Tag: ಅಕ್ರಮ ಕಲ್ಲು ಗಣಿಗಾರಿಕೆ

  • ಅಕ್ರಮ ಗಣಿಗಾರಿಕೆ ವಿರುದ್ಧ ನನ್ನ ಹೋರಾಟ ನಿಲ್ಲಲ್ಲ: ಸುಮಲತಾ

    ಅಕ್ರಮ ಗಣಿಗಾರಿಕೆ ವಿರುದ್ಧ ನನ್ನ ಹೋರಾಟ ನಿಲ್ಲಲ್ಲ: ಸುಮಲತಾ

    ಮಂಡ್ಯ: ಗಣಿಗಾರಿಕೆ ವಿರುದ್ಧ ದಳಪತಿ ಹಾಗೂ ಸಂಸದೆ ಸಮಲತಾ ನಡುವೆ ನಡೆಯುತ್ತಿರುವ ಜಟಾಪಟಿ ಸದ್ಯ ನಿಲ್ಲುವಂತೆ ಕಾಣಿಸುತ್ತಿಲ್ಲ. ಕೆಲ ತಿಂಗಳ ಹಿಂದೆ ಕೆಆರ್‍ಎಸ್ ಡ್ಯಾಂ ಸುತ್ತಮುತ್ತ ನಡೆಯುತ್ತಿದ್ದ ಗಣಿಗಾರಿಕೆ ವಿರುದ್ಧ ಸಿಡಿದೆದ್ದಿದ್ದ ಮಂಡ್ಯ ಸಂಸದೆ ಸುಮಲತಾ ಕೊನೆಗೂ ಗಣಿಗಾರಿಕೆ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಮತ್ತೆ ಮಂಡ್ಯ ದಳಪತಿಗಳು ಸಂಸದೆ ಸುಮಲತಾ ವಿರುದ್ಧ ಅಭಿವೃದ್ದಿ ಕುಂಠಿತ ಆರೋಪ ಮಾಡಿದರೆ, ಇತ್ತ ಸಂಸದೆ ಸುಮಲತಾ ಅಕ್ರಮ ಗಣಿಗಾರಿಕೆ ವಿರುದ್ಧ ನನ್ನ ಹೋರಾಟ ನಿಲ್ಲಲ್ಲ ಎಂದು ಗುಡುಗಿದ್ದಾರೆ.

    ದಳಪತಿಗಳ ಆರೋಪಕ್ಕೆ ಸಂಸದೆ ಸುಮಲತಾ ಕಿಡಿಕಾರಿದ್ದು, ಅಕ್ರಮ ಗಣಿಗಾರಿಕೆ ವಿರುದ್ಧದ ನನ್ನ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ಅಕ್ರಮ ನಿಲ್ಲಿಸಿ, ಅಭಿವೃದ್ದಿ ತಾನಾಗಿಯೇ ಆಗುತ್ತೆ. ಸರ್ಕಾರಕ್ಕೆ ಬರಬೇಕಿದ್ದ ಕೋಟ್ಯಂತರ ರೂ. ಹಣ ಯಾರೋ ನಾಲ್ಕು ಜನರ ಜೇಬು ಸೇರುತ್ತಿದೆ ಎಂದು ದಳಪತಿಗಳಿಗೆ ಟಾಂಗ್ ನೀಡಿದರು. ಅಷ್ಟೇ ಅಲ್ಲ ಕೆಆರ್‍ಎಸ್ ಡ್ಯಾಂ ಬಿರುಕು ಬಿಟ್ಟಿರುವುದರಿಂದಲೇ 67 ಕೋಟಿ ರೂಪಾಯಿ ಕಾಮಗಾರಿಯನ್ನು ಮಾಡಲಾಗಿದೆ. ಬೇಕಿದ್ರೆ ಆರ್.ಟಿ.ಐ ನಲ್ಲಿ ಮಾಹಿತಿ ತೆಗೆದು ನೋಡಿ ಎಂದು ಮತ್ತೆ ಡ್ಯಾಂ ಬಿರುಕು ಬಿಟ್ಟಿತ್ತು ಎಂದು ಸಂಸದೆ ಪುನರುಚ್ಚಿಸಿದ್ದಾರೆ.

    ಮಂಡ್ಯದ ಜೀವನಾಡಿ ಕೆ.ಆರ್.ಎಸ್ ಡ್ಯಾಂ ಬಿರುಕು ಬಿಟ್ಟಿದ್ದು, ಡ್ಯಾಂ ಸುತ್ತ ನಡೆಯುತ್ತಿರುವ ಗಣಿಗಾರಿಕೆಯೇ ಇದಕ್ಕೆ ಕಾರಣ ಎಂದು ಮಂಡ್ಯ ಸಂಸದೆ ಸುಮಲತಾ ಅಕ್ರಮ ಗಣಿಗಾರಿಕೆ ವಿರುದ್ಧ ಈ ಹಿಂದೆ ತಿರುಗಿ ಬಿದ್ದಿದ್ದರು. ಬಳಿಕ ಗಣಿಗಾರಿಕೆ ಸ್ಥಳಕ್ಕೆ ಖುದ್ದು ತೆರಳಿದ್ದ ಸಂಸದೆ ಸುಮಲತಾ ಗಣಿಗಾರಿಕೆಯ ಪ್ರಮಾಣವನ್ನು ಜನರ ಮುಂದಿಟ್ಟಿದ್ದರು. ಕೆಆರ್‍ಎಸ್ ಸುತ್ತ ನಡೆಯುತ್ತಿದ್ದ ಗಣಿಗಾರಿಕೆಯನ್ನು ಸ್ಥಗಿತಗೊಳಿಸುವಲ್ಲಿಯೂ ಯಶಸ್ವಿಯಾಗಿದ್ದರು.

    ಕಳೆದ ಎರಡ್ಮೂರು ದಿನಗಳ ಹಿಂದೆಯಷ್ಟೇ ಗಣಿಗಾರಿಕೆ ಸ್ಥಳಗಳಲ್ಲಿ ಸ್ಫೋಟಕ ವಸ್ತುಗಳಿರುವುದನ್ನು ಬಾಂಬ್ ನಿಸ್ಕ್ರೀಯ ತಂಡ ಪತ್ತೆ ಹಚ್ಚಿತ್ತು. ಇದೀಗ ಮತ್ತೆ ದಳಪತಿಗಳು ಗಣಿಗಾರಿಕೆಗೆ ಅವಕಾಶ ಮಾಡಿ ಕೊಡಬೇಕು ಎಂದು ಆಗ್ರಹಿಸುತ್ತಿದ್ದು, ಜಿಲ್ಲೆಯಲ್ಲಿ ಅಭಿವೃದ್ದಿ ಕುಂಠಿತವಾಗುತ್ತಿದೆ. ಜಿಲ್ಲೆಯ ಜನರು ದುಪ್ಪಟ್ಟು ನೀಡಿ ಕಟ್ಟಡ ಕೆಲಸದ ಮೆಟಿರೀಯಲ್ ತರಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ರಾಜ್ಯ ಸರ್ಕಾರ ಅಕ್ರಮ ಗಣಿಗಾರಿಕೆಗಳನ್ನು ಸಕ್ರಮ ಮಾಡಿ ಗಣಿಗಾರಿಕೆಗೆ ಅವಕಾಶ ಮಾಡಿಕೊಡಬೇಕು ಎಂದು ಶ್ರೀರಂಗಪಟ್ಟಣ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಒತ್ತಾಯಿಸಿದ್ದಾರೆ. ಅಷ್ಟೇ ಅಲ್ಲ ಸಂಸದೆ ಸುಮಲತಾ ವಿರುದ್ಧ ಕಿಡಿಕಾರಿದ್ದಾರೆ.

  • ಯಾದಗಿರಿಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ – ಐಎಸ್‍ಡಿ ತಂಡದಿಂದ ದಾಳಿ

    ಯಾದಗಿರಿಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ – ಐಎಸ್‍ಡಿ ತಂಡದಿಂದ ದಾಳಿ

    ಯಾದಗಿರಿ: ಜಿಲ್ಲೆಯ ಸುರಪುರ ತಾಲೂಕಿನ ಹಾಲಾಳ ಗ್ರಾಮದ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆ ಸ್ಥಳದ ಮೇಲೆ ಆಂತರಿಕ ಭದ್ರತಾ ವಿಭಾಗ(ಐಎಸ್‍ಡಿ) ತಂಡ ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಸ್ಫೋಟಕವನ್ನು ವಶಕ್ಕೆ ಪಡೆದಿದೆ.

    ಮುದ್ದೇಬಿಹಾಳ ಮೂಲದ ಶಾಂತಗೌಡ ನಡಹಳ್ಳಿ ಎಂಬವರು ಜಿಲ್ಲೆಯ ಹಾಲಾಳ ಬಳಿಯ ಜಮೀನಿನಲ್ಲಿ ಕಳೆದ ನಾಲ್ಕು ವರ್ಷಗಳಿಂದ ಅಕ್ರಮವಾಗಿ ಕಲ್ಲು ಕ್ವಾರಿಯನ್ನು ನಡೆಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಕಲಬುರಗಿ-ಯಾದಗಿರಿ ಐಎಸ್‍ಡಿ ಪೊಲೀಸರು ಇಂದು ಬೆಳಗ್ಗೆ ಕ್ವಾರಿ ಮೇಲೆ ದಾಳಿ ಮಾಡಿದ್ದಾರೆ.

    ಕಲ್ಲು ಬ್ಲಾಸ್ಟ್ ಮಾಡಲು ಅಕ್ರಮವಾಗಿ ಸಂಗ್ರಹಿಸಿದ್ದ 30 ಬಾಕ್ಸ್ ಐಡಿಎಲ್ 80 ಎಂಎಂ ಬೂಸ್ಟರ್ ಸೇರಿದಂತೆ ಸ್ಫೋಟಕ್ಕೆ ಬಳಸುವ ಸುಮಾರು 750 ಕೆಜಿ ಬೂಸ್ಟರ್ ವಶಕ್ಕೆ ಪಡೆಯಲಾಗಿದೆ.

    ಐಎಸ್‍ಡಿ ಪಿಐ ಅಡೆಪ್ಪ ಬನ್ನಿ ನೇತೃತ್ವದಲ್ಲಿ ಸಿಬ್ಬಂದಿ ಶಾಂತಯ್ಯ, ನಾಗರಾಜ್, ರಾಜಕುಮಾರ್, ದೊಡ್ಡೇಶ್, ಪ್ರಕಾಶ್ ಎಂಬ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಕಳೆದ ನಾಲ್ಕು ವರ್ಷಗಳಿಂದ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿತ್ತು ಎಂಬ ಮಾಹಿತಿ ದೊರೆತಿದೆ.

  • ಕಾರ್ಮಿಕನ ಬದುಕನ್ನ ಕತ್ತಲು ಮಾಡಿದ ಅಕ್ರಮ ಕಲ್ಲು ಗಣಿಗಾರಿಕೆ

    ಕಾರ್ಮಿಕನ ಬದುಕನ್ನ ಕತ್ತಲು ಮಾಡಿದ ಅಕ್ರಮ ಕಲ್ಲು ಗಣಿಗಾರಿಕೆ

    ಗದಗ: ಅಕ್ರಮ ಕಲ್ಲು ಗಣಿಗಾರಿಕೆ ಎಗ್ಗಿಲ್ಲದೇ ನಡೆಯುತ್ತಿದೆ ಬ್ರೇಕ್ ಹಾಕಿ ಅಂತ ಗಣಿ ಇಲಾಖೆ ಹಾಗೂ ಜಿಲ್ಲಾಡಳಿತಕ್ಕೆ ಜನರು ಮನವಿ ಮಾಡಿದ್ದಾರೆ. ಅಧಿಕಾರಿಗಳು ಮಾತ್ರ ತಮಗೆ ಏನು ಗೊತ್ತೇ ಇಲ್ಲವೆಂಬಂತೆ ವರ್ತಿಸುತ್ತಿದ್ದಾರೆ. ಈ ಅಕ್ರಮ ಕಲ್ಲು ಗಣಿಗಾರಿಕೆಯ ಸ್ಫೋಟ ಬಡ ಕಾರ್ಮಿಕನ ಬದುಕನ್ನು ಕತ್ತಲು ಮಾಡಿದೆ. ಕ್ವಾರಿಯಲ್ಲಿ ಕಲ್ಲು ಸ್ಫೋಟಗೊಂಡ ಪರಿಣಾಮ ಕಾರ್ಮಿಕನೊಬ್ಬ ತನ್ನ ಎರಡೂ ಕಣ್ಣು, ಕೈ ಕಳೆದುಕೊಂಡಿದ್ದು, ಇಡೀ ಕುಟುಂಬ ಕಣ್ಣೀರಿಡುವಂತೆ ಮಾಡಿದೆ.

    ಹನುಮಂತಪ್ಪ ಅಕ್ರಮ ಕಲ್ಲಿನ ಕ್ವಾರಿಯಲ್ಲಿ ಕಲ್ಲು ಸಿಡಿದು ಎರಡು ಕಣ್ಣು ಕಳೆದುಕೊಂಡ ಕಾರ್ಮಿಕ. ಗದಗ ತಾಲೂಕಿನ ಚಿಂಚಲಿ ಗ್ರಾಮದ ಹೊರವಲಯದ ಕ್ವಾರಿಯಲ್ಲಿ ಬೆಂಕಿ ಹಾಕಿ ಹಾಸುಗಲ್ಲು ತೆಗೆಯುವಾಗ ಸ್ಫೋಟಗೊಂಡ ಪರಿಣಾಮ ಕಾರ್ಮಿಕ ಹನುಮಂತಪ್ಪ ಜೀವನವೇ ಅಂಧಕಾರದಲ್ಲಿ ಮುಳುಗಿದೆ. ಬೃಹತ್ ಸರ್ಕಾರಿ ಗುಡ್ಡದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಎಗ್ಗಿಲ್ಲದೇ ನಡೆಯುತ್ತಿದೆ. ಗಣಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಗೆ ಅಕ್ರಮ ಗಣಿಗಾರಿಕೆ ಬಗ್ಗೆ ಸಾಕಷ್ಟು ಬಾರಿ ದೂರು ನೀಡಿದ್ರೂ ಸಹ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

    ಕಲ್ಲಿನ ಕ್ವಾರಿಯಲ್ಲಿ ಬೆಂಕಿ ಹಾಕಿ ಹಾಸುಗಲ್ಲು ತೆಗೆಯುವಾಗ ಕಲ್ಲು ಸ್ಫೋಟಗೊಂಡು ಕಾರ್ಮಿಕ ಹನುಮಂತಪ್ಪ ಗಂಭೀರವಾಗಿ ಗಾಯಗೊಂಡಿದ್ದಾರೆ. ಹನುಮಂತಪ್ಪ ಸ್ಥಿತಿ ಗಂಭೀರವಾಗಿದ್ದು, ಸ್ಫೋಟದ ತೀವ್ರತೆಗೆ ಎರಡೂ ಕಣ್ಣು ಹಾಗೂ ಕೈಗಳಿಗೆ ತೀವ್ರವಾದ ಗಾಯಗಳಾಗಿವೆ. ಸದ್ಯ ಅವರು ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಣ್ಣಿಗೆ ಬಲವಾದ ಪೆಟ್ಟಾಗಿದ್ದು ದೃಷ್ಟಿ ಬರೋದು ಅನುಮಾನ ಎನ್ನಲಾಗುತ್ತಿದೆ.

    ಬೃಹತ್ ಸರ್ಕಾರಿ ಗುಡ್ಡ ಅಕ್ರಮ ಕಲ್ಲು ಗಣಿಗಾರಿಕೆಯಿಂದ ನಲುಗುತ್ತಿದೆ. ಹಗಲಲ್ಲೇ ನಿತ್ಯ ನಡೆಯುವ ಗಣಿಗಾರಿಕೆಯಿಂದ ಗುಡ್ಡ ಕರಗುತ್ತಿದೆ. ಕಂದಾಯ ಇಲಾಖೆ ಅಧಿಕಾರಿಗಳಿಗೆ ಅಕ್ರಮ ಬಗ್ಗೆ ಗೊತ್ತಿದ್ರೂ ತಲೆ ಕೆಡಿಸಿಕೊಳ್ತಾಯಿಲ್ಲ. ಹೀಗಾಗಿ ಅಕ್ರಮ ಕಲ್ಲು ದಂಧೆಕೋರರಿಗೆ ಭಯ ಇಲ್ಲದಂತಾಗಿದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ತಾಲೂಕಾಡಳಿತದ ನಿರ್ಲಕ್ಷ್ಯವೇ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ. ಅಕ್ರಮ ಕಲ್ಲು ಗಣಿಗಾರಿಕೆಗೆ ಬ್ರೇಕ್ ಹಾಕಿದ್ರೆ ಈ ದುರಂತವೇ ನಡೆಯುತ್ತಿರಲಿಲ್ಲ. ಅಕ್ರಮ ಕಲ್ಲು ಗಣಿಗಾರಿಕೆ ಗೊತ್ತಿದ್ರೂ ಕ್ರಮ ಕೈಗೊಳ್ಳದ, ಗದಗ ಜಿಲ್ಲಾಡಳಿತ ಹಾಗೂ ಗಣಿ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದೆ ಎಂದು ಸ್ಥಳೀಯ ಮಂಜುನಾಥ್ ಮುಳಗುಂದ ಕಿಡಿಕಾರಿದ್ದಾರೆ.

    ಇಷ್ಟೊಂದು ಗಂಭೀರ ಪ್ರಕರಣ ನಡೆದರೂ ಇದುವರೆಗೂ ಜಿಲ್ಲಾಡಳಿತ ಯಾವ ಕ್ರಮ ಕೈಗೊಂಡಿಲ್ಲ. ವಿಪರ್ಯಾಸವೆಂದರೆ ಇಂಥ ದುರಂತ ನಡೆದು ಕಾರ್ಮಿಕ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ರೂ ಜಿಲ್ಲಾಧಿಕಾರಿಗಳು, ಗಣಿ ಇಲಾಖೆ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿಯೇ ಇಲ್ವಂತೆ. ಈ ಬಗ್ಗೆ ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಅವ್ರನ್ನು ಕೇಳಿದ್ರೆ ನನಗೆ ಈ ವಿಷಯ ಗೊತ್ತಿಲ್ಲ. ಯಾವಾಗ ನಡೆದಿದೆ ಅನ್ನೋ ಬಗ್ಗೆ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗುವುದು ಅಂತ ಹೇಳ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv