Tag: ಅಂಗವಿಕಲ

  • ಬಹಿರಂಗವಾಗಿ ಕ್ಷಮೆ ಕೇಳಿದ ಮಲಯಾಳಂ ಖ್ಯಾತ ನಟ ಪೃಥ್ವಿ ಸುಕುಮಾರನ್

    ಬಹಿರಂಗವಾಗಿ ಕ್ಷಮೆ ಕೇಳಿದ ಮಲಯಾಳಂ ಖ್ಯಾತ ನಟ ಪೃಥ್ವಿ ಸುಕುಮಾರನ್

    ಲಯಾಳಂನ ಖ್ಯಾತ ನಟ, ಇದೀಗ ಕನ್ನಡದಲ್ಲೂ ಸಿನಿಮಾ ಮಾಡುತ್ತಿರುವ ಪೃಥ್ವಿ ಸುಕುಮಾರನ್ ನಡೆಸಿದ್ದ ಕಡುವ ಸಿನಿಮಾ ದೇಶಾದ್ಯಂತ ರಿಲೀಸ್ ಆಗಿದೆ. ಈ ಸಿನಿಮಾವನ್ನು ಪ್ರೇಕ್ಷಕರು ಒಪ್ಪಿಕೊಂಡಿದ್ದಾರೆ. ಆದರೆ, ಇದೇ ಸಿನಿಮಾದ ಕಾರಣಕ್ಕಾಗಿ ಪೃಥ್ವಿ ಸುಕುಮಾರನ್ ಅವರಿಗೆ ಕ್ಷಮೆ ಕೇಳುವಂತಹ ಪರಿಸ್ಥಿತಿ ಎದುರಾಗಿದೆ. ಈ ಸಿನಿಮಾದಲ್ಲಿ ವಿಶೇಷ ಚೇತನ ಮಕ್ಕಳ ಪೋಷಕರಿಗೆ ಅವಮಾನ ಮಾಡಲಾಗಿದೆ ಎಂದು ಆರೋಪ ಎದುರಾಗಿತ್ತು.

    ಪೃಥ್ವಿ ಸುಕುಮಾರನ್ ಅದ್ಭುತ ನಟ ಮತ್ತು ನಿರ್ದೇಶಕ. ಸೆನ್ಸಿಬಲ್ ನಟ ಎಂದೇ ಖ್ಯಾತರಾದವರು. ಆದರೆ, ಕಡುವ ಸಿನಿಮಾದಲ್ಲಿ ವಿಶೇಷ ಚೇತನ ಮಕ್ಕಳ ಪಾಲಕರನ್ನು ಅವಮಾನಿಸಿದ್ದರು. ಪಾಲಕರ ತಪ್ಪಿನಿಂದಾಗಿಯೇ ಇಂತಹ ಮಕ್ಕಳು ಜನಿಸುತ್ತಾರೆ ಎಂದು ಅರ್ಥ ಬರುವಂತಹ ಸಂಭಾಷಣೆಯನ್ನು ಬಳಸಲಾಗಿತ್ತು. ಹಾಗಾಗಿ ಪೋಷಕರು ಆಕ್ಷೇಪ ವ್ಯಕ್ತ ಪಡಿಸಿದ್ದರು. ಕಾನೂನು ಮೊರೆ ಹೋಗುವುದಾಗಿಯೂ ತಿಳಿಸಿದ್ದರು. ಇದನ್ನೂ ಓದಿ:ಸ್ಯಾಂಡಲ್‌ವುಡ್‌ಗೆ ತೆಲುಗು ನಟ ತ್ರಿಗುಣ್ ಪಾದಾರ್ಪಣೆ

    ಸಾಮಾಜಿಕ ಜಾಲತಾಣದಲ್ಲಿ ಸಿನಿಮಾ ವಿರುದ್ಧ ಕೂಗು ಹೆಚ್ಚಾಗುತ್ತಿದ್ದಂತೆಯೇ ಮೊದಲು ಆ ದೃಶ್ಯಕ್ಕೆ ಕತ್ತರಿ ಹಾಕಲಾಗಿದೆ. ಆನಂತರ ನಟ ಪೃಥ್ವಿ ಸುಕುಮಾರನ್ ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ. ನಮ್ಮಿಂದ ತಪ್ಪಾಗಿದೆ ಕ್ಷಮಿಸಿ ಎಂದು ಅವರು ಕೇಳಿಕೊಂಡಿದ್ದಾರೆ. ಕಡುವ ಚಿತ್ರದ ನಿರ್ದೇಶಕ ಶಾಜಿ ಕೈಲಾಸ್ ಕೂಡ ಬಹಿರಂಗವಾಗಿಯೇ ಪಾಲಕರಿಗೆ ಕ್ಷಮೆ ಕೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಒಂದು ಕಾಲಿನಲ್ಲೇ ಶಾಲೆಗೆ ಹೋಗುತ್ತಿರುವ ವಿದ್ಯಾರ್ಥಿಯ ಸಹಾಯಕ್ಕೆ ನಿಂತ ಸೋನು ಸೂದ್

    ಒಂದು ಕಾಲಿನಲ್ಲೇ ಶಾಲೆಗೆ ಹೋಗುತ್ತಿರುವ ವಿದ್ಯಾರ್ಥಿಯ ಸಹಾಯಕ್ಕೆ ನಿಂತ ಸೋನು ಸೂದ್

    ಬಾಲಿವುಡ್ ಸ್ಟಾರ್ ಸೋನು ಸೂದ್ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲ್ಲೇ ಇರುತ್ತಾರೆ. ಅದರಲ್ಲೂ ಸಿನಿಮಾಗಿಂತ ಹೆಚ್ಚಾಗಿ ಸಮಾಜಮುಖಿ ಕಾರ್ಯಗಳಿಂದ ಹೆಚ್ಚೆಚ್ಚು ಗುರುತಿಸಿಕೊಂಡಿದ್ದಾರೆ. ಈಗ ಬಡ ಅಂಗವಿಕಲ ವಿದ್ಯಾರ್ಥಿಯ ಸಹಾಯಕ್ಕೆ ಸೋನು ಸೂದ್ ನಿಂತಿದ್ದಾರೆ.

    ಬಹುಭಾಷಾ ಸಿನಿಮಾಗಳಲ್ಲಿ ಆಕ್ಟೀವ್ ಆಗಿರುವ ನಟ ಸೋನು ಸೂದ್ ನಟನಾಗಿ, ಪೋಷಕ ಪಾತ್ರ ಮತ್ತು ಖಳನಾಯಕನಾಗಿ ಗುರುತಿಸಿಕೊಂಡಿದ್ದಾರೆ. ಸಿನಿಮಾಗಿಂತ ಸಾಮಾಜಿಕ ಕಾರ್ಯಗಳ ಮೂಲಕ ಸಾಕಷ್ಟು ಅಭಿಮಾನಿಗಳ ಮನಗೆದ್ದಿದ್ದಾರೆ. ಜೊತೆಗೆ ಕೋವಿಡ್ ವೇಳೆಯಲ್ಲಿ ಸಂಕಷ್ಟದಲ್ಲಿರು ಅದೆಷ್ಟೊ ಜನರ ಕಷ್ಟಕ್ಕೆ ಸೋನು ಸಾಥ್ ನೀಡಿದ್ದಾರೆ. ಈಗ ಅಂಗವಿಕಲ ವಿದ್ಯಾರ್ಥಿಯ ಸಹಾಯಕ್ಕೆ ಧಾವಿಸಿದ್ದಾರೆ. ಇದನ್ನೂ ಓದಿ: ಹತ್ತು ವರ್ಷಗಳ ನಂತರ ತೆಲುಗಿಗೆ ಡಬ್ ಆಯಿತು ಯಶ್ ನಟನೆಯ ಲಕ್ಕಿ ಸಿನಿಮಾ

    ಇದೀಗ ಬಿಹಾರದ ಜಮುಯಿ ಜಿಲ್ಲೆಯವಳಾದ 10 ವರ್ಷದ ಸೀಮಾ ಎಂಬ ಅಂಗವಿಕಲ ಹುಡುಗಿಯ ಸಹಾಯಹಸ್ತ ನೀಡಿದ್ದಾರೆ. 2 ವರ್ಷಗಳ ಹಿಂದೆ ಅಪಘಾತವೊಂದರಲ್ಲಿ ಕಾಲನ್ನು ಕತ್ತರಿಸಬೇಕಾಯಿತು. ಆದರೂ ಹೆದರದೆ ಕುಗ್ಗದೇ ತನ್ನ ಓದಿನತ್ತ ಆಸಕ್ತಿ ತೋರಿದ್ದಾಳೆ. ಇನ್ನು ಆ ಹುಮ್ಮಸ್ಸಿನಿಂದಲೇ ತನ್ನ ಮನೆಯಿಂದ 1 ಕಿಲೋ ಮೀಟರ್ ದೂರವಿರುವ ಶಾಲೆಗೆ ಪ್ರತಿದಿನ ಕುಂಟುತ್ತಲೇ ಒಂದೇ ಕಾಲಿನಲ್ಲಿ ಹೋಗ್ತಿದ್ದಾಳೆ. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ವಿಚಾರ ತಿಳಿದ ನಟ ಸೋನು ಸೂದ್ ಕೂಡ ಆಕೆಯ ಶಿಕ್ಷಣ ಹೊಣೆ ಹೊತ್ತಲು ಮುಂದಾಗಿದ್ದಾರೆ. ಇನ್ನು ಸೋನು ಸೂದ್ ಕಾರ್ಯದ ಜತೆ ಪುಟ್ಟ ಹುಡುಗಿಯ ದಿಟ್ಟ ನಿಲುವಿಗೆ ನೆಟ್ಟಿಗರು ಭೇಷ್ ಎಂದಿದ್ದಾರೆ.

  • ವೀಲ್ ಚೇರ್ ಸಮೇತ ರೈಲ್ವೆ ಹಳಿಗೆ ಬಿದ್ದ ಅಂಗವಿಕಲ – ಟ್ರೈನ್‍ನಿಂದ ಜಸ್ಟ್ ಮಿಸ್

    ವೀಲ್ ಚೇರ್ ಸಮೇತ ರೈಲ್ವೆ ಹಳಿಗೆ ಬಿದ್ದ ಅಂಗವಿಕಲ – ಟ್ರೈನ್‍ನಿಂದ ಜಸ್ಟ್ ಮಿಸ್

    ನ್ಯೂಯಾರ್ಕ್: ಅಮೆರಿಕಾದ ಸಬ್ ವೇ ಟ್ರ್ಯಾಕ್ ಮೇಲೆ ಬಿದ್ದ ಅಂಗವಿಕಲರೊಬ್ಬರನ್ನು ವ್ಯಕ್ತಿಯೊಬ್ಬರು ರಕ್ಷಿಸಿ ಪ್ರಾಣ ಉಳಿಸಿರುವ ಘಟನೆ ನಗರದ ಯೂನಿಯನ್ ಸ್ಕ್ವೇರ್‌ನಲ್ಲಿ ನಡೆದಿದೆ.

    ರೈಲ್ವೆ ಹಳಿಯಲ್ಲಿ ವೀಲ್ ಚೇರ್ ಸಹಿತ ಕೆಳಗೆ ಬಿದ್ದಿದ್ದ ಅಂಗವಿಕಲರನ್ನು ಕಂಡು ವ್ಯಕ್ತಿಯೊಬ್ಬರು ತಮ್ಮ ಪ್ರಾಣವನ್ನು ಒತ್ತೆ ಇಟ್ಟು, ರೈಲ್ವೆ ಹಳಿಗೆ ಇಳಿದು ವೀಲ್ ಚೇರ್ ಹಾಗೂ ಅವರನ್ನು ಫ್ಲಾಟ್‍ಫಾರ್ಮ್ ಮೇಲೆ ಹತ್ತಿಸಿ ಕಾಪಾಡಿದ್ದಾರೆ. ರೈಲು ಬರುವುದಕ್ಕೆ ಇನ್ನೂ ಕೆಲವೇ ಸೆಕೆಂಡುಗಳು ಬಾಕಿ ಇದ್ದಾಗ ಈ ಘಟನೆ ಜರುಗಿದೆ. ಸದ್ಯ ಈ ವೀಡಿಯೋಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಪ್ರಶಂಸೆಗಳ ಸುರಿಮಳೆಯೇ ಹರಿದು ಬರುತ್ತಿದೆ.

    ಈ ವೀಡಿಯೋ ಜೊತೆಗೆ ಇಂದು ಮಧ್ಯಾಹ್ನ ಯೂನಿಯನ್ ಸ್ಕ್ವೇರ್ ನಲ್ಲಿ ವೀಲ್ ಚೇರ್‍ನಿಂದ ವ್ಯಕ್ತಿ ಆದ್ಯಾಗೋ ರೈಲ್ವೆ ಟ್ರ್ಯಾಕ್ ಒಳಗೆ ಬಿದ್ದಿದ್ದನು. ಅದೃಷ್ಟವಶಾತ್ ರೈಲು ನಿಲ್ದಾಣಕ್ಕೆ ಬರುವ ಮುನ್ನ ಒಬ್ಬ ವ್ಯಕ್ತಿ ರೈಲ್ವೆ ಹಳಿಗೆ ಹಾರಿ ಆ ವ್ಯಕ್ತಿಯನ್ನು ರಕ್ಷಿಸಿದ ಎಂದು ಕ್ಯಾಪ್ಷನ್‍ನಲ್ಲಿ ಬರೆಯಲಾಗಿದೆ.

    ಈ ಕುರಿತಂತೆ ಪೊಲೀಸರು, ಬುಧವಾರ ಮಧ್ಯಾಹ್ನ 1:30ಕ್ಕೆ ಈ ಘಟನೆ ಸಂಭವಿಸಿದ್ದು, ರೈಲ್ವೆ ಟ್ರ್ಯಾಕ್ ಮೇಲೆ ಬಿದ್ದ ವ್ಯಕ್ತಿಯನ್ನು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯಲಾಗಿದೆ. ಅವರು ಪ್ರಜ್ಞೆ ಹೊಂದಿದ್ದು, ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ. ಸದ್ಯ ವ್ಯಕ್ತಿಯ ಧೈರ್ಯ ಹಾಗೂ ಸಾಹಸಕ್ಕೆ ಮೆಡಲ್‍ನನ್ನು ನೀಡಬೇಕು ಎಂದು ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ:ಶಾಸಕ ಜಮೀರ್‌ಗೆ ಇಡಿ ಶಾಕ್ – ಸತತ 23 ಗಂಟೆಗಳ ಕಾಲ ನಡೆದ ದಾಳಿ ಅಂತ್ಯ

  • ಕೊಡಗಿನಲ್ಲಿ ಮಳೆ ಆರ್ಭಟ – ಹೊಳೆಯಲ್ಲಿ ಕೊಚ್ಚಿ ಹೋದ ಅಂಗವಿಕಲ ವೃದ್ಧ

    ಕೊಡಗಿನಲ್ಲಿ ಮಳೆ ಆರ್ಭಟ – ಹೊಳೆಯಲ್ಲಿ ಕೊಚ್ಚಿ ಹೋದ ಅಂಗವಿಕಲ ವೃದ್ಧ

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ ಎರಡು ಮೂರು ದಿನಗಳಿಂದ ಎಡೆಬಿಡದೆ ಮಳೆ ಸುರಿಯುತ್ತಿದೆ. ಮಳೆ ಆರ್ಭಟದಿಂದ ಹಳ್ಳಕೊಳ್ಳಗಳಲ್ಲಿ ನೀರಿನ ಪ್ರಮಾಣ ಏರಿಕೆಯಾಗುತ್ತಿದೆ. ಈ ನಡುವೆ ಕಿರು ಹೊಳೆಯನ್ನು ದಾಟಲು ಹೋಗಿ ಅಂಗವಿಕಲ ವೃದ್ಧರೊಬ್ಬರು ಕೊಚ್ಚಿ ಹೋಗಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಅವಂದೂರು ಗ್ರಾಮದಲ್ಲಿ ಇಂದು ಸಂಜೆ ನಡೆದಿದೆ.

    ಅವಂದೂರು ಗ್ರಾಮದ ಬೊಮ್ಮೇಗೌಡನ ಬಾಬಿ(70) ಕಿರು ಹೊಳೆಯಲ್ಲಿ ಕೊಚ್ಚಿಹೋದ ವೃದ್ಧ. ಇಂದು ಸಂಜೆ ಮನೆಯ ಸಮೀಪ ಇರುವ ಕಿರುಹೊಳೆಯ ಬದಿಯಲ್ಲಿ ನಡೆದುಕೊಂಡು ಬರುತ್ತಿದ್ದ ಸಂದರ್ಭದಲ್ಲಿ ಅಯಾತಪ್ಪಿ ಕಿರುಹೊಳೆಗೆ ಬಿದ್ದಿದ್ದಾರೆ. ನೀರಿನ ಪ್ರಮಾಣ ಏರಿಕೆ ಅಗಿರುವುದರಿಂದ ಮೇಲೆ ಬರಲು ಸಾಧ್ಯವಾಗದೇ ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋಗಿದ್ದಾರೆ ಎನ್ನಲಾಗಿದೆ.  ಇದನ್ನೂ ಓದಿ: ಮಡಿಕೇರಿ-ಮಂಗಳೂರು ರಸ್ತೆ ಬದಿಯಲ್ಲಿ ಭೂಕುಸಿತ – ಆರು ಕುಟುಂಬಗಳ ಸ್ಥಳಾಂತರಕ್ಕೆ ಸೂಚನೆ

    ಸ್ಥಳಕ್ಕೆ ಮಡಿಕೇರಿ ಅಗ್ನಿಶಾಮಕದಳದ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಳೆ ಆರ್ಭಟ ಮುಂದುವರಿದ ಪರಿಣಾಮ ಕಾರ್ಯಾಚರಣೆ ಮಾಡಲು ತೊಡಕು ಉಂಟಾಗಿದ್ದು, ಕೊಚ್ಚಿಹೋದ ಬಾಬಿ ಅವರ ಪತ್ತೆಗಾಗಿ ಶೋಧ ಕಾರ್ಯ ಬೆಳಗ್ಗೆ ಮುಂದುವರಿಸುವುದಾಗಿ ತಿಳಿಸಿದ್ದಾರೆ. ಸದ್ಯ ಭಾಗಮಂಡಲ  ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

  • ಕಾಲು ಸ್ವಾಧೀನ ಕಳೆದುಕೊಂಡರೂ ಯಶಸ್ವಿ ಕೃಷಿಕನಾದ ಕಾರ್ಮಿಕ

    ಕಾಲು ಸ್ವಾಧೀನ ಕಳೆದುಕೊಂಡರೂ ಯಶಸ್ವಿ ಕೃಷಿಕನಾದ ಕಾರ್ಮಿಕ

    – ಯಾರ ಸಹಾಯವಿಲ್ಲದೆ ಕೆಲಸ

    ಚಿತ್ರದುರ್ಗ: ಅಂಗಾಂಗಗಳೆಲ್ಲ ಸರಿ ಇದ್ದರೂ ಸರಿಯಾಗಿ ಕೆಲಸ ಮಾಡದೆ ಸೋಮಾರಿತನ ತೋರುವ ಯುವಕರನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಅಂಗವಿಕಲ ರೈತ ಕಾಲುಗಳು ಸ್ವಾಧೀನ ಕಳೆದುಕೊಂಡರೂ ಯಾರ ನೆರವಿಲ್ಲದೆ ಕೃಷಿ ಮಾಡುತ್ತಿದ್ದಾರೆ. ಈ ಮೂಲಕ ಇತರ ಯುವಕರಿಗೆ ಮಾದರಿಯಾಗಿದ್ದಾರೆ.

    ಜಿಲ್ಲೆಯ ಹಿರಿಯೂರು ತಾಲೂಕಿನ ಸೂರಪ್ಪನಹಟ್ಟಿ ಗ್ರಾಮದ ಬಾಲಣ್ಣ ವಿಶೇಷಚೇತನರಾಗಿದ್ದು, ಕಾಲುಗಳು ಸ್ವಾಧೀನ ಕಳೆದುಕೊಂಡಿವೆ. ಆದರೂ ಎದೆಗುಂದದೆ, ಯಾರ ನೆರವಿಲ್ಲದೆ ಜಮೀನಿನಲ್ಲಿ ಉಳುಮೆ ಮಾಡಿ ಬದುಕಿನ ಬಂಡಿ ಸಾಗಿಸುವ ಮೂಲಕ ಪತ್ನಿ ಹಾಗೂ ಮಗನನ್ನು ಸಾಕುತ್ತಿದ್ದಾರೆ.

    ಓಡಾಡಲು ಕಾಲಿಲ್ಲದೆ, ಎದ್ದು ನಿಲ್ಲಲು ಸೊಂಟವಿಲ್ಲದೇ ನೆಲದ ಮೇಲೆ ತೆವಳುವ ರೈತ ಬಾಲಣ್ಣ, ವಿಶೇಷಚೇತನನಾದರೂ ಮತ್ತೊಬ್ಬರ ಸಹಾಯ ಪಡೆಯದೇ ತುಂಡು ಭೂಮಿಯಲ್ಲಿ ಉಳುಮೆ ಮಾಡಿ ಸೌತೆಕಾಯಿ, ಮೆಣಸಿನಕಾಯಿ ಸೇರಿದಂತೆ ವಿವಿಧ ತರಕಾರಿ ಬೆಳೆಯುತ್ತ ಬದುಕು ಕಟ್ಟಿಕೊಂಡು ಛಲಗಾರ ಎನಿಸಿದ್ದಾರೆ. ಕಳೆದ ಹತ್ತು ವರ್ಷಗಳ ಹಿಂದೆ ಮಂಗಳೂರಿನ ಕಾರ್ಖಾನೆಯೊಂದರಲ್ಲಿ ಕಾರ್ಮಿಕನಾಗಿ ಕೆಲಸ ಮಾಡುವಾಗ ಆಕಸ್ಮಿಕವಾಗಿ ಜರುಗಿದ ಅವಘಡದಿಂದಾಗಿ ಕಾಲುಗಳು ಸ್ವಾಧೀನ ಕಳೆದುಕೊಂಡವು.

    ಅಂದಿನಿಂದಲೂ ಎದೆಗುಂದದೆ ಛಲದಿಂದ ಬದುಕುತ್ತಿರುವ ಬಾಲಣ್ಣ, ಯಾರ ಹಂಗಿನಲ್ಲೂ ಇರದೇ ತನ್ನ ತುಂಡು ಭೂಮಿಯಲ್ಲಿ ಉಳುಮೆ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಮಗನನ್ನು ವಿದ್ಯಾವಂತನನ್ನಾಗಿಸಬೇಕು ಹೀಗಾಗಿ ಭೂತಾಯಿ ನಂಬಿಕೊಂಡು ದುಡಿಯುತಿದ್ದೇನೆ ಎನ್ನುತ್ತಾರೆ ಬಾಲಣ್ಣ. ಯಾವುದೇ ಸುಲಭ ದಾರಿಗಳತ್ತ ಚಿಂತಿಸದೆ, ಕುಟುಂಬಸ್ಥರು ಹಾಗೂ ಗ್ರಾಮದ ಬೇರೆಯವರ ನೆರವು ಪಡೆಯದೆ ಶ್ರಮಿವಹಿಸಿ ತಮ್ಮ ಜಮೀನಿನಲ್ಲಿ ದುಡಿಯುವ ಮೂಲಕ ಸ್ವಾವಲಂಬಿಯಾಗಿ ಬದುಕು ಸಾಗಿಸುವ ಮೂಲಕ ಇತರರಿಗೆ ಮಾದರಿ ರೈತ ಎನಿಸಿದ್ದಾರೆ.

    ವಿಶೇಷ ಚೇತನ ಬಾಲಣ್ಣ ಅವರಿಗೆ ಸರ್ಕಾರದಿಂದ ಅಂಗವಿಕಲರ ಪಿಂಚಣಿ ಬಂದರೂ ಸರಿಯಾಗಿ ಇವರ ಕೈ ಸೇರಿಲ್ಲ. ಅಲ್ಲದೆ ಬದುಕಲ್ಲಿ ಇನ್ನಷ್ಟು ಸಾಧಿಸುವ ಹಂಬಲವಿರುವ ಬಾಲಣ್ಣ ಅಂಗವಿಕಲರ ಕಲ್ಯಾಣ ಇಲಾಖೆಯಿಂದ ತ್ರಿಚಕ್ರ ವಾಹನ ನೀಡುವಂತೆ ಹಲವು ಬಾರಿ ಮನವಿ ಸಲ್ಲಿಸಿದ್ದಾರೆ. ಆದರೆ ಈವರೆಗೆ ಬೈಕ್ ಸಿಕ್ಕಿಲ್ಲ. ಇವರ ಶ್ರಮ ಕಂಡು ನಿಬ್ಬೆರಗಾಗಿರುವ ಗ್ರಾಮದ ಯುವಕರು ಬಾಲಣ್ಣನ ಕಾರ್ಯ ಮೆಚ್ಚಿ ಮನಸಾರೆ ಹೊಗಳುತಿದ್ದು, ನಮಗೆಲ್ಲ ಇವರು ಸ್ಫೂರ್ತಿ ಎನ್ನುತ್ತಿದ್ದಾರೆ. ಅಲ್ಲದೆ ಇಂತಹ ಸಾಧಕನಿಗೆ ಸರ್ಕಾರದಿಂದ ಒಂದು ಮನೆ ಹಾಗೂ ತ್ರಿಚಕ್ರ ವಾಹನ ನೀಡಬೇಕೆಂದು ಮನವಿ ಮಾಡಿದ್ದಾರೆ.

  • ವಿಶೇಷ ಚೇತನ ಯುವತಿಯ ಕೈ ಹಿಡಿದ ಯುವಕ- ಅದ್ಧೂರಿ ಮದುವೆ

    ವಿಶೇಷ ಚೇತನ ಯುವತಿಯ ಕೈ ಹಿಡಿದ ಯುವಕ- ಅದ್ಧೂರಿ ಮದುವೆ

    ಧಾರವಾಡ: ಯುವಕನೋರ್ವ ವಿಶೇಷ ಚೇತನ ಯುವತಿಯ ಕೈ ಹಿಡಿಯುವ ಮೂಲಕ ಮಾದರಿಯಾಗಿದ್ದಾರೆ.

    ನಗರದ ನಿವಾಸಿಯಾದ ವಿನಾಯಕ್ ಶಿಂಧೆ ಮತ್ತು ಮಿನಾಕ್ಷಿ ಕ್ಷೀರಸಾಗರ ಜೋಡಿ ಇಂದು ಹಸೆಮಣೆ ಎರಿದೆ. ಮೀನಾಕ್ಷಿ ಹುಟ್ಟಿದಾಗಿನಿಂದ ವಿಶೇಷ ಚೇತನೆ. ಇದು ಗೊತ್ತಿದ್ದರೂ ಯುವಕ ಮೀನಾಕ್ಷಿಯನ್ನು ವರಿಸಿಕೊಳ್ಳಲು ಒಪ್ಪಿದ್ದು, ನಗರದ ಸೈದಾಪೂರದ ನಿವಾಸಿಯಾದ ಮೀನಾಕ್ಷಿ ಜೊತೆ ಕಮಲಾಪುರದ ನಿವಾಸಿ ವಿನಾಯಕ ವಿವಾಹವಾಗಿದ್ದಾರೆ. ಇದನ್ನೂ ಓದಿ: ಪೋಲಿಯೋ ಪೀಡಿತೆಯ ಬಾಳಲ್ಲಿ ಬೆಳಕು ಮೂಡಿಸಿದ ಸಂದೀಪ್

    ವಿನಾಯಕ್ ಮೊದಲಿನಿಂದಲೂ ವಿಶೇಷ ಚೇತನ ಹುಡುಗಿ ಕೈ ಹಿಡಿಯಬೇಕೆಂಬ ಸಂಕಲ್ಪ ಹೊಂದಿದ್ದರು. ಮೀನಾಕ್ಷಿ ವಿಶೇಷ ಚೇತನ ಯುವತಿ ಎಂಬುದನ್ನು ಅರಿತು ಪೋಷಕರ ಸಮ್ಮುಖದಲ್ಲಿ ಮೀನಾಕ್ಷಿಯವರನ್ನು ನೋಡಿ ಬಂದಿದ್ದರು. ಎಲ್ಲರೂ ಒಪ್ಪಿಗೆ ಸೂಚಿಸಿದ್ದರಿಂದ ಧಾರವಾಡ ಅಕ್ಕನ ಬಳಗ ಕಲ್ಯಾಣ ಮಂಟಪದಲ್ಲಿ ಇಂದು ಮದುವೆ ನಡೆಯಿತು.

    ಈ ವಿವಾಹದಿಂದ ವರ ಎಷ್ಟು ಸಂತೋಷವಾಗಿದ್ದಾನೋ ಗೊತ್ತಿಲ್ಲ. ಆದರೆ ವಧು ಮಾತ್ರ ಸಂತೋಷವಾಗಿದ್ದಾಳೆ. ತನ್ನ ಈ ಸಮಸ್ಯೆಯಿಂದ ಯಾರಾದರೂ ಬಾಳ ಸಂಗಾತಿ ಸಿಗುತ್ತಾನೋ ಇಲ್ಲವೋ ಎಂದುಕೊಂಡಿದ್ದ ಮೀನಾಕ್ಷಿಗೆ ಇವತ್ತು ಅದ್ಧೂರಿ ವಿವಾಹವಾಯಿತು. ಎರಡು ಕುಟುಂಬದ ಸದಸ್ಯರ ಜೊತೆ ಸ್ನೇಹಿತರು ಸಾಕ್ಷಿಯಾದರು.

  • ವ್ಹೀಲ್‍ಚೇರ್‌ನಲ್ಲಿ ಭಿಕ್ಷೆ ಬೇಡ್ತಿದ್ದ ಅಂಗವಿಕಲ ತಾಯಿ-ಮಗನಿಗೆ ಕ್ರೇನ್ ಡಿಕ್ಕಿ

    ವ್ಹೀಲ್‍ಚೇರ್‌ನಲ್ಲಿ ಭಿಕ್ಷೆ ಬೇಡ್ತಿದ್ದ ಅಂಗವಿಕಲ ತಾಯಿ-ಮಗನಿಗೆ ಕ್ರೇನ್ ಡಿಕ್ಕಿ

    ದಾವಣಗೆರೆ: ಭಿಕ್ಷೆ ಬೇಡುತ್ತಿದ್ದ ಅಂಗವಿಕಲ ತಾಯಿ-ಮಗುವಿಗೆ ಕ್ರೇನ್ ಡಿಕ್ಕಿಯಾಗಿ ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದ ಬಳಿ ನಡೆದಿದೆ.

    ಮೃತ ದುರ್ದೈವಿಗಳನ್ನು ಸಲೀಂ(10) ಮತ್ತು ರುಕ್ಸಾನ (40) ಎಂದು ಗುರುತಿಸಲಾಗಿದೆ. ತಾಯಿ- ಮಗ ವ್ಹೀಲ್ ಚೇರ್ ನಲ್ಲಿ ಕುಳಿತು ಭಿಕ್ಷೆ ಬೇಡುತ್ತಿದ್ದಾಗ ಈ ದುರ್ಘಟನೆ ನಡೆದಿದೆ.

    ಚನ್ನಗಿರಿಯಿಂದ ನಲ್ಲೂರಿಗೆ ಕ್ರೇನ್ ಬರುತ್ತಿತ್ತು. ಹೀಗೆ ಬಂದ ಕ್ರೇನ್ ಏಕಾಏಕಿ ವ್ಹೀಲ್ ಚೇರ್‍ಗೆ ಡಿಕ್ಕಿ ಹೊಡದಿದೆ. ಪರಿಣಾಮ ತಾಯಿ-ಮಗ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಈ ಸಂಬಂಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

  • ವಿಧವೆ ಜೊತೆ ಅಕ್ರಮ ಸಂಬಂಧ- ಇಬ್ಬರನ್ನೂ ಥಳಿಸಿ, ತಲೆ ಬೋಳಿಸಿ ಮೆರವಣಿಗೆ

    ವಿಧವೆ ಜೊತೆ ಅಕ್ರಮ ಸಂಬಂಧ- ಇಬ್ಬರನ್ನೂ ಥಳಿಸಿ, ತಲೆ ಬೋಳಿಸಿ ಮೆರವಣಿಗೆ

    – ಚಪ್ಪಲಿ ಹಾರ ಹಾಕಿ, ಮುಖಕ್ಕೆ ಕಪ್ಪು ಮಸಿ ಬಳಿದು, ತಲೆ ಬೋಳಿಸಿ ಮೆರವಣಿಗೆ
    – ಏಕಾಂತದಲ್ಲಿ ತೊಡಗಿದ್ದಾಗ ಸಿಕ್ಕಿಬಿದ್ದಿದ್ದ ಜೋಡಿ

    ಲಕ್ನೋ: ವಿಧವೆ(37) ಹಾಗೂ ಅಂಗವಿಕಲ(40) ಅಕ್ರಮ ಸಂಬಂಧ ಹೊಂದಿದ್ದಕ್ಕೆ ಇಬ್ಬರ ತಲೆ ಬೋಳಿಸಿ, ಚಪ್ಪಲಿ ಹಾರ ಹಾಕಿ, ಮುಖಕ್ಕೆ ಮಸಿ ಬಳಿದು, ಥಳಿಸಿ ಊರು ತುಂಬಾ ಮೆರವಣಿಗೆ ಮಾಡಿ ಅಮಾನವೀಯವಾಗಿ ವರ್ತಿಸಿರುವ ಘಟನೆ ನಡೆದಿದೆ.

    ಉತ್ತರ ಪ್ರದೇಶದ ಕಣ್ಣೌಜ್‍ನಲ್ಲಿ ಘಟನೆ ನಡೆದಿದ್ದು, ಐದು ಮಕ್ಕಳ ತಾಯಿ ಹಾಗೂ ಅಂಗವಿಕಲ ವ್ಯಕ್ತಿ ಇಬ್ಬರೂ ಏಕಾಂತದಲ್ಲಿದ್ದಾಗ ಮಹಿಳೆಯ ಚಿಕ್ಕಪ್ಪ ಹಾಗೂ ಆತನ ಮಕ್ಕಳಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ಈ ವೇಳೆ ಇಬ್ಬರನ್ನೂ ಲಾಕ್ ಮಾಡಲಾಗಿದೆ. ನಂತರ ಮನಬಂದಂತೆ ಥಳಿಸಿ, ತಲೆ ಬೋಳಿಸಿ, ಕೊರಳಿಗೆ ಚಪ್ಪಲಿ ಹಾರ ಹಾಕಿ ಮುಖಕ್ಕೆ ಕಪ್ಪು ಮಸಿ ಬಳಿದು ಊರ ತುಂಬ ಮೆರವಣಿಗೆ ಮಾಡಲಾಗಿದೆ.

    ಅವರನ್ನು ರೂಮ್‍ನಲ್ಲಿ ಕೂಡಿ ಹಾಕಿ ಥಳಿಸಲಾಯಿತು. ನಂತರ ಇಬ್ಬರ ತಲೆ ಬೋಳಿಸಿ, ಕೊರಳಿಗೆ ಶೂ, ಚಪ್ಪಲಿ ಹಾರ ಹಾಕಿ, ಮುಖಕ್ಕೆ ಕಪ್ಪು ಬಣ್ಣ ಬಳಿದು ನಂತರ ಊರಲ್ಲಿ ಮೆರವಣಿಗೆ ಮಾಡಲಾಯಿತು ಎಂದು ಸ್ಥಳೀಯರು ವಿವರಿಸಿದ್ದಾರೆ.

    ಘಟನೆ ನಡೆಯುತ್ತಿದ್ದಂತೆ ಸ್ಥಳಿಯರು ಊರ ಮುಖಂಡರಿಗೆ ವಿಷ ತಿಳಿಸಿದ್ದು, ನಂತರ ಇಬ್ಬರನ್ನೂ ರಕ್ಷಿಸಲಾಗಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪುಟ್ಟ ಮಕ್ಕಳು ಅಮ್ಮನಿಗಾಗಿ ಕೂಗುತ್ತಿದ್ದರೂ ಯಾವುದನ್ನೂ ಲೆಕ್ಕಿಸದೆ ರಾಕ್ಷರ ರೀತಿ ಅವರನ್ನು ಮೆರವಣಿಗೆ ಮಾಡಲಾಗಿದೆ.

    ಈ ಕುರಿತು ಎಎಸ್‍ಪಿ ವಿನೋದ್ ಕುಮಾರ್ ಮಾಹಿತಿ ನೀಡಿ, ಘಟನೆ ಕುರಿತು ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ್ದು, ಪೊಲೀಸರು ಮಾಹಿತಿ ಪಡೆದಿದ್ದಾರೆ. ನಂತರ ಮಹಿಳೆಯ ಇಬ್ಬರು ಸಂಬಂಧಿಕರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

  • ಪೊಲೀಸರ ತಪ್ಪಿನಿಂದ ಅಂಗವಿಕಲನ ಬರ್ಬರ ಕೊಲೆ?

    ಪೊಲೀಸರ ತಪ್ಪಿನಿಂದ ಅಂಗವಿಕಲನ ಬರ್ಬರ ಕೊಲೆ?

    – ಕಲ್ಲು, ರಾಡ್‍ನಿಂದ ಹೊಡೆದು ಕೊಂದ ಸಂಬಂಧಿಕರು

    ಧಾರವಾಡ: ಪೊಲೀಸರು ಮಾಡಿದ ಒಂದು ತಪ್ಪಿನಿಂದ ಧಾರವಾಡದಲ್ಲಿ ಓರ್ವ ಅಂಗವಿಕಲ ಇಂದು ಕೊಲೆಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

    ಹೌದು. ಧಾರವಾಡದ ಪತ್ರೇಶ್ವರ ನಗರದಲ್ಲಿ ಈ ಕೊಲೆ ನಡೆದಿದ್ದು, ಉಮೇಶ್ ಬಾಳಗಿ (37) ಕೊಲೆಯಾದ ಅಂಗವಿಕಲ. ಕಳೆದ ಹಲವು ವರ್ಷಗಳಿಂದ ಉಮೇಶ್ ಬಾಳಗಿ ಹಾಗೂ ಸಂಬಂಧಿಕರ ನಡುವೆ ಆಸ್ತಿ ವಿವಾದ ನಡೆದಿತ್ತು. ಈ ಮೊದಲು ಉಮೇಶ್‍ನ ಮೇಲೆ ಸಂಬಂಧಿಕರು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಆಗ ಉಮೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.

    ಮೊದಲೇ ಕಾಲಿಲ್ಲದೇ ಉಮೇಶ್ ತನ್ನಿಷ್ಟಕ್ಕೆ ತಾನು ಜೀವನ ನಡೆಸಿಕೊಂಡು ಹೋಗುತ್ತಿದ್ದರು. ಆದರೆ ರಕ್ತ ಸಂಬಂಧಿಗಳು ಆಸ್ತಿ ಬರೆದು ಕೊಡಲು ಪಿಡಿಸುತ್ತಲೇ ಇದ್ದರು. ಈ ಹಿಂದೆ ಉಮೇಶ್ ಹಾಗೂ ಅವರ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆದಾಗ ಪೊಲೀಸ್ ಆಯುಕ್ತ ಕಚೇರಿಗೆ ಕೂಡ ದೂರು ಹೋಗಿತ್ತು. ನಂತರ ಉಪನಗರ ಪೊಲೀಸರು ಉಮೇಶ್ ಅವರ ದೂರನ್ನ ಸ್ವೀಕರಿಸಿ ಪ್ರಕರಣ ದಾಖಲಿಸಿದ್ದರು.

    ಆದರೆ ಆರೋಪಿಗಳನ್ನ ಬಂಧಿಸುವ ಬದಲು, ಅವರಿಂದಲೂ ಉಮೇಶ್ ವಿರುದ್ಧ ಪ್ರತಿ ದೂರನ್ನ ಪಡೆದಿದ್ದರು. ಆಗಲೇ ಆರೋಪಿಗಳನ್ನ ಬಂಧಿಸಿದ್ದರೆ ಈಗ ಉಮೇಶ್ ಅವರ ಕೊಲೆ ನಡೆಯುತ್ತಿರಲಿಲ್ಲ. ಇವತ್ತು ಉಮೇಶ್ ಮನೆ ಬಳಿ ರಸ್ತೆಯಲ್ಲಿ ಬರುವಾಗಲೇ ಅವರ ಮೇಲೆ ಕಲ್ಲು ಹಾಗೂ ಕಬ್ಬಿಣದ ರಾಡ್‍ನಿಂದ ಸಂಬಂಧಿಕರು ಹೊಡೆದು ಕೊಲೆ ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

    ಉಪನಗರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೊಲೆಗೈದ ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಿದ್ದಾರೆ. ಪೊಲೀಸರ ಒಂದು ಸಣ್ಣ ತಪ್ಪಿನಿಂದ ಅಮಾಯಕ ಅಂಗವಿಕಲನ ಕೊಲೆ ನಡೆದು ಹೋಯಿತು ಎಂಬ ಆರೋಪ ಕೇಳಿ ಬಂದಿದೆ. ಇತ್ತ ಉಮೇಶ್ ಅವರನ್ನು ಕಳೆದುಕೊಂಡ ಪತ್ನಿ ಹಾಗೂ ಮಗಳು ಮೃತದೇಹದ ಮುಂದೆ ಕಣ್ಣೀರಿಡುತ್ತಾ ನಿಂತಿದ್ದರು.

  • ಅಂಗವಿಕಲನನ್ನೇ ವರಿಸಿ ಎಲ್ಲರಿಗೂ ಮಾದರಿಯಾದ ಕರಾವಳಿ ಹುಡುಗಿ

    ಅಂಗವಿಕಲನನ್ನೇ ವರಿಸಿ ಎಲ್ಲರಿಗೂ ಮಾದರಿಯಾದ ಕರಾವಳಿ ಹುಡುಗಿ

    – ಅಂಗವೈಕಲ್ಯತೆಯನ್ನು ಮೆಟ್ಟಿ ನಿಂತು ಯುವಕನ ಕೈಹಿಡಿದ ಸಂಜೀವಿನಿ

    ಮಂಗಳೂರು: ಮದುವೆಯಾಗಬೇಕಾದ ಗಂಡು ಹಾಗಿರಬೇಕು, ಹೀಗಿರಬೇಕೆಂದು ಕನಸು ಕಾಣುವ ಹುಡುಗಿಯರೇ ಈಗಿನ ಕಾಲದಲ್ಲಿ ಹೆಚ್ಚು. ಅದರಲ್ಲೂ ಹುಡುಗ ಬಡವ, ಅಂಗವೈಕಲ್ಯತೆ ಇದೆ ಎಂದಾದರೆ ಅಂತಹ ಹುಡುಗನಿಗೆ ಮದುವೆ ಎನ್ನುವುದು ದೂರದ ಮಾತು. ಆದರೆ ಇದಕ್ಕೆಲ್ಲ ಭಿನ್ನವೆಂಬಂತೆ ಯುವತಿಯೊಬ್ಬರು ಎಲ್ಲರೂ ಮೆಚ್ಚುವಂತಹ ಕೆಲಸ ಮಾಡಿ ಈಗ ಸುದ್ದಿಯಾಗಿದ್ದಾರೆ.

    ಬೆಳ್ತಂಗಡಿ ತಾಲೂಕಿನ ಕಾಯರ್ತಡ್ಕ ಬಳಿಯ ಕಳೆಂಜ ಗ್ರಾಮದ ಯುವಕ ಚಂದ್ರಶೇಖರ್ ಅವರಿಗೆ ಕಾರ್ಕಳ ತಾಲೂಕಿನ ಮಾಳ ಗ್ರಾಮದ ಸಂಜೀವಿನಿ ಅವರ ಜೊತೆ ವರ್ಷದ ಹಿಂದೆ ಮದುವೆ ಮಾತುಕತೆ ನಡೆದಿತ್ತು. ಈ ವರ್ಷ ಮದುವೆ ಮಾಡಲು ಹಿರಿಯರು ತೀರ್ಮಾನಿಸಿದ್ದರು. ಆದರೆ ಟ್ಯಾಂಕರ್ ಕ್ಲೀನರ್ ಆಗಿದ್ದ ಚಂದ್ರಶೇಖರ್ ಅಂಕೋಲಾದಲ್ಲಿ ನಡೆದ ಅಪಘಾತದಲ್ಲಿ ತೀವ್ರ ಗಾಯಗೊಂಡು ಒಂದು ಕಾಲನ್ನೇ ಕಳಕೊಳ್ಳುವಂತಾಗಿತ್ತು. ಇದರಿಂದ ಹುಡುಗಿ ಮನೆಯವರು ಮದುವೆಗೆ ನಿರಾಕರಿಸಿದರೆ, ಇತ್ತ ತೀರಾ ಬಡತನದಲ್ಲಿದ್ದ ಹುಡುಗ ಮತ್ತು ವೃದ್ಧೆ ತಾಯಿ ನೊಂದು ಕೊಂಡಿದ್ದರು.

    ಹುಡುಗಿ ಸಂಜೀವಿನಿ ಅಂಗವಿಕಲ ಹುಡುಗನನ್ನು ವರಿಸಲು ಒಪ್ಪಿದ್ದಲ್ಲದೆ, ಹಿಂದೂ ಸಂಘಟನೆಗಳ ಸಹಾಯ ಯಾಚಿಸಿದ್ದಾರೆ. ಸಂಜೀವಿನಿ ಅವರ ಮಾನವೀಯ ನಡೆಯನ್ನು ಮೆಚ್ಚಿದ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ನಾಯಕರು ತಾವೇ ಮುಂದೆ ನಿಂತು ಅದ್ದೂರಿಯಾಗಿ ಮದುವೆ ನೆರವೇರಿಸಿದ್ದಾರೆ.

    ಕಾಯರ್ತಡ್ಕದ ಉಮಾಮಹೇಶ್ವರ ದೇವಸ್ಥಾನದಲ್ಲಿ ಇಂದು ಮದುವೆ ನಡೆದಿದ್ದು ಸ್ವಾಮೀಜಿಗಳು, ಧಾರ್ಮಿಕ ಮುಖಂಡರನ್ನು ಸೇರಿಸಿ ಸಮಾಜೋತ್ಸವ ರೂಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಜನರಿಗೆ ಊಟ ಹಾಕಿಸಿದ್ದಾರೆ. ಯುವಕನಲ್ಲಿ ಯಾವುದೇ ಊನ ಇದ್ದರೂ, ಈಗಿನ ಹುಡುಗಿಯರು ಮದುವೆಗೆ ನಿರಾಕರಿಸುತ್ತಾರೆ. ಹುಡುಗಿ ಮನೆಯವರೂ ಹುಡುಗ ಬಡವನಾದಲ್ಲಿ ಸಂಬಂಧವೇ ಬೇಡ ಎನ್ನುತ್ತಾರೆ. ಅಂತದ್ರಲ್ಲಿ ಸಂಜೀವಿನಿ ಮನೆಯವರು ಮದುವೆ ಬೇಡ ಎಂದರೂ ಕಾಲು ಕಳೆದುಕೊಂಡ ಹುಡುಗನನ್ನು ವರಿಸುವ ಮೂಲಕ ಮಾನವೀಯತೆ ಮೆರೆದು ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾರೆ. ಯುವತಿಯ ಈ ದಿಟ್ಟ ನಿರ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.