Tag: ಅಂಧತ್ವ

  • ದೃಷ್ಟಿ ಸಮಸ್ಯೆಯಿದ್ದರೂ ದೇಶಕ್ಕಾಗಿ ಕ್ರಿಕೆಟ್‌ ಆಡುವ ಯುವತಿಗೆ ಬೇಕಿದೆ ಸಹಾಯ

    ದೃಷ್ಟಿ ಸಮಸ್ಯೆಯಿದ್ದರೂ ದೇಶಕ್ಕಾಗಿ ಕ್ರಿಕೆಟ್‌ ಆಡುವ ಯುವತಿಗೆ ಬೇಕಿದೆ ಸಹಾಯ

    ಬೆಂಗಳೂರು: ಸಾಧಿಸುವ ಛಲ ಇದ್ದರೆ ಯಾವ ಸಮಸ್ಯೆಯೂ ಅಡ್ಡಿಯಾಗುವುದಿಲ್ಲ. ತಮ್ಮ ಸಮಸ್ಯೆಯನ್ನೂ ಮೆಟ್ಟಿ ನಿಂತು ಸಾಧನೆ ಮಾಡುವ ಹಲವರು ನಮ್ಮ‌ಮುಂದೆ ಇದ್ದಾರೆ. ಈ ರೀತಿಯ ಸಾಧಕರ ಸಾಲಿಗೆ ರಾಜ್ಯ ಯುವತಿ ಸೇರ್ಪಡೆಯಾಗಿದ್ದಾರೆ. ಅಂಧತ್ವ (Blind) ಇದ್ದರೂ ದೇಶಕ್ಕಾಗಿ ಏನಾದರೂ ಸಾಧಿಸಬೇಕು ಎಂದು ಕ್ರಿಕೆಟ್ ಆಡಲು ಶುರು ಮಾಡಿದವರು ಇಂದು ಟೀಂ ಇಂಡಿಯಾದ ಮಹಿಳಾ ಅಂಧರ ತಂಡದ (India’s Blind Women’s Cricket Team) ನಾಯಕಿಯಾಗಿದ್ದಾರೆ.

    ಚಿತ್ರದುರ್ಗ ಜಿಲ್ಲೆ ಹಿರಿಯೂರು ಬಳಿಯ ಹಾದಿಹೊಲ ಗ್ರಾಮದ ವರ್ಷಾ (Varsha) ಅವರಿಗೆ 10ನೇ ತರಗತಿವರೆಗೆ ತನ್ನ ಕೆಲಸ ಮಾಡಿಕೊಳ್ಳುವಷ್ಟು ಕಣ್ಣಿನ ದೃಷ್ಟಿಯಿತ್ತು‌.‌ ಆಗ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದ ವರ್ಷ ಕ್ರೀಡೆಯಲ್ಲೇ ಮುಂದುವರೆಯುವ ಮನಸ್ಸು ಮಾಡಿದ್ದರು. ಆದರೆ ಎಸ್‌ಎಸ್‌ಎಲ್‌ಸಿ (SSLC) ನಂತರ ಸಂಪೂರ್ಣ ದೃಷ್ಟಿ ಕಳೆದುಕೊಂಡರು.

     

    ನಂತರ ಬ್ರೈಲ್ ಕಲಿಕೆಗಾಗಿ ಬೆಂಗಳೂರಿಗೆ ಬಂದು ಸದ್ಯ ಪದವಿ‌ ಮುಗಿಸಿರುವ ವರ್ಷ ಕ್ರಿಕೆಟ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ‌. ಅಂಧರ ಕ್ರಿಕೆಟ್‌ನಲ್ಲಿ ಕರ್ನಾಟಕದ (Karnataka) ನಾಯಕಿಯಾಗಿದ್ದ ವರ್ಷಾ 2023ರಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆದು ನಾಯಕಿಯಾಗಿ ಈಗಾಗಲೇ ಎರಡು ಸಿರೀಸ್ ಆಡಿದ್ದಾರೆ. IBSA ವರ್ಲ್ಡ್ ಕಪ್ ಫೈನಲ್ ನಲ್ಲಿ‌ ಆಸ್ಟ್ರೇಲಿಯಾವನ್ನ ಸೋಲಿಸಿ ಚಿನ್ನದ ಪದಕ ಗೆದ್ದಿದ್ದಾರೆ.

    ಭಾಗಶಃ ಕುರುಡು, ರೆಟಿನಾ ಸಮಸ್ಯೆ ಇರುವುದರಿಂದ ದೃಷ್ಟಿ ಸಂಪೂರ್ಣ ಕಡಿಮೆಯಾಗಿದೆ. ಕ್ರೀಡೆಯಲ್ಲಿ ಆಸಕ್ತಿ ಇದ್ದರೂ ದೃಷ್ಟಿ ದೋಷದಿಂದ ಆಡಲು ಸಾಧ್ಯವಾಗಲಿಲ್ಲ. ಸ್ನೇಹಿತೆಯ ಮೂಲಕ ಅಂಧರ ಕ್ರಿಕೆಟ್ ಬಗ್ಗೆ ಗೊತ್ತಾಯಿತು. ಸಂಪೂರ್ಣ ಧ್ವನಿ ಕೇಳಿಸಿಕೊಂಡೆ ಬಾಲ್ ಹಿಟ್ ಮಾಡುವುದನ್ನು ಕಲಿತೆ ಎನ್ನುತ್ತಾರೆ ವರ್ಷಾ.  ಇದನ್ನೂ ಓದಿ: 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಪಾಕ್‌ನಲ್ಲಿ ನಡೆಯುವುದು ಅನುಮಾನ

    2019 ರಿಂದ ಕ್ರಿಕೆಟ್ ಆಡುವುದನ್ನು ಅಭ್ಯಾಸ ಮಾಡಿಕೊಂಡ ಇವರಿಗೆ ಕರ್ನಾಟಕ ತಂಡದಲ್ಲಿ ಅವಕಾಶ ಸಿಕ್ಕಿ ನಾಯಕಿಯೂ ಆದರು. ಸತತ ಮೂರ್ನಾಲ್ಕು ವರ್ಷಗಳ ಪರಿಶ್ರಮದಿಂದ ಟೀಮ್ ಇಂಡಿಯಾಗೆ ಆಯ್ಕೆ ಆಗುತ್ತಾರೆ. ಆಯ್ಕೆಯಾದ ಕೆಲ ದಿನಗಳಲ್ಲೇ ತಂಡದ ನಾಯಕಿಯಾಗಿ ಆಯ್ಕೆಯಾಗಿ ಒಂದು ಶತಕ ಸಹ ಸಿಡಿಸಿದ್ದಾರೆ. ಅಷ್ಟೇ ಅಲ್ಲದೇ ಕೇವಲ 13 ಎಸೆತಗಳಲ್ಲಿ 50 ರನ್ ಚಚ್ಚಿ ತಾನು ಅತ್ಯುತ್ತಮ ಆಟಗಾರ್ತಿ ಎಂಬುದನ್ನೂ ನಿರೂಪಿಸಿದ್ದಾರೆ.

    ಕ್ರಿಕೆಟ್‌ (Cricket) ಆಡುವಾಗ ವರ್ಷ ಹೆಲ್ಮೆಟ್ ಬಳಸುತ್ತಿರಲಿಲ್ಲ.‌ ಇದರಿಂದ ಕಳೆದ ಪಂದ್ಯದಲ್ಲಿ ತಲೆಗೆ ಪೆಟ್ಟು ಮಾಡಿಕೊಂಡಿದ್ದರು. ಮುಂದಿನ ತಿಂಗಳು ಡಿಸೆಂಬರ್‌ನಲ್ಲಿ ಮುಂಬೈನಲ್ಲಿ ನೇಪಾಳ ವಿರುದ್ಧ ಕ್ರಿಕೆಟ್ ಸೀರಿಸ್ ಇದೆ. ಆ ಸೀರಿಸ್ ನಲ್ಲಿ ಹೆಲ್ಮೆಟ್ ಧರಿಸಿ ಆಡಬೇಕು ಎಂದು‌ ನಿರ್ಧಾರ ಮಾಡಿದ್ದಾರೆ. ಹೆಲ್ಮೆಟ್ ಜೊತೆಗೆ ಪ್ರೈವೆಟ್‌ ಕಿಟ್ ಸೌಲಭ್ಯ ಸಿಕ್ಕರೆ ಮತ್ತಷ್ಟು ಪರಿಶ್ರಮದೊಂದಿಗೆ ಟೀಮ್‌ ಇಂಡಿಯಾ ಗೆಲ್ಲಿಸಲು ಸಹಾಯ ಆಗುತ್ತದೆ ಎನ್ನುತ್ತಿದ್ದಾರೆ ವರ್ಷಾ. ಜೊತೆಗೆ ಅವರ ತಾಯಿ ಯಶೋಧಾ ಸಹ ಈ ಕ್ರೀಡಾಪಟುಗಳಿಗೆ ಸರ್ಕಾರ ಸಹಾಯ ಮಾಡಬೇಕು ಎಂದು‌ ಮನವಿ‌ ಮಾಡಿದ್ದಾರೆ. ಇದನ್ನೂ ಓದಿ: ಮುಂಬೈಗೆ ಮರಳಿರುವುದು ಖುಷಿಯಾಗಿದೆ: ಹಾರ್ದಿಕ್ ಪಾಂಡ್ಯ

    ಎಲ್ಲವೂ ಸರಿ ಇದ್ದರೂ ಹಿಂದಡಿ ಇಡುವವರ ನಡುವೆ ವರ್ಷಾ ದೇಶಕ್ಕಾಗಿ‌ ನಾನು ಆಡುತ್ತೇನೆ ಎನ್ನುತ್ತಿದ್ದಾರೆ. ತಮಗೆ‌ ಕ್ರಿಕೆಟ್ ಕಿಟ್ ಸಿಕ್ಕರೆ ಮತ್ತಷ್ಟು ಅಭ್ಯಾಸ ಮಾಡುವ ಹುಮ್ಮಸ್ಸಿನಲ್ಲಿದ್ದಾರೆ ವರ್ಷಾ.

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಅಂಧತ್ವದ ಶಾಪದಲ್ಲಿದ್ದ ಕುಟುಂಬಕ್ಕೆ ಮಿಡಿದ ಸರ್ಕಾರ

    ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಅಂಧತ್ವದ ಶಾಪದಲ್ಲಿದ್ದ ಕುಟುಂಬಕ್ಕೆ ಮಿಡಿದ ಸರ್ಕಾರ

    ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ಹೆಡಗಿನಾಳ ಗ್ರಾಮದ ಅಂಧ ಕುಟುಂಬದ ಕರುಣಾಜನಕ ಸ್ಥಿತಿಗೆ ಕೊನೆಗೂ ಸರ್ಕಾರ ಮಿಡಿದಿದೆ. 18 ವರ್ಷ ತಲುಪುತ್ತಿದ್ದಂತೆ ಅಂಧತ್ವಕ್ಕೆ ಜಾರುವ ಸುರೇಶ್, ಬಸ್ಸಮ್ಮ ದಂಪತಿ ಕುಟುಂಬ ಸದಸ್ಯರ ಕುರಿತು ಪಬ್ಲಿಕ್ ಟಿವಿ ವರದಿಯನ್ನು ಪ್ರಸಾರ ಮಾಡಿತ್ತು. ಈಗ ವರದಿಯಿಂದ ಎಚ್ಚೆತ್ತಿರುವ ಸರ್ಕಾರ ಕುಟುಂಬಸ್ಥರ ಸಹಾಯಕ್ಕೆ ಮುಂದಾಗಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಕ್ಯಾಪ್ಟನ್. ಮಣಿವಣ್ಣನ್ ಸಹಾಯಕ್ಕೆ ಮುಂದಾಗಿದ್ದಾರೆ.

    ರಾಯಚೂರಿನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ರವಿರಾಜ್ ಎಚ್.ಜಿ ಗ್ರಾಮಕ್ಕೆ ಭೇಟಿ ನೀಡಿ ವಸ್ತು ಸ್ಥಿತಿಯ ವರದಿ ಸಲ್ಲಿಸಿದ್ದಾರೆ. ವರದಿ ಪಡೆದಿರುವ ಕ್ಯಾ.ಮಣಿವಣ್ಣನ್ ಕುಟುಂಬಕ್ಕೆ ಆಶ್ರಯ ಮನೆ ಒದಗಿಸಿಕೊಡುವಂತೆ ರಾಯಚೂರು ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ ಅವರಿಗೆ ನಿರ್ದೇಶನ ನೀಡಲಾಗುವುದು. ಈ ಕುಟುಂಬದ ಯಾವುದೇ ಸದಸ್ಯರು ನೌಕರಿ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದಲ್ಲಿ ಅದನ್ನು ಪರಿಗಣಿಸಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 18 ವರ್ಷವಷ್ಟೇ ಈ ಕುಟುಂಬಸ್ಥರ ಕಣ್ಣಿನ ದೃಷ್ಟಿ ಆಯುಷ್ಯ

    ಈಗಾಗಲೇ ದೃಷ್ಟಿ ಕಳೆದುಕೊಂಡಿರುವ ಕುಟುಂಬದ ಮಗಳು ಜ್ಯೋತಿ ಹಾಗೂ ದೃಷ್ಟಿ ಕಳೆದುಕೊಳ್ಳುತ್ತಿರುವ 14 ವರ್ಷದ ನವೀನ್‍ಗೆ ದೃಷ್ಟಿ ಮರುಕಳಿಸುವ ನಿಟ್ಟಿನಲ್ಲಿ ಚಿಕಿತ್ಸೆ ನೀಡಲು ಬೆಂಗಳೂರಿನ ಶಂಕರ ಕಣ್ಣಿನ ಆಸ್ಪತ್ರೆ ಒಪ್ಪಿಕೊಂಡಿದೆ. ಹೀಗಾಗಿ ಅವರನ್ನು ರಾಯಚೂರಿನಿಂದ ಕರೆದೊಯ್ಯಲು ಹಟ್ಟಿ ಚಿನ್ನದ ಗಣಿ ಕಂಪನಿಗೆ ವಾಹನದ ವ್ಯವಸ್ಥೆ ಕಲ್ಪಿಸಿಕೊಡುವಂತೆ ಸೂಚಿಸಲಾಗಿದೆ. ಮುಖ್ಯವಾಗಿ ಕುಟುಂಬಕ್ಕೆ ಒದಗಿಸಿಕೂಡಬೇಕಾದ ಸೌಲಭ್ಯಗಳ ಬಗ್ಗೆ ಗಮನಹರಿಸಿ ವರದಿ ನೀಡಲು ನೋಡೆಲ್ ಅಧಿಕಾರಿ ಒಬ್ಬರನ್ನೂ ನಿಯೋಜಿಸಲಾಗುವುದು ಎಂದು ಕ್ಯಾ.ಮಣಿವಣ್ಣನ್ ಮಾಹಿತಿ ನೀಡಿದ್ದಾರೆ.

    ಕುಟುಂಬಕ್ಕೆ ಆರ್ಥಿಕ ನೆರವು ನೀಡ ಬಯಸುವವರು ಕುಟುಂಬದ ಸದಸ್ಯ ನವೀನ್ ಕುಮಾರ ಬ್ಯಾಂಕ್ ಖಾತೆಗೆ ಸಹಾಯ ಮಾಡಬಹುದಾಗಿದೆ. ಬ್ಯಾಂಕ್ ಖಾತೆ ವಿವರ ಇಂತಿದೆ: ನವೀನ್ ಕುಮಾರ. ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್, ಖಾತೆ ಸಂಖ್ಯೆ: 10964101048247, ಐಎಫ್‌ಎಸ್‌ಸಿ: PKGB0010964 ಕಳುಹಿಸಿಕೊಡಬಹುದಾಗಿದೆ ಎಂದು ನೋಡೆಲ್ ಅಧಿಕಾರಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ರವಿರಾಜ್ ಹೆಚ್.ಜಿ ತಿಳಿಸಿದ್ದಾರೆ.

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಂಧ ಜೋಡಿ

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಂಧ ಜೋಡಿ

    ರಾಮನಗರ: ಹುಟ್ಟಿನಿಂದ ಅಂಧತ್ವದಲ್ಲೇ ಬದುಕುತ್ತಿದ್ದ ಅಂಧರಿಬ್ಬರು ಜಿಲ್ಲೆಯ ಮಾಗಡಿ ತಾಲೂಕಿನಲ್ಲಿ ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

    ತಾಲೂಕಿನ ರಂಗನಾಥಸ್ವಾಮಿ ದೇವಾಲಯದಲ್ಲಿ ನಾಗರತ್ನ ಹಾಗೂ ಭೀಮಣ್ಣ ಎಂಬ ಅಂಧರಿಬ್ಬರು ಮದುವೆಯಾಗಿದ್ದಾರೆ. ದ್ವಿತೀಯ ಪಿಯುಸಿವರೆಗೆ ವ್ಯಾಸಾಂಗ ಮಾಡಿರುವ ಇಬ್ಬರೂ ಎರಡೂ ಕುಟುಂಬಗಳ ಪರಸ್ಪರ ಒಪ್ಪಿಗೆ ಮೂಲಕ ವಿವಾಹವಾಗಿದ್ದಾರೆ.

    ಮುನ್ನೇನಹಳ್ಳಿ ಗ್ರಾಮದ ಗೋವಿಂದಾಚಾರ್ ರವರ ಪುತ್ರಿ ನಾಗರತ್ನ ಹಾಗೂ ಮೈಸೂರಿನ ಬಿ.ಜಿ ಪುರದ ನಿವಾಸಿ ಭೀರೇಗೌಡರ ಪುತ್ರ ಭೀಮಣ್ಣನಿಗೂ ಇಂದು ವಿವಾಹ ನೆರವೇರಿದೆ. ಎರಡೂ ಕುಟುಂಬದ ಹಿರಿಯರೂ ಹಾಗೂ ಸ್ನೇಹಿತರು ವಿವಾಹ ಕಾರ್ಯಕ್ರಮದಲ್ಲಿ ಹಾಜರಿದ್ದರು.

    ಅಂಧತ್ವವಿದ್ದರೂ ತಾವು ಮಾದರಿಯಾಗಿ ಬದುಕುವ ವಿಶ್ವಾಸವಿದೆ ಎಂದು ನವ ವಧು-ವರ ಹೇಳಿದ್ರು.

  • ಅಂಧತ್ವಕ್ಕೆ ಸವಾಲು- ಕೋರ್ಟ್ ಮೆಟ್ಟಿಲೇರಿ ಬಿ.ಎಡ್ ಕಲಿತ ಛಲಗಾರ

    ಅಂಧತ್ವಕ್ಕೆ ಸವಾಲು- ಕೋರ್ಟ್ ಮೆಟ್ಟಿಲೇರಿ ಬಿ.ಎಡ್ ಕಲಿತ ಛಲಗಾರ

    ಬಳ್ಳಾರಿ: ಸಕಲ ಅಂಗಗಳು ಸರಿಯಾಗಿದ್ದರೂ ಕೆಲವರು ಸೋಮಾರಿಗಳಾಗಿರುತ್ತಾರೆ. ಆದರೆ ಹುಟ್ಟು ಅಂಧರಾದವರು ಸ್ವಾವಲಂಬಿ, ಅದರಲ್ಲೂ ಸವಾಲೆನಿಸುವ ಶಿಕ್ಷಕ ಕೆಲಸವನ್ನು ಮಾಡುತ್ತಿದ್ದಾರೆ.

    ಬ್ರೈಲ್ ಲಿಪಿ ಸಹಾಯದದಿಂದ ಮಕ್ಕಳಿಗೆ ಈರಪ್ಪ ಪಾಠ ಮಾಡುತ್ತಾರೆ. ಇವರು ಮೂಲತ: ಹುಬ್ಬಳ್ಳಿ ಬಳಿಯ ಸುಳ್ಯ ಗ್ರಾಮದವರು. ಇದೀಗ ಬಳ್ಳಾರಿ ಜಿಲ್ಲೆಯ ಕಂಪ್ಲಿ ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕಳೆದೊಂದು ವರ್ಷದಿಂದ ಶಿಕ್ಷಕರಾಗಿದ್ದಾರೆ. ಹುಟ್ಟು ಅಂಧರಾದ ಈರಪ್ಪನವರು ಸ್ವಾವಲಂಬಿ ಜೀವನ ಸಾಗಿಸುತ್ತಿದ್ದಾರೆ.

    ಅಂಧರಾದರೂ ಬಿಎ, ಎಂಎ ಸ್ನಾತಕೋತ್ತರ ಪದವಿ ಪಡೆದಿರುವ ಈರಪ್ಪನವರು ಈ ಹಿಂದೆ ಬಿಎಡ್ ವಿದ್ಯಾಭ್ಯಾಸ ಮಾಡಲು ಮುಂದಾದಾಗ ಅವರಿಗೆ ಅವಕಾಶ ದೊರೆತಿರಲಿಲ್ಲ. ಆಗ ಬೆಂಗಳೂರಿನ ಅಂಧರ ಒಕ್ಕೂಟದ ಮೂಲಕ ಹೈಕೋರ್ಟ್ ಮೇಟ್ಟಿಲೇರಿ ನಂತರ ಸುಪ್ರೀಂಕೋರ್ಟ್‍ನಿಂದ ಅನುಮತಿ ಪಡೆದು ಬಿ.ಎಡ್ ಮುಗಿಸಿದ್ದಾರೆ.

    ಮಕ್ಕಳಿಗೆ ಬ್ರೈಲ್ ಹಾಗೂ ಸ್ಮಾರ್ಟ್ ಮೊಬೈಲ್ ಮೂಲಕವೂ ಪಾಠ ಕಲಿಸುತ್ತಿದ್ದಾರೆ. ಇನ್ನೂ ವಿಶೇಷ ಏನೆಂದರೆ ಮಕ್ಕಳನ್ನು ಲೀಡರ್‍ಗಳನ್ನಾಗಿ ಮಾಡಿ ಅವರಿಂದಲೇ ಬೋರ್ಡ್‍ಗಳ ಮೇಲೆ ಅಕ್ಷರಗಳನ್ನು ಬರೆಯಿಸಿ ಪಾಠ ಮಾಡುತ್ತಿದ್ದಾರೆ.

    ಈರಪ್ಪ ಅವರ ತಂದೆ-ತಾಯಿಗೆ ಐವರು ಮಕ್ಕಳು. ಇಬ್ಬರು ಪುತ್ರಿಯರಿಗೆ ಕಣ್ಣು ಕಾಣಿಸುತ್ತದೆ. ಆದ್ರೆ ಈರಪ್ಪ ಹಾಗೂ ಇನ್ನಿಬ್ಬರು ಸಹೋದರರಿಗೆ ಕಣ್ಣು ಕಾಣಿಸುವುದಿಲ್ಲ. ಆದರೂ ಆತ್ಮವಿಶ್ವಾಸದಿಂದ ಈರಪ್ಪ ಜೀವನ ಸಾಗಿಸುತ್ತಿದ್ದಾರೆ.

    https://www.youtube.com/watch?v=q1EI1KUMN4s

  • ಕಣ್ಣಿಲ್ಲದಿದ್ರೂ ಕೃಷಿಯಲ್ಲಿ ಸಾಧಕ: ಕೆಲಸದಾಳುಗಳಿಗೆ ಇವರೇ ಮಾರ್ಗದರ್ಶಕ

    ಕಣ್ಣಿಲ್ಲದಿದ್ರೂ ಕೃಷಿಯಲ್ಲಿ ಸಾಧಕ: ಕೆಲಸದಾಳುಗಳಿಗೆ ಇವರೇ ಮಾರ್ಗದರ್ಶಕ

    ಚಿಕ್ಕಬಳ್ಳಾಪುರ: ಕೆಲವರಿಗೆ ಎಲ್ಲಾ ಅಂಗಗಳೂ ಚೆನ್ನಾಗಿದ್ರೂ ದುಡಿದು ತಿನ್ನೋಕೆ ಸೋಮಾರಿತನ. ಆದರೆ ನಮ್ಮ ಈ ಪಬ್ಲಿಕ್ ಹೀರೋಗೆ ಎರಡೂ ಕಣ್ಣುಗಳಿಲ್ಲ. ಆದ್ರೂ ಕೃಷಿ ಮಾಡ್ತಿದ್ದಾರೆ. ಮಾದರಿ ರೈತನಾಗಿ ನಾಲ್ಕೈದು ಜನಕ್ಕೆ ಕೆಲಸ ಕೊಟ್ಟಿದ್ದಾರೆ. ತಮ್ಮ ಅಂಧತ್ವವನ್ನೇ ಮೆಟ್ಟಿನಿಂತಿದ್ದಾರೆ.

    ಯಲ್ಲಪ್ಪ ನಮ್ಮ ಪಬ್ಲಿಕ್ ಹೀರೋ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ದುರ್ಗೇನಹಳ್ಳಿಯವರು. ಇವರಿಗೆ 3 ವರ್ಷವಿದ್ದಾಗ ಅಪ್ಪ ತೀರಿ ಹೋದ್ರು. 5 ವರ್ಷವಿದ್ದಾಗ ಪೋಲಿಯೋ ಅಟ್ಯಾಕ್ ಆಗಿ ಎರಡೂ ಕಣ್ಣುಗಳ ದೃಷ್ಟಿ ಹೋಯ್ತು. ಇಂತ ಕಡುಕಷ್ಟದಲ್ಲಿ ತಾಯಿ ನೆರಳಲ್ಲಿ ಬೆಳೆದ ಯಲ್ಲಪ್ಪ ಇವತ್ತು ಮಾದರಿ ರೈತರಾಗಿದ್ದಾರೆ. ಎರಡು ಎಕರೆ ಬಂಜರು ಭೂಮಿಯನ್ನ ಫಲವತ್ತಾಗಿ ಮಾಡಿ ಪಾಲಿ ಹೌಸ್ ನಿರ್ಮಿಸಿ ಸೌತೆಕಾಯಿ ಸೇರಿದಂತೆ ವಿವಿಧ ಬೆಳೆ ಬೆಳೆಯುತ್ತಿದ್ದಾರೆ.

    ಯಲ್ಲಪ್ಪರಿಗೆ ಮದುವೆಯಾಗಿದ್ದು, ಇವರ ಹೆಂಡತಿ ಇವರನ್ನು ಅರ್ಥಮಾಡಿಕೊಳ್ಳದೇ ದೂರವಾದ್ರು. 12 ವರ್ಷದ ಪುಟ್ಟ ಮಗನಿದ್ದಾನೆ. ಮಗ ಹಾಗೂ ಅಮ್ಮ ಯಲ್ಲಪ್ಪರಿಗೆ ಕೆಲಸದಲ್ಲಿ ಸಾಥ್ ನೀಡುತ್ತಾರೆ. ಕಣ್ಣಿಲ್ಲದಿದ್ರೂ ಯಲ್ಲಪ್ಪ ಸ್ವಾಭಿಮಾನದಿಂದ ಸಾರ್ಥಕತೆಯ ಜೀವನ ನಡೆಸುತ್ತಿದ್ದಾರೆ.

    https://www.youtube.com/watch?v=9e3K0CcFIIc