Tag: ಅಂಗವಿಕಲ

  • ರಂಗೇರಿದ ಕರುನಾಡ ಹಬ್ಬ – ಕನ್ನಡ ಹಾಡಿಗೆ ಊರುಗೋಲು ಹಿಡಿದು ಅಂಗವಿಕಲನ ಸ್ಟೆಪ್

    ರಂಗೇರಿದ ಕರುನಾಡ ಹಬ್ಬ – ಕನ್ನಡ ಹಾಡಿಗೆ ಊರುಗೋಲು ಹಿಡಿದು ಅಂಗವಿಕಲನ ಸ್ಟೆಪ್

    ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ 64ನೇ ಕನ್ನಡ ಹಬ್ಬ ರಂಗೇರಿದ್ದು, ಅಂಗವಿಕಲ ಕನ್ನಡ ಪ್ರೇಮಿಯೊಬ್ಬ ಕನ್ನಡ ಡಿಜೆ ಹಾಡಿಗೆ ಊರುಗೋಲು ಹಿಡಿದು ಸಖತ್ ಸ್ಟೆಪ್ ಹಾಕಿದ್ದಾರೆ.

    ಹುಕ್ಕೇರಿ ತಾಲೂಕಿನ ಗುಟಗುದ್ದಿಯ ಅಶೋಕ್ ಕಳಸನ್ನ ಅವರು ಹುಟ್ಟು ಅಂಗವಿಕಲರಾಗಿದ್ದು, ಬಹುದೊಡ್ಡ ಕನ್ನಡ ಪ್ರೇಮಿಯಾಗಿದ್ದಾರೆ. ಇಂದು ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ಡಿಜೆ ಅಳವಡಿಕೆ ಮಾಡಲಾಗಿತ್ತು. ಇಲ್ಲಿ ಆಶೋಕ್ ಅವರು ಮಲ್ಲ ಚಿತ್ರದ ಹಾಡಿಗೆ ಊರುಗೋಲು ಹಿಡಿದು ಭರ್ಜರಿ ಸ್ಟೆಪ್ ಹಾಕಿದ್ದಾರೆ.

    ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವವನ್ನ ಮಧ್ಯರಾತ್ರಿಯೇ ಆಚರಣೆ ಮಾಡುವ ಮೂಲಕ ಕುಂದಾನಗರಿಯಲ್ಲಿ ಕನ್ನಡಿಗರು ಸಂಭ್ರಮಿಸಿದ್ದಾರೆ. ನಗರದ ಚೆನ್ನಮ್ಮ ವೃತ್ತದಲ್ಲಿ ಸರಿಯಾಗಿ 12 ಗಂಟೆಗೆ ಕನ್ನಡಪರ ಸಂಘಟನೆ ಕಾರ್ಯಕರ್ತರೆಲ್ಲರೂ ಸೇರಿಕೊಂಡು ಸುರಿಯುತ್ತಿದ್ದ ಮಳೆಯನ್ನು ಲೆಕ್ಕಿಸದೇ ಕನ್ನಡ ಹಬ್ಬ ಆಚರಿಸಿದ್ದಾರೆ. ಕೇಕ್ ಕಟ್ ಮಾಡಿ ಪಟಾಕಿ ಸಿಡಿಸಿ, ಮಳೆಯಲ್ಲೇ ಕನ್ನಡ ಗೀತೆಗಳಿಗೆ ಸ್ಟೆಪ್ಸ್ ಹಾಕಿದರು. 2005ರ ನಂತರ ಮೊದಲ ಬಾರಿಗೆ ಡಿಸಿ ಕಚೇರಿ ಮುಂಭಾಗದಲ್ಲಿ ಕನ್ನಡದ ಧ್ವಜವನ್ನು ಹಾರಿಸುವುದರ ಮೂಲಕ ಖುಷಿ ಪಟ್ಟರು.

    ಡಿಸಿ ಕಚೇರಿ ಮುಂಭಾಗದಲ್ಲಿ ಧ್ವಜಾರೋಹಣಕ್ಕೆ ಪೊಲೀಸರು ಕಾವಲಿದ್ದು, ಧ್ವಜಕ್ಕೆ ಧಕ್ಕೆಯಾಗದಂತೆ ನೋಡಿಕೊಂಡರು. ಮಧ್ಯರಾತ್ರಿ ಕನ್ನಡಿಗರೆಲ್ಲರೂ ರಾಜ್ಯೋತ್ಸವ ಆಚರಣೆ ಮಾಡುವ ಮೂಲಕ ಕನ್ನಡಾಭಿಮಾನ ಮೆರೆದಿದ್ದು, ಇಂದು ಇಡೀ ದಿನ ಕುಂದಾನಗರಿಯಲ್ಲಿ ಕನ್ನಡದ ಕಂಪು ಪಸರಿಸಲಿದೆ.

  • ಸಾಲಕ್ಕೆ ಸಿಗರೇಟ್ ನೀಡದ್ದಕ್ಕೆ ಅಂಗವಿಕಲನ ಪೆಟ್ಟಿಗೆ ಅಂಗಡಿ ಸುಟ್ಟ ಪುಡಾರಿಗಳು

    ಸಾಲಕ್ಕೆ ಸಿಗರೇಟ್ ನೀಡದ್ದಕ್ಕೆ ಅಂಗವಿಕಲನ ಪೆಟ್ಟಿಗೆ ಅಂಗಡಿ ಸುಟ್ಟ ಪುಡಾರಿಗಳು

    -ಅಂಗಡಿ ಕಳೆದುಕೊಂಡು ಕಣ್ಣೀರಿಟ್ಟ ಅಂಗವಿಕಲ

    ಬೆಂಗಳೂರು: ಅಂಗವೈಫಲ್ಯದ ಕಾರಣಕ್ಕೆ ಎಷ್ಟೋ ಮಂದಿ ಭಿಕ್ಷೆಬೇಡಿ ಜೀವನ ನಡೆಸುತ್ತಾರೆ. ಅಂತಹ ಜನರ ನಡುವೆ ತಮ್ಮ ಅಂಗವಿಕಲತೆಯನ್ನು ಲೆಕ್ಕಿಸದೆ ಸ್ವಾಭಿಮಾನದಿಂದ ದುಡಿದು ಬದುಕುವ ಮಂದಿ ಕೂಡ ಇದ್ದಾರೆ. ಹೀಗೆ ಸ್ವಾಭಿಮಾನದಿಂದ ಅಂಗಡಿ ನಡೆಸುತ್ತಿದ್ದ ಅಂಗವಿಕಲ ವ್ಯಕ್ತಿಯೊಬ್ಬರು ಸಾಲ ನೀಡಲು ನಿರಾಕರಿಸಿದ್ದಕ್ಕೆ ಅವರ ಪೆಟ್ಟಿಗೆ ಅಂಗಡಿಗೆ ಬೆಂಕಿ ಇಟ್ಟು ಸುಟ್ಟು ದುಷ್ಕರ್ಮಿಗಳು ವಿಕೃತಿ ಮೆರೆದಿದ್ದಾರೆ.

    ಎರಡು ಕಾಲುಗಳನ್ನು ಕಳೆದುಕೊಂಡಿದ್ದ ಚಿನ್ನಸ್ವಾಮಿ ಅವರು ಚಾಮರಾಜಪೇಟೆಯಲ್ಲಿ ಒಂದು ಪೆಟ್ಟಿಗೆ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು. ತಮ್ಮ ತಂದೆ-ತಾಯಿಯನ್ನು ಕೂಡ ನೋಡಿಕೊಳ್ಳುತ್ತಿದ್ದರು. ಆದರೆ ಇವರ ಅಂಗಡಿಗೆ ಬರುತ್ತಿದ್ದ ಕೆಲ ಸ್ಥಳೀಯ ಪುಡಾರಿಗಳು ಹಣ ನೀಡದೆ ಸಾಲದಲ್ಲಿ ಟೀ-ಸಿಗರೇಟು ಖರೀದಿಸುತ್ತಿದ್ದರು. ಹೀಗೆ ಸಾಲದ ಪಟ್ಟಿ ಹೆಚ್ಚಾಗಿದಕ್ಕೆ ಚಿನ್ನಸ್ವಾಮಿ ಅವರ ವ್ಯಾಪಾರದಲ್ಲಿ ನಷ್ಟವಾಗುತ್ತಿತ್ತು. ಆದ್ದರಿಂದ ಅವರು ಸಾಲ ಕೊಡಲ್ಲ, ಹಣ ಕೊಟ್ಟು ವ್ಯಪಾರ ಮಾಡಿ ಎಂದು ಹೇಳಿದ್ದಕ್ಕೆ ಕೋಪಗೊಂಡ ದುಷ್ಕರ್ಮಿಗಳು ಮಾನವೀಯತೆ ಮರೆತು ಚಿನ್ನಸ್ವಾಮಿಯವರ ಅಂಗಡಿಗೆ ಬೆಂಕಿ ಇಟ್ಟು ಸುಟ್ಟಿದ್ದಾರೆ.

    ಕಿಡಿಗೇಡಿಗಳು ರಾತ್ರೋರಾತ್ರಿ ಚಿನ್ನಸ್ವಾಮಿ ಪೆಟ್ಟಿಗೆ ಅಂಗಡಿಗೆ ಬೆಂಕಿಯಿಟ್ಟು ಸೇಡು ತೀರಿಸಿಕೊಂಡಿದ್ದಾರೆ. ಇದರಿಂದ ಜೀವನಕ್ಕೆ ಆಧಾರವಾಗಿದ್ದ ಒಂದು ಅಂಗಡಿಯನ್ನು ಕಳೆದುಕೊಂಡು ಚಿನ್ನಸ್ವಾಮಿ ಹಾಗೂ ಅವರ ವೃದ್ಧ ತಂದೆ-ತಾಯಿ ಕಣ್ಣೀರಿಡುತ್ತಿದ್ದಾರೆ.

    ದುರುಳರ ವಿಕೃತತನಕ್ಕೆ ಚಿನ್ನಸ್ವಾಮಿ ಅವರ ಪೆಟ್ಟಿಗೆ ಅಂಗಡಿ ಬೆಂಕಿ ಕೆನ್ನಾಲಿಗೆಯಲ್ಲಿ ಹೊತ್ತಿಯುರಿದಿದೆ. ಕಿಡಿಗೇಡಿಗಳು ಪೆಟ್ಟಿಗೆ ಅಂಗಡಿಗೆ ಬೆಂಕಿಯಿಟ್ಟಿದಷ್ಟೇ ಅಲ್ಲದೆ, ಪಕ್ಕದ ರಸ್ತೆಯಲ್ಲಿ ನಿಲ್ಲಿಸಿದ್ದ ಬೈಕ್ ಗಳಿಗೆ ಲಾಂಗು-ಮಚ್ಚುಗಳಿಂದ ಹಾನಿ ಮಾಡಿ ದುಷ್ಟತನ ಮೆರೆದಿದ್ದಾರೆ.

    ಅಂಗಡಿಗೆ ಬೆಂಕಿ ಹಂಚಿರುವ ಬಗ್ಗೆ ತಿಳಿಯುತ್ತಿದ್ದಂತೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸಂಪೂರ್ಣ ಸುಟ್ಟುಹೋಗುತ್ತಿದ್ದ ಅಂಗಡಿಯ ಬೆಂಕಿಯನ್ನು ಪೊಲೀಸರು ಸ್ಥಳೀಯರ ಸಹಾಯ ಪಡೆದು ನಂದಿಸಿದ್ದಾರೆ. ಸದ್ಯ ಈ ಘಟನೆ ಬಗ್ಗೆ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಸೆರೆಹಿಡಿಯಲು ಪೊಲೀಸರು ಬಲೆ ಬೀಸಿದ್ದಾರೆ.

  • ವಿಶ್ವನಾಥ್ ಮಾತುಗಳು ಟೀಕೆ ಅಲ್ಲ ಸಲಹೆ: ಸಾ.ರಾ ಮಹೇಶ್

    ವಿಶ್ವನಾಥ್ ಮಾತುಗಳು ಟೀಕೆ ಅಲ್ಲ ಸಲಹೆ: ಸಾ.ರಾ ಮಹೇಶ್

    ಮೈಸೂರು: ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಅವರ ಮಾರ್ಗದರ್ಶನ ಮತ್ತು ಸಲಹೆಯನ್ನು ಸಿಎಂ ಮತ್ತು ಎಲ್ಲಾ ಸಚಿವರು ಬಳಸಿಕೊಳ್ಳಲಿ. ಅವರ ಮಾತುಗಳು ಟೀಕೆ ಅಲ್ಲ, ಅವು ಸಲಹೆಗಳು ಎಂದು ಸಚಿವ ಸಾ.ರಾ.ಮಹೇಶ್ ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಹಿಂದೆ ಶಿಕ್ಷಣ ಖಾತೆಯನ್ನು ವಿಶ್ವನಾಥ್ ಅವರು ಚೆನ್ನಾಗಿ ನಿರ್ವಹಿಸಿದ್ದಾರೆ. ಸರ್ಕಾರ ನಡೆಸಲು ಅವರಿಂದ ಸಿಎಂಗೆ ಒಳ್ಳೆಯ ಸಲಹೆ, ಮಾರ್ಗದರ್ಶನ ಸಿಗುತ್ತದೆ. ಅವರ ಮಾರ್ಗದರ್ಶನ ಮತ್ತು ಸಲಹೆಯನ್ನು ಸಿಎಂ ಮತ್ತು ಎಲ್ಲಾ ಸಚಿವರು ಬಳಸಿಕೊಳ್ಳಲಿ. ವಿಶ್ವನಾಥ್ ಅವರ ಮಾತುಗಳನ್ನ ಬೇರೆ ಅರ್ಥದಲ್ಲಿ ನೋಡುವುದು ಬೇಡ. ಅವರ ಮಾತುಗಳು ಟೀಕೆ ಅಲ್ಲ, ಅವು ಸಲಹೆಗಳು. ಅದನ್ನು ನಾವು ಪಡೆದುಕೊಳ್ಳುತ್ತೇವೆ ಎಂದು ವಿಶ್ವನಾಥ್ ಪರ ಬ್ಯಾಟಿಂಗ್ ಮಾಡಿದ್ದಾರೆ.

    ವಿಶ್ವನಾಥ್ ಅವರ ರಾಜೀನಾಮೆ ವಿಚಾರವಾಗಿ ಪ್ರತಿಕ್ರಿಯಿಸಿ, ಅವರ ಆರೋಗ್ಯದ ದೃಷ್ಟಿಯಿಂದ ಅವರು ರಾಜ್ಯಾಧ್ಯಕ್ಷ ಸ್ಥಾನ ಬೇಡ ಎಂದು ರಾಜೀನಾಮೆ ನೀಡುತ್ತಿದ್ದಾರೆ. ಆದರೆ ನಾವು ನೀವೇ ಇರಬೇಕು ಎಂದು ಮನವಿ ಮಾಡಿದ್ದೇವೆ ಎಂದರು.

    ಪ್ರಗತಿ ಪರಿಶೀಲನೆ ನಡೆಯುವ ಸ್ಥಳಕ್ಕೆ ಸಹಾಯ ಕೇಳಿ ಬಂದಿದ್ದ ಎಚ್.ಡಿ.ಕೋಟೆಯ ನಿವಾಸಿಗಿರುವ ಅಂಗವಿಕಲ ಗೋವಿಂದಪ್ಪ ಅವರಿಗೆ ಸಾ.ರಾ ಮಹೇಶ್ ಅವರು ಸಹಾಯ ಮಾಡಿದ್ದಾರೆ. ಜೀವನ ನಡೆಸಲು ಮಳಿಗೆ ಇಟ್ಟುಕೊಳ್ಳಲು ಅನುಮತಿ ನೀಡುವಂತೆ ಗೋವಿಂದಪ್ಪ ಸಚಿವರ ಬಳಿ ಕೋರಿಕೊಂಡರು. ಹಾಗೆಯೇ ನನ್ನ ಬೈಕ್‍ನ ಟೈಯರ್ ಗಳು ಹಾಳಾಗಿವೆ, ನನಗೆ ಸಹಾಯ ಮಾಡಿ ಎಂದು ಗೋವಿಂದಪ್ಪ ಕೇಳಿಕೊಂಡಾಗ ಸಚಿವರು ಬೈಕ್‍ಗೆ ಹೊಸ ಟೈಯರ್ ಹಾಕಿಸಿಕೊಳ್ಳಿ ಎಂದು ಹಣ ನೀಡಿ ಸಹಾಯ ಮಾಡಿದರು.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಅಂಗವೈಕಲ್ಯ ಮೆಟ್ಟಿ ನಿಂತವನಿಗೆ ಆಶ್ರಯದಾತನಾಗುವ ಕನಸು

    ಅಂಗವೈಕಲ್ಯ ಮೆಟ್ಟಿ ನಿಂತವನಿಗೆ ಆಶ್ರಯದಾತನಾಗುವ ಕನಸು

    ಹಾವೇರಿ: ಇದು ಸ್ವಾಭಿಮಾನಿ ಯುವಕನ ಕಥೆ. ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕು ಮಮದಾಪುರ ತಾಂಡಾದ ನಿವಾಸಿ ನಾಗರಾಜ್ ಲಮಾಣಿ ಅಂಗವೈಕಲ್ಯವನ್ನು ಸಹ ಮೆಟ್ಟಿನಿಂತು ಸ್ವಾಭಿಮಾನದ ಜೀವನ ನಡೆಸುತ್ತಿದ್ದಾರೆ. ನಾಗರಾಜ್ ಓದಿದ್ದು ಎಸ್.ಎಸ್.ಎಲ್.ಸಿ, ಅಂಗವಿಕಲನಾದ್ರೂ ತಾನೇ ದುಡಿಮೆ ಮಾಡಿ ತಂದೆ-ತಾಯಿಯನ್ನ ಚೆನ್ನಾಗಿ ನೋಡಿಕೊಳ್ಳಬೇಕು ಅನ್ನೋ ಛಲಗಾರ.

    ಮಮದಾಪುರ ತಾಂಡಾದ ಗುಡ್ಡಗಾಡು ಪ್ರದೇಶದ ಬಳಿ ಎರಡುವರೆ ಎಕರೆ ಜಮೀನು ಇದ್ದು, ಕಳೆದ ಸುಮಾರು ವರ್ಷಗಳಿಂದ ಕೃಷಿಯ ಜೊತೆಗೆ ಕುರಿಸಾಕಾಣೆ ಮಾಡಿಕೊಂಡು ಜೀವನ ನಡೆಸುತ್ತಿದ್ದಾನೆ. ಸುತ್ತಮುತ್ತಲಿನ ಜನರ ಬಳಿ ಕುರಿ ಸಾಕಾಣಿಕೆ ಬಗ್ಗೆ ಕೇಳಿ ದೊಡ್ಡ ಪ್ರಮಾಣದಲ್ಲಿ ಕುರಿ ಸಾಕಾಣಿಕೆಗೆ ಒಂದು ಮನೆ ಹಾಗೂ ಅದಕ್ಕೆ ಬೇಕಾಗುವ ಸಲಕರಣೆ ಖರೀದಿ ಮಾಡಲು ಬ್ಯಾಂಕ್‍ಗೆ ಸಾಲಕ್ಕಾಗಿ ಅರ್ಜಿ ಹಾಕಿದ್ದಾನೆ. ಅದ್ರೆ ಬ್ಯಾಂಕ್‍ನಿಂದ ಯಾವುದೇ ಸಾಲ ಸಿಕ್ಕಿಲ್ಲ.

    ನಾಗರಾಜ್ ಲಮಾಣಿ ಮನೆಯ ಸಮೀಪದಲ್ಲಿಯ ಮೂರು ಗುಂಟೆ ಜಮೀನಿದ್ದು, ಅದರಲ್ಲಿ ಕುರಿಗಳಿಗೆ ಶೆಡ್ ನಿರ್ಮಾಣ ಮಾಡುವ ಯೋಜನೆ ಹಾಕಿಕೊಂಡಿದ್ದಾನೆ. ಸದ್ಯ ಜಮೀನಿನಲ್ಲಿ ಸೀರೆಯನ್ನ ಕಟ್ಟಿ ಅದರ ಒಳಗೆ ಕುರಿಯನ್ನ ಬಿಟ್ಟು ಸಾಕಾಣಿಕೆ ಮಾಡುತ್ತಿರೋ ಸ್ವಾಭಿಮಾನಿ ಅಂಗವಿಕಲ ಬ್ಯಾಂಕ್‍ಗೆ ಬೇಕಾದ ಎಲ್ಲಾ ದಾಖಲೆಗಳನ್ನ ನೀಡುತ್ತೇನೆ ದಯಮಾಡಿ ಸಾಲ ಸಹಾಯ ಕಲ್ಪಿಸಿ ಎಂದು ಪಬ್ಲಿಕ್ ಟಿವಿಯ ಮೊರೆ ಬಂದಿದ್ದಾನೆ.

    ವಿಕಲಚೇತನಾದ್ರೂ ಸ್ವಾಭಿಮಾನದ ಜೀವನ ಮಾಡಲು ನಾಗರಾಜ್ ನಾನು ಕುರಿ ಸಾಕಾಣಿಕೆ ಮಾಡುವ ಮಹಾದಾಸೆಯನ್ನು ಹೊಂದಿದ್ದು, ಇತನ ಸ್ವಾಭಿಮಾನದ ಸಕಾರ್ಯಕ್ಕೆ ಸ್ಫೂರ್ತಿ ತುಂಬಲು ಈ ಸ್ಟೋರಿಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.

    https://www.youtube.com/watch?v=k7jgNDPBpK8

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಾಲ್ಯದಲ್ಲಿಯೇ ಮನೆಯಲ್ಲಿ ಕುಳಿತ ಪುತ್ರ-ಮಗನಿಗಾಗಿ ಅಪ್ಪ, ಅಪ್ಪನಿಗಾಗಿ ಮಗ

    ಬಾಲ್ಯದಲ್ಲಿಯೇ ಮನೆಯಲ್ಲಿ ಕುಳಿತ ಪುತ್ರ-ಮಗನಿಗಾಗಿ ಅಪ್ಪ, ಅಪ್ಪನಿಗಾಗಿ ಮಗ

    -ಕೋಲಾರದ ಚಿರಾಗ್ ಇವತ್ತಿನ ಪಬ್ಲಿಕ್ ಹೀರೋ

    ಕೋಲಾರ: ಮಕ್ಕಳು ಹೇಗಿದ್ದರೂ ಪೋಷಕರು ಪಾಲನೆ ಮಾಡುತ್ತಾರೆ. ಅದು ಕರ್ತವ್ಯ-ಹೊಣೆಯೂ ಹೌದು. ಹಾಗಾಗಿ, ಇವತ್ತಿನ ಪಬ್ಲಿಕ್ ಹೀರೋ ಸ್ಟೋರಿ ಸಾಮಾನ್ಯ ಅಂತ ಅನಿಸಬೋದು. ಆದರೆ ಮಗನಿಗಾಗಿ ಅಪ್ಪ. ಅಪ್ಪನಿಗಾಗಿ ವಿಕಲಚೇತನ ಮಗ ಒಬ್ಬರಿಗೊಬ್ಬರು ಆಧಾರವಾಗಿದ್ದಾರೆ.

    ಕೋಲಾರ ಜಿಲ್ಲೆಯ ಅರಹಳ್ಳಿ ಗ್ರಾಮದ ರಮೇಶ್ ಎಂಬವರ ಮಗ ಚಿರಾಗ್ 4ನೇ ತರಗತಿವರೆಗೆ ಎಲ್ಲರಂತೆ ಆಟವಾಡಿ ಬೆಳೆದವನು. ಇದ್ದಕ್ಕಿಂದಂತೆ ಅನಾರೋಗ್ಯ ತುತ್ತಾಗಿದ್ದರಿಂದ ಆತನ ಕೈ-ಕಾಲುಗಳು ಸ್ವಾದೀನ ಕಳೆದುಕೊಂಡವು. ಎಷ್ಟೇ ಚಿಕಿತ್ಸೆ ನೀಡಿದರೂ ಪ್ರಯೋಜನವಾಗಲಿಲ್ಲ. ಇದಕ್ಕೆ ಎದೆಗುಂದದೇ ರಮೇಶ್ ಅವರು ಮಗನ ಗೆಲುವಿಗಾಗಿ ಬೆನ್ನಿಗೆ ನಿಂತಿದ್ದಾರೆ. ಮನೆ ಕೆಲಸವನ್ನೂ ಮಾಡಿಕೊಂಡು, ಮಗನಿಗೂ ಆತ್ಮಸ್ಥೈರ್ಯ ತುಂಬಿದ್ದಾರೆ. 9 ವರ್ಷಗಳಿಂದ ಮಗನಿಗೆ ಯಾವುದರಲ್ಲೂ ಕೊರತೆ ಮಾಡಿಲ್ಲ.

    ಅಪ್ಪನ ಕಷ್ಟ, ಬಡತನ ಅರಿತ ಚಿರಾಗ್ ಅಷ್ಟೇ ಆಸಕ್ತಿಯಿಂದ ಓದಿನಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರತಿದಿನ 8 ರಿಂದ 10 ಗಂಟೆಗಳ ಕಾಲ ವಿದ್ಯಾಭ್ಯಾಸ ನಡೆಸುತ್ತಿದ್ದಾನೆ. ಎಸ್‍ಎಸ್‍ಎಲ್‍ಸಿಯಲ್ಲಿ ಶೇ 75ರಷ್ಟು ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ 67.7ರಷ್ಟು ಅಂಕಗಳಿಸಿ ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾನೆ. ಶಿಕ್ಷಕರು, ಉಪನ್ಯಾಸಕರಿಗೂ ಚಿರಾಗ್ ಅಚ್ಚುಮೆಚ್ಚಿನ ವಿದ್ಯಾರ್ಥಿ. ನಾನು ಚೆನ್ನಾಗಿ ಓದಬೇಕು. ಸರ್ಕಾರಿ ಕೆಲಸ ಪಡೀಬೇಕು. ಅಪ್ಪನ ಕಷ್ಟ ದೂರಾಗಿಸಬೇಕು ಅಂತ ಚಿರಾಗ್ ಪಣತೊಟ್ಟಿದ್ದಾನೆ.

    ನನಗೆ ಎಷ್ಟೇ ಕಷ್ಟ ಬಂದರೂ ಆತನ ಕಲಿಕೆಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತೇನೆ. ಮಗನೂ ಕೂಡ ಕಲಿಕೆಯಲ್ಲಿ ಮುಂದೆಯಿದ್ದಾನೆ. ಈಗ ಕಂಪ್ಯೂಟರ್ ಕಲಿಯುವ ಆಸಕ್ತಿ ಇಚ್ಛೆಯನ್ನು ಹೊರ ಹಾಕಿದ್ದಾನೆ. ಅದಕ್ಕೂ ನಾನು ಪ್ರೋತ್ಸಾಹ ನೀಡುತ್ತಿರುವೆ ಎಂದು ರಮೇಶ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ನನ್ನನ್ನು ದಿನವೂ ಬೈಕ್ ಮೇಲೆ ಅಪ್ಪ ಕರೆದುಕೊಂಡು ಹೋಗಿ ಶಾಲೆಗೆ ಸೇರಿಸುತ್ತಿದ್ದರು. ನಾನು ಚನ್ನಾಗಿ ಓದಿ, ಉದ್ಯೋಗ ಪಡೆದುಕೊಂಡು ತಂದೆ-ತಾಯಿಯನ್ನು ನೋಡಿಕೊಳ್ಳಬೇಕು ಎನ್ನುವ ಹಂಬಲವಿದೆ ಎಂದು ಚಿರಾಗ್ ಹೇಳುತ್ತಾರೆ.

    https://youtu.be/Ga1-VCyqsjc

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಬೆಳಕು ಇಂಪ್ಯಾಕ್ಟ್: ಸ್ವಾವಲಂಬಿ ಬದುಕು ಕಟ್ಟಿಕೊಂಡ ಅಂಗವಿಕಲ ದಂಪತಿ

    ಬೆಳಕು ಇಂಪ್ಯಾಕ್ಟ್: ಸ್ವಾವಲಂಬಿ ಬದುಕು ಕಟ್ಟಿಕೊಂಡ ಅಂಗವಿಕಲ ದಂಪತಿ

    ರಾಯಚೂರು: ಎಲ್ಲವೂ ಸರಿಯಿದ್ದರೂ ಬದುಕು ಕಟ್ಟಿಕೊಳ್ಳಲು ಎಷ್ಟೋ ಜನ ಪ್ರತಿನಿತ್ಯ ಪರದಾಡುತ್ತಲೇ ಇರುತ್ತಾರೆ. ಅಂತಹದರಲ್ಲಿ ಈ ದಂಪತಿ ಅಂಗವಿಕಲರು. ಇರಲು ಸ್ವಂತಃ ಸೂರಿಲ್ಲ, ಬದುಕಲು ಉದ್ಯೋಗವಿಲ್ಲ. ಆದರೂ ಮಗುವನ್ನ ಕಟ್ಟಿಕೊಂಡು ಬಾಡಿಗೆ ಮನೆಯಲ್ಲಿ ಇದ್ದುಕೊಂಡು ಪುಟ್ಟ ಅಂಗಡಿ ನಡೆಸುತ್ತಿದ್ದ ದಂಪತಿ ಈಗ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ. ಬೆಳಕು ಕಾರ್ಯಕ್ರಮದಿಂದಾಗಿ ತಮ್ಮ ಸುಂದರ ಭವಿಷ್ಯದ ಕನಸು ಕಾಣುತ್ತಿದ್ದಾರೆ.

    ರಾಯಚೂರಿನ ತಾರನಾಥ ರಸ್ತೆ ಪ್ರದೇಶದಲ್ಲಿ ವಾಸವಿರುವ ಖಾಜಾ ಪಾಷಾ, ಶಬಾನಾ ಬೇಗಂ ದಂಪತಿ ಚಿಕ್ಕವಯಸ್ಸಿನಲ್ಲೇ ಪೋಲಿಯೋದಿಂದ ಕಾಲು ಕಳೆದುಕೊಂಡಿದ್ದಾರೆ. ಎರಡು ವರ್ಷದ ಹೆಣ್ಣು ಮಗು ಇರುವ ಅಂಗವಿಕಲ ದಂಪತಿಯ ಪುಟ್ಟ ಸಂಸಾರ 1,500 ರೂಪಾಯಿಯ ಬಾಡಿಗೆ ಮನೆಯಲ್ಲಿ ಸಾಗುತಿತ್ತು. ದಂಪತಿ ಮನೆ ಮುಂದೆ ಸಣ್ಣ ಕಿರಾಣಿ ಅಂಗಡಿ ಇಟ್ಟುಕೊಂಡು ಕಷ್ಟಕರವಾಗಿ ಜೀವನ ನಡೆಸುತ್ತಿದ್ದರು.

    ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಒಂದು ಅಂಗಡಿ ನೆರವಿಗಾಗಿ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದರು. ಈಗ ಬೆಳಕು ಟ್ರಸ್ಟ್ ದಂಪತಿಗೆ ವ್ಯಾಪಾರ ಮಾಡಲು ಸ್ವಂತ ಅಂಗಡಿಯ ವ್ಯವಸ್ಥೆ ಮಾಡಿಕೊಟ್ಟಿದೆ. ದಂಪತಿ ಅಂಗವಿಕಲರು ಆಗಿರುವುದರಿಂದ ಅವರಿಗೆ ಅನುಕೂಲವಾಗುವ ರೀತಿಯಲ್ಲಿ ಟಿನ್ ಶೆಡ್‍ನ್ನ ನಿರ್ಮಿಸಿಕೊಡಲಾಗಿದೆ. ರಾಯಚೂರು ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಬಷಿರುದ್ದಿನ್ ಕಿರಾಣಿ ಅಂಗಡಿಗೆ ಬೇಕಾದ ದಿನಸಿ ಪದಾರ್ಥಗಳ ಸಹಾಯ ಮಾಡಿದ್ದಾರೆ.

    ಒಟ್ಟನಲ್ಲಿ ದುಡಿದು ತಿನ್ನಲು ಸಹಾಯಕ್ಕಾಗಿ ಹಂಬಲಿಸುತ್ತಿದ್ದ ಅಂಗವಿಕಲ ದಂಪತಿಗೆ ವ್ಯಾಪಾರ ಮಾಡಲು ಅನುಕೂಲ ಮಾಡಿಕೊಡಲಾಗಿದೆ. ಸ್ವಂತಃ ಅಂಗಡಿಯನ್ನು ಪಡೆದುಕೊಂಡಿರುವ ದಂಪತಿ ಈಗ ಸ್ವಾಭಿಮಾನಿಗಳಾಗಿ ಬದುಕುವ ಭರವಸೆ ವ್ಯಕ್ತಪಡಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=nzHgYXD2xno

  • ಒಂದು ಸಣ್ಣ ಸೂರು, ಪಡಿತರ ಚೀಟಿಗಾಗಿ ಬುದ್ಧಿಮಾಂದ್ಯ ಮಗನನ್ನು ಹಿಡಿದು ಅಲೆಯುತ್ತಿದ್ದಾರೆ ತಾಯಿ!

    ಒಂದು ಸಣ್ಣ ಸೂರು, ಪಡಿತರ ಚೀಟಿಗಾಗಿ ಬುದ್ಧಿಮಾಂದ್ಯ ಮಗನನ್ನು ಹಿಡಿದು ಅಲೆಯುತ್ತಿದ್ದಾರೆ ತಾಯಿ!

    ಕೋಲಾರ: ಆ ತಾಯಿಗೆ ಕಷ್ಟ-ಸುಖದಲ್ಲಿ ಜೊತೆಯಾಗಿರಬೇಕಾದ ಕೈ ಹಿಡಿದ ಗಂಡನಿಲ್ಲ. ಇರುವ ಮಕ್ಕಳನ್ನ ಮಡಿಲಿಗೆ ಹಾಕಿಕೊಂಡು ಅವರನ್ನ ಪೋಷಣೆ ಮಾಡಲು ಬೇಕಾದ ಮನೆಯೂ ಇಲ್ಲ. ನೆರವಾಗಬೇಕಾದ ಸರ್ಕಾರ ಪಡಿತರ ಚೀಟಿ ಕೊಟ್ಟಿಲ್ಲ. ಸೂರಿನ ಭಾಗ್ಯವೂ ಈಕೆಗೆ ಸಿಕ್ಕಿಲ್ಲ. ಈ ನತದೃಷ್ಟ ತಾಯಿ ಜೀವನದ ಕಷ್ಟಕ್ಕೆ ಈಗ ಬೆಳಕು ಬೇಕಾಗಿದೆ.

    ಸರ್ಕಾರಿ ಕಚೇರಿಯಲ್ಲಿ ಸರ್ಕಾರದ ಸೌಲಭ್ಯ ಕಲ್ಪಿಸುವಂತೆ ತನ್ನ ಅಂಗವಿಕಲ ಮಗನೊಂದಿಗೆ ಬೇಡಿಕೊಳ್ಳತ್ತಿರುವ ತಾಯಿ ಹೆಸರು ವಸಂತಮ್ಮ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಮೋಪರಹಳ್ಳಿ ಗ್ರಾಮದ ನಿವಾಸಿ ವಸಂತಮ್ಮ ಅವರ 16 ವರ್ಷದ ಮಗ ಬುದ್ಧಿಮಾಂದ್ಯನಾಗಿದ್ದು, 20 ವರ್ಷಗಳಿಂದ ಕೂಲಿ ಕೆಲಸ ಮಾಡಿ ಕಡುಬಡತನದಲ್ಲಿ ಜೀವನ ಸಾಗಿಸುತ್ತಿದ್ದಾರೆ.

    7 ವರ್ಷಗಳ ಹಿಂದೆಯೇ ಸರ್ಕಾರ ಸ್ಪೀಡ್ ಹೈವೇ ನಿರ್ಮಾಣಕ್ಕೆ ಇದ್ದ ಸ್ವಂತ ಮನೆಯನ್ನು ವಶಕ್ಕೆ ಪಡೆದು ಮನೆಯನ್ನು ಕೆಡವಿ ಹಾಕಿದೆ. ಆದರೆ ಸರ್ಕಾರದಿಂದ ಪರಿಹಾರ ಮಾತ್ರ ಶೂನ್ಯ. ಕೆಡವಿದ ಮನೆ ಪಕ್ಕದಲ್ಲಿ ಆಗೋ ಹೀಗೋ ಬೀಳುವ ಸ್ಥಿತಿಯಲ್ಲಿರುವ ಮನೆಯಲ್ಲಿ ವಸಂತಮ್ಮ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದಾರೆ. ಆದರೆ ಮಕ್ಕಳ ಪೋಷಣೆ ಹಾಗೂ ಜೀವನ ಕಷ್ಟವಾಗಿದೆ.

    ಕಳೆದ ಹಲವು ವರ್ಷಗಳಿಂದ ಅಂಗವಿಕಲ ಮಗನನ್ನು ಹೊತ್ತುಕೊಂಡು ಒಂದು ನಿರ್ದಿಷ್ಟ ಸೂರು ಹಾಗೂ ಪಡಿತರ ಚೀಟಿಗಾಗಿ ಶಾಸಕರು, ಹಾಗೂ ಸರ್ಕಾರಿ ಕಚೇರಿಗಳಿಗೆ ಅಲೆಯುತ್ತಿದ್ದಾರೆ. ಇದುವರೆಗೂ ಬಡ ಜೀವಕ್ಕೆ ಬೇಕಾದ ವಸತಿ ಹಾಗೂ ಪಡಿತರ ಚೀಟಿ ಸಿಗದೇ ಕಂಗಾಲಾಗಿದೆ.

    ಮಗ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದು ಬೆರಳು ಮುದ್ರೆ ಕೊಡಲು ಸಾಧ್ಯವಿಲ್ಲ ಅನ್ನೋ ಕಾರಣಕ್ಕೆ ಪಡಿತರ ಚೀಟಿಯಲ್ಲಿ ಮಗನ ಹೆಸರು ನೊಂದಾಯಿಸಲು ಸಾಧ್ಯವಾಗಿಲ್ಲ. ಪಡಿತರ ಅನ್ನಭಾಗ್ಯ ಅಕ್ಕಿಯೂ ಸಿಗಲಿಲ್ಲವೆಂದು ತಾಯಿ ಕಣ್ಣೀರಿಡುತ್ತಿದ್ದಾರೆ. ದಯಮಾಡಿ ತನ ಪರಿಸ್ಥಿತಿ ನೋಡಿ ಇರಲು ಒಂದು ಸಣ್ಣ ಸೂರು, ಪಡಿತರ ಚೀಟಿ ಸೌಲಭ್ಯ ಕಲ್ಪಿಸಿ ಕೊಡಿ ಎಂದು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಮೊರೆ ಬಂದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=cYlTGMsx9hU

  • ತ್ರಿಚಕ್ರ ವಾಹನಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡಿದ್ರು ಸ್ವಾಭಿಮಾನಿಗೆ ಸ್ಕೂಟಿ ಭಾಗ್ಯ ಸಿಕ್ಕಿಲ್ಲ!

    ತ್ರಿಚಕ್ರ ವಾಹನಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡಿದ್ರು ಸ್ವಾಭಿಮಾನಿಗೆ ಸ್ಕೂಟಿ ಭಾಗ್ಯ ಸಿಕ್ಕಿಲ್ಲ!

    ಯಾದಗಿರಿ: ವಿಧಿಯಾಟಕ್ಕೆ ಅಂಗವೈಕಲ್ಯಕ್ಕೆ ತುತ್ತಾದರೂ ಬೇರೆಯವರ ಮೇಲೆ ಭಾರವಾಗಬಾರದೆಂದು ಸ್ವಾಭಿಮಾನಿಯಾಗಿರುವ ವ್ಯಕ್ತಿಯೊಬ್ಬರು ತ್ರಿಚಕ್ರ ವಾಹನಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡಿದರೂ ಸ್ಕೂಟಿ ಭಾಗ್ಯ ಸಿಕ್ಕಿಲ್ಲ.

    ಯಾದಗಿರಿ ಜಿಲ್ಲೆಯ ಮುಷ್ಟೂರು ಗ್ರಾಮದವರಾದ ಮೊಹಮ್ಮದ್ ಜಲಾಲ್ ಬಾಷಾ ಹುಟ್ಟುತ್ತಲೇ ಅಂಗವಿಕಲರಲ್ಲ. ಏಳು ವರ್ಷ ಹಿಂದೆ ರೈಲ್ವೇ ಹಳಿ ದಾಟುವಾಗ ಬಿದ್ದು ಎರಡು ಕಾಲುಗಳನ್ನು ಕಳೆದುಕೊಂಡ ಪರಿಣಾಮ ಅಂಗವೈಕಲ್ಯಕ್ಕೆ ತುತ್ತಾಗಿದ್ದಾರೆ. ಮೊಣಕಾಲು ಕಳೆದುಕೊಂಡಿದ್ದರೂ ಬೇರೆಯವರಿಗೆ ಹೊರೆಯಾಗದೇ ಇರಲು ತ್ರಿಚಕ್ರ ವಾಹನ ಪಡೆದು ವ್ಯಾಪಾರ ಮಾಡಲು ಕನಸನ್ನು ಕಟ್ಟಿಕೊಂಡಿದ್ದಾರೆ.

    ಮೊಹಮ್ಮದ್ ಬಾಷಾ ಕಳೆದ ಎರಡು ವರ್ಷಗಳಿಂದ ತ್ರಿಚಕ್ರ ವಾಹನಕ್ಕಾಗಿ ಜಿಲ್ಲಾ ಅಂಗವಿಕಲ ಇಲಾಖೆಯಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಇದುವರೆಗೂ ವಾಹನ ನೀಡದೇ ಇದ್ದ ಕಾರಣ ದಿನಬೆಳಗಾದರೇ ಸರ್ಕಾರಿ ಕಚೇರಿಗೆ ಇವರು ಅಲೆಯುತ್ತಿದ್ದಾರೆ.

    ಮೊಹಮ್ಮದ್ ಬಾಷಾ ಅವರಿಗೆ ಮದುವೆಯಾಗಿ ಮೂರು ವರ್ಷದಲ್ಲಿ ವಿಧಿಯಾಟಕ್ಕೆ ತನ್ನ ಎರಡು ಕಾಲು ಕಳೆದುಕೊಂಡಿದ್ದಾರೆ. ಸಂಸಾರದಲ್ಲಿ ಹೆಂಡತಿ ಮನೆ ಕೆಲಸವನ್ನು ಮಾಡಿ ಮಕ್ಕಳಿಗೆ ಎರಡು ಹೊತ್ತು ಗಂಜಿ ಹಾಕುವಂತಾಗಿದೆ. ಇಂತಹ ಸಂಕಷ್ಟದಲ್ಲಿ ಬದುಕುತ್ತಿರುವ ನನಗೆ ತ್ರಿಚಕ್ರ ವಾಹನವನ್ನು ನೀಡಿ ಡಬ್ಬಿ ಅಂಗಡಿಯ ವ್ಯಾಪಾರವನ್ನು ಶುರು ಮಾಡಲು ಅಧಿಕಾರಿಗಳು ಅನುಕೂಲ ಮಾಡಿಕೊಡಬೇಕೆಂದು ಬಾಷಾ ಮನವಿ ಮಾಡಿದ್ದಾರೆ.

  • ಅಂಗೈಯಲ್ಲಿ ನಾದ ಚಿಮ್ಮಿಸೋ ವಿಕಲಾಂಗನಿಗೆ ಬೇಕಿದೆ ಪಿಯಾನೋ ಕೀ ಬೋರ್ಡ್

    ಅಂಗೈಯಲ್ಲಿ ನಾದ ಚಿಮ್ಮಿಸೋ ವಿಕಲಾಂಗನಿಗೆ ಬೇಕಿದೆ ಪಿಯಾನೋ ಕೀ ಬೋರ್ಡ್

    ಮೈಸೂರು: ಐದನೇ ವಯಸ್ಸಿನಲ್ಲಿಯೇ ಪೋಲಿಯೋಗೆ ತುತ್ತಾಗಿ ಕಾಲು ಕಳೆದುಕೊಂಡ್ರೂ ಪಿಯುಸಿವರೆಗೂ ವಿದ್ಯಾಭ್ಯಾಸ ಮಾಡಿ, ಓದಿನ ಜೊತೆಗೆ ಕೀ ಬೋರ್ಡ್ ಅಭ್ಯಾಸ ಕಲಿತಿದ್ದಾರೆ. ಈಗ ಅದೇ ಪಿಯಾನೋ ಕೀ ಬೋರ್ಡ್ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ. ಆದ್ರೆ ಈಗ ಪಿಯಾನೋ ಕೀ ಬೋರ್ಡ್ ಹಳೆಯದಾಗಿ ಹೊಸ ಕೀ ಬೋರ್ಡ್ ಕೊಡಿಸಿ ಅಂತಾ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ.

    ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ಅಮ್ಮತೂರು ಗ್ರಾಮದ ನಿವಾಸಿ ಜವರನಾಯಕ, ತನ್ನ 5ನೇ ವಯಸ್ಸಿನ್ಲಲಿ ಪೋಲಿಯೋಗೆ ತುತ್ತಾಗಿ ಕಾಲು ಕಳೆದುಕೊಂಡರೂ ಕಷ್ಟ ಪಟ್ಟು ಪಿಯುಸಿವರೆಗೆ ಓದಿದ್ದಾರೆ. ತನ್ನ ಅಂಗವಿಕಲತೆಯನ್ನು ಬದಿಗಿರಿಸಿ ಊರಿನ ದೇವಸ್ಥಾನದಲ್ಲಿ ದೇವರನಾಮ ಪಠಣೆ, ಸತ್ತವರ ಮನೆಯಲ್ಲಿ ರಾತ್ರಿಯ ವೇಳೆ ಭಜನೆ ಮಾಡುವಾಗ ಅವರ ಜೊತೆಯಲ್ಲಿ ಕುಳಿತು ಭಜನೆ ಕಲಿತು ಜೊತೆಗೆ ಕೀ ಬೋರ್ಡ್ ನುಡಿಸುವುದನ್ನು ಕಲಿತಿದ್ದಾರೆ.

    ನಡೆಯಲು ಬಾರದಿದ್ದರೂ ಸ್ವಾವಲಂಬಿಯಾಗಿ ಬದುಕಬೇಕೆಂದು ಕೀ ಬೋರ್ಡ್ ನುಡಿಸುವುದನ್ನೇ ವೃತ್ತಿಯಾಗಿಸಿಕೊಂಡಿದ್ದಾರೆ. ಆರ್ಕೆಸ್ಟ್ರಾ, ನಾಟಕ, ಭಜನೆ ಎಲ್ಲ ಕಡೆ ಕಾರ್ಯಕ್ರಮ ಮಾಡಿ ಪತ್ನಿ ಮತ್ತು ತಾಯಿಯನ್ನು ಸಾಕುತ್ತಿದ್ದಾರೆ. ತುಂಬಾ ವರ್ಷಗಳಿಂದ ಉಪಯೋಗಿಸುತ್ತಿರುವ ಕೀ ಬೋರ್ಡ್ ಹಳೆಯದಾಗಿ ಕಾರ್ಯಕ್ರಮದಲ್ಲಿ ಆಗಾಗ ಕೆಡುತ್ತಿದ್ದರಿಂದ ಕಾರ್ಯಕ್ರಮಗಳಿಗೆ ಕರೆಯುವುದು ಕಡಿಮೆ ಮಾಡಿದ್ದಾರೆ.

    ಕುಟುಂಬದ ಜವಾಬ್ದಾರಿ ಜವರಾಯಕನ ಮೇಲಿದ್ದು, ಕೀಬೋರ್ಡ್ ಇಲ್ಲದೇ ಜೀವನ ನಡೆಸಲು ಕಷ್ಟ ಸಾಧ್ಯವಾಗಿದೆ. ಈಗ ಮಾರುಕಟ್ಟೆಗೆ ಹೊಸ ತಂತ್ರಜ್ನಾನದ ಕೀ ಬೋರ್ಡ್ ಗಳು ಬಂದಿವೆ. ಹೊಸ ಕೀ ಬೋರ್ಡ್ ತೆಗೆದುಕೊಳ್ಳಲು ಇವರ ಬಳಿ ಹಣ ಇಲ್ಲದೇ ಜೀವನ ನಡೆಸಲು ಕಷ್ಟ ಪಡುತ್ತಿದ್ದಾರೆ.

    ಯಾರಾದ್ರೂ ದಾನಿಗಳು ಹೊಸ ತಂತ್ರಜ್ಞಾನದ ಕೀಬೋರ್ಡ್ ನೀಡಿದ್ರೆ ಕಾರ್ಯಕ್ರಮಗಳನ್ನು ಮಾಡಿ ಸಂಪಾದಿಸಿ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಸಹಾಯವಾಗುತ್ತೆ ಎಂದು ಬೆಳಕು ಕಾರ್ಯಕ್ರಮದಲ್ಲಿ ನೆರವು ಬಯಸುತ್ತಿದ್ದಾರೆ. ಸ್ವಾಭಿಮಾನದ ಬದುಕು ಹಸನಾಗಿಸಲು ದಾನಿಗಳು ಕೈ ಜೋಡಿಸಲಿ ಎಂಬುದು ಬೆಳಕು ಕಾರ್ಯಕ್ರಮದ ಆಶಯವಾಗಿದೆ.

    https://www.youtube.com/watch?v=bQx7xFYkXqA

  • 66 ವರ್ಷದ ನಂತ್ರ ಉಗುರು ಕಟ್ – ಈಗ ಶಾಶ್ವತ ಅಂಗವೈಕಲ್ಯಕ್ಕೆ ತುತ್ತು!

    66 ವರ್ಷದ ನಂತ್ರ ಉಗುರು ಕಟ್ – ಈಗ ಶಾಶ್ವತ ಅಂಗವೈಕಲ್ಯಕ್ಕೆ ತುತ್ತು!

    ನ್ಯೂಯಾರ್ಕ್: 66 ವರ್ಷಗಳ ಬಳಿಕ ಪುಣೆಯ ನಿವಾಸಿ ತನ್ನ ವಿಶ್ವದ ಅತ್ಯಂತ ಉದ್ದನೆಯ ಉಗುರುಗಳನ್ನ ಕತ್ತರಿಸಿಕೊಂಡು ಈಗ ಶಾಶ್ವತವಾಗಿ ಅಂಗವಿಕಲಾಗಿದ್ದಾರೆ.

    ಶ್ರೀಧರ್ ಚಿಲ್ಲಾಸ್ 82 ವರ್ಷದವರಾಗಿದ್ದು, ತಮ್ಮ ಎಡಗೈ ಬೆರಳುಗಳಲ್ಲಿ ಉದ್ದನೆಯ ಉಗುರುಗಳನ್ನ ಬೆಳೆಸಿಕೊಂಡು ವಿಶ್ವ ದಾಖಲೆ(ಗಿನ್ನಿಸ್ ದಾಖಲೆ) ಮಾಡಿದ್ದರು. ಚಿಲ್ಲಾಸ್ 1985 ರಿಂದ ತಮ್ಮ ಉಗುರುಗಳನ್ನ ಬೆಳೆಸಲು ಆರಂಭಿಸಿದ ಇವರು ಸುಮಾರು 31 ಅಡಿ ಉದ್ದದಷ್ಟು ಉಗುರುಗಳನ್ನ ಬೆಳೆಸಿಕೊಂಡು ಈಗ ಶಾಶ್ವತವಾಗಿ ಅಂಗವಿಕಲರಾಗಿದ್ದಾರೆ.

    ಚಿಲ್ಲಾಸ್ ಒಂದು ಬಾರಿ ತಮ್ಮ ತರಗತಿಯಲ್ಲಿ ಆಕಸ್ಮಿಕವಾಗಿ ಶಿಕ್ಷಕರ ಉದ್ದನೆಯ ಉಗುರನ್ನ ಮುರಿದು ಬಿಟ್ಟಿದ್ದರು. ಆ ಕಾರಣ “ನೀನು ಏನು ಮಾಡಿದ್ದೀಯ ಎಂಬುದು ನಿನಗೆ ಗೊತ್ತಿಲ್ಲ ಅದರ ಮಹತ್ವ ಏನು ಎನ್ನುವುದು ನಿನಗೆ ಎಂದು ಅರ್ಥವಾಗುವುದಿಲ್ಲ ಎಂದು ತರಗತಿಯಲ್ಲೇ ಬೈದಿದ್ದರು. ಅಂದಿನಿಂದ “ನಾನು ಅದನ್ನು ಒಂದು ಸವಾಲಾಗಿ ತೆಗೆದುಕೊಂಡೆ” ಎಂದು ಚಿಲ್ಲಾಸ್ ತಿಳಿಸಿದ್ದಾರೆ. ಇದನ್ನೂ ಓದಿ: 66 ವರ್ಷಗಳ ಬಳಿಕ ವಿಶ್ವದ ಅತ್ಯಂತ ಉದ್ದನೆಯ ಉಗುರು ಕಟ್: ವಿಡಿಯೋ ನೋಡಿ

    ಅಂದಿನಿಂದ ಕೇವಲ ತಮ್ಮ ಎಡಗೈ ಬೆರಳುಗಳ ಉಗುರುಗಳನ್ನ ಬೆಳೆಸಲು ಆರಂಭಿಸಿದ ಚಿಲ್ಲಾಸ್ ಸುಮಾರು 66 ವರ್ಷಗಳವರೆಗೆ ಮುಂದುವರಿಸಿದರು. ಅವರ ಉಗುರು ಸುಮಾರು 909.6 ಸೆ.ಮಿ ಉದ್ದವಿದ್ದು ಅದರ ತೂಕದಿಂದಾಗಿ ಅವರ ಎಡಗೈ ಶಾಶ್ವತವಾಗಿ ಹ್ಯಾಂಡಿಕ್ಯಾಪ್ ಆಗಿದೆ. ಮುಚ್ಚಿದ ಸ್ಥಿತಿಯಲ್ಲಿದ್ದ ಕೈ ಬಿಚ್ಚಲು ಸಾಧ್ಯವಾಗದೇ ಬೆರಳುಗಳನ್ನ ಸಹ ತಳ್ಳಲು ಸಾಧ್ಯವಾಗದ ಸ್ಥಿತಿ ಉಂಟಾಗಿದೆ.

    ಚಿಲ್ಲರ್ ಅವರ ಈ ಅಸಾಮಾನ್ಯ ಆಯ್ಕೆಯು ಅವರ ಸಾಮಾನ್ಯ ಜೀವನದಲ್ಲಿ ಯಾವುದೇ ಅಡಚಣೆಯನ್ನ ಉಂಟು ಮಾಡಲಿಲ್ಲ. ಅವರ ಪತ್ನಿ ಇಬ್ಬರು ಮಕ್ಕಳು ಹಾಗೂ ಮೊಮ್ಮಕ್ಕಳ ಜೊತೆ ಖುಷಿಯಾಗಿಯೇ ಜೀವನ ನಡೆಸುತ್ತಿದ್ದಾರೆ. ಚಿಲ್ಲರ್ ಅವರಿಗೆ ವಯಸ್ಸಾದಂತೆ ಅವರ ಉದ್ದನೆಯ ಉಗುರು ಅವರ ಸಾಮಾನ್ಯ ಜೀವನ ಶೈಲಿ ನಡೆಸಲು ಒಂದು ಸವಾಲಾಗಿ ಪರಿಣಮಿಸಿತು. ರಾತ್ರಿ ಮಲಗುವಾಗ ತುಂಬ ಕಷ್ಟವಾಗುತ್ತಿತ್ತು. ಹಾಗಾಗಿ ತಮ್ಮ ಉಗುರುಗಳನ್ನ ಕಟ್ ಮಾಡಿಸಿದ್ದಾರೆ ಎಂದು ತಿಳಿಸಿದ್ದಾರೆ.

    ಇದೀಗ ಶ್ರೀಧರ್ ಚಿಲ್ಲಾಸ್ ಅವರ ವಿಶ್ವದ ಅತೀ ಉದ್ದನೆಯ ಉಗುರುಗಳನ್ನ ಟೈಮ್ಸ್ ಸ್ಕ್ವೇರ್ ರಿಪ್ಲೇ ನ ಬ್ಲೀವ್ ಇಟ್ ಆರ್ ನಾಟ್ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಇದರ ಹೊರತು ಪಡಿಸಿ ಪ್ರಪಂಚದಾದ್ಯಂತ ಸುಮಾರು 20 ಗ್ಯಾಲರೀಸ್ ಹಾಗೂ 500 ಕ್ಕು ಹೆಚ್ಚು ಕಲಾಕೃತಿಯನ್ನ ಈ ಮ್ಯೂಸಿಯಂ ಹೊಂದಿದೆ.