Tag: ಅಕ್ರಮ ಮದ್ಯ ಮಾರಾಟ

  • ಚಾ.ನಗರ| ಈ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ, ಜೂಜಾಟವಾಡಿದ್ರೆ 50,000 ದಂಡ – ಮಾಹಿತಿ ಕೊಟ್ಟವರಿಗೆ 10,000 ಬಹುಮಾನ

    ಚಾ.ನಗರ| ಈ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ, ಜೂಜಾಟವಾಡಿದ್ರೆ 50,000 ದಂಡ – ಮಾಹಿತಿ ಕೊಟ್ಟವರಿಗೆ 10,000 ಬಹುಮಾನ

    ಚಾಮರಾಜನಗರ: ಬಡವರು, ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು ಮದ್ಯಕ್ಕೆ ದಾಸರಾಗುತ್ತಿದ್ದಾರೆ. ಜೂಜಾಟಕ್ಕೆ ಕೂಲಿ ಹಣವನ್ನು ಬಳಸುತ್ತಿದ್ದಾರೆ. ಹೀಗೆ ಬಿಡುವುದು ಸರಿಯಲ್ಲ ಎಂದು ಗ್ರಾಮಸ್ಥರು ದಿಟ್ಟ ನಿರ್ಧಾರ ಕೈಗೊಂಡು ಗ್ರಾಮದಲ್ಲಿ ದಂಡಾಸ್ತ್ರ ಪ್ರಯೋಗ ಮಾಡಿರುವ ಘಟನೆ ನಡೆದಿದೆ.

    ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಅಣ್ಣೂರುಕೇರಿ ಎಂಬ ಊರಲ್ಲಿ ಅಕ್ರಮ ಮದ್ಯ ಮಾರಾಟಗಾರರಿಗೆ, ಕದ್ದುಮುಚ್ಚಿ ಜೂಜಾಟ ಆಡಿಸುತ್ತಿದ್ದವರಿಗೆ ಎಲ್ಲಾ ಸಮುದಾಯದ ಯಜಮಾನರು ಬಿಸಿ ಮುಟ್ಟಿಸಿದ್ದಾರೆ. ಮದ್ಯ ಮಾರಾಟ, ಜೂಜಾಟ ಕಂಡುಬಂದರೆ 50 ಸಾವಿರ ದಂಡ ಕೊಡಬೇಕೆಂಬ ನಿರ್ಣಯ ಕೈಗೊಂಡಿದ್ದಾರೆ. ಗ್ರಾಮದ ದೊಡ್ಡಮ್ಮತಾಯಿ ದೇವಸ್ಥಾನದ ಮುಂಭಾಗ ಸಭೆ ಸೇರಿದ ಉಪ್ಪಾರ ಸಮುದಾಯ, ಪರಿಶಿಷ್ಟ ಜಾತಿ, ಮುಸ್ಲಿಮರು, ವಿಶ್ವಕರ್ಮ, ಕುರುಬ, ಕುಂಬಾರ, ಮಡಿವಾಳ ಹಾಗೂ ಸವಿತ ಸಮಾಜ ಸೇರಿದಂತೆ ಎಲ್ಲಾ ಕೋಮಿನ ಯಜಮಾನರು, ಸ್ವ ಸಹಾಯ ಮಹಿಳಾ ಸಂಘದವರು ಅಕ್ರಮ ಚಟುವಟಿಕೆಗಳು ಗ್ರಾಮದಲ್ಲಿ ನಡೆಯಬಾರದೆಂದು ಕಟ್ಟಾಜ್ಞೆ ಹೊರಡಿಸಿದ್ದಾರೆ. ಇದನ್ನೂ ಓದಿ: ಗ್ರಾಹಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಡೆಲಿವರಿ ಬಾಯ್ – ಕ್ಷಮೆಯಾಚಿಸಿದ ಕಂಪನಿ 

    ಗ್ರಾಮದಲ್ಲಿ ಸುಮಾರು 8 ರಿಂದ 10 ಮಂದಿ ಅಕ್ರಮ ಮದ್ಯ ಮಾರಾಟದಲ್ಲಿ ತೊಡಗಿದ್ದ ಕಾರಣ ಬೆಳಗಿನ ಜಾವ 4 ಗಂಟೆಯಿಂದಲೇ ಯುವಕರು ಮದ್ಯ ಸೇವನೆಗೆ ಮುಂದಾಗುತ್ತಿದ್ದರು. ಕೆಲವರು ಕೂಲಿ ಕೆಲಸಕ್ಕೂ ಹೋಗದೇ ಕುಡಿದ ಮತ್ತಿನಲ್ಲಿ ರಸ್ತೆ ಬದಿ ಹಾಗೂ ಬಸ್ ನಿಲ್ದಾಣದಲ್ಲಿ ಮಲಗುತ್ತಿದ್ದರು. ಈ ಮಧ್ಯೆ ಕೆಲಸಕ್ಕೆ ಹೋಗುವ ಅನೇಕ ಮಂದಿ ಮದ್ಯ ಸೇವನೆ ಮಾಡಿಯೇ ತೆರಳುತ್ತಿದ್ದರು. ಇದರಿಂದ ದುಡಿದ ಹಣ ಪೋಲಾಗುತ್ತಿತ್ತು. ಸುಮಾರು 4 ರಿಂದ 5 ಕಡೆಗಳಲ್ಲಿ ಅಕ್ರಮವಾಗಿ ಜೂಜಾಟ ಕೂಡ ನಡೆಯುತ್ತಿತ್ತು. ಇದರಿಂದ ಗ್ರಾಮದ ಕೆಲ ಮಂದಿ ಹಗಲು ರಾತ್ರಿ ಎನ್ನದೇ ಜೂಜಾಟದಲ್ಲಿ ತೊಡಗಿದ್ದರಿಂದ ಗ್ರಾಮಸ್ಥರು ಈ ದಿಟ್ಟ ನಿಲುವು ತೆಗೆದುಕೊಂಡಿದ್ದಾರೆ.

    ಗ್ರಾಮದ ಎಲ್ಲಾ ಸಮುದಾಯದ ಜನರು ಒಗ್ಗೂಡಿ ಅಕ್ರಮ ಮದ್ಯ ಮಾರಾಟ ಹಾಗೂ ಜೂಜಾಟದ ವಿರುದ್ಧ ಸಮರ ಸಾರಿದ್ದು, ಅಕ್ರಮವಾಗಿ ಮದ್ಯ ಮಾರಾಟ ಮಾಡಿದವರಿಗೆ 50 ಸಾವಿರ ರೂ. ದಂಡ, ಜೂಜಾಟ ಆಡಿಸುವವರಿಗೆ 50 ಸಾವಿರ ರೂ. ದಂಡ ಮತ್ತು ಅಕ್ರಮದ ಬಗ್ಗೆ ಮಾಹಿತಿ ಹಾಗೂ ಸಾಕ್ಷಿ ಹೇಳುವವರಿಗೆ 10 ಸಾವಿರ ರೂ. ಬಹುಮಾನ ನೀಡುವುದಾಗಿ ಟಾಂಟಾಂ ಮಾಡಿದ್ದಾರೆ. ಸಭೆ ಸೇರಿದ ವೇಳೆಯೇ ಅಕ್ರಮವಾಗಿ ಸಂಗ್ರಹಿಸಿದ್ದ ಮದ್ಯದ ಪೌಚುಗಳನ್ನು ಸಭೆಯಲ್ಲೇ ಸುಟ್ಟು ಹಾಕುವ ಮೂಲಕ ನಿರ್ಣಯ ಕೈಗೊಂಡಿದ್ದಾರೆ. ಇದನ್ನೂ ಓದಿ: ದೇವರಿಗೆ ಕೈ ಮುಗಿದು ತಾಳಿ ಕದ್ದ – ಅಡವಿಡಲು ಹೋಗಿ ತಗ್ಲಾಕೊಂಡ

  • ಕೈಗಳನ್ನು ಮುರಿದು, ಕಾಲುಗಳಿಗೆ ಮೊಳೆ ಚುಚ್ಚಿ ಆರ್‌ಟಿಐ ಕಾರ್ಯಕರ್ತನಿಗೆ ಚಿತ್ರಹಿಂಸೆ

    ಕೈಗಳನ್ನು ಮುರಿದು, ಕಾಲುಗಳಿಗೆ ಮೊಳೆ ಚುಚ್ಚಿ ಆರ್‌ಟಿಐ ಕಾರ್ಯಕರ್ತನಿಗೆ ಚಿತ್ರಹಿಂಸೆ

    ಜೈಪುರ: ಆರ್‌ಟಿಐ ಕಾಯಕರ್ತನ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

    ಆರ್‌ಟಿಐ ಕಾಯಕರ್ತ ಅಮರರಾಮ್ ಗೋದಾರ್ ಹಲ್ಲೆಗೊಳಗಾದ ವ್ಯಕ್ತಿ. ಇವರು ಭ್ರಷ್ಟಾಚಾರ ಮತ್ತು ಗ್ರಾಮಪಂಚಾಯಿತಿ ಏರಿಯಾದಲ್ಲಿ ನಡೆಯತ್ತಿದ್ದ ಅಕ್ರಮ ಮದ್ಯ ಮಾರಾಟದ ವಿರುದ್ಧ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಗೋದಾರ್ ಅವರ ಮೇಲೆ ಎಂಟು ಜನ ದುಷ್ಕರ್ಮಿಗಳು ಹಲ್ಲೆ ನಡೆಸಿ, ಅವರ ಮೇಲೆ ಕಬ್ಬಿಣ ಸಲಾಕೆಯಿಂದ ಬಡಿದು ಕೈಗಳನ್ನು ಮುರಿದಿದ್ದಾರೆ. ಅಲ್ಲದೆ, ಮೊಳೆಗಳಿಂದ ಕೈಕಾಲುಗಳಿಗೆ ಚುಚ್ಚಿ ಚಿತ್ರಹಿಂಸೆ ನೀಡಿದ್ದಾರೆ.

    ನಂತರ ತೀವ್ರ ಗಾಯಗೊಂಡಿದ್ದ ಅವರನ್ನು ನೋಡಿ ಗೋದಾರ್ ಸಾವನ್ನಪ್ಪಿದ್ದಾರೆ ಎಂದು ತಿಳಿದು ಅಲ್ಲಿಂದ ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಗೊದಾರ್ ಅವರನ್ನು ಜೋದ್‌ಪುರ್ ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಇದನ್ನೂ ಓದಿ: ಪಂಜಾಬ್‍ನ ಲೂಧಿಯಾನ ನ್ಯಾಯಾಲಯದಲ್ಲಿ ಸ್ಫೋಟ – 2 ಸಾವು, 4 ಮಂದಿಗೆ ಗಾಯ

    POLICE JEEP

    ಬರ್ಮರ್ ಪೊಲೀಸ್ ವರಿಷ್ಠಾಧಿಕಾರಿ ದೀಪಕ್ ಭಾಗವ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಗೋದಾರ್ ಆರೋಗ್ಯವನ್ನು ವಿಚಾರಿಸಿದ್ದಾರೆ. ಜೊತೆಗೆ ಘಟನೆ ಕುರಿತು ದುಷ್ಕರ್ಮಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಶೀಘ್ರವೇ ಆರೋಪಿಗಳನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅತ್ಯಾಚಾರ ಆರೋಪಿಯನ್ನು ಬಚಾವ್ ಮಾಡಲು ಖತರ್ನಾಕ್ ಪ್ಲಾನ್ ಮಾಡಿದ್ದ ತಂದೆ ಅರೆಸ್ಟ್!

  • ಅಕ್ರಮವಾಗಿ ಮಾರುತ್ತಿದ್ದ ವಿಷಕಾರಿ ಮದ್ಯ ಸೇವನೆ – 6 ಮಂದಿ ಸಾವು, 15 ಜನ ಗಂಭೀರ

    ಅಕ್ರಮವಾಗಿ ಮಾರುತ್ತಿದ್ದ ವಿಷಕಾರಿ ಮದ್ಯ ಸೇವನೆ – 6 ಮಂದಿ ಸಾವು, 15 ಜನ ಗಂಭೀರ

    – ಮದ್ಯ ಮಾರುತ್ತಿದ್ದ ದಂಪತಿ ಅರೆಸ್ಟ್

    ಲಕ್ನೋ: ಅಕ್ರಮವಾಗಿ ಮಾರುತ್ತಿದ್ದ ವಿಷಕಾರಿ ಮದ್ಯ ಸೇವಿಸಿ ಆರು ಮಂದಿ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಪ್ರಯಾಗರಾಜ್‍ನ ಅಮಿಲಿಯಾ ಗ್ರಾಮದಲ್ಲಿ ನಡೆದಿದೆ.

    ಈ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಸ್ಥಳೀಯರು ಹೇಳುವ ಪ್ರಕಾರ, ಸಾವನ್ನಪ್ಪಿದ ಎಲ್ಲರೂ ಸ್ಥಳೀಯವಾಗಿ ಅಂಗಡಿಯಲ್ಲಿ ಸಿಗುವ ಕಂಟ್ರಿ ಸರಾಯಿಯನ್ನು ಕುಡಿದ್ದಾರೆ. ಆ ಬಳಿಕ ಎಲ್ಲರೂ ಅನಾರೋಗ್ಯಕ್ಕೆ ತುತ್ತಾಗಿ ಸಾವನ್ನಪ್ಪಿದ್ದಾರೆ. ಜೊತೆಗೆ 15 ಮಂದಿ ಸ್ಥಿತಿ ಗಂಭೀರವಾಗಿದ್ದು, ಅವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಹೇಳಿದ್ದಾರೆ.

    ಪ್ರಯಾಗರಾಜ್ ಜಿಲ್ಲೆಯ ಜಿಲ್ಲಾಧಿಕಾರಿ ಭಾನು ಚಂದ್ರ ಗೋಸ್ವಾಮಿ ಅವರು ಪ್ರಕರಣದ ಬಗ್ಗೆ ಮಾತನಾಡಿದ್ದು, ವಿಷಕಾರಿ ಮದ್ಯ ಸೇವಿಸಿ ಜನರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಪಡೆದು ನಮ್ಮ ಅಧಿಕಾರಿಗಳು ಅಮಿಲಿಯಾ ಗ್ರಾಮಕ್ಕೆ ತೆರಳಿದ್ದಾರೆ. ಅವರ ಸಾವಿಗೆ ಕಾರಣವೇನು ಎಂದು ಮರಣೋತ್ತರ ವರದಿ ಬಂದ ಮೇಲೆ ತಿಳಿಯಲಿದೆ. ಜೊತೆಗೆ ಅಕ್ರಮ ಮದ್ಯದ ಸ್ಯಾಂಪಲ್ ಅನ್ನು ಕೂಡ ನಾವು ಪರೀಕ್ಷೆಗೆ ಕಳುಹಿಸಿದ್ದೇವೆ ಎಂದು ಹೇಳಿದ್ದಾರೆ.

    ಈ ವಿಚಾರದ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಸ್ಥಳೀಯ ನಿವಾಸಿಗಳು, ಈ ರೀತಿಯ ಅಕ್ರಮ ಮದ್ಯದಂಗಡಿ ನಡೆಸುತ್ತಿರುವ ಮಾಲೀಕನ ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿವೆ. ಆತನ ವಿರುದ್ಧ ನಕಲಿ ಮದ್ಯ ಮಾರಾಟ, ಕಳ್ಳಸಾಗಣೆಗೆ ಸೇರಿದಂತೆ ಹಲವಾರು ಕೇಸ್‍ಗಳು ದಾಖಲಾಗಿವೆ. ಆದರೂ ಆತ ಇದೇ ಪ್ರದೇಶದಲ್ಲಿ ಮೂರು ಮದ್ಯದಂಗಡಿಗಳನ್ನು ನಡೆಸುತ್ತಿದ್ದಾನೆ ಎಂದು ದೂರಿದ್ದಾರೆ.

    ಈ ಸಂಬಂಧ ಈಗಾಗಲೇ ಪೊಲೀಸರು ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ದಂಪತಿಯನ್ನು ಬಂಧಿಸಿದ್ದು, ಪ್ರಕರಣದ ತನಿಖೆ ನಡೆಸಲಾಗುತ್ತಿದೆ. ಆರೋಪಿಗಳು ತಪ್ಪಿತಸ್ಥರೆಂದು ಕಂಡುಬಂದಲ್ಲಿ ಅವರಿಗೆ ಕಠಿಣ ಶಿಕ್ಷೆಯಾಗಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

  • ಅಕ್ರಮ ಮದ್ಯ ಮಾರಾಟ – ಸಿಡಿದೆದ್ದು ವ್ಯಕ್ತಿಯನ್ನೇ ಅಧಿಕಾರಿಗಳಿಗೆ ಒಪ್ಪಿಸಿದ ಮಹಿಳೆಯರು

    ಅಕ್ರಮ ಮದ್ಯ ಮಾರಾಟ – ಸಿಡಿದೆದ್ದು ವ್ಯಕ್ತಿಯನ್ನೇ ಅಧಿಕಾರಿಗಳಿಗೆ ಒಪ್ಪಿಸಿದ ಮಹಿಳೆಯರು

    ಹಾವೇರಿ : ಅಕ್ರಮ ಮದ್ಯ ಮಾರಾಟದ ಮಾಡುತ್ತಿದ್ದ ವ್ಯಕ್ತಿಯ ವಿರುದ್ಧ ಮಹಿಳೆಯರು ಸಿಡಿದೆದ್ದು ಆತನನ್ನು ಹಿಡಿದು ಅಬಕಾರಿ ಇಲಾಖೆಗೆ ಒಪ್ಪಿಸಿದ ಘಟನೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಹಿರೇಮುಗದೂರು ಗ್ರಾಮದಲ್ಲಿ ನಡೆದಿದೆ.

    ಹೆಗ್ಗಪ್ಪ ನಡುವಿನಮನಿ ಎಂಬಾತ ಅಕ್ರಮವಾಗಿ ಮದ್ಯವನ್ನ ಮನೆಯಲ್ಲಿಯೇ ಮಾರಾಟ ಮಾಡುತ್ತಿದ್ದ. ಮದ್ಯದ ಪ್ಯಾಕೇಟಗಳ ಸಮೇತ ಹೆಗ್ಗಪ್ಪನನ್ನ ಹಿಡಿದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ ಎಂದು ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ಧೇವೆ ಯಾವುದೇ ಪ್ರಯೋಜನವಾಗಿರಲಿಲ್ಲ. ಹೆಗ್ಗಪ್ಪನ ವಿರುದ್ಧ ಪ್ರಕರಣ ದಾಖಲಿಸದೆ ಅಬಕಾರಿ ಇಲಾಖೆಯ ಅಧಿಕಾರಿಗಳು ಬಿಟ್ಟು ಕಳಿಸಿದ್ದಾರೆ. ಇದರಿಂದ ಗ್ರಾಮದ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸವಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಕೊರೊನಾ ಎಫೆಕ್ಟ್: ಶಾಲೆಗೆ ರಜೆ- ಮದ್ಯ ಮಾರಾಟಕ್ಕಿಳಿದ ವಿದ್ಯಾರ್ಥಿಗಳು!

    ಕೊರೊನಾ ಎಫೆಕ್ಟ್: ಶಾಲೆಗೆ ರಜೆ- ಮದ್ಯ ಮಾರಾಟಕ್ಕಿಳಿದ ವಿದ್ಯಾರ್ಥಿಗಳು!

    -ಕರ್ನಾಟಕ, ಆಂಧ್ರ ಗಡಿಭಾಗಗಳಲ್ಲಿ ಬಾರ್‌ಗಳಾದ ಗುಡಿಸಲು..!
    -ರೈತರ ತೋಟಗಳೇ ರೆಸ್ಟೋರೆಂಟ್‍ಗಳು..!

    ಚಿಕ್ಕಬಳ್ಳಾಪುರ: ಜಿಲ್ಲೆಯ ಬಾಗೇಪಲ್ಲಿ ಹಾಗೂ ಗೌರಿಬಿದನೂರು ಗಡಿಭಾಗದ ಹಳ್ಳಿಗಳಲ್ಲಿ ಕೊರೊನಾದ ನಡುವೆಯೂ ಅಕ್ರಮ ಮದ್ಯ ಮಾರಾಟ ಬಲು ಜೋರಾಗಿ ಸಾಗುತ್ತಿದೆ. ಅದರಲ್ಲೂ ಕೊರೊನಾದಿಂದ ಶಾಲೆಗಳಿಗೆ ರಜೆ ಸಿಕ್ಕಿರುವುದರಿಂದ ಅಪ್ರಾಪ್ತ ವಯಸ್ಕಿನ ವಿದ್ಯಾರ್ಥಿಗಳೇ ಮದ್ಯ ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ.

    ವಿಶ್ವವೇ ಕೊರೊನಾ ಸೋಂಕಿನ ಆತಂಕದಿಂದ ನಡುಗಿ-ನಲುಗಿ ಹೋಗುತ್ತಿದೆ. ಅದರಲ್ಲೂ ಬೆಂಗಳೂರು ಮಹಾನಗರವನ್ನು ಮತ್ತೆ ಲಾಕ್ ಡೌನ್ ಮಾಡೋ ಪರಿಸ್ಥಿತಿಗೆ ಬಂದು ತಲುಪಿದ್ದೇವೆ. ರಾಜ್ಯದ ಇತರೆ ಜಿಲ್ಲೆಗಳಲ್ಲೂ ಗ್ರಾಮೀಣ ಭಾಗಗಳಿಗೂ ಕೊರೊನಾ ಕಾಲಿಟ್ಟಿದ್ದು, ದಿನೇ ದಿನೇ ಹಳ್ಳಿಗಳಿಗೂ ಕೊರೊನಾ ವ್ಯಾಪಿಸುತ್ತಿದ್ದು ಜನ ಬೆಚ್ಚಿಬೀಳುವಂತೆ ಮಾಡುತ್ತಿದೆ. ಇದರ ನಡುವೆ ಮಕ್ಕಳಿಗೆ ಶಾಲೆ ತೆರೆದಿಲ್ಲ.

    ಕೋವಿಡ್‍ನಿಂದಾಗಿ ಯಾವುದೇ ಆರ್ಥಿಕ ವಹಿವಾಟುಗಳ ವ್ಯಾಪಾರವೂ ಅಷ್ಟಕ್ಕಷ್ಟೇ. ಆದರೆ ಜಿಲ್ಲೆಯಲ್ಲಿ ಮದ್ಯ ಮಾರಾಟ ಮಾತ್ರ ಜೋರಾಗಿ ಸಾಗಿದೆ. ಇಡೀ ದೇಶವೇ ಲಾಕ್‍ಡೌನ್ ಮಾಡಿ ಸಂದರ್ಭದಲ್ಲಿ ಮದ್ಯದಂಗಡಿಗಳು ಕೂಡ ಬಂದ್ ಆಗಿದ್ದವು. ಆದ್ರೆ ಈಗ ಎಲ್ಲಾ ಮದ್ಯದಂಗಡಿಗಳ ಬಾಗಿಲು ತೆರೆದಿದೆ. ಮದ್ಯಪ್ರಿಯರಿಗೆ ಯಾವುದೇ ಅಡ್ಡಿ ಇಲ್ಲ. ಈ ನಡುವೆ ಜಿಲ್ಲೆಯ ಬಾಗೇಪಲ್ಲಿ ಹಾಗೂ ಗೌರಿಬಿದನೂರು ಗಡಿಭಾಗದ ಹಳ್ಳಿಗಳಲ್ಲಿ ಕೊರೊನಾದ ನಡುವೆಯೂ ಆಕ್ರಮ ಮದ್ಯ ಮಾರಾಟ ಬಲು ಜೋರಾಗಿ ಸಾಗುತ್ತಿದೆ.

    ಕರ್ನಾಟಕ-ಆಂಧ್ರ ಗಡಿಭಾಗದ ಹಳ್ಳಿಗಳಲ್ಲಿ ಅಕ್ರಮ ಮದ್ಯದಂಗಡಿಗಳು ತಲೆ ಎತ್ತಿದ್ದು, ರಾಜಾರೋಷವಾಗಿ ಅಕ್ರಮ ಮದ್ಯ ಮಾರಾಟ ನಡೆಸಲಾಗುತ್ತಿದೆ. ರೈತರ ತೋಟ, ಹೊಲಗಳಲ್ಲೇ ತಾತ್ಕಾಲಿಕ ಗುಡಿಸಲುಗಳು, ಶೆಡ್‍ಗಳನ್ನು ನಿರ್ಮಾಣ ಮಾಡಿಕೊಂಡು ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆ. ಅದರಲ್ಲೂ ಇತ್ತೀಚೆಗೆ ನೆರೆಯ ಆಂಧ್ರಪ್ರದೇಶದಲ್ಲಿದ್ದ ಮದ್ಯದಂಗಡಿಗಳನ್ನ ಸಂಖ್ಯೆಯನ್ನು ಕಡಿತಗೊಳಿಸಲಾಗಿದೆ. ಅಲ್ಲದೇ ಮದ್ಯದ ದರವನ್ನು ಮೂರು ಪಟ್ಟು ಹೆಚ್ಚಳ ಮಾಡಲಾಗಿದೆ. ಪರಿಣಾಮ ಆಂಧ್ರದಿಂದ ಕರ್ನಾಟಕಕ್ಕೆ ಮದ್ಯಪ್ರಿಯರು ಲಗ್ಗೆ ಇಡುತ್ತಿದ್ದಾರೆ.

    ಇದನ್ನೇ ಅವಕಾಶ ಮಾಡಿಕೊಂಡು ಗಡಿಭಾಗದಲ್ಲಿನ ಗ್ರಾಮದ ಕೆಲವರು ತಮ್ಮ ಹೊಲ ಜಮೀನುಗಳಲ್ಲೇ ತಾತ್ಕಾಲಿಕ ಶೆಡ್, ಗುಡಿಸಲು, ನಿರ್ಮಾಣ ಮಾಡಿ ಮದ್ಯ ಮಾರಾಟಕ್ಕಿಳಿದಿದ್ದಾರೆ. ಅದರಲ್ಲೂ ಬೆಂಗಳೂರಿನಿಂದ ಕೆಲಸ ಇಲ್ಲದೆ ವಾಪಸ್ಸು ಬಂದ ಯುವಕರು ಬೈಕ್‍ನಲ್ಲಿ ಮದ್ಯ ಇಟ್ಟುಕೊಂಡು ಮಾರಾಟ ಮಾಡುವ ಕಾಯಕ ಮಾಡುತ್ತಿದ್ದಾರೆ. ಶಾಲೆಗೆ ರಜೆ ಇರುವುದರಿಂದ ಅಪ್ರಾಪ್ತ ವಯಸ್ಕಿನ ಮಕ್ಕಳು ಮದ್ಯ ಮಾರಾಟ ಮಾಡುತ್ತಿದ್ದಾರೆ. ಮನೆಯಲ್ಲಿ ಆಡುಗೆ ಕಾಯಕ, ತೋಟದಲ್ಲಿ ಕೆಲಸ ಮಾಡೋ ಮಹಿಳೆಯರು ಕೂಡ ಮದ್ಯ ಮಾರಾಟಕ್ಕಿಳಿದ್ದಾರೆ.

    ಗೌರಿಬಿದನೂರಿನ ಹುಣೇಸನಹಳ್ಳಿಗೂ ಸಹ ಮದ್ಯಕ್ಕಾಗಿ ಆಂಧ್ರದವರು ಆಗಮಿಸುತ್ತಿದ್ದ ಕಾರಣ ಗ್ರಾಮದ ಹಲವರು ಇದನ್ನು ವಿರೋಧಿಸಿದ್ದರು. ಇದಾದ ಬಳಿಕ ಈಗ ಬಾಗೇಪಲ್ಲಿ ತಾಲೂಕಿನ ಆಂಧ್ರದ ಗಡಿಭಾಗದ ಮುಮ್ಮಡಿವಾರಪಲ್ಲಿ, ನೇಸೆವಾರಪಲ್ಲಿ, ಕೋತ್ತಕೋಟೆ, ಗೊರ್ತಪಲ್ಲಿ, ಡಿ ಕೊತ್ತಪಲ್ಲಿ ಸೇರಿದಂತೆ ಹಲವು ಗಡಿ ಗ್ರಾಮಗಳಲ್ಲಿ ಇದೇ ರೀತಿಯ ಅಕ್ರಮ ಮದ್ಯ ಮಾರಾಟ ಸಾಗುತ್ತಿದೆ.

    ಮತ್ತೊಂದೆಡೆ ಆಂಧ್ರದಲ್ಲೂ ಕೊರೊನಾ ಪ್ರಕರಣಗಳು ಜಾಸ್ತಿಯಾಗಿದ್ದು, ರಾಜಾರೋಷವಾಗಿ ಮದ್ಯಕ್ಕಾಗಿ ಹಲವರು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಪರಿಣಾಮ ಕೊರೊನಾ ಸೋಂಕು ಆತಂಕವೂ ಕೆಲ ಪ್ರಜ್ಞಾವಂತ ಗ್ರಾಮಸ್ಥರದ್ದಾಗಿದೆ. ಉಳಿದಂತೆ ಕರ್ನಾಟಕದ ಮದ್ಯ ಅಕ್ರಮಮವಾಗಿ ಆಂಧ್ರ ಸೇರುತ್ತಿದ್ದು, ಇತ್ತೀಚೆಗೆ ಲಕ್ಷಾಂತರ ರೂಪಾಯಿ ಮೌಲ್ಯದ ಮದ್ಯವನ್ನು ಆಂಧ್ರದ ಅಬಕಾರಿ ಇಲಾಖಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಮದ್ಯ ಸರಬರಾಜು ಆಗಿರೋದು ಕರ್ನಾಟಕದ ಗಡಿಭಾಗದ ಬಾಗೇಪಲ್ಲಿಯ ಬಾರ್ ಗಳಿಂದಲೇ ಆಗಿದ್ದು, ಎಲ್ಲ ಬಾರ್, ವೈನ್ ಶಾಪ್ ಗಳು ರಾಜಕಾರಣಿಗಳದ್ದೇ ಎಂಬ ಮಾಹಿತಿ ಲಭಿಸಿದೆ.

    ದೊಡ್ಡ ದೊಡ್ಡ ರಾಜಕಾರಣಿಗಳು, ಜನಪ್ರತಿನಿಧಿಗಳೇ ಅಕ್ರಮಕ್ಕೆ ಕುಮ್ಮಕ್ಕು ನೀಡುತ್ತಿದ್ದು, ಆಂಧ್ರ ಸರ್ಕಾರ ನಿರ್ಣಯದಿಂದ ಮದ್ಯ ದರವನ್ನು ಮೂರು ಪಟ್ಟು ಜಾಸ್ತಿ ಮಾಡಿ ಮಾರಾಟ ಮಾಡಲಾಗುತ್ತಿದೆ. ಉತ್ತಮ ಶಿಕ್ಷಣ ಪಡೆಯಬೇಕಿದ್ದ ವಿದ್ಯಾರ್ಥಿಗಳು ಸಹ ಮದ್ಯ ಮಾರಾಟಕ್ಕಿಳಿತಿರೋದು ದುರಂತ ಸಂಗತಿಯಾಗಿದ್ದು, ಜಿಲ್ಲೆಯ ಅಬಕಾರಿ ಇಲಾಖಾಧಿಕಾರಿಗಳು ಎಚ್ಚೆತ್ತುಕೊಳ್ಳ ಬೇಕಿದೆ.

  • ಅಕ್ರಮ ಮದ್ಯ ಮಾರಾಟ ತಡೆದ ಯೋಧನ ಕುಟುಂಬಕ್ಕೆ ಬಹಿಷ್ಕಾರ

    ಅಕ್ರಮ ಮದ್ಯ ಮಾರಾಟ ತಡೆದ ಯೋಧನ ಕುಟುಂಬಕ್ಕೆ ಬಹಿಷ್ಕಾರ

    – ತಾಯಿ ಸತ್ತರೂ ಹೋಗದಂತೆ ಗ್ರಾಮಸ್ಥರಿಗೆ ತಾಕೀತು

    ಗದಗ: ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ತಡೆದ ಯೋಧನ ಕುಟುಂಬಕ್ಕೆ ಬಹಿಷ್ಕಾರ ಹಾಕಿ, ಯೋಧನ ತಾಯಿ ಮೃತಪಟ್ಟರೂ ಸ್ಥಳೀಯರು ಅಂತ್ಯಕ್ರಿಯೆಗೆ ಹೊದರೆ 10 ಸಾವಿರ ರೂ. ದಂಡ ಘೋಷಣೆ ಮಾಡಿರುವ ಅಮಾನವೀಯ ಘಟನೆ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಉಳ್ಳಟ್ಟಿ ಗ್ರಾಮದಲ್ಲಿ ನಡೆದಿದೆ. ಈ ಕುರಿತು ಪಬ್ಲಿಕ್ ಟಿವಿ ಸುದ್ದಿ ಮಾಡುತ್ತಿದ್ದಂತೆ ತಾಲೂಕು ಆಡಳಿತ ಹಾಗೂ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ.

    ಯೋಧ ಬಾಬಣ್ಣ ಲಮಾಣಿ ಕುಟುಂಬವನ್ನು ಗ್ರಾಮದಿಂದ ಬಹಿಷ್ಕರಿಸಲಾಗಿದೆ. ಲಾಕ್‍ಡೌನ್ ವೇಳೆ ಗ್ರಾಮ ಪಂಚಾಯಿತಿ ಸದಸ್ಯ ಕೃಷ್ಣಪ್ಪ ಲಮಾಣಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ. ಈ ಕುರಿತು ಯೋಧ ಬಾಬಣ್ಣ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದು ಅವರ ಮೇಲೆ ಕ್ರಮ ಜರುಗುವಂತೆ ಮಾಡಿದ್ದರು. ಈ ಸಿಟ್ಟಿನಿಂದಾಗಿ ಯೋಧನ ಕುಟುಂಬಕ್ಕೆ ಗ್ರಾಮದ ಯಾರೊಬ್ಬರು ನೆರವಾಗದಂತೆ ಕೃಷ್ಣಪ್ಪ ಲಮಾಣಿ ಊರಿನ ಜನರಿಗೆ ಆದೇಶ ಮಾಡಿ ದೌರ್ಜನ್ಯ ಎಸಗಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

    ಇಂದು ಯೋಧನ ತಾಯಿ ಸಕ್ರವ್ವ ಲಮಾಣಿ ಮೃತಪಟ್ಟಿದ್ದಾರೆ. ಈ ವೇಳೆ ಗ್ರಾಮಸ್ಥರು ಯಾರೂ ಭಾಗವಹಿಸಿಲ್ಲ. ಯೋಧ ಬಾಬಣ್ಣ ಕಣ್ಣೀರಿಡುತ್ತಿದ್ದಾರೆ. ಬಾಬಣ್ಣ ಜಮ್ಮು ಕಾಶ್ಮೀರದಲ್ಲಿ ಸೇನೆಯಲ್ಲಿ ನಾಯಕನಾಗಿ ಸೇವೆಸಲ್ಲಿಸುತ್ತಿದ್ದಾರೆ. ರಜೆಗೆಂದು ಊರಿಗೆ ಬಂದಿದ್ದರು. ಏ.16 ಕ್ಕೆ ಯೋಧ ಕರ್ತವ್ಯಕ್ಕೆ ಹಾಜರಾಗಬೇಕಿತ್ತು. ಲಾಕ್‍ಡೌನ್ ಹಿನ್ನೆಲೆ ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ಈ ಸಂದರ್ಭದಲ್ಲಿ ಅಕ್ರಮ ತಡೆಯಲು ಮುಂದಾಗಿದ್ದಕ್ಕೆ ಈ ಶಿಕ್ಷೆ ನೀಡಲಾಗಿದೆ. ಈಗ ತಾಯಿ ಸಕ್ರವ್ವ ಮೃತಪಟ್ಟಿದ್ದಾರೆ. ಅವರ ಮನೆಗೆ ಯಾರಾದರೂ ಹೋದರೆ 10 ಸಾವಿರ ರೂ. ದಂಡ ವಿಧಿಸಲಾಗುವುದು ಎಂದು ಘೋಷಣೆ ಮಾಡಲಾಗಿದೆ. ಹೀಗಾಗಿ ಯಾರೂ ಬರುತ್ತಿಲ್ಲ. ಇಷ್ಟೆಲ್ಲ ರಾದ್ಧಾಂತ ನಡೆದರೂ ತಾಲೂಕು ಹಾಗೂ ಜಿಲ್ಲಾಡಳಿತ ಇತ್ತ ತಲೆ ಹಾಕಿರಲಿಲ್ಲ.

    ಪಬ್ಲಿಕ್ ಟಿವಿ ವರದಿ ನೋಡಿ ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದ್ದು, ಅಧಿಕಾರಿಗಳು ಯೋಧನ ನೆರವಿಗೆ ಬಂದಿದ್ದಾರೆ. ಗ್ರಾ.ಪಂ. ಸದಸ್ಯನ ಆದೇಶ ಮೇರೆಗೆ ಸ್ಥಳೀಯರು ಬಹಿಷ್ಕಾರ ಮಾಡಿದ್ದರು. ಯೋಧನ ತಾಯಿ ಮೃತಪಟ್ಟ ವೇಳೆ ಸ್ಥಳೀಯರು ಸಹ ತೆರಳಿರಲಿಲ್ಲ. ಇದೀಗ ಸ್ಥಳೀಯರನ್ನು ಪೊಲೀಸರು ಮನವೊಲಿಸಿದ್ದು, ಅವರ ಸಮ್ಮುಖದಲ್ಲೇ ಯೋಧನ ತಾಯಿ ಸಕ್ರವ್ವ ಅವರ ಅಂತ್ಯಕ್ರಿಯೆ ಮಾಡಲಾಗಿದೆ.

  • ಅಕ್ರಮ ಮದ್ಯ ಮಾರಾಟದ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿ: ರವಿ ಡಿ. ಚೆನ್ನಣ್ಣವರ್

    ಅಕ್ರಮ ಮದ್ಯ ಮಾರಾಟದ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿ: ರವಿ ಡಿ. ಚೆನ್ನಣ್ಣವರ್

    ಆನೇಕಲ್: ಅಕ್ರಮ ಮದ್ಯ ಮಾರಾಟದ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಇದ್ದಲ್ಲಿ ತಿಳಿಸಿದ್ರೆ ಅಂತವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಎಸ್.ಪಿ ರವಿ ಡಿ ಚನ್ನಣ್ಣನವರ್ ಹೇಳಿದ್ದಾರೆ.

    ಆನೇಕಲ್ ಪಟ್ಟಣದಲ್ಲಿ ಕರುಣೆಯ ಕುಟೀರ ಹಾಗೂ ವಾಚನಾಲಯವನ್ನು ಉದ್ಘಾಟನೆ ಮಾಡಿದ ಬಳಿಕ ಮಾತನಾಡಿದ ಅವರು, ಆನೇಕಲ್ ನ ಪೋಲಿಸರು ಹಾಗೂ ಸಾರ್ವಜನಿಕರ ಸಹಯೋಗದೊಂದಿಗೆ ಕರುಣೆಯ ಕುಟೀರ ಹಾಗೂ ವಾಚನಾಲಯ ತೆರೆಯಲಾಗಿದೆ. ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಸಹಾಯ ಮಾಡಬೇಕೆನ್ನುವವರು ಸಹಾಯಹಸ್ತ ನೀಡಬಹುದು. ಬಡವರಿಗೆ ಸಹಾಯ ಆಗುವ ನಿಟ್ಟಿನಲ್ಲಿ ಮಾಡಲಾಗಿದೆ ಎಂದು ತಿಳಿಸಿದರು.

    ಅಕ್ರಮ ಮದ್ಯ ಮಾರಾಟವಾಗುತ್ತಿರುವ ಬಗ್ಗೆ ಹಲವು ದೂರುಗಳು ಬಂದಿವೆ. ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಇದ್ದಲ್ಲಿ ತಿಳಿಸಿದ್ರೆ ಅಂತವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಈಗಾಗಲೇ ಬನ್ನೇರುಘಟ್ಟ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ವಿಚಾರಣೆ ನಡೆಯುತ್ತಿದೆ ಎಂದು ತಿಳಿಸಿದರು.

    ಲಾಕ್ ಡೌನ್ ಹಿನ್ನೆಲೆ ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯಲ್ಲಿ ಅನಾವಶ್ಯಕವಾಗಿ ಓಡಾಡುತ್ತಿದ್ದಂತಹ 700ಕ್ಕೂ ಹೆಚ್ಚು ವಾಹನಗಳನ್ನು ಜಪ್ತಿ ಮಾಡಲಾಗಿದೆ. ಅಲ್ಲದೆ ಬೆಂಗಳೂರು ಜಿಲ್ಲೆಯಾದ್ಯಂತ ಲಾಕ್ ಡೌನ್ ಉಲ್ಲಂಘನೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ, ರಾಜನಕುಂಟೆ ಪೋಲಿಸ್ ಠಾಣಾ ವ್ಯಾಪ್ತಿಗಳಲ್ಲಿ 4 ಪ್ರಕರಣಗಳ ಸಂಬಂಧ ದೂರು ದಾಖಲಾಗಿದೆ ಎಂದರು.

    ಜಿಗಣಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಆಶಾ ಕಾರ್ಯಕರ್ತೆಯ ಹಲ್ಲೆ ನಡೆಸಿದ್ದ ಆರೋಪಿಗಳನ್ನು ಬಂಧನ ಮಾಡಲಾಗಿದೆ. ಕೊರೋನಾ ಹೊಗಲಾಡಿಸುವ ನಿಟ್ಟಿನಲ್ಲಿ ಪೊಲೀಸರು, ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಗಲಿರುಳು ಶ್ರಮಿಸುತ್ತಿದ್ದು ಅವರನ್ನು ಎಲ್ಲರೂ ಗೌರವಿಸಬೇಕು ಎಂದರು.

  • ಲಾಕ್‍ಡೌನ್ ನಡುವೆ ಬೆಂಗ್ಳೂರಿನಲ್ಲಿ ಮದ್ಯ ಮಾರಾಟ- 90 ರೂ. ಎಣ್ಣೆ 600ಕ್ಕೆ ಮಾರಾಟ

    ಲಾಕ್‍ಡೌನ್ ನಡುವೆ ಬೆಂಗ್ಳೂರಿನಲ್ಲಿ ಮದ್ಯ ಮಾರಾಟ- 90 ರೂ. ಎಣ್ಣೆ 600ಕ್ಕೆ ಮಾರಾಟ

    -ಖಾಕಿ ಸರ್ಪಗಾವಲಿನ ನಡ್ವೆ  ಬಿಂದಾಸ್ ಮಾರಾಟ
    -ಹಸಿವು ತುಂಬಿಸುವರಿಂದಲೇ ಮದ್ಯ ಪೂರೈಕೆ

    ಬೆಂಗಳೂರು: ಕೊರೊನಾ ತಡೆಗಾಗಿ ವಿಧಿಸಿರುವ ಲಾಕ್‍ಡೌನ್ ನ್ನು ಕೆಲ ಖದೀಮರು ಬಂಡವಾಳವಾಗಿ ಮಾಡಿಕೊಂಡು ಅಕ್ರಮವಾಗಿ ಮದ್ಯ ಮಾರಾಟದಲ್ಲಿ ತೊಡಗಿಕೊಂಡಿದ್ದಾರೆ. ಪಬ್ಲಿಕ್ ಟಿವಿ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಎಣ್ಣೆ ದಂಧೆ ಬಯಲಾಗಿದೆ. ಲಾಕ್‍ಡೌನ್ ಹಿನ್ನೆಲೆಯಲ್ಲಿ ಸರ್ಕಾರ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಕೆಲ ದಂಧೆಕೋರರು ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡು 90 ರೂ. ಬೆಲೆಯ ಮದ್ಯವನ್ನು ಬರೋಬ್ಬರಿ 600 ರೂ.ಗೆ ಮಾರಾಟ ಮಾಡುತ್ತಿರೋದು ಪಬ್ಲಿಕ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ರಾಜ್ಯದ ಮೂಲೆ ಮೂಲೆಗಳಿಂದ ಮದ್ಯವನ್ನು ತರುತ್ತಿರುವ ದಂಧೆಕೋರರು ಖಾಕಿ ಸರ್ಪಗಾವಲಿನಲ್ಲೇ ರಾಜಾರೋಷವಾಗಿ ದಂಧೆ ನಡೆಸುತ್ತಿದ್ದಾರೆ. ಹೆದ್ದಾರಿಯಲ್ಲಿ ಖಾಕಿ ಬಂದೋಬಸ್ತ್ ಕಲ್ಪಿಸಲಾಗಿದ್ದರೂ, ಮದ್ಯ ಸಿಲಿಕಾನ್ ಸಿಟಿ ಪ್ರವೇಶಿಸುತ್ತಿರೋದು ಗಮನಿಸಿದ್ರೆ, ಮೇಲ್ನೋಟಕ್ಕೆ ಪೊಲೀಸರ ವೈಫಲ್ಯ ಎದ್ದು ಕಾಣಿಸುತ್ತಿದೆ.

    ಮಧ್ಯರಾತ್ರಿ ಎರಡು, ಮೂರು ಗಂಟೆಗೆ ರಾಮನಗರ, ಕುಣಿಗಲ್, ತುಮಕೂರಿನಿಂದ ಬೆಂಗಳೂರಿಗೆ ಮದ್ಯ ಪೂರೈಕೆ ಆಗುತ್ತಿದೆ. ಈ ಮದ್ಯವನ್ನು ಸ್ವಿಗ್ಗಿ, ಝೋಮ್ಯಾಟೊ ಬ್ಯಾಗ್ ಗಳಲ್ಲಿ ಖದೀಮರು ಹಾಕಿಕೊಂಡು ಸಿಲಿಕಾನ್ ಸಿಟಿಯಲ್ಲಿ ಮನೆ ಮನೆಗೆ ತೆರಳಿ ಸರಬರಾಜು ಮಾಡುತ್ತಿದ್ದಾರೆ. ಯಾರ ಭಯವಿಲ್ಲದೇ ಮದ್ಯ ಮಾರಾಟ ಮಾಡುತ್ತಿರೋದು ಸಿಲಿಕಾನ್ ಸಿಟಿ ಪೊಲೀಸರಿಗೆ ಗೊತ್ತೇ ಇಲ್ವಾ ಅನ್ನೋ ಪ್ರಶ್ನೆಗೆ ಉತ್ತರ ಸಿಗಬೇಕಿದೆ.

    ಅಕ್ರಮ ಮದ್ಯ ಮಾರಾಟದ ಸುದ್ದಿ ತಿಳಿಯುತ್ತಿದ್ದಂತೆ ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆ ತಂಡದ ಕ್ಯಾಮೆರಾದಲ್ಲಿ ಎಣ್ಣೆ ದಂಧೆ ಸಂಪೂರ್ಣವಾಗಿ ಸೆರೆಯಾಗಿದೆ. ಪಬ್ಲಿಕ್ ಟಿವಿ ಪ್ರತಿನಿಧಿ ಮದ್ಯ ಖರೀದಿಸುವ ಗ್ರಾಹಕನಾಗಿ ಮಾರುವೇಷದಲ್ಲಿ ಹೋದಾಗ ದಂಧೆಕೋರ ದಂಧೆಯ ಸಂಪೂರ್ಣ ಮಾಹಿತಿಯನ್ನು ರಿವೀಲ್ ಮಾಡಿದ್ದಾನೆ.

    ಸ್ಥಳ- ಸುಂಕದಕಟ್ಟೆ
    ಪಬ್ಲಿಕ್ ಟಿವಿ: ಎಷ್ಟು ಹೇಳಿದ್ರು
    ಮದ್ಯ ವಿತರಕ : 600 ರೂಪಾಯಿ
    ಪಬ್ಲಿಕ್ ಟಿವಿ: ಹೇ..ನನ್ಗೆ 550 ಹೇಳಿದ್ರು
    ಮದ್ಯ ವಿತರಕ: ಇಲ್ಲ.. ಕೇಳ್ರಿ..ಸಿಗೊದೆ ನಮ್ಗೆ 250. ಊರು ಕಡೆಯಿಂದ ತರಿಸೋದು ನಾವು. ಇಲ್ಲೆಲ್ಲ ಸೀಲ್ ಹೊಡೆದಿದಾರೆ.
    ಪಬ್ಲಿಕ್ ಟಿವಿ: ನೈಂಟಿ ರೂಪಿಸ್ ಬ್ರೋ ಇದು
    ಮದ್ಯ ವಿತರಕ: ಗೊತ್ತು ಗುರು..ನಮ್ಗೂ ಗೊತ್ತು ನಿಮ್ಗೂ ಗೊತ್ತು. ನಾವು ಅಲ್ಲಿಂದ ತರಬೇಕಲ್ಲ
    ಪಬ್ಲಿಕ್ ಟಿವಿ: ಎಲ್ಲಿಂದ ತರೋದು
    ಮದ್ಯ ವಿತರಕ: ಬೇರೆ ಕಡೆಯಿಂದ.
    ಪಬ್ಲಿಕ್ ಟಿವಿ: ಒಂದು ರೇಟ್ ಮಾಡಿ ಕೊಡಿ. ಇವತ್ತಿಗಷ್ಟೆ ಅಲ್ಲ.
    ಮದ್ಯ ವಿತರಕ: ನೋಡಣ್ಣ. ನಮ್ದು ಆಗಿದ್ರೆ ಹೇಗಾದ್ರೂ ಆಗ್ತಿತ್ತು. ಅಲ್ಲೇ 550 ರೂಪಾಯಿ ಕೊಟ್ಟು ತರ್ತಿವಿ.
    ಮತ್ತೊಬ್ಬ ಮದ್ಯ ವಿತರಕ: ಅದ್ರಲ್ಲಿ ಏನು ಸಿಗಲ್ಲಣ್ಣ. ಸುಮ್ನೆ
    ಪಬ್ಲಿಕ್ ಟಿವಿ: ನೀವು ಎಲ್ಲಿಂದ ತರೋದು?
    ಮದ್ಯ ವಿತರಕ: ರಾಮನಗರ ಆಕಡೆ ಈಕಡೆಯಿಂದ ತರೋದು.ಕುಣಿಗಲ್ ಯಡಿಯೂರುಯಿಂದ ತರ್ತಾರೆ. ಇಲ್ಲಿ ಎಲ್ಲಿಯೂ ಸಿಗಲ್ಲಣ್ಣ
    ಪಬ್ಲಿಕ್ ಟಿವಿ: ಬೇರೆ ಕಡೆಯಿಂದ ತರ್ತಿರಲ್ಲ..ನಿಮ್ಗೆ ಭಯ ಆಗಲ್ವಾ..!
    ಮದ್ಯ ವಿತರಕ: ಆಗ್ತದೆ ಏನು ಮಾಡೋದು ಅಣ.
    ಪಬ್ಲಿಕ್ ಟಿವಿ: ಕವರ್ ಇಲ್ವಾ?
    ಮದ್ಯ ವಿತರಕ: ಹಂಗೆ ಎತ್ಕೊಂಡು ಬಿಡಿ
    ಪಬ್ಲಿಕ್ ಟಿವಿ: ಹೇಗೆ ಒಟ್ಟಿಗೆ ಕಾಟನ್ ತರ ತರಿಸ್ತೀರಾ..?
    ಮದ್ಯ ವಿತರಕ: ಒಂದು ಕೇಸ್ ತರಿಸ್ತೀವಿ
    ಪಬ್ಲಿಕ್ ಟಿವಿ : ಎಲ್ಲಿಂದ ಹೇಗೆ ತರಿಸ್ತಿರಿ?
    ಮದ್ಯ ವಿತರಕ: ಇದ್ರಲ್ಲಿ ಇಟ್ಕೊಳ್ಳೋದು
    ಪಬ್ಲಿಕ್ ಟಿವಿ: ಬೈಕಾ..? ಬೈಕ್ ಬಿಡಲ್ವಾಲ್ಲ?
    ಮದ್ಯ ವಿತರಕ: ಬರಬಹುದು
    ಪಬ್ಲಿಕ್ ಟಿವಿ: ಬೈಕ್ ಓಡಾಡಂಗಿಲ್ವಲ್ಲ. ಹಂಗೆ ಮಾಡ್ತಿರಿ?
    ಮದ್ಯ ವಿತರಕ: ಅದು ಇದು ಹುಷಾರಿಲ್ಲ ಅಂತ ಹೇಳ್ಕೊಂಡು ಹೋಗಬೇಕು.
    ಪಬ್ಲಿಕ್ ಟಿವಿ: ಕೇಸಲ್ಲಿ ಎಷ್ಟಿರುತ್ತೆ?
    ಮದ್ಯ ವಿತರಕ : 48
    ಪಬ್ಲಿಕ್ ಟಿವಿ : 48ನೂ ಗಾಡಿಯಲ್ಲೇ ಇಡುತ್ತಾ…?
    ಮದ್ಯ ವಿತರಕ: ಅಲ್ಲಿಲ್ಲಿ ಇಡ್ಕೊಂಡು ಬರ್ತಿವಿ
    ಪಬ್ಲಿಕ್ ಟಿವಿ: ಅಷ್ಟು ರಿಸ್ಕ್ ತೊಗೋತಿರಿ. ಯಾರದ್ರೂ ಏನಾದ್ರು ಮಾಡಿದ್ರೆ
    ಮದ್ಯ ವಿತರಕ: ಸಿಗೋದು 50 ರೂಪಾಯಿ ಅಷ್ಟೆ
    ಪಬ್ಲಿಕ್ ಟಿವಿ: ಮತ್ತೆ ಯಾಕೆ ಅಷ್ಟೊಂದು ರಿಸ್ಕ್ ತೊಗೊತಿರಿ. ಕಾಲೇಜಿಗೆ ಹೋಗಲ್ವಾ..?
    ಮದ್ಯ ವಿತರಕ: ಇನ್ನೊಂದು ಎಕ್ಸಾಂ ಇದೆ. ಇಂಗ್ಲೀಷ್.
    ಪಬ್ಲಿಕ್ ಟಿವಿ: ಸೆಕೆಂಡ್ ಪಿಯುಸಿನಾ
    ಮದ್ಯ ವಿತರಕ: ಹು.
    ಪಬ್ಲಿಕ್ ಟಿವಿ: ಈಗ ನಿಮ್ಗೆ ಪಾಸ್ ಇರಲ್ವಲ್ಲ. ಹೇಗೆ ಹೊರಗಡೆ ಬರ್ತಿರಿ
    ಮದ್ಯ ವಿತರಕ: ನೈಟ್ 2, 3 ಗಂಟೆಗೆ ಹೋಗ್ತಿವಿ

    ಸುಂಕದಕಟ್ಟೆ, ಕುರುಬರ ಹಳ್ಳಿ ಹೀಗೆ ಬೆಂಗಳೂರಿನ ಹಲವು ಕಡೆ ಮದ್ಯ ಮಾರಾಟ ಮಾಡಲಾಗುತ್ತಿದೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಮಧ್ಯರಾತ್ರಿ ತರಕಾರಿ, ದಿನಸಿ ತರುವ ವಾಹನಗಳ ಮೂಲಕವೂ ಮದ್ಯ ನಗರಕ್ಕೆ ಬರುತ್ತಿದೆ ಎನ್ನಲಾಗುತ್ತಿದೆ. ಟೋಲ್ ಗಳಲ್ಲಿ ಸಾಲು ಸಾಲು ಪೊಲೀಸರು ಇದ್ರೂ, ಅವರ ದಿಕ್ಕು ತಪ್ಪಿಸಿ ಎಣ್ಣೆ ರವಾನೆ ಮಾಡಲಾಗುತ್ತದೆ. ಈ ಸುದ್ದಿ ನೋಡಿಯಾದ್ರೂ ಅಬಕಾರಿ ಸಚಿವ ನಾಗೇಶ್ ಮತ್ತು ಪೊಲೀಸರು ಎಚ್ಚೆತ್ತುಕೊಂಡು ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕಿದೆ.

  • ಹೋಟೆಲ್‍ಗೆಂದು ಲೈಸೆನ್ಸ್ ಪಡೆದು ಮದ್ಯ ಮಾರಾಟ – 63 ಲೀಟರ್ ಮದ್ಯ ವಶ

    ಹೋಟೆಲ್‍ಗೆಂದು ಲೈಸೆನ್ಸ್ ಪಡೆದು ಮದ್ಯ ಮಾರಾಟ – 63 ಲೀಟರ್ ಮದ್ಯ ವಶ

    ಬೆಂಗಳೂರು: ನಗರದ ಲಗ್ಗರೆ ವಾರ್ಡ್ ನ ಹೋಟೆಲ್ ಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಅಡ್ಡೆಗಳ ಮೇಲೆ ಪಾಲಿಕೆ ಆರೋಗ್ಯ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಹಿರಿಯ ಆರೋಗ್ಯ ಅಧಿಕಾರಿ ದಿವ್ಯ ನೇತೃತ್ವದಲ್ಲಿ ಈ ದಾಳಿ ಮಾಡಲಾಗಿದೆ.

    ಲಗ್ಗೆರೆಯ ಬಾಲಾಜಿ ಹಿಂದೂ ಮಿಲಿಟರಿ ಹೋಟೆಲ್ ಶೋಧಿಸಿ, ಅಕ್ರಮವಾಗಿ ಮಾರಾಟ ಮಾಡುತ್ತಿದ್ದ 24,840 ಲೀಟರ್ ಮದ್ಯ, 27,950 ಲೀಟರ್ ಬಿಯರ್ ವಶಪಡಿಸಿಕೊಳ್ಳಲಾಗಿದೆ. ಲಗ್ಗೆರೆ ಮುನೇಶ್ವರ ಬಡಾವಣೆಯ ಜೈ ಮಾರುತಿ ಮಿಲಿಟರಿ ಹೋಟೆಲ್ ಮೇಲೆ ದಾಳಿ ಮಾಡಿ 10,800 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ. ಇತ್ತ ಶ್ರೀನಿವಾಸ ಮಿಲಿಟರಿ ಹೋಟೆಲ್‍ನಿಂದ 9 ಲೀಟರ್ ಮದ್ಯ, 5.250 ಲೀಟರ್ ಬಿಯರ್ ಜಪ್ತಿ ಮಾಡಲಾಗಿದೆ.

    ದಾಳಿ ನಡೆಸಲಾದ ಹೋಟೆಲ್‍ಗಳಿಗೆ ಆರೋಗ್ಯಾಧಿಕಾರಿಯಿಂದ ನೋಟಿಸ್ ಜಾರಿಯಾಗಿದ್ದು, ನೋಟಿಸ್ ಜಾರಿಗೊಳಿಸಿದ್ದಕ್ಕೆ ಮಾಜಿ ನಾಮನಿರ್ದೇಶಿತ ಸದಸ್ಯ ಸಿದ್ದೇಗೌಡರಿಂದ ನೋಟಿಸ್ ವಾಪಸ್ ಪಡೆಯುವಂತೆ ಒತ್ತಡ ಹಾಕಲಾಗಿದೆ ಎನ್ನಲಾಗಿದೆ. ಈ ದಾಳಿಯಲ್ಲಿ ಒಟ್ಟು 63,854 ಲೀಟರ್ ಮದ್ಯವನ್ನು ಪಾಲಿಕೆಯ ಆರೋಗ್ಯ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

  • ಅಕ್ರಮ ಮದ್ಯ ಮಾರಾಟ- ನಗರ ಸಭೆ ಜೆಡಿಎಸ್ ಸದಸ್ಯನ ಬಂಧನ

    ಅಕ್ರಮ ಮದ್ಯ ಮಾರಾಟ- ನಗರ ಸಭೆ ಜೆಡಿಎಸ್ ಸದಸ್ಯನ ಬಂಧನ

    ಮಂಡ್ಯ: ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಮಂಡ್ಯದ ನಗರಸಭೆ ಜೆಡಿಎಸ್ ಸದಸ್ಯ ಪೊಲೀಸ ಅತಿಥಿಯಾಗಿದ್ದು, ನಗರದ 12ನೇ ವಾರ್ಡ್‍ನ ನಗರ ಸಭೆಯ ಜೆಡಿಎಸ್ ಸದಸ್ಯ ಭರತೇಶ್ ಬಂಧಿತ ಆರೋಪಿಯಾಗಿದ್ದಾನೆ.

    ಮಂಡ್ಯ ತಾಲೂಕಿನ ಕೊಮ್ಮೇರಹಳ್ಳಿ ಗ್ರಾಮದ ಬಳಿ ಭರತೇಶ್ ಅಕ್ರಮ ಮದ್ಯ ಮಾರಾಟದ ಜೊತೆಗೆ ಜೂಜಾಟ ನಡೆಸುತ್ತಿದ್ದ ಎಂಬ ದೂರುಗಳು ಹಲವು ದಿನಗಳಿಂದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಬರುತ್ತಿದ್ದವು. ಈ ಹಿನ್ನೆಲೆಯಲ್ಲಿ ಇಂದು ಎಎಸ್‍ಪಿ ಕೆ.ಪರಶುರಾಮ್ ಅವರ ಸೂಚನೆ ಮೇರಗೆ ಪೊಲೀಸರು ಕೊಮ್ಮೇರಹಳ್ಳಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

    ಪೊಲೀಸ್ ಪರಿಶೀಲನೆ ವೇಳೆ ಭರತೇಶ್ ಅಕ್ರಮ ಮದ್ಯ ಮಾರಟ ಮಾಡುತ್ತಿದ್ದು ಕಂಡುಬಂದಿದೆ. ಸ್ಥಳದಲ್ಲೇ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಸದ್ಯ ಭರತೇಶ್‍ನನ್ನು ನ್ಯಾಯಾಂಗ ವಶಕ್ಕೆ ನೀಡಿದ್ದಾರೆ. ಈ ಬಗ್ಗೆ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.