Tag: ಅಕ್ರಮ ಗಣಿಗಾರಿಕೆ

  • ಸ್ಫೋಟದ ಸ್ಥಳಕ್ಕೆ ಸುಧಾಕರ್ ಭೇಟಿ – ಕ್ರಷರ್ ಮಾಲೀಕರ ಬಂಧನಕ್ಕೆ ಆದೇಶ

    ಸ್ಫೋಟದ ಸ್ಥಳಕ್ಕೆ ಸುಧಾಕರ್ ಭೇಟಿ – ಕ್ರಷರ್ ಮಾಲೀಕರ ಬಂಧನಕ್ಕೆ ಆದೇಶ

    ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಯಾವುದೇ ಅಕ್ರಮ ಗಣಿಗಾರಿಕೆಗಳು ನಡೆಯುತ್ತಿಲ್ಲ. ಶಿವಮೊಗ್ಗ ಪ್ರಕರಣದ ಬಳಿಕ ನಿರಂತರವಾಗಿ ಸಭೆ ನಡೆಸಿ ಅಕ್ರಮ ಗಣಿಗಾರಿಕೆ ಬಗ್ಗೆ ತನಿಖೆ ನಡೆಸಲು ಸೂಚಿಸಲಾಗಿತ್ತು. ಅಕ್ರಮ ಸ್ಫೋಟಕಗಳ ಸಂಗ್ರಹಕ್ಕೆ ಅವಕಾಶಕ ಕೊಡಬೇಡಿ ಅಂತ ಹೇಳಿದ್ದೆ. ಈ ಸಂಬಂಧ ಅಧಿಕಾರಿಗಳು ಅರಿವು ಮೂಡಿಸುವ ಕಾರ್ಯಕ್ರಮ ಸಹ ಮಾಡಿದ್ದಾರೆ. ಕೆಲ ದಿನಗಳ ಹಿಂದೆ ಭ್ರಮರವಾಸಿನಿ ಕ್ವಾರಿ ಮೇಲೆ ಎಸ್ಪಿ ದಾಳಿ ನಡೆಸಿ ನಿಯಮ ಉಲ್ಲಂಘಿಸಿದ ಕಾರಣ ಫೆಬ್ರವರಿ 07 ರಂದು ಕ್ವಾರಿ ಕ್ಲೋಸ್ ಮಾಡಿದ್ದರು. ಆದರೂ ಸ್ಫೋಟ ಸಂಭವಿಸಿರೋದು ದುರಂತ ಎಂದು ಸಚಿವ ಸುಧಾಕರ್ ಬೇಸರ ಹೊರ ಹಾಕಿದರು.

    ಭ್ರಮರವಾಸಿನಿ ಮಾಲೀಕರು ಜಿಲೆಟಿನ್ ಕಡ್ಡಿಗಳನ್ನ ದಾಸ್ತಾನು ಮಾಡಿದ್ರು ಅಂತ ತಿಳಿದಿದೆ. ಅದೇ ದಾಸ್ತಾನು ಕಾಡಿನಲ್ಲಿ ಎಸೆದು ಹೋಗಲು ಬಂದಾಗ ಮೊಬೈಲ್ ಆನ್ ಮಾಡಿದಾಗ ಸ್ಫೋಟ ಸಂಭವಿಸಿರುವ ಸಾಧ್ಯತೆಗಳಿವೆ. ಪೊಲೀಸರು ಪ್ರಾಥಮಿಕ ತನಿಖೆ ಮಾಡಿ ವರದಿ ಸಲ್ಲಿಸಲಿದ್ದಾರೆ ಎಂದು ತಿಳಿಸಿದರು.

    ಸ್ಫೋಟದಲ್ಲಿ ಒಟ್ಟು ಆರು ಜನರು ಸಾವನ್ನಪ್ಪಿದ್ದಾರೆ. ಭ್ರಮರವಾಸಿನಿಯ ಮೂವರು ಮಾಲೀಕರ ಬಂಧನಕ್ಕಾಗಿ ತಂಡ ರಚನೆ ಮಾಡಲಾಗಿದ್ದು, ಕಾನೂನು ರೀತಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.

    ಭ್ರಮರವಾಸಿನಿ ಕ್ರಷರ್ ನ ಮಾಲೀಕರು ಸ್ಥಳೀಯ ಬಿಜೆಪಿ ಮುಖಂಡ ನಾಗರಾಜು ಹಾಗೂ ಆಂಧ್ರಮೂಲದ ಶಿವಾರೆಡ್ಡಿ ಹಾಗೂ ರಾಘವೇಂದ್ರ ರೆಡ್ಡಿ ಅಂತ ತಿಳಿದುಬಂದಿದೆ.

  • ಚಿಕ್ಕಬಳ್ಳಾಪುರದ ಹಿರೇನಾಗವಲ್ಲಿಯಲ್ಲಿ ಜಿಲೆಟಿನ್ ಸ್ಫೋಟ – ಐವರು ಕಾರ್ಮಿಕರು ಬಲಿ

    ಚಿಕ್ಕಬಳ್ಳಾಪುರದ ಹಿರೇನಾಗವಲ್ಲಿಯಲ್ಲಿ ಜಿಲೆಟಿನ್ ಸ್ಫೋಟ – ಐವರು ಕಾರ್ಮಿಕರು ಬಲಿ

    – ಜಿಲೆಟಿನ್ ಶಿಫ್ಟ್ ಮಾಡ್ತಿದ್ದ ಕಾರ್ಮಿಕರು ಪೀಸ್ ಪೀಸ್
    – ದುರಂತಕ್ಕೆ ಸಾಕ್ಷಿ ಹೇಳ್ತಿವೆ ಕಾರ್ಮಿಕರ ದೇಹದ ಮಾಂಸ ಮುದ್ದೆ

    ಚಿಕ್ಕಬಳ್ಳಾಪುರ: ಶಿವಮೊಗ್ಗ ಗಣಿ ದುರಂತ ಮಾಸುವ ಮುನ್ನವೇ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮತ್ತೊಂದು ಗಣಿ ಸ್ಪೋಟ ಸಂಭವಿಸಿದೆ. ಚಿಕ್ಕಬಳ್ಳಾಪುರ ತಾಲೂಕು ಹಿರೇನಾಗವಲ್ಲಿ ಗ್ರಾಮದ ಬಳಿಯ ಭ್ರಮರವಾಸಿನಿ ಕ್ರಷರ್ ನಿಂದ ಸರಿಸುಮಾರು ಒಂದೂವರೆ ಕಿಲೋಮೀಟರ್ ದೂರದ ಅರಣ್ಯಪ್ರದೇಶದಲ್ಲಿ ಈ ಸ್ಫೋಟ ಸಂಭವಿಸಿದೆ. ಈ ಸ್ಫೋಟದ ತೀವ್ರತೆಗೆ ಐದು ಮಂದಿ ಮೃತಪಟ್ಟಿದ್ದು, ಒರ್ವ ಗಾಯಳುವನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

    ಘಟನೆಯಲ್ಲಿ ಕ್ರಷರ್ ಇಂಜಿನಿಯರ್ ಉಮಾಕಾಂತ್, ಕಂಪ್ಯೂಟರ್ ಅಪರೇಟರ್ ಆದ ಗಂಗಾಧರ್, ವೇಯರ್ ಆದ ಮುರುಳಿ ಹಾಗೂ ವಾಚ್ ಮೆನ್ ಮಹೇಶ್ ಸೇರಿದಂತೆ ಸ್ಥಳೀಯ ರಾಮು ಎಂಬಾತ ಮೃತಪಟ್ಟಿದ್ದಾರೆ. ಟಾಟಾ ಏಸ್ ಚಾಲಕ ರಿಯಾಜ್ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮೃತರು ಟಾಟಾ ಏಸ್ ಹಾಗೂ ಒಂದು ಬೈಕ್ ಮೂಲಕ ಭ್ರಮರವಾಸಿನಿ ಕ್ರಷರ್ ನಿಂದ ಒಂದು ಕಿಲೋಮೀಟರ್ ದೂರದ ಅರಣ್ಯ ಪ್ರದೇಶಕ್ಕೆ ತೆರಳಿ ಅಲ್ಲಿ ಅಕ್ರಮವಾಗಿ ಅಡಗಿಸಿಟ್ಟಿದ್ದ ಜಿಲೆಟಿನ್ ಹಾಗೂ ಎಲೆಕ್ಟ್ರಿಕ್ ಡಿಟೋನೇಟರ್ಸ್ ಹೊತ್ತು ತರಲು ಮುಂದಾಗಿದ್ದಾರೆ.

    ಈ ವೇಳೆ ಬೈಕ್‍ನಲ್ಲಿ ಮುಂದೆ ಸಾಗಿದರೆ ಹಿಂದೆ ಟಾಟಾ ಏಸ್ ವಾಹನ ಸಾಗಿದೆ. ಕೊನೆಗೆ ಅರಣ್ಯ ಪ್ರದೇಶದಲ್ಲಿ ಅಡಗಿಸಿದ್ದ ಸ್ಫೋಟಕಗಳನ್ನ ಹೊತ್ತು ತರುವ ವೇಳೆ ಏಕಾಏಕಿ ಬ್ಲಾಸ್ಟ್ ಆಗಿದ್ದು, ಪರಿಣಾಮ ಐದು ಮಂದಿಯ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಛಿಧ್ರ ಛಿದ್ರವಾಗಿ ಮೃತದೇಹಗಳೆಲ್ಲಾ ನೂರಾರು ಮೀಟರ್ ಚೆಲ್ಲಾಪಿಲ್ಲಿಗಳಾಗಿವೆ. ಇನ್ನೂ ಭ್ರಮರವಾಸಿನಿ ಕ್ರಷರ್ ನ ಮಾಲೀಕರು ಸ್ಥಳೀಯ ಬಿಜೆಪಿ ಮುಖಂಡ ನಾಗರಾಜು ಹಾಗೂ ಆಂಧ್ರಮೂಲದ ಶಿವಾರೆಡ್ಡಿ ಹಾಗೂ ರಾಘವೇಂದ್ರ ರೆಡ್ಡಿ ಅಂತ ತಿಳಿದುಬಂದಿದೆ.

    ಕಳೆದ ವಾರ ಈ ಕ್ರಷರ್ ಮೇಲೆ ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಿದ್ದ ಸ್ಫೋಟಕಗಳನ್ನ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಲಾಗಿದೆ. ಹೀಗಾಗಿ ಪೊಲೀಸರು ಕಣ್ತಪ್ಪಿಸಿ ಅಕ್ರಮವಾಗಿ ಸಂಗ್ರಹಿಸಿದ್ದ ಸ್ಫೋಟಕಗಳನ್ನ ಬಿಸಾಡಲು ಹೋದಾಗ ಘಟನೆ ನಡೆದಿರಬಹುದು ಅಂತ ಅಂದಾಜಿಸಲಾಗಿದೆ. ಸ್ಥಳಕ್ಕೆ ಚಿಕ್ಕಬಳ್ಳಾಪುರ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಡಿ ಸಿ ಆರ್ ಲತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಅಕ್ರಮ ಗಣಿಗಾರಿಕೆಗೆ ಎನ್‍ಓಸಿ ಕೊಡಲು 10 ಲಕ್ಷ ಫಿಕ್ಸ್: ಹೆಚ್‍ಡಿಕೆ

    ಅಕ್ರಮ ಗಣಿಗಾರಿಕೆಗೆ ಎನ್‍ಓಸಿ ಕೊಡಲು 10 ಲಕ್ಷ ಫಿಕ್ಸ್: ಹೆಚ್‍ಡಿಕೆ

    – ನಾರಾಯಣಗೌಡ ವಿರುದ್ಧ ಹೆಚ್‍ಡಿಕೆ ಆರೋಪ

    ಮಂಡ್ಯ: ಜಿಲ್ಲೆಯಲ್ಲಿ ಶೇಕಡ 87 ರಷ್ಟು ಅಕ್ರಮ ಗಣಿಗಾರಿಕೆಗಳು ಇವೆ. ರಾಜ್ಯದಲ್ಲಿ ಅತೀ ಹೆಚ್ಚು ಅಕ್ರಮ ಗಣಿಗಾರಿಕೆ ನಡೆಯುತ್ತಿರೋದು ಮಂಡ್ಯ ಜಿಲ್ಲೆಯಲ್ಲಿ. ನಾರಾಯಣಗೌಡರು ಸಚಿವರಾದ ತಕ್ಷಣ ಅಕ್ರಮ ಗಣಿಗಾರಿಕೆಯನ್ನು ತಡೆಯುವ ಮೂಲಕ ಜಿಲ್ಲೆಯ ಸಂಪನ್ಮೂಲವನ್ನು ಉಳಿಸಬಹುದಿತ್ತು. ಆದರೆ ಇದೀಗ ಶಿವಮೊಗ್ಗದ ಘಟನೆಯ ಬಳಿಕ ಅವರು ಮಾತನಾಡುತ್ತಿದ್ದಾರೆ. ಮಂಡ್ಯದಲ್ಲಿ ಗಣಿಗಾರಿಕೆಗೆ ಎನ್‍ಓಸಿ ಕೊಡಲು 10 ಲಕ್ಷ ಫಿಕ್ಸ್ ಮಾಡಲಾಗಿದೆ ಎನ್ನಲಾಗುತ್ತಿದೆ. ಆ 10 ಲಕ್ಷ ರೂಪಾಯಿ ದುಡ್ಡು ಎಲ್ಲಿ ಹೋಯಿತು ಎಂದು ಸತ್ಯ ಹೇಳಬೇಕು ಎಂದು ನಾರಾಯಣಗೌಡ ವಿರುದ್ಧ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.

    ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಇಂದು ಖಾಸಗಿ ಕಾರ್ಯಕ್ರಮವೊಂದಕ್ಕೆ ಬಂದಿದ್ದ ಮಾಜಿ ಸಿಎಂ ಕುಮಾರಸ್ವಾಮಿ, ಮಾಧ್ಯಮದವರೊಂದಿಗೆ ಮಾತನಾಡಿದರು. ಈ ವೇಳೆ ಅಕ್ರಮ ಗಣಿಗಾರಿಕೆಯ ಕುರಿತು ಮಾತನಾಡಿದ ಅವರು. ನಾರಾಯಣಗೌಡ ಅವರು ಸಚಿವರಾಗಿ 14 ತಿಂಗಳುಗಳು ಆಗಿವೆ. ಆದರೆ ಇದೀಗ ಶಿವಮೊಗ್ಗದ ಘಟನೆಯ ನಂತರ ಮಂಡ್ಯ ಜಿಲ್ಲೆಯಲ್ಲಿನ ಅಕ್ರಮ ಗಣಿಗಾರಿಯನ್ನು ತಡೆಯಬೇಕು ಎಂದು ಅಧಿಕಾರಿಗಳಿಗೆ ಹೇಳಿದ್ದಾರೆ. ಇಷ್ಟು ದಿವಸ ಈ ಬಗ್ಗೆ ಏಕೆ ಮಾತನಾಡಲಿಲ್ಲ ಎಂದು ಪ್ರಶ್ನಿಸಿದರು.

    ಬೆಳಗಾವಿಯಲ್ಲಿ ಮರಾಠರ ಪುಡಾಂಟಿಕೆಯ ಕುರಿತು ಪ್ರತಿಕ್ರಿಯೆ ನೀಡಿದ ಅವರು, ರಾಜ್ಯ ಸರ್ಕಾರಕ್ಕೆ ಈ ವಿಚಾರದಲ್ಲಿ ಗಡಸು ನಿರ್ಧಾರ ತೆಗೆದುಕೊಳ್ಳಬೇಕು ಎಂದು ನಾನು ಹಲವು ಬಾರಿ ಹೇಳಿದ್ದೇನೆ. ಮರಾಠರನ್ನು ಮೆಚ್ಚಿಸಿಕೊಳ್ಳಲು ಈ ಸರ್ಕಾರ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.

  • ಅಕ್ರಮ ಗಣಿಗಾರಿಕೆ ನಡೆದರೆ ಅಧಿಕಾರಿಗಳೇ ಹೊಣೆ : ಬಿಎಸ್‌ವೈ

    ಅಕ್ರಮ ಗಣಿಗಾರಿಕೆ ನಡೆದರೆ ಅಧಿಕಾರಿಗಳೇ ಹೊಣೆ : ಬಿಎಸ್‌ವೈ

    – ಎಫ್‌ಡಿಎ ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳ ಅಮಾನತಿಗೆ ಸೂಚನೆ

    ಶಿವಮೊಗ್ಗ : ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲಾ ಅಕ್ರಮ ಗಣಿಗಾರಿಕೆಗಳಿಗೆ ತತ್ ಕ್ಷಣ ಕಡಿವಾಣ ಹಾಕುವಂತೆ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

    ಮಾಧ್ಯಮದವರ ಜೊತೆ ಮಾತನಾಡಿದ ಸಿಎಂ, ಅಕ್ರಮ ಗಣಿಗಾರಿಕೆ ನಿಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ ನಂತರವೂ ಅಕ್ರಮ ಗಣಿಗಾರಿಕೆ ನಡೆದರೆ ಅಧಿಕಾರಿಗಳನ್ನೇ ಹೊಣೆ ಮಾಡಲಾಗುತ್ತದೆ. ಎಲ್ಲ ಅಕ್ರಮ ಗಣಿಗಾರಿಕೆಗಳು ಕೂಡಲೇ ನಿಲ್ಲಬೇಕು.  ಅರ್ಜಿ ಹಾಕಿ ನಂತರ ಪರವಾನಗಿ ಪಡೆಯಬೇಕು. ಅಧಿಕಾರಿಗಳು ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅನುಮತಿ ನೀಡಬೇಕು ಎಂದರು.

    ಮಂಡ್ಯ ಜಿಲ್ಲೆಯ ಬೇಬಿ ಬೆಟ್ಟದ ಬಳಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಈ ಗಣಿಗಾರಿಕೆಯಿಂದ ಕೆಆರ್ ಎಸ್ ಜಲಾಶಯಕ್ಕೆ ಸಮಸ್ಯೆ ಎದುರಾಗಲಿದೆ. ಈಗಾಗಲೇ ಹಲವು ಬಾರಿ ಗಣಿಗಾರಿಕೆ ನಿಲ್ಲಿಸುವಂತೆ ಸೂಚನೆ ನೀಡಲಾಗಿದೆ. ಇದರ ನಡುವೆಯೂ ಅಲ್ಲೊಂದು ಇಲ್ಲೊಂದು ಕದ್ದುಮುಚ್ಚಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದು ಗಮನಕ್ಕೆ ಬಂದಿದ್ದು,  ಶೀಘ್ರವೇ ಇದಕ್ಕೂ ಕಡಿವಾಣ ಹಾಕಲಾಗುವುದು ಎಂದು ತಿಳಿಸಿದರು.

    ಅಮಾನತಿಗೆ ಸೂಚನೆ: ಕೆಪಿಎಸ್‌ಸಿ ಎಫ್ ಡಿಎ ಪ್ರಶ್ನೆ ಪತ್ರಿಕೆ ಪರೀಕ್ಷೆಗು ಮುನ್ನವೇ ಬಹಿರಂಗಗೊಂಡಿರುವ ವಿಚಾರ ಅಕ್ಷಮ್ಯ ಅಪರಾಧ. ಈ ಬಗ್ಗೆ ಅಧಿಕಾರಿಗಳಿಂದ ರಾತ್ರಿಯೇ ಮಾಹಿತಿ ಪಡೆದಿದ್ದೇನೆ. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ತಪ್ಪಿತಸ್ಥರ ಬಂಧನವಾಗಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು‌ ಮಾಡುವಂತೆ ಸೂಚಿಸಿದ್ದೇನೆ. ಅಗತ್ಯ ಬಿದ್ದರೆ ಹುದ್ದೆಯಿಂದ ವಜಾಗೊಳಿಸಲು ಸೂಚಿಸಲಾಗಿದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದರು. ಇದನ್ನೂ ಓದಿ: 1 ಪೇಪರ್‌ಗೆ 10 ಲಕ್ಷ ರೂ. ಡೀಲ್‌ – ಕೆಪಿಎಸ್‌ಸಿ ಕಚೇರಿಯಿಂದಲೇ ಎಫ್‌ಡಿಎ ಪ್ರಶ್ನೆ ಪತ್ರಿಕೆ ಲೀಕ್‌

  • ಹುಣಸೋಡು ಕ್ವಾರಿಗೆ ಸಿಎಂ ಕಾಟಾಚಾರದ ಭೇಟಿ – ಎರಡೇ ನಿಮಿಷದಲ್ಲಿ ಪರಿಶೀಲನೆ

    ಹುಣಸೋಡು ಕ್ವಾರಿಗೆ ಸಿಎಂ ಕಾಟಾಚಾರದ ಭೇಟಿ – ಎರಡೇ ನಿಮಿಷದಲ್ಲಿ ಪರಿಶೀಲನೆ

    ಶಿವಮೊಗ್ಗ: ಹುಣಸೋಡು ಕ್ವಾರಿಗೆ ಕಾಟಾಚಾರದ ಭೇಟಿ ನೀಡಿದ ಸಿಎಂ ಯಡಿಯೂರಪ್ಪನವರು ಎರಡೇ ನಿಮಿಷದಲ್ಲಿ ಪರಿಶೀಲನೆ ನಡೆಸಿದರು.

    ಸ್ಫೋಟಕದ ಮಾರಾಟ ಬಳಕೆ ಬಗ್ಗೆ ತನಿಖೆ ನಡೆಸಬೇಕಿದೆ. ಎಕೋ ಸೆನ್ಸಿಟೀವ್ ಝೋನ್ ಆಗಿರೋದರಿಂದ ಮರು ತನಿಖೆಗೆ ಸೂಚಿಸಿದ್ದೇನೆ. ತನಿಖೆಯ ನಂತರ ಕಠಿಣ ಕ್ರಮದ ಬಗ್ಗೆ ತೀರ್ಮಾನಿಸುತ್ತೇವೆ. ಕ್ರಷರ್‍ಗಷ್ಟೇ ಅನುಮತಿ ನೀಡಿದ್ದೇವೆ. ಕಲ್ಲು ಗಣಿಗಾರಿಕೆಗೆ ಅನುಮತಿಯೇ ಕೊಟ್ಟಿಲ್ಲ. ಆದರೆ ಕಲ್ಲು ಗಣಿಗಾರಿಕೆಯಲ್ಲಿ ತೊಡಗಿರುವವರ ವಿರುದ್ಧ ಯಾವ ರೀತಿಯ ಕ್ರಮ ಕೈಗೊಳ್ಳುತ್ತೇವೆ ಅನ್ನೋದರ ಬಗ್ಗೆ ಸಿಎಂ ಜಾಣ ಮೌನಕ್ಕೆ ಶರಣಾದರು.

    ಉಲ್ಟಾ ಹೊಡೆದ ಸಿಎಂ: ಇಂದು ಬೆಳಗ್ಗೆ ಬೆಂಗಳೂರಲ್ಲಿ ಮಾತಾಡಿ, ಅಕ್ರಮ ಗಣಿಗಾರಿಕೆ ಅವಕಾಶ ಕೊಡಲ್ಲ ಅಂದಿದ್ದರು. ಮೈಸೂರಲ್ಲಿ ಉಲ್ಟಾ ಹೊಡೆದರು. ಗಣಿಗಾರಿಕೆಯನ್ನ ನಿಲ್ಲಿಸೋಕೆ ಆಗಲ್ಲ. ಯಾರಾದರೂ ಗಣಿಗಾರಿಕೆ ಮಾಡ್ತೀನಿ ಅಂದ್ರೇ ಲೈಸೆನ್ಸ್ ಇರ್ಬೇಕು. ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದ್ದರೆ ಅರ್ಜಿ ಹಾಕ್ಕೊಂಡು ಸಕ್ರಮ ಮಾಡ್ಕೊಳ್ಳಿ ಎಂದು ಆಫರ್ ನೀಡಿದರು. ಇಲ್ಲವಾದಲ್ಲಿ ಜಿಲ್ಲಾಧಿಕಾರಿಗಳು ಸ್ಥಳ ತನಿಖೆ ಮಾಡಿ ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದರು.

    ಮುಖ್ಯಮಂತ್ರಿಗಳ ಅಕ್ರಮ ಸಕ್ರಮವನ್ನು ಸರ್ಕಾರ ಸಮರ್ಥಿಸಿಕೊಳ್ತಿದೆ. ಸಿಎಂ ಮಾತಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಧ್ವನಿಗೂಡಿಸಿದ್ದಾರೆ. ಕಾನೂನಿನಡಿಯಲ್ಲಿ ಗಣಿಗಾರಿಕೆ ಇರಲಿ ಎಂಬ ದೃಷ್ಟಿಯಿಂದ ಸಿಎಂ ಹೇಳಿಕೆ ಕೊಟ್ಟಿದ್ದಾರೆ. ಎಲ್ಲೆಲ್ಲಿ ಲೈಸೆನ್ಸ್ ತಗೊಂಡಿಲ್ವೋ ಅಂಥ ಕಡೆ ಲೈಸೆನ್ಸ್ ತಗೊಳ್ಳಿ ಅಂತ ಸಿಎಂ ಹೇಳಿದ್ದಾರೆ ಅಂತ ಸಮರ್ಥಿಸಿಕೊಂಡರು. ನಾಳೆ ಅಥವಾ ನಾಡಿದ್ದು ತನಿಖೆಯ ಪ್ರಾಥಮಿಕ ವರದಿ ಬರಲಿದೆ. ಹುಣಸೋಡು ಕೇಸಲ್ಲಿ ಓನರ್, ಲೈಸೆನ್ಸ್ ಪಡೆದವರ ಮೇಲೆ ಕ್ರಮ ತೆಗೆದುಕೊಳ್ತೇವೆ ಎಂದರು.

  • ಮಧ್ಯರಾತ್ರಿ ಅಕ್ರಮ ಗಣಿಗಾರಿಕೆ ಅಡ್ಡೆ ಮೇಲೆ ದಾಳಿ – 8 ವಾಹನ ವಶ

    ಮಧ್ಯರಾತ್ರಿ ಅಕ್ರಮ ಗಣಿಗಾರಿಕೆ ಅಡ್ಡೆ ಮೇಲೆ ದಾಳಿ – 8 ವಾಹನ ವಶ

    ಚಿಕ್ಕಬಳ್ಳಾಪುರ: ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದ ಅಡ್ಡೆ ಮೇಲೆ ದಾಳಿ ನಡೆಸಿದ ಚಿಕ್ಕಬಳ್ಳಾಪುರ ಜಿಲ್ಲೆಯ ಗಣಿ ಹಾಗೂ ಭೂ ವಿಜ್ಞಾನ ಇಲಾಖಾಧಿಕಾರಿಗಳು, ಅಕ್ರಮ ಗಣಿಗಾರಿಕೆಗೆ ಬಳಸುತ್ತಿದ್ದ 8 ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

    ಖಚಿತ ಮಾಹಿತಿ ಮೇರೆಗೆ ಚಿಕ್ಕಬಳ್ಳಾಪುರ ತಾಲೂಕು ಚಿಕ್ಕನಾಗವಲ್ಲಿ ಗ್ರಾಮದ ಬಳಿಯ ಬೆಟ್ಟದಲ್ಲಿ, ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದ ಕ್ವಾರಿ ಮೇಲೆ ದಾಳಿ ನಡೆಸಿ, 5 ಟಿಪ್ಪರ್ ಗಳು, 1 ಕಂಪ್ರೈಸರ್ ವಾಹನ, 2 ಜೆಸಿಬಿ ವಾಹನಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಸಾಗರ್ ಮಂಜು ಎಂಬಾತ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದನೆ ಎಂಬ ಆರೋಪ ಕೇಳಿ ಬಂದಿದ್ದು, ಈಗ ಈತ ವಿರುದ್ಧ ಚಿಕ್ಕಬಳ್ಳಾಪುರ ಜಿಲ್ಲಾ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಲು ಅಧಿಕಾರಿಗಳು ಮುಂದಾಗಿದ್ದಾರೆ.

    ಸಾಗರ್ ಮಂಜು ವಿರುದ್ಧ ಅಕ್ಕ ಪಕ್ಕದ ಗುತ್ತಿಗೆದಾರರು ಹಾಗೂ ಸಾರ್ವಜನಿಕರು ದೂರು ನೀಡಿದ್ದು, ಈ ಸಂಬಂಧ ತಡರಾತ್ರಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ವಾಹನಗಳನ್ನು ಬಿಟ್ಟು ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದ ಖದೀಮರು ಪರಾರಿಯಾಗಿದ್ದಾರೆ.

  • ಶ್ರೀರಂಗಪಟ್ಟಣದ ಅಕ್ರಮ ಗಣಿಗಾರಿಕೆ ಪ್ರದೇಶದಲ್ಲಿ 1 ತಿಂಗಳು ನಿಷೇಧಾಜ್ಞೆ ಜಾರಿ

    ಶ್ರೀರಂಗಪಟ್ಟಣದ ಅಕ್ರಮ ಗಣಿಗಾರಿಕೆ ಪ್ರದೇಶದಲ್ಲಿ 1 ತಿಂಗಳು ನಿಷೇಧಾಜ್ಞೆ ಜಾರಿ

    ಮಂಡ್ಯ: ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ನಿಷೇಧಕ್ಕೆ ಮತ್ತೊಂದು ಹೆಜ್ಜೆ ಮುಂದಿಟ್ಟ ಜಿಲ್ಲಾಡಳಿತಕ್ಕೆ ತಾಲೂಕು ಆಡಳಿತ ಕೂಡ ಸಾಥ್ ನೀಡಿದ್ದು, ಶ್ರೀರಂಗಪಟ್ಟಣ ತಾಲೂಕಿನಲ್ಲೂ ಅಕ್ರಮ ಗಣಿಗಾರಿಕೆಗೆ ಬ್ರೇಕ್ ಬಿದ್ದಿದೆ.

    ಶ್ರೀರಂಗಪಟ್ಟಣ ತಾಲೂಕಿನ ಸುತ್ತಮುತ್ತಲ ಅಕ್ರಮ ಗಣಿಗಾರಿಕೆ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಶ್ರೀರಂಗಪಟ್ಟಣ ತಹಶೀಲ್ದಾರ್ ನಾಗೇಶ್ ಅವರು ನಿಷೇಧಾಜ್ಞೆ ಆದೇಶ ಹೊರಡಿಸಿದ್ದಾರೆ. ಸೆ. 09 ರಿಂದ ಅ. 08ರವರೆಗೆ ಅಂದರೆ ಒಂದು ತಿಂಗಳು ಅಕ್ರಮ ಗಣಿಗಾರಿಕೆ ನಡೆಯುವ ಪ್ರದೇಶದಲ್ಲಿ ನಿಷೇಧಾಜ್ಞೆ ಹೇರಲಾಗಿದೆ. ಕರಿಘಟ್ಟ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಎಗ್ಗಿಲ್ಲದೆ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು, ಈ ಅಕ್ರಮವನ್ನು ತಡೆಗಟ್ಟಲು ತಾಲೂಕು ಆಡಳಿತ ಈ ನಿರ್ಧಾರಕ್ಕೆ ಬಂದಿದೆ.

    ಜಕ್ಕನಹಳ್ಳಿ, ಚನ್ನನಕೆರೆ, ಕಾಳೇನಹಳ್ಳಿ, ಗಣಂಗೂರು, ಸಿದ್ದಾಪುರ, ಮುಂಡುಗದೊರೆ, ಹಂಗರಹಳ್ಳಿ, ಗೌಡಹಳ್ಳಿ, ಟಿ.ಎಂ. ಹೊಸೂರು, ಕೋಡಿಶೆಟ್ಟಿಪುರ, ಶ್ರೀರಾಂಪುರ, ನೀಲನಕೊಪ್ಪಲು ಸೇರಿದಂತೆ ಹಲವು ಗ್ರಾಮಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

    ಈ ಪ್ರದೇಶಗಳಲ್ಲಿ ಹೆಚ್ಚಿನ ಅಕ್ರಮ ಗಣಿಗಾರಿಕೆ ನಡೆಯುತ್ತಿತ್ತು. ಇದರಿಂದ ಪರಿಸರ ನಾಶವಾಗುವುದರ ಜೊತೆಗೆ ಸಾರ್ವಜನಿಕರಿಗೂ ಸಾಕಷ್ಟು ತೊಂದರೆ ಆಗುತ್ತಿತ್ತು. ಅಕ್ರಮ ಗಣಿಗಾರಿಕೆಗೆ ಬೇಸತ್ತ ಜನರು ಮತ್ತು ಗಣಿ ಇಲಾಖೆ ಅಧಿಕಾರಿಗಳು ದೂರು ನೀಡಿದ್ದರು. ಆದ್ದರಿಂದ ಇಂತಹ ಅಕ್ರಮ ಗಣಿಗಾರಿಕೆ ನಡೆಯುವ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಈಗಾಗಲೇ ಪಾಂಡವಪುರ ತಾಲೂಕಿನಲ್ಲಿ ಜಿಲ್ಲಾಡಳಿತ ಅಕ್ರಮ ಗಣಿಗಾರಿಕೆ ನಿಷೇಧ ಮಾಡಿದೆ.

  • ಬಳ್ಳಾರಿಗೆ ಹೋಗಲು ಗಾಲಿ ಜನಾರ್ದನ ರೆಡ್ಡಿಗೆ ಸಿಕ್ತು ಅನುಮತಿ

    ಬಳ್ಳಾರಿಗೆ ಹೋಗಲು ಗಾಲಿ ಜನಾರ್ದನ ರೆಡ್ಡಿಗೆ ಸಿಕ್ತು ಅನುಮತಿ

    ಬೆಂಗಳೂರು: ಅಕ್ರಮ ಗಣಿಗಾರಿಕೆ ಪ್ರಕರಣದ ಆರೋಪಿ, ಮಾಜಿ ಸಚಿವ ಜನಾರ್ದನ ರೆಡ್ಡಿ ಅವರಿಗೆ ಬಳ್ಳಾರಿ ಜಿಲ್ಲೆ ಪ್ರವೇಶಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ಅನುಮತಿ ನೀಡಿದೆ.

    ಬಳ್ಳಾರಿ ಜಿಲ್ಲೆ ಪ್ರವೇಶಿಸಲು ಅನುಮತಿ ಕೋರಿ ಜನಾರ್ದನ ರೆಡ್ಡಿ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ರಜಾಕಾಲದ ಪೀಠ ಜೂನ್ 8 ರಿಂದ 2 ವಾರಗಳ ಕಾಲ ಬಳ್ಳಾರಿ ಜಿಲ್ಲೆ ಪ್ರವೇಶಿಸಲು ಅನುಮತಿ ನೀಡಿದೆ.

    ಇದೇ ವೇಳೆ ಸಿಬಿಐಗೆ ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್, ಆರು ವರ್ಷ ಕಳೆದರೂ ಜನಾರ್ದನ ರೆಡ್ಡಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿಲ್ಲ ಏಕೆ? ಈ ಬಗ್ಗೆ ನ್ಯಾಯಾಲಯಕ್ಕೆ ತಿಳಿಸಬೇಕು ಎಂದು ನ್ಯಾಯಪೀಠವು ಸೂಚಿಸಿದೆ.

    ಅನಾರೋಗ್ಯದಿಂದ ಬಳಲುತ್ತಿರುವ ನಮ್ಮ ಮಾವನನ್ನು ಐಸಿಯುನಲ್ಲಿ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತದೆ. ಅವರನ್ನು ನೋಡಿ, ಮಾತನಾಡಿಸಬೇಕಿದೆ. ಹೀಗಾಗಿ ಬಳ್ಳಾರಿ ಜಿಲ್ಲೆ ಪ್ರವೇಶಿಸಲು ನನಗೆ ಅನುಮತಿ ಕೊಡಿ ಎಂದು ಜನಾರ್ದನ ರೆಡ್ಡಿ ಅವರು, ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಿದ್ದರು.

    ಜನಾರ್ದನ ರೆಡ್ಡಿ ಅವರು ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದರು. ಇದಾದ ಬಳಿಕ 2015ರಲ್ಲಿ ಷರತ್ತುಬದ್ಧ ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಆರೋಪಿಯುವ ಬಳ್ಳಾರಿಯಲ್ಲಿದ್ದರೆ ಸಾಕ್ಷಿ ನಾಶ ಮಾಡುವ ಸಾಧ್ಯವಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಬಳ್ಳಾರಿ ಜಿಲ್ಲೆಯನ್ನು ಪ್ರವೇಶಿಸುವಂತಿಲ್ಲ ಎಂದು ಕೋರ್ಟ್ ಈ ಹಿಂದೆ ಆದೇಶ ನೀಡಿತ್ತು.

  • ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಇದ್ದರಿಂದ ನ್ಯಾಯಾಲಯಕ್ಕೆ ಹಾಜರಾಗಿಲ್ಲ- ಶಾಸಕ ನಾಗೇಂದ್ರ

    ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಇದ್ದರಿಂದ ನ್ಯಾಯಾಲಯಕ್ಕೆ ಹಾಜರಾಗಿಲ್ಲ- ಶಾಸಕ ನಾಗೇಂದ್ರ

    – ನ್ಯಾಯಾಲಯಕ್ಕೆ ಹಾಜರಾಗದೇ ಮತ್ತೆ ಆನಂದ್ ಸಿಂಗ್ ಗೈರು

    ಬೆಂಗಳೂರು: ನಾನು ಓರ್ವ ಜನ ಪ್ರತಿನಿಧಿ, ಕ್ಷೇತ್ರದಲ್ಲಿ ಸಾಕಷ್ಟು ಕೆಲಸಗಳಿದ್ದವು. ಹೀಗಾಗಿ ನ್ಯಾಯಾಲಯಕ್ಕೆ ಹಾಜರಾಗಲು ಸಾಧ್ಯವಾಗಿಲ್ಲ ಎಂದು ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಶಾಸಕ ನಾಗೇಂದ್ರ ಸ್ಪಷ್ಟನೆ ನೀಡಿದ್ದಾರೆ.

    ಬೇಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನ ಭೀತಿ ಎದುರಿಸುತ್ತಿದ್ದ ಶಾಸಕ ನಾಗೇಂದ್ರ ಅವರು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಇಂದು ಹಾಜರಾದರು. ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡ ಶಾಸಕರು, ಪ್ರತಿನಿತ್ಯ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ. ಹೀಗಾಗಿ ವಾರಕ್ಕೊಮ್ಮೆ ಹಾಜರಾಗಲು ಅನುಮತಿ ಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

    ಸುಪ್ರೀಂ ಕೋರ್ಟ್ ಸೂಚನೆ ಪ್ರಕಾರ ಆರೋಪಿಗಳ ಮುಂದೆಯೇ ವಿಚಾರಣೆ ನಡೆಯಬೇಕು. ಆದ್ದರಿಂದ ನಿಮ್ಮ ಮನವಿಗೆ ಅವಕಾಶವಿಲ್ಲ ಅಂತ ನ್ಯಾಯಾಧೀಶರು ಹೇಳಿ ವಿಚಾರಣೆಯನ್ನು ಜನವರಿ 16ಕ್ಕೆ ಮುಂದೂಡಿದರು.

    ಇದೇ ವೇಳೆ ಇವತ್ತು ಸಹ ಗೈರಾಗಿದ್ದ ಆನಂದ್ ಸಿಂಗ್ ತಮ್ಮ ವಕೀಲರ ಮೂಲಕ ಸೋಮವಾರ ಹಾಜರಾಗುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಆದರೂ ಆನಂದ್ ಸಿಂಗ್ ವಿರುದ್ಧ ಜಾರಿಯಾಗಿರುವ ಜಾಮೀನು ರಹಿತ ವಾರಂಟ್ ಮುಂದುವರಿಯಲಿದೆ ಎಂದು ಕೋರ್ಟ್ ತಿಳಿಸಿದೆ.

    ಏನಿದು ಪ್ರಕರಣ:
    ಬೇಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯನಗರ ಶಾಸಕ ಆನಂದ್ ಸಿಂಗ್ ಹಾಗೂ ಕೂಡ್ಲಿಗಿ ಶಾಸಕ ಬಿ ನಾಗೇಂದ್ರ ಅವರ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಪ್ರಕರಣ ದಾಖಲಾಗಿತ್ತು. ಆದರೆ ಶಾಸಕರು ವಿಚಾರಣೆಗೆ ಹಾಜರಾಗುತ್ತಿರಲಿಲ್ಲ. ಇದರಿಂದಾಗಿ ಹಲವು ಬಾರಿ ಸಮನ್ಸ್ ಅನ್ನು ಕೂಡ ಜಾರಿ ಮಾಡಲಾಗಿತ್ತು. ಆದರೂ ಶಾಸಕರು ನ್ಯಾಯಾಲಯಕ್ಕೆ ಗೈರಾಗಿದ್ದರಿಂದ ನ್ಯಾಯಾಧೀಶ ಬಿ.ವಿ.ಪಾಟೀಲ್ ಅವರು ವಾರಂಟ್ ಜಾರಿ ಮಾಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಕ್ರಮ ಗಣಿಗಾರಿಕೆಗೆ ಬೆಂಬಲ ನೀಡಲು ರಾಜಮನೆತನಕ್ಕೆ ಮೋಸ ಮಾಡಲು ಮುಂದಾಯಿತೇ ಸರ್ಕಾರ?

    ಅಕ್ರಮ ಗಣಿಗಾರಿಕೆಗೆ ಬೆಂಬಲ ನೀಡಲು ರಾಜಮನೆತನಕ್ಕೆ ಮೋಸ ಮಾಡಲು ಮುಂದಾಯಿತೇ ಸರ್ಕಾರ?

    ಮಂಡ್ಯ: ಜಮೀನಿನ ಹಕ್ಕುಪತ್ರ ಬದಲಾವಣೆ ವಿಚಾರದಲ್ಲಿ ಸರ್ಕಾರವು ಮೈಸೂರು ರಾಜಮನೆತನಕ್ಕೆ ಮೋಸ ಮಾಡುತ್ತಿದೆ ಎನ್ನವು ಅನುಮಾನ ವ್ಯಕ್ತವಾಗಿದ್ದು, ಅಕ್ರಮ ಗಣಿಗಾರಿಕೆಗೆ ಬೆಂಬಲ ನೀಡಲು ಹೀಗೆ ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳು ಕೇಳಿಬರುತ್ತಿವೆ.

    ಮೈಸೂರು ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರು, ತಮಗೆ ಸೇರಬೇಕಾದ ಜಮೀನಿನ ಹಕ್ಕು ಬದಲಾವಣೆ ಮಾಡಿಕೊಡಿ ಎಂದು ಪಾಂಡವಪುರ ತಹಶೀಲ್ದಾರ್ ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಜಮೀನು ಸರ್ಕಾರಿ ಜಾಗ ಅಂತಾ ತಹಶೀಲ್ದಾರ್ ಪತ್ರಕ್ಕೆ ಹಿಂಬರಹ ನೀಡಿರುವ ದಾಖಲೆ ಲಭ್ಯವಾಗಿದೆ. ಈ ಮೂಲಕ ಸರ್ಕಾರ ರಾಜ ಮನೆತನಕ್ಕೆ ಮೋಸ ಮಾಡುತ್ತಿದೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ.

    ಪಾಂಡವಪುರ ತಾಲೂಕು ಬೇಬಿಬೆಟ್ಟದ ಕಾವಲು ಗ್ರಾಮದ ಸರ್ವೆ ನಂಬರ್ 1ರ ಅಮೃತಮಹಲ್ ಕಾವಲ್ ಜಮೀನಿನ ಖಾತೆಯನ್ನು ಕೋರಿ, ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರು ಕಳೆದ ವರ್ಷ ಅಕ್ಟೋಬರ್ 24ರಂದು ತಹಶೀಲ್ದಾರ್‍ಗೆ ಮನವಿ ಸಲ್ಲಿಸಿದ್ದರು. ಮನವಿ ಸಲ್ಲಿಸಿದ ಒಂದು ತಿಂಗಳ ನಂತರ (ನವೆಂಬರ್ 25)ರಂದು ತಹಶೀಲ್ದಾರ್ ಹಿಂಬರಹ ನೀಡಿದ್ದಾರೆ. ಇದನ್ನೂ ಓದಿ: ಅಕ್ರಮ ಕಲ್ಲುಗಣಿಗಾರಿಕೆಗೆ ನೆರವಾದ ಆರೋಪ- ಮಾಜಿ ಸಿಎಂ ಸಿದ್ದರಾಮಯ್ಯರ ವಿರುದ್ಧ ದೂರು ದಾಖಲು

    ತಹಶೀಲ್ದಾರ್ ಪತ್ರದಲ್ಲಿ ಏನಿದೆ?:
    ಅಮೃತ ಮಹಲ್ ಕಾವಲ್‍ನಲ್ಲಿ ಬರುವ 1,487 ಎಕರೆ ಜಮೀನು ಸರ್ಕಾರಿ ಖರಾಬು ಎಂದು ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಖರಾಬು ಜಮೀನನ್ನು ಖಾತೆ ಬದಲಾವಣೆ ಮಾಡುವ ಅಧಿಕಾರ ನಮ್ಮ ಪ್ರಾಧಿಕಾರದ ವ್ಯಾಪ್ತಿಗೆ ಬರುವುದಿಲ್ಲ. ಈ ಬಗ್ಗೆ ನೀವು ಮೇಲ್ಮನವಿ ಸಲ್ಲಿಸಬಹುದು ಎಂದು ತಿಳಿಸಿದ್ದಾರೆ.

    ಇತ್ತ ಬೇಬಿಬೆಟ್ಟದ ಸುತ್ತಮುತ್ತ ನಿರಂತರವಾಗಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು, ಕಳೆದ ವಾರ ನಿಷೇಧ ಹೇರಲಾಗಿದೆ. ಅಕ್ರಮ ಗಣಿಗಾರಿಕೆಗೆ ಸಹಾಯ ಮಾಡುವ ಸಲುವಾಗಿ ರಾಜಕುಟುಂಬಕ್ಕೆ ಮೋಸ ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಿಂಬರಹದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv