Tag: ಅಂತರಾಷ್ಟ್ರೀಯ ವಾಣಿಜ್ಯ ವಿಮಾನ

  • ಓಮಿಕ್ರಾನ್ ಸೋಂಕಿನ ಭೀತಿ – ಅಂತರಾಷ್ಟ್ರೀಯ ವಾಣಿಜ್ಯ ವಿಮಾನಗಳ ಹಾರಾಟ ಪುನಾರಂಭ ಅನುಮಾನ

    ಓಮಿಕ್ರಾನ್ ಸೋಂಕಿನ ಭೀತಿ – ಅಂತರಾಷ್ಟ್ರೀಯ ವಾಣಿಜ್ಯ ವಿಮಾನಗಳ ಹಾರಾಟ ಪುನಾರಂಭ ಅನುಮಾನ

    ನವದೆಹಲಿ : ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಓಮಿಕ್ರಾನ್ ರೂಪಾಂತರಿ ಕೊರೊನಾ ವೈರಸ್ ಭಾರತದಲ್ಲೂ ಭೀತಿ ಹೆಚ್ಚಿಸಿದೆ. ವೇಗವಾಗಿ ಹರಡಬಲ್ಲ ಮತ್ತು ವ್ಯಾಕ್ಸಿನ್ ಕ್ಷಮತೆಯನ್ನೇ ಕುಗ್ಗಿಸಬಲ್ಲ ಈ ಹೊಸ ರೂಪಾಂತರಿ ಭಾರತದಲ್ಲಿ ಮೂರನೇ ಅಲೆಯ ಭೀತಿ ಹುಟ್ಟು ಹಾಕಿದೆ.

    ಹೀಗೆ ಹಠಾತನೇ ಪತ್ತೆಯಾಗಿರುವ ಓಮಿಕ್ರಾನ್ ಸೋಂಕು ಕೇಂದ್ರ ನಾಗರಿಕರ ವಿಮಾನಯಾನ ಸಚಿವಲಾಯಕ್ಕೂ ಸಂಕಷ್ಟ ತಂದೊಡ್ಡಿದೆ. ಭಾರತದಲ್ಲಿ ಎರಡನೇ ಅಲೆ ಬಹುತೇಕ ಅಂತ್ಯವಾಗುತ್ತಿರುವ ಹಿನ್ನಲೆ ಡಿಸೆಂಬರ್ 15 ರಿಂದ ಅಂತರಾಷ್ಟ್ರೀಯ ವಾಣಿಜ್ಯ ವಿಮಾನಗಳ ಹಾರಾಟ ಆರಂಭಿಸುವ ಲೆಕ್ಕಚಾರದಲ್ಲಿತ್ತು. ಆದರೆ ಈಗ ಏಕಾಏಕಿ ಕಾಣಿಸಿಕೊಂಡಿರುವ ಹೊಸ ತಳಿಯಿಂದ ವಿಮಾನಗಳ ಹಾರಾಟ ಪುನಾರಂಭಿಸುವ ನಿರ್ಧಾರದ ಬಗ್ಗೆ ಮರುಪರಿಶೀಲನೆ ನಡೆಸಬೇಕಿದೆ.

    ಕೇಂದ್ರ ಆರೋಗ್ಯ ಇಲಾಖೆ, ಗೃಹ ಇಲಾಖೆಯ ಜೊತೆಗೆ ಸಭೆ ನಡೆಸಿದ್ದು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಭಾರತದಲ್ಲಿ ಪೂರ್ಣ ಪ್ರಮಾಣದಲ್ಲಿ ವಾಣಿಜ್ಯ ವಿಮಾನಗಳ ಹಾರಾಟಕ್ಕೆ ದಿನಾಂಕ ನಿಗದಿ ಮಾಡಿತ್ತು. ಆದರೆ ಹೊಸ ಸೋಂಕು ಪತ್ತೆ ಹಿನ್ನಲೆ ಹಲವು ದೇಶಗಳಿಗೆ ವಿಮಾನಗಳ ಹಾರಾಟವನ್ನು ನಿಷೇಧ ಮಾಡುತ್ತಿದ್ದು, ಭಾರತಕ್ಕೆ ಇದು ಹೊಸ ಸವಾಲು ತಂದೊಡ್ಡಿದೆ.

    ಕೇಂದ್ರ ಆರೋಗ್ಯ ಇಲಾಖೆ ಬ್ರಿಟನ್, ದಕ್ಷಿಣ ಆಫ್ರಿಕಾ, ಬ್ರೆಜಿಲ್, ಬಾಂಗ್ಲಾದೇಶ, ಬೋಟ್ಸ್ವಾನಾ, ಚೀನಾ, ಮಾರಿಷಸ್, ನ್ಯೂಜಿಲೆಂಡ್, ಜಿಂಬಾಬ್ವೆ, ಸಿಂಗಾಪುರ್, ಹಾಂಗ್ ಕಾಂಗ್ ಮತ್ತು ಇಸ್ರೇಲ್ ಸೇರಿದಂತೆ ಯುರೋಪ್‍ನ ಹಲವು ದೇಶಗಳನ್ನು ಅಪಾಯದ ಪಟ್ಟಿಯಲ್ಲಿಟ್ಟಿದೆ. ಈ ಪಟ್ಟಿಯಲ್ಲಿರುವ ದೇಶಗಳಿಂದ ಪ್ರಯಾಣಿಸುವ ಪ್ರಯಾಣಿಕರು ಭಾರತಕ್ಕೆ ಆಗಮಿಸಿದ ನಂತರ ಪರೀಕ್ಷೆ ಸೇರಿದಂತೆ ಹೆಚ್ಚುವರಿ ಕ್ರಮಗಳಿಗೆ ಒಳಗಾಗಬೇಕು ಎಂದು ಸೂಚಿಸಿದೆ.

    ಈ ಹಂತದಲ್ಲಿ ಅಂತರಾಷ್ಟ್ರೀಯ ವಿಮಾನಗಳ ವಾಣಿಜ್ಯ ಹಾರಾಟ ಪುನಾರಂಭಗೊಂಡರೇ ಭಾರತಕ್ಕೆ ಓಮಿಕ್ರಾನ್ ಸೋಂಕು ಸುಲಭವಾಗಿ ಸೇರಿಕೊಳ್ಳಬಹುದು ಎನ್ನಲಾಗುತ್ತಿದೆ. ಹೀಗಾಗಿ ನಾಗರಿಕ ವಿಮಾನಯಾನ ಸಚಿವಾಲಯ ಮುಂದಿನ ಪರಿಸ್ಥಿತಿಗಳನ್ನು ಅವಲೋಕಿಸುತ್ತಿದ್ದು ಅನಿವಾರ್ಯವಾದಲ್ಲಿ ತನ್ನ ನಿರ್ಧಾರವನ್ನು ಬದಲಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.