Tag: ಅಕ್ರಮ ಮದ್ಯ

  • ಲಕ್ಷಾಂತರ ರೂ. ಮೌಲ್ಯದ ಅಕ್ರಮ ಮದ್ಯ ಜಪ್ತಿ

    ಲಕ್ಷಾಂತರ ರೂ. ಮೌಲ್ಯದ ಅಕ್ರಮ ಮದ್ಯ ಜಪ್ತಿ

    ರಾಯಚೂರು: ಅಬಕಾರಿ ಇಲಾಖೆ ಅಧಿಕಾರಿಗಳು ಲಕ್ಷಾಂತರ ರೂ. ಮೌಲ್ಯದ ಅಕ್ರಮ ಮದ್ಯವನ್ನು ಜಪ್ತಿ ಮಾಡಿಕೊಂಡಿದ್ದಾರೆ.

    ಶಿವರಾಜ್ ಎಂಬವರ ಹೋಟೆಲ್‍ನಲ್ಲಿ ಅಕ್ರಮವಾಗಿ ಮದ್ಯ ಸಂಗ್ರಹಿಸಿ ಇಡಲಾಗಿತ್ತು. ಖಚಿತ ಮಾಹಿತಿ ಪಡೆದ ಅಬಕಾರಿ ಇಲಾಖೆ ಅಧಿಕಾರಿಗಳು ರಾಯಚೂರಿನ ಲಿಂಗಸುಗೂರಿನ ಮುದಗಲ್‍ನ ಹೋಟೆಲ್ ಮೇಲೆ ದಾಳಿ ನಡೆಸಿ ಅಕ್ರಮ ಮದ್ಯಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    7,800 ಲೀಟರ್ ಬಿಯರ್ ಹಾಗೂ 163 ಲೀಟರ್ ಲಿಕ್ಕರ್ ಸೇರಿದಂತೆ ಲಕ್ಷಾಂತರ ರೂ. ಅಕ್ರಮವಾಗಿ ಸಂಗ್ರಹಿಸಿಟ್ಟ ಮದ್ಯವನ್ನು ಅಬಕಾರಿ ಇಲಾಖೆ ವಶಕ್ಕೆ ಪಡೆದುಕೊಂಡಿದೆ.

    ಲಿಂಗಸುಗೂರು ಅಬಕಾರಿ ನಿರೀಕ್ಷರ ನೇತೃತ್ವದಲ್ಲಿ ದಾಳಿ ನಡೆದಿದ್ದು, ಅಧಿಕಾರಿಗಳು ಆರೋಪಿ ಶಿವರಾಜ್ ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಬಕಾರಿ ಇಲಾಖೆ ಅಧಿಕಾರಿ ಮಂಜುನಾಥ್ ಹಾಗೂ ಶಿವಾನಂದ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

  • ಅಕ್ರಮ ಮದ್ಯ ಮಾರಾಟದ ಆರೋಪ – ಅಬಕಾರಿ ಇಲಾಖೆಯ ವಾಹನದಲ್ಲೇ ವ್ಯಕ್ತಿ ಸಾವು

    ಅಕ್ರಮ ಮದ್ಯ ಮಾರಾಟದ ಆರೋಪ – ಅಬಕಾರಿ ಇಲಾಖೆಯ ವಾಹನದಲ್ಲೇ ವ್ಯಕ್ತಿ ಸಾವು

    ಬಳ್ಳಾರಿ: ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾನೆ ಎನ್ನುವ ಆರೋಪದ ಅಂಗಡಿ ಮೇಲೆ ಅಬಕಾರಿ ಇಲಾಖೆಯ ದಾಳಿ ಮಾಡಿದ್ದು, ಬಳಿಕ ವ್ಯಕ್ತಿಯನ್ನು ವಶಕ್ಕೆ ಪಡೆದು ಕರೆದುಕೊಂಡು ಹೋಗುವಾಗ ಕೊನೆಯುಸಿರೆಳೆದಿರುವ ಘಟನೆ ಬಳ್ಳಾರಿ ತಾಲೂಕಿನಲ್ಲಿ ನಡೆದಿದೆ.

    ತಿಪುನಾಯ್ಕ್, ಹಲಕುಂದಿ ಗ್ರಾಮದ ಪುಟ್ಟ ಅಂಗಡಿಯೊಂದನ್ನಿಟ್ಟು ಜೀವನ ಸಾಗಿಸುತ್ತಿದ್ದರು. ತನ್ನ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪ ಇವರ ಮೇಲೆ ಕೇಳಿ ಬಂದಿತ್ತು. ಆದ್ದರಿಂದ ತಿಪುನಾಯ್ಕ್ ನ ಅಂಗಡಿ ಮೇಲೆ ಬಳ್ಳಾರಿ ಅಬಕಾರಿ ಇಲಾಖೆಯ ಪೊಲೀಸರು ದಾಳಿ ಮಾಡಿ ಅಂಗಡಿಯಲ್ಲಿದ್ದ ತಿಪುನಾಯ್ಕ್ ನ ಕೊರಳ ಪಟ್ಟಿ ಹಿಡಿದು ಅಮಾನವೀಯವಾಗಿ ಎಳೆದು ತಮ್ಮ ವಾಹನದಲ್ಲಿ ಕೂರಿಸಿಕೊಂಡಿದ್ದಾರೆ.

    ಅಬಕಾರಿ ಇಲಾಖೆಯ ವಾಹನ ಸ್ವಲ್ಪ ಮುಂದೆ ಹೋಗುತ್ತಿದ್ದಂತೆ ತಿಪುನಾಯ್ಕ್ ಕೊನೆಯುಸಿರೆಳೆದಿದ್ದಾರೆ. ಅಬಕಾರಿ ಇಲಾಖೆಯ ಅಧಿಕಾರಿಗಳು ತಿಪುನಾಯ್ಕ್ ನ ಅಂಗಡಿ ಮೇಲೆ ದಾಳಿ ಮಾಡಿ ತಿಪುನಾಯ್ಕ್ ನಿಗೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದ ಪರಿಣಾಮ ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ ಎಂದು ಮೃತರ ಸಂಬಂಧಿಕರು ಆರೋಪಿಸುತ್ತಿದ್ದಾರೆ.

    ತಿಪುನಾಯ್ಕ್ ಮೂಲತಃ ಬಳ್ಳಾರಿ ತಾಲೂಕಿನ ಹೊನ್ನಳ್ಳಿ ತಾಂಡದವರು. ಇವರಿಗೆ ನಾಲ್ಕು ಜನ ಹೆಣ್ಣು ಮಕ್ಕಳು ಹಾಗೂ ಓರ್ವ ಗಂಡು ಮಗನಿದ್ದಾನೆ. ಜೀವನಕ್ಕೆಂದು ಊರು ತೊರೆದು ಹಲಕುಂದಿ ಗ್ರಾಮಕ್ಕೆ ಬಂದು ಸೇರಿದ್ದು, ಜೀವನೋಪಾಯಕ್ಕೆ ಪುಟ್ಟ ಅಂಗಡಿಯನ್ನಿಟ್ಟು ಜೀವನ ಸಾಗಿಸುತ್ತಿದ್ದರು.

    ಆದರೆ ಅಕ್ರಮ ಮದ್ಯ ಮಾರಾಟ ಮಾಡುತ್ತಾರೆ ಅನ್ನೊ ಆರೋಪಕ್ಕೆ ಇವರ ಅಂಗಡಿ ಮೇಲೆ ದಾಳಿ ಮಾಡಿದ ಬಳ್ಳಾರಿಯ ಅಬಕಾರಿ ಪೊಲೀಸರು, ಕಾನೂನು ರೀತಿ ಕ್ರಮ ತೆಗೆದುಕೊಳ್ಳುವುದು ಬಿಟ್ಟು ಕಾನೂನನ್ನ ಕೈಗೆತ್ತಿಕೊಂಡು ಇಡೀ ಅಬಕಾರಿ ಇಲಾಖೆಯೇ ತಲೆ ತಗ್ಗಿಸುವಂತಹ ಕೆಲಸ ಮಾಡಿದ್ದಾರೆ.

  • ಅಬಕಾರಿ ಅಧಿಕಾರಿಗಳಿಗೆ ಸಚಿವ ರೇವಣ್ಣ ಖಡಕ್ ಸೂಚನೆ

    ಅಬಕಾರಿ ಅಧಿಕಾರಿಗಳಿಗೆ ಸಚಿವ ರೇವಣ್ಣ ಖಡಕ್ ಸೂಚನೆ

    ಹಾಸನ: ಅಕ್ರಮ ಮದ್ಯ ಮಾರಾಟ ಕೂಡಲೇ ತಡೆಗಟ್ಟಬೇಕು ಎಂದು ಲೋಕೋಪಯೋಗಿ ಸಚಿವ ರೇವಣ್ಣ ಅವರು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಖಡಕ್ ಸೂಚನೆ ಕೊಟ್ಟಿದ್ದಾರೆ.

    ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಚಿವ ಹೆಚ್.ಡಿ.ರೇವಣ್ಣ, ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟವನ್ನು ಕೂಡಲೇ ತಡೆಗಟ್ಟಬೇಕು ಎಂದು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದೇನೆ. ಇವತ್ತು ಗ್ರಾಮೀಣ ಪ್ರದೇಶದಲ್ಲಿ ಎಲ್ಲೆಲ್ಲಿ ಬೇಕೋ ಅಲ್ಲಲ್ಲಿ ಪೆಟ್ಟಿಗೆ ಅಂಗಡಿ ಇಟ್ಟುಕೊಂಡು ಬಡವರಿಗೆ ಕಷ್ಟಕೊಡುತ್ತಿದ್ದಾರೆ. ಒಂದು ವೇಳೆ ಅಬಕಾರಿ ಇಲಾಖೆ ಅಧಿಕಾರಿಗಳು ಕಟ್ಟುನಿಟ್ಟಾಗಿ ಕ್ರಮ ತೆಗೆದುಕೊಂಡಿಲ್ಲ ಎಂದರೆ ಬೆಂಗಳೂರಿನಿಂದಲೇ ವಿಶೇಷ ತಂಡ ಕರೆಸುವೆ ಎಂದು ಅಬಕಾರಿ ಅಧಿಕಾರಿಗಳಿಗೆ ಎಚ್ಚರಿಕೆ ಕೊಟ್ಟಿದ್ದಾರೆ.

    ಹಳ್ಳಿಯಲ್ಲಿ ಎಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೋ ಅವರನ್ನು ಒಂದು ವಾರದಲ್ಲಿ ಪತ್ತೆಮಾಡಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಯಾರ ಅಂಗಡಿಯಿಂದ ಮದ್ಯ ಹೋಗಿರುತ್ತದೋ ಅಂತಹ ಅಂಗಡಿಯನ್ನು 30 ದಿನ ಸೀಜ್ ಮಾಡಿಸುತ್ತೇನೆ. ಬಳಿಕ ಅಂಗಡಿಯ ಪರವಾನಿಗೆಯನ್ನು ಕ್ಯಾನ್ಸಲ್ ಮಾಡಿಸುತ್ತೇನೆ. ಒಂದು ವೇಳೆ ಇಲ್ಲಿನ ಅಧಿಕಾರಿಗಳು ಕೆಲಸ ಮಾಡಿಲ್ಲ ಎಂದರೆ ಬೆಂಗಳೂರಿನಿಂದ ಅಧಿಕಾರಿಗಳನ್ನು ಕಳುಹಿಸಬೇಕಾಗುತ್ತದೆ ಎಂದರು.

    ಪರವಾನಗಿ ಇದ್ದರೆ ಮಾರಾಟ ಮಾಡಲು ಅಭ್ಯಂತರವಿಲ್ಲ. ಆದರೆ ಗ್ರಾಮೀಣ ಭಾಗದ ಬಡವರಿಗೆ ತೊಂದರೆಯಾಗಬಾರದು ಎನ್ನುವುದೇ ನಮ್ಮ ಉದ್ದೇಶವಾಗಿದೆ. ಅವರು ಪ್ರತಿದಿನ ಕುಡಿದು ಹೆಂಡತಿ, ಮಕ್ಕಳಿಗೆ ಹೊಡೆಯುವುದು ಇದೆಲ್ಲ ಆಗಬಾರದು. ಈಗಾಗಲೇ ನಾನು ಎಸ್‍ಪಿ ಅವರಿಗೂ ಹೇಳಿದ್ದೇನೆ. ಅಬಕಾರಿ ಅಧಿಕಾರಿಗಳ ಜೊತೆಗೆ ಪೊಲೀಸರೂ ಕಾರ್ಯ ಪ್ರವೃತ್ತರಾಗಬೇಕು. ಜನರು ನೆಮ್ಮದಿಯಿಂದ ಇರಬೇಕು ಅಷ್ಟೇ ಎಂದು ರೇವಣ್ಣ ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಕ್ರಮವಾಗಿ ಸಾಗಿಸುತ್ತಿದ್ದ 4.50 ಲಕ್ಷ ಮೌಲ್ಯದ ಗೋವಾ ಪೆನ್ನಿ ವಶ!

    ಅಕ್ರಮವಾಗಿ ಸಾಗಿಸುತ್ತಿದ್ದ 4.50 ಲಕ್ಷ ಮೌಲ್ಯದ ಗೋವಾ ಪೆನ್ನಿ ವಶ!

    ಕಾರವಾರ: ಅಕ್ರಮವಾಗಿ ಸಾಗಿಸುತ್ತಿದ್ದ ಗೋವಾ ಮದ್ಯ(ಫೆನ್ನಿ)ವನ್ನು ಉತ್ತರ ಕನ್ನಡ ಜಿಲ್ಲೆಯ ಕಾರವಾರದ ದಾಂಡೇಭಾಗ್ ಗ್ರಾಮದಲ್ಲಿ ವಶಕ್ಕೆ ಪಡೆದು ಓರ್ವನನ್ನು ಅಬಕಾರಿ ಪೊಲೀಸರು ಬಂಧಿಸಿದ್ದಾರೆ.

    ಗಜಾನನ ಕೃಷ್ಣ ಕದಂಬ ಬಂಧಿತ ಆರೋಪಿಯಾಗಿದ್ದಾನೆ. ಈತ ಅಕ್ರಮವಾಗಿ ಗೋವಾ ಮದ್ಯವನ್ನು ಸಾಗಿಸುತ್ತಿದ್ದ ವೇಳೆ ಅಬಕಾರಿ ಇಲಾಖೆ ಕಾರ್ಯಾಚರಣೆ ನಡೆಸಿ ಓಮ್ನಿ ಸಹಿತ ಅಕ್ರಮ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.

    ಬಂಧಿತನಿಂದ ಸುಮಾರು 4,50,000 ರೂಪಾಯಿ ಮೌಲ್ಯದ ಗೋವಾದ ಮದ್ಯ(ಪೆನ್ನಿ)ವನ್ನು ವಶಪಡಿಸಕೊಂಡಿದ್ದಾರೆ. ಕಾರವಾರದ ಅಬಕಾರಿ ನಿರೀಕ್ಷಕರಾದ ರೇವಣ ಸಿದ್ದಪ್ಪ ನೇತೃತ್ವದಲ್ಲಿ ದಾಳಿ ನಡೆದಿದ್ದು, ಘಟನೆ ಸಂಬಂಧ ಕಾರವಾರ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅಕ್ರಮ ಮದ್ಯಕ್ಕೆ ಬ್ರೇಕ್ ಹಾಕಿ ಸಂಸಾರ ಉಳಿಸಿಕೊಳ್ಳಲು ಟೊಂಕ ಕಟ್ಟಿ ನಿಂತ್ರು ಮಹಿಳೆಯರು!

    ಅಕ್ರಮ ಮದ್ಯಕ್ಕೆ ಬ್ರೇಕ್ ಹಾಕಿ ಸಂಸಾರ ಉಳಿಸಿಕೊಳ್ಳಲು ಟೊಂಕ ಕಟ್ಟಿ ನಿಂತ್ರು ಮಹಿಳೆಯರು!

    ಗದಗ: ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ ತಮ್ಮ ತಮ್ಮ ಸಂಸಾರವನ್ನು ಉಳಿಸಿಕೊಳ್ಳಲು ಗದಗ ತಾಲೂಕಿನ ಹಾತಲಗೇರಿ ಗ್ರಾಮ ಮಹಿಳೆಯರು ಟೊಂಕ ಕಟ್ಟಿ ನಿಂತಿದ್ದಾರೆ.

    ಮುಂಜಾನೆ ಕೋಳಿ ಕೂಗೋದೇ ತಡ ಮನೆಯ ಗಂಡಸರು ಮದ್ಯದ ಅಂಗಡಿಯಲ್ಲಿ ಹಾಜರಿರುತ್ತಾರೆ. ಅಷ್ಟೇ ಅಲ್ಲದೇ ಬೆಳ್ಳಂಬೆಳಗ್ಗೆ ಪಾನ ಮತ್ತರಾಗಿರುತ್ತಾರೆ. ಇದನ್ನೆಲ್ಲಾ ನೋಡಿ ಆಕ್ರೋಶಗೊಂಡ ಮಹಿಳೆಯರು ಮದ್ಯ ಮಾರಾಟವನ್ನು ನಿಲ್ಲಿಸಲು ಮಾರಾಟಗಾರರ ಮನೆಗೆ ನುಗ್ಗಿ ಅಕ್ರಮ ಮದ್ಯವನ್ನು ಚರಂಡಿಗೆ ಸುರಿದು ಬಾಟಲ್‍ಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ಮಾಡಿದ್ದಾರೆ.

    ಗ್ರಾಮದ ನಿವಾಸಿಗಳಾದ ಸೂರಪ್ಪ ಹಾಗೂ ಬಸವರಾಜ ಮಾನೇದ ಎಂಬುವರು ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದರು. ನಾವು ಎಷ್ಟು ಹೇಳಿದರೂ ಅಕ್ರಮ ಮಾರಾಟವನ್ನು ನಿಲ್ಲಿಸಲಿಲ್ಲ. ಆದ್ದರಿಂದ ಅವರ ಮೇಲೆ ಹಲ್ಲೆಗೆ ಯತ್ನಿಸಿದೆವು. ಈ ಸಂದರ್ಭದಲ್ಲಿ ಮದ್ಯ ಮಾರಾಟಗಾರರ ಕುಟುಂಬಸ್ಥರಿಂದ ತೀವ್ರ ವಿರೋಧ ವ್ಯಕ್ತಪಡಿಸಿದರು. ನಂತರ ನಾವು ಇದರಿಂದ ನಮ್ಮ ಕುಟುಂಬಗಳು ಹಾಳಾಗುತ್ತಿದೆ. ನಮ್ಮ ಮಾಂಗಲ್ಯ ಉಳಿಸಿ ಎಂದು ಅಂಗಲಾಚಿದೆವು ಎಂದು ಗ್ರಾಮಸ್ಥೆ ಮಲ್ಲಮ್ಮ ತಿಳಿಸಿದ್ದಾರೆ.

    ಅಕ್ರಮ ಮದ್ಯ ದಂಧೆಕೋರರನ್ನು ಹಿಗ್ಗಾ ಮುಗ್ಗಾ ಎಳೆದಾಡಿ ಗಲಾಟೆ ನಡೆಸಿದ್ದು, ಮನೆಗೆ ನುಗ್ಗಿ ಹಲ್ಲೆಗೆ ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಮನೆಯ ಸದಸ್ಯರ ಮತ್ತು ಗ್ರಾಮಸ್ಥರ ನಡುವೆ ತೀವ್ರ ಮಾತಿನ ಚಕಮಕಿ ನಡೆದು ಜಗಳ ಆರಂಭವಾಯಿತು. ನಂತರ ಆಕ್ರೋಶಗೊಂಡ ಮಹಿಳೆಯರು ಮದ್ಯವನ್ನು ಚರಂಡಿಗೆ ಸುರಿದು, ಬೆಂಕಿ ಹಚ್ಚಿ ಆಕ್ರೋಶವನ್ನು ವ್ಯಕ್ತಪಡಿಸಿದ ಜನರು ಇನ್ನು ಮುಂದೆ ಮಾರಾಟ ಮಾಡಿದರೆ ಮನೆಗೆ ಬೆಂಕಿ ಹಚ್ಚುವುದಾಗಿ ಬೆದರಿಕೆಯೊಡ್ಡಿದ್ದಾರೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳು ಸಹ ಈ ದಂಧೆಕೋರರ ಜೊತೆ ಶಾಮಿಲಾಗಿದ್ದಾರೆ ಎಂದು ಸ್ಥಳೀಯ ನಿವಾಸಿ ಸತೀಶ್ ಆರೋಪಿಸಿದರು.

    ಈ ಅಕ್ರಮ ಮದ್ಯ ಮಾರಾಟ ಕಳೆದ ಎರಡು-ಮೂರು ವರ್ಷಗಳಿಂದ ಹಲವಾರು ಗ್ರಾಮದಲ್ಲಿ ನಡೆಯುತ್ತಿದ್ದು, ಅಧಿಕಾರಿಗಳು ದಂಧೆಕೋರರಿಂದ ಕಮೀಷನ್ ತೆಗೆದುಕೊಂಡು ಈ ಅವ್ಯವಹಾರಕ್ಕೆ ಬೆಂಬಲ ನೀಡುತ್ತಿದ್ದಾರೆ. ಇದರ ಬಗ್ಗೆ ಪ್ರಾಮಾಣಿಕ ತನಿಖೆ ಆಗಬೇಕು. ಅಷ್ಟೇ ಅಲ್ಲದೇ ಹಾತಲಗೇರಿ ಗ್ರಾಮವನ್ನು ಮದ್ಯ ಮುಕ್ತ ಗ್ರಾಮವನ್ನಾಗಿ ಮಾಡಬೇಕೆಂದು ಜನರು ಆಗ್ರಹಿಸುತ್ತಿದ್ದಾರೆ.

  • ಕಳ್ಳಬಟ್ಟಿ ಅಡ್ಡೆ ಮೇಲೆ ದಾಳಿ- 4 ಲೀಟರ್ ಸಾರಾಯಿ ವಶ

    ಕಳ್ಳಬಟ್ಟಿ ಅಡ್ಡೆ ಮೇಲೆ ದಾಳಿ- 4 ಲೀಟರ್ ಸಾರಾಯಿ ವಶ

    ಬಾಗಲಕೋಟೆ: ಒಂದೆಡೆ ಹೆದ್ದಾರಿ ಪಕ್ಕದಲ್ಲಿದ್ದ ಬಾರ್ ಗಳನ್ನು ಬಂದ್ ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಇನ್ನೊಂದೆಡೆ ಅಕ್ರಮ ಮದ್ಯ ತಯಾರಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅಂತೆಯೇ ಜಿಲ್ಲೆಯಲ್ಲಿ ಕಳ್ಳಬಟ್ಟಿ ಸಾರಾಯಿ ಅಡ್ಡೆಯ ಮೇಲೆ ಪೊಲಿಸರು ದಾಳಿ ನಡೆಸಿದ ಘಟನೆ ನಡೆದಿದೆ.

    ಈ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಗೋಠೆ ಗ್ರಾಮದಲ್ಲಿ ನಡೆದಿದೆ. ಸಾವಳಗಿ ಪಿ.ಎಸ್.ಐ. ಲಕ್ಷ್ಮಿಕಾಂತ ನೇತೃತ್ವದಲ್ಲಿ ಈ ದಾಳಿ ನಡೆದಿದೆ.

    ಮಾಹಿತಿ ತಿಳಿದ ಪೊಲೀಸರು ಅಡ್ಡೆಯ ಮೇಲೆ ದಾಳಿ ನಡೆಸುತ್ತಿದ್ದಂತೆಯೇ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಹೀಗಾಗಿ ಪೊಲೀಸರು ಅಂದಾಜು 4 ಲೀಟರಿನಷ್ಟು ಕಳ್ಳಬಟ್ಟಿ ಸಾರಾಯಿಯನ್ನು ವಶಕ್ಕೆ ಪಡೆದಿದ್ದಾರೆ. ಹಾಗೆಯೇ ರಸ್ತೆ ಬದಿ ಹೂತಿಟ್ಟಿದ್ದ 17 ಕೊಡ ರಾ ಮೆಟಿರಿಯಲ್‍ಗಳನ್ನು ನಾಶ ಮಾಡಿದ್ದಾರೆ.

    ಈ ಸಂಬಂಧ ಸಾವಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.