Tag: ಅಂಪೈರಿಂಗ್

  • ನೃತ್ಯದ ಮೂಲಕವೇ ಅಂಪೈರಿಂಗ್- ಕ್ರಿಕೆಟ್ ಪ್ರೇಮಿಗಳ ಮನ ಗೆದ್ದ ಅಂಪೈರ್

    ನೃತ್ಯದ ಮೂಲಕವೇ ಅಂಪೈರಿಂಗ್- ಕ್ರಿಕೆಟ್ ಪ್ರೇಮಿಗಳ ಮನ ಗೆದ್ದ ಅಂಪೈರ್

    ಹುಬ್ಬಳ್ಳಿ: ನ್ಯೂಜಿಲೆಂಡ್ ಅಂಪೈರ್ ಬಿಲಿ ಬೌಡೆನ್ ವಿಭಿನ್ನ ರೀತಿಯಲ್ಲಿ ಅಂಪೈರಿಂಗ್ ಮಾಡುವ ಮೂಲಕ ಗಮನಸೆಳೆಸಿದ್ದರು. ಈ ಮೂಲಕ ಬಿಲಿ ಬೌಡೆನ್ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿರುವ ಕ್ರಿಕೆಟ್ ಅಂಪೈರ್ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಅವರದ್ದೇ ಸ್ಟೈಲ್‍ನಲ್ಲಿ ಅಂಪೈರಿಂಗ್ ಮಾಡುವ ಮೂಲಕ ಅಂಪೈರ್ ಒಬ್ಬರು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕ್ರಿಕೆಟ್ ಪ್ರೇಮಿಗಳಿಗೆ ಮನರಂಜನೆ ನೀಡಿದ್ದಾರೆ.

    ನಗರದ ನೆಹರೂ ಕ್ರೀಡಾಂಗಣದಲ್ಲಿ ಬಂಟ್ಸ್ ಸಂಘದ ವತಿಯಿಂದ ನಡೆದ ಹೊನಲು ಬೆಳಕಿನ ಅಸ್ತ್ರ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಮದನ್ ಮಡಿಕೇರಿ ಅಂಪೈರ್ ತಮ್ಮ ಅಂಪೈರಿಂಗ್ ಮೂಲಕ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದರು. ಈ ಟೂರ್ನಿಯಲ್ಲಿ ಮದನ್ ಮಡಿಕೇರಿ ಅವರು ನೃತ್ಯದ ಶೈಲಿಯಲ್ಲಿ ಅಂಪೈಯರಿಂಗ್ ಮಾಡಿದ್ದಾರೆ. ಬ್ಯಾಟ್ಸ್‌ಮನ್‌ಗಳು ಬೌಂಡರಿ ಹಾಗೂ ಸಿಕ್ಸರ್ ಸಿಡಿಸಿದಾಗ ಮದನ್ ವಿಶಿಷ್ಟ ಶೈಲಿಯಲ್ಲಿ ನೃತ್ಯ ಮಾಡಿ ತೀರ್ಪು ನೀಡಿ, ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡರು.

    ಮದನ್ ಮಡಕೇರಿ ಅವರ ವಿಶಿಷ್ಟ ಅಂಪೈಯರಿಂಗ್‍ಗೆ ಮಾರು ಹೋದ ಕ್ರಿಕೆಟ್ ಆಯೋಜಕರು ಪ್ರತಿ ಟೂರ್ನಾಮೆಂಟ್‍ಗೂ ಅವರನ್ನೇ ಆಹ್ವಾನಿಸುತ್ತಿದ್ದಾರಂತೆ. ಮೂಲತ ಕೊಡಗು ಜಿಲ್ಲೆಯವರಾಗಿರುವ ಮದನ್ ಅವರು ಸದ್ಯ ವಾಣಿಜ್ಯ ನಗರಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಹೆಚ್ಚು ಬೇಡಿಕೆ ಇರುವ ಅಂಪೈರ್ ಆಗಿದ್ದಾರೆ ಎಂದು ಟೂರ್ನಿ ಆಯೋಜಕರು ತಿಳಿಸಿದ್ದಾರೆ.