Tag: ಅಂಬಟಿ ರಾಯುಡು

  • IPl 2023: ರಂಗೇರಿಸಿದ ರಹಾನೆ ಬ್ಯಾಟಿಂಗ್‌, ಜಡೇಜಾ ಸ್ಪಿನ್‌ ಜಾದು- ಚೆನ್ನೈಗೆ 7 ವಿಕೆಟ್‌ಗಳ ಭರ್ಜರಿ ಜಯ

    IPl 2023: ರಂಗೇರಿಸಿದ ರಹಾನೆ ಬ್ಯಾಟಿಂಗ್‌, ಜಡೇಜಾ ಸ್ಪಿನ್‌ ಜಾದು- ಚೆನ್ನೈಗೆ 7 ವಿಕೆಟ್‌ಗಳ ಭರ್ಜರಿ ಜಯ

    ಮುಂಬೈ: ಅಜಿಂಕ್ಯ ರಹಾನೆ (Ajinkya Rahane) ಸ್ಫೋಟಕ ಬ್ಯಾಟಿಂಗ್‌, ರವೀಂದ್ರ ಜಡೇಜಾ (Ravindra Jadeja) ಸ್ಪಿನ್‌ ಜಾದು ನೆರವಿನಿಂದ ಚೆನ್ನೈ ಸೂಪರ್‌ ಕಿಂಗ್ಸ್‌ (CSK), ಮುಂಬೈ ಇಂಡಿಯನ್ಸ್‌ ವಿರುದ್ಧ 7 ವಿಕೆಟ್‌ಗಳ ಜಯ ಸಾಧಿಸಿದೆ. ಈ ಮೂಲಕ 16ನೇ ಐಪಿಎಲ್‌ ಆವೃತ್ತಿಯಲ್ಲಿ ಸತತ 2ನೇ ಗೆಲುವು ದಾಖಲಿಸಿತು, ತವರಿನಲ್ಲಿ ಸೋತು ಮುಂಬೈ ಮುಖಭಂಗ ಅನುಭವಿಸಿತು.

    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ (Mumbai Indians) ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 157 ರನ್ ಗಳಿಸಿತ್ತು. ಈ ಗುರಿ ಬೆನ್ನತ್ತಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ 18.1 ಓವರ್‌ಗಳಲ್ಲೇ 3 ವಿಕೆಟ್‌ ನಷ್ಟಕ್ಕೆ 159 ರನ್‌ ಗಳಿಸಿ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಇದನ್ನೂ ಓದಿ: IPL 2023: ಯಶಸ್ವಿ, ಬಟ್ಲರ್‌ ಬೊಂಬಾಟ್‌ ಬ್ಯಾಟಿಂಗ್‌ – ರಾಜಸ್ಥಾನ್‌ಗೆ 57 ರನ್‌ಗಳ ಭರ್ಜರಿ ಜಯ

    ಚೇಸಿಂಗ್‌ ಆರಂಭಿಸಿದ ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಮೊದಲ ಓವರ್‌ನಲ್ಲೇ ಆಘಾತ ಎದುರಾಗಿತ್ತು. ಆರಂಭಿಕ ಆಟಗಾರ ಡಿವೋನ್‌ ಕಾನ್ವೆ 4 ಎಸೆತಗಳಲ್ಲಿ ಯಾವುದೇ ರನ್‌ ಗಳಿಸದೇ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ ಸೇರಿದರು. 2ನೇ ವಿಕೆಟ್‌ಗೆ ಕಣಕ್ಕಿಳಿದ ರಹಾನೆ ಸಿಕ್ಸರ್‌, ಬೌಂಡರಿ ಮಳೆ ಸುರಿಸುತ್ತಾ ಮುಂಬೈ ಬೌಲರ್‌ಗಳನ್ನು ಬೆಂಡೆತ್ತಿದರು. 2ನೇ ವಿಕೆಟ್‌ ಜೊತೆಯಾಟಕ್ಕೆ ರಹಾನೆ, ಋತುರಾಜ್‌ ಗಾಯಕ್ವಾಡ್‌ (Ruturaj Gaikwad) ಜೋಡಿ 44 ಎಸೆತಗಳಲ್ಲಿ ಭರ್ಜರಿ 82 ರನ್‌ ಗಳಿಸಿತ್ತು. ಕೇವಲ 19 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿದ್ದ ರಹಾನೆ 27 ಎಸೆತಗಳಲ್ಲಿ 61 ರನ್‌ (7 ಬೌಂಡರಿ, 3 ಸಿಕ್ಸರ್) ಚಚ್ಚಿ ಔಟಾದರು. ನಂತರ ಬಂದ ಶಿವಂ ದುಬೆ 26 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್‌ ನೆರವಿನಿಂದ 28 ರನ್‌ ಗಳಿಸಿದರು.

    ಇನ್ನೂ ಜವಾಬ್ದಾರಿಯುತ ಬ್ಯಾಟಿಂಗ್‌ ನಡೆಸಿದ ಮತ್ತೋರ್ವ ಆರಂಭಿಕ ಋತುರಾಜ್‌ ಗಾಯಕ್ವಾಡ್‌ ಕೊನೆಯವರೆಗೂ ಹೋರಾಡಿ 36 ಎಸೆತಗಳಲ್ಲಿ 40 ರನ್‌ (1 ಸಿಕ್ಸರ್‌, 2 ಬೌಂಡರಿ) ಗಳಿಸಿದರು. ಕೊನೆಯಲ್ಲಿ ಕಣಕ್ಕಿಳಿದ ಅಂಬಟಿ ರಾಯುಡು (Ambati Rayudu) 16 ಎಸೆತಗಳಲ್ಲಿ 3 ಬೌಂಡರಿಗಳೊಂದಿಗೆ 20 ರನ್‌ ಚಚ್ಚಿ ಗೆಲುವಿನ ನಗೆ ಬೀರಿದರು.

    ಮುಂಬೈ ಪರ ಜೇಸನ್ ಬೆಹ್ರೆನ್ಡಾರ್ಫ್, ಪಿಯೂಷ್‌ ಚಾವ್ಲಾ ಹಾಗೂ ಕುಮಾರ್‌ ಕಾರ್ತಿಕೇಯ ತಲಾ ಒಂದೊಂದು ವಿಕೆಟ್‌ ಪಡೆದರು. ಇದನ್ನೂ ಓದಿ: IPL 2023: ವೇಗದ ಅರ್ಧಶತಕ ಸಿಡಿಸಿ ಧೂಳೆಬ್ಬಿಸಿದ ರಹಾನೆ

    ಮುಂಬೈ ಇಂಡಿಯನ್ಸ್ ಪರ ಬ್ಯಾಟಿಂಗ್ ಆರಂಭಿಸಿದ ನಾಯಕ ರೋಹಿತ್ ಶರ್ಮಾ (Rohit Sharma) ಮತ್ತು ಇಶಾನ್ ಕಿಶನ್ (Ishan Kishan) ಉತ್ತಮ ಆರಂಭ ನೀಡಿದರು. ಈ ಜೋಡಿ 4 ಓವರ್‌ಗಳಲ್ಲಿ ಮೊದಲ ವಿಕೆಟ್‌ಗೆ 38 ರನ್ ಜೊತೆಯಾಟ ನೀಡಿತ್ತು. ನಾಯಕ ರೋಹಿತ್ ಶರ್ಮಾ 13 ಎಸೆತಗಳಲ್ಲಿ 21 ರನ್ (3 ಬೌಂಡರಿ, 1 ಸಿಕ್ಸರ್) ಗಳಿಸಿ ಔಟಾದರು. ನಂತರ ಬಂದ ಕ್ಯಾಮೆರೂನ್‌ ಗ್ರೀನ್ 12 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನೂ ಸೂರ್ಯಕುಮಾರ್ ಯಾದವ್ ಕೇವಲ 1 ರನ್ ಗಳಿಸಿ ಮತ್ತೊಮ್ಮೆ ಬ್ಯಾಟಿಂಗ್‌ನಲ್ಲಿ ವಿಫಲರಾದರು.

    ಕಳೆದ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದ ತಿಲಕ್ ವರ್ಮಾ 18 ಎಸೆತಗಳಲ್ಲಿ 22 ರನ್ (2 ಬೌಂಡರಿ, 1 ಸಿಕ್ಸರ್) ಗಳಿಸಿದರು. ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಅರ್ಷದ್ ಖಾನ್ 2 ರನ್ ಗಳಿಸಿ ಪೆವಿಲಿಯನ್ ಸೇರಿದರು. ಇದರಿಂದ ಮುಂಬೈಗೆ ಆಘಾತ ಎದುರಾಗಿತ್ತು. ಈ ನಡುವೆ ಟಿಮ್ ಡೇವಿಡ್ 22 ಎಸೆತಗಳಲ್ಲಿ 31 ರನ್ ಬಾರಿಸಿ ತಂಡಕ್ಕೆ ನೆರವಾದರು. ಕೊನೆಯಲ್ಲಿ ಟ್ರಿಸ್ಟಾನ್ ಸ್ಟಬ್ಸ್ 5 ರನ್, ಹೃತಿಕ್ ಶೋಕೆನ್ 13 ಎಸೆತಗಳಲ್ಲಿ 3 ಬೌಂಡರಿ ಸಮೇತ 18 ರನ್ ಗಳಿಸಿ ತಂಡದ ಮೊತ್ತ 150ರ ಗಡಿ ದಾಟಲು ನೆರವಾದರು.

    ಜಡೇಜಾ ಸ್ಪಿನ್‌ ಜಾದು: ಬೌಲಿಂಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ರವೀಂದ್ರ ಜಡೇಜಾ 4 ಓವರ್‌ಗಳಲ್ಲಿ 20 ರನ್ ನೀಡಿ 3 ವಿಕೆಟ್ ಪಡೆದರೆ, ಮಿಚೆಲ್ ಸ್ಯಾಂಟ್ನರ್ 4 ಓವರ್‌ಗಳಲ್ಲಿ 28 ರನ್ ನೀಡಿ 2 ವಿಕೆಟ್ ಕಿತ್ತರು. ತುಷಾರ್ ದೇಶಪಾಂಡೆ 3 ಓವರ್‌ಗಳಲ್ಲಿ 31 ರನ್ ನೀಡಿ 2 ವಿಕೆಟ್ ಪಡೆದರೆ, ಸಿಸಾಂಡ ಮಗಲ 4 ಓವರ್‌ಗಳಲ್ಲಿ 37 ರನ್ ನೀಡಿ 1 ವಿಕೆಟ್‌ ಪಡೆದು ಮಿಂಚಿದರು.

  • ಕಾನ್ವೆ ಬ್ಯಾಟಿಂಗ್ ಅಬ್ಬರ, ಮೊಯಿನ್ ಬೌಲಿಂಗ್ ದಾಳಿಗೆ ಡೆಲ್ಲಿ ತತ್ತರ – ಚೆನ್ನೆಗೆ 91 ರನ್‌ಗಳ ಗೆಲುವು

    ಕಾನ್ವೆ ಬ್ಯಾಟಿಂಗ್ ಅಬ್ಬರ, ಮೊಯಿನ್ ಬೌಲಿಂಗ್ ದಾಳಿಗೆ ಡೆಲ್ಲಿ ತತ್ತರ – ಚೆನ್ನೆಗೆ 91 ರನ್‌ಗಳ ಗೆಲುವು

    ಮುಂಬೈ: ಡಿವೈನ್ ಕಾನ್ವೆಯ ಸ್ಫೋಟಕ ಬ್ಯಾಟಿಂಗ್ ಹಾಗೂ ಮೊಯಿನ್ ಅಲಿ ಅವರ ಮಿಂಚಿನ ಬೌಲಿಂಗ್ ದಾಳಿಯಿಂದ ಚೆನ್ನೈ ಸೂಪರ್‌ಕಿಂಗ್ಸ್ 91 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.

    ಮುಂಬೈನ ಡಾ.ಡಿ.ವೈ.ಸ್ಪೋರ್ಟ್ಸ್ ಅಕಾಡೆಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್‌ಕಿಂಗ್ಸ್ ತಂಡವು 20 ಓವರ್‌ಗಳಲ್ಲಿ ಭರ್ಜರಿ 208 ರನ್ ಪೇರಿಸಿ, ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 209 ರನ್‌ಗಳ ಬೃಹತ್ ಮೊತ್ತದ ಗುರಿ ನೀಡಿತು. ಈ ರನ್‌ಗಳ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 17.4 ಓವರ್‌ಗಳಲ್ಲೇ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 117 ರನ್‌ಗಳಿಸಿ ಸಿಎಸ್‌ಕೆಗೆ ಮಂಡಿಯೂರಿತು.

    IPL 2022 CSK VS DC 06

    ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಬೌಲಿಂಗ್ ಆಯ್ದುಕೊಂಡಿದ್ದು ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 208 ರನ್ ಕಲೆಹಾಕಿದ್ದು ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 209 ರನ್‌ಗಳ ಬೃಹತ್ ಗುರಿಯನ್ನು ನೀಡಿತು. ಇದನ್ನೂ ಓದಿ: ಹೈದ್ರಾಬಾದ್ ಹಾರಾಟಕ್ಕೆ ಬ್ರೇಕ್ ಹಾಕಿದ ‘ಗ್ರೀನ್‌ಬಾಯ್ಸ್’- RCBಗೆ 67 ರನ್‌ಗಳ ಭರ್ಜರಿ ಜಯ

    IPL 2022 CSK VS DC 5

    ಈ ಗುರಿ ಬೆನ್ನತ್ತಿದ ಡೆಲ್ಲಿ ತಂಡದಲ್ಲಿ ಪ್ರಮುಖ ಬ್ಯಾಟರ್‌ಗಳ ವೈಫಲ್ಯ ಕಂಡುಬಂದಿತು. ಆರಂಭಿಕ ಆಟಗಾರ ಶ್ರೀಕರ್ ಭರತ್ 8 ರನ್‌ಗಳಿಗೆ ಹಾಗೂ ಸ್ಫೋಟಕ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್ 19 ರನ್ (12 ಎಸೆತ) ಗಳಿಸಿ ವಿಕೆಟ್ ಒಪ್ಪಿಸಿದ್ದು, ಡೆಲ್ಲಿಗೆ ಆಘಾತ ನೀಡಿತು. ಈ ವೇಳೆ ರಿಷಭ್ ಪಂತ್ ಹಾಗೂ ಮಿಚೆಲ್ ಮಾರ್ಷ್ ಜೋಡಿ 19 ಎಸೆತಗಳಲ್ಲಿ 36 ರನ್‌ಗಳಿಸಿ, ತಂಡಕ್ಕೆ ಗೆಲುವಿನ ಕನಸು ಚಿಗುರುವಂತೆ ಮಾಡಿತ್ತು. ಆದರೆ ಪ್ರಮುಖ ಬ್ಯಾಟರ್‌ಗಳ ಸಾಂಗಿಕ ಪ್ರದರ್ಶನಕ್ಕೆ ಎಲ್ಲಿಯೂ ಅವಕಾಶ ಕೊಡದ ಸಿಎಸ್‌ಕೆ ಟೀಂ ಡೆಲ್ಲಿ ಬ್ಯಾಟರ್‌ಗಳನ್ನು ಕಟ್ಟಿ ಹಾಕಿತ್ತು.

    2 ವಿಕೆಟ್‌ಗಳನ್ನು ಕಳೆದುಕೊಂಡರೂ ಉತ್ತಮ ಪ್ರದರ್ಶನವನ್ನೇ ನೀಡಿದ್ದ ಡೆಲ್ಲಿ ತಂಡವು ಮೊದಲ 7 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 71 ರನ್‌ಗಳನ್ನು ಪೇರಿಸಿತ್ತು. ನಂತರ ಬಂದ ಪ್ರಮುಖ ಬ್ಯಾಟರ್‌ಗಳ ವೈಫಲ್ಯದ ಆಟ ತಂಡದ ಸೋಲನ್ನು ಒಪ್ಪಿಕೊಳ್ಳುವಂತೆ ಮಾಡಿತು.

    IPL 2022 CSK VS DC 5

    ಡೆಲ್ಲಿ ತಂಡದ ಪರ ಮಿಚೆಲ್ ಮಾರ್ಷ್ 25 ರನ್ (20 ಎಸೆತ, 3 ಬೌಂಡರಿ, 1 ಸಿಕ್ಸರ್), ರಿಷಭ್‌ಪಂತ್ 21 (11 ಎಸೆತ, 4 ಬೌಂಡರಿ), ಶಾರ್ದೂಲ್ ಠಾಕೂರ್ 24 ರನ್ (19 ಎಸೆತ, 1 ಸಿಕ್ಸರ್, 2 ಬೌಂಡರಿ), ರೋವ್ಮನ್ ಪೋವೆಲ್ 3, ಅಕ್ಸರ್ ಪಟೇಲ್ 6, ರಿಪಾಲ್ ಪಟೇಲ್ 1 ರನ್ ಗಳಿಸಿದರೆ, ಅನ್ರಿಚ್ ನಾರ್ಟ್ಜೆ 1 ರನ್‌ಗಳಿಸಿ ಅಜೇಯರಾಗುಳಿದರು. ಡೆಲ್ಲಿ ಪರ ಎನ್ರಿಚ್ ನಾಕಿಯಾ 3 ಹಾಗೂ ಖಲೀಲ್ ಅಹ್ಮದ್ 2 ವಿಕೆಟ್ ಗಳಿಸಿದರು.

    ಮೊಯಿನ್ ಬೌಲಿಂಗ್ ಮಿಂಚಿನ ದಾಳಿ: ಡೆಲ್ಲಿ ಬೌಲರ್‌ಗಳ ವಿರುದ್ಧ ಮಿಂಚಿನ ದಾಳಿ ನಡೆಸಿದ ಆಲ್‌ರೌಂಡರ್ ಮೊಯಿನ್ ಅಲಿ, ಡೆಲ್ಲಿ ಬ್ಯಾಟರ್‌ಗಳನ್ನು ಬಗ್ಗುಬಡಿದರು. 4 ಓವರ್‌ನಲ್ಲಿ ಕೇವಲ 13 ರನ್‌ಗಳನ್ನು ನೀಡಿ 3 ವಿಕೆಟ್ ಉರುಳಿಸಿದರು. ಇದಕ್ಕೆ ತಾವೇನು ಕಮ್ಮಿ ಇಲ್ಲವೆನ್ನುವಂತೆ ಮುಖೇಶ್ ಚೌಧರಿ, 2 ಸಿಮರ್ಜೀತ್ ಸಿಂಗ್ 2 ವಿಕೆಟ್ ಗಳಿಸಿದರು.

    IPL 2022 CSK VS DC 5

    ಕಾನ್ವೆ ಸ್ಫೋಟಕ ಬ್ಯಾಟಿಂಗ್: ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಸಿಎಸ್‌ಕೆ ತಂಡದ ಡಿವೋನ್ ಕಾನ್ವೆ ಹಾಗೂ ಋತುರಾಜ್ ಗಾಯಕವಾಡ್ ಮಗದೊಮ್ಮೆ ಅತ್ಯುತ್ತಮ ಪ್ರದರ್ಶನ ನೀಡಿದರು. ಆರಂಭದಲ್ಲಿ ಡೆಲ್ಲಿ ಬೌಲರ್‌ಗಳನ್ನು ಬೆಂಡಿತ್ತಿದ ಈ ಜೋಡಿ ಮೊದಲ ವಿಕೆಟ್ ಕಳೆದುಕೊಳ್ಳುವ ವೇಳೆಗೆ 11 ಓವರ್‌ಗಳಲ್ಲಿ 110 ರನ್‌ಗಳ ಜೊತೆಯಾಟ ಕಲೆಹಾಕಿತ್ತು. ಇಬ್ಬರ ಸಾಂಗಿಕ ಬ್ಯಾಟಿಂಗ್ ಪ್ರದರ್ಶನದಿಂದ ತಂಡವು 200 ರನ್‌ಗಳ ಗಡಿ ದಾಟಲು ಸಾಧ್ಯವಾಯಿತು.  ಇದನ್ನೂ ಓದಿ: ಮುಂಬೈ ತಂಡಕ್ಕೆ ರೋಚಕ ಜಯ – 3ನೇ ಸೋಲಿನ ಕಹಿ ಅನುಭವಿಸಿದ ಗುಜರಾತ್‌

    IPL 2022 CSK VS DC 5

    ಕಾನ್ವೆ ಕೇವಲ 27 ಎಸೆತಗಳಲ್ಲಿ ಅಮೋಘ ಅರ್ಧಶತಕ ಸಿಡಿಸಿ, ಈ ಸೀಸನ್‌ನಲ್ಲೇ ಹ್ಯಾಟ್ರಿಕ್ ಅರ್ಧಶತಕಗಳ ಸಾಧನೆ ಮಾಡಿದರು. ಅತ್ತ ಕಲಾತ್ಮಕ ಇನ್ನಿಂಗ್ಸ್ ಕಟ್ಟಿದ ಗಾಯಕವಾಡ್ 41 ರನ್ (33 ಎಸೆತ, 4 ಬೌಂಡರಿ, 1 ಸಿಕ್ಸರ್) ಗಳಿಸಿ ಔಟ್ ಆದರು. ಇದೇ ವೇಳೆ ಶತಕದ ಸನಿಹದಲ್ಲಿ ಕಾನ್ವೆ ಎಡವಿದರು. ಅಲ್ಲದೆ ಕೇವಲ 13 ರನ್ ಅಂತರದಿಂದ ಶತಕ ವಂಚಿತರಾದರು. 49 ಎಸೆತಗಳನ್ನು ಎದುರಿಸಿದ ಕಾನ್ವೆ ಏಳು ಬೌಂಡರಿ ಹಾಗೂ 5 ಸಿಕ್ಸರ್ ನೆರವಿನಿಂದ 87 ರನ್ ಗಳಿಸಿದರು. ಇದಾದ ಬೆನ್ನಲ್ಲೇ ದುಬೆ 19 ಎಸೆತಗಳಲ್ಲಿ ಸ್ಪೋಟಕ 32 ರನ್ (2 ಬೌಂಡರಿ, 2 ಸಿಕ್ಸರ್) ಚಚ್ಚಿ ವಿಕೆಟ್ ಒಪ್ಪಿಸಿದರು.

    ಕೊನೆಯ ಹಂತದಲ್ಲಿ ನಾಯಕ ಮಹೇಂದ್ರ ಸಿಂಗ್ ಧೋನಿ 8 ಎಸೆತಗಳಲ್ಲಿ 21 ರನ್ ಗಳಿಸಿ (2 ಸಿಕ್ಸರ್, 1 ಬೌಂಡರಿ) ಅಜೇಯರಾಗುಳಿದರು. ಈ ಮೂಲಕ ಸಿಎಸ್‌ಕೆ 6 ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿತು.

    IPL 2022 CSK VS DC 5

    ಡೆಲ್ಲಿ ಪ್ಲೇ ಆಫ್ ಕನಸು ಭಗ್ನ: ಮೊದಲ 10 ಪಂದಗಳಲ್ಲಿ 5 ಪಂದ್ಯಗಳನ್ನು ಗೆದ್ದಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಪ್ಲೇ ಆಫ್‌ಗೆ ಬರಲು ಇನ್ನೂ ಕನಿಷ್ಠ 3 ಪಂದ್ಯಗಳನ್ನು ಗೆಲ್ಲಬೇಕಿತ್ತು. ಆದರೆ ಚೆನ್ನೈಗೆ ಶರಾಣದ ಡೆಲ್ಲಿ ಉಳಿದ ನಾಲ್ಕು ಪಂದ್ಯಗಳಲ್ಲಿ ಕನಿಷ್ಠ ಮೂರು ಪಂದ್ಯಗಳನ್ನಾದರೂ ಗೆಲ್ಲಬೇಕಿದೆ. ನಂತರದ ರೇಸ್‌ನಲ್ಲಿ ಹೈದರಾಬಾದ್, ಕಿಂಗ್ಸ್ ಪಂಜಾಬ್ ತಂಡಗಳಿವೆ.

    ರನ್ ಏರಿದ್ದು ಹೇಗೆ?
    35 ಎಸೆತ 50 ರನ್
    61 ಎಸೆತ 100 ರನ್
    92 ಎಸೆತ 150 ರನ್
    120 ಎಸೆತ 208 ರನ್

  • ರಾಯುಡು ಮನೆಗೆ ಹೊಸ ಅತಿಥಿಯ ಆಗಮನ

    ರಾಯುಡು ಮನೆಗೆ ಹೊಸ ಅತಿಥಿಯ ಆಗಮನ

    ಮುಂಬೈ: ಭಾರತೀಯ ಕ್ರಿಕೆಟ್‌ ತಂಡದ ಆಟಗಾರ ಅಂಬಟಿ ರಾಯುಡು ದಂಪತಿಗೆ ಹೆಣ್ಣು ಮಗು ಜನಿಸಿದೆ.

    ರಾಯುಡು ಪತ್ನಿ ಚೆನ್ನುಪಲ್ಲಿ ವಿದ್ಯಾ ಅವರು ಭಾನುವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಐಪಿಎಲ್‌ನಲ್ಲಿ ರಾಯುಡು ಚೆನ್ನೈ ಸೂಪರ್‌ ಕಿಂಗ್ಸ್ ಪರವಾಗಿ ಆಡುತ್ತಿದ್ದು, ರಾಯುಡು ತಂದೆಯಾದ ವಿಚಾರವನ್ನು, ಸಿಎಸ್‌ಕೆ ತಂಡ ತಮ್ಮ ಅಧಿಕೃತ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದೆ.

    ರಾಯುಡು ದಂಪತಿಗೆ ಹೆಣ್ಣು ಮಗು ಜನಿಸಿದೆ ಎಂಬ ವಿಚಾರ ತಿಳಿಯುತ್ತಿದಂತೆ ಅವರ ಅಭಿಮಾನಿಗಳು ಮತ್ತು ಸಾವಿರಾರು ನೆಟ್ಟಿಗರು ಸಾಮಾಜಿಕ ಜಾಲತಾಣದ ಮೂಲಕ ವಿಶ್‌ ಮಾಡುತ್ತಿದ್ದಾರೆ. ಈ ವಿಚಾರವಾಗಿ ಟ್ವೀಟ್‌ ಮಾಡಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಈಗ ಡ್ಯಾಡೀಸ್‌ ಆರ್ಮಿಯಿಂದ ಆಫ್-ಫೀಲ್ಡ್ ಪಾಠಗಳನ್ನು ಬಳಸಲಾಗುವುದು. ವಿಸಿಲ್ ಪೋಡು ಎಂದು ಬರೆದು ಅಂಬಟಿ ರಾಯುಡು ಮತ್ತು ಅವರು ಮಗಳು ಹಾಗೂ ಅವರ ಪತ್ನಿ ಜೊತೆಗಿರುವ ಮುದ್ದಾದ ಸೆಲ್ಫಿಯನ್ನು ಹಂಚಿಕೊಂಡಿದೆ.

    ತನ್ನ ತಂಡದ ಸಹ ಆಟಗಾರ ಅಂಬಟಿ ರಾಯುಡು ಅವರಿಗೆ ವಿಶ್‌ ಮಾಡಿರುವ ಸುರೇಶ್‌ ರೈನಾ ಅವರು, ಮಗಳ ಜನನವಾಗಿದ್ದಕ್ಕೆ ಅಂಬಟಿ ರಾಯುಡು ಹಾಗೂ ವಿದ್ಯಾ ಅವರಿಗೆ ಶುಭಾಶಯಗಳು. ನಿಮ್ಮ ಮುದ್ದು ಮಗಳ ಜೊತೆಗೆ ಪ್ರತಿ ಕ್ಷಣವನ್ನು ಆನಂದಿಸಿ. ನಿಮಗೆ ದೇವರು ಹೆಚ್ಚಿನ ಖುಷಿ ಕೊಡಲಿ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಉತ್ತರಿಸಿದ ರಾಯಡು ಅವರು, ಧನ್ಯವಾದಗಳು ಸಹೋದರ ಎಂದು ರೈನಾ ಅವರಿಗೆ ತಿಳಿಸಿದ್ದಾರೆ.

    ರಾಯುಡು ಅವರು ಭಾರತ ತಂಡದ ಮಿಡಲ್‌ ಆರ್ಡರ್ ಬ್ಯಾಟ್ಸ್‌ ಮ್ಯಾನ್‌ ಆಗಿದ್ದು, ಭಾರತದ ಪರವಾಗಿ 55 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಜೊತೆಗೆ ಮೂರು ಸೆಂಚುರಿಗಳನ್ನು ಹೊಡೆದಿದ್ದಾರೆ. ಭಾರತದ ಪರವಾಗಿ ಅಂಬಟಿ ರಾಯುಡು ಅವರು, ಆರು ಟಿ-೨೦ ಪಂದ್ಯಗಳನ್ನು ಆಡಿದ್ದಾರೆ. ಐಪಿಎಲ್‌ನಲ್ಲಿ ಹೆಚ್ಚು ಗುರುತಿಸಿಕೊಂಡಿರುವ ಅಂಬಟಿ 2010ರಲ್ಲಿ ಮುಂಬೈ ಇಂಡಿಯನ್ಸ್‌ ತಂಡದಿಂದ ಐಪಿಎಲ್‌ಗೆ ಪಾದಾರ್ಪಣೆ ಮಾಡಿದರು. ಈವರೆಗೂ ಸುಮಾರು 147 ಐಪಿಎಲ್‌ ಪಂದ್ಯಗಳನ್ನು ರಾಯುಡು ಆಡಿದ್ದಾರೆ.

    ಕಾಲೇಜು ಗೆಳತಿ ಚೆನ್ನುಪಲ್ಲಿ ವಿದ್ಯಾ ಅವರನ್ನು 2009ರ ಫೆಬ್ರವರಿ14ರಂದು ಹೈದರಾಬಾದಿನಲ್ಲಿ ಅಂಬಟಿ ರಾಯುಡು ವರಿಸಿದ್ದರು.

  • ಟೀಂ ಇಂಡಿಯಾಗೆ ಈ ನಾಲ್ವರ ಕಮ್‍ಬ್ಯಾಕ್ ಕಷ್ಟ ಕಷ್ಟ!

    ಟೀಂ ಇಂಡಿಯಾಗೆ ಈ ನಾಲ್ವರ ಕಮ್‍ಬ್ಯಾಕ್ ಕಷ್ಟ ಕಷ್ಟ!

    ನವದೆಹಲಿ: ಟೀಂ ಇಂಡಿಯಾಗೆ ಕಮ್‍ಬ್ಯಾಕ್ ಮಾಡಲು ಮಾಜಿ ನಾಯಕ ಎಂ.ಎಸ್.ಧೋನಿ ಸೇರಿದಂತೆ ಅನೇಕರು ಸರ್ವ ಪ್ರಯತ್ನ ನಡೆಸಿದ್ದಾರೆ. ಈ ಪೈಕಿ ನಾಲ್ವರು ಮತ್ತೆ ರಾಷ್ಟ್ರೀಯ ತಂಡ ಸೇರುವುದು ಕಷ್ಟ ಎಂಬ ಮಾತುಗಳು ಕೇಳಿ ಬಂದಿವೆ.

    ಭಾರತದ ಕ್ರಿಕೆಟ್ ತಂಡದ ಪರ ಟೆಸ್ಟ್ ಪಂದ್ಯದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಹರ್ಭಜನ್ ಸಿಂಗ್ ಇತ್ತೀಚೆಗೆ ತಂಡಕ್ಕೆ ಕಮ್‍ಬ್ಯಾಕ್ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ಐಪಿಎಲ್ ಮೂಲಕ ಟೀಂ ಇಂಡಿಯಾಗೆ ರೀ ಎಂಟ್ರಿ ಕೊಡಲು ಎಂ.ಎಸ್.ಧೋನಿ ಮುಂದಾಗಿದ್ದರು. ಆದರೆ ಕೊರೊನಾ ಲಾಕ್‍ಡೌನ್‍ನಿಂದಾಗಿ ಟೂರ್ನಿ ಅನಿರ್ಧಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ.

    ಹರ್ಭಜನ್ ಸಿಂಗ್ ಸುಮಾರು 11 ವರ್ಷಗಳ ಕಾಲ ರಾಷ್ಟ್ರೀಯ ತಂಡದಲ್ಲಿ ಪ್ರಮುಖ ಆಯ್ಕೆಯಾಗಿದ್ದರು. 2011ರ ವಿಶ್ವಕಪ್ ನಂತರ ಎಂ.ಎಸ್. ಧೋನಿ ಮತ್ತು ತಂಡದ ಆಡಳಿತ ಮಂಡಳಿ ಅವರನ್ನು ಕೈಬಿಟ್ಟು ಆರ್.ಅಶ್ವಿನ್‍ಗೆ ಮಣೆ ಹಾಕಿತು. ಹೀಗಾಗಿ ಮುಂದಿನ 6 ವರ್ಷಗಳವರೆಗೆ ಎಲ್ಲಾ ಸ್ವರೂಪಗಳಲ್ಲಿ ಸ್ಪಿನ್ ದಾಳಿಯನ್ನು ಆರ್.ಅಶ್ವಿನ್ ಮುನ್ನಡೆಸಿದರು.

    ಸದ್ಯ ಐಪಿಎಲ್ ಮಾತ್ರ ಆಡುತ್ತಿರುವ ಹರ್ಭಜನ್ ಸಿಂಗ್ ಮತ್ತೆ ರಾಷ್ಟ್ರೀಯ ತಂಡದಲ್ಲಿ ಆಯ್ಕೆಯಾಗುವ ನಿರೀಕ್ಷೆಯಿಲ್ಲ. ಆದರೆ ಟೀಂ ಇಂಡಿಯಾಗೆ ಕಮ್‍ಬ್ಯಾಕ್ ಹೊರತಾಗಿಯೂ ಐಪಿಎಲ್ ಅಥವಾ ದೇಶೀಯ ಕ್ರಿಕೆಟ್ ಆಡುತ್ತಿದ್ದಾರೆ. ಇತ್ತ ಅಂಬಟಿ ರಾಯುಡು, ಸ್ಟುವರ್ಟ್ ಬಿನ್ನಿ, ಮನೋಜ್ ತಿವಾರಿ ಹಾಗೂ ಪಾರ್ಥಿವ್ ಪಟೇಲ್ ಅವರು ಟೀಂ ಇಂಡಿಯಾಗೆ ಕಮ್‍ಬ್ಯಾಕ್ ಮಾಡುವುದು ಭಾರೀ ಕಷ್ಟ ಎನ್ನಲಾಗುತ್ತಿದೆ.

    ಅಂಬಟಿ ರಾಯುಡು:
    2019ರ ವಿಶ್ವಕಪ್‍ಗೆ ಅಂಬಟಿ ರಾಯುಡು ಅವರನ್ನು ಆಯ್ಕೆ ಸಮಿತಿ ಕೈಬಿಟ್ಟಿದ್ದು ಅಚ್ಚರಿ ಮೂಡಿಸಿತ್ತು. ಅಷ್ಟೇ ಅಲ್ಲದೆ ಟೂರ್ನಿ ನಡುವೆ ಆಟಗಾರರು ಗಾಯದಿಂದ ವಿಶ್ರಾಂತಿಗೆ ಜಾರಿದಾಗ ಎರಡು ಅವಕಾಶಗಳು ಇದ್ದಾಗಲೂ ಅವರನ್ನು ಕಡೆಗಣಿಸಲಾಗಿತ್ತು. ಬದಲಾಗಿ ರಿಷಬ್ ಪಂತ್ ಮತ್ತು ಮಾಯಾಂಕ್ ಅಗರ್ವಾಲ್ ಅವರಿಗೆ ಮಣೆ ಹಾಕಲಾಗಿತ್ತು. ಈ ಮೂಲಕ ಟೀಂ ಇಂಡಿಯಾದಲ್ಲಿ ಅಂಬಟಿ ರಾಯುಡು ಕಮ್‍ಬ್ಯಾಕ್ ಕಷ್ಟ ಎನ್ನುವ ಸಂದೇಶವನ್ನು ಬಿಸಿಸಿಐ ಪರೋಕ್ಷವಾಗಿ ರವಾನಿಸಿತ್ತು. ಶ್ರೇಯಸ್ ಅಯ್ಯರ್ ಉತ್ತಮ ಫಾರ್ಮ್ ನಲ್ಲಿದ್ದು, ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಸೈ ಎನಿಸಿಕೊಂಡಿದ್ದಾರೆ. ಇದರಿಂದಾಗಿ ರಾಯುಡು ಅವರಿಗಿದ್ದ ಅವಕಾಶ ಕೈತಪ್ಪಿದೆ.

    ಸ್ಟುವರ್ಟ್ ಬಿನ್ನಿ:
    2016ರಿಂದ ಟೀಂ ಇಂಡಿಯಾದಿಂದ ಹೊರಗುಳಿದ ನಂತರ ಸ್ಟುವರ್ಟ್ ಬಿನ್ನಿ ದೇಶೀಯ ಕ್ರಿಕೆಟ್‍ನಲ್ಲಿ ಮುಂದುವರಿದಿದ್ದಾರೆ. 2018ರಲ್ಲಿ ಅವರು ಕರ್ನಾಟಕ ತಂಡದಿಂದ ಹೊರಗುಳಿದಿದ್ದರು. 2019-20ರ ಮಧ್ಯೆ ನಾಗಾಲ್ಯಾಂಡ್ ತಂಡ ಸೇರಲು ಮುಂದಾಗಿದ್ದರು. ಐಪಿಎಲ್ ಫ್ರಾಂಚೈಸಿ ರಾಜಸ್ಥಾನ್ ರಾಯಲ್ಸ್ ತಂಡವು ಬಿನ್ನಿ ಅವರನ್ನು 13ನೇ ಆವೃತ್ತಿಗೆ ಕೈಬಿಟ್ಟಿದೆ. ಬಳಿಕ ನಡೆದ ಹರಾಜಿನಲ್ಲಿ ಸ್ಟುವರ್ಟ್ ಬಿನ್ನಿ ಅವರನ್ನು ಯಾವುದೇ ತಂಡ ಖರೀದಿಸಲು ಮುಂದೆ ಬರಲಿಲ್ಲ.

    ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾದಲ್ಲಿ ಆಲ್‍ರೌಂಡರ್ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಹೀಗಾಗಿ ಬಿನ್ನಿ ಕಮ್‍ಬ್ಯಾಕ್ ಕಷ್ಟ ಎಂದು ಹೇಳಲಾಗುತ್ತಿದೆ. 2015ರ ವಿಶ್ವಕಪ್ ತಂಡದ ಸದಸ್ಯರಾಗಿದ್ದ ಬಿನ್ನಿ 2014ರಿಂದ 2016ರವರೆಗೆ ಆರು ಟೆಸ್ಟ್, 14 ಏಕದಿನ ಮತ್ತು ಮೂರು ಟಿ20 ಪಂದ್ಯಗಳನ್ನು ಆಡಿದ್ದಾರೆ.

    ಮನೋಜ್ ತಿವಾರಿ:
    ಎಂ.ಎಸ್.ಧೋನಿ ಹಾಗೂ ತಂಡದ ಆಯ್ಕೆ ಸಮಿತಿಯ ಒಂದು ಕಾಲದ ಮೊದಲ ಆಯ್ಕೆಯ ಆಟಗಾರ ಮನೋಜ್ ತಿವಾರಿ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಪರದಾಡಿದರು. ಶತಕ ಗಳಿಸಿದ ನಂತರವೂ ಅವರು ಆಡುವ ಇಲೆವನ್ ತಂಡದಿಂದ ಹೊರಗುಳಿದರು. ಟೀಂ ಇಂಡಿಯಾ ಜೊತೆಗೆ ಪ್ರಪಂಚದಾದ್ಯಂತ ಪ್ರವಾಸ ಮಾಡಿದರು ಮನೋಜ್ ತಿವಾರಿ, 2008ರಿಂದ 2015ರವರೆಗೆ ಕೇವಲ 12 ಏಕದಿನ ಮತ್ತು ಮೂರು ಟಿ20 ಪಂದ್ಯಗಳನ್ನು ಮಾತ್ರ ಆಡಿದ್ದಾರೆ. ಅವರು 2018ರಿಂದ ಭಾರತ ಎ ಪರ ಆಡಿಲ್ಲ. ತಿವಾರಿ ದೇಶೀಯ ಕ್ರಿಕೆಟ್‍ನಲ್ಲಿ ಬಂಗಾಳ ಪರ ಆಡುವುದನ್ನು ಮುಂದುವರಿಸಿದ್ದಾರೆ. ಆದರೆ ರಾಷ್ಟ್ರೀಯ ತಂಡಕ್ಕೆ ಕರೆಸಿಕೊಳ್ಳುವ ಸಾಧ್ಯತೆಗಳು ವಿರಳ ಎನ್ನಲಾಗುತ್ತಿದೆ.

    ಪಾರ್ಥಿವ್ ಪಟೇಲ್:
    ಎಂ.ಎಸ್.ಧೋನಿ ಅವರ ಎಂಟ್ರಿ ಪಾರ್ಥಿವ್ ಪಟೇಲ್ ಅವರನ್ನು ಟೀಂ ಇಂಡಿಯಾದಿಂದ ದೂರವಾಗುವಂತೆ ಮಾಡಿತು ಎನ್ನಲಾಗುತ್ತಿದೆ. 2018-19ರಲ್ಲಿ ನಡೆದ ಆಸ್ಟ್ರೇಲಿಯಾ ಪ್ರವಾಸದ ಸಂದರ್ಭದಲ್ಲಿ ಅವರು ಟೆಸ್ಟ್ ತಂಡದ ಭಾಗವಾಗಿದ್ದರು. ಆದರೆ ರಿಷಬ್ ಪಂತ್ ಅವರು ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದರಿಂದ ಅವಕಾಶ ಸಿಗಲಿಲ್ಲ. ಪಾರ್ಥಿವ್ ಪಟೇಲ್ ಐಪಿಎಲ್ ಮತ್ತು ದೇಶೀಯ ಕ್ರಿಕೆಟ್ ಆಡುವುದನ್ನು ಮುಂದುವರಿಸಿದ್ದಾರೆ. ಆದರೆ ವೃದ್ಧಿಮಾನ್ ರಾಷ್ಟ್ರೀಯ ತಂಡಕ್ಕೆ ಮರಳಿದ್ದಾರೆ.

  • ಎಚ್‍ಸಿಎ ವಿರುದ್ಧ ಭ್ರಷ್ಟಾಚಾರ ಆರೋಪ- ಮತ್ತೆ ಕ್ರಿಕೆಟ್‍ನಿಂದ ಹೊರಗುಳಿದ ರಾಯುಡು

    ಎಚ್‍ಸಿಎ ವಿರುದ್ಧ ಭ್ರಷ್ಟಾಚಾರ ಆರೋಪ- ಮತ್ತೆ ಕ್ರಿಕೆಟ್‍ನಿಂದ ಹೊರಗುಳಿದ ರಾಯುಡು

    ಹೈದರಾಬಾದ್: ನಿವೃತ್ತಿ ನಿರ್ಧಾರ ಬದಲಿಸಿದ್ದ ಟೀಂ ಇಂಡಿಯಾ ಕ್ರಿಕೆಟರ್ ಅಂಬಟಿ ರಾಯುಡು, ಹೈದರಾಬಾದ್ ಕ್ರಿಕೆಟ್ ಅಸೋಸಿಯೇಶನ್ (ಎಚ್‍ಸಿಎ) ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿ ಕ್ರಿಕೆಟ್‍ನಿಂದ ಹೊರಗುಳಿದಿದ್ದಾರೆ.

    ಎಚ್‍ಸಿಎನಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಅಂಬಟಿ ರಾಯುಡು ಗಂಭೀರ ಆರೋಪ ಮಾಡಿದ್ದಾರೆ. ಈ ವಿಚಾರವನ್ನು ರಾಯುಡು ಟ್ವೀಟ್ ಮೂಲಕ ವ್ಯಕ್ತಪಡಿಸಿದ್ದು, ಈ ವಿಷಯದಲ್ಲಿ ಮಧ್ಯಪ್ರವೇಶಿಸುವಂತೆ ತೆಲಂಗಾಣ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

    ಟ್ವೀಟ್ ಮಾಡಿರುವ ರಾಯುಡು, ಕೈಗಾರಿಕೆ ಮತ್ತು ನಗರಾ ಆಡಳಿತ ಸಚಿವ ಕೆ.ಟಿ.ರಾಮರಾವ್ ಅವರಿಗೆ ಟ್ಯಾಗ್ ಮಾಡಿ, ಹಲೋ ಸರ್, ಹೈದರಾಬಾದ್ ಕ್ರಿಕೆಟ್ ಅಸೋಸಿಯೇಶನ್‍ನಲ್ಲಿ (ಎಚ್‍ಸಿಎ) ಹರಡಿರುವ ಭ್ರಷ್ಟಾಚಾರದ ಬಗ್ಗೆ ಗಮನಹರಿಸಿ. ಈ ವಿಚಾರದಲ್ಲಿ ಮಧ್ಯಪ್ರವೇಶಿಸುವಂತೆ ನಾನು ನಿಮ್ಮನ್ನು ಕೋರುತ್ತೇನೆ. ಹೈದರಾಬಾದ್ ತಂಡದಲ್ಲಿ ನಡೆಯುತ್ತಿರುವ ಭ್ರಷ್ಟ ತಡೆದರೆ ಉತ್ತಮ ತಂಡವಾಗಿ ಹೊರ ಹೊಮ್ಮುತ್ತದೆ ಎಂದು ಬರೆದುಕೊಂಡಿದ್ದಾರೆ.

    ಅಷ್ಟೇ ಅಲ್ಲದೆ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಶನ್‍ನ ಆಯ್ಕೆ ಸಮಿತಿಯ ಅಧ್ಯಕ್ಷ ಆರ್.ಎ.ಸ್ವರೂಪ್ ಅವರಿಗೆ ಪತ್ರ ಅಂಬಟಿ ರಾಯುಡು ಬರೆದಿದ್ದು, ಮುಂಬರುವ ರಣಜಿ ಟ್ರೋಫಿಗೆ ನಾನು ಆಡುವುದಿಲ್ಲ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.

    ಭಾರತದ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಅವರು ಅದೇ ವರ್ಷ ಹೈದರಾಬಾದ್ ಕ್ರಿಕೆಟ್ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅಂದಿನಿಂದ, ರಾಯುಡು ಎಚ್‍ಸಿಎ ರಾಜಕೀಯ ಮತ್ತು ಭ್ರಷ್ಟಾಚಾರದ ವಿಷಯವನ್ನು ಪದೇ ಪದೇ ಎತ್ತುತ್ತಿದ್ದಾರೆ.

    2019ರ ವಿಶ್ವಕಪ್ ಟೂರ್ನಿ ವೇಳೆ ಭಾರತ ತಂಡಕ್ಕೆ ರಾಯುಡು ಅವರನ್ನು ಅವರನ್ನು ಕೈಬಿಟ್ಟು ವಿಜಯ್ ಶಂಕರ್ ಅವರಿಗೆ ಮಣೆ ಹಾಕಲಾಗಿತ್ತು. ಈ ವಿಚಾರವಾಗಿ ರಾಯುಡು, ಟೀಂ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ ಪ್ರಸಾದ್ ಅವರ ವಿರುದ್ಧ ಅಸಮಾಧಾನ ಹೊರ ಹಾಕಿದ್ದರು.

    ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗದ ಹಿನ್ನೆಲೆಯಲ್ಲಿ ರಾಯುಡು ಅಂತರಾಷ್ಟ್ರೀಯ ಕ್ರಿಕೆಟ್‍ಗೆ ಆಗಸ್ಟ್ ನಲ್ಲಿ ನಿವೃತ್ತಿ ಘೋಷಿಸಿದ್ದರು. ಆದರೆ ಒಂದು ತಿಂಗಳ ನಂತರ ತಮ್ಮ ನಿರ್ಧಾರವನ್ನು ಹಿಂಪಡೆದು, ಎಚ್‍ಸಿಎ ಪರ ಮತ್ತೆ ಮೈದಾನಕ್ಕೆ ಇಳಿಯಲು ಸಿದ್ಧ ಎಂದು ಹೇಳಿದ್ದರು.

    ನಿವೃತ್ತಿ ನಿರ್ಧಾರದಿಂದ ಹಿಂದಿರುಗಿದ ರಾಯುಡು, ವಿಜಯ್ ಹಜಾರೆ ಟ್ರೋಫಿಯಲ್ಲಿ 7 ಇನ್ನಿಂಗ್ಸ್ ಗಳಲ್ಲಿ 233 ರನ್ ಗಳಿಸಿದ್ದಾರೆ. ಹೈದರಾಬಾದ್ ಪರ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ರಾಯದು ಎರಡನೇ ಸ್ಥಾನದಲ್ಲಿದ್ದಾರೆ. ರಾಯುಡು ಭಾರತದ ಪರ 55 ಏಕದಿನ ಪಂದ್ಯಗಳನ್ನು ಆಡಿದ್ದು, 1,694 ರನ್ ಗಳಿಸಿದ್ದಾರೆ.

  • ನಿವೃತ್ತಿ ವಿಚಾರದಲ್ಲಿ ಯೂ ಟರ್ನ್ ಹೊಡೆದ ರಾಯುಡು- ಎಚ್‍ಡಿಎಗೆ ಪತ್ರ

    ನಿವೃತ್ತಿ ವಿಚಾರದಲ್ಲಿ ಯೂ ಟರ್ನ್ ಹೊಡೆದ ರಾಯುಡು- ಎಚ್‍ಡಿಎಗೆ ಪತ್ರ

    ಹೈದರಾಬಾದ್: 2019ರ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಪರ ಆಡಲು ಅವಕಾಶ ನೀಡಲಿಲ್ಲವೆಂದು ಬ್ಯಾಟ್ಸ್‌ಮನ್ ಅಂಬಟಿ ರಾಯುಡು ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ್ದರು. ಆದರೆ ಈಗ ನಿವೃತ್ತಿ ವಿಚಾರದಲ್ಲಿ ಯೂ ಟರ್ನ್ ಹೊಡೆದಿದ್ದಾರೆ.

    ಹೈದರಾಬಾದ್ ಕ್ರಿಕೆಟ್ ಮಂಡಳಿ (ಎಚ್‍ಡಿಎ)ಗೆ ಪತ್ರ ಬರೆದಿರುವ ಆಂಧ್ರ ಪ್ರದೇಶದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಅಂಬಟಿ ರಾಯುಡು, ಜೂನ್ ತಿಂಗಳಲ್ಲಿ ತುಂಬಾ ಭಾವನಾತ್ಮಕವಾಗಿ ನಿವೃತ್ತಿ ಘೋಷಿಸಿದ್ದೆ. ನಿವೃತ್ತಿ ನಿರ್ಧಾರವನ್ನು ಹಿಂದಕ್ಕೆ ಪಡೆಯುತ್ತೇನೆ ಹಾಗೂ ಎಲ್ಲ ಮಾದರಿಯ ಕ್ರಿಕೆಟ್ ಆಡಲು ನಾನು ಸಿದ್ಧರುವೆ ಎಂದು ಮನವಿ ಮಾಡಿಕೊಂಡಿದ್ದಾರೆ.

    ನನ್ನ ಕ್ರಿಕೆಟ್ ವೃತ್ತಿ ಜೀವನದ ಕಠಿಣ ಸಂದರ್ಭಗಳಲ್ಲಿ ಜೊತೆಗಿದ್ದ ಚೆನ್ನೈ ಸೂಪರ್ ಕಿಂಗ್ಸ್, ವಿವಿಎಸ್ ಲಕ್ಷ್ಮಣ್ ಹಾಗೂ ನೊಯಿಲ್ ಡೇವಿಡ್ ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ಅವರು ನನ್ನ ದುಡಿಕಿನ ನಿರ್ಧಾರವನ್ನು ತಿಳಿಸಿಕೊಟ್ಟಿದ್ದಾರೆ. ಮುಂಬರುವ ಆವೃತ್ತಿಯಲ್ಲಿ ಹೈದರಾಬಾದ್ ತಂಡದ ಪರ ಆಡುತ್ತಿದ್ದೇನೆ. ಸೆಪ್ಟೆಂಬರ್ 10ರಿಂದ ಹೈದರಾಬಾದ್ ತಂಡಕ್ಕೆ ಲಭ್ಯನಾಗಲಿದ್ದೇನೆ ಎಂದು ರಾಯುಡು ಹೇಳಿದ್ದಾರೆ.

    ಈ ಪತ್ರದ ಕುರಿತು ಪ್ರತಿಕ್ರಿಯೆ ನೀಡಿರುವ ಎಚ್‍ಡಿಎ ಮುಖ್ಯ ಆಯ್ಕೆದಾರ ನಿಯೋಲ್ ಡೇವಿಸ್ ಅವರು, ರಾಯುಡು ಇನ್ನೂ 5 ವರ್ಷ ಕ್ರಿಕೆಟ್ ಆಡುವ ಕ್ಷಮತೆ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.

    ಅಂಬಟಿ ರಾಯುಡು ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗುತ್ತಾರೆ ಎಂಬ ನಿರೀಕ್ಷೆಯಿತ್ತು. ಆದರೆ ಟೀಂ ಇಂಡಿಯಾ 15ರ ಬಳಗದಲ್ಲಿ ರಾಯುಡು ಬದಲಿಗೆ ವಿಜಯ್ ಶಂಕರ್ ಅವರಿಗೆ ಸ್ಥಾನ ನೀಡಲಾಗಿತ್ತು. ಶಿಖರ್ ಧವನ್ ಹಾಗೂ ವಿಜಯ್ ಶಂಕರ್ ಗಾಯಗೊಂಡಾಗಲೂ ರಾಯುಡು ಅವರಿಗೆ ಬಿಸಿಸಿಐ ಮಣೆ ಹಾಕಲಿಲ್ಲ.

    4ನೇ ಸ್ಥಾನಕ್ಕೆ ತ್ರಿ ಡೈಮೆನ್ಶನ್ ಪ್ಲೇಯರ್ ಅಗತ್ಯವಿತ್ತು. ಹೀಗಾಗಿ ಅಂಬಟಿ ರಾಯುಡು ಬದಲು ವಿಜಯ್ ಶಂಕರ್ ಗೆ ಸ್ಥಾನ ನೀಡಲಾಗಿತ್ತು ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ ಪ್ರಸಾದ್ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು. ಪ್ರಸಾದ್ ಅವರ ಹೇಳಿಕೆ ರಾಯುಡು ಅವರನ್ನು ಕೆರಳಿಸಿತ್ತು. ಹೀಗಾಗಿ ರಾಯುಡು `3ಡಿ ಗ್ಲಾಸ್ (ತ್ರಿ ಡೈಮೆನ್ಶನ್) ಖರೀದಿಸಿ ವಿಶ್ವಕಪ್ ಪಂದ್ಯ ನೋಡುವುದಾಗಿ ಟ್ವೀಟ್ ಮಾಡಿದ್ದರು.

    ಅಂಬಟಿ ರಾಯುಡು ಟ್ವೀಟ್ ಸಖತ್ ಟ್ರೋಲ್ ಆಗಿತ್ತು. ಟೂರ್ನಿ ನಡುವೆ ವಿಜಯ್ ಶಂಕರ್ ಗಾಯಗೊಂಡಾಗ ರಾಯುಡು ಬದಲು ಮಯಾಂಕ್ ಅಗರ್ವಾಲ್‍ಗೆ ಅವಕಾಶ ನೀಡಲಾಯಿತು. ಈ ವೇಳೆ ಮತ್ತೆ ರಾಯುಡು 3ಡಿ ಗ್ಲಾಸ್ ವಿಚಾರ ಟ್ರೋಲ್ ಆಯಿತು. ಇದೇ ವಿಚಾರವನ್ನು ಮುಂದಿಟ್ಟುಕೊಂಡು ಐಸ್‍ಲ್ಯಾಂಡ್ ಕ್ರಿಕೆಟ್ ಮಂಡಳಿ ಕೂಡ ಪರೋಕ್ಷವಾಗಿ ರಾಯುಡು ಕಾಲೆಳೆದು, ತಮ್ಮ ತಂಡಕ್ಕೆ ಸೇರಿಕೊಳ್ಳುವಂತೆ ವಿಶೇಷ ಆಫರ್ ನೀಡಿ ಕ್ರಿಕೆಟ್ ಅಭಿಮಾನಿಗಳ ಟೀಕೆಗೆ ಗುರಿಯಾಗಿತ್ತು.

  • ನಿವೃತ್ತಿ ನಿರ್ಧಾರದಿಂದ ಅಂಬಟಿ ರಾಯುಡು ಯೂ ಟರ್ನ್

    ನಿವೃತ್ತಿ ನಿರ್ಧಾರದಿಂದ ಅಂಬಟಿ ರಾಯುಡು ಯೂ ಟರ್ನ್

    ಹೈದರಾಬಾದ್: ದಿಢೀರ್ ಬೆಳವಣಿಗೆಯಲ್ಲಿ ಕೆಲ ತಿಂಗಳ ಹಿಂದೆಯಷ್ಟೇ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಣೆ ಮಾಡಿದ್ದ ಟೀಂ ಇಂಡಿಯಾ ಆಟಗಾರ ಅಂಬಟಿ ರಾಯುಡು, ತಮ್ಮ ನಿವೃತ್ತಿ ತೀರ್ಮಾನದಿಂದ ಹಿಂದೆ ಸರಿಯುವ ಸೂಚನೆಯನ್ನು ನೀಡಿದ್ದಾರೆ.

    ಚೆನ್ನೈನಲ್ಲಿ ನಡೆಯುತ್ತಿರುವ ಟಿಎನ್‍ಸಿಎ ಏಕದಿನ ಕ್ರಿಕೆಟ್ ಲೀಗ್ ಆಡುತ್ತಿರುವ ಅಂಬಟಿ ರಾಯುಡು ಮುಂದಿನ ವರ್ಷದ ಐಪಿಎಲ್ ಟೂರ್ನಿಯಲ್ಲಿ ಆಡುತ್ತೇನೆ ಎಂದು ಹೇಳಿದ್ದಾರೆ. ಅಲ್ಲದೇ ಇದೇ ವೇಳೆ ಮತ್ತೆ ವೈಟ್ ಬಾಲ್ ಕ್ರಿಕೆಟ್‍ಗೆ ಹಿಂದಿರುಗುವ ಅವಕಾಶ ಲಭಿಸಿದರೆ ಮತ್ತೆ ಟೀಂ ಇಂಡಿಯಾ ಪರ ಆಡುವುದಾಗಿ ಹೇಳಿದ್ದಾರೆ.

    ನನ್ನ ನಿವೃತ್ತಿಯ ನಿರ್ಧಾರವನ್ನು ನಾನು ಆವೇಶದಿಂದ ತೆಗೆದುಕೊಂಡಿಲ್ಲ. ಕಳೆದ 4 ವರ್ಷಗಳಲ್ಲಿ ವಿಶ್ವಕಪ್ ಟೂರ್ನಿ ಆಡಲು ತೀವ್ರವಾಗಿ ಶ್ರಮ ವಹಿಸಿದ್ದೆ. ಆದರೆ ಅದು ಸಾಧ್ಯವಾಗದ ಸಂದರ್ಭದಲ್ಲಿ ತೀವ್ರ ಯೋಚನೆ ಮಾಡಿ ತೀರ್ಮಾನ ಕೈಗೊಂಡಿದ್ದೆ ಎಂದಿದ್ದಾರೆ.

    ಕಳೆದ 2 ವರ್ಷಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಆಡುತ್ತಿರುವ ರಾಯುಡು, ಸಿಎಸ್‍ಕೆ ಪರ ಯಾವುದೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಕಳುಹಿಸಿದರು ಉತ್ತಮ ಪ್ರದೇರ್ಶನ ನೀಡಿ ತಂಡಕ್ಕೆ ಬಲ ತುಂಬಿದ್ದರು. ಆದರೆ ನಿವೃತ್ತಿ ಪರಿಣಾಮ ಮತ್ತೆ ಅವರು ಐಪಿಎಲ್ ಟೂರ್ನಿ ಆಡಲಿದ್ದಾರಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿತ್ತು. ಸದ್ಯ ತಾನು ಮುಂದಿನ ಟೂರ್ನಿಗೆ ಸಿದ್ಧತೆ ನಡೆಸುತ್ತಿದ್ದೇನೆ ಎಂದು ಹೇಳುವ ಮೂಲಕ ರಾಯುಡು ನಿವೃತ್ತಿಯಿಂದ ಯೂ ಟರ್ನ್ ಮಾಡುವ ಸೂಚನೆ ನೀಡಿದ್ದಾರೆ.

  • ಐಸ್‍ಲ್ಯಾಂಡ್ ಕ್ರಿಕೆಟಿನಿಂದ ಆಫರ್ ಬಂದ ಮರುದಿನ ರಾಯುಡು ನಿವೃತ್ತಿ

    ಐಸ್‍ಲ್ಯಾಂಡ್ ಕ್ರಿಕೆಟಿನಿಂದ ಆಫರ್ ಬಂದ ಮರುದಿನ ರಾಯುಡು ನಿವೃತ್ತಿ

    ನವದೆಹಲಿ: ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಪರ ಆಡಲು ಅವಕಾಶ ಪಡೆಯುವಲ್ಲಿ ವಿಫಲರಾದ ಅಂಬಟಿ ರಾಯುಡು ಅವರಿಗೆ ಐಸ್‍ಲ್ಯಾಂಡ್ ಕ್ರಿಕೆಟ್ ಆಫರ್ ನೀಡಿದೆ.

    ಆಂಧ್ರಪ್ರದೇಶದ ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ ಅಂಬಟಿ ರಾಯುಡು ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗುತ್ತಾರೆ ಎಂಬ ನಿರೀಕ್ಷೆಯಿತ್ತು. ಆದರೆ ಟೀಂ ಇಂಡಿಯಾ 15ರ ಬಳಗದಲ್ಲಿ ರಾಯುಡು ಬದಲಿಗೆ ವಿಜಯ್ ಶಂಕರ್ ಅವರಿಗೆ ಸ್ಥಾನ ನೀಡಲಾಗಿತ್ತು. ಶಿಖರ್ ಧವನ್ ಹಾಗೂ ವಿಜಯ್ ಶಂಕರ್ ಗಾಯಗೊಂಡಾಗಲೂ ರಾಯುಡು ಅವರಿಗೆ ಬಿಸಿಸಿಐ ಮಣೆ ಹಾಕಲಿಲ್ಲ. ಈ ಮಧ್ಯೆ ಐಸ್‍ಲ್ಯಾಂಡ್ ಕ್ರಿಕೆಟ್ ಮಂಡಳಿ ಅಂಬಟಿ ರಾಯುಡು ಅವರಿಗೆ ಭರ್ಜರಿ ಆಫರ್ ನೀಡಿದೆ.

    ವಿಶ್ವಕಪ್ ಟೂರ್ನಿಯಲ್ಲಿ ಬಿಸಿಸಿಐ ರಾಯುಡು ಅವರನ್ನು ಕಡೆಗಣಿಸಿದ್ದನ್ನು ಅವಕಾಶವಾಗಿ ಪಡೆದ ಐಸ್‍ಲ್ಯಾಂಡ್ ಆಫರ್ ನೀಡಿದೆ. ಈ ಕುರಿತು ಟ್ವೀಟ್ ಮಾಡಿ, ಕ್ರಿಕೆಟ್ ಅಭಿಮಾನಿಗಳ ಟೀಕೆಗೆ ಗುರಿಯಾಗಿದೆ. ಟ್ವೀಟ್ ಬೆನ್ನಲ್ಲೇ ರಾಯುಡು ಅಂತರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ್ದು ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.

    ಮಯಾಂಕ್ ಅಗರ್ವಾಲ್ 3 ವಿಕೆಟ್ ಹೊಂದಿದ್ದಾರೆ. ಹೀಗಾಗಿ ಅಂಬಟಿ ರಾಯುಡು ನೀವು 3ಡಿ ಗ್ಲಾಸ್ ಪಕ್ಕಕ್ಕೆ ಇರಿಸಿ. ಸಾಮಾನ್ಯ ಕನ್ನಡಕ ಬಳಸಿ ಈ ದಾಖಲೆಗಳನ್ನು ಓದಿ. ನಮ್ಮ ಜೊತೆ ಬಂದು ಕೈ ಜೋಡಿಸಿ. ನಾವು ನಿಮ್ಮನ್ನು ಇಷ್ಟಪಡುತ್ತೇವೆ ಎಂದು ಐಸ್‍ಲ್ಯಾಂಡ್ ಕ್ರಿಕೆಟ್ ಮಂಡಳಿ ಟ್ವೀಟ್ ಮಾಡಿದೆ. ಟ್ವೀಟ್ ಜೊತೆಗೆ ಐಸ್‍ಲ್ಯಾಂಡ್ ಪೌರತ್ವ ಪಡೆಯಲು ಯಾವ ದಾಖಲೆಗಳನ್ನು ನೀಡಬೇಕು ಎಂದು ಕೂಡ ತಿಳಿಸಲಾಗಿದೆ.

    4ನೇ ಸ್ಥಾನಕ್ಕೆ ತ್ರಿ ಡೈಮೆನ್ಶನ್ ಪ್ಲೇಯರ್ ಅಗತ್ಯವಿತ್ತು. ಹೀಗಾಗಿ ಅಂಬಟಿ ರಾಯುಡು ಬದಲು ವಿಜಯ್ ಶಂಕರ್ ಗೆ ಸ್ಥಾನ ನೀಡಲಾಗಿತ್ತು ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ ಪ್ರಸಾದ್ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು. ಪ್ರಸಾದ್ ಅವರ ಹೇಳಿಕೆ ರಾಯುಡು ಅವರನ್ನು ಕೆರಳಿಸಿತ್ತು. ಹೀಗಾಗಿ ರಾಯುಡು ‘3ಡಿ ಗ್ಲಾಸ್ (ತ್ರಿ ಡೈಮೆನ್ಶನ್) ಖರೀದಿಸಿ ವಿಶ್ವಕಪ್ ಪಂದ್ಯ ನೋಡುವುದಾಗಿ ಟ್ವೀಟ್ ಮಾಡಿದ್ದರು.

    ಅಂಬಾಟಿ ರಾಯುಡು ಟ್ವೀಟ್ ಸಖತ್ ಟ್ರೋಲ್ ಆಗಿತ್ತು. ಟೂರ್ನಿ ನಡುವೆ ವಿಜಯ್ ಶಂಕರ್ ಗಾಯಗೊಂಡಾಗ ರಾಯುಡು ಬದಲು ಮಯಾಂಕ್ ಅಗರ್ವಾಲ್‍ಗೆ ಅವಕಾಶ ನೀಡಲಾಯಿತು. ಈ ವೇಳೆ ಮತ್ತೆ ರಾಯುಡು 3ಡಿ ಗ್ಲಾಸ್ ವಿಚಾರ ಟ್ರೋಲ್ ಆಯಿತು. ಇದೇ ವಿಚಾರವನ್ನು ಮುಂದಿಟ್ಟುಕೊಂಡು ಐಸ್‍ಲ್ಯಾಂಡ್ ಕ್ರಿಕೆಟ್ ಮಂಡಳಿ ಕೂಡ ಪರೋಕ್ಷವಾಗಿ ರಾಯುಡು ಕಾಲೆಳೆದಿದೆ.

    ಐಸ್‍ಲ್ಯಾಂಡ್ ಕ್ರಿಕೆಟ್ ಮಂಡಳಿ ಜುಲೈ 2 ರಂದು ಟ್ವೀಟ್ ಮಾಡಿದ್ದು, ಇದಕ್ಕೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜುಲೈ 3 ಮಧ್ಯಾಹ್ನದ ವೇಳೆಗೆ 402 ರೀ ಟ್ವೀಟ್ ಆಗಿದ್ದು, 1,400ಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ.

    ಐಸ್‍ಲ್ಯಾಂಡ್ ಕ್ರಿಕೆಟ್ ಮಂಡಳಿ ಈ ರೀತಿ ಟ್ವೀಟ್ ಮಾಡಬಾರದಿತ್ತು ಎಂದು ನೆಟ್ಟಿಗರು ಹೇಳಿದ್ದಾರೆ. ಐಸ್‍ಲ್ಯಾಂಡ್ ಕ್ರಿಕೆಟ್ ಮಂಡಳಿ ವಿದೇಶಿ ಆಟಗಾರರ ಕಾಲೆಳೆದಿದ್ದು ಇದೇ ಮೊದಲೇನಲ್ಲ. ಈ ಹಿಂದೆ ಅಫ್ಘಾನಿಸ್ತಾನದ ಬೌಲರ್ ರಶೀದ್ ಖಾನ್ ಬಗ್ಗೆ ವ್ಯಂಗ್ಯವಾಡಿ, ಕ್ಷಮೆ ಕೇಳಿತ್ತು. ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ರಶೀದ್ ಖಾನ್ 110 ರನ್ ಬಿಟ್ಟುಕೊಟ್ಟಿದ್ದರು. ಈ ಕುರಿತು ಟ್ವಿಟ್ಟರ್ ನಲ್ಲಿ ವ್ಯಂಗ್ಯವಾಡಿದ್ದ ಐಸ್‍ಲ್ಯಾಂಡ್ ಕ್ರಿಕೆಟ್ ಮಂಡಳಿ, ರಶೀದ್ ಖಾನ್ ಅಫ್ಘಾನಿಸ್ತಾನದ ಪರವಾಗಿ ಮೊದಲ ಶತಕ ಬಾರಿಸಿದ್ದಾರೆ ಎಂಬ ವಿಚಾರ ಈಗ ತಾನೇ ತಿಳಿಯಿತು. 56 ಎಸೆತಗಳಲ್ಲಿ 110 ರನ್‍ಗಳು! ಬೌಲರ್ ಒಬ್ಬರು ಇಷ್ಟು ಸ್ಕೋರ್ ಮಾಡಿದ್ದು ಇದೇ ಮೊದಲು. ಒಳ್ಳೆಯ ಬ್ಯಾಟಿಂಗ್ ಮಾಡಿದ್ದೀರಾ ಎಂದು ಹೇಳಿತ್ತು.

    ಐಸ್‍ಲ್ಯಾಂಡ್  ಕ್ರಿಕೆಟ್ ಮಂಡಳಿ ಟ್ವೀಟ್‍ಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ದಿಗ್ಗಜ ಕ್ರಿಕೆಟಿಗರೂ ಕೂಡ ಅಸಮಾಧಾನ ಹೊರ ಹಾಕಿದ್ದರು. ಭಾರೀ ಟೀಕೆ ವ್ಯಕ್ತವಾಗಿದ್ದರಿಂದ ಐಸ್‍ಲೆಂಡ್ ಕ್ಷಮೆಯಾಚಿಸಿತ್ತು.

  • ವಿಶ್ವಕಪ್ ಟೂರ್ನಿಗೆ ಮಯಾಂಕ್ ಆಯ್ಕೆ – ‘3ಡಿ’ ಕನ್ನಡಕ ನೆನಪಿಸಿದ ನೆಟ್ಟಿಗರು

    ವಿಶ್ವಕಪ್ ಟೂರ್ನಿಗೆ ಮಯಾಂಕ್ ಆಯ್ಕೆ – ‘3ಡಿ’ ಕನ್ನಡಕ ನೆನಪಿಸಿದ ನೆಟ್ಟಿಗರು

    ಮುಂಬೈ: ಟೀಂ ಇಂಡಿಯಾ ಯುವ ಆಟಗಾರ ವಿಜಯ್ ಶಂಕರ್ ಗಾಯದ ಸಮಸ್ಯೆಯಿಂದ ತಂಡದಿಂದ ಹೊರ ಬಿದ್ದು, ಈ ಸ್ಥಾನದಲ್ಲಿ ಮಯಾಂಕ್ ಆಯ್ಕೆ ಆಗಿರುವುದು ತಿಳಿದ ಸಂಗತಿ. ಆದರೆ ತಂಡಕ್ಕೆ ಮಯಾಂಕ್ ಆಯ್ಕೆ ಆಗುತ್ತಿದಂತೆ ಕ್ರಿಕೆಟ್ ಅಭಿಮಾನಿಗಳು ಅಂಬಟಿ ರಾಯುಡುರನ್ನು ಟ್ರೋಲ್ ಮಾಡಲು ಆರಂಭಿಸಿದ್ದಾರೆ.

    ವಿಶ್ವಕಪ್ ಆಯ್ಕೆ ವೇಳೆ ವಿಜಯ್ ಶಂಕರ್‍ಗೆ ತಂಡದಲ್ಲಿ ಸ್ಥಾನ ನೀಡಿರುವುದನ್ನು ಸಮರ್ಥಿಸಿದ್ದ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್‍ಕೆ ಪ್ರಸಾದ್, ವಿಜಯ್ ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್‍ನಲ್ಲಿ ತಂಡಕ್ಕೆ ನೆರವಾಗಲಿದ್ದಾರೆ ಎಂದು ತಿಳಿಸಿದ್ದರು. ಈ ಕುರಿತು ವ್ಯಂಗ್ಯವಾಗಿ ಕಮೆಂಟ್ ಮಾಡಿದ್ದ ರಾಯುಡು, ಈ ಬಾರಿ ವಿಶ್ವಕಪ್ ಕ್ರಿಕೆಟ್ ನೋಡಲು 3ಡಿ ಕನ್ನಡಕ ಬುಕ್ ಮಾಡಿದ್ದಾಗಿ ಟ್ವೀಟ್ ಮಾಡಿದ್ದರು. ವಿಶ್ವಕಪ್ ಸ್ಥಾನ ಕಳೆದುಕೊಂಡ ಬೇಸರದಲ್ಲಿ ರಾಯುಡು ಈ ರೀತಿ ಮಾತನಾಡಿದ್ದಾರೆ ಎಂದು ಬಿಸಿಸಿಐನ ಕೆಲ ಹಿರಿಯ ಸದಸ್ಯರು ಪ್ರತಿಕ್ರಿಯೆ ನೀಡಿದ್ದರು.

    ಸದ್ಯ ಟೂರ್ನಿಯಿಂದ ವಿಜಯ್ ಶಂಕರ್ ಹೊರ ಬಿದ್ದ ಪರಿಣಾಮ ರಾಯುಡು ಅವರನ್ನು ಆಯ್ಕೆ ಮಾಡಬಹುದು ಎನ್ನುವ ಮಾತು ಕೇಳಿ ಬಂದಿತ್ತು. ಆದರೆ ಆಯ್ಕೆ ಸಮಿತಿ ಮಯಾಂಕ್‍ಗೆ ಕರೆ ನೀಡಿತ್ತು. ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸ್ತಾಪ ಮಾಡಿರುವ ಕೆಲ ಟ್ವಿಟ್ಟರಿಗರು ರಾಯುಡುರ ಕಾಲೆಳೆದಿದ್ದಾರೆ. ಆಯ್ಕೆ ಸಮಿತಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿಯೇ ಅಂಬಟಿ ರಾಯುಡು ಅವರಿಗೆ ಅವಕಾಶ ನೀಡಿಲ್ಲ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಮಯಾಂಕ್ ರೆಕಾರ್ಡ್: 28 ವರ್ಷದ ಮಯಾಂಕ್ ಅರ್ಗವಾಲ್ ಇದುವರೆಗೂ ಟೀಂ ಇಂಡಿಯಾ ಪರ ಏಕದಿನ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದಿಲ್ಲ. 6 ವರ್ಷಗಳ ಹಿಂದೆ ಕರ್ನಾಟಕ ಪರ ಫಸ್ಟ್ ಕ್ಲಾಸ್ ಕ್ರಿಕೆಟ್‍ಗೆ ಜಾರ್ಖಂಡ್ ವಿರುದ್ಧ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದ್ದ ಮಯಾಂಕ್ 144 ಎಸೆತಗಳಲ್ಲಿ 90 ರನ್ ಸಿಡಿಸಿದ್ದರು. ಇದುವರೆಗೂ ಫಸ್ಟ್ ಕ್ಲಾಸ್ ಕ್ರಿಕೆಟ್‍ನಲ್ಲಿ 50 ಪಂದ್ಯಗಳನ್ನಾಡಿರುವ ಇವರು 3,964 ರನ್ ಗಳಿಸಿದ್ದು, ಮಹಾರಾಷ್ಟ್ರ ವಿರುದ್ಧ ಅಜೇಯ 304 ರನ್ ಸಿಡಿಸಿದ್ದಾರೆ.

    https://twitter.com/WaizArd20/status/1145666167463268352

    ಐಪಿಎಲ್ ಟೂರ್ನಿಯಲ್ಲಿ ತಮ್ಮ ಪ್ರದರ್ಶನದ ಮೂಲಕ ಗಮನ ಸೆಳೆದಿರುವ ಮಯಾಂಕ್, ಡೆಲ್ಲಿ, ಪುಣೆ, ಬೆಂಗಳೂರು, ಪಂಜಾಬ್ ತಂಡಗಳ ಪರ ಆಗಿದ್ದಾರೆ. 2019ರ ಐಪಿಎಲ್ ನಲ್ಲಿ ಕಿಂಗ್ಸ್ ಇಲೆವೆನ್ ಪರ ಆಡಿದ್ದ ಮಯಾಂಕ್ 13 ಪಂದ್ಯಗಳಿಂದ 332 ರನ್ ಸಿಡಿಸಿದ್ದರು. ಆಸ್ಟ್ರೇಲಿಯಾ ವಿರುದ್ಧದ ಟೂರ್ನಿಯಲ್ಲಿ ಟೆಸ್ಟ್ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿರುವ ಮಯಾಂಕ್, ಮೆಲ್ಬೋರ್ನ್ ನಲ್ಲಿ ನಡೆದ ಪಂದ್ಯದಲ್ಲಿ 42 ಎಸೆತಗಳಲ್ಲಿ 76 ರನ್ ಸಿಡಿಸಿ ಮಿಂಚಿದ್ದರು. ಆ ಬಳಿಕ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ 77 ರನ್ ಗಳಿಸಿದ್ದರು. 2 ಟೆಸ್ಟ್ ಪಂದ್ಯಗಳ 3 ಇನ್ನಿಂಗ್ಸ್ ಗಳಲ್ಲಿ ಆಡಿರುವ ಮಯಾಂಕ್ 195 ರನ್ ಗಳಿಸಿದ್ದಾರೆ.

  • ವಿಶ್ವಕಪ್ 2019ರ ಬಾಗಿಲು ರಾಯುಡು, ಪಂತ್‍ಗೆ ತೆರೆಯುತ್ತಾ?

    ವಿಶ್ವಕಪ್ 2019ರ ಬಾಗಿಲು ರಾಯುಡು, ಪಂತ್‍ಗೆ ತೆರೆಯುತ್ತಾ?

    ಮುಂಬೈ: ಇಂಗ್ಲೆಂಡ್‍ನಲ್ಲಿ ನಡೆಯಲಿರುವ 2019 ವಿಶ್ವಕಪ್ ಟೂರ್ನಿಗೆ ಬಿಸಿಸಿಐ 15 ಆಟಗಾರರ ಪಟ್ಟಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಿರುವುದು ಎಲ್ಲರಿಗೂ ತಿಳಿದ ಸಂಗತಿ. ಆದರೆ ಈ ಹಂತದಲ್ಲಿ ಯುವ ಆಟಗಾರ ರಿಷಬ್ ಪಂತ್, ಅನುಭವಿ ಅಂಬಟಿ ರಾಯುಡುರನ್ನು ಕೈಬಿಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಆಯ್ಕೆ ಸಮಿತಿ ಸಾಕಷ್ಟು ಟೀಕೆ ಎದುರಿಸಿತ್ತು. ಇದರ ಬೆನ್ನಲ್ಲೇ ಸದ್ಯ ಸಮಿತಿ ಇಬ್ಬರು ಆಟಗಾರರಿಗೂ ಮತ್ತೊಂದು ಅವಕಾಶ ನೀಡಿದೆ ಎಂದು ಹೇಳಬಹುದು.

    ಹೌದು, ಬಿಸಿಸಿಐ ರಾಯುಡು ಹಾಗೂ ಪಂತ್ ರೊಂದಿಗೆ ನವದೀಪ್ ಸೈನಿರನ್ನು ಸ್ಟಾಂಡ್ ಬೈ ಪ್ಲೇಯರ್ ಗಳಾಗಿ ಆಯ್ಕೆ ಮಾಡಿ ಪ್ರಕಟಿಸಿದೆ.

    ಐಸಿಸಿ ಚಾಂಪಿಯನ್ ಟ್ರೋಫಿಯಲ್ಲಿ ಅನುಸರಿಸಿದ ನಿಯಮಗಳನ್ನೇ ಇಲ್ಲಿಯೂ ಬಿಸಿಸಿಐ ಮುಂದುವರಿಸಿದ್ದು, ರಾಯುಡು, ಪಂತ್, ಸೈನಿರನ್ನು ಸ್ಟಾಂಡ್ ಬೈ ಪ್ಲೆಯರ್ ಗಳಾಗಿ ಆಯ್ಕೆ ಮಾಡಿದ್ದಾಗಿ ತಿಳಿಸಿದೆ. ಅಲ್ಲದೇ ಸದ್ಯ ಪ್ರಕಟವಾಗಿರುವ 15 ತಂಡದ ಆಟಗಾರರಲ್ಲಿ ಯಾರದರು ಆಕಸ್ಮಾತ್ ಗಾಯಗೊಂಡರೆ ಈ ಆಟಗಾರರಿಗೆ ಮೊದಲ ಆದ್ಯತೆ ನೀಡುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನು ಓದಿ: ವಿಶ್ವಕಪ್ ವೀಕ್ಷಣೆಗೆ ಈಗಷ್ಟೇ 3ಡಿ ಕನ್ನಡಕ ಆರ್ಡರ್ ಮಾಡಿದ್ದೇನೆ: ರಾಯುಡು ವ್ಯಂಗ್ಯ

    ಉಳಿದಂತೆ ಟೀಂ ಇಂಡಿಯಾ ಆಟಗಾರರು ತರಬೇತಿ ಪಡೆಯುವ ವೇಳೆ ನೆಟ್ಸ್ ನಲ್ಲಿ ಬೌಲಿಂಗ್ ಮಾಡಲು ಖಲೀಲ್ ಅಹ್ಮದ್, ದೀಪಕ್ ಚಹರ್, ಆವೇಶ್ ಖಾನ್‍ರನ್ನು ನೇಮಕ ಮಾಡಿದೆ. ಟೀಂ ಇಂಡಿಯಾದೊಂದಿಗೆ ಈ ಮೂವರು ಆಟಗಾರರು ಇಂಗ್ಲೆಂಡ್‍ಗೆ ತೆರಳಿದ್ದಾರೆ. ಆದರೆ ಇವರು ಸ್ಟಾಂಡ್ ಬೈ ಪ್ಲೇಯರ್ ಗಳಲ್ಲ ಎಂದು ಬಿಸಿಸಿಐ ಉನ್ನತ ಅಧಿಕಾರಿ ಮಾಹಿತಿ ನೀಡಿದ್ದಾರೆ.

    ಇತ್ತ ಆಯ್ಕೆ ಸಮಿತಿ ಪ್ರಕಟಿಸಿ ತಂಡದಲ್ಲಿ ರಾಯುಡು ಹೆಸರು ಇಲ್ಲದಿರುವುದು ನನಗೆ ಅಚ್ಚರಿ ತಂದಿದೆ ಎಂದು ಟೀಂ ಇಂಡಿಯಾ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಹೇಳಿದ್ದರು. 4ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಅನುಭವ ಉಳ್ಳ ಆಟಗಾರರು ಇರುವುದು ಅಗತ್ಯ ಎಂದು ಅಭಿಪ್ರಾಯ ಪಟ್ಟಿದ್ದರು. ಅಲ್ಲದೇ ಗೌತಮ್ ಗಂಭೀರ್ ಕೂಡ ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು. ಇದನ್ನು ಓದಿ: ಅಂಬಟಿ ರಾಯುಡು ನೋವನ್ನು ನಾನು ಅನುಭವಿಸಿದ್ದೇನೆ: ಗಂಭೀರ್