ಕಲಬುರಗಿ: ಅಕ್ರಮ ಗಣಿಗಾರಿಕೆ ಮಾಡಿದ ಆರೋಪದ ಮೇಲೆ ಮಾಜಿ ಕೇಂದ್ರ ಸಚಿವ ಭಗವಂತ್ ಖೂಬಾ (Bhagwanth Khuba) ಅವರಿಗೆ ಕಲಬುರಗಿ ಜಿಲ್ಲೆಯ ಕಾಳಗಿ ತಹಶೀಲ್ದಾರ್ (Tahsildar) 25.30 ಕೋಟಿ ರೂ. ದಂಡ ಪಾವತಿಸುವಂತೆ ಸೂಚಿಸಿ ನೋಟಿಸ್ ನೀಡಿದ್ದಾರೆ.
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಚ್ಚಾ ಗ್ರಾಮದಲ್ಲಿ 2014ರ ಜು.19 ರಿಂದ 2019ರ ಜು.18ರ ವರೆಗೆ ವಚ್ಚಾ ಗ್ರಾಮದ ಸರ್ವೆ ನಂ.24/4 ರಲ್ಲಿ 2 ಎಕರೆಗೆ ಅನುಮತಿ ಪಡೆದು 8 ಎಕರೆಗಿಂತ ಹೆಚ್ಚಿನ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಸಂಜೀವಕುಮಾರ್ ತಿಪ್ಪಣ್ಣ ಜವಕರ್ ಎಂಬವರು ಇದರ ವಿರುದ್ಧ ದೂರು ನೀಡಿದ್ದರು.
ದೂರಿನ ಆಧಾರದ ಮೇಲೆ ಗಣಿ ಇಲಾಖೆ ಹಾಗೂ ಕಾಳಗಿ ತಹಶೀಲ್ದಾರ ಜಂಟಿ ಪರಿಶೀಲನೆ ನಡೆಸಿದಾಗ, ಅಕ್ರಮ ಗಣಿಗಾರಿಕೆ ನಡೆದಿದೆ ಅನ್ನೋದು ತಿಳಿದುಬಂದಿದೆ. ಬಳಿಕ ಅಧಿಕಾರಿಗಳು ವರದಿ ಸಲ್ಲಿಸಿದ್ದಾರೆ. ವರದಿ ಬಳಿಕ 25.30 ಕೋಟಿ ರೂ. ದಂಡ ಪಾವತಿಸುವಂತೆ ಮೂರು ಬಾರಿ ಅಧಿಕಾರಿಗಳು ನೊಟೀಸ್ ನೀಡಿದ್ದಾರೆ. ಈ ಬಗ್ಗೆ ಅಧಿಕಾರಿಗಳ ನೋಟಿಸ್ ಪ್ರಶ್ನಿಸಿ ಖೂಬಾ ಕಾನೂನು ಮೊರೆ ಹೋಗಿದ್ದಾರೆ.

















