Tag: ಅಂತರಾಷ್ಟ್ರೀಯ ನ್ಯಾಯಾಲಯ

  • ಭಾರತದ ನಿರ್ಧಾರ ಪ್ರಶ್ನಿಸಿ ಅಂತರಾಷ್ಟ್ರೀಯ ಕೋರ್ಟ್ ಮೊರೆ ಹೋಗಲು ಪಾಕ್ ನಿರ್ಧಾರ

    ಭಾರತದ ನಿರ್ಧಾರ ಪ್ರಶ್ನಿಸಿ ಅಂತರಾಷ್ಟ್ರೀಯ ಕೋರ್ಟ್ ಮೊರೆ ಹೋಗಲು ಪಾಕ್ ನಿರ್ಧಾರ

    ಇಸ್ಲಾಮಾಬಾದ್: ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿರುವ ಕೇಂದ್ರ ಸರ್ಕಾರದ ನಿರ್ಧಾರದಿಂದ ಪಾಕಿಸ್ತಾನ ತೀವ್ರ ಆತಂಕಕ್ಕೊಳಗಾಗಿದ್ದು, ಭಾರತದ ನಿರ್ಧಾರವನ್ನು ಪ್ರಶ್ನಿಸಿ ಅಂತರಾಷ್ಟ್ರೀಯ ಕೋರ್ಟ್ ಮೊರೆ ಹೋಗಲು ನಿರ್ಧರಿಸಿದೆ ಎಂದು ತಿಳಿದು ಬಂದಿದೆ.

    ಈ ಕುರಿತು ಸುದ್ದಿಸಂಸ್ಥೆಯೊಂದು ವರದಿ ಮಾಡಿದ್ದು, ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿದ ಭಾರತದ ನಿರ್ಧಾರವನ್ನು ಅಂತರಾಷ್ಟ್ರೀಯ ಕೋರ್ಟ್‍ನಲ್ಲಿ ಪ್ರಶ್ನಿಸಲು ನಿರ್ಧರಿಸಿದ್ದೇವೆ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ ಅವರು ಪಾಕಿಸ್ತಾನದ ಸುದ್ದಿ ವಾಹಿನಿಗೆ ತಿಳಿಸಿದ್ದಾರೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.

    ಎಲ್ಲ ಕಾನೂನು ಅಂಶಗಳನ್ನು ಪರಿಶೀಲಿಸಿದ ನಂತರ ಪಾಕಿಸ್ತಾನ ಈ ನಿರ್ಧಾರಕ್ಕೆ ಬಂದಿದೆ ಎಂದು ಖುರೇಷಿ ಮಾಹಿತಿ ನೀಡಿದ್ದಾರೆ.

    ಭಾರತದ ನಿರ್ಧಾರವನ್ನು ಪಾಕಿಸ್ತಾನ ಕಳೆದ ವಾರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ಪ್ರಶ್ನಿಸಿತ್ತು. ಸಭೆಯ ನಂತರ ಪ್ರಮುಖ ದೇಶಗಳ ಸದಸ್ಯರು ಭಾರತದ ನಿಲುವನ್ನು ಬೆಂಬಲಿಸಿದ್ದರು.

    ಈ ಕುರಿತು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು ಸರಣಿ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು. ಭಾರತ ಸರ್ಕಾರ ಪ್ಯಾಸಿಸ್ಟ್, ರ್ಯಾಸಿಸ್ಟ್ ಎಂದು ಕರೆದಿದ್ದರು. ಮಾತ್ರವಲ್ಲದೆ, ನ್ಯೂಕ್ಲಿಯರ್ ಅರ್ಸೆನಲ್ ಭಾರತದ ಕಂಟ್ರೋಲ್‍ನಲ್ಲಿದೆ ಎಂದು ಕಿಡಿ ಕಾರಿದ್ದರು.

    ಸೋಮವಾರವಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ 30 ನಿಮಿಷಗಳ ಕಾಲ ಫೋನ್‍ನಲ್ಲಿ ಮಾತನಾಡಿದ್ದು, ದ್ವಿಪಕ್ಷೀಯ ವಿಷಯಗಳಲ್ಲದೆ, ಪ್ರಾದೇಶಿಕ ಸ್ಥಿತಿಗತಿ ಕುರಿತು ಸಹ ಉಭಯ ನಾಯಕರು ಚರ್ಚಿಸಿದರು. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಹಿಂಸಾಚಾರಕ್ಕೆ ಪ್ರಚೋದನೆ ನೀಡುವವರ ಮುಂದೆ ಶಾಂತಿ ಮಾತುಕತೆ ಫಲಿಸುವುದಿಲ್ಲ ಎಂದು ತಿಳಿಸಿದ್ದರು.

  • ಜಾಧವ್ ಕೇಸ್ – ಐಸಿಜೆಯಲ್ಲಿ ಪಾಕ್ ಮಿಲಿಟರಿ ಕೋರ್ಟ್ ಮಾನ ಹರಾಜು

    ಜಾಧವ್ ಕೇಸ್ – ಐಸಿಜೆಯಲ್ಲಿ ಪಾಕ್ ಮಿಲಿಟರಿ ಕೋರ್ಟ್ ಮಾನ ಹರಾಜು

    ನವದೆಹಲಿ: ಪಾಕಿಸ್ತಾನದ ಬಂಧನದಲ್ಲಿರುವ ಕುಲಭೂಷಣ್ ಜಾಧವ್ ವಿಚಾರಣೆ ವಿಧಾನ ಕಾನೂನುಬಾಹಿರವೆಂದು ಘೋಷಿಸುವಂತೆ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ(ಐಸಿಜೆ) ಭಾರತ ಮನವಿ ಸಲ್ಲಿಸಿದೆ.

    ಹೇಗ್‍ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಇಂದು ಕುಲಭೂಷಣ್ ಜಾಧವ್ ಪ್ರಕರಣದ ವಿಚಾರಣೆ ನಡೆಯಿತು. ಭಾರತದ ಪರ ಹರೀಶ್ ಸಾಳ್ವೆ ಅವರು ವಾದ ಮಂಡಿಸಿದರು.

    ಭಾರತದ ವಾದವೇನು?:
    ಪಾಕಿಸ್ತಾನ 1963ರ ವಿಯೆನ್ನಾ ಒಪ್ಪಂದದ ಷರತ್ತುಗಳನ್ನು ಉಲ್ಲಂಘಿಸಿದೆ. ಕುಲಭೂಷಣ್ ಜಾಧವ್ ರಾ (ರಿಸರ್ಚ್ & ಅನಾಲಿಸಿಸ್ ವಿಂಗ್)ಗೆ ಸೇರಿದವರಲ್ಲ. ಅವರನ್ನು ಬಂಧಿಸಿದ 1 ತಿಂಗಳ ನಂತರ ಎಫ್‍ಐಆರ್ ದಾಖಲಿಸಲಾಯಿತು. 3 ವರ್ಷಗಳ ಕಾಲ ಚಿತ್ರಹಿಂಸೆ ನೀಡಿ ತಪ್ಪೊಪ್ಪಿಕೊಳ್ಳುವಂತೆ ಮಾಡಿದೆ. ಪಾಕಿಸ್ತಾನ ಮಿಲಿಟರಿ ಕೋರ್ಟ್ ಸರಿಯಾಗಿ ವಿಚಾರಣೆಯನ್ನೂ ನಡೆಸದೆ, ಆರೋಪ ಸಾಬೀತಾಗದಿದ್ದರೂ ಶಿಕ್ಷೆ ವಿಧಿಸಿದೆ. ಪಾಕಿಸ್ತಾನ ಎಲ್ಲಾ ರೀತಿಯಲ್ಲೂ ಮಾನವಹಕ್ಕುಗಳನ್ನು ಉಲ್ಲಂಘಿಸಿದೆ. 13 ಬಾರಿ ಮನವಿ ಮಾಡಿದರೂ ರಾಜತಾಂತ್ರಿಕರ ಭೇಟಿಗೆ ಅವಕಾಶ ನೀಡದೇ ದ್ವಿಪಕ್ಷೀಯ ಒಪ್ಪಂದ ಉಲ್ಲಂಘಿಸಿದೆ. ಅಲ್ಲದೆ ಈವರೆಗೆ ಪಾಕಿಸ್ತಾನ ಜಾಧವ್ ವಿರುದ್ಧದ ದಾಖಲೆಗಳನ್ನೂ ನೀಡಿಲ್ಲ ಎಂದು ಭಾರತದ ಪರ ವಕೀಲ ಹರೀಶ್ ಸಾಳ್ವೆ ವಾದ ಮಂಡಿಸಿದ್ದಾರೆ.

    ಸೋಮವಾರ ಭಾರತ ವಾದ ಮಂಡಿಸಿದರೆ ಮಂಗಳವಾರ ಪಾಕಿಸ್ತಾನ ವಾದ ಮಂಡಿಸಲಿದೆ. ಬುಧವಾರ ಪಾಕ್ ಆರೋಪಗಳಿಗೆ ಭಾರತ ಉತ್ತರ ನೀಡಿದರೆ, ಗುರುವಾರ ಭಾರತದ ಆರೋಪಗಳಿಗೆ ಪಾಕ್ ಉತ್ತರ ನೀಡಲಿದೆ. ಎರಡು ಕಡೆಯ ವಾದವನ್ನು ಆಲಿಸಿದ ಕೋರ್ಟ್ ಈ ವರ್ಷದ ಬೇಸಗೆಯಲ್ಲಿ ಅಂತಿಮ ತೀರ್ಪು ಪ್ರಕಟಿಸಲಿದೆ.

    ಏನಿದು ಪ್ರಕರಣ?
    ಭಾರತದ ನೌಕಾಪಡೆ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಅವರನ್ನು ಬೇಹುಗಾರಿಕೆ ಆರೋಪದ ಮೇಲೆ ಪಾಕಿಸ್ತಾನದ ಭಯೋತ್ಪಾದನ ನಿಗ್ರಹ ದಳವು ಬಲೂಚಿಸ್ತಾನದಲ್ಲಿ 2016 ಮಾರ್ಚ್ 3ರಂದು ಬಂಧಿಸಿತ್ತು. ಭಾರತದ ಸಂಶೋಧನಾ ಮತ್ತು ವಿಶ್ಲೇಷಣಾ ದಳದ ಭಾತ್ಮಿದಾರನಾಗಿ ಕುಲಭೂಷಣ್ ಜಾಧವ್, ಹುಸೇನ್ ಮುಬಾರಕ್ ಪಟೇಲ್ ಹೆಸರಿನಲ್ಲಿ ಕೆಲಸ ಮಾಡುತ್ತಿದ್ದರೆಂಬ ಆರೋಪದ ಮೇಲೆ ಅವರನ್ನು ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯ ಜಾಧವ್‍ಗೆ 2017 ಏಪ್ರಿಲ್ 10ರಂದು ಮರಣದಂಡನೆ ಶಿಕ್ಷೆ ವಿಧಿಸಿತ್ತು. ಯಾವುದೇ ಸಾಕ್ಷಿ, ಆಧಾರಗಳಲಿಲ್ಲದೆ ಗಲ್ಲು ಶಿಕ್ಷೆ ವಿಧಿಸಿದ ಕ್ರಮವನ್ನು ಪ್ರಶ್ನಿಸಿ ಭಾರತ ಐಸಿಜೆ ಮೆಟ್ಟಿಲೇರಿತ್ತು. ಇದರಿಂದಾಗಿ ಐಸಿಜೆಯ 10 ಸದಸ್ಯರ ನ್ಯಾಯಪೀಠ ವಿಚಾರಣೆ ಅಂತ್ಯಗೊಳ್ಳುವವರೆಗೂ ಜಾಧವ್ ಮರಣದಂಡನೆಗೆ ತಡೆ ನೀಡಿ 2017 ಮೇ 18ರಂದು ಆದೇಶ ಹೊರಡಿಸಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv