Tag: ಅಕ್ರಮ ಮರಳುಗಾರಿಕೆ

  • ಇಡಿ ಅಧಿಕಾರಿಗಳಿಂದ ಚರಣ್‍ಜಿತ್ ಸಿಂಗ್ ಚನ್ನಿ ಸೋದರಳಿಯನ ಬಂಧನ

    ಇಡಿ ಅಧಿಕಾರಿಗಳಿಂದ ಚರಣ್‍ಜಿತ್ ಸಿಂಗ್ ಚನ್ನಿ ಸೋದರಳಿಯನ ಬಂಧನ

    ಚಂಡೀಗಢ: ಪಂಜಾಬ್ ಮುಖ್ಯಮಂತ್ರಿ ಚರಣ್‍ಜಿತ್ ಸಿಂಗ್ ಚನ್ನಿ ಅವರ ಸೋದರಳಿಯ ಭೂಪೇಂದ್ರ ಸಿಂಗ್ ಹನಿ ಅವರನ್ನು ಅಕ್ರಮ ಮರಳುಗಾರಿಕೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ.

    ತಡರಾತ್ರಿ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‍ಎ)ಯ ನಿಬಂಧನೆಗಳ ಅಡಿಯಲ್ಲಿ ತನಿಖಾ ಸಂಸ್ಥೆ ಭೂಪೇಂದ್ರ ಸಿಂಗ್ ಹನಿ ಅವರನ್ನು ಬಂಧಿಸಿದೆ. ಇಂದು ಸಿಬಿಐ ನ್ಯಾಯಾಲಯಕ್ಕೆ ಹಾಜರುಪಡಿಸಲಿದೆ. ಪಂಜಾಬ್ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ದಿನಗಳಿರುವಾಗ ಈ ಘಟನೆ ನಡೆದಿದೆ. ಫೆಬ್ರವರಿ 20ರಂದು ಮತದಾನ ನಡೆಯಲಿದ್ದು, ಮಾರ್ಚ್ 10 ರಂದು ಫಲಿತಾಂಶ ಹೊರಬೀಳಲಿದೆ. ಇದನ್ನೂ ಓದಿ: 18 ವರ್ಷದಲ್ಲಿಯೇ ಮೊದಲು- ಫೇಸ್‍ಬುಕ್‍ಗೆ ಒಂದೇ ದಿನ 16 ಲಕ್ಷ ಕೋಟಿ ರೂ. ನಷ್ಟ

    ಪಂಜಾಬ್‍ನಲ್ಲಿ ಅಕ್ರಮ ಮರಳು ಗಣಿಗಾರಿಕೆಗೆ ಸಂಬಂಧಿಸಿದಂತೆ ಕಳೆದ ತಿಂಗಳು ಭೋಪೇಂದ್ರ ಸಿಂಗ್ ಹನಿ ಅವರ ನಿವಾಸ ಹಾಗೂ ಕಚೇರಿ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿತ್ತು. ಈ ವೇಳೆ 8 ಕೋಟಿ ರೂ. ಹಣವನ್ನು ವಶಪಡಿಸಿಕೊಳ್ಳಲಾಗಿದ್ದು, ಜೊತೆಗೆ ಆಸ್ತಿ ವಹಿವಾಟಿಗೆ ಸಂಬಂಧಿಸಿದ ದೋಷಪೂರಿತ ದಾಖಲೆಗಳು ಮೊಬೈಲ್ ಫೋನ್‍ಗಳು, 21 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನ ಮತ್ತು 12 ಲಕ್ಷ ಮೌಲ್ಯದ ರೋಲೆಕ್ಸ್ ವಾಚ್ ವಶಪಡಿಸಿಕೊಳ್ಳಲಾಗಿದೆ.

    ವಿಧಾನಸಭೆ ಚುನಾವಣೆ ವೇಳೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸಂಬಂಧಿಕರ ಮೇಲೂ ಸಹ ದಾಳಿ ನಡೆಸಲಾಗಿತ್ತು. ಅದೇ ರೀತಿ ನನ್ನ ಮೇಲೆ ಒತ್ತಡ ಹೇರಲು ಪಂಜಾಬ್‍ನಲ್ಲಿ ಇಡಿ ಅಧಿಕಾರಿಗಳು ಕಾಂಗ್ರೆಸ್ ಪಕ್ಷದ ಸದಸ್ಯರ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದರು.

    ಈ ಪ್ರಕರಣಕ್ಕೂ ನನಗೂ ಯಾವುದೇ ರೀತಿಯ ಸಂಬಂಧವಿಲ್ಲ. ಒತ್ತಡವನ್ನು ನಿಭಾಯಿಸಲು ನಾವು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.  ಇದನ್ನೂ ಓದಿ: ಚೀನಾ ಒಲಿಂಪಿಕ್ಸ್‌ಗೆ ಭಾರತ ಬಹಿಷ್ಕಾರ – ದಿಟ್ಟ ನಿರ್ಧಾರ ತೆಗೆದುಕೊಂಡ ಭಾರತೀಯ ವಿದೇಶಾಂಗ ಇಲಾಖೆ

  • ಕಾಡು ಪ್ರಾಣಿಗಳ ಭಯದ ಮಧ್ಯೆ ಮರಳು ಕಾಯುತ್ತಿದ್ದಾರೆ ಅಧಿಕಾರಿಗಳು

    ಕಾಡು ಪ್ರಾಣಿಗಳ ಭಯದ ಮಧ್ಯೆ ಮರಳು ಕಾಯುತ್ತಿದ್ದಾರೆ ಅಧಿಕಾರಿಗಳು

    ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ನಾಗನಹಳ್ಳಿ ಗ್ರಾಮದಲ್ಲಿ ಕಳೆದ ಎರಡ್ಮೂರು ದಿನಗಳ ಹಿಂದೆ ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಚರಣೆ ನಡೆಸಿ, ಅಕ್ರಮ ಮರಳು ಜಪ್ತಿ ಮಾಡಿದ್ದಾರೆ. ಆದರೆ ಜಪ್ತಿ ಮಾಡಿದ ಮರಳು ಸಾಗಿಸಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿರುವುದರಿಂದ ಅಕ್ರಮ ಮರಳು ಕಾಯುವುದೇ ಕಂದಾಯ ಇಲಾಖೆಯ ಸಿಬ್ಬಂದಿಗೆ ಸಂಕಷ್ಟವಾಗಿ ಮಾರ್ಪಟಿದೆ.

    ತುಂಗಭದ್ರಾ ನದಿ ಪಾತ್ರದಲ್ಲಿ ಅಕ್ರಮವಾಗಿ ಮರಳು ತೆಗೆದು, ನಾಗನಹಳ್ಳಿ ಸಮೀಪದ ಸರ್ಕಾರಿ ಜಮೀನುಗಳಲ್ಲಿ ಅಕ್ರಮವಾಗಿ ಆಪಾರ ಪ್ರಮಾಣದ ಮರಳು ಸಂಗ್ರಹ ಮಾಡಲಾಗಿದ್ದು, ಮಾಹಿತಿ ತಿಳಿದ ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಜೂನ್ 30 ರಂದು ದಾಳಿ ನಡೆಸಿ, 20 ಟ್ರ್ಯಾಕ್ಟರ್‍ಗೂ ಅಧಿಕ ಮರಳು ವಶಕ್ಕೆ ಪಡೆದು ಜಪ್ತಿ ಮಾಡಿದ್ದಾರೆ. ಸರ್ಕಾರಿ ಜಮೀನುಗಳಲ್ಲಿ ಮರಳು ಇರುವುದರಿಂದ ದಂಧೆಕೋರರ ವಿರುದ್ಧ ಪ್ರಕರಣ ದಾಖಲಾಗಿಲ್ಲ. ಸದ್ಯ ಮರಳಿನ ಬೆಲೆಯ ಪ್ರಕಾರ 1 ಲಕ್ಷ ರೂ.ಗೂ ಅಧಿಕ ಬೆಲೆಬಾಳುವ ಮರಳು ಇದಾಗಿದ್ದು, ಸದ್ಯ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಅಧಿಕಾರಿಗಳು ದಾಳಿ ನಡೆಸಿ, ಮರಳು ಜಪ್ತಿ ಮಾಡಿ ಈಗಾಗಲೇ 4 ದಿನಗಳು ಕಳೆದಿವೆ. ಆದರೂ ಕೂಡ ಜಪ್ತಿ ಮರಳು ಸಾಗಾಟ ಮಾಡಲು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸದಿರುವುದು ಕಂದಾಯ ಇಲಾಖೆಯವರಿಗೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಆಪಾರ ಪ್ರಮಾಣದ ಮರಳು ಇರುವುರಿಂದ ಅಕ್ರಮ ಮರಳು ಸಾಗಾಟಗಾರರು ರಾತ್ರೋ ರಾತ್ರಿ ಸಾಗಿಸುತ್ತಾರೆ ಎನ್ನುವ ಭಯದಲ್ಲಿ ಕಂದಾಯ ಇಲಾಖೆಯವರು ಹಗಲು, ರಾತ್ರಿ ಎನ್ನದೆ ಮರಳು ರಾಶಿಗಳನ್ನು ಕಾಯಬೇಕಾಗಿದೆ. ರಾತ್ರಿ ವೇಳೆಯಲ್ಲಿ ಮರಳು ರಾಶಿಗಳ ಮುಂದೆಯೇ ಗ್ರಾಮ ಸಹಾಯಕರು ಮಲಗುವ ಪರಿಸ್ಥಿತಿ ಉಂಟಾಗಿದೆ. ರಾತ್ರಿ ವೇಳೆ ಒಬ್ಬಂಟಿಯಾಗಿ ಮಲಗುವುದರಿಂದ ಕಾಡು ಪ್ರಾಣಿಗಳ ಕಾಟವನ್ನೂ ಸಿಬ್ಬಂದಿ ಎದುರಿಸುತ್ತಿದ್ದಾರೆ. ಸದ್ಯ ಜೀವ ಭಯದಲ್ಲಿಯೇ ಕಾಯಬೇಕಾದ ಸನ್ನಿವೇಶ ನಿರ್ಮಾಣವಾಗಿದೆ.

    ಗಣಿ ಮತ್ತು ಭೂವಿಜ್ಞಾನ ಇಲಾಖೆ ಮೌನ: ಟಾಸ್ಕ್ ಫೋರ್ಸ್ ಸಮಿತಿಯಲ್ಲಿನ ಅಧಿಕಾರಿಗಳು ದಾಳಿ ನಡೆಸಿ, ಮರಳು ಜಪ್ತಿ ಮಾಡಿದರೆ ಸ್ಥಳಕ್ಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಆಗಮಿಸಿ, ಇರುವ ಮರಳಿನ ಪ್ರಮಾಣ, ಅಂದಾಜು ಬೆಲೆಯನ್ನು ನಿಗದಿ ಮಾಡಿ, ಸುರಕ್ಷಿತವಾಗಿರುವ ಬೇರೆ ಕಡೆಗೆ ಸ್ಥಳಾಂತರಿಸಬೇಕು. ನಂತರ ಅದಕ್ಕೆ ಟೆಂಡರ್ ಕರೆದು ಮಾರಾಟ ಮಾಡಬೇಕು. ಆದರೆ ಆದ್ಯಾವುದು ಇಲ್ಲಿ ನಡೆಸಯುತ್ತಿಲ್ಲ. ದಾಳಿ ನಡೆಸಿ, ಮೂರು ದಿನ ಕಳೆದರೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ. ಇದು ಸದ್ಯ ಗ್ರಾಮಸ್ಥರಲ್ಲಿ ನಾನಾ ಅನುಮಾನಗಳಿಗೆ ಕಾರಣವಾಗುತ್ತಿದೆ.

  • ತಮ್ಮ ವಿರುದ್ಧದ ಆರೋಪಕ್ಕೆ ರೇಣುಕಾಚಾರ್ಯ ಸ್ಪಷ್ಟನೆ

    ತಮ್ಮ ವಿರುದ್ಧದ ಆರೋಪಕ್ಕೆ ರೇಣುಕಾಚಾರ್ಯ ಸ್ಪಷ್ಟನೆ

    ಬೆಂಗಳೂರು: ತಮ್ಮ ವಿರುದ್ಧದ ಆರೋಪಕ್ಕೆ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಸ್ಪಷ್ಟನೆ ನೀಡಿದ್ದಾರೆ.

    ಅಕ್ರಮ ಮರಳುಗಾರಿಕೆ ಮೇಲೆ ಪೊಲೀಸ್ ಇಲಾಖೆ ದಾಳಿ ಮಾಡಿದ್ದಕ್ಕೆ ‘ರೇಣುಕಾಚಾರ್ಯ ಅವರು ಪೊಲೀಸರಿಗೆ ಅವಾಜ್’ ಎನ್ನುವ ಸುದ್ದಿ ಕೆಲವು ಸುದ್ದಿ ಮಾಧ್ಯಮಗಳಲ್ಲಿ ಸೋಮವಾರ ಪ್ರಸಾರವಾಗಿರುವುದು ನನ್ನ ಗಮನಕ್ಕೆ ಬಂದಿದ್ದು ಇದು ಸತ್ಯಕ್ಕೆ ದೂರವಾದ ವಿಷಯ.

    ನಿನ್ನೆ ನನ್ನ ಮತ ಕ್ಷೇತ್ರದ ಬೇಲಿಮಲ್ಲೂರು ಸೇರಿದಂತೆ ಕೆಲವು ಗ್ರಾಮಗಳ ಬಡತನ ರೇಖೆಗಿಂತ ಕೆಳಗಿರುವ ರೈತರುಗಳು ಮನೆ ಕಟ್ಟಿಕೊಳ್ಳಲು #ಎತ್ತಿನ ಗಾಡಿ ಮತ್ತು #ಬೈಕ್ ಗಳಲ್ಲಿ ಲೀಗಲ್ ಕ್ವಾರೆಗಳಿಲ್ಲದ ನದಿ ದಡದಿಂದ ಮರಳನ್ನು ಹೊಡೆದುಕೊಳ್ಳುತ್ತಿದ್ದು ಇಷ್ಟು ದಿನ ಸುಮ್ಮನಿದ್ದ ಪೊಲೀಸ್ ಇಲಾಖೆಯವರು ಈಗ ತೊಂದರೆ ನೀಡುತ್ತಿದ್ದರೆ ಎಂದು ನನ್ನ ಬಳಿ ನೋವನ್ನು ಹೇಳಿಕೊಂಡರು.

    ಎಸ್‍ಪಿ ಸೂಚನೆ ಮೇರೆಗೆ ಮರಳನ್ನು ಸೀಜ್ ಮಾಡಲು ಹೋಗಿದ್ದ ಹೊನ್ನಾಳಿ ಸಿಪಿಐ ದೇವರಾಜ್ ಅವರಿಗೆ ತಕ್ಷಣ ದೂರವಾಣಿ ಕರೆ ಮಾಡಿ ಯಾವುದೇ ಕಾರಣಕ್ಕೂ ಬಡವರು ಮನೆ ಕಟ್ಟಿಕೊಳ್ಳಲು ಎತ್ತಿನ ಗಾಡಿ ಹಾಗು ಬೈಕ್ ಗಳಲ್ಲಿ ಹೊಡೆದು ಕೊಂಡಿರುವ ಮರಳನ್ನು ಸೀಜ್ ಮಾಡದಿರಲು ಸೂಚಿಸಿದೆನು. ಹಿಂದಿನ ಸರ್ಕಾರದ ಅವಧಿಯಲ್ಲಿ ಒಂದು ಟ್ರ್ಯಾಕ್ಟರ್ ಮರಳಿಗೆ ರೂ.10,000 ದರ ಇತ್ತು, ಈಗ ನಮ್ಮ ಸರ್ಕಾರ ಬಂದ ಮೇಲೆ ಸಾರ್ವಜನಿಕರಿಗೆ ಮೂರರಿಂದ ನಾಲ್ಕು ಸಾವಿರ ರೂಪಾಯಿಗಳಿಗೆ ಮರಳು ಸಿಗುತ್ತಿದೆ. ಇದನ್ನೂ ಓದಿ: ಮರಳು ದಂಧೆಗೆ ಅಂಕುಶ ಹಾಕಲು ಹೋದ ಎಸ್‍ಪಿಗೆ ರೇಣುಕಾಚಾರ್ಯ ಅವಾಜ್

    ಈ ಹಿಂದೆ ನನ್ನ ಮತ ಕ್ಷೇತ್ರದ ಬಡವರಿಗೆ ಕಡಿಮೆ ದರದಲ್ಲಿ ಮರಳನ್ನು ಕೊಡಿಸುವ ಸಲುವಾಗಿ ನಾನು ಅನೇಕ ಹೋರಾಟಗಳನ್ನು ಮಾಡಿದ್ದು ಈಗ ನಮ್ಮ ಸರ್ಕಾರದ ಅವಧಿಯಲ್ಲಿ ಬಡವರಿಗೆ ಕಡಿಮೆ ದರದಲ್ಲಿ ಮರಳನ್ನು ಕೊಡಿಸುವುದಕ್ಕೆ ನಾನು ಈಗಲೂ ಬದ್ದವಾಗಿದ್ದೇನೆ. ದೇವಸ್ಥಾನ ಮಂದಿರ ಮಸೀದಿಗಳನ್ನು ಕಟ್ಟಿಕೊಳ್ಳಲು ನದಿ ದಡದಲ್ಲಿರುವ ಗ್ರಾಮಗಳಿಗೆ ಉಚಿತವಾಗಿ ಹಾಗು ನದಿ ದಡದಲ್ಲಿಲ್ಲದ ಗ್ರಾಮಗಳಿಗೆ ಅತಿ ಕಡಿಮೆ ದರದಲ್ಲಿ ಮರಳನ್ನು ಕೊಡಿಸುತ್ತಿದ್ದೇನೆ.

    ಪೊಲೀಸ್ ಇಲಾಖೆ ಅಕ್ರಮ ಮರಳುಗಾರಿಕೆ ಮೇಲೆ ದಾಳಿ ಮಾಡಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವುದಕ್ಕೆ ನನ್ನ ಅಭ್ಯಂತರವಿಲ್ಲ ಹಾಗು ಅಕ್ರಮ ಮರಳುಗರಿಕೆಯನ್ನು ನಾನು ಪ್ರೋತ್ಸಾಹಿಸುವುದೂ ಇಲ್ಲ. ಆದ್ರೆ ಬಡ ಜನತೆಗೆ ತೊಂದರೆ ನೀಡಿದರೆ ನಾನು ಯಾವುದೇ ಕಾರಣಕ್ಕೂ ಸುಮ್ಮನಿರುವ ಪ್ರಶ್ನೆಯೇ ಇಲ್ಲ ಎಂದು ಶಾಸಕರು ಪ್ರಕಟಣೆ ಹೊರಡಿಸಿದ್ದಾರೆ.

  • ನಿಲ್ಲದ ಅಕ್ರಮ ಮರಳುಗಾರಿಕೆ- ರಸ್ತೆಯಲ್ಲಿ ಪಿಲ್ಲರ್ ನಿರ್ಮಿಸಿ ರೋಡ್ ಬ್ಲಾಕ್

    ನಿಲ್ಲದ ಅಕ್ರಮ ಮರಳುಗಾರಿಕೆ- ರಸ್ತೆಯಲ್ಲಿ ಪಿಲ್ಲರ್ ನಿರ್ಮಿಸಿ ರೋಡ್ ಬ್ಲಾಕ್

    ರಾಯಚೂರು: ಜಿಲ್ಲೆಯ ಕೃಷ್ಣಾ ಹಾಗೂ ತುಂಗಭದ್ರಾ ನದಿ ದಡದಲ್ಲಿ ಅಕ್ರಮ ಮರಳುಗಾರಿಗೆ ಅವ್ಯಾಹತವಾಗಿ ನಡೆಯುತ್ತಿದ್ದು, ಎಷ್ಟೇ ಕ್ರಮ ಕೈಗೊಂಡರೂ ಹತೋಟಿಗೆ ಬರುತ್ತಿಲ್ಲ. ಹೀಗಾಗಿ ರಾಯಚೂರು ಉಪವಿಭಾಗ ಸಹಾಯಕ ಆಯುಕ್ತ ಸಂತೋಷ ಕಾಮಗೌಡ ಅವರು ಬೃಹತ್ ಪಿಲ್ಲರ್ ಗಳನ್ನು ನಿರ್ಮಿಸಿ ವಾಹನಗಳು ಸಂಚರಿಸದಂತೆ ಮಾಡಿದ್ದಾರೆ.

    ಗಂಜಳ್ಳಿ ಗ್ರಾಮದ ಬಳಿ ಕೃಷ್ಣಾ ನದಿ ದಡದಲ್ಲಿ ಅಕ್ರಮ ಮರಳುಗಾರಿಕೆಗೆ ನಿರ್ಮಿಸಿದ್ದ ರಸ್ತೆಯನ್ನು ಸಿಮೆಂಟ್ ಪಿಲ್ಲರ್‍ಗಳನ್ನು ನಿರ್ಮಿಸಿ ಅಕ್ರಮವಾಗಿ ಟ್ರ್ಯಾಕ್ಟರ್, ಟಿಪ್ಪರ್ ಗಳು ಓಡಾಡದಂತೆ ಬಂದ್ ಮಾಡಲಾಗಿದೆ. ಇನ್ನೂ ಕೆಲವೆಡೆ ರಸ್ತೆಗಳಿಗೆ ದೊಡ್ಡ ಬಂಡೆಗಳನ್ನು ಅಡ್ಡಲಾಗಿ ಹಾಕಿ ದಾರಿ ಇಲ್ಲದಂತೆ ಮಾಡಿದ್ದಾರೆ.

    ಹಲವಾರು ದಿನಗಳಿಂದ ಅಕ್ರಮ ಮರಳು ಗಣಿಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ. ಅಧಿಕಾರಿಗಳು ಎಷ್ಟೇ ಪ್ರಯತ್ನ ಪಟ್ಟರೂ ಮರಳು ಚೋರರನ್ನು ಹಿಡಿಯುವಲ್ಲಿ ವಿಫಲರಾಗುತ್ತಿದ್ದಾರೆ. ಗಂಜಳ್ಳಿ ಗ್ರಾಮದ ಬಳಿ ಕೃಷ್ಣಾ ನದಿಯಿಂದ ದಂಧೆಕೋರರು ಟ್ರ್ಯಾಕ್ಟರ್ ಹಾಗೂ ಟಿಪ್ಪರ್ ಗಳಲ್ಲಿ ಹಗಲು, ರಾತ್ರಿ ಮರಳು ಕದಿಯುತ್ತಿದ್ದಾರೆ. ಇದರಿಂದ ಬೇಸತ್ತ ಸಹಾಯಕ ಆಯುಕ್ತರು, ರಸ್ತೆಯನ್ನೇ ಬಂದ್ ಮಾಡಿಸಿದ್ದಾರೆ. ಹೀಗಾಗಿ ದೊಡ್ಡ ವಾಹನಗಳು ನದಿಬಳಿ ತೆರಳದಂತೆ ತಡೆಯಲಾಗಿದೆ.

  • ಅಕ್ರಮ ಮರಳುಗಾರಿಕೆಯಲ್ಲಿ ಎಂಎಲ್‍ಸಿ ಇಟಗಿ ಪುತ್ರ ಭಾಗಿ- 1.20 ಲಕ್ಷ ದಂಡ

    ಅಕ್ರಮ ಮರಳುಗಾರಿಕೆಯಲ್ಲಿ ಎಂಎಲ್‍ಸಿ ಇಟಗಿ ಪುತ್ರ ಭಾಗಿ- 1.20 ಲಕ್ಷ ದಂಡ

    – ಕೊಲೆಯತ್ನ ಆರೋಪ ಪ್ರಕರಣ ದಾಖಲು

    ರಾಯಚೂರು: ವಿಧಾನಪರಿಷತ್ ಸದಸ್ಯ ಬಸವರಾಜ್ ಪಾಟೀಲ್ ಇಟಗಿ ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿದ್ದಾರಾ ಅನ್ನೋ ಅನುಮಾನಗಳು ಈಗ ದಟ್ಟವಾಗಿವೆ. ಇಟಗಿ ಪುತ್ರ ಸುಮನ್ ರಾಯಲ್ಟಿಯಿಲ್ಲದೆ ಅಕ್ರಮ ಮರಳುಗಾರಿಕೆ ಮಾಡಿರುವುದಲ್ಲದೆ ಸ್ವಪಕ್ಷದ ಮುಖಂಡನ ಮೇಲೆ ಗೂಂಡಾಗಿರಿ ಮಾಡಿದ್ದಾನೆ. ಸುಮನ್ ವಿರುದ್ಧ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ದೇವದುರ್ಗ ತಾಲೂಕು ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಶರಣಗೌಡ ಮಾಲಿಪಾಟೀಲ್ ಮೇಲೆ ಹಲ್ಲೆ ಮಾಡಿದ್ದಲ್ಲದೆ, ಮರಳಿನ ಟಿಪ್ಪರ್ ಕಾರಿಗೆ ಡಿಕ್ಕಿ ಹೊಡೆಸಿ ಕೊಲೆಯತ್ನ ಮಾಡಿದ್ದಾನೆ ಅಂದ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಸುಮನ್ ವಿರುದ್ಧ ದೂರು ದಾಖಲಾಗಿದೆ. ರಾಜಕೀಯ ವೈಷಮ್ಯದಿಂದ ಮದರಕಲ್ ಗ್ರಾಮದ ಸರ್ಕಾರಿ ಪ್ರೌಢಶಾಲೆ ಹತ್ತಿರ ಟಿಪ್ಪರ್ ಕಾರಿಗೆ ಡಿಕ್ಕಿ ಹೊಡೆದಿದ್ದು ಚಾಲಕ ಪರಾರಿಯಾಗಿದ್ದಾನೆ. ಇದಕ್ಕೆ ಸುಮನ್ ಕಾರಣ ಅಂತ ಶರಣೆಗೌಡ ಆರೋಪಿಸಿದ್ದಾನೆ. ಚಾಲಕನ ಮೊಬೈಲ್ ಸ್ಥಳದಲ್ಲೇ ಬಿದ್ದಿದ್ದು ಮೊಬೈಲ್ ಗೆ ಕರೆ ಮಾಡಿದ ಸುಮನ್ ಕೊಲೆ ಮಾಡಲು ನಾನೇ ಹೇಳಿದ್ದೆ ಅಂತ ಮಾತನಾಡಿದ್ದಾನೆ. ಬಳಿಕ ಸ್ಥಳಕ್ಕೆ ಬಂದು ನೀನು ರಾಜಕೀಯವಾಗಿ ಬೆಳೆಯಬಾರದು ನೀನು ನಮಗೆ ಎದುರಾಗಿರುವೆ ನಿನ್ನನ್ನ ಪಕ್ಕಾ ಮುಗಿಸುವೆ ಅಂತ ಸುಮನ್ ಧಮ್ಕಿ ಹಾಕಿದ್ದಾನೆ ಅಂತ ಶರಣೇಗೌಡ ದೂರು ದಾಖಲಿಸಿದ್ದಾರೆ.

    ರಾಯಲ್ಟಿ ಇಲ್ಲದೆ ಎರಡು ಟಿಪ್ಪರ್ ಮರಳನ್ನ ಸಾಗಣೆ ಮಾಡುತ್ತಿದ್ದು, ಇದೇ ಟಿಪ್ಪರ್ ನಿಂದ ಕಾರಿಗೆ ಡಿಕ್ಕಿ ಹೊಡೆಯಲಾಗಿದೆ. ಎಂಎಲ್ ಸಿ ಬಸವರಾಜ್ ಪಾಟೀಲ್ ಇಟಗಿ ಹಾಗೂ ಪುತ್ರ ಸುಮನ್ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೆ ನಡೆಸಿದ್ದಾರಾ?? ಇದನ್ನ ಕಂಡೂ ಅಧಿಕಾರಿಗಳು ಯಾಕೆ ಸುಮ್ಮನಿದ್ದಾರೆ ಅನ್ನೋ ಪ್ರಶ್ನೆಗಳು ಎದುರಾಗಿವೆ. ಸದ್ಯ ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಅಧಿಕಾರಿಗಳು ಓವರ್ ಲೋಡ್ ಹಾಗೂ ರಾಯಲ್ಟಿ ಇಲ್ಲದೆ ಮರಳು ಸಾಗಿಸುತ್ತಿದ್ದದ್ದಕ್ಕೆ ಒಂದು ಲಾರಿಗೆ 1 ಲಕ್ಷ 20 ಸಾವಿರ ರೂಪಾಯಿ ದಂಡ ಹಾಕಿ ಬಿಟ್ಟಿದ್ದಾರೆ. ಅಪಘಾತ ಪ್ರಕರಣದಲ್ಲಿ ಇರುವ ಇನ್ನೊಂದು ಟಿಪ್ಪರ್ ನ್ನ ದೇವದುರ್ಗ ಪೊಲೀಸರು ಜಪ್ತಿ ಮಾಡಿದ್ದಾರೆ.

  • ಸಾಗರವನ್ನೇ ಹಿಂದೆ ಸರಿಸಿದ ಕಾಳಿ ನದಿ

    ಸಾಗರವನ್ನೇ ಹಿಂದೆ ಸರಿಸಿದ ಕಾಳಿ ನದಿ

    ಕಾರವಾರ: ಅಬ್ಬರದ ಮಳೆಬಂದ್ರೆ ಭೂ ಕುಸಿತವಾಗುತ್ತೆ, ಇದ್ದ ಜಾಗವೇ ಮಾಯವಾಗುತ್ತೆ ಅಂತದ್ರಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ನಾಲ್ಕು ತಿಂಗಳಿಂದ ಸುರಿದ ಅಬ್ಬರದ ಮಳೆಯಿಂದ ಅರಬ್ಬೀ ಸಮುದ್ರ ಭಾಗದಲ್ಲಿ ಹತ್ತು ಎಕರೆ ಪ್ರದೇಶದಷ್ಟು ಭೂ ಭಾಗ ಸೃಷ್ಟಿಯಾಗಿದ್ದು ಸಮುದ್ರವೇ ಹಿಂದೆಸರಿದಿದೆ.

    ಕಾರವಾರದ ಟಾಗೂರ್ ಕಡಲತಡಿ ನೋಡಲು ಸಾಧಾರಣವಾಗಿ ಕಾಣ್ತಿದೆಯಾದ್ರೂ ಇದರ ಹಿಂದೆ ಇರೋ ಪ್ರಕೃತಿಯ ಕೌತುಕ ಹೊಸ ಸವಾಲುಗಳನ್ನು ಹುಟ್ಟು ಹಾಕುತ್ತಿವೆ. ಕಾಳಿ ನದಿ ಸಂಗಮದ 3 ಕಿಲೋಮೀಟರ್ ವ್ಯಾಪ್ತಿಯಲ್ಲಿ ಸಮುದ್ರವನ್ನೇ ನುಂಗಿ ಹತ್ತು ಎಕರೆಯಷ್ಟು ಹೊಸ ಭೂಭಾಗ ನಿರ್ಮಾಣವಾಗಿದೆ.

    ನದಿಯೊಂದಿಗೆ ಹೆಚ್ಚಿನ ಪ್ರಮಾಣದ ಮರಳು ಕಡಲತಡಿಯನ್ನು ಸೇರುತ್ತಿದೆ. ಇದರಿಂದ ಕಾಳಿ ನದಿ ಪ್ರದೇಶದ ಅಳವೆಗಳು ಮುಚ್ಚಿಹೋಗುವ ಭಯ ಸ್ಥಳೀಯರನ್ನು ಕಾಡುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯೇ ಇದಕ್ಕೆ ಕಾರಣ ಎನ್ನಲಾಗ್ತಿದೆ.

    ಮರಳಿನ ಭೂಮಿ ನಿರ್ಮಾಣವಾಗಿ ಅರಬ್ಬಿ ಸಮುದ್ರವೇ ಹಿಂದೆ ಸರಿದಿದ್ದು, ಮರಳು ಹೇರಳವಾಗಿ ಸಂಗ್ರಹವಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ನಿರಂತರ ಅಬ್ಬರದ ಮಳೆಯ ಪ್ರಭಾವವೇ ಇದಕ್ಕೆ ಕಾರಣ ಎಂದು ಕಡಲ ಜೀವಶಾಸ್ತ್ರಜ್ಞರಾದ ಡಾ.ಜಗನ್ನಾಥ್ ರಾಥೋಡ್ ಹೇಳುತ್ತಾರೆ.

    ಅಕ್ರಮ ಮರಳುಗಾರಿಕೆಯಿಂದ ಸಹ ಕಡಲತಡಿಯಲ್ಲಿ ಮರಳು ಸಂಗ್ರಹವಾಗ್ತಿದೆ ಎಂಬ ಮಾತು ಇದೆ. ಈ ಮಟ್ಟದಲ್ಲಿ ಮರಳು ಸಂಗ್ರಹವಾದರೆ ನದಿಯ ಹರಿಯುವ ದಿಕ್ಕು ಬದಲಾಗಿ ದೊಡ್ಡ ಹಾನಿಯಾಗಬಹುದೆಂಬ ಆತಂಕವೂ ಇದೆ.

  • ಅಕ್ರಮ ಮರಳುಗಾರಿಕೆ ತಡೆಯಲು ಹೋದ ಅರಣ್ಯ ಸಿಬ್ಬಂದಿಗೆ ಮಾರಣಾಂತಿಕ ಹಲ್ಲೆ

    ಅಕ್ರಮ ಮರಳುಗಾರಿಕೆ ತಡೆಯಲು ಹೋದ ಅರಣ್ಯ ಸಿಬ್ಬಂದಿಗೆ ಮಾರಣಾಂತಿಕ ಹಲ್ಲೆ

    ಕಾರವಾರ: ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಮರಳುಗಾರಿಕೆ ಮಾಡುತ್ತಿರುವುದನ್ನು ತಡೆಯಲು ಹೋದ ಅರಣ್ಯ ಪಾಲಕನ ಮೇಲೆ ನಾಲ್ಕೈದು ಜನ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

    ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ವಿರ್ನೋಲಿ ಅರಣ್ಯ ಪ್ರದೇಶದಲ್ಲಿ ಘಟನೆ ನಡೆದಿದ್ದು, ಸಂದೀಪ್ ಗೌಡ ಹಲ್ಲೆಗೊಳಗಾದ ಅರಣ್ಯ ಸಿಬ್ಬಂದಿ. ಅಕ್ರಮ ಮರಳುಗಾರಿಗೆ ಕುರಿತು ಮಾಹಿತಿ ಹಿನ್ನೆಲೆ ತಡೆಯಲು ಹೋದ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆಯೇ ನಾಲ್ಕೈದು ಜನರ ತಂಡ ಮಾರಣಾಂತಿಕ ಹಲ್ಲೆ ನಡೆಸಿದೆ. ಅರಣ್ಯ ಪಾಲಕನಿಗೆ ತಲೆಗೆ ಬಲವಾದ ಏಟು ಬಿದ್ದಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

     

    ತಲೆಗೆ ಹೆಚ್ಚಿನ ಹೊಡೆತ ಬಿದ್ದಿದ್ದು, ದಾಂಡೇಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ದಾಂಡೇಲಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ. ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಈ ಭಾಗದಲ್ಲಿ ಅಕ್ರಮ ಮರಳುಗಾರಿಕೆ ಅವ್ಯಾಹತವಾಗಿ ನಡೆಯುತ್ತಿದ್ದು, ಎಷ್ಟೇ ಕ್ರಮ ಕೈಗೊಂಡರೂ ನಿಲ್ಲುತ್ತಿಲ್ಲ. ಇದೀಗ ಅರೋಪಿಗಳು ಅರಣ್ಯ ಸಿಬ್ಬಂದಿ ಮೇಲೆಯೇ ಹಲ್ಲೆ ನಡೆಸುತ್ತಿದ್ದಾರೆ.

  • ಸ್ನೇಹಿತನನ್ನೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ಗೆಳೆಯರು

    ಸ್ನೇಹಿತನನ್ನೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ಗೆಳೆಯರು

    – ಮೂವರ ಮೇಲೆ ಮಾರಣಾಂತಿಕ ಹಲ್ಲೆ

    ಮಂಗಳೂರು: ಬಜಪೆ ಠಾಣಾ ವ್ಯಾಪ್ತಿಯ ಎಕ್ಕಾರು ದೇವರಗುಡ್ಡೆಯಲ್ಲಿ ತಂಡವೊಂದು ಮೂವರು ಯುವಕರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಓರ್ವ ಹತ್ಯೆಗೀಡಾಗಿ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಭಾನುವಾರ ರಾತ್ರಿ ನಡೆದಿದೆ.

    ಕೊಲೆಯಾದ ಯುವಕನನ್ನು ಮಂಗಳೂರಿನ ಮರಕಡ ನಿವಾಸಿ ಕಿರ್ತನ್ (20) ಹಾಗೂ ಗಾಯಗೊಂಡವರನ್ನು ನಿತಿನ್ (20), ಮಣೇಶ್ (20) ಎಂದು ಗುರುತಿಸಲಾಗಿದೆ. ಗಾಂಜಾ ಮತ್ತು ಅಕ್ರಮ ಮರಳುಗಾರಿಕೆ ಘಟನೆಗೆ ಕಾರಣ ಎನ್ನಲಾಗಿದೆ.

    ಭಾನುವಾರ ರಾತ್ರಿ ಸುಮಾರು 9.30 ಗಂಟೆಗೆ ಎಕ್ಕಾರು ಪಂಚಾಯತ್ ವ್ಯಾಪ್ತಿಯ ದೇವರಗುಡ್ಡೆ ಸರ್ಕಲ್ ಬಳಿ ಕೀರ್ತನ್ , ಮಣೇಶ್ ಹಾಗೂ ನಿತಿನ್ ನಿಂತಿದ್ದು, ಈ ಸಂದರ್ಭ ಅಲ್ಲಿಗೆ ಬಂದ ಮೂವರ ತಂಡದ ಮಧ್ಯೆ ಮಾತಿನ ಚಕಾಮಕಿ ನಡೆದಿದೆ. ಇದು ಮುಂದುವರಿದು ಕೀರ್ತನ್, ನಿತಿನ್ ಮತ್ತು ಮಣೇಷ್ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಪರಾರಿಯಾಗಿದೆ.

    ಈ ಮೂವರನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸುವಾಗ ಕೀರ್ತನ್ ಸಾವನ್ನಪ್ಪಿದ್ದಾನೆ. ಈ ಸಂಬಂಧ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಅಕ್ರಮ ಮರಳು ದಂಧೆಗೆ ಕೆಲ ರಾಜಕೀಯ ವ್ಯಕ್ತಿಗಳ ಅಭಯ ಹಸ್ತವಿದೆ. ಇತ್ತೀಚೆಗೆ ಬಜಪೆಯ ಉದ್ಯಮಿಯೋರ್ವರು ರಾತ್ರಿ ಹಗಲೆನ್ನದೆ ಈ ಮರಳುಗಾರಿಕೆಯಲ್ಲಿ ತೊಡಗಿದ್ದು, ಬಿಜೆಪಿಯ ಪ್ರಭಾವಿ ವ್ಯಕ್ತಿ ಇದಕ್ಕೆ ಸಹಕಾರ ನೀಡಿದ್ದರು ಅನ್ನೋ ಮಾತು ಕೇಳಿ ಬಂದಿದೆ. ಮಾತ್ರವಲ್ಲದೆ ಜಿಲ್ಲೆಯಲ್ಲಿ ಹಲವು ಕಡೆಗಳಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು, ಇದೀಗ ಕರಾವಳಿಯ ನದಿಗಳು ಅಕ್ರಮ ದಂಧೆಕೊರರಿಗೆ ಚಿನ್ನದ ಮೊಟ್ಟೆ ಇಡುವ ಕೊಳಿಯಂತಾಗಿದೆ. ಇದನ್ನು ನಿಯಂತ್ರಿಸದಿದ್ದಲ್ಲಿ ಇಂತಹ ಘಟನೆಗಳು ಮತ್ತೆ ಮರುಕಳಿಸುತ್ತದೆ ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

  • ಅಕ್ರಮ ಮರಳುಗಾರಿಕೆಯಿಂದಾದ ಗುಂಡಿಯಲ್ಲಿ ಬಿದ್ದು ಯುವತಿ ಸಾವು

    ಅಕ್ರಮ ಮರಳುಗಾರಿಕೆಯಿಂದಾದ ಗುಂಡಿಯಲ್ಲಿ ಬಿದ್ದು ಯುವತಿ ಸಾವು

    ರಾಯಚೂರು: ಅಕ್ರಮ ಮರಳುಗಾರಿಕೆಯಿಂದ ಉಂಟಾದ ಗುಂಡಿಯಲ್ಲಿ ಬಿದ್ದು ಯುವತಿ ಸಾವನ್ನಪ್ಪಿರುವ ಘಟನೆ ರಾಯಚೂರಿನ ದೇವದುರ್ಗದ ಜೋಳದಹೆಡಗಿ ಬಳಿ ನಡೆದಿದೆ.

    ಶ್ರೀದೇವಿ (18) ಮೃತ ದೈರ್ದೈವಿ. ಕೃಷ್ಣ ನದಿ ದಂಡೆಯಲ್ಲಿ ಉಂಟಾಗಿದ್ದ ಗುಂಡಿಯಲ್ಲಿ ಬಿದ್ದು ಯುವತಿ ಸಾವನ್ನಪ್ಪಿದ್ದಾಳೆ. ದನ ಮೇಯಿಸಲು ಹೋಗಿದ್ದಾಗ ನೀರು ಕುಡಿಯಲು ಹೋಗಿದ್ದ ಶ್ರೀದೇವಿ ಗುಂಡಿ ಬಳಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾಳೆ. ಅಕ್ರಮ ಮರಳುಗಾರಿಕೆ ಪರಿಣಾಮ ನಿರ್ಮಾಣವಾದ ಗುಂಡಿ ಯುವತಿಯನ್ನ ಬಲಿ ತೆಗೆದುಕೊಂಡಿದೆ. ನಿಯಮ ಬಾಹಿರವಾಗಿ ಸುಮಾರು 15 ಅಡಿ ಆಳಕ್ಕೆ ತೋಡಿ ಮರಳು ತೆಗೆದ ಪರಿಣಾಮ ಗುಂಡಿ ಉಂಟಾಗಿತ್ತು.

    ಗುಂಡಿಯಲ್ಲಿ ನೀರು ಆಳವಾಗಿ ತುಂಬಿಕೊಂಡಿದ್ದರಿಂದ ಯುವತಿ ಸಾವನ್ನಪ್ಪಿದ್ದಾಳೆ. ಸ್ಥಳೀಯರ ಸಹಾಯದೊಂದಿಗೆ ಪೊಲೀಸರು ಶವವನ್ನ ಹೊರತೆಗೆದಿದ್ದಾರೆ. ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ರಾಯಚೂರಿನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಲಕ್ಷಾಂತರ ರೂ. ಮೌಲ್ಯದ ಮರಳು ಜಪ್ತಿ

    ರಾಯಚೂರಿನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಲಕ್ಷಾಂತರ ರೂ. ಮೌಲ್ಯದ ಮರಳು ಜಪ್ತಿ

    ರಾಯಚೂರು: ಅಕ್ರಮ ಮರಳು ಸಂಗ್ರಹಗಳ ಮೇಲೆ ದಾಳಿ ನಡೆಸಿ ಲಕ್ಷಾಂತರ ರೂ. ಬೆಲೆ ಬಾಳುವ ಮರಳನ್ನು ದೇವದುರ್ಗ ಠಾಣೆಯ ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿರುವ ದೇವದುರ್ಗ ಠಾಣೆ ಪೊಲೀಸರು ತಾಲೂಕಿನ ನಿಲುವಂಜಿಯಲ್ಲಿ 7 ಲಕ್ಷ ರೂ. ಮೌಲ್ಯದ 1,400 ಮೆಟ್ರಿಕ್ ಟನ್ ಮರಳನ್ನು ವಶಪಡಿಸಿಕೊಂಡಿದ್ದಾರೆ. ಹೂವಿನಹೆಡಗಿಯ ಬಸಪ್ಪ ಅಕ್ರಮವಾಗಿ ನಿಲುವಂಜಿ ಗ್ರಾಮದ ಜಮೀನೊಂದರಲ್ಲಿ ಮರಳು ಸಂಗ್ರಹಿಟ್ಟಿದ್ದ. ದೇವದುರ್ಗ ಪೊಲೀಸರು ಜಮೀನಿನ ಮೇಲೆ ದಾಳಿ ಮಾಡಿ ಮರಳನ್ನು ಜಪ್ತಿ ಮಾಡಿದ್ದಾರೆ. ಆರೋಪಿ ಬಸಪ್ಪನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

    ಜಿಲ್ಲೆಯ ದೇವದುರ್ಗ ತಾಲೂಕಿನ ಕೃಷ್ಣಾ ನದಿದಂಡೆ ಗ್ರಾಮಗಳಲ್ಲಿ ಅಕ್ರಮ ಮರಳುಗಾರಿಕೆ ಮಿತಿಮೀರಿ ನಡೆಯುತ್ತಿದೆ. ಪರವಾನಿಗೆಯಿಲ್ಲದೆ ಮರಳುಗಾರಿಕೆ ನಡೆಸಿ ಜಮೀನುಗಳಲ್ಲಿ ಅಕ್ರಮವಾಗಿ ಮರಳು ಸಂಗ್ರಹಿಸಲಾಗುತ್ತಿದೆ.

    ಅಕ್ರಮ ಮರಳುಗಾರಿಕೆ ತಡೆಯಲು ಜಿಲ್ಲಾಡಳಿತ ಏನೆಲ್ಲಾ ಕ್ರಮಗಳನ್ನ ಕೈಗೊಂಡಿದ್ದರೂ ಮರಳು ಮಾಫಿಯಾ ಮಾತ್ರ ಜಿಲ್ಲೆಯಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ. ಹಗಲು ಮಾತ್ರವಲ್ಲದೆ ರಾತ್ರಿಯೂ ಸಹ ನಿಯಮಬಾಹಿರವಾಗಿ ಮರಳುಗಾರಿಕೆ ನಡೆಸಿ ಹೊರ ಜಿಲ್ಲೆ, ರಾಜ್ಯಗಳಿಗೆ ಮರಳನ್ನು ಸಾಗಿಸಲಾಗುತ್ತಿದೆ. ದೇವದುರ್ಗ, ಮಾನ್ವಿ, ರಾಯಚೂರು ತಾಲೂಕಿನಲ್ಲಿ ಅಕ್ರಮ ಮರಳುಗಾರಿಕೆ ಮಿತಿ ಮೀರಿ ನಡೆದಿದೆ. ಆದರೆ ಅಲ್ಲೊಂದು ಇಲ್ಲೊಂದು ಪ್ರಕರಣಗಳು ಮಾತ್ರ ದಾಖಲಾಗುತ್ತಿವೆ.