Tag: ಅಂಫಾನ್

  • ಸೂಪರ್ ಸೈಕ್ಲೋನ್ ಅಂಫಾನ್ ಬಳಿಕ ಗುಲಾಬಿ ಬಣ್ಣದಲ್ಲಿ ಕಂಗೊಳಿಸಿದ ಆಕಾಶ!

    ಸೂಪರ್ ಸೈಕ್ಲೋನ್ ಅಂಫಾನ್ ಬಳಿಕ ಗುಲಾಬಿ ಬಣ್ಣದಲ್ಲಿ ಕಂಗೊಳಿಸಿದ ಆಕಾಶ!

    ನವದೆಹಲಿ: ತೀವ್ರ ಸ್ವರೂಪ ತಾಳಿದ್ದ ಅಂಫಾನ್ ಸೂಪರ್ ಸೈಕ್ಲೋನ್ ಪಶ್ಚಿಮ ಬಂಗಾಳ, ಒಡಿಶಾ ರಾಜ್ಯಗಳಲ್ಲಿ ವಿಧ್ವಾಂಸವನ್ನು ಸೃಷ್ಟಿಸಿದೆ. ಗಂಟೆಗೆ ಸುಮಾರು 190 ಕಿಮಿ ವೇಗವಾಗಿ ಅಪ್ಪಳಿಸಿದ ಸೈಕ್ಲೋನ್ ಮಳೆ, ಗಾಳಿಯೊಂದಿಗೆ ಭಾರೀ ನಷ್ಟವನ್ನೇ ಉಂಟು ಮಾಡಿದೆ. ಮನೆಗಳು, ವಿದ್ಯುತ್ ಕಂಬಗಳು, ದೂರಸಂಪರ್ಕ ಸ್ಥಾವರಗಳು ನೆಲಕ್ಕೆ ಉರುಳಿದ್ದು, ಇದುವರೆಗೂ 12 ಮಂದಿ ಸೈಕ್ಲೋನ್‍ನಿಂದ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಆದರೆ ಸೈಕ್ಲೋನ್ ಕುರಿತು ಅಲ್ಲಿನ ಸರ್ಕಾರಗಳು ಕೈಗೊಂಡಿದ್ದ ಮುನ್ನೆಚ್ಚರಿಕ ಕ್ರಮಗಳ ಕಾರಣದಿಂದ ಜೀವ ನಷ್ಟ ಕಡಿಮೆಯಾಗಿದ್ದರೂ, ಆಸ್ತಿ ನಷ್ಟ ಹೆಚ್ಚಾಗಿ ಸಂಭವಿಸಿದೆ.

    ಸೈಕ್ಲೋನ್‍ಗೆ ಸಿಲುಕಿದ್ದ ಒಡಿಶಾ ಸದ್ಯ ಚೇತರಿಸಿಕೊಳ್ಳುತ್ತಿದ್ದು, ಸದ್ಯದ ಪರಿಸ್ಥಿತಿಯ ಕುರಿತು ಸ್ಥಳೀಯರು ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಮಾಹಿತಿ ನೀಡಿದ್ದಾರೆ. ‘ಎಂತಹ ಕಷ್ಟದ ಸನ್ನಿವೇಶ ಎದುರಾದರೂ, ಅವುಗಳನ್ನು ಎದುರಿಸಿ ನನ್ನ ನಗರ ನಿಲ್ಲುತ್ತದೆ ಎಂಬುವುದು ಮತ್ತೊಮ್ಮೆ ಸಾಬೀತಾಗಿದೆ. ಚಂಡಮಾರುತ ಬಳಿಕ ಭುವನೇಶ್ವರ್ ನಗರ ಕಂಡಿದ್ದು ಹೀಗೆ ಎಂದು ಗುಲಾಬಿ ಬಣ್ಣದಿಂದ ಕಂಗೊಳಿಸುತ್ತಿದ್ದ ಅಗಸದ ಫೋಟೋಗಳನ್ನು ಸ್ಥಳೀಯರು ಶೇರ್ ಮಾಡಿದ್ದಾರೆ.

    ಬಂಗಾಳಕೊಲ್ಲಿಯಲ್ಲಿ ಎದಿದ್ದ ಅಂಫಾನ್ ಚಂಡಮಾರುತ ಭಾರೀ ಅನಾಹುತವನ್ನೇ ಸೃಷ್ಟಿಸಿದೆ. ಒಡಿಶಾ, ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾ ದೇಶಗಳಲ್ಲಿ ಸೈಕ್ಲೋನ್ ನಿಂದ ಬಿರುಗಾಳಿ ಸಹಿತ ಭಾರೀ ಮಳೆ ಆಗಿದೆ. ಸೈಕ್ಲೋನ್ ಕಾರಣದಿಂದ ಪಶ್ಚಿಮ ಬಂಗಾಳದಲ್ಲಿ ಸುಮಾರು 6.5 ಲಕ್ಷ ಹಾಗೂ ಒಡಿಶಾದಲ್ಲಿ ಸುಮಾರು 1.58 ಲಕ್ಷ ಜನರನು ಸ್ಥಳಾಂತರಿಸಲಾಗಿದೆ ಮೇ20 ರಂದು ಎನ್‍ಡಿಆರ್ ಎಫ್ ಮಾಹಿತಿ ನೀಡಿತ್ತು. ಇತ್ತ ಕೊರೊನಾಗಿಂತಲೂ ಸೈಕ್ಲೋನ್ ಪ್ರಭಾವ ರಾಜ್ಯದಲ್ಲಿ ಕೆಟ್ಟದಾಗಿದ್ದು, ಕೇಂದ್ರ ಸರ್ಕಾರ ಚಂಡಮಾರುತದಿಂದ ಉಂಟಾದ ಹಾನಿಗೆ ನೆರವು ನೀಡಬೇಕು ಎಂದು ಸಿಎಂ ಮಮತ ಬ್ಯಾನರ್ಜಿ ಮನವಿ ಮಾಡಿದ್ದಾರೆ. ಇಂದು ಬೆಳಗ್ಗೆ ಸೂಪರ್ ಸೈಕ್ಲೋನ್ ದುರ್ಬಲಗೊಂಡಿರುವುದಿಂದ ಎನ್‍ಡಿಆರ್ ಎಫ್ ಸಿಬ್ಬಂದಿ ರಸ್ತೆ ತೆರವು ಮತ್ತು ಜನ ಜೀವನದ ಪುನರ್ ಸ್ಥಾಪನೆ ಮಾಡುವ ಕಾರ್ಯವನ್ನು ಆರಂಭಿಸಿದ್ದಾರೆ.

    ಒಡಿಶಾದಲ್ಲಿ ಅಂಫಾನ್ ಪ್ರಭಾವ ಕಡಿಮೆಯಾಗಿದ್ದು ಜನಜೀವನ ಸಾಮಾನ್ಯ ಸ್ಥಿತಿಗೆ ಮರುಳುತ್ತಿದೆ. ಹಲವು ಪ್ರದೇಶಗಳಲ್ಲಿ ಅಂಗಡಿಗಳನ್ನು ತೆರೆಯಲಾಗಿದೆ. ಉಳಿದಂತೆ ದುರ್ಬಲಗೊಂಡಿರುವ ಸೈಕ್ಲೋನ್ ಗಂಟೆಗೆ 27 ಕಿಮೀ ವೇಗದಲ್ಲಿ ಉತ್ತರ-ಈಶಾನ್ಯ ಕಡೆಗೆ ಸಾಗುತ್ತಿದೆ. ಬಾಂಗ್ಲಾದೇಶದಲ್ಲಿ ಕೇಂದ್ರೀಕೃತವಾಗಿರುವ ಚಂಡಮಾರುತ ದುರ್ಬಲಗೊಂಡಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

  • ಭಾರೀ ಅನಾಹುತ ಸೃಷ್ಟಿಸಲಿದೆ ಸೂಪರ್ ಸೈಕ್ಲೋನ್ ‘ಅಂಫಾನ್’- ಹವಾಮಾನ ಇಲಾಖೆ ಎಚ್ಚರಿಕೆ

    ಭಾರೀ ಅನಾಹುತ ಸೃಷ್ಟಿಸಲಿದೆ ಸೂಪರ್ ಸೈಕ್ಲೋನ್ ‘ಅಂಫಾನ್’- ಹವಾಮಾನ ಇಲಾಖೆ ಎಚ್ಚರಿಕೆ

    -ಕೋಲ್ಕತ್ತಾ ಸೇರಿ 5 ರಾಜ್ಯಗಳಲ್ಲಿ ಕಟ್ಟೆಚ್ಚರ
    -50 ಲಕ್ಷ ಮಂದಿ ಸ್ಥಳಾಂತರ

    ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಎದ್ದಿರುವ ಸೂಪರ್ ಸೈಕ್ಲೋನ್ ಅಂಫಾನ್ ಭಾರೀ ಅನಾಹುತ ಸೃಷ್ಟಿಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

    ಸದ್ಯ ಪಶ್ಚಿಮ ಮತ್ತು ಮಧ್ಯ ಬಂಗಾಳ ಕೊಲ್ಲಿ ನಡುವೆ ಇರುವ ಅಂಫಾನ್ ಚಂಡಮಾರುತ ನಾಳೆ ಮಧ್ಯಾಹ್ನ ಪಶ್ಚಿಮ ಬಂಗಾಳದ ದಿಘಾ ಹಾಗೂ ಬಾಂಗ್ಲಾದೇಶದ ಹತಿಯಾ ದ್ವೀಪಗಳ ನಡುವೆ ತೀರ ದಾಟಲಿದೆ. 155 ಕಿಲೋಮೀಟರ್ ನಿಂದ 185 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಬೀಸುವ ಸಂಭವ ಇದೆ. ಯಾವುದಕ್ಕೂ ಎಚ್ಚರದಿಂದ ಇರಿ ಹವಾಮಾನ ಇಲಾಖೆ ಹೇಳಿದೆ.

    ದೊಡ್ಡ ದೊಡ್ಡ ಹಡಗುಗಳನ್ನು ಕೂಡ ನಾಶ ಮಾಡುವಷ್ಟು ಅಂಫಾನ್ ಶಕ್ತಿಶಾಲಿಯಾಗಿದೆ ಎಂದು ಹೇಳಲಾಗುತ್ತಿದೆ. 1999ರ ಬಳಿಕ ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಮೊದಲ ಸೂಪರ್ ಸೈಕ್ಲೋನ್ ಇದಾಗಿದೆ. ಈಗಾಗಲೇ 50 ಲಕ್ಷ ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ. ಇನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹಾಗೂ ಒಡಿಶಾ ಸಿಎಂ ನವೀನ್ ಪಟ್ನಾಯಕ್ ಜೊತೆ ಮಾತುಕತೆ ನಡೆಸಿದ್ದು, ಎಲ್ಲಾ ಅಗತ್ಯ ನೆರವು ನೀಡುವ ಭರವಸೆ ನೀಡಿದ್ದಾರೆ. ಮೇ 30ರವರೆಗೆ ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.

    ಇತ್ತ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಚಂಡಮಾರುತ ಎದುರಿಸಲು ಅಗತ್ಯವಿರುವ ಸಿದ್ಧತೆ ಕೈಗೊಳ್ಳಲು ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಅಲ್ಲದೇ ಎಲ್ಲಾ ರಾಜ್ಯ ಸರ್ಕಾರಗಳಿಗೆ ನೆರವು ನೀಡುವುದಾಗಿ ತಿಳಿಸಿದ್ದಾರೆ. ಈಗಾಗಲೇ 25 ಎನ್‍ಡಿಆರ್ ಎಫ್ ತಂಡ, 12 ಮೀಸಲು ಪಡೆ, ಭಾರತೀಯ ಕೋಸ್ಟ್ ಗಾರ್ಡ್ ಮತ್ತು ನೌಕಾಪಡೆಯ ಹಡಗು, ಹೆಲಿಕಾಪ್ಟರ್ ಗಳನ್ನು ನಿಯೋಜಿಸಲಾಗಿದೆ ಎಂಬ ಮಾಹಿತಿ ಲಭಿಸಿದೆ. ಕೆಲವೇ ಗಂಟೆಗಳಲ್ಲಿ ಭಾರತದ ಉಪಖಂಡಕ್ಕೂ ಅಪ್ಪಳಿಸಲಿದೆ. ಪೂರ್ಣ ಕರಾವಳಿ ಹಾಗೂ ಅಂಡಮಾನ್ ನಿಕೋಬಾರ್ ನಲ್ಲೂ ಸೈಕ್ಲೋನ್ ಪರಿಣಾಮ ಭಾರೀ ಮಳೆಯಾಗುವ ಸಾಧ್ಯತೆ ಇದೆ.

    ಪಶ್ಚಿಮ ಬಂಗಾಳ, ಒಡಿಶಾ ಕರಾವಳಿ ತೀರಗಳಿಗೆ ಸೈಕ್ಲೋನ್ ಅಪ್ಪಳಿಸುವ ನಿರೀಕ್ಷೆ ಇರುವುದರಿಂದ ಎನ್‌ಡಿಆರ್‌ಎಫ್ ಈಗಾಗಲೇ ಸಿದ್ಧವಾಗಿದೆ ಎಂದು ಎನ್‌ಡಿಆರ್‌ಎಫ್ ಪ್ರಧಾನ ನಿರ್ದೇಶಕ ಪ್ರಧಾನ್ ತಿಳಿಸಿದ್ದಾರೆ. 2 ರಾಜ್ಯಗಳಲ್ಲಿ ಎನ್‌ಡಿಆರ್‌ ಎಫ್‍ನ 40ಕ್ಕೂ ಹೆಚ್ಚು ತಂಡಗಳನ್ನು ನಿಯೋಜಿಸಲಾಗಿದ್ದು, ಈಗಾಗಲೇ ತೀರ ಪ್ರದೇಶದಲ್ಲಿರುವ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡುವ ಕಾರ್ಯದಲ್ಲಿದೆ. ಜನರಿಗೆ ಚಂಡಮಾರುತದ ತೀವ್ರತೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಸೈಕ್ಲೋನ್ ತೀವ್ರತೆಗೆ ಬೆಳೆದು ನಿಂತಿರುವ ಬೆಳೆ, ವಿದ್ಯುತ್ ಕಂಬಗಳು, ದೂರ ಸಂಪರ್ಕ ಸ್ಥಾವರಗಳು, ಮರಗಳು ಧರೆಗುರುಳುವ ಸಂಭವವಿದೆ. ರಸ್ತೆ ಮತ್ತು ರೈಲು ಮಾರ್ಗಗಳಿಗೂ ಹನಿಯಾಗುವ ಸಾಧ್ಯತೆ ಇದ್ದು, ಪರಿಣಾಮ ರೈಲು ಹಾಗೂ ಸಾರಿಗೆ ಸೇವೆ ರದ್ದು ಮಾಡುವಂತೆ ಎನ್‍ಡಿಆರ್ ಎಫ್ ಸಲಹೆ ನೀಡಿದೆ. ಇತ್ತ ಕರ್ನಾಟಕದ ಮೇಲೆ ಚಂಡಮಾರುತದ ಪ್ರಭಾವ ಕಡಿಮೆ ಇದ್ದರೂ ಹಲವು ಭಾಗಗಳಲ್ಲಿ ಮಳೆಯಾಗುವ ಸಂಭಾವವಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

     

    #WATCH: Rainfall and strong winds hit Digha in West Bengal. #CycloneAmphan is expected to make landfall tomorrow. pic.twitter.com/sglWtx4MbJ