ಅವರು ವೈದ್ಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮುಂಜಾನೆ ಸುಮಾರು 4 ಗಂಟೆ ಹೊತ್ತಿಗೆ ಮನೆಯಲ್ಲಿ ಎಲ್ಲರೂ ಮಲಗಿದ್ದ ಸಮಯದಲ್ಲಿ ಏಕಾಏಕಿ ಸಿಲಿಂಡರ್ ಸ್ಫೋಟಗೊಂಡಿದೆ.

    ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ. ಆದ್ರೆ ಮನೆಯಲ್ಲಿದ್ದ ಕೆಲವು ವಸ್ತುಗಳು ಬೆಂಕಿಗಾಹುತಿಯಾಗಿದೆ. ಅಲ್ಲದೆ ಸಿಲಿಂಡರ್ ಇಟ್ಟಿದ್ದ ಸ್ಥಳ ಸಂಪೂರ್ಣ ಸುಟ್ಟು ಹೋಗಿದ್ದು, ಅಡುಗೆ ಮನೆಯಲ್ಲಿದ್ದ ವಸ್ತುಗಳೆಲ್ಲ ಸುಟ್ಟು ಕರಕಲಾಗಿದೆ. ಸಿಲಿಂಡರ್ ಸ್ಫೋಟಗೊಂಡ ಶಬ್ಧ ಕೇಳುತ್ತಿದ್ದಂತೆಯೇ ಮನೆಮಂದಿಯೆಲ್ಲ ಹೊರಗೆ ಓಡಿಬಂದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದ್ದು, ಅಗ್ನಿ ಶಮನ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಸದ್ಯ ಘಟನೆ ಕುರಿತು ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv