Tag: ಅಂಧ್ರ ಪ್ರದೇಶ

  • ಮೈದಾನದಲ್ಲಿ ಹಾವು – ರಣಜಿ ಕ್ರಿಕೆಟ್ ಪಂದ್ಯ ವಿಳಂಬ

    ಮೈದಾನದಲ್ಲಿ ಹಾವು – ರಣಜಿ ಕ್ರಿಕೆಟ್ ಪಂದ್ಯ ವಿಳಂಬ

    ಹೈದರಾಬಾದ್: ಅಂಧ್ರ ಪ್ರದೇಶದ ವಿಜಯವಾಡದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿಯ ಮೊದಲ ದಿನದ ಅಂಧ್ರ ಪ್ರದೇಶದ ಮತ್ತು ವಿದರ್ಭ ನಡುವಿನ ಪಂದ್ಯದಲ್ಲಿ ಮೈದಾನಕ್ಕೆ ಹಾವು ಬಂದ ಕಾರಣ ಆಟಕ್ಕೆ ವಿಳಂಬವಾಗಿದೆ.

    ಇಂದು ಅಂಧ್ರಪ್ರದೇಶ ಮತ್ತು ವಿದರ್ಭ ತಂಡದ ನಡುವೆ ನಡೆಯುತ್ತಿರುವ ರಣಜಿ ಟ್ರೋಫಿ ಮೊದಲ ದಿನದ ಪಂದ್ಯದ ವೇಳೆ ಹಾವೊಂದು ಕ್ರಿಕೆಟ್ ಮೈದಾನಕ್ಕೆ ಬಂದಿದೆ. ಹಾವು ಕ್ರಿಕೆಟ್ ಮೈದಾನದಲ್ಲಿ ಹರಿದಾಡುತ್ತಿರುವ ವಿಡಿಯೋವನ್ನು ಬಿಸಿಸಿಐ ಟ್ವೀಟ್ ಮಾಡಿದ್ದು, ಈ ವಿಡಿಯೋದಲ್ಲಿ ಹಾವು ಹರಿಯುತ್ತಿರುವುದನ್ನು ಆಟಗಾರರು ದಿಗ್ಭ್ರಮೆಯಿಂದ ನೋಡುತ್ತಿರುವುದನ್ನು ನಾವು ಕಾಣಬಹುದು.

    ರಣಜಿ ಟ್ರೋಫಿ ವೇಳೆ ಮೈದಾನಕ್ಕೆ ಹಾವು ನುಗ್ಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ 2015 ರಲ್ಲಿ ಸಾಲ್ಟ್ ಲೇಕ್‍ನ ಜೆಯೂ ಕ್ಯಾಂಪಸ್‍ನಲ್ಲಿ ನಡೆಯುತ್ತಿದ್ದ ಬಂಗಾಳ ಮತ್ತು ವಿದರ್ಭ ನಡುವಿನ ಪಂದ್ಯದಲ್ಲೂ ಹಾವೊಂದು ಮೈದಾನಕ್ಕೆ ಬಂದು ಪಂದ್ಯಕ್ಕೆ ಅಡ್ಡಿ ಮಾಡಿತ್ತು. ಈಗ ಮತ್ತೆ ಇದೇ ರೀತಿ ಹಾವೊಂದು ಬಂದಿದ್ದು ಈ ವಿಡಿಯೋವನ್ನು ಟ್ವೀಟ್ ಮಾಡಿರುವ ಬಿಸಿಸಿಐ ಹಾವು ಪಂದ್ಯವನ್ನು ನಿಲ್ಲಿಸಿದೆ. ಪಂದ್ಯ ಆರಂಭವಾಗುವುದನ್ನು ವಿಳಂಬ ಮಾಡಲು ಮೈದಾನಕ್ಕೆ ಅತಿಥಿಯೊಬ್ಬರು ಬಂದಿದ್ದರು ಎಂದು ಬರೆದುಕೊಂಡಿದೆ.

    2015ರ ನಂತರ ಮತ್ತೆ ಇದೇ ವಿದರ್ಭ ತಂಡ ಆಡುವ ಪಂದ್ಯದಲ್ಲಿ ಹಾವು ಕಾಣಿಸಿಕೊಂಡಿದ್ದು, ಹಾವನ್ನು ಅಲ್ಲಿನ ಸಿಬ್ಬಂದಿ ಹಿಡಿದು ತೆಗೆದುಕೊಂಡು ಹೋಗಿದ್ದಾರೆ. ನಂತರ ಪಂದ್ಯ ಆರಂಭವಾಗಿದ್ದು, ಟಾಸ್ ಗೆದ್ದ ವಿದರ್ಭ ನಾಯಕ ಫೈಜ್ ಫೈಜಾಲ್ ಆಂಧ್ರ ಪ್ರದೇಶದ ವಿರುದ್ಧ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಇತ್ತ ಅಂಧ್ರಪ್ರದೇಶ ತಂಡವನ್ನು ಹನುಮಾ ವಿಹಾರಿ ಮುನ್ನಡೆಸುತ್ತಿದ್ದಾರೆ.

    ಈ ಪಂದ್ಯದಲ್ಲಿ ಮೊದಲ ಬ್ಯಾಟ್ ಮಾಡಿದ ಅಂಧ್ರ ಆರಂಭಿಕ ಕುಸಿತ ಕಂಡಿದ್ದು, ಊಟದ ಸಮಯಕ್ಕೆ ಆರಂಭಿಕ ಮೂರು ವಿಕೆಟ್‍ಗಳನ್ನು ಕಳೆದುಕೊಂಡು 87 ರನ್ ಸಿಡಿಸಿ ಸಂಕಷ್ಟಕ್ಕೆ ಸಿಲುಕಿದೆ. ಆದರೆ ನಾಯಕ ಹನುಮ ವಿವಾರಿ ತಾಳ್ಮೆಯ ಆಟವಾಡುತ್ತಿದ್ದು, 89 ಎಸೆತದಲ್ಲಿ 6 ಬೌಂಡರಿಯೊಂದಿಗೆ 43 ರನ್ ಸಿಡಿಸಿ ಆಡುತ್ತಿದ್ದಾರೆ.