Tag: ಅಂಗವಿಕಲೆ

  • ಎಸ್‍ಎಸ್‍ಎಲ್‍ಸಿಯಲ್ಲಿ 97.8% ,12ನೇ ತರಗತಿಯಲ್ಲಿ 95.2% – ಅಂಗವೈಫಲ್ಯವನ್ನು ಮೆಟ್ಟಿನಿಂತ ಅನುಷ್ಕಾ ಪಂಡಾ

    ಎಸ್‍ಎಸ್‍ಎಲ್‍ಸಿಯಲ್ಲಿ 97.8% ,12ನೇ ತರಗತಿಯಲ್ಲಿ 95.2% – ಅಂಗವೈಫಲ್ಯವನ್ನು ಮೆಟ್ಟಿನಿಂತ ಅನುಷ್ಕಾ ಪಂಡಾ

    – ಗೂಗಲ್‍ನಲ್ಲಿ ಎಂಜಿನಿಯರ್ ಆಗಬೇಕೆಂಬ ಬಯಕೆ

    ಗುರುಗ್ರಾಮ್: ಎಸ್‍ಎಸ್‍ಎಲ್‍ಸಿಯಲ್ಲಿ 97.8%, 12ನೇ ತರಗತಿಯಲ್ಲಿ 95.2% ಅಂಕ ಗಳಿಸುವ ಮೂಲಕ ಗುರುಗ್ರಾಮ್‍ನ ದಿವ್ಯಾಂಗಿ ಬಾಲಕಿ ಅನುಷ್ಕಾ ಪಂಡಾ ತನ್ನ ಅಂಗವೈಫಲ್ಯವನ್ನು ಮೆಟ್ಟಿನಿಂತಿದ್ದಾಳೆ.

    ಅನುಷ್ಕಾಗೆ ಬೆನ್ನುಮೂಳೆ ಸ್ನಾಯುವಿನ ಸಮಸ್ಯೆಯಿದ್ದು, ಆಕೆ ವೀಲ್‍ಚೇರ್ ಇಲ್ಲದೇ ನಿಲ್ಲಲು ಮತ್ತು ಕೂರಲು ಆಗುವುದಿಲ್ಲ. ಆದರೆ ಇದನ್ನು ಲೆಕ್ಕಿಸದ ಅನುಷ್ಕಾ ವೀಲ್‍ಚೇರ್ ಮೇಲೆ ಕುಳಿತೇ ದಿನಕ್ಕೆ ಎರಡು ಗಂಟೆ ಓದಿ ಸಿಬಿಎಸ್‍ಇ 12 ನೇ ತರಗತಿ ಪರೀಕ್ಷೆಯಲ್ಲಿ 95.2% ಅಂಕ ಪಡೆದಿದ್ದಾಳೆ. ಅಂಗವೈಫಲ್ಯ ಇರುವ ಮಕ್ಕಳ ಪೈಕಿ ಆಕೆಯ ಅತೀ ಹೆಚ್ಚು ಅಂಕ ಪಡೆದಿದ್ದಾಳೆ. ಅಲ್ಲದೇ ಭೌತಶಾಸ್ತ್ರ ಪಠ್ಯದಲ್ಲಿ 100ಕ್ಕೆ 99 ಅಂಕ ಗಳಿಸಿದ್ದಾಳೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಅನುಷ್ಕಾ ಪಂಡಾ, ನಾನು ದಿನದಲ್ಲಿ ಎರಡು ಗಂಟೆಗಳ ಕಾಲ ಓದುತ್ತಿದ್ದೆ. ಈಗ ನನ್ನ ಅಂಕ ನೋಡಿ ನನಗೆ ಬಹಳ ಖುಷಿಯಾಗಿದೆ. ನನ್ನ ಶಾಲೆಯಲ್ಲಿ ನನಗೆ ಬಹಳ ಬೆಂಬಲ ನೀಡಿದ್ದಾರೆ. ನಾನು ಅಂಗವಿಕಲೆ ಆಗಿದ್ದ ಕಾರಣ ನನ್ನ ಶಾಲೆಯವರು ಪರೀಕ್ಷೆ ಬರೆಯಲು ವಿಶೇಷ ಆಸನವನ್ನು ಸಿದ್ಧ ಮಾಡಿಸಿ ಕೊಟ್ಟಿದ್ದರು ಎಂದು ಹೇಳಿದ್ದಾರೆ. ಜೊತೆಗೆ ಅನುಷ್ಕಾ ಚೆಸ್ ಆಟಗಾರ್ತಿಯಾಗಿದ್ದಾರೆ. ಜೊತೆಗೆ ಕಳೆದ ಹತ್ತು ವರ್ಷದಿಂದ ಶಾಸ್ತ್ರೀಯ ಸಂಗಿತ ಅಭ್ಯಾಸ ಮಾಡುತ್ತಿದ್ದಾರೆ. ಇವುಗಳ ಜೊತೆಗೆ ಚಿತ್ರವನ್ನು ಬಿಡಿಸುತ್ತಾರೆ.

    ನನಗೂ ನನ್ನ ಅಂಗವೈಫಲ್ಯದ ವಿಚಾರವಾಗಿ ಬಹಳ ಕಿರುಕುಳಗಳನ್ನು ಅನುಭವಿಸಿದ್ದೇನೆ. ಆದರೆ ನಾನು ಅದ್ಯಾವೂದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ. ಜೀವನದಲ್ಲಿ ತೊಂದರೆಗಳು ಇರುತ್ತವೆ ಎಂದು ಹೇಳಿದ್ದಾರೆ. ಆಕೆಗೆ ಬೆನ್ನುಮೂಳೆಯ ಸಮಸ್ಯೆಯಿದ್ದು, ಒಂದು ಗಂಟೆಗೂ ಅಧಿಕ ಕಾಲ ಕೂತು ಓದಲು ಆಗುವುದಿಲ್ಲ. ಜೊತೆಗೆ ಆಕೆ ಕತ್ತಿನ ಪಟ್ಟಿಯನ್ನು ಧರಿಸುವ ಕಾರಣ ಹೆಚ್ಚುಕಾಲ ಕುಳಿತುಕೊಳ್ಳಲು ಆಗುವುದಿಲ್ಲ. ಆದರೆ ಇದನ್ನೆಲ್ಲ ಲೆಕ್ಕಿಸದ ಪಂಡಾ ದೃಢನಿಶ್ಚಯ ಮಾಡಿ ದಿನಕ್ಕೆ ಎರಡು ಗಂಟೆ ಓದುತ್ತಾಳೆ ಎಂದು ಆಕೆಯ ತಂದೆ ಅನುಪ್ ಪಂಡಾ ತಿಳಿಸಿದ್ದಾರೆ.

    2018ರಲ್ಲಿ ನಡೆದ ಎಲ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ 97.8% ಅಂಕಗಳನ್ನು ಪಡೆದಿದ್ದ ಪಂಡಾ, ಅಂದು ಮಾಧ್ಯಮಗಳೊಂದಿಗೆ ಮಾತನಾಡಿ, ನಾನು ಎಂಜಿನಿಯರ್ ಆಗಬೇಕು ಎಂದಿದ್ದರು. ಜೊತೆಗೆ ನಾನು ಗೂಗಲ್ ಕಂಪನಿಯಲ್ಲಿ ಕೆಲಸ ಮಾಡಬೇಕು ಎಂಬ ಬಯಕೆಯನ್ನು ವ್ಯಕ್ತಪಡಿಸಿದ್ದಳು. ಅನುಷ್ಕಾ ಬೆನ್ನುಹುರಿಯಲ್ಲಿ ಜೀವಕೋಶಗಳು ನಾಶವಾಗಿದ್ದು, ಆಕೆಗೆ ಉಸಿರಾಟದ ತೊಂದರೆಯಿದೆ. ಜೊತೆಗೆ ಅವಳು ಹೆಚ್ಚು ಕಾಲ ಕುಳಿತುಕೊಳ್ಳಲು ಆಗುವುದಿಲ್ಲ. ಆದರೂ ಆಕೆ ಪರೀಕ್ಷೆ ಬರೆದಿರುವ ಸವಾಲಿನ ವಿಚಾರ ಎಂದು ಅನುಷ್ಕಾಗೆ ಚಿಕಿತ್ಸೆ ನೀಡುವ ವೈದ್ಯರು ಹೇಳಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಅನುಷ್ಕಾ ಓದುತ್ತಿರುವ ಕಾಲೇಜಿನ ಪ್ರಾಂಶುಪಾಲರಾದ ರೂಪ ಚಕ್ರವರ್ತಿಯವರು, ಅನುಷ್ಕಾ ನಮ್ಮೆಲ್ಲರಿಗೂ ಸ್ಫೂರ್ತಿ. ಅವಳಿಗೆ ಇರುವ ಓದಿನ ಮೇಲಿನ ಆಸಕ್ತಿಯನ್ನು ಬೇರೆ ಮಕ್ಕಳಲ್ಲಿ ಹುಡುಕುವುದು ಬಹಳ ಕಷ್ಟ. ಅವಳು ಸಾಧಿಸಿರುವುದನ್ನು ದೈಹಿಕವಾಗಿ ಸದೃಢವಾಗಿರುವ ಮಕ್ಕಳು ಸಾಧಿಸುವುದು ಕಷ್ಟ ಎಂದು ತಿಳಿಸಿದ್ದಾರೆ.

  • ಅಂಗವಿಕಲ ಮಗಳ ಆರೈಕೆಗಾಗಿ ತಾಯಿಯನ್ನು ಕರೆತಂದ ಕಾಂಗ್ರೆಸ್ ಮುಖಂಡರು

    ಅಂಗವಿಕಲ ಮಗಳ ಆರೈಕೆಗಾಗಿ ತಾಯಿಯನ್ನು ಕರೆತಂದ ಕಾಂಗ್ರೆಸ್ ಮುಖಂಡರು

    ಹುಬ್ಬಳ್ಳಿ: ಅಂಗವಿಕಲ ಮಗಳ ಆರೈಕೆಗಾಗಿ ಲಾಕ್‍ಡೌನ್ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿಯೇ ಸಿಲುಕಿಕೊಂಡಿದ್ದ ತಾಯಿಯನ್ನು ಹುಬ್ಬಳ್ಳಿಗೆ ಕರೆದುಕೊಂಡು ಬರುವ ಮೂಲಕ ಕಾಂಗ್ರೆಸ್ ಕಾರ್ಯಕರ್ತರ ನೇತೃತ್ವದ ಅಗೆನೆಸ್ಟ್ ಕೋವಿಡ್-19 ಸಹಾಯ ಗುಂಪು ಮಾನವೀಯತೆ ಮೆರೆದಿದ್ದಾರೆ.

    ಅಂಗವಿಕಲೆ ಪೂಜಾ ಮಲಕಾಪುರ ತಾಯಿ ಶಾಂತಾ ಮಲಕಾಪುರ ಒಂದು ದಿನದ ಲಗ್ನದ ಕಾರ್ಯಕ್ರಮ ನಿಮಿತ್ತ ಅಂಗವಿಕಲೆ ಮಗಳನ್ನು ಹುಬ್ಬಳ್ಳಿಯಲ್ಲಿ ಬಿಟ್ಟು ಬೆಳಗಾವಿ ಸಂಬಂಧಿಕರ ಮದುವೆಗಾಗಿ ಹೋಗಿದ್ದರು. ಆದರೆ ದೀರ್ಘ ಅವಧಿಯ ಲಾಕ್‍ಡೌನ್ ಹಿನ್ನೆಲೆಯಲ್ಲಿ ಅವರು ಅನಿವಾರ್ಯವಾಗಿ ಬೆಳಗಾವಿಯಲ್ಲಿಯೇ ಉಳಿಯಬೇಕಾಯಿತು. ಆದರೆ ಅಂಗವಿಕಲ ಮಗುವಿನ ಊಟೋಪಚಾರ ಮತ್ತು ಆರೈಕೆಯನ್ನು ಕಳೆದ 20 ದಿನಗಳಿಂದ ಸ್ಥಳೀಯ ಜೈನ ಸಮಾಜದವರು ಮಾಡುತ್ತಿದ್ದರು.

    ಆದರೆ ಪುನಃ ದೀರ್ಘ ಅವದಿಯ ಲಾಕಡೌನ್ ಘೋಷಿಸಿದ್ದರಿಂದ ಅಂಗವಿಕಲ ಮಗಳು ಮತ್ತು ತಾಯಿ ತುಂಬಾ ಆತಂಕಕ್ಕೆ ಒಳಗಾಗಿದ್ದು, ಕಳೆದ ಎಂಟು ದಿನಗಳಿಂದ ಬಹಳಷ್ಟು ಪ್ರಯತ್ನ ಮಾಡಿದರು ಬರಲು ಆಗಿರಲಿಲ್ಲ. ನಂತರ ಈ ವಿಚಾರವನ್ನು ಸ್ಥಳೀಯರು ಸಹಾಯ ಗುಂಪು ಅಗೆನೆಸ್ಟ್ ಕೋವಿಡ್-19 ಗಮನಕ್ಕೆ ತಂದರು. ನಂತರ ಕಾಂಗ್ರೆಸ್ ಮುಖಂಡರಾದ ಶಾಕಿರ್ ಸನದಿ ಮತ್ತು ರಾಜಶೇಖರ್ ಮೆಣಸಿನಕಾಯಿ ಅವರು ಧಾರವಾಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅನಿಲ್ ಕುಮಾರ್ ಪಾಟೀಲ್ ರವರ ಗಮನಕ್ಕೆ ತಂದು ಘಟನೆಯ ಸಂಪೂರ್ಣ ವಿವರಣೆ ನೀಡಿದರು.

    ಆಗ ಅವರು ಈ ವಿಷಯವನ್ನು ಪೊಲೀಸರಿಗೆ ಹೇಳಿದರು. ಬೆಳಗಾವಿಯಲ್ಲಿ ಸಿಲುಕಿರುವ ಅಂಗವಿಕಲೆಯ ತಾಯಿಯನ್ನು ಕರೆತರುವುದು ಅನಿವಾರ್ಯವಾಗಿದ್ದರಿಂದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಮತ್ತು ಇತರ ಆಡಳಿತ ಯಂತ್ರದ ಮುಖ್ಯಸ್ಥರನ್ನು ಸಂಪರ್ಕಿಸಿ ಬೆಳಗಾವಿಯಿಂದ ಈ ಅಂಗವಿಕಲೆಯ ತಾಯಿಯನ್ನು ಕರೆತರಲು ವಾಹನಕ್ಕೆ ವಿಶೇಷ ಪಾಸ್ ವ್ಯವಸ್ಥೆ ಮಾಡಿ ಮಾನವೀಯತೆ ಮರೆದಿದ್ದಾರೆ.

  • ವಿಶೇಷ ಅಭಿಮಾನಿಯನ್ನು ಭೇಟಿಯಾಗಿ ಆಟೋಗ್ರಾಫ್ ನೀಡಿದ ವಿರಾಟ್

    ವಿಶೇಷ ಅಭಿಮಾನಿಯನ್ನು ಭೇಟಿಯಾಗಿ ಆಟೋಗ್ರಾಫ್ ನೀಡಿದ ವಿರಾಟ್

    ಇಂದೋರ್: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಇಂದು ಇಂದೋರ್ ನಲ್ಲಿ ಅವರ ವಿಶೇಷ ಅಭಿಮಾನಿಯೊಬ್ಬರನ್ನು ಭೇಟಿಯಾಗಿ ಆಟೋಗ್ರಾಫ್ ನೀಡಿದ್ದಾರೆ.

    ಬಾಂಗ್ಲಾದೇಶದ ವಿರುದ್ಧ ಇಂದೋರ್ ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಮತ್ತು 130 ರನ್‍ಗಳ ಅಂತರದಲ್ಲಿ ಪಂದ್ಯವನ್ನು ಗೆದ್ದುಕೊಂಡಿದೆ. ಈ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ. ಮೈದಾನದಲ್ಲಿ ಕೊಹ್ಲಿ ಅವರ ನಾಯಕತ್ವವನ್ನು ಶ್ಲಾಘಿಸಿರುವ ಕ್ರೀಡಾಭಿಮಾನಿಗಳು. ಮೈದಾನದಾಚೆಗೆ ಅವರ ಹೃದಯಂತಿಕೆ ನೋಡಿ ಬೆರಗಾಗಿದ್ದಾರೆ.

    ಇಂದೋರ್ ಪಂದ್ಯ ಮುಗಿಸಿ ಹೊರಡುತ್ತಿದ್ದ ಕೊಹ್ಲಿ ಅವರನ್ನು ಭೇಟಿಯಾಗಲು ಅವರ ವಿಶೇಷ ಅಂಗವಿಕಲ ಅಭಿಮಾನಿಯೊಬ್ಬರು ಬಾಗಿಲ ಬಳಿ ಕಾದು ಕುಳಿತಿದ್ದರು. ಆಗ ಅವರ ಬಳಿ ಬಂದ ಕೊಹ್ಲಿ ಅವರು ತಂದಿದ್ದ ಕ್ಯಾಪ್ ಮೇಲೆ ಆಟೋಗ್ರಾಫ್ ಹಾಕಿ ಅವರನ್ನು ಮಾತನಾಡಿಸಿ ಅವರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಕೊಹ್ಲಿ ಅಭಿಮಾನಿಗಳು ಇದನ್ನು ನೋಡಿ ಮೆಚ್ಚಿಕೊಂಡಿದ್ದಾರೆ.

    ಮೈದಾನದಲ್ಲಿ ಅಬ್ಬರಿಸುವ ಕೊಹ್ಲಿ ಅವರ ತಮ್ಮ ಅಭಿಮಾನಿಗಳ ಬಳಿ ಈ ರೀತಿ ನಡೆದುಕೊಳ್ಳುತ್ತಿರುವುದು ಇದೇ ಮೊದಲಲ್ಲ, ಈ ಹಿಂದೆ ದಕ್ಷಿಣ ಅಫ್ರಿಕಾ ವಿರುದ್ಧ ಟೆಸ್ಟ್ ಸರಣಿ ವೇಳೆ ಮೈದಾನಕ್ಕೆ ಬಂದಿದ್ದ ವೈಜಾಗ್ ಅಭಿಮಾನಿಯೊಬ್ಬನನ್ನು ಕೂಡ ಕೊಹ್ಲಿ ಅವರ ಭೇಟಿಯಾಗಿ ಮಾತನಾಡಿಸಿದ್ದರು. ಆ ಅಭಿಮಾನಿ ವಿರಾಟ್ ಕೊಹ್ಲಿ ಅವರ ಜರ್ಸಿ ಸಂಖ್ಯೆ ಸೇರಿದಂತೆ ಅವರ ಹೆಸರನ್ನು ತಮ್ಮ ಮೈಮೇಲೆ ಹಚ್ಚೆ ಹಾಕಿಸಿಕೊಂಡಿದ್ದರು.

    ಇದರ ಜೊತೆಗೆ ಕೊಹ್ಲಿ ಅವರು ಬಾಂಗ್ಲಾ ವಿರುದ್ಧ ಪಂದ್ಯ ನಡೆಯುವ ವೇಳೆ ಅಭಿಮಾನಿಯೊಬ್ಬ ಏಕಾಏಕಿ ಕ್ರೀಡಾಂಗಣದಲ್ಲಿ ಹಾಕಿದ್ದ ಬೇಲಿಯನ್ನು ಹಾರಿ ಮೈದಾನಕ್ಕೆ ಪ್ರವೇಶ ಮಾಡಿದ್ದ. ಅಲ್ಲದೇ ನೇರ ಟೀಂ ಇಂಡಿಯಾ ಆಟಗಾರರು ನಿಂತಿದ್ದ ಸ್ಥಳಕ್ಕೆ ತೆರಳಿ ಕೊಹ್ಲಿ ಕಾಲಿಗೆ ನಮಸ್ಕರಿಸಿದ್ದರು. ಕೂಡಲೇ ಕ್ರೀಡಾಂಗಣದ ಸಿಬ್ಬಂದಿ ಎಚ್ಚೆತ್ತು, ಅಭಿಮಾನಿಯನ್ನು ಹೊರ ಕರೆದುಕೊಂಡು ಮುಂದಾಗಿದ್ದರು, ಆದರೆ ಈ ವೇಳೆ ಸಿಬ್ಬಂದಿಯನ್ನು ತಡೆದ ಕೊಹ್ಲಿ ಅಭಿಮಾನಿಯೊಂದಿಗೆ ಮಾತನಾಡಿ ಅವರನ್ನು ಏನೂ ಮಾಡಬೇಡಿ ಎಂದು ಸೂಚಿಸಿ ಕಳುಹಿಸಿಕೊಟ್ಟಿದ್ದರು.

    ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಯ ಈ ವಿಡಿಯೋ ವೈರಲ್ ಆಗಿದ್ದು, ಸಿಬ್ಬಂದಿಗೆ ಅಭಿಮಾನಿಯನ್ನು ಏನು ಮಾಡದಂತೆ ಸೂಚನೆ ನೀಡಿದ್ದ ಕೊಹ್ಲಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ ವ್ಯಕ್ತವಾಗಿದೆ. ಆದರೆ ಅಭಿಮಾನಿಯ ಈ ಹುಚ್ಚಾಟಕ್ಕೆ ರಕ್ಷಣಾ ಸಿಬ್ಬಂದಿ ಮಾತ್ರ ಅವಾಕ್ ಆಗಿದ್ದರು. ಈ ಹಿಂದೆ ಇಂತಹದ್ದೇ ಘಟನೆ ನಡೆದ ಸಂದರ್ಭದಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಸುನೀಲ್ ಗವಾಸ್ಕರ್ ರಕ್ಷಣಾ ಸಿಬ್ಬಂದಿಯ ವಿರುದ್ಧ ಕೆಂಡಾಮಂಡಲರಾಗಿದ್ದರು. ಪಂದ್ಯವನ್ನು ಉಚಿತವಾಗಿ ನೋಡಲು ರಕ್ಷಣಾ ಸಿಬ್ಬಂದಿಯನ್ನು ನೇಮಕ ಮಾಡಿದಂತೆ ಕಾಣುತ್ತಿದೆ. ಭಾರತದಲ್ಲೇ ಇಂತಹ ಘಟನೆಗಳು ನಡೆಯುತ್ತದೆ ಎಂದು ಟೀಕೆ ಮಾಡಿದ್ದರು.

  • ಅಂಗವೈಕಲ್ಯವನ್ನು ಹಿಮ್ಮೆಟ್ಟಿ ಸಾಧನೆಯ ಮೆಟ್ಟಿಲೇರಿದ ನೂರ್ ಜಲೀಲಾ

    ಅಂಗವೈಕಲ್ಯವನ್ನು ಹಿಮ್ಮೆಟ್ಟಿ ಸಾಧನೆಯ ಮೆಟ್ಟಿಲೇರಿದ ನೂರ್ ಜಲೀಲಾ

    ತಿರುವನಂತಪುರಂ: ಸಾಧನೆ ಮಾಡಲು ಮನಸ್ಸು ಇದ್ದರೆ ಸಾಕು ಯಾವುದೇ ಅಡ್ಡಿಗಳನ್ನು ಹಿಮ್ಮೆಟ್ಟಿ ಗುರಿ ತಲುಪಬಹುದು ಎನ್ನುವುದಕ್ಕೆ ಕೇರಳದ ಕೋಝಿಕೋಡ್ ಮೂಲದ 17 ವರ್ಷದ ಯುವತಿ ಉದಾಹರಣೆಯಾಗಿದ್ದಾರೆ. ಅಂಗವೈಕಲ್ಯವಿದ್ದರು ತನ್ನ ಪ್ರತಿಭೆ ಮೂಲಕ ಎಲ್ಲರ ಮೆಚ್ಚುಗೆ ಪಡೆದಿದ್ದಾರೆ.

    ಕೋಝಿಕೋಡ್ ಮೂಲದವರಾದ ನೂರ್ ಜಲೀಲಾ ಅಂಗವಿಕಲೆಯಾಗಿ ಜನಿಸಿದ್ದರೂ, ತನ್ನ ಹಾದಿಗೆ ಅಂಗವೈಕಲ್ಯ ಯಾವತ್ತೂ ಕೂಡ ಅಡ್ಡಿಯಾಗಲೇ ಇಲ್ಲ ಅನ್ನೋದಕ್ಕೆ ಸ್ಪಷ್ಟ ನಿದರ್ಶನವಾಗಿದ್ದಾರೆ.

    ಹುಟ್ಟಿನಿಂದಲೂ ಜಲೀಲಾಗೆ ಮುಂದೋಳು, ಕಾಲುಗಳು ಇಲ್ಲ. ಆದರೆ ಮೈಕ್ ಹಿಡಿದು ಮಾತಿಗೆ ನಿಂತರೆ ಸಭೆಯಲ್ಲಿ ಇದ್ದವರು ಮಂತ್ರಮುಗ್ಧವಾಗುವಂತೆ ವಾಕ್ಚಾತುರ್ಯ ಹೊಂದಿದ್ದಾರೆ. ಸಾಮಾಜಿಕ ಹೋರಾಟಗಾರ್ತಿಯಾಗಿ ಸಾಮಾಜ ಸೇವೆ ಜೊತೆಗೆ ಪ್ರೇರಣಾ ಭಾಷಣಗಳನ್ನು ಮಾಡಿ, ಹಲವರಿಗೆ ಸ್ಪೂರ್ತಿ ಆಗಿದ್ದಾರೆ. ವಯೊಲಿನ್ ಹಿಡಿದು ನುಡಿಸಲು ನಿಂತರೆ ಕೇಳುಗರನ್ನು ಸಂಗೀತ ಸುಧೆಯಲ್ಲಿ ತೇಲುವಂತೆ ಮಾಡುತ್ತಾರೆ. ಹಾಡು, ಚಿತ್ರಕಲೆ, ಭಾಷಣ ಮಾಡುವುದು ಹೀಗೆ ಬಹುಮುಖ ಪ್ರತಿಭೆಯನ್ನು ಜಲೀಲಾ ಹೊಂದಿದ್ದಾರೆ.

    ಚಿಕ್ಕ ವಯಸ್ಸಿನಲ್ಲಿದ್ದಾಗ ಒಂದು ದಿನ ಜಲೀಲಾ ಪುಸ್ತಕದಲ್ಲಿ ಬಣ್ಣ ಹಚ್ಚುತ್ತಿದ್ದರು. ಇದನ್ನು ನೋಡಿದ ಪೋಷಕರು ಮಗಳಿಗೆ ಪ್ರೋತ್ಸಾಹಿಸಿದರು. ಆಕೆಗೆ ಕಲೆಯನ್ನು ಮುಂದುವರಿಸಲು ಸಹಕರಿಸಿದರು. ಬಳಿಕ 7ನೇ ತರಗತಿಯಲ್ಲಿದ್ದಾಗ ವಯೊಲಿನ್ ನುಡಿಸುವುದನ್ನು ಕಲಿತು, ಚಿತ್ರಕಲೆ ಜೊತೆಗೆ ಸಂಗೀತವನ್ನು ಕರಗತ ಮಾಡಿಕೊಂಡು ಹಲವಾರು ಸ್ಪರ್ಧೆಗಳಲ್ಲಿ ಗೆದ್ದು ಜಲೀಲಾ ಕೀರ್ತಿ ಗಳಿಸಿದ್ದಾರೆ.

    ಸದ್ಯ ಎನ್‍ಜಿಓ ಜೊತೆಗೆ ಕೈಜೋಡಿಸಿರುವ ಜಲೀಲಾ, ತಮ್ಮಂತೆ ಅಂಗವಿಕಲರಾಗಿರುವ ಮಕ್ಕಳಿಗೆ ಸಹಾಯ ಮಾಡುತ್ತಿದ್ದಾರೆ. ಜಲೀಲಾರ ಈ ಹುಮ್ಮಸ್ಸು, ಪ್ರತಿಭೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅಲ್ಲದೆ ಅಮೆರಿಕದ ನಾಸಾಗೆ ಭೇಟಿ ನೀಡಬೇಕು, ಮೌಂಟ್ ಎವರೆಸ್ಟ್ ಹತ್ತುಬೇಕು ಎಂಬುದು ನನ್ನ ಕನಸು ಎಂದು ಜಲೀಲಾ ಹೇಳಿಕೊಂಡಿದ್ದಾರೆ.

    ಎಲ್ಲಾ ಸರಿಯಿದ್ದರೂ ಕೂಡ ಕೆಲವರು ನಮ್ಮ ಕೈಯಲ್ಲಿ ಏನೂ ಆಗಲ್ಲ ಎಂದು ತಮ್ಮ ಕನಸಿಗೆ ಬೀಗ ಹಾಕಿಟ್ಟುಕೊಂಡು ಸುಮ್ಮನಾಗಿ ಬಿಡುತ್ತಾರೆ. ಆದರೆ ಮುಂದೋಳು, ಕಾಲುಗಳು ಇಲ್ಲದಿದ್ದರೂ ಜೀವನದಲ್ಲಿ ಹತಾಶರಾಗದೆ ತಮ್ಮಗಿದ್ದ ಸಮಸ್ಯೆಯನ್ನು ಹಿಮ್ಮೆಟ್ಟಿ ಅನೇಕರಿಗೆ ಜಲೀಲಾ ಸ್ಪೂರ್ತಿಯಾಗಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಸಾಧಕರ ಪಟ್ಟಿಗೆ ಸೇರಿದ್ದಾರೆ.

  • ಅಂಗವೈಕಲ್ಯವನ್ನು ಮೆಟ್ಟಿನಿಂತು ಫ್ಯಾಷನ್ ಲೋಕದಲ್ಲಿ ಮಿಂಚುತ್ತಿರುವ ಮಹಿಳೆ

    ಅಂಗವೈಕಲ್ಯವನ್ನು ಮೆಟ್ಟಿನಿಂತು ಫ್ಯಾಷನ್ ಲೋಕದಲ್ಲಿ ಮಿಂಚುತ್ತಿರುವ ಮಹಿಳೆ

    ಮೆಕ್ಸಿಕೋ: ಅಂಗವೈಕಲ್ಯದಿಂದ ಬಳಲುತ್ತಿರುವವರು ಏನಾದರೂ ಸಾಧಿಸಿ ತೋರಿಸಿ ಎಲ್ಲರಿಗೂ ಮಾದರಿಯಾಗುತ್ತಿದ್ದಾರೆ. ಈ ಸಾಲಿಗೆ ವಸ್ತ್ರ ವಿನ್ಯಾಸಗಾರ್ತಿ ಮೆಕ್ಸಿಕೋದ ಅಡ್ರಿಯಾನ ಮೆಸಿಯಾಸ್ ಕೂಡ ಸೇರುತ್ತಾರೆ. ಇವರು ತಮ್ಮ ಅಂಗವೈಕಲ್ಯವನ್ನು ಮೆಟ್ಟಿನಿಂತು ವಿಶೇಷ ಸಾಧನೆ ನಿರ್ಮಿಸಿದ್ದಾರೆ.

    ಮೆಕ್ಸಿಕೋದ ಗ್ವಾದಾಲಹಾರದ ಅಡ್ರಿಯಾನ ಮೆಸಿಯಾಸ್(41) ಈಗ ಫ್ಯಾಶನ್ ಲೋಕದಲ್ಲಿ ಮಿಂಚುತ್ತಿದ್ದಾರೆ. ವಿಶೇಷ ಏನೆಂದರೆ ಅವರಿಗೆ ಹುಟ್ಟಿನಿಂದ ಎರಡೂ ಕೈ ಇಲ್ಲ. ಕೈ ಇಲ್ಲದೇ ಇದ್ದರೂ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಯಶಸ್ಸಿನ ಉತ್ತುಂಗಕ್ಕೆ ಏರಿ ಮಾದರಿಯಾಗಿದ್ದಾರೆ.

    ಚಿಕ್ಕಂದಿನಿಂದಲೇ ಅಡ್ರಿಯಾನ ಕಾಲುಗಳನ್ನು ಬಳಸಿಕೊಂಡೇ ಅವರ ಕೆಲಸಗಳನ್ನು ಮಾಡುತ್ತಾರೆ. ಕಾಲಿನಿಂದಲೇ ಬರೆಯುತ್ತಾರೆ, ಚಿತ್ರಗಳನ್ನು ಬಿಡಿಸುತ್ತಾರೆ. ಅಲ್ಲದೇ ಫ್ಯಾಷನ್ ಡಿಸೈನಿಂಗ್ ಕೂಡ ಮಾಡುತ್ತಾರೆ. ಅಲ್ಲದೆ ಅಡ್ರಿಯಾನ ಅವರು ಕಾನೂನು ಡಿಗ್ರಿಯನ್ನು ಕೂಡ ಪಡೆದಿದ್ದಾರೆ. ಆದರೆ ಎಲ್ಲೂ ಕೆಲಸ ಸಿಗದ ಕಾರಣಕ್ಕೆ ಅವರು ಫ್ಯಾಶನ್ ಲೋಕಕ್ಕೆ ಕಾಲಿಟ್ಟಿದ್ದರು.

    ಕಳೆದ ತಿಂಗಳು ಫ್ಯಾಶನ್ ವೀಕ್ ಮೆಕ್ಸಿಕೋ (ಎಫ್‍ಡಬ್ಲ್ಯೂಎಮ್) ನಲ್ಲಿ ತನ್ನ ಮೊದಲ ಸಂಗ್ರಹವನ್ನು ಅವರು ಅನಾವರಣಗೊಳಿಸಿದರು. ಅಲ್ಲಿ ವಿಭಿನ್ನವಾಗಿ-ವಿರಳವಾದ ಮಾದರಿಗಳು 12 ರೋಮಾಂಚಕ ವಿನ್ಯಾಸ ಉಡುಪುಗಳನ್ನು ಪ್ರರ್ದಶಿಸಿ ಎಲ್ಲರ ಮನ ಗೆದ್ದಿದ್ದರು.

    ಅಷ್ಟೇ ಅಲ್ಲದೇ ಇತ್ತೀಚಿಗೆ ವಿಕಲಚೇತನ ರೂಪದರ್ಶಿಯರನ್ನೇ ಬಳಸಿ ಫ್ಯಾಶನ್ ಷೋ ನಡೆಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇಷ್ಟೇ ಅಲ್ಲದೇ ಒಂದೇ ನಿಮಿಷದಲ್ಲಿ ಕಾಲಿನಿಂದ ಅತೀ ಹೆಚ್ಚು ಮೇಣದ ಬತ್ತಿ ಹಚ್ಚಿರುವ ಗಿನ್ನಿಸ್ ದಾಖಲೆಯನ್ನೂ ಕೂಡ ಅಡ್ರಿಯಾನ ನಿರ್ಮಿಸಿದ್ದಾರೆ.

  • ಕುತ್ತಿಗೆ ಮೇಲೆ ಹಲ್ಲೆ ಮಾಡಿ ವಿಕಲಚೇತನ ತಂಗಿಯನ್ನೇ ಕೊಂದ ಅಣ್ಣ!

    ಕುತ್ತಿಗೆ ಮೇಲೆ ಹಲ್ಲೆ ಮಾಡಿ ವಿಕಲಚೇತನ ತಂಗಿಯನ್ನೇ ಕೊಂದ ಅಣ್ಣ!

    ಕಾರವಾರ: ಕುಡಿತದ ಅಮಲಿನಲ್ಲಿ ಅಣ್ಣನೇ ಅಂಗವಿಕಲ ಸಹೋದರಿಯನ್ನು ಕೊಲೆ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಂಕಿಯ ಕುಚ್ಚೋಡಿಯ ಬಳಿ ನಡೆದಿದೆ.

    ಜ್ಯೋತಿ ಮಾದೇವ ನಾಯ್ಕ(27) ಕೊಲೆಯಾದ ಅಂಗವಿಕಲೆಯಾಗಿದ್ದು, ಸತೀಶ್ ಮಾದೇವ ನಾಯ್ಕ(35) ಕೊಲೆ ಮಾಡಿ ಆರೋಪಿ. ಅಂಗವಿಕಲೆಯಾಗಿದ್ದ ತಂಗಿಯನ್ನು ಸಾಕಲು ಕಷ್ಟ ಎಂಬ ಕಾರಣಕ್ಕೆ ಕುಡಿದ ಅಮಲಿನಲ್ಲಿ ಸತೀಶ್ ಕುತ್ತಿಗೆ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ. ಮನೆಯಲ್ಲಿದ್ದ ತಾಯಿ, ಅತ್ತಿಗೆಯನ್ನು ಹೊರಗೆ ಓಡಿಸಿ ಈ ಕೃತ್ಯ ಎಸಗಿದ್ದಾನೆ.

    ಇನ್ನೋರ್ವ ಸಹೋದರ ರೋಹಿತ್ ನಾಯ್ಕ ದೂರಿನ ಮೇಲೆ ಆರೋಪಿಂ ಸತೀಶ್ ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಆಧಾರ್ ಕಾರ್ಡ್‍ಗಾಗಿ ತಾಲೂಕು ಆಫೀಸಿಗೆ ಮಹಿಳೆ ತೆವಳಿಕೊಂಡೇ ಹೋದ ಮನಕಲಕುವ ವಿಡಿಯೋ ನೋಡಿ

    ಆಧಾರ್ ಕಾರ್ಡ್‍ಗಾಗಿ ತಾಲೂಕು ಆಫೀಸಿಗೆ ಮಹಿಳೆ ತೆವಳಿಕೊಂಡೇ ಹೋದ ಮನಕಲಕುವ ವಿಡಿಯೋ ನೋಡಿ

    ದಾವಣಗೆರೆ: ಮಹಿಳೆಯೊಬ್ಬಳು ಆಧಾರ್ ಕಾರ್ಡ್ ಗಾಗಿ ತಾಲೂಕು ಅಫೀಸಿಗೆ ತೆವಳಿಕೊಂಡೇ ಹೋದ ಮನ ಕಲುಕುವ ಘಟನೆ ದಾವಣಗೆರೆ ಜಿಲ್ಲೆಯ ಹರಪ್ಪನಹಳ್ಳಿ ತಾಲ್ಲೂಕು ಕಛೇರಿಯಲ್ಲಿ ನಡೆದಿದೆ.

    ಹರಪ್ಪನಹಳ್ಳಿ ತಾಲ್ಲೂಕಿನ ಗೌರಮ್ಮ ಅಂಗವಿಕಲೆಯಾಗಿದ್ದು, ಅಂಗವಿಕಲರ ವೇತನಕ್ಕೆ ಆಧಾರ್ ಕಡ್ಡಾಯ ಮಾಡಿರುವುದರಿಂದ ಐದು ತಿಂಗಳಿನಿಂದ ತಾಲೂಕು ಕಛೇರಿಗೆ ಅಲೆದಾಡುತ್ತಿದ್ದಾರೆ. ಇದ್ದ ಊರಿನಲ್ಲಿ ಆಧಾರ್ ಕಾರ್ಡ್ ಮಾಡಿಸಲು ಮಹಿಳೆಯ ಕೈ ಬೆರಳುಗಳು ಸರಿ ಇಲ್ಲದ ಕಾರಣ ಹರಪ್ಪನಹಳ್ಳಿ ತಾಲೂಕು ಕಛೇರಿಗೆ ಹೋಗುವಂತೆ ಹೇಳಿದ್ದಾರೆ.

    ಆದ್ರೆ ಮಹಿಳೆ ಮಾತ್ರ ಆಧಾರ್ ಕಾರ್ಡ್ ಮಾಡಿಸಲು ತೆವಳುತ್ತಾ ತಾಲೂಕು ಕಚೇರಿಗೆ ಅಲೆದಾಟ ನಡೆಸಿದ್ರೂ ಅಧಿಕಾರಿಗಳಿಗೆ ಮಾತ್ರ ಕಿಂಚಿತ್ತೂ ಕರುಣೆ ಬಂದಿಲ್ಲ. ಪ್ರತಿನಿತ್ಯ ಈ ರೀತಿ ಬಂದು ಹೋಗುತ್ತಿರುವುದನ್ನು ಅಲ್ಲಿನ ಸ್ಥಳೀಯರು ನೋಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಸದ್ಯ ಅಧಿಕಾರಿಗಳು ಆಧಾರ್ ಕಾರ್ಡ್ ಮಾಡಿಕೊಟ್ಟಿದ್ದಾರೆ. ಒಬ್ಬಂಟಿಯಾಗಿಯೇ ಅಂಗವಿಕಲರ ವೇತನವನ್ನೇ ನಂಬಿ ಜೀವನ ನಡೆಸುತ್ತಿರೋ ಮಹಿಳೆಯ ಸ್ಥಿತಿ ಚಿಂತಾಜನಕವಾಗಿದೆ. ಮಹಿಳೆ ತೆವಳಿಕೊಂಡು ಹೋಗುತ್ತಿರುವ ವಿಡಿಯೋವನ್ನು ಸ್ಥಳೀಯರು ಸೆರೆಹಿಡಿದು ಮಾಧ್ಯಮಗಳಿಗೆ ನೀಡಿದ್ದಾರೆ.

    https://www.youtube.com/watch?v=iojQckkOSMw&feature=youtu.be