Tag: ಅಂತ್ಯಕ್ರಿಯೇ

  • ಕೊರೊನಾ ಎಫೆಕ್ಟ್: ತಂದೆಯ ಅಂತ್ಯಕ್ರಿಯೆಗೆ ಬಾರದ ಮಗ, ಮಗಳಿಂದ ಚಿತೆಗೆ ಬೆಂಕಿ

    ಕೊರೊನಾ ಎಫೆಕ್ಟ್: ತಂದೆಯ ಅಂತ್ಯಕ್ರಿಯೆಗೆ ಬಾರದ ಮಗ, ಮಗಳಿಂದ ಚಿತೆಗೆ ಬೆಂಕಿ

    ಹುಬ್ಬಳ್ಳಿ: ಕೊರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಲಾಕ್‍ಡೌನ್ ಘೋಷಣೆ ಮಾಡಿದ್ದು, ತಂದೆಯ ಅಂತಿಮ ಸಂಸ್ಕಾರಕ್ಕೆ ಮಗನೇ ಬಾರದಂತ ಪರಿಸ್ಥಿತಿ ನಿರ್ಮಾಣವಾಗಿದೆ.

    ಹುಬ್ಬಳ್ಳಿಯಲ್ಲಿ ಮೃತ ತಂದೆಯ ಅಂತ್ಯ ಸಂಸ್ಕಾರಕ್ಕೆ ಮಗ ಬಾರದಿರುವ ಹಿನ್ನೆಲೆಯಲ್ಲಿ ಚಿತೆಗೆ ಮಗಳೇ ಅಗ್ನಿ ಸ್ಪರ್ಶ ಮಾಡಿದ್ದಾರೆ. ತಂದೆಯ ಅಂತಿಮ ಸಂಸ್ಕಾರಕ್ಕೆ ಆಗಮಿಸಬೇಕಿದ್ದ ಮಗ ಲಾಕ್‍ಡೌನ್‍ನಿಂದ ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ಸಿಲುಕಿದ್ದಾರೆ. ಹೀಗಾಗಿ ಅನಾರೋಗ್ಯದಿಂದ ಸಾವನ್ನಪ್ಪಿದ್ದ ತಂದೆ ಎನ್.ಎ. ಚವ್ಹಾನ್ ಅವರ ಅಂತಿಮ ಸಂಸ್ಕಾರವನ್ನು ಮಗನ ಅನುಪಸ್ಥಿತಿಯಲ್ಲಿ ಅವರ ಮಗಳಿಂದಲೇ ಅಂತಿಮ ವಿಧಿ ವಿಧಾನ ನೆರವೇರಿಸಿದ್ದಾರೆ.

    ಅಂತಿಮ ಕ್ರಿಯೆಗೆ ಚವ್ಹಾನ್ ಕುಟುಂಬದ ಐದಾರು ಜನರು ಮಾತ್ರ ಭಾಗಿಯಾಗಿದ್ದು, ಕೊರೊನಾ ಭಯಕ್ಕೆ ಅಂತ್ಯಸಂಸ್ಕಾರದಲ್ಲಿ ಜನರು ಸಹ ಭಾಗವಹಿಸಿರಲಿಲ್ಲ. ಹುಬ್ಬಳ್ಳಿಯ ಕೇಶ್ವಾಪುರದ ಮುಕ್ತಿ ಧಾಮದಲ್ಲಿ ಅಂತ್ಯ ಸಂಸ್ಕಾರ ನಡೆಯಿತು.

  • ಹಣ ಪಡೆದು, ಸರಿಯಾಗಿ ಮೃತದೇಹ ಸುಡಲ್ಲ: ಸ್ಮಶಾನದ ಸಿಬ್ಬಂದಿ ವಿರುದ್ಧ ಆಕ್ರೋಶ

    ಹಣ ಪಡೆದು, ಸರಿಯಾಗಿ ಮೃತದೇಹ ಸುಡಲ್ಲ: ಸ್ಮಶಾನದ ಸಿಬ್ಬಂದಿ ವಿರುದ್ಧ ಆಕ್ರೋಶ

    ಗದಗ: ಜಿಲ್ಲೆಯ ಬೆಟಗೇರಿ ಮುಕ್ತಿಧಾಮ ಸ್ಮಶಾನದಲ್ಲಿ ಮೃತದೇಹವೊಂದು ಅರೆಬರೆ ಸುಟ್ಟಿದೆ. ಇದು ಮೃತನ ಸಂಬಂಧಿಕರ ಆಕ್ರೋಶಕ್ಕೆ ಕಾರಣವಾಗಿದೆ.

    ಬುಧವಾರ ಬೆಟಗೇರಿ ಆನಂದ್ ಅಸುಂಡಿ ಎಂಬವರು ಮೃತಪಟ್ಟಿದ್ದರು. ಈ ಮುಕ್ತಿಧಾಮದಲ್ಲಿ ಅಂತ್ಯಕ್ರಿಯೆ ಮಾಡಲಾಗಿತ್ತು. ಈ ಸ್ಮಶಾನದ ಕಮೀಟಿಯವರು ಕಟ್ಟಿಗೆಯಿಂದ ಸುಡದೇ, ಕೇವಲ ಕ್ವಾಯಿಲ್ ಮೂಲಕ ಸುಟ್ಟಿದ್ದಾರೆ. ಇದರಿಂದ ಮೃತದೇಹ ಸರಿಯಾಗಿ ಸುಟ್ಟಿಲ್ಲ. ಇಂದು ಕುಟುಂಬದವರು ಅಸ್ತಿ ಹೊತ್ತೊಯಲು ಬಂದಾಗ ಈ ದೃಶ್ಯ ನೋಡಿ ಬೆರಗಾಗಿದ್ದಾರೆ.

    ಸರಿಯಾಗಿ ಹಣ ತೆಗೆದುಕೊಳ್ಳುತ್ತಾರೆ. ಆದರೆ ಸರಿಯಾಗಿ ಕೆಲಸ ಮಾಡಲ್ಲ. ಅಸ್ತಿ ಬಳೆದು ಪಿಂಡ ಬಿಡುವುದಾದರೂ ಹೇಗೆ? ನಮ್ಮ ಧಾರ್ಮಿಕ ವಿಧಿವಿಧಾನಗಳಿಗೆ ಸ್ಮಶಾನ ಸಮಿತಿಯವರು ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ ಎಂದು ಕುಟುಂಬದವರು ಆರೋಪಿಸಿದರು. ಇದಕ್ಕೆ ಸಂಬಂಧಿಸಿ ಸಮಿತಿಯವರನ್ನು ಕೇಳಿದರೆ ಮುಕ್ತಿಧಾಮ ಸಮಿತಿ ರಚಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಿ, ಮುಂದೆ ಹೀಗಾಗದಂತೆ ನೋಡಿಕೊಳ್ಳುವುದಾಗಿ ಹೇಳಿದರು.

  • ಮೇಲ್ಜಾತಿಯ ಜನ ದಾರಿ ನೀಡದ್ದಕ್ಕೆ ಸೇತುವೆ ಮೇಲಿಂದ ಶವ ಇಳಿಸಿದ್ರು

    ಮೇಲ್ಜಾತಿಯ ಜನ ದಾರಿ ನೀಡದ್ದಕ್ಕೆ ಸೇತುವೆ ಮೇಲಿಂದ ಶವ ಇಳಿಸಿದ್ರು

    ಚೆನ್ನೈ: ಮೇಲ್ವರ್ಗದ ಸಮುದಾಯದವರು ತಮ್ಮ ಜಮೀನಿನಲ್ಲಿ ಶವವನ್ನು ತೆಗೆದುಕೊಂಡು ಹೋಗಲು ದಾರಿ ನೀಡದ ಕಾರಣ ದಲಿತರು ಸೇತುವೆ ಮೇಲಿನಿಂದ ಹಗ್ಗ ಕಟ್ಟಿ ಶವ ಇಳಿಸಿದ್ದಾರೆ. ಈ ಅಮಾನವೀಯ ಘಟನೆ ತಮಿಳುನಾಡಿನ ವೆಲ್ಲೂರು ಜಿಲ್ಲೆಯ ವನಿಯಂಬಾಡಿ ತಾಲೂಕಿನಲ್ಲಿ ನಡೆದಿದೆ.

    46 ವರ್ಷದ ಎಸ್.ಕುಪ್ಪಂ ಎಂಬ ವ್ಯಕ್ತಿ ಸಾವನ್ನಪ್ಪಿದ್ದರು. ಅಂತ್ಯಕ್ರಿಯೆಯಾಗಿ ಶವವನ್ನು ತೆಗೆದುಕೊಂಡು ಹೋಗಲಾಗುತ್ತಿತ್ತು. ಈ ವೇಳೆ ಮೇಲ್ಜಾತಿಯ ಕೆಲವರು ತಮ್ಮ ಜಮೀನಿನಲ್ಲಿ ಶವವನ್ನು ತೆಗೆದುಕೊಂಡು ಹೋಗದಂತೆ ತಡೆದಿದ್ದಾರೆ. ಕೊನೆಗೆ ಕುಟುಂಬಸ್ಥರು ಸೇತುವೆ ಮೇಲಿಂದ ಶವವನ್ನು ಕೆಳಗೆ ಇಳಿಸಿದ್ದಾರೆ.

    ಈ ಗ್ರಾಮದಲ್ಲಿ ದಲಿತರಿಗೆ ಮೃತದೇಹವನ್ನು ಅಂತ್ಯಕ್ರಿಯೆ ಮಾಡಲು ಇರುವುದು ಒಂದೇ ಸ್ಮಶಾನ. ಶವವನ್ನು ತೆಗೆದುಕೊಂಡು ಹೋಗುವ ಮಾರ್ಗ ಮಧ್ಯೆ ಮೇಲ್ವರ್ಗದವರ ಕೃಷಿ ಜಮೀನನ್ನು ದಾಟಿಕೊಂಡು ಹೋಗಬೇಕು. ಮೇಲ್ವರ್ಗದ ಜನರು ತಮ್ಮ ಜಮೀನಿನಲ್ಲಿ ಶವ ತೆಗೆದುಕೊಂಡು ಹೋಗಲು ಅಡ್ಡಿಪಡಿಸುತ್ತಾರೆ. ಹೀಗಾಗಿ ಚಟ್ಟಕ್ಕೆ ಎರಡು ಕಡೆ ಹಗ್ಗ ಕಟ್ಟಿ ಕೆಲವರು ಮೇಲಿನಿಂದ ಇಳಿಸುತ್ತಾರೆ. ಕೆಳಗೆ ಕೆಲವರು ಶವವನ್ನು ಇಳಿಸಿಕೊಳ್ಳುತ್ತಾರೆ.

    ಶವವನ್ನು ಸೇತುವೆ ಮೇಲಿಂದ ಕೆಳಗಿಳಿಸುವ ದೃಶ್ಯಗಳನ್ನು ಕೆಲವರು ಮೊಬೈಲಿನಲ್ಲಿ ಸೆರೆಹಿಡಿದುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಸ್ಥಳೀಯ ಪೊಲೀಸರು, ಈ ರೀತಿಯ ಘಟನೆ ನಡೆದಿದೆಯೇ ಎಂದು ತನಿಖೆ ನಡೆಸಲಾಗುವುದು. ತಪ್ಪಿತಸ್ಥರೆಂದು ಕಂಡುಬಂದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

  • ಅಂತ್ಯಕ್ರಿಯೆಗೆ ಪ್ರವಾಹ ಪರಿಹಾರ ಕೊಡಿ- ಅಧಿಕಾರಿಗಳ ವಿರುದ್ಧ ಕುಟುಂಬಸ್ಥರ ಆಕ್ರೋಶ

    ಅಂತ್ಯಕ್ರಿಯೆಗೆ ಪ್ರವಾಹ ಪರಿಹಾರ ಕೊಡಿ- ಅಧಿಕಾರಿಗಳ ವಿರುದ್ಧ ಕುಟುಂಬಸ್ಥರ ಆಕ್ರೋಶ

    ಗದಗ: ಮಲಪ್ರಭಾ ಪ್ರವಾಹಕ್ಕೆ ಸಿಲುಕಿ ಅನಾರೋಗ್ಯಕ್ಕಿಡಾಗಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಇಂದು ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆ ರೋಣ ತಾಲೂಕಿನ ಹೊಳೆಆಲೂರ ಗ್ರಾಮದಲ್ಲಿ ನಡೆದಿದೆ.

    66 ವರ್ಷದ ಹನುಮಂತಪ್ಪ ಚಲವಾದಿ ಮೃತಪಟ್ಟಿದ್ದಾರೆ. ಮಲಪ್ರಭಾ, ಬೆಣ್ಣೆಹಳ್ಳ ಪ್ರವಾಹದ ವೇಳೆ ಮನೆಯಲ್ಲಿ ಸಿಲುಕಿಕೊಂಡಿದ್ದರು, ನಂತರ ಸಂಬಂಧಿಕರು ಹಾಗೂ ಸ್ಥಳೀಯರು ಹನುಮಂತಪ್ಪ ಅವರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲು ಮಾಡಿದರು. ಆದರೆ ಚಿಕಿತ್ಸೆ ಫಲಿಸದೇ ಇಂದು ಮೃತಪಟ್ಟಿದ್ದಾರೆ.

    ಪ್ರವಾಹದಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಪರಿಹಾರಕ್ಕಾಗಿ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಕ್ಯಾರೆ ಅಂತಿಲ್ಲ ಎಂಬುದು ಕುಟುಂಬದವರ ಆಕ್ರೋಶಕ್ಕೆ ಕಾರಣವಾಗಿದೆ. ಇದರಿಂದ ರೋಸಿಹೋದ ಕುಟುಂಬದವರು ತಾಲೂಕು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೆ ಅಂತ್ಯಕ್ರಿಯೆ ಮಾಡುವುದಿಲ್ಲ ಎಂದು ಪಟ್ಟುಹಿಡಿದಿದ್ದಾರೆ. ಅಂತ್ಯಕ್ರಿಯೇಗಾದರು ಪ್ರವಾಹ ಪರಿಹಾರ ನೀಡಬೇಕು ಎಂಬುದು ಮೃತನ ಕುಟುಂಬದವರ ಆಗ್ರಹಿಸಿದ್ದಾರೆ.