Tag: ಅಕ್ರಮ ಚಟುವಟಿಕೆ

  • ಪರಪ್ಪನ ಅಗ್ರಹಾರದಲ್ಲಿ ಅಕ್ರಮ ಚಟುವಟಿಕೆ ಹಿನ್ನೆಲೆ ರೇಡ್ ಆಗಿದೆ: ಆರಗ ಜ್ಞಾನೇಂದ್ರ

    ಪರಪ್ಪನ ಅಗ್ರಹಾರದಲ್ಲಿ ಅಕ್ರಮ ಚಟುವಟಿಕೆ ಹಿನ್ನೆಲೆ ರೇಡ್ ಆಗಿದೆ: ಆರಗ ಜ್ಞಾನೇಂದ್ರ

    ಶಿವಮೊಗ್ಗ: ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಕ್ರಮ ಚಟುವಟಿಕೆಯ ಬಗ್ಗೆ ನನ್ನ ಗಮನಕ್ಕೂ ಬಂದಿದ್ದು, ಈಗಾಗಲೇ ಒಂದು ತಿಂಗಳ ಹಿಂದೆ ಪೊಲೀಸ್ ರೇಡ್ ಸಹ ಆಗಿದೆ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ರಮ ಚಟುವಟಿಕೆಯ ಬಗ್ಗೆ ತನಿಖೆ ನಡೆಸಲು ಈಗಾಗಲೇ ಸೂಚನೆ ನೀಡಿದ್ದೇನೆ. ಮುಂದೆಯೂ ಕೂಡಾ ಆರೋಪಿಗಳಿಗೆ ಗಾಂಜಾ ಸೇರಿದಂತೆ ಬೇರೆ ಬೇರೆ ಸೌಲಭ್ಯ ನೀಡುವುದನ್ನು ನಿರ್ಬಂಧ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತೇನೆ. ನಾಳೆ ಬೆಂಗಳೂರಿಗೆ ಹೋದ ನಂತರ ಈ ಬಗ್ಗೆ ಹಿರಿಯ ಅಧಿಕಾರಿಗಳ ಜೊತೆ ಮಾತನಾಡಿ, ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು.

    ಉಸ್ತುವಾರಿ ಬದಲಾವಣೆ ಅಸಮಾಧಾನವಿಲ್ಲ: ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಬದಲಾವಣೆಗೆ ಯಾವುದೇ ಅಸಮಾಧಾನ ಇಲ್ಲ. ನಾವು ಕೆಲಸ ಮಾಡುವವರು. ಚಿಕ್ಕಮಗಳೂರು ಕೊಟ್ಟರೆ ಏನು, ತುಮಕೂರು ಕೊಟ್ಟರೆ ಏನು. ಅಲ್ಲಿಗೂ ಹೋಗಿ ಕೆಲಸ ಮಾಡುತ್ತೇನೆ. ಈಗಾಗಲೇ ಒಂದು ಜಿಲ್ಲೆ ನೋಡಿದ್ದೆ. ಈಗ ಇನ್ನೊಂದು ಜಿಲ್ಲೆ ಒಳಗೆ ಹೋಗಿ ನೋಡುವಂತಹದ್ದು, ರಿವ್ಯೂ ಮಾಡೋದು ಸಂತೋಷ ಕೊಡುತ್ತದೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ವರಿಷ್ಠರ ಸೂಚನೆ ಮೇರೆಗೆ ಜಿಲ್ಲಾ ಉಸ್ತುವಾರಿ ಹಂಚಿಕೆ: ಸೋಮಣ್ಣ

    Araga Jnanendra

    ಸಚಿವ ಸಂಪುಟ ವಿಸ್ತರಣೆ ಬಗ್ಗೆ ಯಾವುದೇ ಚಿಂತೆ ಇಲ್ಲ. ಅದನ್ನೆಲ್ಲಾ ಮುಖ್ಯಮಂತ್ರಿ ಗಮನಿಸಿಕೊಳ್ಳುತ್ತಾರೆ ಎಂದ ಅವರು, ಹಿರಿಯ ಶಾಸಕರ ಸಭೆ ವಿಚಾರವಾಗಿ ಮಾತನಾಡಿ, ಸಭೆ ನಡೆದಿದೆಯೋ, ಇಲ್ಲವೋ ಗೊತ್ತಿಲ್ಲ. ಅನೇಕ ಬಾರಿ ನಾವು ಸಹ ಎಲ್ಲರೂ ಸೇರಿಕೊಳ್ಳುತ್ತಿರುತ್ತೇವೆ. ಅದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅವಶ್ಯಕತೆ ಇಲ್ಲ. ಎಲ್ಲರೂ ಒಳ್ಳೆಯವರು, ಪಕ್ಷ ಕಟ್ಟಿದವರು ಇದ್ದಾರೆ. ಯಾರೂ ಸಹ ಎಂದಿಗೂ ಪಕ್ಷಕ್ಕೆ ಹಾನಿ ಮಾಡುವ ಕೆಲಸ ಮಾಡುವುದಿಲ್ಲ. ನಮ್ಮಲ್ಲಿ ವಲಸೆ, ಮೂಲ ಬಿಜೆಪಿ ಎನ್ನುವುದು ಇಲ್ಲ. ಎಲ್ಲರೂ ಈಗಾಗಲೇ ನಮ್ಮ ಜೊತೆ ಸೇರಿ ಹೋಗಿದ್ದಾರೆ ಎಂದರು. ಇದನ್ನೂ ಓದಿ: ಬಿಜೆಪಿಯಲ್ಲಿ ಉಸ್ತುವಾರಿ ಸಚಿವರ ಕಿತ್ತಾಟ – ಮಾಧುಸ್ವಾಮಿ, ಸೋಮಣ್ಣ, ಎಂಟಿಬಿಗೆ ಅಸಮಾಧಾನ

  • 300ಕ್ಕೂ ಹೆಚ್ಚು ರೌಡಿಶೀಟರ್‌ಗಳ ಪರೇಡ್ – ಎಸ್‍ಪಿಯಿಂದ ವಾರ್ನಿಂಗ್

    300ಕ್ಕೂ ಹೆಚ್ಚು ರೌಡಿಶೀಟರ್‌ಗಳ ಪರೇಡ್ – ಎಸ್‍ಪಿಯಿಂದ ವಾರ್ನಿಂಗ್

    ದಾವಣಗೆರೆ: ಗಣೇಶ ಚತುರ್ಥಿ ಹಾಗೂ ಮೊಹರಂ ಹಬ್ಬಗಳ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ನೂತನ ಎಸ್‍ಪಿ ಹನುಮಂತರಾಯ ಅವರು ರೌಡಿಗಳ ಪರೇಡ್ ನಡೆಸಿದರು.

    ನಗರದ ಡಿಆರ್ ಮೈದಾನದಲ್ಲಿ ರೌಡಿಗಳ ಪರೇಡ್ ನಡೆಸಿದ್ದು, ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಿಂದ 300ಕ್ಕೂ ಹೆಚ್ಚು ರೌಡಿಶೀಟರ್‌ಗಳನ್ನು ಕರೆ ತರಲಾಯಿತು. ಎಸ್‍ಪಿ ಹನುಮಂತರಾಯ ಅವರು ಪ್ರತಿಯೊಬ್ಬ ರೌಡಿಶೀಟರ್ ಹಿನ್ನೆಲೆಯ ಬಗ್ಗೆ ಮಾಹಿತಿ ಪಡೆದುಕೊಂಡರು.

    ಅಲ್ಲದೆ ಎಸ್‍ಪಿ ಹನುಮಂತರಾಯ ರೌಡಿಶೀಟರ್‌ಗಳಿಗೆ ವಾರ್ನಿಂಗ್ ಕೂಡ ಮಾಡಿದರು. ಯಾವುದೇ ಪ್ರಕರಣದಲ್ಲಿ ಭಾಗಿಯಾದರೆ ಮುಂದಿನ ದಿನಗಳಲ್ಲಿ ಸನ್ನಡತೆಯ ಆಧಾರದ ಮೇಲೆ ರೌಡಿಶೀಟರ್ ತೆಗೆದು ಹಾಕಲಾಗುವುದು. ಇನ್ಮುಂದೆಯಾದರು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಖಡಕ್ ವಾರ್ನಿಂಗ್ ನೀಡಿದರು.

    ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಎಸ್‍ಪಿ, ಜಿಲ್ಲೆಯಲ್ಲಿ 697 ರೌಡಿಶೀಟರ್ ಗಳಿದ್ದು, ಕೆಲವರು ಕೋರ್ಟ್ ಕೇಸ್‍ಗಳಿದೆ ಹಾಗಾಗಿ ಅವರು ಗೈರಾಗಿದ್ದಾರೆ. ಅವರನ್ನು ಮುಂದಿನ ದಿನಗಳಲ್ಲಿ ಪರೇಡ್ ನಡೆಸಲಾಗುವುದು, ಮತ್ತೊಂದು ಪ್ರಕರಣ ಏನಾದ್ರು ಭಾಗಿಯಾದ್ರೆ ರೌಡಿಶೀಟರ್‌ಗಳನ್ನು ಗಡಿ ಪಾರು ಮಾಡಲಾಗುತ್ತದೆ. ಅಕ್ರಮ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ಎಚ್ಚರಿಕೆ ನೀಡಿದ್ದೇನೆ ಎಂದು ಹೇಳಿದರು.

  • ಪ್ರವಾಸಿ ಮಂದಿರದಲ್ಲಿ ರಾತ್ರಿ ವೇಳೆ ಅಕ್ರಮ ಚಟುವಟಿಕೆ ಮಾಡುತ್ತಿದ್ದವರ ಮೇಲೆ ದಾಳಿ

    ಪ್ರವಾಸಿ ಮಂದಿರದಲ್ಲಿ ರಾತ್ರಿ ವೇಳೆ ಅಕ್ರಮ ಚಟುವಟಿಕೆ ಮಾಡುತ್ತಿದ್ದವರ ಮೇಲೆ ದಾಳಿ

    ಕೋಲಾರ: ನಗರದ ಹೃದಯ ಭಾಗದಲ್ಲಿರುವ ಪ್ರವಾಸಿ ಮಂದಿರದ ಮೇಲೆ ಮಂಗಳವಾರ ರಾತ್ರಿ ಜಿಲ್ಲಾಧಿಕಾರಿ ಜಿ.ಸತ್ಯವತಿ ನೇತೃತ್ವದ ತಂಡ ದಾಳಿ ನಡೆಸಿದೆ.

    ಪ್ರವಾಸಿ ಮಂದಿರದಲ್ಲಿ ರಾತ್ರಿ ವೇಳೆ ಅಕ್ರಮ ಚಟುವಟಿಕೆಗಳು ನಡೆಯುತ್ತವೆ, ಹಲವಾರು ಜನ ಅಕ್ರಮವಾಗಿ ಆವರಣದಲ್ಲಿ ಕುಳಿತು ಮದ್ಯ ಸೇವನೆ ಮಾಡೋದು ಜೊತೆಗೆ ಕಾರ್ ಗಳನ್ನು ತಂದು ಪಾರ್ಕ್ ಮಾಡಿ, ಕಾರ್ ನಲ್ಲೇ ಅಕ್ರಮ ಚಟುವಟಿಕೆಗಳು ನಡೆಯುತ್ತವೆ ಎನ್ನುವ ಮಾಹಿತಿ ಮೇರೆಗೆ ಡಿಸಿ ಸತ್ಯವತಿ ದಾಳಿ ಮಾಡಿದರು.

    ಇದೇ ವೇಳೆ ಡಿಸಿ ಅಲ್ಲಿಗೆ ಬರುತ್ತಿದ್ದಂತೆ ಅಲ್ಲಿದ್ದ ಜನರೆಲ್ಲಾ ಕುಡಿಯೋದನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಅದರಲ್ಲಿ ಕೆಲವರ ಫೋಟೋಗಳನ್ನು ತೆಗೆದುಕೊಂಡರು. ಈ ವೇಳೆ ಅಲ್ಲಿ ಬಿಟ್ಟು ಓಡಿ ಹೋಗಿದ್ದ ಸುಮಾರು ಎಂಟು ದ್ವಿಚಕ್ರ ವಾಹನಗಳು ಹಾಗೂ ಒಂದು ಕಾರ್ ನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

    ಇದೇ ವೇಳೆ ಲೋಕೋಪಯೋಗಿ ಇಲಾಖೆಗೆ ಸೇರಿದ ಪ್ರವಾಸಿ ಮಂದಿರ ಇದಾಗಿರುವ ಕಾರಣ ಸ್ಥಳಕ್ಕೆ ಬಂದ ಮುಖ್ಯ ಎಂಜಿನಿಯರ್ ಮುನಿ ಆಂಜಿನಪ್ಪ ಅವರಿಗೆ ಡಿಸಿ ಜಿ.ಸತ್ಯವತಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಕೂಡಲೇ ನಿಮ್ಮೆ ಮೇಲೆ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸ್ಸು ಮಾಡುತ್ತೇನೆ ಎಂದು ಸ್ಥಳದಲ್ಲೇ ಇದೇನು ಐಬಿ ನಾ ಇಲ್ಲಾ ಬಾರ್ ಎಂದು ತರಾಟೆಗೆ ತೆಗೆದುಕೊಂಡರು.

    ಇನ್ನು ಮುಂದೆ ಈ ರೀತಿಯ ಅಕ್ರಮ ಚಟುವಟಿಕೆಗಳು ಬಂದ್ ಆಗಬೇಕು ಎಂದು ಎಚ್ಚರಿಕೆ ನೀಡಿದರು. ಅಲ್ಲದೆ ರಸ್ತೆಗಳು ಹಾಳಾಗಿದ್ದು ಕೂಡಲೇ ಅವುಗಳನ್ನು ಸರಿಮಾಡಿ ಎಂದು ಆದೇಶ ಮಾಡಿದರು.