Tag: ಅಕ್ಷಯ್ ಕಲ್ಲೇಗ

  • ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣ- ಮನಸ್ಸೋ ಇಚ್ಛೆ 58 ಬಾರಿ ಇರಿದು ಕೊಂದ್ರು!

    ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣ- ಮನಸ್ಸೋ ಇಚ್ಛೆ 58 ಬಾರಿ ಇರಿದು ಕೊಂದ್ರು!

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕಲ್ಲೇಗ ಟೈಗರ್ಸ್ ಟೀಂನ (Kallega Tigers Team) ಅಕ್ಷಯ್ ಕಲ್ಲೇಗ (Akshay Kallega) ಅವರನ್ನು ದುಷ್ಕರ್ಮಿಗಳು ಮನಸ್ಸೋ ಇಚ್ಛೆ 58 ಬಾರಿ ಇರಿದು ಬರ್ಬರವಾಗಿ ಕೊಲೆ ಮಾಡಿರುವುದು ಬಯಲಾಗಿದೆ.

    ಪ್ರಕರಣ ಸಂಬಂಧ ಇದೀಗ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಚೇತನ್, ಮನೀಶ್, ಮಂಜ ಹಾಗೂ ಕೇಶವ ಎಂದು ಗುರುತಿಸಲಾಗಿದೆ. ಗಾಂಜಾ ಮತ್ತಿನಲ್ಲಿ ಅಕ್ಷಯ್ ಮೇಲೆ ಮಚ್ಚು ಬೀಸಿರೋ ಶಂಕೆ ವ್ಯಕ್ತವಾಗುತ್ತಿದೆ. 58 ಬಾರಿ ತಲವಾರಿನಿಂದ ಹಲ್ಲೆ ಮಾಡಿರುವುದು ಮರಣೋತ್ತರ ಪರೀಕ್ಷೆ ವೇಳೆ ಬೆಳಕಿಗೆ ಬಂದಿದೆ. ಅಕ್ಷಯ್ ದೇಹದ ಮೇಲಿನ ಗಾಯ ಕಂಡು ವೈದ್ಯರೇ ಶಾಕ್ ಆಗಿದ್ದಾರೆ. ಹಂತಕರು ಮನಸೋ ಇಚ್ಛೆ ಅಕ್ಷಯ್ ಮೇಲೆ ತಲವಾರು ಬೀಸಿದ್ದಾರೆ.

    ಮರಣೋತ್ತರ ಪರೀಕ್ಷೆಯ ಬಳಿಕ ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರಿಸಲಾಯಿತು. ಪುತ್ತೂರಿನ ನೆಹರುನಗರದ ಅಕ್ಷಯ್ ಮನೆಗೆ ಮೃತದೇಹ ಆಗಮಿಸುತ್ತಿದ್ದಂತೆಯೇ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತು. ಇದನ್ನೂ ಓದಿ: ಪುತ್ತೂರು ಜಂಕ್ಷನ್‌ನಲ್ಲಿ ಹುಲಿವೇಷ ತಂಡದ ಮುಖ್ಯಸ್ಥನ ಬರ್ಬರ ಹತ್ಯೆ – ಆರೋಪಿಗಳು ಪೊಲೀಸರಿಗೆ ಶರಣು

    ಪುತ್ತೂರು ಶಾಸಕ ಅಶೋಕ್ ರೈ ಸಹಿತ ಹಲವರು ಅಂತಿಮ ದರ್ಶನ ಪಡೆದರು. ಈ ನಡುವೆ ಅಕ್ಷಯ್ ಸ್ನೇಹಿತರು ದಾರಿ ಮಧ್ಯೆ ಕೂಡ ಶವಯಾತ್ರೆಗೆ ಸಿದ್ದತೆ ನಡೆಸಿದ್ದರು. ಪುತ್ತೂರಿನ ಕಬಕ ವೃತ್ತದಿಂದ ನಗರದ ಶೇವಿರೆಯಲ್ಲಿರುವ ಮನೆವರೆಗೆ ಶವಯಾತ್ರೆಗೆ ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಶವಯಾತ್ರೆಗೆ ಪೊಲೀಸರು ಅನುಮತಿ ನೀಡಿಲ್ಲ. ಹೀಗಾಗಿ ಪೊಲೀಸ್ ಹಾಗೂ ಅಕ್ಷಯ್ ಸ್ನೇಹಿತರ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರ ಮನವೊಲಿಕೆ ಬಳಿಕ ಯುವಕರ ಗುಂಪು ಚದುರಿದ್ದು, ಮೃತದೇಹವನ್ನು ಆಸ್ಪತ್ರೆಯಿಂದ ನೇರವಾಗಿ ಮನೆಗೆ ರವಾನಿಸಲಾಯಿತು.

    ಹತ್ಯೆ ಯಾಕೆ?: ಪುತ್ತೂರಿನ ನೆಹರು ನಗರದಲ್ಲಿ ನಡೆದ ಅಪಘಾತ ವಿಚಾರದಲ್ಲಿ ಆರೋಪಿಗಳು ಹಾಗೂ ಅಕ್ಷಯ್ ನಡುವೆ ಗಲಾಟೆ ನಡೆದಿತ್ತು. ದೂರುದಾರ ವಿಖ್ಯಾತ್ ಹಾಗೂ ಆರೋಪಿ ಚೇತನ್ ಚಲಾಯಿಸುತ್ತಿದ್ದ ಬಸ್ಸಿನ ನಡುವೆ ಅಪಘಾತ ನಡೆದಿತ್ತು. ಈ ವಿಚಾರದಲ್ಲಿ ಅಕ್ಷಯ್ ಹಾಗೂ ಆರೋಪಿಗಳಾದ ಮನೀಶ್, ಚೇತನ್ ಜೊತೆ ಫೋನ್ ಮೂಲಕ ನಡೆದಿದ್ದ ಮಾತಿನ ಚಕಮಕಿ ನಡೆದಿತ್ತು.

    ಚಕಮಕಿ ಬಳಿಕ ರಾತ್ರಿ ವೇಳೆ ಕಾರಿನಲ್ಲಿ ನೆಹರುನಗರಕ್ಕೆ ನಾಲ್ವರು ಆರೋಪಿಗಳು ಬಂದಿದ್ದರು. ಇತ್ತ ಅಕ್ಷಯ್ ಹಾಗೂ ವಿಖ್ಯಾತ್ ರಾತ್ರಿ ವೇಳೆ ನೆಹರುನಗರದ ಎಟಿಎಂ ಬಳಿ ನಿಂತಿದ್ದರು. ಈ ಸಂದರ್ಭ ಮತ್ತೆ ತಕರಾರು ತೆಗೆದು ಆರೋಪಿಗಳು ಜಗಳ ಆರಂಭಿಸಿದರು. ಜಗಳ ತಾರಕಕ್ಕೇರಿ ತಾವು ತಂದಿದ್ದ ಎರಡು ತಲಾವಾರು ಮೂಲಕ ಆರೋಪಿಗಳು, ಅಕ್ಷಯ್ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಸಂದರ್ಭ ಅಕ್ಷಯ್ ಸ್ನೇಹಿತ ವಿಖ್ಯಾತ್ ಓಡಿ ತಪ್ಪಿಸಿಕೊಂಡಿದ್ದನು.

    ಘಟನೆ ಸಂಬಂಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ (Puttur Police Station) ಪ್ರಕರಣ ದಾಖಲಾಗಿದ್ದು, ಆರೋಪಿಗಳಲ್ಲಿ ಕೆಲವರು ಪೊಲೀಸರಿಗೆ ಶರಣಾಗಿದ್ದಾರೆ.

  • ಪುತ್ತೂರು ಜಂಕ್ಷನ್‌ನಲ್ಲಿ ಹುಲಿವೇಷ ತಂಡದ ಮುಖ್ಯಸ್ಥನ ಬರ್ಬರ ಹತ್ಯೆ – ಆರೋಪಿಗಳು ಪೊಲೀಸರಿಗೆ ಶರಣು

    ಪುತ್ತೂರು ಜಂಕ್ಷನ್‌ನಲ್ಲಿ ಹುಲಿವೇಷ ತಂಡದ ಮುಖ್ಯಸ್ಥನ ಬರ್ಬರ ಹತ್ಯೆ – ಆರೋಪಿಗಳು ಪೊಲೀಸರಿಗೆ ಶರಣು

    ಮಂಗಳೂರು: ಪ್ರಖ್ಯಾತ ಹುಲಿವೇಷ ತಂಡವಾದ ಕಲ್ಲೇಗ ಟೈಗರ್ಸ್‌ನ (Kallega Tigers) ಮುಖ್ಯಸ್ಥ ಬರ್ಬರವಾಗಿ ಹತ್ಯೆಯಾದ ಘಟನೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಪುತ್ತೂರು (Puttur) ತಾಲೂಕಿನ ನೆಹರೂ ನಗರ (Nehru Nagar) ಜಂಕ್ಷನ್‌ನಲ್ಲಿ ನಡೆದಿದೆ.

    ಅಕ್ಷಯ್ ಕಲ್ಲೇಗ (26) ಬರ್ಬರವಾಗಿ ಹತ್ಯೆಯಾದ ಯುವಕ. ಹುಲಿಕುಣಿತದಲ್ಲಿ ಕಲ್ಲೇಗ ಟೈಗರ್ಸ್ ತಂಡದ ನೇತೃತ್ವ ವಹಿಸಿಕೊಂಡಿದ್ದ ಅಕ್ಷಯ್‌ನನ್ನು ಮಾಣಿ-ಮೈಸೂರು ಹೆದ್ದಾರಿಯ ನೆಹರೂ ನಗರ ಜಂಕ್ಷನ್‌ನಲ್ಲಿ ಅಟ್ಟಾಡಿಸಿ ಕೊಲೆ (Murder) ಮಾಡಲಾಗಿದೆ. ಹತ್ಯೆಗೈದ ಬನ್ನೂರು ನಿವಾಸಿ ಮನೀಷ್ ಹಾಗೂ ಚೇತು ಘಟನೆಯ ಬಳಿಕ ಪೊಲೀಸ್ ಠಾಣೆಗೆ ಶರಣಾಗಿದ್ದಾರೆ. ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿರುವ ಮಾಹಿತಿ ಲಭಿಸಿದೆ. ಇದನ್ನೂ ಓದಿ: ಪ್ರೇಮಕ್ಕೆ ಕುಟುಂಬಸ್ಥರ ವಿರೋಧ – ಪ್ರೇಮಿಯೊಂದಿಗೆ ಬೆಂಕಿ ಹಚ್ಚಿಕೊಂಡು ವಿವಾಹಿತೆ ಆತ್ಮಹತ್ಯೆ

    ದ್ವಿಚಕ್ರ ವಾಹನಗಳ ನಡುವೆ ನಡೆದ ಅಪಘಾತದ ವಿಚಾರದಲ್ಲಿ ಆರೋಪಿಗಳು ಹಾಗೂ ಅಕ್ಷಯ್ ನಡುವೆ ಗಲಾಟೆಯಾಗಿತ್ತು. ಈ ಸಂದರ್ಭ ಎರಡು ಸಾವಿರ ರೂ. ನೀಡುವ ವಿಚಾರದಲ್ಲಿ ಮಾತುಕತೆ ವಿಕೋಪಕ್ಕೆ ತಿರುಗಿದೆ. ಬಸ್ ಚಾಲಕ ಚೇತು ಎಂಬಾತನ ಬೆಂಬಲಿಗ ಹಾಗೂ ಅಕ್ಷಯ್ ನಡುವೆ ತೀವ್ರ ವಾಗ್ವಾದ ನಡೆದಿದೆ. ಕೊನೆಗೆ ಮೂರಕ್ಕೂ ಅಧಿಕ ಮಂದಿಯ ತಂಡದಿಂದ ದಾಳಿ ನಡೆಸಿ ಅಕ್ಷಯ್‌ನನ್ನು ಅಟ್ಟಾಡಿಸಿ ತಲವಾರಿನಿಂದ ಹತ್ಯೆ ಮಾಡಲಾಗಿದೆ. ಹತ್ಯೆಗೆ ಬೇರೆ ಕಾರಣಗಳು ಇದೆಯಾ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಕುರಿತು ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಪತ್ನಿಗೆ 17 ಬಾರಿ ಇರಿದು, ದೇಹದ ಮೇಲೆ ಗಾಡಿ ಓಡಿಸಿದ್ದ ಕೇರಳದ ವ್ಯಕ್ತಿಗೆ ಅಮೆರಿಕದಲ್ಲಿ ಜೀವಾವಧಿ ಶಿಕ್ಷೆ