Tag: ಅಂಡರ್-19 ವಿಶ್ವಕಪ್

  • 8 ಓವರ್‌ಗೆ 5 ರನ್ ನೀಡಿ, 4 ವಿಕೆಟ್ ಕಿತ್ತ ಬಿಷ್ಣೋಯ್- ಜಪಾನ್ ವಿರುದ್ಧ ಯುವ ಭಾರತಕ್ಕೆ 10 ವಿಕೆಟ್ ಗೆಲುವು

    8 ಓವರ್‌ಗೆ 5 ರನ್ ನೀಡಿ, 4 ವಿಕೆಟ್ ಕಿತ್ತ ಬಿಷ್ಣೋಯ್- ಜಪಾನ್ ವಿರುದ್ಧ ಯುವ ಭಾರತಕ್ಕೆ 10 ವಿಕೆಟ್ ಗೆಲುವು

    – 41 ರನ್‍ಗೆ ಜಪಾನ್ ಆಲೌಟ್
    – ಕೆಟ್ಟ ಇತಿಹಾಸ ಬರೆದ ಜಪಾನ್

    ಬ್ಲೂಮ್‍ಫಾಂಟೈನ್: ಸ್ಪಿನ್ನರ್ ರವಿ ಬಿಷ್ಣೋಯ್ ಹಾಗೂ ಕಾರ್ತಿಕ್ ತ್ಯಾಗಿ ಅದ್ಭುತ ಬೌಲಿಂಗ್‍ನಿಂದ ಜಪಾನ್ ವಿರುದ್ಧ ಯುವ ಭಾರತ ತಂಡವು 10 ವಿಕೆಟ್‍ಗಳ ಭರ್ಜರಿ ಗೆಲುವು ಸಾಧಿಸಿದೆ.

    ಅಂಡರ್-19 ವಿಶ್ವಕಪ್ ಟೂರ್ನಿಯ ಭಾಗವಾಗಿ ಬ್ಲೂಮ್‍ಫಾಂಟೈನ್‍ನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಭಾರತ ಜಪಾನ್ ತಂಡವನ್ನು 22.5 ಓವರ್‌ಗೆ ಆಲೌಟ್ ಮಾಡಿತು. ಜಪಾನ್ ನೀಡಿದ್ದ 41 ರನ್‍ಗಳ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಭಾರತ 4.5 ಓವರ್‌ನಲ್ಲೇ ಗೆದ್ದು ಬೀಗಿದೆ. ಈ ಮೂಲಕ ಟೂರ್ನಿಯಲ್ಲಿ ಯುವ ಭಾರತ ಸತತ ಎರಡನೇ ಪಂದ್ಯವನ್ನು ಗೆದ್ದುಕೊಂಡಿತು. ಇದನ್ನೂ ಓದಿ: ಧೋನಿಯಂತೆ ರಾಹುಲ್‍ಗೆ ಹೆಚ್ಚು ಅವಕಾಶ ಸಿಗಲಿ- ಕನ್ನಡಿಗನ ಬೆಂಬಲಕ್ಕೆ ನಿಂತ ವೀರು

    ಮೊದಲ ಬಾರಿಗೆ ವಿಶ್ವಕಪ್ ಆಡುತ್ತಿರುವ ಜಪಾನ್‍ನ ಇಡೀ ತಂಡವು ಕೇವಲ 41 ರನ್‍ಗಳಿಗೆ ಆಲೌಟ್ ಆಗಿತ್ತು. ಇದು ಪಂದ್ಯಾವಳಿಯ ಇತಿಹಾಸದಲ್ಲಿ ಎರಡನೇ ಅತಿ ಕಡಿಮೆ ಸ್ಕೋರ್ ಆಗಿದೆ. ಜಪಾನ್ ತಂಡದ ಶು ನಾಗೋಚಿ, ಕೆಕೆ ದೊಬೆಲ್ ತಲಾ 7 ರನ್ ಹಾಗೂ ಎಂ.ಕ್ಲೆಮೆಂಟ್ಸ್ 5 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಉಳಿದಂತೆ ಮೂರು ಆಟಗಾರರು ತಲಾ ಒಂದು ರನ್ ಗಳಿಸಿ ವಿಕೆಟ್ ಕಳೆದುಕೊಂಡರೆ, 5 ಜನ ಆಟಗಾರರು ಶೂನ್ಯಕ್ಕೆ ವಿಕೆಟ್ ಕಳೆದುಕೊಂಡು ಪೆವಿಲಿಯನ್‍ಗೆ ಪರೇಡ್ ನಡೆಸಿದರು. ಇದನ್ನೂ ಓದಿ:  ಗಂಟೆಗೆ 175 ಕಿ.ಮೀ ವೇಗದಲ್ಲಿ ಲಂಕಾ ವೇಗಿಯಿಂದ ಬೌಲಿಂಗ್ – ವಿಡಿಯೋ ನೋಡಿ

    ಬಿಷ್ಣೋಯ್, ಕಾರ್ತಿಕ್ ಕಮಾಲ್:
    ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಜಪಾನ್ ಕಳಪೆ ಆರಂಭವನ್ನು ತೋರಿತು. 20 ರನ್‍ಗಳ ಒಳಗೆ ಅವರ ಐದು ವಿಕೆಟ್‍ಗಳು ಕಳೆದುಕೊಂಡಿತು. ಯುವ ಭಾರತ ತಂಡದ ಸ್ಪಿನ್ನರ್ ರವಿ ಬಿಷ್ಣೋಯ್ 8 ಓವರ್ ಬೌಲಿಂಗ್ ಮಾಡಿ, ಕೇವಲ 5 ರನ್ ನೀಡಿ 4 ವಿಕೆಟ್ ಪಡೆದರು. ಈ ಮೂಲಕ ಪಂದ್ಯಶ್ರೇಷ್ಠಕ್ಕೆ ಭಾಜನರಾದರು. ಇತ್ತ ವೇಗದ ಬೌಲರ್ ಗಳಾದ ಕಾರ್ತಿಕ್ ತ್ಯಾಗಿ ಮೂರು ವಿಕೆಟ್ ಮತ್ತು ಆಕಾಶ್ ಸಿಂಗ್ ಎರಡು ವಿಕೆಟ್ ಪಡೆದರು.

    ಯುವ ಭಾರತದ ಬೌಲರ್ ಗಳ ದಾಳಿ ಎದುರು ಜಪಾನ್ ತಂಡದ ಐದು ಬ್ಯಾಟ್ಸ್‍ಮನ್‍ಗಳಿಗೆ ಖಾತೆ ತೆರೆಯಲು ವಿಫಲರಾದರು. ಅಷ್ಟೇ ಅಲ್ಲದೆ ಒಬ್ಬ ಬ್ಯಾಟ್ಸ್‍ಮನ್ ಹತ್ತು ರನ್ ದಾಟಲು ಸಾಧ್ಯವಾಗಲಿಲ್ಲ.

    ಜಪಾನ್ ತಂಡ ನೀಡಿದ್ದ ಸಾಧಾರಣ ಗುರಿ ಬೆನ್ನಟ್ಟಿದ ಭಾರತ ತಂಡವು ಯಾವುದೇ ವಿಕೆಟ್ ಕಳೆದುಕೊಳ್ಳದೆ 4.5 ಓವರ್ ನಲ್ಲಿ 42 ರನ್ ಗಳಿಸಿತು. ಯಶಸ್ವಿ ಜೈಸ್ವಾಲ್ 29 ರನ್ (18 ಎಸೆತ, 5 ಬೌಂಡರಿ, ಸಿಕ್ಸ್) ಮತ್ತು ಕುಮಾರ್ ಕುಶಾಗ್ರಾ 13 ರನ್ (11 ಎಸೆತ, ಎರಡು ಬೌಂಡರಿ) ಗಳಿಸಿದರು.

    ಈ ಹಿಂದಿನ ಪಂದ್ಯದಲ್ಲಿ ಯುವ ಭಾರತವು ಶ್ರೀಲಂಕಾವನ್ನು 90 ರನ್‍ಗಳಿಂದ ಸೋಲಿಸಿತ್ತು. ಭಾರತದ ಮೂರನೇ ಲೀಗ್ ಪಂದ್ಯ ಜನವರಿ 24ರಂದು ನ್ಯೂಜಿಲೆಂಡ್ ವಿರುದ್ಧ ನಡೆಯಲಿದೆ.

  • ಗಂಟೆಗೆ 175 ಕಿ.ಮೀ ವೇಗದಲ್ಲಿ ಲಂಕಾ ವೇಗಿಯಿಂದ ಬೌಲಿಂಗ್ – ವಿಡಿಯೋ ನೋಡಿ

    ಗಂಟೆಗೆ 175 ಕಿ.ಮೀ ವೇಗದಲ್ಲಿ ಲಂಕಾ ವೇಗಿಯಿಂದ ಬೌಲಿಂಗ್ – ವಿಡಿಯೋ ನೋಡಿ

    ಬ್ಲೂಮ್‍ಫಾಂಟೈನ್: ಶ್ರೀಲಂಕಾ ದೇಶದ ಅಂಡರ್ 19 ತಂಡದ ಬೌಲರ್ ಮತೀಶಾ ಪತಿರಣ ಕಿರಿಯರ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ವಿರುದ್ಧದ ಪಂದ್ಯದಲ್ಲಿ ಗಂಟೆಗೆ 175 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಆದರೆ ಈ ಸಾಧನೆಯ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ.

    ಕಿರಿಯರ ವಿಶ್ವಕಪ್ ಟೂರ್ನಿಯಲ್ಲಿ ಬ್ಲೂಮ್‍ಫಾಂಟೈನ್‍ನಲ್ಲಿ ನಡೆದ ಭಾರತ ತಂಡದ ಎದುರಿನ ‘ಎ’ ಗುಂಪಿನ ಲೀಗ್ ಪಂದ್ಯದ ವೇಳೆ ಮತೀಶಾ ಪತಿರಣ ಈ ಸಾಧನೆ ಮಾಡಿದ್ದಾರೆ.

    https://twitter.com/GOATKingKohli/status/1219214778050072576

    ಭಾರತದ ಇನಿಂಗ್ಸ್ ನ 4ನೇ ಓವರ್ ಬೌಲಿಂಗ್ ಮಾಡಿದ ಪತಿರಣ ಕೊನೆಯ ಎಸೆತವನ್ನು ಭಾರೀ ವೇಗದಲ್ಲಿ ಎಸೆದರು. ಸ್ಟ್ರೈಕ್‍ನಲ್ಲಿ ಇದ್ದ ಯಶಸ್ವಿ ಜೈಸ್ವಾಲ್ ಎದುರು ಪತಿರಣ ಎಸೆದ ಬೌನ್ಸರ್ ಲೆಗ್‍ಸೈಟ್ ಕಡೆಗೆ ವೈಡ್ ಆಗಿತ್ತು. ಆದರೆ ಟೆಲಿವಿಷನ್ ಪರದೆ ಮೇಲೆ ಪತಿರಣ ಎಸೆದ ಆ ಎಸೆತದ ವೇಗವನ್ನು ಗಂಟೆಗೆ 175 ಕಿ.ಮೀ ವೇಗ ಹೊಂದಿದೆ ಎಂದು ಪ್ರದರ್ಶಿಸಲಾಯಿತು.

    ಆದರೆ ಕೆಲವರು ಈ ದಾಖಲೆಯನ್ನು ಅಲ್ಲಗಳೆದಿದ್ದಾರೆ. ಏಕೆಂದರೆ ಪತಿರಣ ಅವರು ಅದೇ ಓವರ್ ನಲ್ಲಿ ಎಸೆದ ಉಳಿದ ಐದು ಎಸೆತಗಳು ಹೆಚ್ಚು-ಕಡಿಮೆ ಗಂಟೆಗೆ 140 ಕಿ.ಮೀ. ವೇಗದಲ್ಲಿತ್ತು. ಹೀಗಾಗಿ ರೆಕಾರ್ಡಿಂಗ್‍ನಲ್ಲಿ ದೋಷವಿದೆ ಎಂದು ತಿಳಿದುಬಂದಿದೆ. ಆದ್ದರಿಂದ ಅತಿ ವೇಗದ ಬೌಲಿಂಗ್ ದಾಖಲೆ ಶೋಯೆಬ್ ಅಖ್ತರ್ ಅವರ ಹೆಸರಿನಲ್ಲಿ ಉಳಿದಿದೆ.

    ಶ್ರೀಲಂಕಾ ತಂಡದ ನಾಯಕ, ವೇಗದ ಬೌಲರ್ ಲಸಿತ್ ಮಾಲಿಂಗ ಅವರ ಶೈಲಿಯಲ್ಲೇ ಪತಿರಣ ಬೌಲಿಂಗ್ ಮಾಡುತ್ತಿದ್ದಾರೆ. ಈ ಹಿಂದೆಯೂ ಅವರು ಭಾರೀ ಸುದ್ದಿಯಾಗಿದ್ದರು. ಪತಿರಣ ಅವರು 2019ರ ಸೆಪ್ಟೆಂಬರ್ ನಲ್ಲಿ ಕಾಲೇಜು ಮಟ್ಟದ ಟೂರ್ನಿಯೊಂದರಲ್ಲಿ ಕೇವಲ 7 ರನ್ ನೀಡಿ 6 ವಿಕೆಟ್‍ಗಳನ್ನು ಕಬಳಿಸಿದ್ದರು. ಅವರ ಈ ಸಾಧನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

    ಅಖ್ತರ್ ಹೆಸರಲ್ಲಿದೆ ವಿಶ್ವದಾಖಲೆ:
    ಕ್ರಿಕೆಟ್ ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಬೌಲ್ ಮಾಡಿದ ವಿಶ್ವ ದಾಖಲೆ ಪಾಕಿಸ್ತಾನದ ಮಾಜಿ ವೇಗಿ ಶೊಯೇಬ್ ಅಖ್ತರ್ ಅವರ ಹೆಸರಲ್ಲಿದೆ. ಅಖ್ತರ್ 2003ರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಗಂಟೆಗೆ 161.3 ಕಿ.ಮೀ ವೇಗದಲ್ಲಿ ಬೌಲ್ ಮಾಡಿದ್ದರು. ಅಕ್ತರ್ ಹೊರತಾಗಿ ಆಸ್ಟ್ರೇಲಿಯಾದ ವೇಗಿಗಳಾದ ಬ್ರೆಟ್ ಲೀ ಮತ್ತು ಶಾನ್ ಟೈಟ್ ಕೂಡ 160 ಕಿ.ಮೀ ವೇಗದ ಗಡಿ ಮುಟ್ಟಿದ್ದಾರೆ. ಭಾರತದ ಪರ ಜಸ್‍ಪ್ರೀತ್ ಬುಮ್ರಾ 153 ಕಿ.ಮೀ ವೇಗದಲ್ಲಿ ಬೌಲ್ ಮಾಡಿರುವುದು ದಾಖಲೆಯಾಗಿದೆ.

  • ಟೀಂ ಇಂಡಿಯಾ ಅಂಡರ್ 19 ತಂಡಕ್ಕೆ ನನ್ನ ಸಮಯ ಮೀಸಲು ಎಂದಿದ್ದ ದ್ರಾವಿಡ್

    ಟೀಂ ಇಂಡಿಯಾ ಅಂಡರ್ 19 ತಂಡಕ್ಕೆ ನನ್ನ ಸಮಯ ಮೀಸಲು ಎಂದಿದ್ದ ದ್ರಾವಿಡ್

    ಮುಂಬೈ: ಐಪಿಎಲ್ ಹಾಗೂ ಅಂಡರ್ 19 ತಂಡ ಎರಡು ಆಯ್ಕೆಗಳನ್ನು ರಾಹುಲ್ ದ್ರಾವಿಡ್ ಅವರ ಮುಂದಿಟ್ಟಾಗ ಅವರು ಟೀಂ ಇಂಡಿಯಾವನ್ನು ಆಯ್ಕೆ ಮಾಡಿಕೊಂಡಿದ್ದರು ಎಂದು ಬಿಸಿಸಿಐ ಆಡಳಿತ ಮಂಡಳಿ ಮುಖ್ಯಸ್ಥ ವಿನೋದ್ ರಾಯ್ ಹೇಳಿದ್ದಾರೆ.

    ಖಾಸಗಿ ವಾಹಿನಿಯ ಸಂರ್ದನದ ವೇಳೆ ಈ ಕುರಿತು ಮಾತನಾಡಿರುವ ಅವರು, ಕಳೆದ ವರ್ಷದ ಐಪಿಎಲ್ ವೇಳೆ ರಾಹುಲ್ ದ್ರಾವಿಡ್ ಅವರಿಗೆ ಬಿಸಿಸಿಐ ಮಾಜಿ ಆಡಳಿತ ಮಂಡಳಿ (ಸಿಒಎ) ಸದಸ್ಯ ರಾಮಚಂದ್ರ ಗುಹಾ ಅವರು ಐಪಿಎಲ್, ಟೀಂ ಇಂಡಿಯಾ `ಎ’ ಹಾಗೂ ಇದೇ ವೇಳೆ ಅಂಡರ್ 19 ತಂಡದ ಆಯ್ಕೆಗಳನ್ನು ಮುಂದಿಟ್ಟಿದ್ದರು. ಈ ವೇಳೆ ರಾಹುಲ್ ದ್ರಾವಿಡ್ ತಮ್ಮ ಸಮಯವನ್ನು ಟೀಂ ಇಂಡಿಯಾಗೆ ನೀಡುವುದಾಗಿ ಹೇಳಿ ಒಂದು ವರ್ಷದ ಒಪ್ಪಂದಕ್ಕೆ ಸಹಿ ಮಾಡಿದ್ದಾಗಿ ತಿಳಿಸಿದ್ದಾರೆ.

    2016 ಮತ್ತು 2017 ರ ಐಪಿಎಲ್‍ನಲ್ಲಿ ರಾಹುಲ್ ದ್ರಾವಿಡ್ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಮೆಂಟರ್ ಆಗಿ ಕಾರ್ಯನಿರ್ವಹಿಸಿದ್ದರು. ಬಳಿಕ 2018 ರ ಆವೃತ್ತಿಗೆ ಆಸೀಸ್ ಮಾಜಿ ಆಟಗಾರ ರಿಕ್ಕಿ ಪಾಟಿಂಗ್ ಮೆಂಟರ್ ಆಗಿ ಆಯ್ಕೆ ಮಾಡಿಕೊಳ್ಳಲಾಗಿತ್ತು. ಈ ವೇಳೆ ಕೇವಲ ರಾಹುಲ್ ದ್ರಾವಿಡ್ ಮಾತ್ರವಲ್ಲದೇ ಇತರೇ ಕೋಚ್‍ಗಳಿಗೂ ಇದೇ ಆಯ್ಕೆಗಳನ್ನು ನೀಡಲಾಗಿತ್ತು. ಉದಾಹರಣೆಗೆ ಭರತ ಅರುಣ್, ಶಂಕರ್ ಬಸು, ಪ್ಯಾಟ್ರಿಕ್ ಫಾರ್ಹಟ್ ಸೇರಿದಂತೆ ಹಲವರು ಬಿಸಿಸಿಐ ಕೋಚ್ ಆಗಿ ಮುಂದುವರಿಯಲು ಐಪಿಎಲ್ ನಲ್ಲಿ ಸ್ಥಾನ ತೊರೆದಿದ್ದರು.

    ಪ್ರಮುಖವಾಗಿ ಬಿಸಿಸಿಐ ಜೂನಿಯರ್ ತಂಡದ ಆಯ್ಕೆ ಸಮಿತಿ ಸದಸ್ಯರಾಗಿದ್ದ ವೆಂಕಟೇಶ್ ಪ್ರಸಾದ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಬೌಲಿಂಗ್ ಕೋಚ್ ಆಗಲು ತಮ್ಮ ಸ್ಥಾನ ತೊರೆದಿದ್ದರು. ಅಲ್ಲದೇ ಟೀಂ ಇಂಡಿಯಾ ಮುಖ್ಯ ಕೋಚ್ ರವಿಶಾಸ್ತ್ರಿ ಅವರು ಸಹ ಐಪಿಎಲ್ ತೊರೆದು ಬಿಸಿಸಿಐ ನಿಯಮಗಳನ್ನು ಪಾಲನೆ ಮಾಡಿದ್ದರು.

    ನಿಯಮ ಏನು ಹೇಳುತ್ತೆ: ಬಿಸಿಸಿಐ ಸಂಸ್ಥೆಯಲ್ಲಿ ಲೋಧಾ ಸಮಿತಿ ನೀಡಿದ್ದ ಸಲಹೆಗಳನ್ನು ಜಾರಿಗೆ ತರಲು ಸುಪ್ರೀಂ ಕೋರ್ಟ್ ಬಿಸಿಸಿಐಗೆ ಆಡಳಿತ ಮಂಡಳಿಯನ್ನು ನೇಮಕ ಮಾಡಿತ್ತು. ಲೋಧಾ ಸಮಿತಿ ಶಿಫಾರಸ್ಸಿನ ಅನ್ವಯ ಬಿಸಿಸಿಐ ನಲ್ಲಿ ಕಾರ್ಯನಿರ್ವಹಿಸುವವರು ಏಕಕಾಲದಲ್ಲಿ ಎರಡು ಹುದ್ದೆ ನಿರ್ವಹಿಸುವಂತಿಲ್ಲ. ಇದರಂತೆ ಅಂದು ಟೀಂ ಇಂಡಿಯಾ ಮುಖ್ಯ ಕೋಚ್ ಆಗಿದ್ದ ರವಿಶಾಸ್ತ್ರಿ ಹಾಗೂ ಅಂಡರ್ 19 ತಂಡದ ಕೋಚ್ ಆಗಿದ್ದ ದ್ರಾವಿಡ್ ಐಪಿಎಲ್ ಮೆಂಟರ್ ಹುದ್ದೆಗಳನ್ನು ತೊರೆದಿದ್ದರು.

  • ಯುವಿಪಾಜಿ ನನಗೆ ತುಂಬಾ ಸಹಾಯ ಮಾಡಿದ್ದಾರೆ: ಶುಬ್‍ಮನ್ ಗಿಲ್

    ಯುವಿಪಾಜಿ ನನಗೆ ತುಂಬಾ ಸಹಾಯ ಮಾಡಿದ್ದಾರೆ: ಶುಬ್‍ಮನ್ ಗಿಲ್

    ಬೆಂಗಳೂರು: ಯುವರಾಜ್ ಸಿಂಗ್ ನೀಡಿದ ಮಾರ್ಗದರ್ಶನದಿಂದಾಗಿ ನಾನು ಬ್ಯಾಟಿಂಗ್ ನಲ್ಲಿ ಉತ್ತಮ ಪ್ರದರ್ಶನ ನೀಡಲು ನೆರವಾಯಿತು ಎಂದು ಶುಬ್‍ಮನ್ ಗಿಲ್ ಹೇಳಿದ್ದಾರೆ.

    ಐಸಿಸಿ ಅಂಡರ್ 19 ವಿಶ್ವಕಪ್‍ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಗಿಲ್ ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ, ನಾನು ಬೆಂಗಳೂರು ರಾಷ್ಟ್ರೀಯ ಕ್ರಿಕೆಟ್ ಆಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದ ವೇಳೆ ಯುವಿ ಪಾಜಿ ತನಗೆ ಬ್ಯಾಟಿಂಗ್ ಮಾರ್ಗದರ್ಶನ ನೀಡಿದ್ದರು ಎಂದು ತಿಳಿಸಿದ್ದಾರೆ.

    ಯುವಿ ಪಾಜಿ ಹಲವು ಬಾರಿ ನನ್ನ ಜೊತೆ ಬ್ಯಾಟಿಂಗ್ ಮಾಡಿದ್ದಾರೆ. ಅಲ್ಲದೇ ಮೈದಾನದ ಹೊರಗೆ ಹಾಗೂ ಒಳಗೆ ಹೇಗೆ ಇರಬೇಕೆಂಬ ಸಲಹೆಗಳನ್ನು ನೀಡಿದ್ದರು ಎಂದು ತಿಳಿಸಿದರು.

    ಇದೇ ವೇಳೆ ಪಾಕಿಸ್ತಾನದ ವಿರುದ್ಧದ ಪಂದ್ಯದ ಕುರಿತು ಮಾತನಾಡಿದ ಶುಬ್‍ಮನ್‍ಗಿಲ್, ಈ ವೇಳೆ ಹೆಚ್ಚು ಒತ್ತಡ ಇತ್ತು. ಆದರೆ ಕೋಚ್ ರಾಹುಲ್ ದ್ರಾವಿಡ್ ಅವರು ತನಗೆ ಪಂದ್ಯದ ಕೊನೆವರೆಗೂ ಬ್ಯಾಟಿಂಗ್ ನಡೆಸಲು ಸಲಹೆ ನೀಡಿದ್ದರು ಎಂದು ತಿಳಿಸಿದರು.

    ಬಾಂಗ್ಲಾ ವಿರುದ್ಧದ ಪಂದ್ಯದ ನಂತರ ನಾನು ಕೋಲ್ಕತ್ತಾ ತಂಡದ ಪರ ಐಪಿಎಲ್ ಗೆ ಆಯ್ಕೆ ಆಗಿರುವ ಕುರಿತು ಮಾಹಿತಿ ಲಭಿಸಿತು. ಹರಾಜು ಪ್ರಕ್ರಿಯೆ ನಡೆಯುತ್ತಿದ್ದರೂ ಐಪಿಎಲ್ ಕುರಿತು ಗಮನಹರಿಸದೇ ವಿಶ್ವಕಪ್ ಗೆಲ್ಲುವ ಬಗ್ಗೆ ಜಾಸ್ತಿ ಗಮನ ಹರಿಸಿದೆವು ಎಂದರು.

    ನಮಗೆ ಅತ್ಯಂತ ಕೆಟ್ಟ ಪಿಚ್ ನಲ್ಲೂ ಉತ್ತಮ ಪ್ರದರ್ಶನ ನೀಡುವ ಹಾಗೇ ತರಬೇತಿ ನೀಡಲಾಗಿತ್ತು. ಆದರೆ ರಣಜಿ ಪಂದ್ಯಗಳಿಗೂ ವಿಶ್ವಕಪ್ ತರಬೇತಿಗೂ ಹೆಚ್ಚು ವ್ಯತ್ಯಾಸವಿದೆ. ವಿಶ್ವಕಪ್ ನಲ್ಲಿ ನಾವು ಮೊದಲ ಸ್ಥಾನದಲ್ಲಿ ಇದ್ದರೆ ಮಾತ್ರ ಕಪ್ ಗೆಲ್ಲಲು ಸಾಧ್ಯ. ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದ ಗೆಲುವಿನ ನಂತರ ನಮಗೆ ಕಪ್ ಗೆಲ್ಲುವ ಆತ್ಮ ವಿಶ್ವಾಸ ಹೆಚ್ಚಾಯಿತು ಎಂದು ತಿಳಿಸಿದರು.  . ಇದನ್ನೂ ಓದಿ: ವಿಂಡೀಸ್ ವಿರುದ್ಧದ ಎರಡನೇ ಏಕದಿನದಲ್ಲಿ ಯುವರಾಜ್ ಎಡವಟ್ಟು!

    ಐಸಿಸಿ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಶತಕ ಗಳಿಸದ ಗಿಲ್ ಬಲಗೈ ಬ್ಯಾಟ್ಸ್ ಮನ್ ಆಗಿದ್ದು, ಟೂರ್ನಿಯಲ್ಲಿ ಮೂರು ಅರ್ಧ ಶತಕ ಮತ್ತು ಒಂದು ಶತಕ ಸಿಡಿಸಿದ್ದಾರೆ. 6 ಪಂದ್ಯಗಳ 5 ಇನ್ನಿಂಗ್ಸ್ ಆಡಿರುವ ಶುಬ್‍ಮನ್ ಗಿಲ್ 114.24 ಸ್ಟ್ರೈಕ್ ರೇಟ್ ನೊಂದಿಗೆ ಒಟ್ಟು 372 ರನ್ ಹೊಡೆಯುವ ಮೂಲಕ ಅತಿ ಹೆಚ್ಚು ರನ್ ಗಳಿಸಿದ ಟಾಪ್ 10 ಆಟಗಾರರ ಪೈಕಿ 2ನೇ ಸ್ಥಾನಗಳಿಸಿದ್ದಾರೆ.

    ವಿಶ್ವಕಪ್ ಟೂರ್ನಿಯಲ್ಲಿ ನೀಡಿದ ಉತ್ತಮ ಪ್ರದರ್ಶನ ಗಮನಿಸಿದ ಕೋಲ್ಕತ್ತ ನೈಟ್ ರೈಡರ್ಸ್ ತಂಡ ಶುಬ್‍ಮನ್ ಗಿಲ್ ಅವರನ್ನು ಈ ಬಾರಿ ತಮ್ಮ ತಂಡಕ್ಕೆ ಸೆಳೆದುಕೊಂಡಿದೆ. ಗಿಲ್ ದೇಶಿಯ ರಣಜಿಯಲ್ಲಿ ಟೂರ್ನಿಗಳಲ್ಲಿ ಪಂಜಾಬ್ ಪರ ಆಡಿದ್ದಾರೆ. ಇದನ್ನೂ ಓದಿ: ಕೊಹ್ಲಿ ಶಾಟ್ ರೀಕ್ರಿಯೇಟ್ – ಅಂಡರ್ 19 ಆಟಗಾರ ಶುಬ್‍ಮನ್ ಗಿಲ್ ಸಿಕ್ಸರ್ ನೋಡಿ 

     

  • ಅಂಡರ್-19 ವಿಶ್ವಕಪ್ ಫೈನಲ್ ಗೆ ಆಸ್ಟ್ರೇಲಿಯಾ

    ಅಂಡರ್-19 ವಿಶ್ವಕಪ್ ಫೈನಲ್ ಗೆ ಆಸ್ಟ್ರೇಲಿಯಾ

    ಕ್ರೈಸ್ಟ್ ಚರ್ಚ್ : ಪ್ರಬಲ ಅಫ್ಘಾನಿಸ್ತಾನದ ಸವಾಲನ್ನು ದಿಟ್ಟವಾಗಿ ಮೆಟ್ಟಿನಿಂತ ಆಸ್ಟ್ರೇಲಿಯಾ ತಂಡ ಅಂಡರ್-19 ವಿಶ್ವಕಪ್ ಟೂರ್ನಿಯ ಫೈನಲ್‍ಗೆ ಲಗ್ಗೆ ಇಟ್ಟಿದೆ. ಹೇಗ್ಲಿ ಓವಲ್ ಮೈದಾನದಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ನಿರಾಯಾಸವಾಗಿ ಅಫ್ಘನ್ನರನ್ನು ಮಣಿಸಿ ಪ್ರಶಸ್ತಿ ಪಂದ್ಯಕ್ಕೆ ಮುನ್ನಡೆದಿದೆ.

    ಟಾಸ್ ಗೆದ್ದು ಬ್ಯಾಟಿಂಗ್‍ಗೆ ಇಳಿದ ನವೀಮ್ ಉಲ್ ಹಖ್ ನೇತ್ರತ್ವದ ಅಫ್ಘಾನಿಸ್ತಾನ ಆಸೀಸ್ ಬಿಗು ಬೌಲಿಂಗ್ ದಾಳಿ ಎದುರು ಪೆವಿಲಿಯನ್ ಪರೇಡ್ ನಡೆಸಿತು. 7 ಮಂದಿ ಬ್ಯಾಟ್ಸ್‍ಮನ್ ಗಳು ಎರಡಂಕಿಯ ಮೊತ್ತವನ್ನೂ ದಾಟಲಾಗದೆ ಪೆವಿಲಿಯನ್ ಸೇರಿದರು.

    ನಾಯಕ ನವೀಮ್ ಕೊಡುಗೆ ಕೇವಲ 8 ರನ್. ಆದರೆ ಒಂದು ಕಡೆ ಬ್ಯಾಟ್ಸ್‍ಮನ್ ಗಳು ಕ್ರೀಸ್ ಗೆ ಬಂದಷ್ಟೇ ವೇಗದಲ್ಲಿ ಮರಳುತ್ತಿದ್ದರೂ ಮತ್ತೊಂದು ಕಡೆಯಲ್ಲಿ ಬಂಡೆಯಂತೆ ನಿಂತ ವಿಕೆಟ್ ಕೀಪರ್ ಇಕ್ರಾಮ್ ಅಲಿ ಆಸ್ಟ್ರೇಲಿಯಾ ಬೌಲರ್‍ಗಳ ಬೆವರಿಳಿಸಿದರು. 119 ಎಸೆತಗಳನ್ನು ಎದುರಿಸಿದ ಅಲಿ, 8 ಬೌಂಡರಿಗಳ ನೆರವಿನೊಂದಿಗೆ 80 ರನ್ ಗಳಿಸಿ ಅಫ್ಘಾನಿಸ್ತಾನದ ಮಾನ ಕಾಪಾಡಿದರು.

    ಮೂರನೇ ಕ್ರಮಾಂಕದಲ್ಲಿ ಕ್ರೀಸ್ ಗೆ ಇಳಿದ ಅಲಿ, ಧೃತಿಗೆಡದೆ ದಿಟ್ಟ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ತಂಡದ ಮೊತ್ತ 150ರ ಗಡಿ ದಾಟಿಸಿದರು. ಅಲಿ ವಿಕೆಟ್ ಪತನವಾಗುತ್ತಲೇ ಆಸೀಸ್ ಹಾದಿ ಸುಗಮವಾಯಿತು. ಅಂತಿಮವಾಗಿ 48 ಓವರ್‍ಗಳಲ್ಲಿ ಅಫ್ಘಾನಿಸ್ತಾನ 181 ರನ್‍ಗಳಿಗೆ ಆಲೌಟ್ ಆಯಿತು.

    ಆಸ್ಟ್ರೇಲಿಯಾ ಪರ ಬಿಗು ಬೌಲಿಂಗ್ ದಾಳಿ ಸಂಘಟಿಸಿದ ಜೊನಾಥನ್ ಮರ್ಲೋ 10 ಓವರ್‍ಗಳಲ್ಲಿ ಕೇವಲ 24ರನ್ ನೀಡಿ 4 ವಿಕೆಟ್ ಪಡೆದು ಮಿಂಚಿದರು. ಇದರಲ್ಲಿ 2 ಓವರ್ ಮೇಡನ್ ಆಗಿತ್ತು. ಉಳಿದಂತೆ ಕಾಕ್ ಇವಾನ್ಸ್ 2 ಹಾಗೂ ನಾಲ್ಬರು ಬೌಲರ್‍ಗಳು ತಲಾ 1 ವಿಕೆಟ್ ಪಡೆದರು.

    ಸುಲಭ ಗುರಿಯನ್ನು ಬೆನ್ನಟ್ಟುವ ವೇಳೆ ಆಸ್ಟ್ರೇಲಿಯಾ ಯಾವುದೇ ಹಂತದಲ್ಲೂ ಆಕ್ರಮಣಕಾರಿ ಆಟಕ್ಕೆ ಮುಂದಾಗಲಿಲ್ಲ. ಇನ್ನಿಂಗ್ಸ್ ಆರಂಭಿಸಿದ ಜಾಕ್ ಎಡ್ವರ್ಡ್ 65 ಎಸೆತಗಳ ಮುಂದೆ 8 ಬೌಂಡರಿ ಹಾಗೂ 2 ಭರ್ಜರಿ ಸಿಕ್ಸರ್ ಗಳ ನೆರವಿನೊಂದಿಗೆ 72 ರನ್ ಗಳಿಸಿ ಖೈಸ್ ಅಹ್ಮದ್ ಗೆ ವಿಕೆಟ್ ಒಪ್ಪಿಸಿದರು. ನಾಯಕ ಜೇಸನ್ ಸಂಘ 26 ರನ್‍ಗಳಿಗೆ ವಾಪಸ್ಸಾದರು. ಬೌಲಿಂಗ್ ನಲ್ಲಿ ಮಿಂಚಿದ್ದ ಮೆರ್ಲೋ 17 ರನ್ ಗಳಿಸಿದರು. ಆದರೆ 5ನೇ ವಿಕೆಟ್ ಗೆ ಜೊತೆಯಾದ ಪರಂ ಉಪ್ಪಳ ಹಾಗೂ ಮೆಕ್’ಸ್ವೀನಿ ತಂಡಕ್ಕೆ ಹೆಚ್ಚಿನ ಹಾನಿಯಾಗದಂತೆ ಎಚ್ಚರಿಕೆಯಿಂದ ಬ್ಯಾಟಿಂಗ್ ನಡೆಸಿ 53 ರನ್‍ಗಳ ಜೊತೆಯಾಟದ ಮೂಲಕ ತಂಡವನ್ನು ಜಯದ ಗಡಿ ದಾಟಿಸಿದರು.

    ಉಪ್ಪಳ್ 32 ರನ್ ಗಳಿಸಿದರೆ, ಮೆಕ್’ಸ್ವೀನಿ 22 ರನ್‍ಗಳಿಸಿ ಅಜೇಯರಾಗುಳಿದರು. ಅಂತಿಮವಾಗಿ 37.3 ಓವರ್‍ಗಳಲ್ಲಿ 4 ವಿಕೆಟ್ ನಷ್ಟದಲ್ಲಿ ಗೆಲುವಿನ ಗುರಿ ತಲುಪಿದ ಆಸ್ಟ್ರೇಲಿಯಾ, ಶನಿವಾರದಂದು ನಡೆಯುವ ಫೈನಲ್’ಗೆ ಟಿಕೆಟ್ ಪಡೆಯಿತು. ನಾಳೆ ನಡೆಯಲಿರುವ ಮತ್ತೊಂದು ಸೆಮಿಫೈನಲ್ ನಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿದೆ.