Tag: ಅಗತ್ಯ ವಸ್ತುಗಳು

  • ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು – ಭಾರತದಿಂದ ಅಗತ್ಯ ವಸ್ತುಗಳ ಪೂರೈಕೆ

    ಕೊಲಂಬೋ: ತೀವ್ರವಾದ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಶ್ರೀಲಂಕಾಗೆ ಭಾರತ ಅಕ್ಕಿ, ಔಷಧ, ಹಾಲಿನ ಪುಡಿ ಹೀಗೆ ಅಗತ್ಯ ವಸ್ತುಗಳನ್ನು ಕಳುಹಿಸಿದೆ. ಭಾನುವಾರ ದ್ವೀಪರಾಷ್ಟ್ರದ ರಾಜಧಾನಿ ಕೊಲಂಬೋ ತಲುಪಿದ ಹಡಗು, ಅಗತ್ಯ ವಸ್ತುಗಳನ್ನು ಶ್ರೀಲಂಕಾ ಸರ್ಕಾರಕ್ಕೆ ಹಸ್ತಾಂತರಿಸಿದೆ.

    9,000 ಮೆಟ್ರಿಕ್ ಟನ್ ಅಕ್ಕಿ, 50 ಮೆಟ್ರಿಕ್ ಟನ್ ಹಾಲಿನ ಪುಡಿ ಹಾಗೂ 25 ಮೆಟ್ರಿಕ್ ಟನ್‌ಗಿಂತ ಹೆಚ್ಚು ಔಷಧಗಳು ಮತ್ತು ಇತರ ವೈದ್ಯಕೀಯ ಸಾಮಗ್ರಿಗಳನ್ನು ಭಾರತೀಯ ಹೈಕಮಿಷನರ್ ಗೋಪಾಲ್ ಬಾಗ್ಲೆ ಲಂಕಾದ ವಿದೇಶಾಂಗ ಸಚಿವ ಜಿಎಲ್ ಪೀರಿಸ್ ಅವರಿಗೆ ಹಸ್ತಾಂತರಿಸಿದರು. ಇದನ್ನೂ ಓದಿ: ಭಾರತ ಸೇರಿದಂತೆ 15 ದೇಶಗಳಿಗೆ ಪ್ರಯಾಣ ನಿಷೇಧಿಸಿದ ಸೌದಿ ಅರೇಬಿಯಾ

    ಶ್ರೀಲಂಕಾ ಇಂದು ಭಾರತದಿಂದ ಹಾಲಿನ ಪುಡಿ, ಅಕ್ಕಿ ಹಾಗೂ ಔಷಧ ಸೇರಿದಂತೆ 200 ಕೋಟಿ ರೂ. ಮೌಲ್ಯದ ಮಾನವೀಯ ನೆರವು ಪಡೆದಿದೆ. ಈ ಸಹಾಯಕ್ಕೆ ತಮಿಳುನಾಡು ಮುಖ್ಯಮಂತ್ರಿಯವರಿಗೆ ಹಾಗೂ ಭಾರತಕ್ಕೆ ಹೃದಯಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಲಂಕಾ ಪ್ರಧಾನಿ ರನಿಲ್ ವಿಕ್ರಮಸಿಂಘೆ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಭಾರೀ ಮಳೆ- ವಿಮಾನ ಸಂಚಾರದಲ್ಲಿ ತೊಡಕು

    ಭಾರತದ ಜನರು ಶ್ರೀಲಂಕಾದ ಜನರಿಗೆ 200 ಕೋಟಿ ರೂ.ಗೂ ಅಧಿಕ ಮೌಲ್ಯದ ಅಕ್ಕಿ, ಹಾಲಿನ ಪುಡಿ, ಔಷಧಿಯನ್ನು ನೀಡಿದೆ. ಇದನ್ನು ಕೊಲಂಬೋದಲ್ಲಿ ಜಿಎಲ್ ಪೀರೀಸ್ ಅವರಿಗೆ ಹಸ್ತಾಂತರಿಸಿದ್ದಾರೆ ಎಂದು ಶ್ರೀಲಂಕಾದಲ್ಲಿರುವ ಭಾರತೀಯ ಹೈಕಮಿಷನರ್ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಬರೆಯಲಾಗಿದೆ.

  • ಕೇಂದ್ರ ಸಚಿವ ಸಂಜೀವ್ ಬಲ್ಯಾನ್ ಮೇಲೆ ಮಸಿ ಎರಚಿದ ಕೈ ಕಾರ್ಯಕರ್ತರು

    ಕೇಂದ್ರ ಸಚಿವ ಸಂಜೀವ್ ಬಲ್ಯಾನ್ ಮೇಲೆ ಮಸಿ ಎರಚಿದ ಕೈ ಕಾರ್ಯಕರ್ತರು

    ಭುವನೇಶ್ವರ್: ಕೇಂದ್ರ ಸಚಿವ ಸಂಜೀವ್ ಬಲ್ಯಾನ್ ಅವರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಮಸಿ ಎರಚಿದ ಘಟನೆ ಒಡಿಶಾದಲ್ಲಿ ನಡೆದಿದೆ.

    ಒಡಿಶಾದ ಪುರಿಯ ಮಾರ್ಕೆಟ್ ಸ್ಕ್ವೇರ್ ಮೂಲಕ ಹಾದು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಕೇಂದ್ರ ಸಚಿವರು ನಗರದ ಶ್ರೀಮಂದಿರದಲ್ಲಿ ತ್ರಿಮೂರ್ತಿಗಳ ದರ್ಶನ ಪಡೆದು ಹಿಂದಿರುಗುತ್ತಿದ್ದರು. ಈ ವೇಳೆ ಪೆಟ್ರೋಲ್, ಡೀಸೆಲ್ ಮತ್ತು ಇತರ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿರುವುದನ್ನು ಖಂಡಿಸಿ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (ಎನ್‍ಎಸ್‍ಯುಐ) ಕಾರ್ಯಕರ್ತರು ಅವರ ವಾಹನಕ್ಕೆ ಕಪ್ಪು ಮಸಿ ಎಸೆದಿದ್ದಾರೆ. ಇದನ್ನೂ ಓದಿ: ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ, ನಂದಿ ವಿಗ್ರಹ ಪತ್ತೆ

    ಈ ಕುರಿತು ಎನ್‍ಎಸ್‍ಯುಐ ಒಡಿಶಾ ಅಧ್ಯಕ್ಷ ಯಾಶೀರ್ ನವಾಜ್ ಮಾತನಾಡಿ, ಪ್ರತಿಯೊಂದು ಕುಟುಂಬವು ಹಣದುಬ್ಬರ ಮತ್ತು ಎಲ್‍ಪಿಜಿ ಸಿಲಿಂಡರ್‌ಗಳು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ರೊಚ್ಚಿಗೆದ್ದಿವೆ. ಕುಟುಂಬ ನಿರ್ವಹಣೆಯ ವೆಚ್ಚಗಳು ನಿರಂತರವಾಗಿ ಹೆಚ್ಚುತ್ತಿರುವಾಗ ಆದಾಯವು ಕುಂಠಿತವಾಗಿದೆ. ಬಿಜೆಪಿ ಇತರ ಸಂಬಂಧವಿಲ್ಲದ ವಿಷಯಗಳ ಮೂಲಕ ಜನಸಾಮಾನ್ಯರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು. ಇದನ್ನೂ ಓದಿ: ಬೆಳಗಾವಿಯಲ್ಲಿ ಐಟಿ ಪಾರ್ಕ್ ಸ್ಥಾಪನೆಗೆ ಪರಿಸರವಾದಿಗಳ ತೀವ್ರ ವಿರೋಧ

    ಎನ್‍ಎಸ್‍ಯುಐ ಕಾರ್ಯಕರ್ತರು ಒಡಿಶಾಗೆ ಭೇಟಿ ನೀಡುವ ಯಾವುದೇ ಕೇಂದ್ರ ಸಚಿವರನ್ನು ಗುರಿಯಾಗಿಸಿಕೊಂಡಿದ್ದಾರೆ. ಸಾಮಾನ್ಯ ಜನರ ಮೇಲೆ ಪರಿಣಾಮ ಬೀರುವ ಸಮಸ್ಯೆಗಳ ವಿರುದ್ಧ ಪ್ರತಿಭಟಿಸುತ್ತಾರೆ ಎಂದು ಹೇಳಿದರು.

    ಇದಕ್ಕೂ ಮುನ್ನ, ಏರುತ್ತಿರುವ ಹಣದುಬ್ಬರದ ವಿರುದ್ಧ ಪ್ರತಿಭಟನೆಯ ಸಂಕೇತವಾಗಿ ಬಿಜೆಪಿಯ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ ಅವರ ಮೇಲೆಯೂ ಸಹ ಕಾಂಗ್ರೆಸ್‍ನ ವಿದ್ಯಾರ್ಥಿ ಘಟಕದ ಕಾರ್ಯಕರ್ತರು ಕಪ್ಪು ಮಸಿ ಎಸೆದು, ಕಪ್ಪು ಬಾವುಟವನ್ನು ಎಸೆದಿದ್ದರು.

  • ಅಗತ್ಯ ವಸ್ತುಗಳ ದರ ಗಗನಕ್ಕೆ- ಪ್ರಧಾನಿ ಮಧ್ಯ ಪ್ರವೇಶಕ್ಕೆ ದೀದಿ ಒತ್ತಾಯ

    ಅಗತ್ಯ ವಸ್ತುಗಳ ದರ ಗಗನಕ್ಕೆ- ಪ್ರಧಾನಿ ಮಧ್ಯ ಪ್ರವೇಶಕ್ಕೆ ದೀದಿ ಒತ್ತಾಯ

    ಕೋಲ್ಕತ್ತಾ: ಅಕ್ರಮ ದಾಸ್ತಾನು ನಿಯಂತ್ರಿಸಿ, ಸರಬರಾಜು ಹೆಚ್ಚಿಸಿ ಹಾಗೂ ಗಗನಕ್ಕೇರಿರುವ ಅಗತ್ಯ ವಸ್ತುಗಳ ಬೆಲೆಯನ್ನು ತಗ್ಗಿಸಲು ಪ್ರಧಾನಿ ನರೇಂದ್ರ ಮೋದಿ ತುರ್ತು ಮಧ್ಯ ಪ್ರವೇಶಿಸಬೇಕು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಒತ್ತಾಯಿಸಿದ್ದಾರೆ.

    ಈ ಕುರಿತು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿರುವ ಅವರು, ಆಲೂಗಡ್ಡೆ ಹಾಗೂ ಈರುಳ್ಳಿ ಸೇರಿದಂತೆ ಅಗತ್ಯ ಆಹಾರ ಪದಾರ್ಥಗಳ ಬೆಲೆಯನ್ನು ನಿಯಂತ್ರಿಸುವ ರಾಜ್ಯಗಳ ಅಧಿಕಾರವನ್ನು ಮರುಸ್ಥಾಪಿಸಬೇಕು ಎಂದು ಒತ್ತಾಯಿಸಿದ್ದಾರೆ.

    ಈ ವಿಚಾರದ ಗಂಭೀರತೆಯನ್ನು ಅರಿತು ನಾನು ಕೇಂದ್ರ ಸರ್ಕಾರದ ಮಧ್ಯ ಪ್ರವೇಶಕ್ಕೆ ಮನವಿ ಮಾಡುತ್ತಿದ್ದೇನೆ. ಅಕ್ರಮ ದಾಸ್ತಾನು ನಿಯಂತ್ರಿಸಿ, ಸರಬರಾಜು ಹೆಚ್ಚಿಸಿ ಗಗನಕ್ಕೇರಿರುವ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ತಹಬದಿಗೆ ತರಬೇಕು. ಬೆಲೆ ಏರಿಕೆಯಿಂದಾಗಿ ಸಾಮಾನ್ಯ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಲೆ ನಿಯಂತ್ರಿಸಿ ಇಲ್ಲವೇ ಕೃಷಿ ಉತ್ಪನ್ನಗಳ ಉತ್ಪಾದನೆ, ಪೂರೈಕೆ, ವಿತರಣೆ ಹಾಗೂ ಮಾರಾಟ ಮಾಡುವ ರಾಜ್ಯ ಸರ್ಕಾರಗಳ ಹಕ್ಕನ್ನು ಮರು ಸ್ಥಾಪಿಸಿ ಎಂದು ಆಗ್ರಹಿಸಿದ್ದಾರೆ. ಒಟ್ಟು ನಾಲ್ಕು ಪುಟಗಳ ಪತ್ರವನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಮಮತಾ ಬ್ಯಾನರ್ಜಿ ಬರೆದಿದ್ದಾರೆ.

    ಕೃಷಿ ಸರಕುಗಳ ಉತ್ಪಾದನೆ, ಪೂರೈಕೆ, ವಿತರಣೆ ಹಾಗೂ ಮಾರಾಟದ ಮೇಲೆ ತಮ್ಮ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸೂಕ್ತ ಕಾನೂನು ರೂಪಿಸಲು ರಾಜ್ಯಗಳಿಗೆ ಅನುಮತಿ ನೀಡಿ ಎಂದು ಅವರು ಒತ್ತಾಯಿಸಿದ್ದಾರೆ. ಆಲೂಗಡ್ಡೆ ಹಾಗೂ ಈರುಳ್ಳಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ತಡೆಯುವ ಶಕ್ತಿ ರಾಜ್ಯ ಸರ್ಕಾರಗಳಿಗೆ ಇಲ್ಲವಾಗಿದೆ. ಇದರಿಂದಾಗಿ ಸಾಮಾನ್ಯ ಜನರು ನಿರಂತರ ನೋವು ಅನುಭವಿಸುತ್ತಿದ್ದು, ನಾವು ಮೂಕ ಪ್ರೇಕ್ಷಕರಾಗಿ ಕುಳಿತುಕೊಳ್ಳಬೇಕಾಗಿದೆ ಎಂದು ತಿಳಿಸಿದ್ದಾರೆ.

    ಧಾನ್ಯಗಳು, ಬೇಳೆಕಾಳುಗಳು, ಎಣ್ಣೆಕಾಳುಗಳು, ಖಾದ್ಯ ತೈಲಗಳು, ಈರುಳ್ಳಿ, ಆಲೂಗಡ್ಡೆ ಸೇರಿದಂತೆ ವಿವಿಧ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿವೆ ಎಂದು ಮಮತಾ ಬ್ಯಾನರ್ಜಿ ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ.

  • ಕಂಟೈನ್ಮೆಂಟ್ ಏರಿಯಾಗಳಿಗೆ ಉಚಿತ ಅಗತ್ಯ ವಸ್ತುಗಳ ಪೂರೈಕೆ ಇಲ್ಲ- ಬೀದಿಗಿಳಿದ ಜನರು

    ಕಂಟೈನ್ಮೆಂಟ್ ಏರಿಯಾಗಳಿಗೆ ಉಚಿತ ಅಗತ್ಯ ವಸ್ತುಗಳ ಪೂರೈಕೆ ಇಲ್ಲ- ಬೀದಿಗಿಳಿದ ಜನರು

    ಮಡಿಕೇರಿ: ಕಂಟೈನ್ಮೆಂಟ್ ಏರಿಯಾದಲ್ಲಿ ಇರುವ ಜನರಿಗೆ ಉಚಿತ ಆಹಾರ ಮತ್ತು ಅಗತ್ಯ ವಸ್ತುಗಳ ಪೂರೈಕೆ ಮಾಡುತ್ತಿಲ್ಲ ಎಂದು ಕಂಟೈನ್ಮೆಂಟ್ ಝೋನ್ ಜನರು ಮನೆಯಿಂದ ಹೊರಬಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಡಿಕೇರಿಯ ಗೌಳಿಬೀದಿಯ ವ್ಯಕ್ತಿಯೊಬ್ಬರಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಈ ಏರಿಯಾವನ್ನು ಸೀಲ್‍ಡೌನ್ ಮಾಡಲಾಗಿದೆ.

    ಏರಿಯಾದಲ್ಲಿರುವ ಬಹುತೇಕ ಜನರು ಕೂಲಿ ಕೆಲಸ ಮಾಡಿ ಅಂದು ದುಡಿದು ಅಂದು ತಿನ್ನುವವರಿದ್ದೇವೆ. ಆದರೆ ಸೀಲ್‍ಡೌನ್ ಮಾಡಿರುವ ಜಿಲ್ಲಾಡಳಿತ ಜನರಿಗೆ ಯಾವುದೇ ಅಗತ್ಯ ವಸ್ತುಗಳನ್ನು ಪೂರೈಸುತ್ತಿಲ್ಲ. ಬದಲಾಗಿ ಹಣಕೊಟ್ಟೆ ಕೊಂಡುಕೊಳ್ಳಿ ಎನ್ನುತ್ತಿದೆ. ಕಂಟೈನ್ಮೆಂಟ್ ಝೋನ್ ಮಾಡಿ ಒಳಗೆ ಕುಳಿತುಕೊಂಡು ಹಣಕೊಟ್ಟು ಕೊಂಡುಕೊಳ್ಳಿ ಎಂದರೆ ಹೇಗೆ ಸಾಧ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಕಂಟೈನ್ಮೆಂಟ್ ಏರಿಯಾದಲ್ಲಿ ಜನರು ಮನೆಯಿಂದ ಹೊರಗೆ ಬರುವಂತಿಲ್ಲ. ಆದರೆ ಅಗತ್ಯ ವಸ್ತುಗಳು ಸಿಗದ ಹಿನ್ನೆಲೆಯಲ್ಲಿ ಜನರು ಕೊರೊನಾದ ಯಾವುದೇ ಆತಂಕವಿಲ್ಲದೆ ಮನೆಯಿಂದ ಹೊರಬಂದು ತಮ್ಮ ನೋವು ತೋಡಿಕೊಂಡರು. ಜಿಲ್ಲಾಡಳಿತ ಕಂಟೈನ್ಮೆಂಟ್ ಏರಿಯಾದಲ್ಲಿರುವ ಎಲ್ಲಾ ಕುಟುಂಬಗಳಿಗೂ ಅಗತ್ಯ ವಸ್ತುಗಳ ಪೂರೈಕೆ ಮಾಡಲಿ. ಇಲ್ಲವೆ ಕಂಟೈನ್ಮೆಂಟ್ ಝೋನ್ ತೆರವುಗೊಳಿಸಿ ನಮ್ಮ ದುಡಿಮೆಗಾದರೂ ಅವಕಾಶ ನೀಡಲಿ ಎಂದು ಒತ್ತಾಯಿಸಿದರು.

  • ವಸತಿ ಬಡಾವಣೆಗಳಲ್ಲಿಯೇ ಅಗತ್ಯ ವಸ್ತುಗಳ ಪೂರೈಕೆಗೆ ಕ್ರಮ

    ವಸತಿ ಬಡಾವಣೆಗಳಲ್ಲಿಯೇ ಅಗತ್ಯ ವಸ್ತುಗಳ ಪೂರೈಕೆಗೆ ಕ್ರಮ

    – ತರಕಾರಿ, ಹಾಲು, ಆಹಾರ ಸಾಮಗ್ರಿ ವಿತರಣೆ

    ಹುಬ್ಬಳ್ಳಿ: ಅಗತ್ಯ ವಸ್ತುಗಳನ್ನು ವಸತಿ ಬಡಾವಣೆಗಳಲ್ಲಿಯೇ ಪೂರೈಸಲು ಧಾರವಾಡ ಜಿಲ್ಲಾಡಳಿತ ಮುಂದಾಗಿದೆ.

    ಕೊರೊನಾ ವೈರಸ್ ನಿಯಂತ್ರಿಸಲು 21 ದಿನಗಳ ಲಾಕ್ ಡೌನ್ ಅವಧಿಯಲ್ಲಿ ಸಾರ್ವಜನಿಕರಿಗೆ ಅಗತ್ಯ ಸಾಮಗ್ರಿಗಳ ಕೊರತೆಯಾಗದಂತೆ ಸಣ್ಣ ವ್ಯಾಪಾರಿಗಳು, ತಳ್ಳುವ ಗಾಡಿಗಳು ಹಾಗೂ ಆಟೋಗಳ ಮೂಲಕ ಜನವಸತಿ ಪ್ರದೇಶಗಳಿಗೆ ಅಗತ್ಯ ವಸ್ತುಗಳನ್ನು ಪೂರೈಸಲು ಧಾರವಾಡ ಜಿಲ್ಲಾಡಳಿತ ನಿರ್ಧರಿಸಿದೆ.

    ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ದೀಪಾ ಚೋಳನ್ ಈ ನಿರ್ಧಾರ ಪ್ರಕಟಿಸಿದ್ದು, ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಎಲ್ಲ ವಾರ್ಡುಗಳ ವ್ಯಾಪ್ತಿಯ ವಲಯ ಸಹಾಯಕ ಆಯುಕ್ತರು, ಸಂಬಂಧಿಸಿದ ಪೊಲೀಸ್ ಠಾಣೆ ವ್ಯಾಪ್ತಿಯ ಅಧಿಕಾರಿಗಳು, ತರಕಾರಿ, ಅಗತ್ಯ ವಸ್ತುಗಳು, ಸಗಟು ಮತ್ತು ಸಣ್ಣ ವ್ಯಾಪಾರಿಗಳ ಸಭೆ ನಡೆಸಿದರು. ಈ ವೇಳೆ ಜನ ವಸತಿ ಸ್ಥಳಗಳಲ್ಲಿ ತಳ್ಳುವ ಗಾಡಿಗಳು, ಆಟೋಗಳ ಮೂಲಕ ತರಕಾರಿ ಪೂರೈಸಲು ಉತ್ತೇಜನ ನೀಡುವಂತೆ ಸೂಚಿಸಿದರು.

    ಜನವಸತಿ ಸ್ಥಳಗಳಿಗೆ ಪೂರೈಸಲು ಅಗತ್ಯ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲು ತಿಳಿಸಿದರು. ತಾಲೂಕು ಕೇಂದ್ರಗಳು ಮತ್ತು ಗ್ರಾಮೀಣ ಹೋಬಳಿ ಪ್ರದೇಶಗಳಲ್ಲಿಯೂ ಅಲ್ಲಿನ ಸ್ಥಳೀಯ ಸಂಸ್ಥೆಗಳು ಮತ್ತು ಪೊಲೀಸರು ಇದೇ ಮಾದರಿಯಲ್ಲಿ ಕ್ರಮ ಕೈಗೊಂಡು ಜನರಿಗೆ ತರಕಾರಿ ಮತ್ತು ಅಗತ್ಯ ವಸ್ತುಗಳನ್ನು ತಲುಪಿಸಬೇಕು. ತಳ್ಳುವ ಗಾಡಿ ಅಥವಾ ಆಟೋಗಳಲ್ಲಿ ಪ್ರತಿದಿನ ಮಾರಾಟಕ್ಕೆ ಅವಕಾಶ ನೀಡಬೇಕು. ಅಲ್ಲದೆ ಈ ವ್ಯಾಪಾರಕ್ಕೆ ಸಮಯದ ನಿರ್ಬಂಧವಿಲ್ಲ ಎಂದು ತಿಳಿಸಿದ್ದಾರೆ.

    ಜನತೆ ಮಾರುಕಟ್ಟೆಗೆ ಬರುವ ಅಗತ್ಯವಿಲ್ಲ, ಸಾರ್ವಜನಿಕರಿಗೆ ಅಗತ್ಯ ವಸ್ತುಗಳು ಅವರಿರುವ ಸ್ಥಳಗಳಲ್ಲಿಯೇ ಸುಲಭವಾಗಿ ದೊರೆಯುತ್ತವೆ. ಜನರು ಯಾವುದೇ ಕಾರಣಕ್ಕೂ ಮಾರುಕಟ್ಟೆಗೆ ಬರಬಾರದು. ಸಾಮಾಜಿಕ ಅಂತರ ಕಾಯ್ದುಕೊಂಡು ತಮ್ಮ ಅಗತ್ಯದ ವಸ್ತುಗಳನ್ನು ಖರೀದಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.

  • ನೊಂದವರ ಹೊಟ್ಟೆ ಸೇರದೆ ಕೊಳೀತಿದೆ ದವಸ-ಧಾನ್ಯ

    ನೊಂದವರ ಹೊಟ್ಟೆ ಸೇರದೆ ಕೊಳೀತಿದೆ ದವಸ-ಧಾನ್ಯ

    ಕೊಪ್ಪಳ: ರಾಜ್ಯದಲ್ಲಿ ನೆರೆ ಹಾವಳಿಗೆ ಜನರು ತತ್ತರಿಸಿ ಹೋಗಿದ್ದು, ತುತ್ತು ಅನ್ನಕ್ಕೂ ಪಡಬಾರದ ಕಷ್ಟಪಟ್ಟಿದ್ದಾರೆ. ಇವರ ಕಷ್ಟ ನೋಡಲಾಗದೆ ರಾಜ್ಯದ ಜನರ ಮನಮಿಡಿದು ಕೈಲಾದ ಸಹಾಯ ಮಾಡಿದ್ದರು. ದವಸಧಾನ್ಯ, ಉಡುಪುಗಳನ್ನ ನೀಡಿ ಸಹಾಯ ಹಸ್ತ ಚಾಚಿದ್ದರು. ಆದರೆ ಕೊಪ್ಪಳ ಜಿಲ್ಲೆಯಲ್ಲಿ ದಾನಿಗಳು ನೀಡಿದ ಆಹಾರಧಾನ್ಯ, ಉಡುಪುಗಳನ್ನ ನೆರೆ ಸಂತ್ರಸ್ತರಿಗೆ ತಪುಪಿಸದೇ ಅಧಿಕಾರಿಗಳು ಕಳ್ಳಾಟ ನಡೆಸಿದ್ದಾರೆ.

    ಕೊಪ್ಪಳದ ಗಂಗಾವತಿಯಲ್ಲಿ ಸಂಗ್ರಹ ಮಾಡಿರೋ ಆಹಾರ ಧಾನ್ಯಗಳು ಸಂತ್ರಸ್ತರಿಗೆ ಸೇರುತ್ತಿಲ್ಲ. ಅತ್ತ ಪ್ರವಾಹಕ್ಕೆ ಸರ್ಕಾರ ಸರಿಯಾಗಿ ಸ್ಪಂದಿಸಿಲ್ಲ ಎಂದು ಜನರು ಕಂಗಾಲಾಗಿದ್ದಾರೆ. ಇತ್ತ ರಾಜ್ಯದ ಜನ ಕೈಲಾದ ಸಹಾಯ ಮಾಡಿ ಸಂತ್ರಸ್ತರ ನೆರವಿಗೆ ನಿಂತು ಆಹಾರ ಧಾನ್ಯ, ಅಗತ್ಯ ವಸ್ತುಗಳನ್ನು ಸಂಗ್ರಹ ಮಾಡಿ ಕಳುಹಿಸಿದ್ದರೂ ಅವು ನಿರಾಶ್ರಿತರಿಗೆ ತಲುಪಿಲ್ಲ. ಸಂಗ್ರಹಿಸಿದ ಆಹಾರ ಧಾನ್ಯ, ಅಗತ್ಯ ವಸ್ತುಗಳನ್ನು ನೊಂದವರಿಗೆ ತಲುಪಿಸದೆ ಅಧಿಕಾರಿಗಳು ಮಾತ್ರ ತಾಲೂಕು ಪಂಚಾಯ್ತಿಯ ಹಿಂದಿನ ಸಾಮಥ್ರ್ಯ ಸೌಧ ಕೊಠಡಿಯಲ್ಲಿ ಅವುಗಳನ್ನು ಶೇಖರಣೆ ಮಾಡಿಟ್ಟು, ಧೂಳು ಹಿಡಿಸುತ್ತಿದ್ದಾರೆ.

    ಮೂರ್ನಾಲ್ಕು ತಿಂಗಳ ಹಿಂದೆ ನೂರಾರು ಕ್ವಿಂಟಾಲ್ ಅಕ್ಕಿ ಸಂಗ್ರಹವಾಗಿದೆ. ಉಡುಪುಗಳು ಹಾಸಿಗೆ, ಹೊದಿಕೆಗಳು ಕೂಡ ಜನ ಸಂತ್ರಸ್ತರಿಗೆ ನೀಡಿದ್ದಾರೆ. ಇತ್ತ ಜನ ನೆರೆ ಸಂತ್ರಸ್ತರಿಗೆ ನಾವು ನೀಡಿದ ಅಲ್ಪ ಸಹಾಯ ಮುಟ್ಟುತ್ತೆ ಅಂದುಕೊಂಡಿದ್ದರೆ ಇಲ್ಲಿನ ಅಧಿಕಾರಿಗಳು ಮಾತ್ರ ಇದಕ್ಕೆ ತಣ್ಣೀರೆರಚಿದ್ದಾರೆ. ಜೊತೆಗೆ, ಇಲ್ಲಿರೋ ಅಕ್ಕಿಯನ್ನು ಮಾರಿಕೊಳ್ಳುತ್ತಿದ್ದಾರೆ ಅನ್ನೋ ಆರೋಪ ಕೂಡ ಕೇಳಿಬರುತ್ತಿದೆ.

    ಚೇತರಿಸಿಕೊಳ್ಳಲಾಗದಷ್ಟರ ಮಟ್ಟಿಗೆ ಪ್ರವಾಹ ಬದುಕು ಕಸಿದಿದೆ. ಆದರೆ ಈ ನಡುವೆ ಅಧಿಕಾರಿಗಳ ನಿರ್ಲಕ್ಷ್ಯವೂ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇನ್ನಾದರೂ ಈ ಬಗ್ಗೆ ಅಧಿಕಾರಿಗಳು ಗಮನವಹಿಸಿ, ಸಂತ್ರಸ್ತರಿಗೆ ಸೇರಬೇಕಾಗಿರುವ ಆಹಾರ ಧಾನ್ಯ, ವಸ್ತುಗಳನ್ನು ನೀಡಿ ಸಹಕರಿಸಬೇಕಿದೆ.