Tag: ಅಖಿಲ ಭಾರತ ಹುಲಿ ಗಣತಿ ವರದಿ

  • 2 ಹುಲಿಗಳಿದ್ದರೆ ಕರ್ನಾಟಕಕ್ಕೆ ಮತ್ತೆ ಸಿಗ್ತಿತ್ತು ಅಗ್ರ ಸ್ಥಾನ – ಯಾವ ರಾಜ್ಯದಲ್ಲಿ ಎಷ್ಟು ಹುಲಿಗಳಿವೆ?

    2 ಹುಲಿಗಳಿದ್ದರೆ ಕರ್ನಾಟಕಕ್ಕೆ ಮತ್ತೆ ಸಿಗ್ತಿತ್ತು ಅಗ್ರ ಸ್ಥಾನ – ಯಾವ ರಾಜ್ಯದಲ್ಲಿ ಎಷ್ಟು ಹುಲಿಗಳಿವೆ?

    – ದೇಶದಲ್ಲಿವೆ ಸುಮಾರು 3 ಸಾವಿರ ಹುಲಿಗಳು

    ನವದೆಹಲಿ: ದೇಶದಲ್ಲಿ ಒಟ್ಟು 2,967 ಹುಲಿಗಳಿದ್ದು, 2014ರ ಗಣತಿಗೆ ಹೋಲಿಸಿದರೆ, ಭಾರೀ ಪ್ರಮಾಣದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಳವಾಗಿದೆ. ಆದರೆ ಪಟ್ಟಿಯಲ್ಲಿ ಕರ್ನಾಟಕ ಅಗ್ರಸ್ಥಾನದಿಂದ ಜಾರಿ ಎರಡನೇ ಸ್ಥಾನ ಪಡೆದಿದೆ.

    ವಿಶ್ವ ಹುಲಿ ದಿನದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದೇಶದಲ್ಲಿರುವ ಹುಲಿಗಳ ಗಣತಿ ವರದಿಯನ್ನು ಬಿಡುಗಡೆಗೊಳಿಸಿದರು. ಪಟ್ಟಿಯಲ್ಲಿ ಮಧ್ಯಪ್ರದೇಶ 526 ಹುಲಿಗಳನ್ನು ಹೊಂದುವ ಮೂಲಕ ಅಗ್ರ ಸ್ಥಾನ ಪಡೆದಿದೆ. 524 ಹುಲಿಗಳನ್ನು ಹೊಂದುವ ಮೂಲಕ ಕರ್ನಾಟಕ ಎರಡನೇ ಸ್ಥಾನ ಪಡೆದಿದೆ. ಕಳೆದ ಬಾರಿಗೆ ಹೋಲಿಸಿದರೆ ಕರ್ನಾಟಕದಲ್ಲಿ 118 ಹುಲಿಗಳು ಹೆಚ್ಚಾಗಿವೆ ಎಂದು ಸಮೀಕ್ಷೆ ತಿಳಿಸಿದೆ.

    ಉತ್ತರಾಖಂಡ್ 442 ಹುಲಿಗಳನ್ನು ಹೊಂದುವ ಮೂಲಕ ತೃತೀಯ ಸ್ಥಾನ ಪಡೆದಿದೆ. ಛತ್ತೀಸ್‍ಗಢ ಹಾಗೂ ಮಿಜೋರಾಂಗಳಲ್ಲಿ ಹುಲಿಗಳ ಸಂಖ್ಯೆ ಕುಸಿತ ಕಂಡಿದೆ. ಉಳಿದ ರಾಜ್ಯಗಳಲ್ಲಿ ಹುಲಿಗಳ ಪ್ರಮಾಣದಲ್ಲಿ ಗುಣಾತ್ಮಕ ಏರಿಕೆ ಕಂಡಿದೆ.

    ಹೆಚ್ಚು ವ್ಯಾಘ್ರಗಳನ್ನು ಹೊಂದಿದ ರಾಜ್ಯಗಳ ಪಟ್ಟಿಯಲ್ಲಿ ಕಳೆದ ಬಾರಿ ಕರ್ನಾಟಕ 406 ಹುಲಿಗಳ ತಾಣವಾಗುವ ಮೂಲಕ ಅಗ್ರ ಸ್ಥಾನ ಪಡೆದಿತ್ತು. ಉತ್ತರಾಖಂಡ(340), ತಮಿಳುನಾಡು(229), ಮಧ್ಯ ಪ್ರದೇಶ(208), ಮಹಾರಾಷ್ಟ್ರ(190), ಮಧ್ಯ ಪ್ರದೇಶ(208) ಪಶ್ಚಿಮ ಬಂಗಾಳ (76) ಅನುಕ್ರಮವಾಗಿ ನಂತರ ಸ್ಥಾನ ಪಡೆದಿತ್ತು.

    2006 ರಿಂದ ನಾಲ್ಕು ವರ್ಷಗಳಿಗೊಮ್ಮೆ ಹುಲಿಗಳ ಸಮೀಕ್ಷೆ ನಡೆಸಲಾಗುತ್ತಿದ್ದು, ಇದು ನಾಲ್ಕನೇ ಸಮೀಕ್ಷೆಯಾಗಿದೆ. ಪ್ರಸಕ್ತ ಸಾಲಿನ ಸಮೀಕ್ಷೆಯನ್ನು ಸುಮಾರು 15 ತಿಂಗಳುಗಳ ಕಾಲ ಅರಣ್ಯಾಧಿಕಾರಿಗಳು ಅರಣ್ಯ ಪ್ರದೇಶದಲ್ಲಿನ 3,81,400 ಚ.ಕಿ.ಮೀ. ಜಾಗದಲ್ಲಿ ಸಮೀಕ್ಷೆ ನಡೆಸಿದ್ದಾರೆ. ಸುಮಾರು 26,760 ಕ್ಯಾಮರಾ ಬಳಸಿ ವನ್ಯಜೀವಿ ಅಧ್ಯಯನಕಾರರು 3.5 ಕೋಟಿ ಚಿತ್ರಗಳನ್ನು ಅಧ್ಯಯನ ಮಾಡಿ ಈ ವರದಿಯನ್ನು ತಯಾರಿಸಲಾಗಿದೆ. ಅಂದಾಜು ಶೇ.83 ರಷ್ಟು ಹುಲಿಗಳ ಸಂಖ್ಯೆಯನ್ನು ಚಿತ್ರಗಳ ಮೂಲಕ ಸೆರೆಹಿಡಿಯಲಾಗಿದೆ ಎಂದು ತಿಳಿದು ಬಂದಿದೆ.

    2006ರ ವರದಿಯಲ್ಲಿ 1,441 ಹುಲಿಗಳಿದ್ದರೆ, 2010ರಲ್ಲಿ 1,706ಕ್ಕೆ ಏರಿಕೆಯಾಗಿತ್ತು. 2014ರ ವರದಿಯಲ್ಲಿ 2026 ಹುಲಿಗಳಿತ್ತು. ಕೆಲವು ಅಂಶಗಳು ವರದಿಯಲ್ಲಿ ಬಹಿರಂಗವಾಗಿದ್ದು, ಹುಲಿಗಳ ಸಂತತಿಗೆ ಭಾರತಕ್ಕಿಂತ ಉತ್ತಮ ವಾತಾವರಣ ಪ್ರಪಂಚದಲ್ಲಿ ಬೇರೆಲ್ಲೂ ಇಲ್ಲ ಎಂದು ಅಖಿಲ ಭಾರತ ಹುಲಿ ಜನಗಣತಿ ವರದಿಯಲ್ಲಿ ತಿಳಿಸಲಾಗಿದೆ. 2022ಕ್ಕೆ ಹುಲಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸಬೇಕು ಎಂದು ಸೆಂಟ್ ಪಿಟರ್ಸ್‍ಬರ್ಗ್ ನಿರ್ಧರಿಸಿತ್ತು. ಆದರೆ, ಈ ಗುರಿಯನ್ನು ನಾಲ್ಕು ವರ್ಷಗಳಲ್ಲೇ ಪೂರ್ಣಗೊಳಿಸಿದ್ದೇವೆ ಎಂದು ಪ್ರಧಾನಿ ಮೋದಿ ವರದಿ ಬಿಡುಗಡೆ ವೇಳೆ ತಿಳಿಸಿದ್ದಾರೆ.

    ಬಂಡೀಪುರ ಹುಲಿ ರಕ್ಷಿತಾರಣ್ಯ ಒಂದರಲ್ಲೇ ಕಳೆದ ಆರು ತಿಂಗಳಲ್ಲಿ ನಾಲ್ಕು ಹುಲಿಗಳು ಸಾವನ್ನಪ್ಪಿದ್ದು, ಬಂಡೀಪುರ ಅರಣ್ಯದಲ್ಲಿ ವೇಗವಾಗಿ ಬರುವ ವಾಹನಗಳಿಂದ ಹಾಗೂ ಅರಣ್ಯ ಸಮೀಪದ ಗ್ರಾಮಗಳ ಜನರು ಹುಲಿಗಳ ಹಾವಳಿಯಿಂದ ಬಚಾವಾಗಲು ಹುಲಿ ಮೇಲೆ ದಾಳಿ ನಡೆಸಿರುವ ಪ್ರಕರಣಗಳು ದಾಖಲಾಗಿವೆ.