Tag: ಅಂಬಿಡೆಂಟ್ ಮಾರ್ಕೆಟಿಂಗ್ ಪ್ರೈವೇಟ್ ಲಿಮಿಟೆಡ್

  • ಅಂಬಿಡೆಂಟ್ ಹಣ ವಂಚನೆ ಪ್ರಕರಣಕ್ಕೆ ರೆಡ್ಡಿಗೂ ಏನು ಸಂಬಂಧ? ಡಿಲೀಂಗ್ ಹೇಗಾಯ್ತು? 57 ಕೆಜಿ ಚಿನ್ನ ತಲುಪಿದ್ದು ಹೇಗೆ?

    ಅಂಬಿಡೆಂಟ್ ಹಣ ವಂಚನೆ ಪ್ರಕರಣಕ್ಕೆ ರೆಡ್ಡಿಗೂ ಏನು ಸಂಬಂಧ? ಡಿಲೀಂಗ್ ಹೇಗಾಯ್ತು? 57 ಕೆಜಿ ಚಿನ್ನ ತಲುಪಿದ್ದು ಹೇಗೆ?

    ಬೆಂಗಳೂರು: ಅಂಬಿಡೆಂಟ್ ಮಾರ್ಕೆಟಿಂಗ್ ಪ್ರೈವೆಟ್ ಲಿಮಿಟೆಡ್ ವಂಚನೆ ಪ್ರಕರಣದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿಗೆ 57 ಕೆಜಿ ಚಿನ್ನ ರವಾನೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

    ಅಂಬಿಡೆಂಟ್ ಕಂಪನಿ ವಂಚನೆ ಎಸಗಿದ್ದು ಹೇಗೆ? ಈ ಪ್ರಕರಣದಲ್ಲಿ ರೆಡ್ಡಿಗೆ ಏನು ಸಂಬಂಧ ಇತ್ಯಾದಿ ಪ್ರಶ್ನೆಗಳಿಗೆ ಬೆಂಗಳೂರು ಪೊಲೀಸರು ಮಾಧ್ಯಮ ಹೇಳಿಕೆಯನ್ನು ಬಿಡುಗಡೆಗೊಳಿಸಿ ಮಾಹಿತಿ ನೀಡಿದ್ದಾರೆ. ಇದನ್ನು ಓದಿ: ಹೊಡೆದು ಜನಾರ್ದನ ರೆಡ್ಡಿ ಹೆಸರು ಹಾಕಿಸಿದ್ದಾರೆ- ಡೀಲ್ ಪ್ರಕರಣಕ್ಕೆ ಸ್ಫೋಟಕ ತಿರುವು

    ಏನಿದು ಅಂಬಿಡೆಂಟ್ ಕಂಪನಿ?
    ಡಿ.ಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕನಕನಗರದ ಮುಖ್ಯರಸ್ತೆಯಲ್ಲಿ ಅಂಬಿಡೆಂಟ್ ಮಾರ್ಕೆಟಿಂಗ್ ಪ್ರೈವೆಟ್ ಲಿಮಿಟೆಡ್ ಕಂಪನಿಯನ್ನು ಸೈಯದ್ ಅಹಮದ್ ಎಂಬವನು ನಡೆಸುತ್ತಿದ್ದ. ನಿಮ್ಮ ಹೂಡಿಕೆಗೆ 4 ತಿಂಗಳ ಅವಧಿಗೆ ಶೇ.40ರಿಂದ ಶೇ.50ರಷ್ಟು ಬಡ್ಡಿ ನೀಡುತ್ತೇವೆ ಎಂದು ಹೇಳಿ ಸೈಯದ್ ಸಾರ್ವಜನಿಕರನ್ನು ನಂಬಿಸಿದ್ದ. ಸೈಯದ್ ಮಾತಿಗೆ ಮರಳಾಗಿ ಸುಮಾರು 15 ಸಾವಿರಕ್ಕೂ ಜನರು ಈ ಕಂಪನಿಯಲ್ಲಿ ಹಣವನ್ನು ಹೂಡಿಕೆ ಮಾಡಿದ್ದರು. ಅಂದಾಜು ಸುಮಾರು 600 ಕೋಟಿ ರೂ. ಹಣವನ್ನು ಸಂಗ್ರಹಿಸಿದ್ದ ಸೈಯದ್ ಮರಳಿ ಗ್ರಾಹಕರಿಗೆ ನೀಡಲು ಹಿಂದೇಟು ಹಾಕುತ್ತಿದ್ದ.

    ದೂರು ದಾಖಲು:
    ಸೈಯದ್ ಸಾವಿರಾರು ಜನರಿಗೆ ವಂಚಿಸಿದ್ದು, ವಂಚನೆಗೆ ಒಳಗಾದವರ ಪೈಕಿ ಪೈಕಿ ಸರ್ಫರಾಜ್ ಆಲಂ ತಬರೇಜ್ ಎಂಬವರು ಡಿ.ಜೆ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಅಂಬಿಡೆಂಟ್ ಕಂಪನಿ ವಿರುದ್ಧ 2018ರ ಮೇ ತಿಂಗಳಿನಲ್ಲಿ ದೂರು ನೀಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸಿ, ಹಣವನ್ನು ಮರಳಿಸುವಂತೆ ಸೂಚಿಸಿದ್ದರು. ಹಲವು ದೂರುಗಳು ದಾಖಲಾದ ಹಿನ್ನೆಲೆಯಲ್ಲಿ ವಂಚನೆ ಸಂಪೂರ್ಣ ತನಿಖೆಗಾಗಿ ಎಲ್ಲ ಪ್ರಕರಣಗಳನ್ನು ನಗರ ಪೊಲೀಸ್ ಆಯುಕ್ತರು ಸಿಸಿಬಿ ವರ್ಗಾಯಿಸಿದ್ದರು. ತನಿಖೆ ಚುರುಕುಗೊಳಿಸಿದ ಸಿಸಿಬಿ ಪೊಲೀಸರು ಸೈಯದ್ ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ಇದನ್ನು ಓದಿ: ನನಗೆ ಯಾವುದೇ ಮಾಹಿತಿ ಇಲ್ಲ: ರೆಡ್ಡಿ ಡೀಲ್ ಪ್ರಶ್ನೆಗೆ ಶ್ರೀರಾಮುಲು ಉತ್ತರ

    ಇಡಿಯಿಂದ ದಾಳಿ
    ಸಾರ್ವಜನಿಕರಿಂದ ಸಂಗ್ರಹಿಸಿದ ಕೋಟ್ಯಂತರ ರೂ. ಹಣವನ್ನು ಸೈಯದ್, ಹಲವಾರು ಜನರ ಬಳಿ ಹೂಡಿಕೆ ಮಾಡಿದ್ದಾನೆ ಎನ್ನುವ ಸ್ಫೋಟಕ ವಿಚಾರ ತನಿಖೆಯ ವೇಳೆ ಬೆಳಕಿಗೆ ಬಂದಿತ್ತು. ಅಕ್ರಮ ಹಣಕಾಸಿನ ವ್ಯವಹಾರದಲ್ಲಿ ತೊಡಗಿಕೊಂಡಿದ್ದಾನೆ ಎನ್ನುವ ವಿಚಾರ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ(ಇಡಿ) ಸೈಯದ್ ಕಚೇರಿ ಮತ್ತು ಮನೆಗಳ ಮೇಲೆ ದಾಳಿ ನಡೆಸಿತ್ತು. ಬಳಿಕ ಆತನ ಬ್ಯಾಂಕ್, ಹಣಕಾಸಿನ ವ್ಯವಹಾರಗಳನ್ನು ಸ್ಥಗಿತಗೊಳಿಸಲಾಯಿತು. ಈತನ ಬ್ಯಾಂಕಿಂಗ್ ವ್ಯವಹಾರಗಳ ಮಾಹಿತಿಯನ್ನು ಕಲೆ ಹಾಕಿದಾಗ ಬೆಚ್ಚಿ ಬೀಳಿಸುವ ಅಂಶ ಪತ್ತೆಯಾಯಿತು.

    ರೆಡ್ಡಿ ಎಂಟ್ರಿ ಹೇಗಾಯ್ತು?
    ಇಡಿಯಲ್ಲಿ ಕೇಸ್ ದಾಖಲಾದ ಬಳಿಕ ಮುಂದೆ ಕಷ್ಟವಿದೆ ಎನ್ನುವುದನ್ನು ಅರಿತ ಸೈಯದ್ ಜನಾರ್ದನ ರೆಡ್ಡಿಯ ಸಹಾಯ ಕೋರಿದ್ದ. ಹೀಗಾಗಿ ಜನಾರ್ದನ ರೆಡ್ಡಿ, ರೆಡ್ಡಿ ಆಪ್ತ ಅಲಿಖಾನ್ ಮತ್ತು ಸೈಯದ್ ಒಂದು ಕಡೆ ಸಭೆ ನಡೆಸಿದ್ದರು. ಸಭೆಯಲ್ಲಿ ಈ ಪ್ರಕರಣದಲ್ಲಿ ಪಾರಾಗಲು ರೆಡ್ಡಿ 20 ಕೋಟಿ ರೂ. ಬೇಡಿಕೆ ಇಟ್ಟಿದ್ದಾರೆ. ಒಪ್ಪಂದದ ಪ್ರಕಾರ 20 ಕೋಟಿ ರೂ.ವನ್ನು ಚಿನ್ನದ ರೂಪದಲ್ಲಿ ನೀಡುವಂತೆ ಜನಾರ್ದನ ರೆಡ್ಡಿ ಷರತ್ತು ವಿಧಿಸಿದ್ದರು.  ಇದನ್ನು ಓದಿ: ಜನಾರ್ದನ ರೆಡ್ಡಿ ರಾತ್ರೋರಾತ್ರಿ ಮೊಳಕಾಲ್ಮೂರಿನಿಂದ ಪರಾರಿಯಾಗಿದ್ದು ಹೇಗೆ? ಈಗ ಎಲ್ಲಿದ್ದಾರೆ?

    ಚಿನ್ನ ರೆಡ್ಡಿಗೆ ತಲುಪಿದ್ದು ಹೇಗೆ?
    ಚಿನ್ನ ತಲುಪಿಸುವುದು ಹೇಗೆ ಎಂದು ಆಲೋಚಿಸುತ್ತಿದ್ದಾಗ ಸೈಯದ್, ಅಲಿಖಾನ್‍ಗೆ ಪರಿಚಯವಿರುವ ಬಳ್ಳಾರಿಯ ರಾಜಮಹಲ್ ಫ್ಯಾನ್ಸಿ ಜುವೆಲರ್ಸ್ ನ ರಮೇಶ್ ಬಳಿ ಚಿನ್ನ ಖರೀದಿಸುವುದು ಉತ್ತಮ ಎನ್ನುವ ನಿರ್ಧಾರಕ್ಕೆ ಬಂದಿದ್ದಾನೆ. ಸೈಯದ್ ಬೇಡಿಕೆ ಪ್ರಮಾಣದ ಚಿನ್ನವನ್ನು ನೀಡಲು ರಮೇಶ್ ಒಪ್ಪಿದ್ದ. ಆದರೆ ಆತನಲ್ಲಿ ಇಷ್ಟೊಂದು ಪ್ರಮಾಣದ ಚಿನ್ನ ದಾಸ್ತಾನು ಇರಲಿಲ್ಲ. ಹೀಗಾಗಿ ಸೈಯದ್ ಬೇಡಿಕೆಯನ್ನು ಈಡೇರಿಸಲು ರಮೇಶ್ ಬೆಂಗಳೂರಿನ ಅಂಬಿಕಾ ಸೇಲ್ಸ್ ಕಾರ್ಪೋರೇಷನ್ ರಮೇಶ್ ಕೊಠಾರಿ ಬಳಿ 18 ಕೋಟಿ ರೂ. ಮೊತ್ತದ 57 ಕೆ.ಜಿ ಚಿನ್ನವನ್ನು ಖರೀದಿ ಮಾಡಿದ್ದ. ಈ ಚಿನ್ನ ಬಳ್ಳಾರಿಯ ರಮೇಶ್ ಗೆ ತಲುಪಿ, ನಂತರ ಸೈಯದ್ ಕೊನೆಗೆ ಜನಾರ್ದನ ರೆಡ್ಡಿಗೆ ತಲುಪಿದೆ.

    ಸಿಸಿಬಿ ತಂಡಕ್ಕೆ ಸಿಕ್ಕ ಮಾಹಿತಿ ಆಧಾರದ ಮೇಲೆ ಬಳ್ಳಾರಿಯ ರಾಜಮಹಲ್ ಪ್ಯಾನ್ಸಿ ಜುವೆಲರ್ಸ್ ನ ರಮೇಶ್ ಕೊಠಾರಿ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿ ಹಲವು ಮಹತ್ವ ಪೂರ್ಣ ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

    ತಂಡದಲ್ಲಿ ಯಾರಿದ್ದಾರೆ?
    ಈ ಅಕ್ರಮ ವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಎನ್ನುವ ಆರೋಪ ಬಂದಿರುವ ಹಿನ್ನೆಲೆಯಲ್ಲಿ ಜನಾರ್ದನ ರೆಡ್ಡಿ ಹಾಗೂ ಅಲಿಖಾನ್ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ. ಇದಕ್ಕಾಗಿ ಸಿಸಿಬಿ ಘಟಕದ ಎಸಿಪಿ ಪಿ.ಟಿ.ಸುಬ್ರಮಣ್ಯ, ಮರಿಯಪ್ಪ, ಮೋಹನ್ ಕುಮಾರ್ ಮಂಜುನಾಥ್ ಚೌಧರಿ ಅವರ ನೇತೃತ್ವದ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದೆ. ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ನಿರ್ದೇಶನದ ಮೇರೆಗೆ ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಮತ್ತು ಸಿಸಿಬಿ ಉಪ ಪೊಲೀಸ್ ಆಯುಕ್ತ ಗಿರೀಶ್.ಎಸ್ ಮಾರ್ಗದರ್ಶನದಲ್ಲಿ ತಂಡವು ಕೆಲಸ ಮಾಡುತ್ತಿದೆ.

    ಯಾವುದಿದು ಅಂಬಿಡೆಂಟ್ ಕಂಪನಿ?
    ಅಂಬಿಡೆಂಟ್ ಮಾರ್ಕೆಟಿಂಗ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯನ್ನು ದುಬೈ ಮೂಲದ ಉದ್ಯಮಿಗಳು ಸ್ಥಾಪಿಸಿದ್ದಾರೆ. ಈ ಕಂಪನಿಯ ಕಚೇರಿ ಬೆಂಗಳೂರಿನ ಕನಕನಗರದ ಮುಖ್ಯರಸ್ತೆಯಲ್ಲಿದೆ. ಈ ಕಂಪನಿಯನ್ನು ನಡೆಸುತ್ತಿದ್ದ, ಸೈಯದ್ ಅಹಮದ್, ನಿಮ್ಮ ಹಣವನ್ನ ಒಂದು ವರ್ಷದಲ್ಲಿ ದ್ವಿಗುಣ ಮಾಡಿಕೊಡುತ್ತೇವೆ ಎಂದು ಜನರಿಂದ ಹಣ ಪಡೆಯುತ್ತಿದ್ದ. ಗ್ರಾಹಕರಿಂದ ಕನಿಷ್ಠ ಹೂಡಿಕೆ ಎಂದು ಹೇಳಿ ಒಂದು ಲಕ್ಷ ರೂ. ಪಡೆದು, ಪ್ರತಿ ಮೂರು ತಿಂಗಳಿಗೊಮ್ಮೆ 40 ಸಾವಿರ ರೂ.ದಂತೆ ವರ್ಷಕ್ಕೆ 1.60 ಸಾವಿರ ವಾಪಸ್ಸು ಕೊಡುವುದಾಗಿ ಗ್ರಾಹಕರನ್ನು ನಂಬಿಸಿದ್ದ. ಹೀಗಾಗಿ ಇಲ್ಲಿ ಸಾವಿರಾರು ಜನರು ಹೂಡಿಕೆ ಮಾಡಿದ್ದರು. ಇದೇ ದೋಖಾ ಕಂಪೆನಿಯಲ್ಲಿ ಬೇನಾಮಿ ಹೆಸರಲ್ಲಿ ರೆಡ್ಡಿ ಆಪ್ತ ಅಲಿಖಾನ್ ಹಣ  ಹೂಡಿಕೆ ಮಾಡಿದ್ದ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 57 ಕೆ.ಜಿ ಚಿನ್ನದ ಗಟ್ಟಿ ಖರೀದಿಸಿ ಜನಾರ್ದನ ರೆಡ್ಡಿ ಡೀಲ್..!

    57 ಕೆ.ಜಿ ಚಿನ್ನದ ಗಟ್ಟಿ ಖರೀದಿಸಿ ಜನಾರ್ದನ ರೆಡ್ಡಿ ಡೀಲ್..!

    ಬೆಂಗಳೂರು: ಅಂಬಿಡೆಂಟ್ ಮಾರ್ಕೆಟಿಂಗ್ ಲಿಮಿಟೆಡ್‍ನಲ್ಲಿ ರದ್ದಾದ 100 ಕೋಟಿ ರೂ. ನೋಟುಗಳನ್ನು ಮಾಜಿ ಸಚಿವ ಜನಾರ್ದನ ರೆಡ್ಡಿ ವರ್ಗಾವಣೆ ಮಾಡಿಕೊಂಡಿದ್ದಾರೆ. ಇದರ ಜೊತೆಗೆ 57 ಕೆ.ಜಿ ಚಿನ್ನದ ಗಟ್ಟಿ ಖರೀದಿಸಿ ರೆಡ್ಡಿ ಡೀಲ್ ಮಾಡಿಕೊಂಡಿದ್ದರು ಎನ್ನುವ  ಆರೋಪವೊಂದು ಕೇಳಿ ಬಂದಿದೆ.

    ಏನಿದು ಪ್ರಕರಣ?:
    ಮಾರ್ಕೆಟಿಂಗ್ ಹೆಸರಲ್ಲಿ ಹಣ ದ್ವಿಗುಣ ಮಾಡುವುದಾಗಿ ಲಕ್ಷಾಂತರ ಜನರಿಗೆ ಬೆಂಗಳೂರಿನ ಅಂಬಿಡೆಂಟ್ ಮಾರ್ಕೆಟಿಂಗ್ ಪ್ರೈವೇಟ್ ಲಿಮಿಟೆಡ್ ವಂಚನೆ ಮಾಡಿತ್ತು. ಈ ಸಂಬಂಧ ಬೆಂಗಳೂರಿನ ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗಮನಕ್ಕೆ ಬರುತ್ತಿದ್ದಂತೆ ಅವರು, ಪ್ರಕರಣವನ್ನು ಸಿಸಿಬಿಗೆ ಒಪ್ಪಿಸಿದ್ದರು. ಇದನ್ನು ಓದಿ: ಜನಾರ್ದನ ರೆಡ್ಡಿಯ ಮೂವರು ಆಪ್ತರು ಸಿಸಿಬಿ ವಶಕ್ಕೆ

    ಅಂಬಿಡೆಂಟ್ ಕಂಪನಿ ಮೇಲೆ ಜನವರಿಯಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿ, ಪ್ರಕರಣ ದಾಖಲಿಸಿದ್ದರು. ಈ ಕೇಸ್ ಮುಚ್ಚಿಹಾಕಲು ಕಂಪನಿ ಮಾಲೀಕ ಫರೀದ್ ಹಲವರ ಹಿಂದೆ ಸುತ್ತಿದ್ದರು. ಈ ವೇಳೆ ಫರೀದ್‍ಗೆ ಬಿಲ್ಡರ್ ಬ್ರಿಜೇಶ್, ರಮೇಶ್ ಕೊಠಾರಿ, ಅಲಿಖಾನ್ ಹಾಗೂ ಜನಾರ್ದನ ರೆಡ್ಡಿ ಸೇರಿ 25 ಕೋಟಿ ಡೀಲ್‍ಗೆ ಬೇಡಿಕೆಯಿಟ್ಟಿದ್ದರು.

    ಇಡಿ ಅಧಿಕಾರಿಗೆ 23 ಕೋಟಿ ರೂ. ನೀಡಿದ್ದ ರೆಡ್ಡಿ?:

    ಈ ಸಂಬಂಧ ಇಡಿ ಅಧಿಕಾರಿಯೊಬ್ಬರನ್ನು ಕಳೆದ ಮಾರ್ಚ್ ನಲ್ಲಿ ತಾಜ್ ವೆಸ್ಟೆಂಡ್‍ನಲ್ಲಿ ಭೇಟಿಯಾಗಿ ಡೀಲ್ ಬಗ್ಗೆ ಮಾತುಕತೆ ನಡೆಸಿದ್ದು, 23 ಕೋಟಿಗೆ ಜನಾರ್ದನ ರೆಡ್ಡಿ ಡೀಲ್ ಒಪ್ಪಿಕೊಂಡಿದ್ದರು. ಇದೇ ವೇಳೆ ರೆಡ್ಡಿ ಹಣವನ್ನು ಬ್ಲಾಕ್ ಮನಿಯಾಗಿ ನೀಡುವಂತೆ ಬೇಡಿಕೆಯಿಡ್ಡಿದ್ದರು. ಆದರೆ ಅಂಬಿಡೆಂಟ್ ಕಂಪನಿ ಮಾಲೀಕ ಫರೀದ್ ಮಾತ್ರ ಬ್ಲಾಕ್ ಇಲ್ಲ ವೈಟ್ ಹಣವಾಗಿ ನೀಡಿದ್ದರು. ಹೀಗಾಗಿ ರೆಡ್ಡಿ ಅದನ್ನು ಎನೇಬಲ್ ಕಂಪನಿಗೆ ಆರ್‌ಟಿಜಿಎಸ್‌ ಮಾಡಿಸಿಕೊಂಡಿದ್ದರು. ಬಳಿಕ ಇಡಿ ಅಧಿಕಾರಿಗೆ 23 ಕೋಟಿ ಹಣ ನೀಡಿ, ರೆಡ್ಡಿ 57 ಕೆಜಿ ಚಿನ್ನ ಖರೀದಿ ಮಾಡಿದ್ದರು. ಇದನ್ನು ಓದಿ:  ರೆಡ್ಡಿ ಗ್ಯಾಂಗ್ ಮಟ್ಟ ಹಾಕಲು ಕ್ರೈಂ ಬ್ರ್ಯಾಂಚ್ ಪೊಲೀಸರಿಗೆ ಸಿಎಂ ಸೂಚನೆ

    ಈ ಮೂಲಕ ಜನಾರ್ದನ ರೆಡ್ಡಿ ರದ್ದಾದ 100 ಕೋಟಿ ಹಣವನ್ನು ವರ್ಗಾವಣೆ ಮಾಡಿಕೊಂಡಿದ್ದು, ಪುತ್ರಿಯ ಮದುವೆಯನ್ನು ಅದ್ಧೂರಿಯಾಗಿ ಮಾಡಿದ್ದಾರೆ. ಇದಕ್ಕೆ ಪಿಎ ಅಲಿಖಾನ್ ಸಹಾಯ ಮಾಡಿದ್ದನು. ಆದರೆ ಈ ಪ್ರಕರಣದ ಕುರಿತು ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರ ನೇತೃತ್ವದಲ್ಲಿ ತನಿಖೆ ಆರಂಭವಾಗಿದೆ. ಹೀಗಾಗಿ ಸಿಸಿಬಿ ಪೊಲೀಸರು ಜನಾರ್ದನ ರೆಡ್ಡಿ ಆಪ್ತನ ಬಗ್ಗೆ ಮಾಹಿತಿ ಪಡೆದುಕೊಂಡು ಫರೀದ್ ನನ್ನು ವಶಕ್ಕೆ ಪಡೆದಿದ್ದರು.

    ಈ ವೇಳೆ ಸಿಸಿಬಿ ಪೊಲೀಸರ ಮುಂದೆ ತಪ್ಪೊಪ್ಪಿಗೆಯನ್ನು ಮಾಡಿಕೊಂಡಿದ್ದನು. ಅಲ್ಲದೇ ಜನಾರ್ದನ ರೆಡ್ಡಿ ಡೀಲ್ ಬಗ್ಗೆ ಇಂಚಿಂಚು ಮಾಹಿತಿ ನೀಡಿದ್ದರು. ಕಳೆದ ಶುಕ್ರವಾರ ಫರೀದ್ ಸಿಸಿಬಿ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾದಾಗ ಈ ಸ್ಫೋಟಕ ಮಾಹಿತಿ ಹೊರಬಿದ್ದಿದೆ.

    ಜನಾರ್ದನ ರೆಡ್ಡಿಗೆ 57 ಕೆ.ಜಿ ಚಿನ್ನದ ಗಟ್ಟಿ ಕೊಡಿಸಿದ್ದು ರಮೇಶ್ ಕೊಠಾರಿ ಎಂಬುದು ಈಗ ತಿಳಿದು ಬಂದಿದೆ. ಅಂಬೆಡೆಂಟ್ ಕಂಪನಿಯಿಂದ ಪಡೆದಿದ್ದ 23 ಕೋಟಿ ಡೀಲ್ ಹಣಕ್ಕಾಗಿ ಚಿನ್ನ ಖರೀದಿಸಲಾಗಿದೆ. ಚಿನ್ನ ಖರೀದಿಸಲು ಹಣ ಪಡೆದೇ ಇಲ್ಲ ಎಂದು ನಂಬಿಸಿ ರೆಡ್ಡಿ ಬಚಾವಾಗಲು ಯತ್ನಿಸಿದ್ದಾರೆ ಎನ್ನಲಾಗಿದೆ.

    ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಿಸಿಬಿ ಪೊಲೀಸರು, ಅಂಬಿಡೆಂಟ್ ಕಂಪನಿಯ ಮಾಲೀಕ ಫರೀದ್, ಬಿಲ್ಡರ್ ಬ್ರಿಜೇಶ್, ರಮೇಶ್ ಕೊಠಾರಿ ಸೇರಿ ಮೂವರನ್ನು ವಶಕ್ಕೆ ಪಡೆದಿದ್ದಾರೆ. ಜನಾರ್ದನ ರೆಡ್ಡಿ ಹೈದರಾಬಾದ್‍ಗೆ ಪರಾರಿಯಾಗಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದ್ದು, ಬಂಧನಕ್ಕಾಗಿ ಸಿಸಿಬಿ ತಂಡ ಬಲೆ ಬೀಸಿದೆ.

    ಯಾವುದಿದು ಅಂಬಿಡೆಂಟ್ ಕಂಪನಿ?
    ಅಂಬಿಡೆಂಟ್ ಮಾರ್ಕೆಟಿಂಗ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯನ್ನು ದುಬೈ ಮೂಲದ ಉದ್ಯಮಿಗಳು ಸ್ಥಾಪಿಸಿದ್ದಾರೆ. ಬೆಂಗಳೂರಿನ ಕನಕನಗರದ ಮುಖ್ಯರಸ್ತೆಯಲ್ಲಿ ಈ ಕಂಪನಿಯ ಕಚೇರಿಯಿದ್ದು, ನಿಮ್ಮ ಹಣವನ್ನ ಒಂದು ವರ್ಷದಲ್ಲಿ ದ್ವಿಗುಣ ಮಾಡಿಕೊಡುತ್ತೇವೆ ಎಂದು ಜನರಿಂದ ಹಣ ಪಡೆಯುತ್ತಿತ್ತು. ಪ್ರತಿ ಗ್ರಾಹಕರಿಂದ ಕನಿಷ್ಠ ಹೂಡಿಕೆ ಒಂದು ಲಕ್ಷ ರೂ. ಪಡೆಯುತ್ತಿತ್ತು. 1 ಲಕ್ಷ ಹೂಡಿಕೆ ಮಾಡಿದರೆ ಪ್ರತಿ ಮೂರು ತಿಂಗಳಿಗೊಮ್ಮೆ 40 ಸಾವಿರ ರೂ.ದಂತೆ ವರ್ಷಕ್ಕೆ 1.60 ಸಾವಿರ ವಾಪಸ್ಸು ಕೊಡುವುದಾಗಿ ಗ್ರಾಹಕರನ್ನು ನಂಬಿಸಿತ್ತು. ಹೀಗಾಗಿ ಇಲ್ಲಿ ಸಾವಿರಾರು ಜನರು ಹೂಡಿಕೆ ಮಾಡಿದ್ದರು. ಇದೇ ದೋಖಾ ಕಂಪೆನಿಯಲ್ಲಿ ಬೇನಾಮಿ ಹೆಸರಲ್ಲಿ ರೆಡ್ಡಿ ಆಪ್ತ ಅಲಿಖಾನ್ ಹಣ ಹೂಡಿದ್ದನು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv