Tag: ಅಂತಾರಾಷ್ಟ್ರೀಯ ವಿಮಾನಯಾನ

  • ಅಂತಾರಾಷ್ಟ್ರೀಯ ವಿಮಾನ ಪ್ರಯಾಣ ರದ್ದುಗೊಳಿಸಿ: ಪ್ರಧಾನಿಗೆ ಕೇಜ್ರಿವಾಲ್‌ ಮನವಿ

    ಅಂತಾರಾಷ್ಟ್ರೀಯ ವಿಮಾನ ಪ್ರಯಾಣ ರದ್ದುಗೊಳಿಸಿ: ಪ್ರಧಾನಿಗೆ ಕೇಜ್ರಿವಾಲ್‌ ಮನವಿ

    ನವದೆಹಲಿ: ಕೊರೊನಾ ವೈರಸ್‌ ರೂಪಾಂತರಿ ಓಮಿಕ್ರಾನ್‌ ಹರಡುವ ಭೀತಿ ಇರುವುದರಿಂದ ಭಾರತದಲ್ಲಿ ಅಂತಾರಾಷ್ಟ್ರೀಯ ವಿಮಾನ ಪ್ರಯಾಣಕ್ಕೆ ನಿರ್ಬಂಧ ವಿಧಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಮನವಿ ಮಾಡಿದ್ದಾರೆ.

    ಹಿಂದಿಯಲ್ಲಿ ಟ್ವೀಟ್‌ ಮಾಡಿರುವ ಕೇಜ್ರಿವಾಲ್‌, ಓಮಿಕ್ರಾನ್‌ ಪೀಡಿತ ದೇಶಗಳಿಂದ ಆಗಮಿಸುವ ವಿಮಾನಗಳಿಗೆ ಹಲವು ದೇಶಗಳು ನಿರ್ಬಂಧ ವಿಧಿಸಿವೆ. ಆದರೆ ನಮ್ಮಲ್ಲಿ ಏಕೆ ವಿಳಂಬವಾಗುತ್ತಿದೆ. ಹೊಸ ತಳಿ ಹರಡುವಿಕೆ ನಿಯಂತ್ರಣಕ್ಕಾಗಿ ಇಸ್ರೇಲ್‌, ಜಪಾನ್‌ ದೇಶಗಳು ಸಹ ಪ್ರಯಾಣ ನಿರ್ಬಂಧಗಳನ್ನು ಘೋಷಿಸಿವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: OMICRON ಸೋಂಕಿಗೆ ಪ್ರತ್ಯೇಕ ಆಸ್ಪತ್ರೆ: ದೆಹಲಿ ಸರ್ಕಾರ

    ಕೋವಿಡ್‌ ಮೊದಲ ಅಲೆ ಸಂದರ್ಭದಲ್ಲೂ ಭಾರತದಲ್ಲಿ ಅಂತಾರಾಷ್ಟ್ರೀಯ ವಿಮಾನಯಾನ ರದ್ದುಗೊಳಿಸಲು ವಿಳಂಬ ಮಾಡಲಾಯಿತು. ಬಹುಪಾಲು ಅಂತಾರಾಷ್ಟ್ರೀಯ ವಿಮಾನಗಳು ದೆಹಲಿಗೆ ಆಗಮಿಸುತ್ತವೆ. ಇದು ದೆಹಲಿ ನಗರದ ಮೇಲೆ ಪರಿಣಾಮ ಬೀರಲಿದೆ. ಪ್ರಧಾನಿ ಮೋದಿ ಅವರೇ, ಅಂತಾರಾಷ್ಟ್ರೀಯ ವಿಮಾನಗಳಿಗೆ ನಿರ್ಬಂಧ ವಿಧಿಸಿ ಎಂದು ಕೋರಿದ್ದಾರೆ.

    ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್‌ ಅವರು ಎಎನ್‌ಐ ಸುದ್ದಿ ಸಂಸ್ಥೆಯ ವರದಿಯೊಂದನ್ನು (ದಕ್ಷಿಣ ಆಫ್ರಿಕಾದಿಂದ ಮರಳಿದ 39 ವಯಸ್ಸಿನ ಚತ್ತೀಸಗಢ ವ್ಯಕ್ತಿಯೊಬ್ಬರಿಗೆ ಕೋವಿಡ್‌ ಸೋಂಕು ಕಾಣಿಸಿಕೊಂಡಿದೆ) ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಓಮಿಕ್ರಾನ್ ರೂಪಾಂತರಿಯಿಂದ ಜಾಗತಿಕ ಅಪಾಯ ಹೆಚ್ಚು-WHO

    ಓಮಿಕ್ರಾನ್‌ ಪೀಡಿತ 12 ದೇಶಗಳಿಂದ ವಿಮಾನಗಳನ್ನು ರದ್ದುಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲು ಮಹಾರಾಷ್ಟ್ರ ಸರ್ಕಾರ ಕೂಡ ನಿರ್ಧರಿಸಿದೆ.

  • ಓಮಿಕ್ರಾನ್‌ ಆತಂಕ- ಅಂತಾರಾಷ್ಟ್ರೀಯ ವಿಮಾನಯಾನ ನಿರ್ಬಂಧ ಸಡಿಲಗೊಳಿಸುವ ಯೋಜನೆ ಪರಾಮರ್ಶಿಸಲು ಪ್ರಧಾನಿ ಸೂಚನೆ

    ಓಮಿಕ್ರಾನ್‌ ಆತಂಕ- ಅಂತಾರಾಷ್ಟ್ರೀಯ ವಿಮಾನಯಾನ ನಿರ್ಬಂಧ ಸಡಿಲಗೊಳಿಸುವ ಯೋಜನೆ ಪರಾಮರ್ಶಿಸಲು ಪ್ರಧಾನಿ ಸೂಚನೆ

    ನವದೆಹಲಿ: ಕೊರೊನಾ ವೈರಸ್‌ ರೂಪಾಂತರ ತಳಿ “ಓಮಿಕ್ರಾನ್”‌ ಬಗ್ಗೆ ಜಾಗತಿಕ ಮಟ್ಟದಲ್ಲಿ ಕಳವಳ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ಸಭೆ ನಡೆಯಿತು.

    ಅಂತಾರಾಷ್ಟ್ರೀಯ ವಿಮಾನ ಪ್ರಯಾಣ ನಿರ್ಬಂಧಗಳನ್ನು ಸಡಿಲಗೊಳಿಸುವ ಯೋಜನೆಗಳ ಬಗ್ಗೆ ಪರಾಮರ್ಶಿಸಿ ನಡೆಸುವಂತೆ ಹಿರಿಯ ಅಧಿಕಾರಿಗಳಿಗೆ ಪ್ರಧಾನಿ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಲಸಿಕೆ ಪಡೆದವರಲ್ಲಿಯೂ ಒಮಿಕ್ರಾನ್ ಹೊಸ ತಳಿ ಪತ್ತೆ – ಆತಂಕ ಯಾಕೆ?

    ಹೊಸ ತಳಿಗೆ ಸಂಬಂಧಿಸಿದ ಬೆಳವಣಿಗೆಗಳ ಬಗ್ಗೆ ಸಭೆಯಲ್ಲಿ ಪ್ರಧಾನಿ ಸಂಕ್ಷಿಪ್ತವಾಗಿ ತಿಳಿಸಿದರು. ಹೊರದೇಶಗಳಿಂದ ಆಗಮಿಸುವವರ ಬಗ್ಗೆ ಮೇಲ್ವಿಚಾರಣೆಯ ಅಗತ್ಯತೆ ಕುರಿತು ಹೇಳಿದರು. ಹೊಸ ತಳಿ ಹರಡುವಿಕೆ ಅಪಾಯದಲ್ಲಿರುವ ದೇಶಗಳಿಂದ ಆಗಮಿಸುವವರ ಮೇಲೆ ನಿಗಾವಹಿಸಿ ಕೋವಿಡ್‌ ಪರೀಕ್ಷೆ ನಡೆಸಬೇಕು ಎಂದು ಸಲಹೆ ನೀಡಿದರು.

    ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧರಿಸುವುದು, ಆಗಾಗ ಕೈ ತೊಳೆದುಕೊಳ್ಳುವುದು, ಸಾಮಾಜಿಕ ಅಂತರ ಕಾಪಾಡುವಂತಹ ಕೋವಿಡ್‌ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲು ಕ್ರಮಕೈಗೊಳ್ಳಬೇಕು ಎಂದು ಪ್ರಧಾನಿ ಒತ್ತಿ ಹೇಳಿದರು. ಇದನ್ನೂ ಓದಿ: ಓಮಿಕ್ರಾನ್ ಸೋಂಕಿನ ಭೀತಿ – ಅಂತರಾಷ್ಟ್ರೀಯ ವಾಣಿಜ್ಯ ವಿಮಾನಗಳ ಹಾರಾಟ ಪುನಾರಂಭ ಅನುಮಾನ

    ಹೊಸ ತಳಿ ಪತ್ತೆಯಾಗಿರುವ ದೇಶಗಳಿಂದ ಭಾರತಕ್ಕೆ ಪ್ರಯಾಣ ಬೆಳೆಸುವ ವಿಮಾನ ಸಂಚಾರಕ್ಕೆ ಈಗಾಗಲೇ ನಿರ್ಬಂಧ ವಿಧಿಸಲಾಗಿದೆ. “ಓಮಿಕ್ರಾನ್‌” ಹೊಸ ತಳಿಯು ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾಗಿದೆ. ನಂತರ ಬೋಸ್ಟ್‌ವಾನಾ, ಇಸ್ರೇಲ್‌, ಹಾಂಗ್‌ಕಾಂಗ್‌ನಲ್ಲೂ ಪ್ರಕರಣಗಳು ಪತ್ತೆಯಾಗಿವೆ.

  • ವಿಮಾನಯಾನದಲ್ಲಿ ವಿಶ್ವದಲ್ಲೇ 3ನೇ ಸ್ಥಾನಗಳಿಸಿದ ಭಾರತ

    ವಿಮಾನಯಾನದಲ್ಲಿ ವಿಶ್ವದಲ್ಲೇ 3ನೇ ಸ್ಥಾನಗಳಿಸಿದ ಭಾರತ

    ನವದೆಹಲಿ: ವಿಮಾನಯಾನ ಪ್ರಯಾಣವನ್ನೇ ಅವಲಂಬಿಸಿರುವ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರತ ವಿಶ್ವದಲ್ಲಿಯೇ ಮೂರನೇ ಸ್ಥಾನಗಳಿಸಿದೆ ಎಂದು ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆ(ಐಎಟಿಎ) ವರದಿ ನೀಡಿದೆ.

    ಐಎಟಿಎಯು ವಿಶ್ವದಲ್ಲಿ ಯಾವ ಯಾವ ದೇಶದಲ್ಲಿ ಎಷ್ಟು ಜನ ವಿಮಾನಯಾನವನ್ನೇ ಅವಲಂಬಿಸಿದ್ದಾರೆ ಎನ್ನುವ ಕುರಿತು ವರದಿ ಬಿಡುಗಡೆ ಮಾಡುತ್ತಿರುತ್ತದೆ. ಈ ಕುರಿತು ಗುರುವಾರ ಪ್ರಕಟಿಸಿರುವ 2017ರ ವರದಿಯ ಪ್ರಕಾರ  ಭಾರತ ವಿಶ್ವದಲ್ಲಿಯೇ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.

    ಐಎಟಿಎ ವರದಿಯ ಪ್ರಕಾರ ವಿಶ್ವಾದ್ಯಂತ ಒಟ್ಟು 400 ಕೋಟಿ ಜನ ದೇಶಿಯ ಹಾಗೂ ಅಂತಾರಾಷ್ಟ್ರೀಯ ವಿಮಾನಯಾನ ಪ್ರಯಾಣವನ್ನು ಬೆಳೆಸಿದ್ದು, ಇದರಲ್ಲಿ ಮೊದಲನೇ ಸ್ಥಾನದಲ್ಲಿ ಅಮೆರಿಕಾದ ಒಟ್ಟು 63.2 ಕೋಟಿ ಪ್ರಯಾಣಿಕರು, ಎರಡನೇ ಸ್ಥಾನದಲ್ಲಿ ಚೀನಾದ 55.5 ಕೋಟಿ ಪ್ರಯಾಣಿಕರು ಹಾಗೂ ಮೂರನೇ ಸ್ಥಾನದಲ್ಲಿ ಭಾರತದ 16.1 ಕೋಟಿ ಪ್ರಯಾಣಿಕರು ಸಂಚಾರ ಮಾಡಿರುವುದು ವರದಿಯಾಗಿದೆ. ನಂತರದ ಸ್ಥಾನಗಳಲ್ಲಿ ಯುಕೆ 14.7 ಕೋಟಿ ಹಾಗೂ ಜರ್ಮನಿ 11.4 ಕೋಟಿ ಪ್ರಯಾಣಿಕರೊಂದಿಗೆ 4 ಮತ್ತು 5ನೇ ಸ್ಥಾನವನ್ನು ಗಳಿಸಿಕೊಂಡಿದೆ.

    ವರದಿಗಳ ಪ್ರಕಾರ ಕಳೆದ 47 ತಿಂಗಳುಗಳಲ್ಲಿ ಭಾರತದ ದೇಶಿಯ ವಿಮಾನಯಾನದ ಪ್ರಯಾಣಿಕರ ಸಂಖ್ಯೆ ದ್ವಿಗುಣಗೊಂಡಿದೆ. ಭಾರತದ ದೇಶಿಯ ವಿಮಾನಯಾನ ಪ್ರಯಾಣಿಕರ ಸಂಖ್ಯೆಯನ್ನು ಆರ್‍ಪಿಕೆ(ರೆವಿನ್ಯೂ ಪ್ಯಾಸೆಂಜರ್ ಕಿಲೋಮೀಟರ್)ಯೊಂದಿಗೆ ಲೆಕ್ಕ ಹಾಕಿದರೆ, ಆಸ್ಟ್ರೇಲಿಯಾ, ಬ್ರೆಜಿಲ್, ಚೀನಾ, ಜಪಾನ್, ರಷ್ಯಾ ಹಾಗೂ ಯುಎಸ್ ಗಳಿಗಿಂತಲೂ ಅಧಿಕವಾಗಿದೆ ಎಂದು ಐಎಟಿಎ ವರದಿ ನೀಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv