Tag: ಅಂಗನವಾಡಿ ಶಿಕ್ಷಕಿ

  • ಅಂಗನವಾಡಿ ಶಿಕ್ಷಕಿ ಹುದ್ದೆಗಾಗಿ ವಿಕಲಚೇತನೆಯ ಒಂಟಿ ಹೋರಾಟ

    ಅಂಗನವಾಡಿ ಶಿಕ್ಷಕಿ ಹುದ್ದೆಗಾಗಿ ವಿಕಲಚೇತನೆಯ ಒಂಟಿ ಹೋರಾಟ

    ರಾಯಚೂರು: ಅಂಗನವಾಡಿ ಶಿಕ್ಷಕಿ ಹುದ್ದೆಗೆ ಅಕ್ರಮ ನೇಮಕಾತಿ ಮಾಡುವ ಮೂಲಕ ನನಗೆ ಅನ್ಯಾಯವಾಗಿದೆ ಅಂತ ರಾಯಚೂರಿನಲ್ಲಿ ವಿಕಲಚೇತನ ಮಹಿಳೆ ಒಂಟಿ ಹೋರಾಟ ನಡೆಸಿದ್ದಾರೆ.

    ಜಿಲ್ಲೆಯ ಮಾನ್ವಿ ತಾಲೂಕಿನ ಗೋರ್ಕಲ್ ಗ್ರಾಮದ ಹಂಪಮ್ಮ ಹುಟ್ಟುತ್ತಲೇ ಅಂಗವೈಕಲ್ಯ ಹೊಂದಿದ್ದರು. ಬೆಳವಣಿಗೆ ಇಲ್ಲದೆ ಈಗಲೂ ಕುಳ್ಳಗೆ ಇದ್ದಾರೆ. ಆದರೆ ವಿಷಯ ಅದೊಂದೇ ಅಲ್ಲಾ. ಅಂಗನವಾಡಿ ಶಿಕ್ಷಕಿ ಹುದ್ದೆಗೆ ನೇಮಕಾತಿ ಮಾಡಬೇಕಾದರೆ ಸ್ಥಳೀಯರಿಗೆ ಪ್ರಾಶಸ್ತ್ಯ ನೀಡಬೇಕು. ಆದರೆ ಸ್ಥಳೀಯರಲ್ಲದವರನ್ನು ನಕಲಿ ದಾಖಲೆಗಳ ಮೂಲಕ ಆಯ್ಕೆ ಮಾಡಿ ಸ್ಥಳೀಯರಿಗೆ ಅನ್ಯಾಯ ಮಾಡಲಾಗಿದೆ ಎಂದು ಹಂಪಮ್ಮ ಕಚೇರಿಯಿಂದ ಕಚೇರಿಗೆ ಅಲೆಯುತ್ತಿದ್ದಾರೆ.

    ಮಸ್ಕಿ ತಾಲೂಕಿನ ಹಿರೆದಿನ್ನಿ ಗ್ರಾಮದ ಸುಧಾಕಲಾ ಎಂಬುವವರನ್ನು ಗೋರ್ಕಲ್ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಶಿಕ್ಷಕಿಯಾಗಿ ನೇಮಕ ಮಾಡಲಾಗಿದೆ. ಆದರೆ ತವರು ಮನೆ, ಗಂಡನ ಮನೆ ಎರಡೂ ಹಿರೆದಿನ್ನಿ ಆಗಿದ್ದರು, ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ ಎಲ್ಲವೂ ಹಿರೆದಿನ್ನಿ ವಿಳಾಸದಲ್ಲಿದ್ದರೂ ಕಂದಾಯ ಇಲಾಖೆ ಅಧಿಕಾರಿಗಳು ಸುಳ್ಳು ವಾಸಸ್ಥಳ ಪ್ರಮಾಣ ಪತ್ರ ಕೊಟ್ಟು ವಂಚನೆ ಮಾಡಿದ್ದಾರೆ. ಸುಳ್ಳು ದಾಖಲೆಗಳ ಮೂಲಕ ಶಿಕ್ಷಕಿಯಾಗಿ ಗ್ರಾಮದಲ್ಲಿ ಸೇವೆ ಸಲ್ಲಿಸುತ್ತಿರುವ ಸುಧಾಕಲಾರನ್ನು ಬೇರೆಡೆ ವರ್ಗಾವಣೆ ಮಾಡಿ ಸ್ಥಳೀಯಳಾದ ನನಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಅವಿವಾಹಿತ ಮಹಿಳೆ ಹಂಪಮ್ಮ ಮನವಿ ಮಾಡಿದ್ದಾರೆ.

    ಶಿಶುಅಭಿವೃದ್ಧಿ ಯೋಜನೆ ಅಧಿಕಾರಿಗಳು ಶಿಕ್ಷಕಿ ಹುದ್ದೆಗೆ ಅರ್ಜಿ ಆಹ್ವಾನಿಸಿದಾಗ ನಾನೂ ಅರ್ಜಿ ಸಲ್ಲಿಸಿದ್ದು, ಸ್ಥಳೀಯಳಾಗಿ ನಾನು ಎಲ್ಲಾ ಅರ್ಹತೆ ಹೊಂದಿದ್ದರೂ ಬೇರೆ ಗ್ರಾಮದವರಿಗೆ ಮನ್ನಣೆ ನೀಡಿರುವುದು ಅಕ್ರಮ ಎಂದು ಹಂಪಮ್ನ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

  • ಸರ್ಕಾರಿ ಕೆಲ್ಸ ಕೊಡಿಸ್ತೀನಿಯೆಂದು 40 ಮಹಿಳೆಯರಿಗೆ ಅಂಗನವಾಡಿ ಶಿಕ್ಷಕಿ ಪಂಗನಾಮ

    ಸರ್ಕಾರಿ ಕೆಲ್ಸ ಕೊಡಿಸ್ತೀನಿಯೆಂದು 40 ಮಹಿಳೆಯರಿಗೆ ಅಂಗನವಾಡಿ ಶಿಕ್ಷಕಿ ಪಂಗನಾಮ

    ರಾಯಚೂರು: ಸುಲಭವಾಗಿ ಸರ್ಕಾರಿ ಕೆಲಸ ಸಿಗುತ್ತೆ ಅಂದ್ರೆ ಅದ್ಯಾರು ಬೇಡ ಅಂತಾರೆ. ಎಷ್ಟು ಜನ ಬೇಕಾದ್ರೂ ಮಾಡೋಕೆ ಸಿದ್ಧರಾಗ್ತಾರೆ. ಇದೇ ಆಸೆಯನ್ನು ಬಂಡವಾಳ ಇಟ್ಕೊಂಡು ರಾಯಚೂರಿನ ಮಂಗಳವಾರಪೇಟೆ ಅಂಗನವಾಡಿ ಶಿಕ್ಷಕಿಯೊಬ್ಬಳು ಸುಮಾರು 40 ಜನ ಮಹಿಳೆಯರಿಗೆ ಅಂಗನವಾಡಿಯಲ್ಲಿ ಕೆಲಸ ಕೊಡಿಸ್ತಿನಿ ಅಂತ ಹೇಳಿ ನಕಲಿ ಆದೇಶ ಪ್ರತಿ ನೀಡಿ ಟೋಪಿ ಹಾಕಿದ್ದಾಳೆ.

    ರಾಯಚೂರಿನ ಮಂಗಳವಾರಪೇಟೆ ನಿವಾಸಿ ಈರಮ್ಮ ಕೆಲ್ಸ ಕೊಡಿಸೋದಾಗಿ ಹೇಳಿ ಮೋಸ ಮಾಡಿದ ಅಂಗನವಾಡಿ ಶಿಕ್ಷಕಿ. ಈಕೆ ಸುಮಾರು 40 ಜನರಿಗೆ ಪಂಗನಾಮ ಹಾಕಿದ್ದಾಳೆ. ಜೊತೆಗೆ ಸರ್ಕಾರಿ ಉದ್ಯೋಗದ ಆದೇಶ ಪತ್ರವನ್ನೂ ನಕಲಿ ಮಾಡಿ ಯಾಮಾರಿಸಿದ್ದಾಳೆ.

    47 ಲಕ್ಷ ರೂಪಾಯಿ ಜಮಾ ಮಾಡಿಕೊಂಡ ಈರಮ್ಮ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರ ಹೆಸರಲ್ಲಿ, ನಕಲಿ ಆದೇಶ ಪತ್ರವನ್ನ ನೀಡಿ ಯಾಮಾರಿಸಿದ್ದಾಳೆ. ಇನ್ನೂ ಕೆಲವರಿಗೆ ಉದ್ಯೋಗ ಕೊಡಿಸ್ತೀನಿ ಅಂತ ಸತಾಯಿಸ್ತಾನೇ ಬಂದಿದ್ದಾಳೆ. ಇದೀಗ ನಕಲಿ ಆದೇಶ ಪತ್ರದ ಅಸಲಿಯತ್ತು ಬಯಲಾಗಿದ್ದು, ವಂಚನೆಗೊಳಗಾದ ಮಹಿಳೆಯರು ಈರಮ್ಮಳನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

    ಹಣ ಕೇಳಿದ್ರೆ ಈಗಲೂ ದಬಾಯಿಸಿ ಮಾತನಾಡುವ ಈರಮ್ಮ, ಸಿರವಾರ ಪೊಲೀಸ್ ಠಾಣೆಯ ಎಎಸ್‍ಐ ಬಿ.ಡಿ ಖಾದ್ರಿ ನನಗೆ ಮೋಸ ಮಾಡಿದ್ದಾನೆ. ಆತನಿಂದ ನನಗೆ ನ್ಯಾಯ ಕೊಡಿಸಿ ಅಂತ ಉಲ್ಟಾ ಹೊಡೀತಿದ್ದಾಳೆ. ಒಟ್ಟಿನಲ್ಲಿ ಮೋಸ ಹೋಗುವವರು ಎಲ್ಲಿಯವರೆಗೂ ಇರುತ್ತಾರೋ ಮೋಸ ಮಾಡುವವರು ಅಲ್ಲಿಯವರೆಗೂ ಇದ್ದೇ ಇರುತ್ತಾರೆ ಅನ್ನೋ ಮಾತಿಗೆ ಈ ಪ್ರಕರಣ ಸಾಕ್ಷಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv