Tag: ಅಂಡಮಾನ್

  • ವಿಶ್ವದಲ್ಲಿ 8, ಏಷ್ಯಾದಲ್ಲಿ ನಂಬರ್ ಒನ್ ಆಗಿದೆ ಭಾರತದ ಈ ಬೀಚ್

    ವಿಶ್ವದಲ್ಲಿ 8, ಏಷ್ಯಾದಲ್ಲಿ ನಂಬರ್ ಒನ್ ಆಗಿದೆ ಭಾರತದ ಈ ಬೀಚ್

    ಮುಂಬೈ: ಕೇಂದ್ರಾಡಳಿತ ಪ್ರದೇಶವಾದ ಅಂಡಮಾನ್ ನಿಕೋಬಾರ್ ದ್ವೀಪದಲ್ಲಿರುವ ರಾಧಾನಗರ್ ಬೀಚ್ ವಿಶ್ವದಲ್ಲೇ 8ನೇ ಸುಂದರ ಬೀಚ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

    ಅಮೆರಿಕದ ಪ್ರವಾಸಿ ವೆಬ್‍ಸೈಟ್ ಟ್ರಿಪ್ ಅಡ್ವೈಸರ್ ವಿಶ್ವದ 343 ಬೀಚ್‍ಗಳನ್ನು ಗುರುತಿಸಿ ಶ್ರೇಯಾಂಕ ನೀಡಿದೆ. ಈ ಪಟ್ಟಿಯಲ್ಲಿ ರಾಧಾನಗರ್ ಬೀಚ್‍ಗೆ ವಿಶ್ವದಲ್ಲಿ 8ನೇ ಸ್ಥಾನ ಸಿಕ್ಕಿದೆ.

    ಏಷ್ಯಾ ಖಂಡಗಳ ಪಟ್ಟಿಯಲ್ಲಿ ಮೊದಲ ಸ್ಥಾನ ರಾಧಾನಗರ್ ಬೀಚ್‍ಗೆ ಸಿಕ್ಕಿದರೆ, ಐದನೇ ಸ್ಥಾನವನ್ನು ಗೋವಾ ಬೀಚ್ ಪಡೆದುಕೊಂಡಿದೆ.

    ಬ್ರೆಜಿಲ್‍ನ ಫೆರ್ನಾಂಡೋ ಡಿ ನೂರನ್ಹಾ ಬೀಚ್ ವಿಶ್ವದಲ್ಲೇ ಮೊದಲ ಸ್ಥಾನವನ್ನು ಪಡೆದುಕೊಂಡರೆ, ಫಿಲಿಪ್ಪೀನ್ಸ್ ವೈಟ್ ಬೀಚ್ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.

    12 ತಿಂಗಳ ಅವಧಿಯಲ್ಲಿ ಈ ಬೀಚ್‍ಗೆ ಭೇಟಿ ನೀಡಿದ ಪ್ರವಾಸಿಗರು ನೀಡಿದ ರೇಟಿಂಗ್ ಆಧಾರದಲ್ಲಿ ಟ್ರಿಪ್ ಅಡ್ವೈಸರ್ ಈ ಶ್ರೇಯಾಂಕ ನೀಡಿದೆ.

  • 150 ವರ್ಷಗಳ ಬಳಿಕ ದೇಶದ ಏಕೈಕ ಜ್ವಾಲಾಮುಖಿ ಸಕ್ರಿಯ

    150 ವರ್ಷಗಳ ಬಳಿಕ ದೇಶದ ಏಕೈಕ ಜ್ವಾಲಾಮುಖಿ ಸಕ್ರಿಯ

    ಪಣಜಿ: ವಿದೇಶದ ಕೆಲವು ದ್ವೀಪಗಳಲ್ಲಿ ಜ್ವಾಲಾಮುಖಿ ಸುದ್ದಿಗಳನ್ನು ನೀವು ಓದಿರಬಹುದು. ಆದರೆ ಈಗ ನಿಮಗೆಲ್ಲರಿಗೂ ಅಚ್ಚರಿ ಮೂಡಿಸುವ ಸುದ್ದಿ ಎನ್ನುವುಂತೆ 150 ವರ್ಷಗಳ ಬಳಿಕ ಭಾರತದ ಏಕೈಕ ಜ್ವಾಲಾಮುಖಿ ಸಕ್ರಿಯವಾಗಿದೆ ಎಂದು ತಜ್ಞರ ತಂಡವೊಂದು ತಿಳಿಸಿದೆ.

    ಹೌದು. ಕೇಂದ್ರಾಡಳಿತ ಪ್ರದೇಶವಾದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದಲ್ಲಿರುವ ದೇಶದ ಏಕೈಕ ಜ್ವಾಲಾಮುಖಿ ಸಕ್ರಿಯವಾಗಿದೆ ಎಂದು ಗೋವಾದಲ್ಲಿರುವ ರಾಷ್ಟ್ರೀಯ ಸಾಗರ ವಿಜ್ಞಾನ ಸಂಸ್ಥೆ ತನ್ನ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

    ಅಂಡಮಾನ್ ರಾಜಧಾನಿ ಪೋರ್ಟ್ ಬ್ಲೇರ್ ನಿಂದ 140 ಕಿ.ಮೀ ದೂರದಲ್ಲಿ ಈಶಾನ್ಯ ಭಾಗದಲ್ಲಿರುವ ಬಾರನ್ ದ್ವೀಪದಲ್ಲಿ ಈ ಜ್ವಾಲಾಮುಖಿ ಇದ್ದು, ಜನವರಿ ತಿಂಗಳಲ್ಲಿ ಲಾವಾರಸವನ್ನು ಉಗುಳಿದೆ.

    ಜ್ವಾಲಾಮುಖಿ ಇರುವ ಪ್ರದೇಶಕ್ಕೆ ಜನವರಿ 23ರಂದು ತಂಡ ತೆರಳಿ ಅಧ್ಯಯನ ನಡೆಸಿತ್ತು. ಈ ವೇಳೆ 4 ಗಂಟೆಗಳ ಕಾಲ ಲಾವಾ ರಸವನ್ನು ಉಗುಳಿದೆ ಎಂದು ತಜ್ಞರು ತಿಳಿಸಿದ್ದಾರೆ.

    ಜನವರಿ 26ರಂದು ತಂಡ ಎರಡನೇ ಬಾರಿ ದ್ವೀಪದ ಬಳಿ ತೆರಳಿದಾಗಲೂ ಕೆಂಪು ಲಾವಾ ರಸ ಉಗುಳುತ್ತಿರುವುದನ್ನು ನೋಡಿದೆ. ಹೀಗಾಗಿ ಜ್ವಾಲಾಮುಖಿ ಸ್ಫೋಟಗೊಳ್ಳಬಹುದು ಎನ್ನುವ ಆತಂಕವನ್ನು ಸಂಶೋಧಕರು ಹೊಂದಿದ್ದು, ಈಗ ಜ್ವಾಲಾಮುಖಿಯ ಬೂದಿಯನ್ನು ಅಧ್ಯಯನಕ್ಕಾಗಿ ಸಂಗ್ರಹಿಸಿದ್ದಾರೆ.

    ಸಂಶೋಧಕರು ಲಾವಾ ರಸ ಚಿಮ್ಮುತ್ತಿರುವ ಪ್ರದೇಶಕ್ಕೆ ಹೋಗಿಲ್ಲ. ಈ ಪ್ರದೇಶ ಅಪಾಯಕಾರಿಯಾಗಿರುವುದರಿಂದ ಒಂದು ಮೈಲಿ ದೂರದಿಂದ ಈ ಅಲ್ಲಿ ನಡೆಯುತ್ತಿರುವ ಬೆಳವಣಿಗೆಯನ್ನು ಗಮನಿಸಿ ಮಾಧ್ಯಮ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಸುಮಾರು 150 ವರ್ಷಗಳ ಹಿಂದೆ ಈ ಜ್ವಾಲಾಮುಖಿ ಸ್ಫೋಟಗೊಂಡಿರಬಹುದು ಎನ್ನುವ ಅಭಿಪ್ರಾಯವನ್ನು ಸಂಶೋಧಕರು ವ್ಯಕ್ತಪಡಿಸಿದ್ದಾರೆ.