ಮುಂಬೈ: ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟಿಸುತ್ತಿರುವ ಕೇಸರಿ ಚಿತ್ರದ ಸೆಟ್ ನಲ್ಲಿ ಬೆಂಕಿ ಅವಘಡ ಸಂಭವಿದೆ.
ಸತಾರಾ ಜಿಲ್ಲೆಯಿಂದ 30 ಕಿ.ಮಿ ದೂರದಲ್ಲಿರುವ ವೈ ತೆಹಸಿಲ್‍ನ ಪಿಂಪೋಡೆ ಬುದ್ರಕ್ ಗ್ರಾಮದಲ್ಲಿ ಚಿತ್ರದ ಶೂಟಿಂಗ್ ನಡಿಯುತ್ತಿದ್ದ ವೇಳೆ ಈ ಅವಘಡ ಸಂಭವಿಸಿದ್ದು, ಯಾವುದೇ ಪ್ರಾಣಾಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ.
ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯಗಳು ಚಿತ್ರಿಕರಿಸುವಾಗ ಬಾಂಬ್‍ಗಳನ್ನು ಉಪಯೋಗಿಸುತ್ತಿದ್ದರು. ಆಗ ಬೆಂಕಿಯ ಕಿಡಿ ಒಂದು ವಸ್ತುವಿನ ಮೇಲೆ ಬಿದ್ದ ಪರಿಣಾಮ ಈ ಅವಘಡ ಸಂಭವಿಸಿದೆ ಎಂದು ಸತಾರಾ ಪೊಲೀಸರು ತಿಳಿಸಿದ್ದಾರೆ.
ಕೇಸರಿ ಚಿತ್ರತಂಡ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರಿಕರಿಸುತ್ತಿದ್ದರು. ಚಿತ್ರದ ನಟ ಅಕ್ಷಯ್ ಕುಮಾರ್ ತಮ್ಮ ಭಾಗದ ಚಿತ್ರೀಕರಣವನ್ನು ಪೂರ್ಣಗೊಳಿಸಿ ಅಲ್ಲಿಂದ ಹೊರಟು ಹೋದ ನಂತರ ಈ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಅಗ್ನಿ ಅವಘಡದ ಬಗ್ಗೆ ಕೇಸರಿ ಚಿತ್ರತಂಡ ಅಥವಾ ಅಕ್ಷಯ್ ಕುಮಾರ್ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
1897ನಲ್ಲಿ ನಡೆದ ಯುದ್ಧದಲ್ಲಿ 21 ಸಿಖ್ ಧರ್ಮದವರು 10 ಸಾವಿರ ಅಫ್ಘಾನ್ ಮಂದಿಯ ಜೊತೆ ಯುದ್ಧ ಮಾಡಿದ ಸನ್ನಿವೇಶದಿಂದ ಸ್ಫೂರ್ತಿಯಾಗಿ ಈ ಚಿತ್ರವನ್ನು ಮಾಡಲಾಗುತ್ತಿದೆ. ಈ ಚಿತ್ರದಲ್ಲಿ ಪರಿಣೀತಿ ಚೋಪ್ರಾ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅನುರಾಗ್ ಸಿಂಗ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಧರ್ಮ ಪ್ರೊಡಕ್ಷನ್, ಕೇಪ್ ಆಫ್ ಗುಡ್ ಫಿಲ್ಮ್ಸ್ ಹಾಗೂ ಅಝೂರ್ ಎಂಟರ್ ಟೈನ್‍ಮೆಂಟ್ ನಿರ್ಮಾಣ ಮಾಡುತ್ತಿದೆ.
ಮುಂಬೈ: ಬಾಲಿವುಡ್ ಗಜಿನಿ ಖ್ಯಾತಿಯ ನಟಿ ಆಸಿನ್ ಮಂಗಳವಾರ ಹೆಣ್ಣು ಮಗುವಿನ ತಾಯಿಯಾಗಿದ್ದಾರೆ. ತಮ್ಮ ತಾಯ್ತನದ ಸಂತೋಷವನ್ನು ಆಸಿನ್ ಇನ್ ಸ್ಟಾಗ್ರಾಂನಲ್ಲಿ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.
ನನಗೆ ಏಂಜಲ್ ನಂತಹ ಹೆಣ್ಣು ಮಗು ಜನನವಾಗಿದ್ದು, ಈ ವಿಷಯವನ್ನು ತಿಳಿಸಲು ಸಂತೋಷ ಪಡುತ್ತೇನೆ. ನನ್ನ ಹುಟ್ಟುಹಬ್ಬಕ್ಕೆ ಇದ್ದಕ್ಕಿಂತ ಒಳ್ಳೆಯ ಉಡುಗೊರೆಯಿಲ್ಲ ಎಂದು ಆಸಿನ್ ತಮ್ಮ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದೇ ತಿಂಗಳ 26 ರಂದು ಆಸಿನ್ ತಮ್ಮ 31ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ತಮ್ಮ ಹುಟ್ಟುಹಬ್ಬದ ಎರಡು ದಿನ ಮುಂಚೆಯೇ ಹೆಣ್ಣು ಮಗುವಿಗೆ ಜನ್ಮ ನೀಡಿರುವುದು ಅಸಿನ್ ಹಾಗೂ ಕುಟುಂಬಕ್ಕೆ ಸಂತಸ ತಂದಿದೆ.
ನಟಿ ಆಸಿನ್ ಮತ್ತು ಪತಿ ಮೈಕ್ರೋಮ್ಯಾಕ್ಸ್ ಸಿಇಒ ರಾಹುಲ್ ಶರ್ಮಾಗೆ ಆತ್ಮೀಯ ಸ್ನೇಹಿತರಾಗಿರುವ ಅಕ್ಷಯ್ ಕುಮಾರ್, ಆಸ್ಪತ್ರೆಗೆ ಹೋಗಿ ಆಸಿನ್ ಹಾಗೂ ರಾಹುಲ್ ಅವರಿಗೆ ಶುಭಕೋರಿದ್ದಾರೆ. ಈ ಖುಷಿಯನ್ನು ಯಾರಿಂದಲೂ ಕೊಡುವುದಕ್ಕೆ ಸಾಧ್ಯವಿಲ್ಲ ಎಂದು ಮಗುವಿನ ಜೊತೆಯ ಫೋಟೋವನ್ನು ತೆಗೆಸಿಕೊಂಡು ತಮ್ಮ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ.
ಇನ್ನೂ ತಂದೆಯಾಗಿ ಖುಷಿಯಾಗಿರುವ ರಾಹುಲ್ ಶರ್ಮಾ ನಮಗೆ ಹೆಣ್ಣು ಮಗು ಜನಿಸಿದೆ ಎಂದು ಟ್ವೀಟ್ ಮಾಡಿದ್ದಾರೆ.
A post shared by Asin Thottumkal (@simply.asin) on
One joy which is completely unmatched…congratulations to my dearest friends Asin and @rahulsharma on the arrival of their little angel 😁 pic.twitter.com/fLEwUtHNzD
Ecstatic to announce that Asin & I have been blessed with an Angelic Baby Girl earlier today. Thank you for all your love & wishes. pic.twitter.com/DQvKemIeWI
ಮುಂಬೈ: 2.0 ಸಿನಿಮಾದಲ್ಲಿ ರಜಿನಿಕಾಂತ್ ಅಭಿನಯಿಸುತ್ತಿರುವ ಪಾತ್ರದ ಆಫರ್ ನನಗೆ ಬಂದಿತ್ತು. ಆದರೆ ನಾನು ಆ ಪಾತ್ರಕ್ಕೆ ತಕ್ಕ ನಟನಲ್ಲ ಎಂದು ತಿರಸ್ಕರಿಸಿದೆ ಎಂದು ನಟ ಅಮೀರ್ ಖಾನ್ ಖಾಸಗಿ ಚಾನಲ್‍ನ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
2.0 ಚಿತ್ರದ ನಿರ್ದೇಶಕ ಶಂಕರ್ ಸಿನಿಮಾದಲ್ಲಿ ಮುಖ್ಯ ಪಾತ್ರ ಮಾಡಲು ಆಹ್ವಾನಿಸಿದ್ದರು. ನಾನು ಶಂಕರ್ ಮತ್ತು ರಜಿನಿಕಾಂತ್ ಅವರ ದೊಡ್ಡ ಅಭಿಮಾನಿ. 2.0 ಸಿನಿಮಾದಲ್ಲಿ ರಜಿನಿಕಾಂತ್ ಅವರ ಪಾತ್ರ ಮಾಡುವಂತೆ ಆಫರ್ ಮಾಡಿದ್ರು. ರಜನೀಕಾಂತ್ ಅವರು ಕೂಡ ಆ ಪಾತ್ರ ಮಾಡುವಂತೆ ಹೇಳಿದ್ದರು. ಸಿನಿಮಾದ ಸ್ಕ್ರಿಪ್ಟ್ ಅದ್ಭುತವಾಗಿತ್ತು, ಸ್ಕ್ರಿಫ್ಟ್ ನೋಡಿ ನನ್ನ ಕಣ್ಣು ಮುಚ್ಚಿ ನನ್ನನ್ನು ನಾನು ಆ ಪಾತ್ರದಲ್ಲಿ ಕಲ್ಪನೆ ಮಾಡಿಕೊಳ್ಳಲು ಪ್ರಯತ್ನಿಸಿದೆ. ಆದರೆ ನನಗೆ ಆ ಪಾತ್ರದಲ್ಲಿ ರಜಿನಿ ಅವರೇ ಕಾಣಿಸತೊಡಗಿದರು. ನಂತರ ಶಂಕರ್‍ಜೀಗೆ ಹೇಳಿದೆ ಈ ಪಾತ್ರವನ್ನು ರಜಿನಿಕಾಂತ್ ಅವರಿಂದ ಮಾತ್ರ ಮಾಡಲು ಸಾಧ್ಯ. ನನ್ನಿಂದ ಆ ಪಾತ್ರಕ್ಕೆ ನ್ಯಾಯ ಒದಗಿಸಿಕೊಡಲು ಆಗಲ್ಲ ಎಂದು ತಿರಸ್ಕರಿಸಿದೆ ಅಂತಾ ಆಮಿರ್ ಹೇಳಿದ್ದಾರೆ.
ರೋಬೋ ಚಿತ್ರದ ಮುಂದುವರಿದ ಭಾಗವಾದ 2.0 ಎಸ್. ಶಂಕರ್ ನಿರ್ದೇಶನದ ಬಹುನಿರೀಕ್ಷಿತ ಚಿತ್ರ. ಈಗಾಗಲೇ ಸಿನಿಮಾದ ಟೀಸರ್, ಫಸ್ಟ್ ಲುಕ್ ಮತ್ತು ಮೇಕಿಂಗ್ ವಿಡಿಯೋ ಗಳಿಂದ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. 2.0 ಸಿನಿಮಾದಲ್ಲಿ ರಜನಿಕಾಂತ್, ಅಕ್ಷಯ್ ಕುಮಾರ್ ಮತ್ತು ಆ್ಯಮಿ ಜಾಕ್ಸನ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಎಸ್.ಶಂಕರ್ ಆ್ಯಕ್ಷನ್ ಕಟ್ ಹೇಳಿದ್ದು, ಎ.ಆರ್.ರೆಹಮಾನ್ ಸಂಗೀತದಲ್ಲಿ ಹಾಡುಗಳು ಮೂಡಿ ಬಂದಿವೆ. ಸಿನಿಮಾ ತೆಲಗು ಮತ್ತು ಹಿಂದಿಯಲ್ಲಿ ಮೂಡಿಬರಲಿದೆ. 2.0 ಸಿನಿಮಾ 2018ರ ಜನವರಿಯಲ್ಲಿ ಬಿಡುಗಡೆಗೊಳ್ಳುವ ನಿರೀಕ್ಷೆಯಲ್ಲಿದೆ.
2010ರಲ್ಲಿ ರೋಬೋ ಸಿನಿಮಾ ತೆರೆ ಕಂಡಿತ್ತು. ರಜನಿ ಮತ್ತು ಐಶ್ವರ್ಯ ರೈ ನಟಿಸಿದ್ದ ಸಿನಿಮಾ ಕೋಟಿ ಕೋಟಿ ಹಣವನ್ನು ಗಳಿಸಿತ್ತು.
ಮುಂಬೈ: ರಜನಿಕಾಂತ್ ಹಾಗೂ ಅಕ್ಷಯ್ ಕುಮಾರ್ ನಟಿಸುತ್ತಿರುವ 2.0 ಚಿತ್ರದಲ್ಲಿ ಆ್ಯಮಿ ಜಾಕ್ಸನ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಈಗ 2.0 ಚಿತ್ರದ ಆ್ಯಮಿ ಜಾಕ್ಸನ್ ನ ಮೊದಲ ಲುಕ್ ಬಿಡುಗಡೆಯಾಗಿದೆ.
ಚಿತ್ರದಲ್ಲಿ ಆ್ಯಮಿ ಐಟಂ ಸಾಂಗ್ ಕೂಡ ಮಾಡಲಿದ್ದು, 2.0 ಚಿತ್ರದ ಮೊದಲ ಲುಕ್ ಕ್ರಿಷ್-3 ಚಿತ್ರದ ಕಂಗನಾ ನಟಿಸಿದ ಕಾಯಾ ಪಾತ್ರ ನೆನಪಿಸುತ್ತದೆ. ಚಿತ್ರದ ನಿರ್ದೇಶಕ ಶಂಕರ್ ಶನ್‍ಮುಗನ್, ಆ್ಯಮಿ ಅವರ ಫಸ್ಟ್ ಲುಕ್ ಅನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
‘ಈ ಜಗತ್ತು ಬರಿ ಮಾನವರಿಗೆ ಅಲ್ಲ’ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಈ ಚಿತ್ರದ ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ಅವರ ಫಸ್ಟ್ ಲುಕ್‍ಗಾಗಿ ಕಾಯುತ್ತಾಯಿರಿ ಎಂದು ಚಿತ್ರದ ನಿರ್ದೇಶಕ ತಿಳಿಸಿದ್ದಾರೆ.
2.0 ರೊಬೋಟ್ ಚಿತ್ರದ ಸೀಕ್ವಲ್ ಆಗಿದ್ದು, ಈ ಚಿತ್ರದಲ್ಲಿ ವಸಿಕರಣ್ ಮತ್ತು ಚಿಟ್ಟಿಯನ್ನು ಪುನರಾವರ್ತನೆ ಮಾಡಲಾಗುತ್ತದೆ. 2.0 ಚಿತ್ರ 3ಡಿ ಯಲ್ಲಿ ನಿರ್ದೇಶನ ಮಾಡುತ್ತಿದ್ದು, ಅಕ್ಷಯ್ ಕುಮಾರ್ ಮೊದಲ ಬಾರಿಗೆ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಬೆಂಗಳೂರು: ಭಾರತೀಯ ಸಿನಿ ರಸಿಕರು ಕಾತುರದಿಂದ ಕಾಯುತ್ತಿರುವ ರೋಬೋ 2.0 ಸಿನಿಮಾದ ಮತ್ತೊಂದು ಮೇಕಿಗ್ ವಿಡಿಯೋ ರಿಲೀಸ್ ಆಗಿದ್ದು, ಸಿನಿಮಾ ಹೇಗೆ ನಿರ್ಮಾಣವಾಗಿದೆ ಎಂಬುದನ್ನು ನೋಡಬಹುದಾಗಿದೆ.
ಎಂದಿರನ್ (ರೋಬೋಟ್) ಮುಂದುವರೆದ ಭಾಗ ಇದಾಗಿದ್ದು, ಸಿನಿಮಾ ಸೆಟ್ಟೇರಿದಾಗಿನಿಂದಲೂ ಸಖತ್ ಕ್ರೇಜ್ ಹುಟ್ಟು ಹಾಕಿದೆ. ಕೆಲವು ತಿಂಗಳು ಹಿಂದೆ ರಜನೀಕಾಂತ್ ಮತ್ತು ಅಕ್ಷಯ್ ಕುಮಾರ್ ಇಬ್ಬರೂ ಸಿನಿಮಾಗಾಗಿ ರೆಡಿಯಾಗುವ ಮೇಕಿಂಗ್ ವಿಡಿಯೋ ಬಿಡುಗಡೆ ಮಾಡಲಾಗಿತ್ತು.
ಇನ್ನೂ ಈ ಮೇಕಿಂಗ್ ವಿಡಿಯೋದಲ್ಲಿ ಎಲ್ಲ ತಂತ್ರಜ್ಞರು, ನಟರು ತಮ್ಮ ಅನುಭವಗಳನ್ನು ನೋಡುಗರೊಂದಿಗೆ ಹಂಚಿಕೊಂಡಿದ್ದಾರೆ. ರಜನಿಕಾಂತ್ ಸಹ ಸಿನಿಮಾ ನೋಡಿದ ಮೇಲೆ ಅಭಿಮಾನಿಗಳ ರಿಆ್ಯಕ್ಷನ್ ಕೇಳಲು ಕಾತುರನಾಗಿದ್ದೇನೆ ಎಂದು ತಿಳಿಸಿದ್ದಾರೆ. ಸಿನಿಮಾದಲ್ಲಿ ಅತಿ 3ಡಿ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿದೆ. ಈ ಸಿನಿಮಾದ ಬಳಿಕ ಭಾರತೀಯ ಸಿನಿಮಾ ಉದ್ಯಮದಲ್ಲಿ ಸಾಕಷ್ಟು ಬದಲಾವಣೆಗಳು ಆಗಲಿವೆ ಎಂದು ಚಿತ್ರತಂಡ ಹೇಳಿದೆ.
2.0 ಸಿನಿಮಾದಲ್ಲಿ ರಜನಿಕಾಂತ್, ಅಕ್ಷಯ್ ಕುಮಾರ್ ಮತ್ತು ಆ್ಯಮಿ ಜಾಕ್ಸನ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಎಸ್.ಶಂಕರ್ ಆ್ಯಕ್ಷನ್ ಕಟ್ ಹೇಳಿದ್ದು, ಎ.ಆರ್.ರೆಹಮಾನ್ ಸಂಗೀತದಲ್ಲಿ ಹಾಡುಗಳು ಮೂಡಿ ಬಂದಿವೆ. ಸಿನಿಮಾ ತೆಲಗು ಮತ್ತು ಹಿಂದಿಯಲ್ಲಿ ಮೂಡಿಬರಲಿದೆ.
2010ರಲ್ಲಿ ಮೊದಲ ರೋಬೋಟ್ ಸಿನಿಮಾ ತೆರೆ ಕಂಡಿತ್ತು. ರಜನಿ ಮತ್ತು ಐಶ್ವರ್ಯ ರೈ ನಟಿಸಿದ್ದ ಸಿನಿಮಾ ಕೋಟಿ ಕೋಟಿ ಹಣವನ್ನು ಲೂಟಿ ಮಾಡಿತ್ತು. ಸುಮಾರು ಎರಡು ವರ್ಷಗಳ ಚಿತ್ರೀಕರಣದ ನಂತರ ತೆರೆ ಕಂಡಿದ್ದ ಅದು ರಜನಿ ವೃತ್ತಿ ಬದುಕಿಗೆ ಹೊಸ ಇಮೇಜ್ ನೀಡಿತ್ತು. ಭಾರತೀಯ ಚಿತ್ರರಂಗದಲ್ಲೂ ಹಾಲಿವುಡ್ ಲೆವೆಲ್‍ನ ಸಿನಿಮಾ ಮಾಡುವ ಪ್ರತಿಭಾವಂತ ನಿರ್ದೇಶಕರು, ತಂತ್ರಜ್ಞರು ಇದ್ದಾರೆಂದು ಎದೆ ತಟ್ಟಿಕೊಂಡು ಹೇಳಿತ್ತು.
ಬೆಂಗಳೂರು: `ನೀವು ಏನೇ ಹೇಳ್ರಿ.. ಹಾಲಿವುಡ್ ರೇಂಜ್‍ಗೆ ನಮ್ ಇಂಡಿಯನ್ ಸಿನಿಮಾ ಕಾಂಪಿಟ್ ಮಾಡೋಕೆ ಸಾಧ್ಯಾನೇ ಇಲ್ಲ….’ ಹೀಗಂತ ಹೇಳುವ ಕಾಲ ಕೆಲವು ವರ್ಷಗಳ ಹಿಂದೆ ಇತ್ತು. ಆದರೆ ಕಳೆದ ಒಂದು ದಶಕದಿಂದ ದಕ್ಷಿಣ ಭಾರತದಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾಗಳನ್ನು ನೋಡುತ್ತಿದ್ದರೆ ಹಾಲಿವುಡ್‍ಗೆ ಹಾಲಿವುಡ್ಡೇ ಬೆಚ್ಚಿ ಬಿದ್ದಿದೆ. ಅದಕ್ಕೆ 2.0 ಸಿನಿಮಾ ಮೇಕಿಂಗ್ ಸಾಕ್ಷಿ. ಶಂಕರ್ ನಿರ್ದೇಶನದ 2.0 ಹೇಗಿದೆ ಅಂತ ನೋಡಿದ್ರೆ ನೀವು ಕುಂತಲ್ಲೇ ಕಳೆದು ಹೋಗ್ತೀರಿ.
ಹೌದು. ಯಪ್ಪಾ ಯಪ್ಪಾ ಯಪ್ಪಾ….ಇದೇನ್ರಿ ಇದು. ಇವರೆಲ್ಲಾ ಸೇರಿಕೊಂಡು ಸಿನಿಮಾ ಮಾಡ್ತಾ ಇದ್ದಾರಾ ಇಲ್ಲ ಹೊಸ ಜಗತ್ತನ್ನೇ ಸೃಷ್ಟಿ ಮಾಡುತ್ತಿದ್ದಾರಾ? ಅದೆಷ್ಟು ಜನ, ಅದೆಷ್ಟು ಕ್ಯಾಮೆರಾಗಳು, ಅದೇನು ಪ್ರತಿ ಶಾಟ್‍ಗೂ ತಯಾರಿ, ಮೇಕಪ್ ಮಾಡಿಕೊಳ್ಳುವ ಸ್ಟೈಲು, ರಜನಿ ಅಂಡ್ ಅಕ್ಷಯ್ ಮುಖಕ್ಕೆ ಮಾಸ್ಟ್ ಪ್ಯಾಚ್ ಹಾಕುವ ರೀತಿ. ಸಾವಿರಾರು ಜನರು ಓಡಾಟ..ಉಫ್…ನಿಜಕ್ಕೂ ಶಂಕರ್ ಭಾರತೀಯ ಚಿತ್ರರಂಗದ ಅದ್ಭುತ ನಿರ್ದೇಶಕ ಎನ್ನುವುದಲ್ಲಿ ನೋ ಡೌಟ್. ಅದಕ್ಕೆ ಅವರು ಬಿಟ್ಟಿರುವ ರೊಬೊ ಚಿತ್ರದ ಎರಡನೇ ಭಾಗ 2.0 ಸಿನಿಮಾದ ಮೇಕಿಂಗ್ ಕಣ್ಣ ಮುಂದಿನ ಸಾಕ್ಷಿ.
ರೊಬೊ…ಸುಮಾರು ಎಂಟು ವರ್ಷಗಳ ಹಿಂದೆ ತೆರೆ ಕಂಡಿತ್ತು. ರಜನಿ ಮತ್ತು ಐಶ್ವರ್ಯ ರೈ ನಟಿಸಿದ್ದ ಅದು ಕೋಟಿ ಕೋಟಿ ಹಣವನ್ನು ಲೂಟಿ ಮಾಡಿತ್ತು. ಅದಕ್ಕೂ ನೂರಾರು ಕೋಟಿಯನ್ನು ಸುರಿದಿದ್ದರು. ಸುಮಾರು ಎರಡು ವರ್ಷಗಳ ಚಿತ್ರೀಕರಣದ ನಂತರ ತೆರೆ ಕಂಡಿದ್ದ ಅದು ರಜನಿ ವೃತ್ತಿ ಬದುಕಿಗೆ ಹೊಸ ಇಮೇಜ್ ನೀಡಿದ್ದು ಸುಳ್ಳಲ್ಲ. ಹಾಗೆಯೇ ಭಾರತೀಯ ಚಿತ್ರರಂಗದಲ್ಲೂ ಹಾಲಿವುಡ್ ಲೆವೆಲ್‍ನ ಸಿನಿಮಾ ಮಾಡುವ ಪ್ರತಿಭಾವಂತ ನಿರ್ದೇಶಕರು, ತಂತ್ರಜ್ಞರು ಇದ್ದಾರೆಂದು ಎದೆ ತಟ್ಟಿಕೊಂಡು ಹೇಳಿತ್ತು.
ರೊಬೊ ಚಿತ್ರಕ್ಕೆ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ, ಅದಕ್ಕೆ ಏನೇನು ಬೇಕೊ ಎಲ್ಲವನ್ನೂ ಕೊಟ್ಟಿದ್ದರು. ಹೀಗಾಗಿ ಜನರೂ ಅದಕ್ಕೆ ತಕ್ಕಂತೆ ಕೈ ಹಿಡಿದರು. ಅದಾದ ಮೇಲೆ ಶಂಕರ್ ಒಂದು ರಿಮೇಕ್ ಸಿನಿಮಾ ಮಾಡಿದರು. ವಿಕ್ರಮ್ ಆಭಿನಯದ ಐ ಸಿನಿಮಾ ಕೂಡ ಬಂತು. ಅದರೆ ಅದೇಕೊ ಏನೊ ಜನರು ಅದನ್ನು ಮೆಚ್ಚಲಿಲ್ಲ. ಕೊನೆಗೆ ರೊಬೊ ಸಿನಿಮಾದ ಎರಡನೇ ಭಾಗವನ್ನು ಮಾಡಲು ನಿರ್ಧರಿಸಿದರು. ರಜನಿ ಕೂಡ ಗ್ರೀನ್ ಸಿಗ್ನಲ್ ಕೊಟ್ಟರು. ಕಳೆದ ಮೂರು ವರ್ಷಗಳ ಹಿಂದೆ ಆರಂಭವಾದ ಇದು ಈಗಲೂ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿದೆ. ಆ ಸಿನಿಮಾದ ಮೇಕಿಂಗ್ ಝಲಕ್ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟರು ನೋಡಿ, ಬಿಡುಗಡೆಯಾಗಿದ್ದೇ ತಡ ಯೂಟ್ಯೂಬ್‍ನಲ್ಲಿ ದೇಶದಲ್ಲೇ ನಂಬರ್ ಟ್ರೆಂಡಿಂಗ್ ಆಗಿದ್ದು, ಒಂದೇ ದಿನದಲ್ಲಿ 36 ಲಕ್ಷಕ್ಕೂ ಅಧಿಕ ವ್ಯೂ ಕಂಡಿದೆ.
ಮೈಲುದ್ದದ ರೋಡುಗಳು, ಸುತ್ತ ಮುತ್ತ ಮನೆಗಳು, ಸೆಟ್ ರೆಡಿ ಮಾಡುತ್ತಿರುವ ಕಾರ್ಮಿಕರು, ಸಾವಿರಾರು ಜನರು ಮೈದಾನದಿಂದ ಓಡಿ ಹೋಗುತ್ತಿರುವುದು, ಮಲಗಿಕೊಂಡ ರಜನಿ ಒಂದು ಸೈಡ್ ಲುಕ್ ಕೊಡುವ ಸ್ಟೈಲು, ಕಾರುಗಳು ಆಕಾಶಕ್ಕೆ ಹಾರಿ ಬೆಂಕಿ ಹತ್ತಿ ಉರಿಯುವುದು, ರೊಬೊ ಡ್ರೆಸ್‍ನಲ್ಲಿ ರಜನಿ ಶಾಟ್‍ಗೆ ರೆಡಿ ಆಗುತ್ತಿರುವುದು, ರಜನಿ ಮತ್ತು ಅಕ್ಷಯ್ ಮುಖಕ್ಕೆ ವ್ಯಾಕ್ಸ್ ಹಾಕಿ, ಅದು ಒಣಗಿದ ನಂತರ ಅದೇ ರೂಪದ ನಕಲಿ ಮುಖವಾಡ ಮಾಡುವ ದೃಶ್ಯ, ಹುಲಿಯಂಥ ಹುಬ್ಬು, ಕೋರೆ ಹಲ್ಲು, ಇಷ್ಟಗಲ ಕೆಂಪು ಕೆಂಪು ಕಣ್ಣಿನ ಅಕ್ಷಯ್…ಓಹೊಹೊಹೊ…ಇದನ್ನು ನೋಡುತ್ತಿದ್ದರೆ ಒಬ್ಬ ನಿರ್ದೇಶಕನ ಶ್ರಮ ಏನೆಂದು ಗೊತ್ತಾಗುತ್ತದೆ.
ಸಿನಿಮಾ ಎಲ್ಲರನ್ನೂ ಒಳಗೆ ಬಿಟ್ಟುಕೊಳ್ಳುವುದಿಲ್ಲ ಎನ್ನುವ ಮಾತಿದೆ. ಅದು ನೂರಕ್ಕೆ ನೂರು ನಿಜ. ಫುಟ್‍ಪಾತ್‍ನಲ್ಲಿ ಇದ್ದವನು ಒಂದೇ ರಾತ್ರಿಯಲ್ಲಿ ಸೂಪರ್ ಸ್ಟಾರ್ ಆಗುತ್ತಾನೆ, ಕೋಟಿ ಕೋಟಿ ಗಳಿಸಿದ ನಿರ್ಮಾಪಕ ಕಣ್ಣು ಮುಚ್ಚಿ ತೆರೆವಷ್ಟರಲ್ಲಿ ಬೀದಿಗೆ ಬಂದಿರುತ್ತಾನೆ. ಕನ್ನಡ ಚಿತ್ರರಂಗದಲ್ಲಿ ಮಾತ್ರ ಅಲ್ಲ, ಎಲ್ಲಾ ಚಿತ್ರರಂಗದಲ್ಲಿ ಇಂಥ ಸಾವಿರಾರು ಘಟನೆಗಳು ನಡೆದಿವೆ. ಮುಂದೆಯೂ ನಡೆಯುತ್ತವೆ. ಕೆಲವರು ದುಡ್ಡು, ಹೆಸರು ಮಾಡಲು ಬರುತ್ತಾರೆ, ಇನ್ನು ಕೆಲವರು ಶೋಕಿಗಾಗಿ ಬಾಗಿಲು ತಟ್ಟುತ್ತಾರೆ, ಆದರೆ ಅದೊಂದು ವರ್ಗ ಇದೆ. ಅವರು ಸಿನಿಮಾ ಅನ್ನೋದನ್ನು ತಲೆ ಮೇಲೆ ಹೊತ್ತುಕೊಂಡು ಮೆರವಣಿಗೆ ಮಾಡುತ್ತಾರೆ. ಆ ಸಾಲಿನಲ್ಲಿ ಶಂಕರ್ ಹೆಸರನ್ನು ಅನಿವಾರ್ಯವಾಗಿ ಸೇರಿಸಲೇಬೇಕು.
ಕೆಲವು ತಿಂಗಳ ಹಿಂದೆ ಇದೇ 2.0 ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಲಾಗಿತ್ತು. ಮುಂಬೈನಲ್ಲಿ ನಡೆದ ಆ ಕಾರ್ಯಕ್ರಮದಲ್ಲಿ ಹಲವರು ಗಣ್ಯರು ಹಾಜರಿದ್ದರು. ಆ ಎರಡು ಮೂರು ಪೋಸ್ಟರ್‍ಗಳಿಂದಲೇ ಶಂಕರ್ ಸಿನಿಮಾದ ಬಗ್ಗೆ ಸಿಕ್ಕಾ ಪಟ್ಟೆ ಕುತೂಹಲ ಮೂಡಿಸಿದ್ದರು. ಅದಕ್ಕೆ ಸಾವಿರ ಪಟ್ಟು ಸೇರಿಸಿ ಈ ಮೇಕಿಂಗ್ ಬಿಟ್ಟಿದ್ದಾರೆ ನೋಡಿ. ಕೇವಲ ಒಂದು ದಿನದಲ್ಲಿ 25 ಲಕ್ಷ ಜನರು ನೋಡಿ ಕೇಕೆ ಹಾಕಿದ್ದಾರೆ. ತಲೈವಾ ಲುಕ್ಕಿಗೆ, ಅಕ್ಷಯ್ ವಿಲನ್ ಕಿಕ್‍ಗೆ ಫಿದಾ ಆಗಿದ್ದಾರೆ. 67ರ ಹರೆಯದಲ್ಲೂ ರಜನಿ 25ರಹುಡುಗನಂತೆ ಶ್ರದ್ಧೆಯಿಂದ ಅಭಿನಯಿಸಿದ್ದನ್ನು ನೋಡಿ ಶರಣು ಶರಣೆಂದಿದ್ದಾರೆ.
ಅಂದ ಹಾಗೆ ಇದರ ಇನ್ನೊಂದು ಸ್ಪೆಸಾಲಿಟಿಯನ್ನು ನಾವು ಹೇಳಲೇಬೇಕು. ಅದು ಮೇಕ್ ಇನ್ ಇಂಡಿಯಾ ಅಭಿಯಾನ ಕಮ್ ಅಭಿಮಾನ. ಆಗಿನ್ನೂ ಈ ಸಿನಿಮಾ ಅರಂಭವಾಗಿರಲಿಲ್ಲ. ಪ್ರಿ ಪ್ರೊಡಕ್ಷನ್ ಕೆಲಸ ನಡೆಯುತ್ತಿತ್ತು. ಮೋದಿ ಪ್ರಧಾನಿಯಾಗಿದ್ದರು. ಅದೊಮ್ಮೆ ರಜನಿ ಮತ್ತು ಮೋದಿ ಭೇಟಿ ನಡೆದಿತ್ತು. ಆಗ ಮೋದಿ ಕೊಟ್ಟ ಸಲಹೆ ಏನು ಗೊತ್ತೆ? ನಿಮ್ಮ ಸಿನಿಮಾದ ಎಲ್ಲಾ ವಿಭಾಗದ ಕೆಲಸವನ್ನು ಮತ್ತು ಕೆಲಸಗಾರರನ್ನು ಇಲ್ಲಿವರನ್ನೇ ಬಳಸಿದರೆ, ಮೇಕ್ ಇನ್ ಇಂಡಿಯಾ ಅಭಿಯಾನಕ್ಕೆ ಇನ್ನಷ್ಟು ತೂಕ ಬರುತ್ತದೆ ಎಂದಿದ್ದರು. ಅದನ್ನು ಸೀರಿಯಸ್ ಆಗಿ ತೆಗೆದುಕೊಂಡ ರಜನಿ ಅದೇ ರೀತಿ 2.0 ಸಿನಿಮಾ ಮುಗಿಸಿದ್ದಾರೆ.
ಕೆಲವು ತಿಂಗಳ ಹಿಂದೆ ಬಂದ ರಜನಿಯ ಕಬಾಲಿ ಎಂಟು ನೂರು ಕೋಟಿಯನ್ನು ಗಳಿಸಿದ್ದು ನಿಜ. ಆದರೆ ಅಭಿಮಾನಿಗಳು ಅಷ್ಟೇನೂ ಖುಷಿ ಪಡಲಿಲ್ಲ. ಸದ್ಯಕ್ಕೆ ಕಾಳ ಕರಿಕಾಳನ್ ಸಿನಿಮಾದಲ್ಲಿ ಬಿಜಿಯಾಗಿದ್ದಾರೆ. ಆ ಸಿನಿಮಾ ರಿಲೀಸ್ ಆದ ಮೇಲೆ 2.0 ಸಿನಿಮಾ ನೋಡುವ ಭಾಗ್ಯ ನಿಮಗೆ ಸಿಗುತ್ತದೆ. ಅದು ಈ ವರ್ಷವಂತೂ ಖಂಡಿತ ಅಲ್ಲ. ಅದೇನಿದ್ದರೂ ಮುಂದಿನ ವರ್ಷ. ರಜನಿ-ಶಂಕರ್-ಅಕ್ಷಯ್-ಆಕಿ ಜಾಕ್ಸನ್…ಇವರೊಂದಿಗೆ ರಕ್ತ ಸುರಿಸಿ ಕೆಲಸ ಮಾಡಿದ ತಂತ್ರಜ್ಞರು. ವಾರೇ ವ್ಹಾ…ಒಂದು ಸಿನಿಮಾ ರಿಲೀಸ್‍ಗೂ ಮುಂಚೆಯೇ ಸೂಪರ್ ಹಿಟ್ ಆಗುವುದೆಂದರೆ ಇದೇನಾ?
ಮುಂಬೈ: ಬಾಹುಬಲಿ ಸಿನಿಮಾದ ಬಳಿಕ ಪ್ರಭಾಸ್ ತಮ್ಮ ಸಂಭಾವನೆಯನ್ನು 30 ಕೋಟಿ ರೂ.ಗೆ ಏರಿಸಿದ್ದಾರೆ.
2013ರಲ್ಲಿ ಬಿಡುಗಡೆಯಾದ ಮಿರ್ಚಿ ಸಿನಿಮಾಕ್ಕೆ ಪ್ರಭಾಸ್ 5 ಕೋಟಿ ರೂ. ತೆಗೆದುಕೊಂಡಿದ್ದರೆ, ಬಾಹುಬಲಿ ಚಿತ್ರಕ್ಕಾಗಿ 5 ವರ್ಷ ಮುಡುಪಿಟ್ಟ ಹಿನ್ನೆಲೆಯಲ್ಲಿ 25 ಕೋಟಿ ರೂ. ತೆಗೆದುಕೊಂಡಿದ್ದಾರೆ. ಈಗ ತನ್ನ ಮುಂದಿನ ಸಿನಿಮಾಗಳಿಗೆ 30 ಕೋಟಿ ರೂ. ಹಣವನ್ನು ಡಿಮ್ಯಾಂಡ್ ಮಾಡಿದ್ದಾರೆ ಎಂದು ಟಾಲಿವುಡ್ ಮೂಲಗಳನ್ನು ಆಧಾರಿಸಿ ಮಾಧ್ಯಮಗಳು ವರದಿ ಮಾಡಿವೆ.
ಬಾಲಿವುಡ್‍ನಲ್ಲಿ ಸಲ್ಮಾನ್ ಖಾನ್ ಬಾಕ್ಸ್ ಆಫೀಸ್ ಕಿಂಗ್ ಆಗಿದ್ದು ಒಂದು ಸಿನಿಮಾಗೆ 60 ಕೋಟಿ ರೂ. ಪಡೆಯುತ್ತಿದ್ದಾರೆ. ಆದರೆ ಕೆಲ ವರ್ಷಗಳಿಂದ ಅವರ ಸಿನಿಮಾವನ್ನು ಅವರೇ ನಿರ್ಮಾಣ ಮಾಡುತ್ತಿರುವುರಿಂದ ಹೆಚ್ಚಿನ ಲಾಭವನ್ನು ಪಡೆಯುತ್ತಿದ್ದಾರೆ.
ಅಮೀರ್ ಖಾನ್ 55 ರಿಂದ 65 ಕೋಟಿ ರೂ. ಪಡೆದರೆ, ಶಾರೂಖ್ ಖಾನ್ 40-45 ಕೋಟಿ ರೂ. ಹಣವನ್ನು ಪಡೆಯುತ್ತಿದ್ದಾರೆ.
ಅಕ್ಷಯ್ ಕುಮಾರ್ ಪ್ರತಿವರ್ಷ 100 ಕೋಟಿ ರೂ. ಗಳಿಸುತ್ತಿದ್ದಾರೆ. ಅವರು ಒಂದೇ ಸಿನಿಮಾದಿಂದ ಇಷ್ಟೊಂದು ಸಂಭಾವನೆ ಪಡೆಯುದಿಲ್ಲ. ಪ್ರತಿ ಸಿನಿಮಾಕ್ಕೆ 35-40 ಕೋಟಿ ರೂ. ಪಡೆಯುತ್ತಿದ್ದು, ಪ್ರತಿ ವರ್ಷ 4-5 ಸಿನಿಮಾಗಳನ್ನು ಅಭಿನಯಿಸುವ ಮೂಲಕ 100 ಕೋಟಿಯ ಕ್ಲಬ್‍ಗೆ ಸೇರ್ಪಡೆಯಾಗುತ್ತಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ನವದೆಹಲಿ: 64ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟಗೊಂಡಿದ್ದು, ‘ರುಸ್ತುಮ್’ ಚಿತ್ರದ ಮನೋಜ್ಞ ಅಭಿನಯಕ್ಕಾಗಿ ಬಾಲಿವುಡ್ ನಟ ಕುಮಾರ್‍ಗೆ ಅತ್ಯುತ್ತಮ ನಾಯಕ ನಟ ಪ್ರಶಸ್ತಿ ಸಿಕ್ಕಿದೆ.
ಟಿ.ಎಸ್.ನಾಗಾಭರಣ ನಿರ್ದೇಶನದ ಅಲ್ಲಮ ಚಿತ್ರ ಎರಡು ರಾಷ್ಟ್ರ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿಯನ್ನು ಬಾ.ಪು. ಪದ್ಮನಾಭ ಗೆದ್ದುಕೊಂಡರೆ, ಅತ್ಯುತ್ತಮ ಮೇಕಪ್ ಪ್ರಶಸ್ತಿ ಎನ್.ಕೆ.ರಾಮಕೃಷ್ಣನ್ ಅವರಿಗೆ ಸಿಕ್ಕಿದೆ.
ಮಲೆಯಾಳಂ ಭಾಷೆಯಲ್ಲಿರುವ ‘ಮಿನ್ನಮಿನುಗು’ ಚಿತ್ರದ ಅಭಿನಯಕ್ಕಾಗಿ ಸುರಭಿ ಲಕ್ಷ್ಮಿ ಅವರಿಗೆ ಅತ್ಯುತ್ತಮ ನಾಯಕಿ ನಟಿ ಪ್ರಶಸ್ತಿ ಸಿಕ್ಕಿದೆ. ಕನ್ನಡದ ಅತ್ಯುತ್ತಮ ಚಿತ್ರ ಪ್ರಶಸ್ತಿ ‘ರಿಸರ್ವ್‍ವೇಶನ್’ಗೆ ಲಭಿಸಿದ್ದರೆ, ಸೋನಂ ಕಪೂರ್ ಅಭಿನಯದ ‘ನೀರ್ಜಾ’ ಹಿಂದಿಯ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.
ಮದಿಪುಗೆ ಅತ್ಯುತ್ತಮ ತುಳು ಚಿತ್ರ ಪ್ರಶಸ್ತಿ ಸಿಕ್ಕಿದರೆ, ಅತ್ಯುತ್ತಮ ಕೊಂಕಣಿ ಚಿತ್ರ ಡಿ ಝರಾ ಝರಾಗೆ ಸಿಕ್ಕಿದೆ. ಸಾಮಾಜಿಕ ವಿಭಾಗದಲ್ಲಿ ಅಮಿತಾಬ್ ಬಚ್ಚನ್ ಅಭಿನಯದ ಪಿಂಕು ಚಿತ್ರಕ್ಕೆ ಪ್ರಶಸ್ತಿ ಲಭಿಸಿದೆ.
ದಂಗಲ್ ಚಿತ್ರದ ಅಭಿನಯಕ್ಕಾಗಿ ಜೈರಾ ವಾಸಿಂಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಸಿಕ್ಕಿದೆ. ಅಕ್ಷಯ್ ಕುಮಾರ್ ಅವರು ಇದೇ ಮೊದಲ ಬಾರಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಸಿನಿ ಉದ್ಯಮಕ್ಕೆ ಸ್ನೇಹ ರಾಜ್ಯ ಪ್ರಶಸ್ತಿಯನ್ನು ಉತ್ತರಪ್ರದೇಶ ಗೆದ್ದುಕೊಂಡಿದೆ.
ನಿರ್ದೇಶಕ, ನಿರ್ಮಾಪಕ ಪ್ರಿಯದರ್ಶನ್ ನೇತೃತ್ವದ ಸಮಿತಿ ಈ ಪ್ರಶಸ್ತಿಗಳನ್ನು ಆಯ್ಕೆ ಮಾಡಿದೆ.
ಮುಂಬೈ: ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಅವರ ಮೂಲ ಹೆಸರು ರಾಜೀವ್ ಭಾಟಿಯಾ. ಆದರೆ ಈಗ ಅಕ್ಷಯ್ ಕುಮಾರ್ ತಾವು ರಾಜೀವ್ ಹೆಸರನ್ನು ಯಾವ ಕಾರಣಕ್ಕಾಗಿ ಬದಲಾವಣೆ ಮಾಡಿಕೊಂಡಿದ್ದೇನೆ ಎನ್ನುವ ಬಹು ದಿನಗಳ ಪ್ರಶ್ನೆಗೆ ಈಗ ಉತ್ತರ ನೀಡಿದ್ದಾರೆ.
ನಾಮ್ ಶಬನಾ ಚಿತ್ರದ ಪ್ರಚಾರಕ್ಕಾಗಿ ಪತ್ರಿಕೆಯೊಂದರ ಕಚೇರಿಗೆ ಅಕ್ಷಯ್ ಕುಮಾರ್ ಆಗಮಿಸಿದ್ದರು. ಈ ವೇಳೆ ಅಭಿಮಾನಿಯೊಬ್ಬರು ಮೂಲ ಹೆಸರನ್ನು ಬದಲಾಯಿಸಿದ್ದು ಯಾಕೆ ಎಂದು ಪ್ರಶ್ನೆ ಕೇಳಿದ್ದರು.
ಈ ಪ್ರಶ್ನೆಗೆ ಅಕ್ಷಯ್ ಕುಮಾರ್, ಇದೂವರೆಗೂ ನನಗೆ ಈ ಪ್ರಶ್ನೆಯನ್ನು ಯಾರು ಕೇಳಿರಲಿಲ್ಲ. ನನ್ನ ಹೆಸರು ಬದಲಾಗಲು ನಟ ಕುಮಾರ್ ಗೌರವ್ ಕಾರಣ. 1987 ರಲ್ಲಿ ಮಹೇಶ್ ಭಟ್ ನಿರ್ದೇಶನದ ನಟ ಕುಮಾರ್ ಗೌರವ್ ನಟನೆಯ `ಆಜ್’ ಚಿತ್ರದಲ್ಲಿ ಒಂದು ಸಣ್ಣ ಪಾತ್ರದಲ್ಲಿ ನಟಿಸಿದ್ದೆ. ಅದು ಕೇವಲ 4.5 ಸೆಕೆಂಡ್‍ಗಳ ಪಾತ್ರವಾಗಿತ್ತು. ನಾಯಕ ನಟ ಕುಮಾರ್ ಗೌರವ್ ಚಿತ್ರದಲ್ಲಿ ಅಕ್ಷಯ್ ಕುಮಾರ್ ಎಂಬ ಹೆಸರಿನಲ್ಲಿ ನಟಿಸಿದ್ದರು. ಈ ಚಿತ್ರದ ಬಳಿಕ ನನಗೆ ನನಗೆ ಏನಾಯಿತೋ ಗೊತ್ತಿಲ್ಲ, ನೇರವಾಗಿ ಕೋರ್ಟ್ ಗೆ ಹೋಗಿ ರಾಜೀವ್ ಹರಿ ಓಂ ಭಾಟಿಯಾ ಎಂಬ ಹೆಸರಿನ ಬದಲಾಗಿ ಅಕ್ಷಯ್ ಕುಮಾರ್ ಎಂದು ಬದಲಾಯಿಸಿಕೊಂಡೆ ಎಂದು ಉತ್ತರಿಸಿದರು.
ನಾನು ಕುಮಾರ್ ಗೌರವ್ ನಟನೆಯನ್ನು ನೋಡುತ್ತಿದ್ದೆ. ಅಂದು ನನಗೆ ಏನಾಯಿತೋ ಗೊತ್ತಿಲ್ಲ. ನೇರವಾಗಿ ಮುಂಬೈನ ಬಾಂದ್ರಾ ಕೋರ್ಟ್ ಗೆ ಹೋಗಿ ನನ್ನ ಹೆಸರನ್ನು ಬದಲಾಯಿಸಿದೆ. ಈ ವಿಚಾರ ಯಾರಿಗೂ ಗೊತ್ತಿರಲಿಲ್ಲ. ಆದರೂ ನಾನು ವಿಸಿಟಿಂಗ್ ಕಾರ್ಡ್ ಮಾಡಿಸಿಕೊಂಡಿದ್ದೆ ಎಂದು ನಗುತ್ತಾ ಅಕ್ಷಯ್ ಉತ್ತರಿಸಿದರು.
`ನಾಮ್ ಶಬನಾ’ ಚಿತ್ರದ ನಾಯಕಿ ಪ್ರಧಾನ ಚಿತ್ರವಾಗಿದ್ದು, ನಟಿ ತಾಪ್ಸಿ ಪನ್ನು, ನಟ ಮನೋಜ್ ಬಾಜ್‍ಪೇಯಿ, ನಿರ್ದೇಶಕ ಶಿವಂ ನಾಯರ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈಗಾಗಲೇ ಟ್ರೇಲರ್ ನಿಂದ ನಿರೀಕ್ಷೆ ಹುಟ್ಟಿಸಿರುವ `ನಾಮ್ ಶಬನಾ’ ಚಿತ್ರ ಇದೇ ತಿಂಗಳು ಮಾರ್ಚ್ 31 ರಂದು ಬಿಡುಗಡೆಯಾಗಲಿದೆ.
ಹೈದರಾಬಾದ್: ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಎಂದಿರನ್ 2.0 ಚಿತ್ರಕ್ಕೆ 350 ಕೋಟಿ ರೂ. ವಿಮೆ ಮಾಡಿಸಲಾಗಿದ್ದು ಹೊಸ ದಾಖಲೆ ಬರೆದಿದೆ.
2010ರಲ್ಲಿ ಬಿಡುಗಡೆಗೊಂಡಿದ್ದ ಎಂದಿರನ್ ಸಿನಿಮಾದ ಮುಂದುವರೆದ ಭಾಗ ಇದಾಗಿದ್ದು, ಭಾರೀ ಮೊತ್ತದ ವಿಮೆ ಹೊಂದಿದ ಭಾರತೀಯ ಚಿತ್ರ ಎನಿಸಿಕೊಂಡಿದೆ. 400 ಕೋಟಿ ರೂ. ಬಜೆಟ್‍ನ ಈ ಚಿತ್ರದ ಚಿತ್ರೀಕರಣ ರದ್ದಾದರೆ, ಚಿತ್ರತಂಡದಲ್ಲಿರುವವರಿಗೆ ಅವಘಢವಾದ್ರೆ, ಚಿತ್ರೀಕರಣಕ್ಕೆ ಬಳಸಲಾಗುವ ಉಪಕರಣಗಳಾದ ಕ್ರೇನ್, ಕ್ಯಾಮೆರಾ, ಫ್ಲಡ್ ಲೈಟ್, ರೆಕಾರ್ಡರ್‍ಗಳಿಗೆ ಹಾನಿಯಾದ್ರೆ ವಿಮೆಯ ಸೌಲಭ್ಯ ಪಡೆಯಬಹುದಾಗಿದೆ.
ನ್ಯೂ ಇಂಡಿಯಾ ಅಶ್ಯೂರೆನ್ಸ್ ಸೇರಿದಂತೆ 6ಕ್ಕೂ ಹೆಚ್ಚು ಸಂಸ್ಥೆಗಳ ಒಕ್ಕೂಟದಿಂದ ಲೈಕಾ ಪ್ರೊಡಕ್ಷನ್ಸ್ ಈ ವಿಮಾ ಸೌಲಭ್ಯ ಪಡೆದಿದೆ.
ಈ ಹಿಂದೆ ಬಾಹುಬಲಿ ಚಿತ್ರಕ್ಕೆ 110 ಕೋಟಿ ರೂ. ಇನ್ಶುರೆನ್ಸ್ ಮಾಡಿಸಲಾಗಿತ್ತು. ಶಾರೂಖ್ ಖಾನ್ ಅಭಿನಯದ ರಯೀಸ್ ಚಿತ್ರಕ್ಕೆ 80 ಕೋಟಿ ರೂ., ದಂಗಲ್ ಚಿತ್ರಕ್ಕೆ 62 ಕೋಟಿ ರೂ. ಹಾಗೂ ಉಡ್ತಾ ಪಂಜಾಬ್ ಚಿತ್ರಕ್ಕೆ 35 ಕೋಟಿ ರೂ. ಮೊತ್ತದ ವಿಮೆ ಮಾಡಿಸಲಾಗಿತ್ತು.
ಎಂದಿರನ್ 2.0 ಚಿತ್ರದಲ್ಲಿ ರಜನಿಕಾಂತ್ ಹಾಗೂ ಬಾಲಿವುಡ್ ನಟ ಅಕ್ಷಯ್ ಕುಮಾರ್ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರ ಇದೇ ವರ್ಷ ಅಕ್ಟೋಬರ್‍ನಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ.