Tag: ಅಂಧ ವ್ಯಕ್ತಿ

  • ಅಂಧ ವ್ಯಕ್ತಿ ಮಗಳ ಕನಸ್ಸನ್ನು ಕೇಳಿ ಮೋದಿ ಭಾವುಕ – ವೀಡಿಯೋ ವೈರಲ್

    ಅಂಧ ವ್ಯಕ್ತಿ ಮಗಳ ಕನಸ್ಸನ್ನು ಕೇಳಿ ಮೋದಿ ಭಾವುಕ – ವೀಡಿಯೋ ವೈರಲ್

    ಗಾಂಧೀನಗರ: ಅಂಧ ವ್ಯಕ್ತಿಯೊಬ್ಬರ ಸಮಸ್ಯೆಯನ್ನು ಕೇಳಿ ಪ್ರಧಾನಿ ನರೇಂದ್ರ ಮೋದಿ ಅವರು ಭಾವುಕರಾಗಿದ್ದಾರೆ.

    ಗುಜರಾತ್‍ನ ಭರೂಚ್‍ನಲ್ಲಿ ಸರ್ಕಾರಿ ಯೋಜನೆಗಳ ಕುರಿತಂತೆ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆದ ಕಾರ್ಯಕ್ರಮವೊಂದರಲ್ಲಿ ಯಾಕೂಬ್ ಪಟೇಲ್ ತಮ್ಮ ಸಮಸ್ಯೆಯನ್ನು ಹೇಳಿಕೊಂಡು ತಮ್ಮ ಮಗಳು ವೈದ್ಯೆಯಾಗಬೇಕೆಂಬ ಕನಸ್ಸು ಹೊಂದಿದ್ದಾಳೆ ಎಂದು ಹೇಳಿದ್ದಾರೆ. ಈ ಮಾತನ್ನು ಕೇಳಿ ಮೋದಿ ಅವರು ಭಾವೋದ್ವೇಗಕ್ಕೆ ಒಳಗಾಗಿದ್ದಾರೆ. ಜೊತೆಗೆ ಅವರ ಮಗಳ ಕನಸ್ಸನ್ನು ನನಸು ಮಾಡಲು ಮೋದಿ ಮುಂದಾಗಿದ್ದು, ನಿಮ್ಮ ಹೆಣ್ಣು ಮಗಳ ಕನಸನ್ನು ನನಸಾಗಿಸಲು ಏನಾದರೂ ಸಹಾಯ ಬೇಕಿದ್ದರೆ ತಿಳಿಸಿ ಎಂದಿದ್ದಾರೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ನಾಲ್ಕು ನಿಮಿಷವಿರುವ ವೀಡಿಯೋದಲ್ಲಿ, ದೃಷ್ಟಿಹೀನ ಸಮಸ್ಯೆಯಿಂದ ಬಳಲುತ್ತಿರುವ ಯಾಕೂಬ್ ಪಟೇಲ್ ಅವರು, ನನಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಅವರಲ್ಲಿ ನನ್ನ ಹಿರಿಯ ಮಗಳು ವೈದ್ಯೆಯಾಗಬೇಕೆಂಬ ಆಸೆಯನ್ನು ಹೊಂದಿದ್ದಾಳೆ ಎನ್ನುತ್ತಾರೆ. ಈ ವೇಳೆ ವೈದ್ಯೆಯಾಗಲು ಪ್ರೇರಣೆ ಏನು ಎಂದು ಮೋದಿ ಅವರು ಕೇಳಿದಾಗ, ಹುಡುಗಿ ಭಾವುಕಳಾಗಿ, ತನ್ನ ತಂದೆಯ ಅನಾರೋಗ್ಯ ಸಮಸ್ಯೆಗಳಿಂದ ವೈದ್ಯೆಯಾಗಬೇಕೆಂದು ನಿರ್ಧರಿಸಿದೆ ಎಂದಿದ್ದಾರೆ. ಹುಡುಗಿಯ ಮಾತನ್ನು ಕೇಳಿ ಒಂದು ಕ್ಷಣ ಮೂಕರಾದ ಮೋದಿ ಅವರು, ಆಕೆಯ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  ಇದನ್ನೂ ಓದಿ:  ನನಗೆ ಅವಕಾಶ ಕೊಟ್ಟಿದ್ದು, ಬೆನ್ನಲುಬಾಗಿ ನಿಂತಿದ್ದು ರಾಹುಲ್‍ಗಾಂಧಿ: ರಮ್ಯಾ ಟ್ವೀಟ್

    ಇದೇ ವೇಳೆ ಈದ್ ಹಬ್ಬವನ್ನು ಹೇಗೆ ಆಚರಿಸಿದ್ರಿ ಎಂದು ಕೇಳುತ್ತಾ, ನಿಮ್ಮ ಮಗಳ ವೈದ್ಯಕೀಯ ಶಿಕ್ಷಣಕ್ಕೆ ಏನಾದರೂ ಸಹಾಯದ ಅಗತ್ಯವಿದ್ದರೆ ತಿಳಿಸಿ. ನೀವು ನಿಮ್ಮ ಮಗಳ ಕನಸನ್ನು ನನಸಾಗಿಸಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ:  ಯಾವಾಗ ಸಿಎಂ ಸ್ಥಾನಕ್ಕೆ ಕೂರ್ತೀವಿ ಎಂದು ಕನಸು ಕಾಣ್ತಿದ್ದಾರೆ: ಡಿಕೆಶಿಗೆ ಟಾಂಗ್ ಕೊಟ್ಟ ಬಿ.ವೈ.ವಿಜಯೇಂದ್ರ

  • ಕಣ್ಣು ಹೋದ್ರೂ ಛಲ ಬಿಡದ ಛಲದಂಕ – ಬ್ರೈಲ್ ಲಿಪಿ ಬಳಸದೆ ಪಿಎಚ್‍ಡಿ ಪಡೆದ ವಿಶೇಷ ಚೇತನ

    ಕಣ್ಣು ಹೋದ್ರೂ ಛಲ ಬಿಡದ ಛಲದಂಕ – ಬ್ರೈಲ್ ಲಿಪಿ ಬಳಸದೆ ಪಿಎಚ್‍ಡಿ ಪಡೆದ ವಿಶೇಷ ಚೇತನ

    ಚಾಮರಾಜನಗರ: ಸಾಧಿಸುವ ಛಲವೊಂದಿದ್ದರೆ ಅಂಗವೈಕಲ್ಯವಾಗಲಿ, ಅಂಧತ್ವವಾಗಲಿ ಸಾಧನೆಗೆ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಚಾಮರಾಜನಗರ ಜಿಲ್ಲೆಯ ಅಂಧ ವಿದ್ಯಾರ್ಥಿಯೊಬ್ಬರು ಸಾಕ್ಷಿಯಾಗಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದ ಎಚ್.ಎನ್ ಮನು ಕುಮಾರ್ ಕಣ್ಣು ಕಾಣದಿದ್ದರೂ ಬ್ರೈಲ್ ಲಿಪಿ(ಅಂಧರ ಲಿಪಿ) ಬಳಸದೆ ಸ್ಕ್ರೈಬ್ ಗಳನ್ನು ಬಳಸಿಕೊಂಡು ಮಹಾಪ್ರಬಂಧವೊಂದನ್ನು ಮಂಡಿಸಿದ್ದಾರೆ. ಈ ಮೂಲಕ ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪಡೆಯುವ ಮೂಲಕ ವಿಶಿಷ್ಟ ಸಾಧನೆಗೈದಿದ್ದಾರೆ.

    ಚಾಮರಾಜನಗರ ಜಿಲ್ಲೆ ಬಂಡೀಪುರ ಕಾಡಂಚಿನ ಹಂಗಳ ಗ್ರಾಮದ ನಾಗಪ್ಪ, ಪಾರ್ವತಿ ದಂಪತಿಗೆ ಎಚ್.ಎನ್ ಮನು ಕುಮಾರ್ ಏಕೈಕ ಪುತ್ರ. ಇವರಿಗೆ ಹುಟ್ಟಿನಿಂದಲೇ ಎರಡೂ ಕಣ್ಣು ಕಾಣುವುದಿಲ್ಲ. ಆದರೂ ಹಂಗಳ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ, ಚಾಮರಾಜನಗರದ ಕ್ರಿಸ್ತರಾಜ ಬಾಲರಪಟ್ಟಣ ಶಾಲೆಯಲ್ಲಿ ಪ್ರೌಢ ಶಿಕ್ಷಣ, ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ, ಸೇವಾ ಭಾರತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಪಡೆದು ಜೆ.ಎಸ್.ಎಸ್ ಹಾಗೂ ಸರ್ಕಾರಿ ಪದವಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

    2016ರಲ್ಲಿ ಕೆಸೆಟ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಇದೀಗ ಮೈಸೂರು ವಿಶ್ವವಿದ್ಯಾನಿಲಯದಿಂದ ಪಿಎಚ್‍ಡಿ ಪಡೆಯುವ ಮೂಲಕ ಸಾಧನೆಗೈದಿದ್ದಾರೆ. ರಾಜ್ಯಶಾಸ್ತ್ರ ವಿಷಯದಲ್ಲಿ ಚಾಮರಾಜನಗರ ಜಿಲ್ಲೆಯ ದಿವ್ಯಾಂಗ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯಲ್ಲಿ ಸರ್ಕಾರ ಮತ್ತು ಸರ್ಕಾರೇತರ ಸಂಸ್ಧೆಗಳ ಪಾತ್ರ ಎಂಬ ಮಹಾಪ್ರಬಂಧವನ್ನು ಮೈಸೂರು ವಿವಿ ಸಂಜೆ ಕಾಲೇಜಿನ ರಾಜ್ಯಶಾಸ್ತ್ರ ಸಹ ಪ್ರಾಧ್ಯಾಪಕ ಡಾ.ಆರ್.ಎನ್ ದಿನೇಶ್ ಅವರ ಮಾರ್ಗದರ್ಶನದಲ್ಲಿ ಮೂರೂವರೆ ವರ್ಷಗಳ ಅವಧಿಯಲ್ಲಿ 105 ಶಾಲೆಯ 354ಕ್ಕೂ ಹೆಚ್ಚು ಮಕ್ಕಳನ್ನು ಖುದ್ದಾಗಿ ಸಂದರ್ಶಿಸಿ ಸಂಶೋಧನಾ ಪ್ರಬಂಧ ಮಂಡಿಸಿ, ಪಿಎಚ್‍ಡಿ ಪಡೆದು ಸಾಧನೆ ಮಾಡಿದ್ದಾರೆ.

    ಟೇಪ್ ರೆಕಾರ್ಡರ್ ಹಾಗೂ ಮೊಬೈಲ್ ಸಹಾಯದ ಮೂಲಕ ಧ್ವನಿ ಮುದ್ರಿಸಿಕೊಂಡು, ಆಡಿಯೋ ಪುಸ್ತಕಗಳನ್ನು ಕೇಳಿ ಸಾಮಾನ್ಯ ಶಾಲೆಯಲ್ಲೇ ಕಲಿತು ರಾಜ್ಯಶಾಸ್ತ್ರ ಸ್ನಾತಕೋತ್ತರ ಪದವಿಯಲ್ಲಿ ಮೈಸೂರು ವಿವಿಯಿಂದ ಎರಡು ಚಿನ್ನದ ಪದಕ, ಮೂರು ನಗದು ಬಹುಮಾನ ಪಡೆದಿರುವ ಮನು ಕುಮಾರ್ ಬ್ರೈಲ್ ಲಿಪಿಯನ್ನು ಬಳಸದೇ ಸ್ಕ್ರೈಬ್ ಗಳ ಮೂಲಕವೇ ಎಲ್ಲಾ ಪರೀಕ್ಷೆಗಳನ್ನು ಎದುರಿಸಿದ್ದಾರೆ.

    ಮನುಕುಮಾರ್ ತಂದೆ ನಾಗಪ್ಪ ಅವರು ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲಿ ಅಸಿಸ್ಟೆಂಟ್ ರಿಸರ್ವ್ ಸಬ್ ಇನ್ಸ್ ಪೆಕ್ಟರ್ ಆಗಿದ್ದಾರೆ. ಕೆಲಸದ ಒತ್ತಡದಿಂದಾಗಿ ಮಗನನ್ನು 7ನೇ ತರಗತಿ ಓದುತ್ತಿದ್ದಾಗಲೇ ಶಾಲೆ ಬಿಡಿಸಲು ತೀರ್ಮಾನಿಸಿದ್ದೆ. ಆದರೆ ಓದಲೇಬೇಕೆಂದು ಹಠ ಹಿಡಿದು ಇಂದು ಈ ಸಾಧನೆ ಮಾಡಿದ್ದಾನೆ ತುಂಬಾ ಖುಷಿಯಾಗುತ್ತಿದೆ ಎಂದು ಅವರು ತಮ್ಮ ಸಂತಸ ಹಂಚಿಕೊಂಡಿದ್ದಾರೆ.

    ಮನಸ್ಸಿದ್ದರೆ ಮಾರ್ಗ, ಎಲ್ಲ ಸಮಸ್ಯೆಗಳಿಗೂ ಶಿಕ್ಷಣವೇ ಪರಿಹಾರ ಎನ್ನುವ ಮನು ಕುಮಾರ್, ಪಿ.ಎಚ್.ಡಿ ಮಾಡುವ ಗುರಿ ಇತ್ತು. ಇದೀಗ ಈ ಗುರಿ ಈಡೇರಿದೆ. ನನ್ನ ಸಂಶೋಧನಾ ಅಧ್ಯಯನದಲ್ಲಿ ಪ್ರಸ್ತಾಪಿಸಿರುವ ಅಂಶಗಳನ್ನು ಸರ್ಕಾರ ಪರಿಗಣಿಸಿ ವಿಕಲಚೇತನರಿಗೆ ವಿಶೇಷ ಶಾಲೆಗಳನ್ನು ತೆರೆಯಲು ಕ್ರಮ ಕೈಗೊಳ್ಳಬೇಕು ಎಂಬ ಆಶಯ ವ್ಯಕ್ತಪಡಿಸಿದ್ದಾರೆ.

  • ಅಂಧನಾದ್ರೂ ಕಾಯಕ ಮರೆತಿಲ್ಲ-ಪತಿಯ ಕೆಲಸಕ್ಕೆ ಸಾಥ್ ನೀಡ್ತಿರೋ ಪತ್ನಿಗೆ ಬೇಕಿದೆ ಹೊಲಿಗೆ ಯಂತ್ರ

    ಅಂಧನಾದ್ರೂ ಕಾಯಕ ಮರೆತಿಲ್ಲ-ಪತಿಯ ಕೆಲಸಕ್ಕೆ ಸಾಥ್ ನೀಡ್ತಿರೋ ಪತ್ನಿಗೆ ಬೇಕಿದೆ ಹೊಲಿಗೆ ಯಂತ್ರ

    ಧಾರವಾಡ: ಅಂಧನಾದರೂ ಮನೆಯಲ್ಲಿ ಪತ್ನಿ ಹಾಗೂ ಮಗುವಿಗೆ ಸಾಕಲು ಸಾಕಷ್ಟು ಪರದಾಟ ನಡೆಸಿದವರು. ಕಣ್ಣಿದ್ರೆ ಏನಾದರೂ ಮಾಡಿ ಹೊಟ್ಟೆ ತುಂಬಿಸಿಕೊಳ್ಳಬಹುದಿತ್ತು ಎಂದು ಚಿಂತೆ ಕಾಡುತ್ತಿದೆ. ಸದ್ಯ ಆ ಸಮಸ್ಯೆ ಇತ್ಯರ್ಥ ಮಾಡಿಕೊಳ್ಳಲು ಆ ವ್ಯಕ್ತಿ ಪಬ್ಲಿಕ್ ಟಿವಿ ಮೊರೆ ಬಂದಿದ್ದಾರೆ.

    35 ವರ್ಷದ ಶಿವಪ್ಪ ಆನಿ 11ನೇ ವಯಸ್ಸಿನಲ್ಲಿ ಎಮ್ಮೆ ಮೇಯಿಸಲು ಹೋಗಿ ಬಿರು ಬಿಸಿಲಿನ ಹೊಡೆತಕ್ಕೆ ಕಣ್ಣು ಕಳೆದುಕೊಂಡ ದುರ್ದೈವಿ. ಶಿವಪ್ಪ ಮೂಲತಃ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ನೆಲ್ಲಹರವಿ ಗರುಡಹೊನ್ನಳ್ಳಿ ಗ್ರಾಮದ ನಿವಾಸಿ. ಸದ್ಯ ಮಾಡುವ ಕೆಲಸವನ್ನು ಕಳೆದುಕೊಂಡ ಶಿವಪ್ಪ ದಿಕ್ಕು ತೋಚದಂತಾಗಿದೆ. ಆದ್ರೆ ಪತ್ನಿ ಟೈಲರಿಂಗ್ ಕೆಲಸ ಮಾಡುತ್ತಾ ಕುಟುಂಬಕ್ಕೆ ಆಧಾರವಾಗಿದ್ದಾರೆ.

    ಮನೆಯವರು ಪುಟ್ಟರಾಜು ಗವಾಯಿಗಳ ಸಂಗೀತ ಶಾಲೆಗೆ ಕಳುಹಿಸಿದ್ದರು. ಆದರೆ ಸಂಗೀತದ ವಿದ್ಯೆ ಇವರಿಗೆ ತಲೆಗೆ ಹತ್ತಲಿಲ್ಲ. ಧೃತಿಗೆಡದ ಶಿವಪ್ಪ ಆನಿ ಕುರ್ಚಿಗೆ ವಾಯರ್ ಹೆಣೆಯುವ ಕೆಲಸ ಕಲಿತು ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಚಾಲಕರ ಸೀಟ್ ಹೆಣೆಯುತ್ತ ಜೀವನ ಸಾಗಿಸುತ್ತಿದ್ದರು. 5 ವರ್ಷದ ಹಿಂದೆ ಮನೆಯವರು ಸೇರಿ ವಿವಾಹವನ್ನು ಮಾಡಿದ್ರು ಜೀವನವೂ ಸುಖಕರವಾಗಿತ್ತು.

    ಸಾರಿಗೆ ಸಂಸ್ಥೆಯ ಚಾಲಕರಿಗೆ ವಾಯರ್ ರಹಿತ ಸೀಟು ತಯಾರಾಗಿದ್ದು, ವಾಯರ್ ಹೆಣೆಯುವ ಕಾಯಕಕ್ಕೆ ಕತ್ತರಿ ಬಿದ್ದಿದೆ. ಈ ಕಷ್ಟದ ಪರಿಸ್ಥಿತಿಯಲ್ಲಿ ಶಿವಪ್ಪರ ಪತ್ನಿ ಗಂಗವ್ವ ಬಟ್ಟೆ ಹೊಲಿಗೆ ಕೆಲಸ ಕಲಿತ್ತಿದ್ದು ಅನ್ಯರಿಂದ ಹೊಲಿಗೆ ಯಂತ್ರವನ್ನು ಪಡೆದು ಅಷ್ಟಿಷ್ಟು ಮನೆಗೆ ಬರುವ ಬಟ್ಟೆಗಳನ್ನ ಹೊಲೆದು ಜೀವನ ನಡೆಸುತ್ತಿದ್ದಾರೆ.

    ಪತ್ನಿಯ ಪರಿಶ್ರಮವನ್ನು ಕಂಡು ಶಿವಪ್ಪ ಪತ್ನಿಯ ಕೆಲಸಕ್ಕೆ, ಮಗುವಿನ ವಿದ್ಯಾಭ್ಯಾಸ ಹಾಗೂ ಕುಟುಂಬಕ್ಕೆ ಆಧಾರಸ್ತಂಭವಾಗಿ ನಿಲ್ಲಬೇಕೆಂದು ಸ್ವಾಭಿಮಾನದಿಂದ ಬದುಕುವ ಛಲ ತೊಟ್ಟಿದ್ದಾರೆ. ಸ್ವಂತ ಹೊಲಿಗೆ ಯಂತ್ರ ಇದ್ರೆ ಬಟ್ಟೆ ಹೊಲೆದು ಜೀವನ ನಡೆಸಲು ಅನುಕೂಲವಾಗುತ್ತೆ. ಯಾರಾದ್ರೂ ದಾನಿಗಳು ಟೈಲರಿಂಗ್ ಮಿಷಿನ್ ದಾನ ಮಾಡಿದ್ರೆ ನೆಮ್ಮದಿ ಜೀವನ ಕಟ್ಟಿಕೊಳ್ಳಲು ಸಹಕಾರಿಯಾಗುತ್ತೆ ಎಂದು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಮೂಲಕ ಕೇಳಿಕೊಳ್ಳುತ್ತಿದ್ದಾರೆ.

    https://www.youtube.com/watch?v=H3jwMMgjcMY