Tag: ಅಂಗಡಿಗಳು

  • ರಾಯಚೂರಿನಲ್ಲಿ ನಾಳೆಯಿಂದ ವ್ಯಾಪಾರ ವಹಿವಾಟು ಆರಂಭ – ಮಾಸ್ಕ್ ಧರಿಸದಿದ್ರೆ ದಂಡ

    ರಾಯಚೂರಿನಲ್ಲಿ ನಾಳೆಯಿಂದ ವ್ಯಾಪಾರ ವಹಿವಾಟು ಆರಂಭ – ಮಾಸ್ಕ್ ಧರಿಸದಿದ್ರೆ ದಂಡ

    – ಹೇರ್ ಕಟಿಂಗ್, ಪಾರ್ಲರ್ ಶಾಪ್ ಓಪನ್ ಇಲ್ಲ

    ರಾಯಚೂರು: ಗ್ರೀನ್ ಝೋನ್‍ನಲ್ಲಿರುವ ರಾಯಚೂರು ಜಿಲ್ಲೆಯಲ್ಲಿ ನಾಳೆಯಿಂದ ವ್ಯಾಪಾರ ವಹಿವಾಟುಗಳು ಆರಂಭವಾಗಲಿವೆ. ಸಾಮಾಜಿಕ ಅಂತರ ಕಾಪಾಡಿಕೊಂಡು ವ್ಯಾಪಾರ ಮಾಡಬಹುದು ಅಂತ ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ್ ತಿಳಿಸಿದ್ದಾರೆ.

    ಜಿಲ್ಲೆ ಗ್ರೀನ್ ಝೋನ್ ಪಟ್ಟಿಯಲ್ಲಿ ಇರುವ ಹಿನ್ನೆಲೆಯಲ್ಲಿ ಲಾಕ್‍ಡೌನ್ ಮತ್ತಷ್ಟು ಸಡಿಲಿಕೆಯಾಗಿದ್ದು, ಬುಧವಾರದಿಂದ ಜಿಲ್ಲೆಯಾದ್ಯಂತ ವ್ಯಾಪಾರ- ವಹಿವಾಟು ಶುರುವಾಗಲಿದೆ. ಗ್ರಾಮೀಣ ಪ್ರದೇಶದಲ್ಲಿರುವ ಕಂಪನಿ, ಕೈಗಾರಿಕೆಗಳನ್ನ ಆರಂಭಿಸಲು ಜಿಲ್ಲಾಡಳಿತ ಅನುಮತಿ ನೀಡಿದೆ. ಆದರೆ ಸಾಮಾಜಿಕ ಅಂತರ ಕಾಪಾಡಿಕೊಂಡು ಕಂಪನಿ ಆರಂಭಿಸಲು ಸೂಚಿಸಲಾಗಿದೆ. ಜೊತೆಗೆ ಬೇರೆ ಕಡೆಗಳಿಂದ ಸಿಬ್ಬಂದಿ ಬರಬಾರದು ಅಂತ ಕಂಪನಿಯಿಂದ ಮುಚ್ಚಳಿಕೆ ಬರೆಸಿಕೊಂಡು ಆರಂಭಿಸಲು ಅನುಮತಿ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

    ಹೋಟೆಲ್ ಗಳಲ್ಲಿ ಪಾರ್ಸೆಲ್‍ಗೆ ಮಾತ್ರ ಅವಕಾಶ ನೀಡಲಾಗಿದ್ದು, ಹೇರ್ ಕಟಿಂಗ್ ಶಾಪ್‍ಗಳು, ಪಾರ್ಲರ್ ಶಾಪ್‍ಗಳು ತೆರೆಯುವಂತಿಲ್ಲ. ಬಟ್ಟೆ ಅಂಗಡಿ, ಕಿರಾಣಿ ಅಂಗಡಿ ಇತರೆ ಅತ್ಯವಶ್ಯಕ ವಸ್ತುಗಳ ಅಂಗಡಿಗಳು ಓಪನ್ ಮಾಡಲು ಅವಕಾಶ ನೀಡಲಾಗಿದೆ. ಮನೆಯಿಂದ ಅವಶ್ಯಕತೆ ಇದ್ದವರು ಮಾತ್ರ ಹೊರಬರಬೇಕು. ಮಾಸ್ಕ್ ಧರಿಸಿಕೊಂಡೇ ಹೊರಬರಬೇಕು. ನಿಯಮ ಉಲ್ಲಂಘಿಸಿದವರ ವಿರುದ್ಧ ಕೇಸ್ ಹಾಕಲಾಗುವುದು ಎಂದು ಆರ್.ವೆಂಕಟೇಶ್ ಕುಮಾರ್ ಹೇಳಿದ್ದಾರೆ.

  • ಕೊಡಗಿನಲ್ಲಿ ವಾರದ 4 ದಿನಗಳು ಮಾತ್ರ ಅಂಗಡಿಗಳು ಓಪನ್

    ಕೊಡಗಿನಲ್ಲಿ ವಾರದ 4 ದಿನಗಳು ಮಾತ್ರ ಅಂಗಡಿಗಳು ಓಪನ್

    ಮಡಿಕೇರಿ: ಜಿಲ್ಲೆಯಲ್ಲಿ ಬೆಳಗ್ಗೆ 6 ರಿಂದ 4 ಗಂಟೆವರೆಗೆ ಅಗತ್ಯ ವಸ್ತುಗಳನ್ನು ದಿನಸಿ ಅಂಗಡಿಗಳಲ್ಲಿ ಮಾರಾಟ ಮಾಡಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

    ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೊವೀಡ್-19 ಸಂಬಂಧ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಸೋಮಣ್ಣ, ಜಿಲ್ಲೆ ಕೊರೊನಾ ವಿಷಯದಲ್ಲಿ ಹಸಿರು ವಲಯದಲ್ಲಿ ಇರುವುದರಿಂದ ವಾರದಲ್ಲಿ 4 ದಿನಗಳು ಅಂದರೆ ಭಾನುವಾರ, ಸೋಮವಾರ, ಬುಧವಾರ ಹಾಗೂ ಶುಕ್ರವಾರ ಬೆಳಗ್ಗೆ 6 ರಿಂದ 4 ಗಂಟೆವರೆಗೆ ಅಗತ್ಯ ವಸ್ತುಗಳನ್ನು ಮಾರಾಟ ಮಾಡಬಹುದು ಎಂದು ತಿಳಿಸಿದರು.

    ಸಂತೆ, ಜಾತ್ರೆ, ಪ್ರವಾಸಿ ತಾಣಗಳು, ಚರ್ಚ್, ಮಸೀದಿ, ಪ್ರಾರ್ಥನಾ ಮಂದಿರಗಳು ಹಾಗೆಯೇ ಮದ್ಯ ಸೇರಿದಂತೆ ತಂಬಾಕು ಉತ್ಪನ್ನಗಳು ಎಂದಿನಂತೆ ಸಂಪೂರ್ಣ ಬಂದ್ ಆಗಿರಲಿವೆ. ಹೋಟೆಲ್‍ಗಳಲ್ಲಿ ಕೇವಲ ಪಾರ್ಸೆಲ್ ವ್ಯವಸ್ಥೆ ಇರಲಿದೆ. ಜಿಲ್ಲಾಡಳಿತ, ಶಾಸಕರು ಹಾಗೂ ಜನಪ್ರತಿನಿಧಿಗಳ ದೂರ ದೃಷ್ಟಿ ಚಿಂತನೆ, ಮುಂದಾಲೋಚನೆಯಿಂದ ಜಿಲ್ಲೆಯಲ್ಲಿ ಪ್ರಾರಂಭವಾದ ಒಂದು ಕೊರೊನಾ ಪ್ರಕರಣವನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಸೋಮಣ್ಣ ಹೇಳಿದರು.

    ಮಂಡ್ಯ, ಬೆಂಗಳೂರು ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ, ಉತ್ತರ ಕನ್ನಡ, ಧಾರವಾಡದಲ್ಲಿ ಅಂಗಡಿ ಮತ್ತು ಕೈಗಾರಿಕೆಗೆ ಅನುಮತಿಯನ್ನು ಜಿಲ್ಲಾ ಉಸ್ತುವಾರಿ ಸಚಿವರ ನಿರ್ಧಾರಕ್ಕೆ ಬಿಡಲಾಗಿದೆ.

    ಇದೇ ವೇಳೆ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ, ಕೆಲವೇ ದಿನಗಳಲ್ಲಿ ಮಳೆ ಪ್ರಾರಂಭವಾಗಲಿದೆ. ನದಿಗಳಲ್ಲಿ ಹೂಳು ತುಂಬಿದೆ. ಕಳೆದೆರಡು ವರ್ಷಗಳಿಂದ ಸುರಿದ ಮಳೆಯಿಂದ ಕುಶಾಲನಗರ ಭಾಗದಲ್ಲಿ ತೀರ ಸಂಕಷ್ಟ ಎದುರಿಸುವಂತಾಗಿತ್ತು. ಆದ್ದರಿಂದ ಸಚಿವರು ಹೊಲ, ಗದ್ದೆಗಳಲ್ಲಿ ತುಂಬಿರುವ ಮರಳನ್ನು ತೆಗೆಯಲು ಆದೇಶ ನೀಡಬೇಕು. ಕೆಲವರು ಮನೆಗಳಿಗೆ ಜೆಲ್ಲಿ, ಎಂ.ಸ್ಯಾಂಡ್ ತೆಗೆಯಲು ಅನುಮತಿ ಕೊಡುತ್ತಿಲ್ಲ ಎಂದರು.

    ಮಳೆಗಾಲ ಸಮೀಪದಲ್ಲಿದೆ. ಸರ್ಕಾರವೇ ಅಧಿಕೃತವಾಗಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ಕೊಟ್ಟಿರುವುದರಿಂದ ಮನೆಗಳ ನಿರ್ಮಾಣಕ್ಕೆ ಸಮಸ್ಯೆ ಕೊಡಬೇಡಿ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗೆ ಸಚಿವ ಸೊಮಣ್ಣ ತಾಕೀತು ಮಾಡಿದರು.

    ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ, ಜಿಲ್ಲೆಯ ಹಲವು ಕಾಮಗಾರಿಗಳನ್ನು ಮೈಸೂರಿನವರಿಗೆ ಕೊಡಲಾಗಿದೆ. ಕುಟ್ಟ-ಮಾಕುಟ್ಟ ರಸ್ತೆ ಕೆಲಸವನ್ನು ಮಳೆಗಾಲಕ್ಕೂ ಮೊದಲೇ ಪೂರ್ಣಗೊಳಿಸಬೇಕು. ಕೋ ಆಪರೇಟಿವ್ ಸೊಸೈಟಿಗಳಲ್ಲಿ ಸರ್ಕಾರ 1 ಲಕ್ಷದವರಗೆ ಸಾಲ ಮನ್ನಾ ಮಾಡಿದೆ. ಆದರೆ ಈ ಯೋಜನೆ ಜಿಲ್ಲೆಯಲ್ಲಿ ಹಲವರಿಗೆ ತಲುಪಿಲ್ಲ. ಹಲವೆಡೆ ಉತ್ತಮ ಬಾಳೆ ಬೆಳೆ ಬೆಳೆದಿದ್ದು, ಇದರ ಮಾರಾಟಕ್ಕೆ ಜಿಲ್ಲಾಡಳಿತ ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದರು.

    ಸಂಪಾಜೆ ಚೆಕ್‍ಪೋಸ್ಟ್ ಬಳಿ ಕಾಸರಗೋಡು ಭಾಗದಿಂದ ಜಿಲ್ಲೆಯ ಒಳಗೆ ಬರುತ್ತಿದ್ದಾರೆ. ಚೆಕ್‍ಪೋಸ್ಟ್ ಒಳಗೆ ಬರುವ ಮೊದಲು ಗುರುತಿನ ಚೀಟಿ ನೋಡಿ. ಹೊರ ಜಿಲ್ಲೆಗಳಿಂದ ಹಂದಿ ಹಾಗೂ ಮೀನುಗಳನ್ನು ತರಿಸಿಕೊಳ್ಳುವುದು ಬೇಡ. ಈಗಾಗಲೇ ಮಂಗಳೂರಿನಿಂದ ಮೀನುಗಳು ಬರುತ್ತಿದ್ದು, ಇದಕ್ಕೆಲ್ಲ ಕಡಿವಾಣ ಹಾಕಬೇಕು ಎಂದು ಶಾಸಕ ಬೋಪಯ್ಯ ಹೇಳಿದರು.

    ಅಗತ್ಯ ವಸ್ತುಗಳನ್ನು ಮಾತ್ರ ಚೆಕ್‍ಪೋಸ್ಟ್ ಮೂಲಕ ಬರುತ್ತಿದ್ದಾರೆ. ಅಗತ್ಯ ವಸ್ತುಗಳನ್ನು ತರಬೇಕಾದರೆ ಆರೋಗ್ಯ ತಪಾಸಣೆ ದೃಢೀಕರಣ ಪತ್ರ ಪರಿಶೀಲಿಸಲು ಕಷ್ಟ ಆಗುತ್ತದೆ ಎಂದು ಎಸ್‍ಪಿ ಸುಮನ್ ಡಿ.ಪನ್ನೇಕರ್ ತಿಳಿಸಿದರು. ಇದೊಂದು ಸೂಕ್ಷ್ಮ ವಿಚಾರ. ಕೆಲವು ನಿಬಂಧನೆಗಳಿಗೆ ನಾವೂ ಒಳಪಡಬೇಕಾಗಿದ್ದು, ಈ ಬಗ್ಗೆ ಪೊಲೀಸ್ ಇಲಾಖೆ ಸಹಕರಿಸಬೇಕು. ಎಂದರು.

  • ಲಾಕ್‍ಡೌನ್‍ನಿಂದ ಇನ್ನಷ್ಟು ರಿಲೀಫ್ – ಎಲ್ಲ ರೀತಿಯ ಅಂಗಡಿ ತೆರೆಯಲು ಅನುಮತಿ

    ಲಾಕ್‍ಡೌನ್‍ನಿಂದ ಇನ್ನಷ್ಟು ರಿಲೀಫ್ – ಎಲ್ಲ ರೀತಿಯ ಅಂಗಡಿ ತೆರೆಯಲು ಅನುಮತಿ

    – ಕೆಲವು ಷರತ್ತುಗಳು ಅನ್ವಯ

    ನವದೆಹಲಿ: ಲಾಕ್‍ಡೌನ್‍ನಿಂದ ಜನರು ಕೆಲಸವಿಲ್ಲದೆ ತತ್ತರಿಸಿ ಹೋಗಿದ್ದರು. ಇದೀಗ ಕೇಂದ್ರ ಸರ್ಕಾರ ಕೊರೊನಾ ಲಾಕ್‍ಡೌನ್‍ನಿಂದ ಬಿಗ್ ರಿಲೀಫ್ ಘೋಷಿಸಿದೆ.

    ಕೇಂದ್ರ ಸರ್ಕಾರ ಎಲ್ಲ ರೀತಿಯ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಿದೆ. ಇಲ್ಲಿವರೆಗೆ ಕೇವಲ ಅಗತ್ಯ ವಸ್ತು ಮಾರುವ ಅಂಗಡಿಗಳಷ್ಟೇ ಅನುಮತಿ ನೀಡಲಾಗಿತ್ತು. ಈಗ ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಉಳಿದ ಅಂಗಡಿಗಳನ್ನೂ ತೆರೆಯಲು ಅನುಮತಿ ನೀಡಿದೆ.

    ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಮಳಿಗೆಗಳ ಕಾಯ್ದೆಯಡಿ ಬರುವ ಅಂಗಡಿಗಳು ತೆರೆಯಬಹುದು. ಈ ಕಾಯ್ದೆಯಡಿ ಪರವಾನಿಗೆ ಪಡೆದಿರುವ ಎಲ್ಲ ಅಂಗಡಿಗಳನ್ನು ಇವತ್ತಿನಿಂದ ತೆರೆಯಬಹುದು ಎಂದು ಕೇಂದ್ರ ಗೃಹ ಸಚಿವಾಲಯದಿಂದ ಮಹತ್ವದ ಆದೇಶವನ್ನು ಹೊರಡಿಸಿದೆ. ಆದರೆ ಅಂಗಡಿಗಳನ್ನು ತೆರೆಯಲು ಕೇಂದ್ರ ಸರ್ಕಾರ ಕೆಲವು ಷರತ್ತುಗಳನ್ನು ಹಾಕಿದೆ.

    1. ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಮಳಿಗೆ ಕಾಯ್ದೆಯಡಿ ಪರವಾನಿಗೆ ಪಡೆದಿರುವ ಅಂಗಡಿಗಳು, ಅಗತ್ಯ ವಸ್ತು ಮಾರುವ ಅಂಗಡಿಗಳನ್ನು ಜೊತೆಗೆ ಉಳಿದ ಅಂಗಡಿಗಳಿಗೂ ಅನುಮತಿ.
    2. ಪಾಲಿಕೆ, ನಗರಸಭೆ ವ್ಯಾಪ್ತಿಯಲ್ಲಿ ಜನವಸತಿ ಮಳಿಗೆಯಲ್ಲಿರುವ ಅಂಗಡಿಗಳಿಗಷ್ಟೇ ಅನುಮತಿ ನೀಡಲಾಗಿದೆ. ಈ ಪ್ರದೇಶಗಳಲ್ಲಿ ವಾಣಿಜ್ಯ ಮಳಿಗೆಗಳಲ್ಲಿ ಇರುವ ಅಂಗಡಿಗಳನ್ನು ತೆರೆಯುವಂತಿಲ್ಲ.
    3. ವಸತಿ ಕಾಂಪ್ಲೆಕ್ಸ್, ವಾಣಿಜ್ಯ ಮಳಿಗೆಗಳಲ್ಲಿರುವ ಅಂಗಡಿ, ಪಾಲಿಕೆ, ನಗರಸಭೆ ಹೊರಗೆ ಎರಡೂ ಮಳಿಗೆಗಳಲ್ಲಿ ಬರುವ ಅಂಗಡಿಗಳಿಗೆ ಅನುಮತಿ.

    4. ಸಿಂಗಲ್‍ಬ್ರ್ಯಾಂಡ್, ಮಲ್ಟಿಬ್ರ್ಯಾಂಡ್ ಮಳಿಗೆಗಳು, ಮಾಲ್‍ಗಳಿಗೆ ಅನುಮತಿ ಇಲ್ಲ. ಇವುಗಳಿಗೆ ಲಾಕ್‍ಡೌನ್‍ನಿಂದಲೂ ವಿನಾಯಿತಿ ಇಲ್ಲ.
    5. ತೆರೆಯುವ ಅಂಗಡಿಗಳಲ್ಲಿ ಶೇ. 50ರಷ್ಟೇ ನೌಕರರು ಕೆಲಸ ಮಾಡಬೇಕು.
    6. ಅಲ್ಲದೇ ಕೆಲಸ ಮಾಡುವಾಗ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವು ಕಡ್ಡಾಯ.
    7. ಕಂಟೈನ್‍ಮೆಂಟ್ ಝೋನ್‍ಗಳಿಗೆ ಅಂಗಡಿ ತೆರೆಯುವ ವಿನಾಯಿತಿ ಅನ್ವಯಿಸಲ್ಲ.

    ಈಗಾಗಲೇ ರಾಜ್ಯ ಸರ್ಕಾರವೂ ಕೂಡ ಕೆಲವು ಅಂಗಡಿಗಳನ್ನು ತೆರೆಯಲು ಅನುಮತಿ ನೀಡಿತ್ತು. ಈಗ ಕೇಂದ್ರ ಸರ್ಕಾರವೂ ಅಧಿಕೃತವಾಗಿ ಎಲ್ಲ ರೀತಿಯ ಅಂಗಡಿಗಳನ್ನು ತೆರೆಯುವಂತೆ ಆದೇಶ ಹೊರಡಿಸಿದೆ.

  • ಕಾಂಪ್ಲೆಕ್ಸ್ ಅಂಗಡಿಗಳ ಒಂದು ತಿಂಗ್ಳ ಬಾಡಿಗೆ ಮನ್ನಾ – ಮಾನವೀಯತೆ ಮೆರೆದ ಮಾಲೀಕ

    ಕಾಂಪ್ಲೆಕ್ಸ್ ಅಂಗಡಿಗಳ ಒಂದು ತಿಂಗ್ಳ ಬಾಡಿಗೆ ಮನ್ನಾ – ಮಾನವೀಯತೆ ಮೆರೆದ ಮಾಲೀಕ

    ಉಡುಪಿ: ಕೊರೊನಾ ವೈರಸ್‍ನಿಂದ ದೇಶಕ್ಕೆ ಬೀಗ ಹಾಕಲಾಗಿದೆ. ಬ್ಯಾಂಕ್‍ಗಳ EMI ಪಾವತಿಸಲು ಆರ್‌ಬಿಐ ವಿನಾಯಿತಿ ಕೊಟ್ಟಿದೆ. ಈ ನಡುವೆ ಸಂಪೂರ್ಣ ಲಾಕ್‍ಡೌನ್ ಆಗಿರುವ ಜಿಲ್ಲೆಯಲ್ಲಿ ಕಾಂಪ್ಲೆಕ್ಸ್ ಮಾಲೀಕರೊಬ್ಬರು ತನ್ನ ಅಂಗಡಿಗಳಿಗೆ ಬಾಡಿಗೆ ವಿನಾಯಿತಿ ಮಾಡಿದ್ದಾರೆ.

    ಕುಂದಾಪುರ ಉಳ್ತೂರು ಕಮರ್ಷಿಯಲ್ ಕಾಂಪ್ಲೆಕ್ಸ್‌ನ ಎಲ್ಲಾ ಅಂಗಡಿಗಳಿಗೆ ರಿಯಾಯಿತಿ ನೀಡುವುದಾಗಿ ಮಾಲೀಕ ರಮೇಶ್ ಅಡಿಗ ಘೋಷಣೆ ಮಾಡಿದ್ದಾರೆ. ಕುಂದಾಪುರ ತಾಲೂಕಿನ ಉಳ್ತೂರು ಗ್ರಾಮದಲ್ಲಿರುವ ಈ ಕಾಂಪ್ಲೆಕ್ಸ್‌ನ ಬಾಡಿಗೆದಾರರಿಗೆ ಒಂದು ತಿಂಗಳ ಬಾಡಿಗೆಯನ್ನು ಮನ್ನಾ ಮಾಡಿದ್ದೇನೆ. ಸಂದರ್ಭಕ್ಕೆ ಅನುಗುಣವಾಗಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರಮೇಶ್ ಅಡಿಗ, ಬಾಡಿಗೆದಾರರು ವ್ಯಾಪಾರ ಮಾಡದೆ ಅಂಗಡಿಗಳನ್ನು ಬಂದ್ ಮಾಡಿದ್ದಾರೆ. ಅವರಿಂದ ಬಾಡಿಗೆ ತೆಗೆದುಕೊಳ್ಳಲು ಮನಸ್ಸಾಗುತ್ತಿಲ್ಲ. ಒಂದು ತಿಂಗಳ ಬಾಡಿಗೆ ಪಡೆಯದಿದ್ದರೆ ನಮಗೆ ಲಾಭ ಆಗದೇ ಇರಬಹುದು. ಆದರೆ ನಷ್ಟ ಆಗುವುದಿಲ್ಲ. ನಮ್ಮಲ್ಲಿರುವ ಎಲ್ಲ ಬಾಡಿಗೆದಾರರು ಇಲ್ಲಿ ನಡೆಯುವ ವ್ಯಾಪಾರವನ್ನು ಅವಲಂಬಿಸಿಯೇ ಜೀವನ ಮಾಡುತ್ತಿದ್ದಾರೆ ಎಂದರು.

    ಈಗಾಗಲೇ ಅವರು ಅವರ ಜೀವನೋಪಾಯಕ್ಕಾಗಿ ಸಾಲಗಳನ್ನು ಮಾಡಿದ್ದು, ಕಂತು ಕಟ್ಟಲು ಬಹಳ ಕಷ್ಟಪಡುತ್ತಿರುವ ಸಂದರ್ಭದಲ್ಲಿ ಗಾಯದ ಮೇಲೆ ಬರೆ ಎಳೆಯುವುದು ನನಗೆ ಯಾಕೋ ಸರಿ ಅನ್ನಿಸಲಿಲ್ಲ. ನನ್ನದು ಸಣ್ಣ ಕಾಂಪ್ಲೆಕ್ಸ್ ಹಳ್ಳಿ ಭಾಗದಲ್ಲಿದೆ. ಪೇಟೆಯಲ್ಲಿರುವ ಕಾಂಪ್ಲೆಕ್ಸ್‌ಗಳು ಕೂಡ ಇದೇ ನಿರ್ಧಾರವನ್ನು ಮಾಡಬೇಕು. ಜನಸಾಮಾನ್ಯರ ಮೇಲಿನ ಹೊರೆಯನ್ನು ಕೊಂಚ ಮಟ್ಟಿಗೆ ಇಳಿಸಬೇಕು ಎಂದು ವಿನಂತಿ ಮಾಡಿಕೊಂಡರು.

  • ಮೂರು ದಿನ ಬಟ್ಟೆ ಅಂಗಡಿಗಳು ಕ್ಲೋಸ್

    ಮೂರು ದಿನ ಬಟ್ಟೆ ಅಂಗಡಿಗಳು ಕ್ಲೋಸ್

    – ಕಷ್ಟದಲ್ಲಿ ದಿನಗೂಲಿ ನೌಕರರು

    ಬೆಂಗಳೂರು: ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದೇಶದಲ್ಲಿ ದಿನೇ ದಿನೇ ಹೆಚ್ಚಾಗುತ್ತಿದ್ದಂತೆ ಹಂತ ಹಂತವಾಗಿ ಎಲ್ಲ ಉದ್ಯಮಗಳು ಬಂದ್ ಆಗುತ್ತಿದೆ. ಇದೀಗ ಬಟ್ಟೆ ಅಂಗಡಿಗಳು ಬಂದ್ ಆಗಿವೆ.

    ಭಾನುವಾರದಿಂದ ಮೂರು ದಿನಗಳ ಕಾಲ ಬಟ್ಟೆ ವ್ಯಾಪಾರಿಗಳು ಸಂಪೂರ್ಣ ಬಂದ್ ಮಾಡಲು ನಿರ್ಧಾರ ಮಾಡಿದ್ದು, ಅದರ ಎಫೆಕ್ಟ್ ಇಂದಿನಿಂದಲೇ ಶುರುವಾಗಿದೆ. ಬಟ್ಟೆ ವ್ಯಾಪಾರಕ್ಕೆ ಫೇಮಸ್ ಆಗಿದ್ದ ನಗರದ ಚಿಕ್ಕಪೇಟೆಯಲ್ಲಿ ಇಂದಿನಿಂದಲೇ ವ್ಯಾಪಾರ ವಹಿವಾಟು ಸ್ಥಗಿತಗೊಂಡಿದೆ. ಚಿಕ್ಕಪೇಟೆ ಸೇರಿದಂತೆ ಬಹುತೇಕ ದೊಡ್ಡ ದೊಡ್ಡ ಬಟ್ಟೆ ಮಳಿಗೆಗಳು ಈಗಾಗಲೇ ಬಾಗಿಲು ಮುಚ್ಚಿವೆ.

    ಭಾನುವಾರ ಪ್ರಧಾನಿ ನರೇಂದ್ರ ಮೋದಿ ಜನತಾ ಕರ್ಫ್ಯೂ ಘೋಷಣೆ ಮಾಡಿದ್ದು, ಬಹುತೇಕ ಜನರು ಜನತಾ ಕರ್ಫ್ಯೂ ವನ್ನು ಸ್ವಾಗತಿಸಿದ್ದಾರೆ. ಪ್ರತಿದಿನ ಲಕ್ಷಾಂತರ ರೂಪಾಯಿ ವ್ಯಾಪಾರ ಮಾಡುತ್ತಿದ್ದ ಅಂಗಡಿಗಳು ಸಂಪೂರ್ಣ ಕ್ಲೋಸ್ ಆಗಿದೆ. ಈ ಅಂಗಡಿಗಳಲ್ಲಿ ದಿನಗೂಲಿ ನೌಕರರಾಗಿ ಕೆಲಸ ಮಾಡುತ್ತಿದ್ದ ಜನರಿಗೆ ಮೂರು ದಿನಗಳ ಬಟ್ಟೆ ವ್ಯವಹಾರ ಬಂದ್ ಆಗಿರುವುದು ತುಂಬಾ ತೊಂದರೆಯಾಗಿದೆ.

    ದಿನ ಕೆಲಸ ಮಾಡಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಮೂರು ದಿನ ರಜೆ ನೀಡಿದರೆ ನಮ್ಮ ಕುಟುಂಬ ನಿರ್ವವಣೆ ಕಷ್ಟವಾಗಲಿದೆ ಎಂದು ಬಟ್ಟೆ ಅಂಗಡಿಗಳಲ್ಲಿ ಕೆಲಸ ಮಾಡೋ ಸಿಬ್ಬಂದಿ ತಮ್ಮ ಅಳಲನ್ನು ತೋಡಿಕೊಂಡರು. ಸದ್ಯ ಮೂರು ದಿನಗಳ ಮಟ್ಟಿಗೆ ಮಾತ್ರ ಬಟ್ಟೆ ವ್ಯಾಪಾರ ಬಂದ್ ಆಗಿದ್ದು, ಕೊರೊನಾ ವೈರಸ್ ಮುಂದಿನ ಹಂತ ನೋಡಿಕೊಂಡು ಬಟ್ಟೆ ವ್ಯಾಪಾರ ನಿರ್ಧಾರವಾಗಲಿದೆ.

  • 20, 30 ರೂ. ವಸ್ತು ಖರೀದಿಸಿ, 500 ರೂ. ಖೋಟಾ ನೋಟು ಚಲಾವಣೆಗೆ ಯತ್ನಿಸಿ ಸಿಕ್ಕಿಬಿದ್ದ

    20, 30 ರೂ. ವಸ್ತು ಖರೀದಿಸಿ, 500 ರೂ. ಖೋಟಾ ನೋಟು ಚಲಾವಣೆಗೆ ಯತ್ನಿಸಿ ಸಿಕ್ಕಿಬಿದ್ದ

    ಹಾವೇರಿ: ಬೇಕರಿ ಹಾಗೂ ಕಿರಾಣಿ ಅಂಗಡಿಗಳಲ್ಲಿ ಸಣ್ಣಪುಟ್ಟ ವಸ್ತುಗಳನ್ನು ಖರೀದಿಸಿ, 500 ರೂ. ಖೋಟಾ ನೋಟು ಚಲಾವಣೆಗೆ ಮಾಡುತ್ತಿದ್ದ ವ್ಯಕ್ತಿಯನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

    ಜಿಲ್ಲೆಯ ಸವಣೂರು ಪಟ್ಟಣದಲ್ಲಿ ಘಟನೆ ನಡೆದಿದ್ದು, ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ವ್ಯಕ್ತಿ ದಾವಣಗೆರೆ ಮೂಲದವನು ಎಂದು ಗುರುತಿಸಲಾಗಿದೆ. ಬೇಕರಿ, ಕಿರಾಣಿ ಅಂಗಡಿಗಳಲ್ಲಿ ಇಪ್ಪತ್ತು, ಮೂವತ್ತು ರೂ.ಗಳ ವಸ್ತುಗಳನ್ನು ಖರೀದಿಸಿ, 500 ರೂ. ಮುಖಬೆಲೆಯ ಖೋಟಾನೋಟು ಕೊಟ್ಟು ಅಂಗಡಿಯ ಮಾಲೀಕರನ್ನು ಯಾಮಾರಿಸುತ್ತಿದ್ದ ಎನ್ನಲಾಗಿದೆ.

    ಎರಡು ಅಂಗಡಿಗಳಲ್ಲಿ ಐನೂರು ರೂಪಾಯಿ ಖೋಟಾನೋಟು ನೀಡಿ ಚಿಲ್ಲರೆ ಪಡೆದುಕೊಂಡು ಹೋಗಿದ್ದ. ನಂತರ ನೋಟು ನೋಡಿ ಸಂಶಯಗೊಂಡು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ನಂತರ ಆರೋಪಿಯನ್ನು ಹಿಡಿದು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅಂಗಡಿಗೆ ಬಂದು ನೋಟು ನೀಡಿ, ವಸ್ತು ಖರೀದಿಸುವ ದೃಶ್ಯ ಸೆರೆಯಾಗಿದೆ.

    ಸ್ಥಳೀಯರು ಕೇಳಿದರೆ ಹೆಸರು ಬಾಯ್ಬಿಟ್ಟಿಲ್ಲ, ಕೇವಲ ದಾವಣಗೆರೆ ಜಿಲ್ಲೆಯವನು ಎಂದು ಹೇಳುತ್ತಿದ್ದಾನೆ. ಸವಣೂರು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

  • ಯೋಗಿ ಸರ್ಕಾರದಿಂದ ಪ್ರತಿಭಟನಾಕಾರರ 67 ಅಂಗಡಿ ಮುಟ್ಟುಗೋಲು

    ಯೋಗಿ ಸರ್ಕಾರದಿಂದ ಪ್ರತಿಭಟನಾಕಾರರ 67 ಅಂಗಡಿ ಮುಟ್ಟುಗೋಲು

    ಲಕ್ನೋ: ಪೌರತ್ವ ಕಾಯ್ದೆ ವಿರುದ್ಧದ ಪ್ರತಿಭಟನೆಯಲ್ಲಿ ಸಾರ್ವಜನಿಕ ಆಸ್ತಿಯನ್ನು ನಾಶ ಮಾಡಿದ ಪ್ರತಿಭಟನಾಕಾರರ 67 ಅಂಗಡಿಗಳನ್ನು ಉತ್ತರ ಪ್ರದೇಶದ ರಾಜ್ಯ ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದೆ.

    ಈ ಅಂಗಡಿಗಳು ಪೌರತ್ವ ವಿಧೇಯಕ ಕಾಯ್ದೆಯ ವಿರೋಧಿ ಪ್ರತಿಭಟನೆಯಲ್ಲಿ ಹಿಂಸಾತ್ಮಕವಾಗಿ ಸಾರ್ವಜನಿಕ ಆಸ್ತಿ ಹಾನಿ ಉಂಟುಮಾಡಿದರಿಗೆ ಸೇರಿದೆ. ಈ ವಿಚಾರದ ಬಗ್ಗೆ ನಾವು ತನಿಖೆ ಮಾಡುತ್ತಿದ್ದು, ಒಂದು ವೇಳೆ ತನಿಖೆಯಲ್ಲಿ ಈ ಅಂಗಡಿಗಳು ಅವರಿಗೆ ಸೇರದೇ ಇದ್ದರೆ ಅವುಗಳನ್ನು ವಶಕ್ಕೆ ಪಡೆದುಕೊಳ್ಳುತ್ತೇವೆ ಎಂದು ಉತ್ತರ ಪ್ರದೇಶ ರಾಜ್ಯ ಸರ್ಕಾರದ ವಕ್ತಾರರು ಹೇಳಿದ್ದಾರೆ.

    ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ಹಿಂಸಾತ್ಮಕ ಪ್ರತಿಭಟನೆಯಲ್ಲಿ ಭಾಗಿಯಾಗಿ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಮತ್ತು ಅವರಿಗೆ ದಂಡ ವಿಧಿಸುವ ಮೂಲಕ ಸಾರ್ವಜನಿಕರ ಆಸ್ತಿಯನ್ನು ಮತ್ತೆ ದುರಸ್ಥಿ ಮಾಡಿಸಲಾಗುವುದು ಎಂದು ಹೇಳಿದ್ದರು. ಮುಖ್ಯಮಂತ್ರಿಯವರ ಈ ಹೇಳಿಕೆಯಂತೆ ಪ್ರತಿಭಟನಾಕರರ 67 ಅಂಗಡಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

    ಪೌರತ್ವ ಕಾಯ್ದೆ ವಿರುದ್ಧದ ಪ್ರತಿಭಟನೆ ಹಿಂಸಾತ್ಮಕ ಮಾರ್ಗದಲ್ಲಿ ನಡೆದಿದ್ದು. ಇದರಲ್ಲಿ ರಾಜ್ಯದ ಹಲವಾರು ಜಿಲ್ಲೆಯಲ್ಲಿ ಸಾರ್ವಜನಿಕ ಮತ್ತು ಖಾಸಗಿ ವಲಯದ ಅಪಾರ ಆಸ್ತಿ ನಾಶವಾಗಿದೆ. ನಾವು ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದವರ ಎಲ್ಲ ಆಸ್ತಿಯನ್ನು ವಶಪಡಿಸಿಕೊಂಡು ಅವುಗಳನ್ನು ಹರಾಜು ಹಾಕಿ ಅದರಿಂದ ನಷ್ಟವನ್ನು ಸರಿದೂಗಿಸಲಾಗುವುದು ಎಂದು ಯೋಗಿ ಅದಿತ್ಯನಾಥ್ ಹೇಳಿದ್ದರು.

    ಗಲಭೆಯ ಸಮಯದಲ್ಲಿ ಸಿಸಿಟಿವಿ ದೃಶ್ಯವಾಳಿಗಳು ಮತ್ತು ಘಟನೆಯ ವಿಡಿಯೋವನ್ನು ರೆಕಾರ್ಡಿಂಗ್ ಮಾಡಿ ಅದರಲ್ಲಿ ಕಂಡು ಬರುವ ವ್ಯಕ್ತಿಗಳನ್ನು ಗುರುತಿಸಿ ಕ್ರಮಕೈಗೊಳ್ಳಲಾಗುವುದು ಎಂದು ಯೋಗಿ ಹೇಳಿದ್ದಾರೆ. ಆದರೆ ಮುಜಫರ್ ನಗರದಲ್ಲಿ ಒಂದೇ ಬಾರಿ ಜನಸಮೂಹ ಅಂಗಡಿಗಳ ಹೊರಗೆ ಜಮಾವಣೆಗೊಂಡಿತ್ತು. ಇದರಲ್ಲಿ ಅಂಗಡಿಯ ಮಾಲೀಕ ಯಾರು ಎಂದು ತಿಳಿಯಲು ಆಗಿಲ್ಲ. ಇದರ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಆ ಜಿಲ್ಲೆಯ ಎಸ್‍ಪಿ ಅಭಿಷೇಕ್ ಯಾದವ್ ಅವರು ಹೇಳಿದ್ದಾರೆ.

    ಮುಜಫರ್ ನಗರ ಸೇರಿದಂತೆ ಉತ್ತರ ಪ್ರದೇಶದ 12 ಜಿಲ್ಲೆಗಳಲ್ಲಿ ಶುಕ್ರವಾರ ನಮಾಜ್ ಮುಗಿದ ಮಧ್ಯಾಹ್ನದ ನಂತರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಈ ಪ್ರತಿಭಟನೆಯಲ್ಲಿ ಸುಮಾರು 10 ಬೈಕ್ ಮತ್ತು ಹಲವಾರು ಕಾರುಗಳನ್ನು ಸುಟ್ಟು ಹಾಕಲಾಗಿತ್ತು. ಉದ್ರಿಕ್ತ ಪ್ರತಿಭಟನಾಕಾರರು ಸಾರ್ವಜನಿಕ ಆಸ್ತಿಯನ್ನು ದ್ವಂಸಗೊಳಿಸಿದ್ದರು. ಈ ಪ್ರತಿಭಟನೆಯಲ್ಲಿ 12 ಮಂದಿ ಪೊಲೀಸ್ ಸಿಬ್ಬಂದಿ ಸೇರಿದಂತೆ ಸುಮಾರು 30 ಜನರು ಗಾಯಗೊಂಡಿದ್ದರು.

    ಉತ್ತರ ಪ್ರದೇಶದಲ್ಲಿ ಇನ್ನೂ ಪ್ರತಿಭಟನೆಯ ಕಿಚ್ಚು ಹಾಗೇ ಉಳಿದಿದ್ದು, ರಾಜ್ಯದ ಕೆಲ ಸೂಕ್ಷ್ಮ ಪ್ರದೇಶದಲ್ಲಿ ನಿಷೇಧಾಜ್ಞೆಯನ್ನು ಮುಂದುವರಿಸಲಾಗಿದೆ. ಇಂಟರ್ ನೆಟ್ ಸೌಲಭ್ಯವನ್ನು ಕಡಿತ ಮಾಡಲಾಗಿದೆ. ಪ್ರತಿಭಟನೆಯಲ್ಲಿ ಭಾಗವಹಿಸಿದ ಸುಮಾರು 879 ಜನರನ್ನು ಬಂಧಿಸಲಾಗಿದೆ. ಈವರೆಗೆ 131 ಪ್ರಕರಣಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.

  • ಒಂದೇ ರಾತ್ರಿಯಲ್ಲಿ ಶಟರ್ ಮುರಿದು 5 ಅಂಗಡಿಯಲ್ಲಿ ಸರಣಿ ಕಳ್ಳತನ

    ಒಂದೇ ರಾತ್ರಿಯಲ್ಲಿ ಶಟರ್ ಮುರಿದು 5 ಅಂಗಡಿಯಲ್ಲಿ ಸರಣಿ ಕಳ್ಳತನ

    ಕೋಲಾರ: ಒಂದೇ ರಾತ್ರಿಯಲ್ಲಿ ಐದು ಅಂಗಡಿಗಳ ಶಟರ್ ಮುರಿದು ಸರಣಿ ಕಳ್ಳತನ ಮಾಡಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ರಾಯಲ್ಪಾಡು ಗ್ರಾಮದಲ್ಲಿ ನಡೆದಿದೆ.

    ತಡರಾತ್ರಿ ತಮ್ಮ ಕೈಚಳಕ ತೋರಿಸಿರುವ ಕಳ್ಳರು ರಾಯಲ್ಪಾಡು ಗ್ರಾಮದ ಜನರಲ್ ಸ್ಟೋರ್, ಜ್ಯುವೆಲ್ಲರಿ ಶಾಪ್, ಪೆಟ್ರೋಲ್ ಅಂಗಡಿ ಮತ್ತು ಚಿಲ್ಲರೆ ಅಂಗಡಿಗಳು ಸೇರಿದಂತೆ ಒಟ್ಟು ಐದು ಅಂಗಡಿಗಳಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.

    ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳ ಕಳ್ಳತನವಾಗಿದೆ ಎಂದು ಅಂಗಡಿ ಮಾಲೀಕರು ಹೇಳಿದ್ದು, ರಾತ್ರಿ ಪಾಳಯದಲ್ಲಿ ಪೊಲೀಸರು ಗಸ್ತು ಮಾಡದೆ ನಿರ್ಲಕ್ಷ್ಯ ತೋರಿದ ಕಾರಣ ಈ ಘಟನೆ ನಡೆದಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ರಾಯಲ್ಪಾಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಪ್ರವಾಹಕ್ಕೆ ಮುಳುಗಡೆಯಾಗಿದ್ದ ಅಂಗಡಿಗಳನ್ನು ದೋಚಿದ ಖದೀಮರು

    ಪ್ರವಾಹಕ್ಕೆ ಮುಳುಗಡೆಯಾಗಿದ್ದ ಅಂಗಡಿಗಳನ್ನು ದೋಚಿದ ಖದೀಮರು

    ಮಡಿಕೇರಿ: ಎಡಬಿಡದೆ ಸುರಿದ ಭಾರೀ ಮಳೆಗೆ ಕೊಡಗು ಜಿಲ್ಲೆಯ ಹಲವು ಪ್ರದೇಶ ತತ್ತರಿಸಿ ಹೋಗಿದೆ. ಈ ಭೀಕರ ಪ್ರವಾಹದ ನಡುವೆಯೂ ಕಳ್ಳರು ವಿರಾಜಪೇಟೆ ತಾಲೂಕಿನ ಗೋಣಿಕೊಪ್ಪಲು ಭಾಗದ 10ಕ್ಕೂ ಹೆಚ್ಚು ಅಂಗಡಿಗಳಿಗೆ ಕನ್ನ ಹಾಕಿದ್ದಾರೆ.

    ಒಂದೆಡೆ ಪ್ರವಾಹಕ್ಕೆ ಜನರು ಮನೆಮಠ ಕಳೆದುಕೊಂಡು ಕಂಗಾಲಾಗಿದ್ದರೆ, ಇನ್ನೊಂದೆಡೆ ಕಳ್ಳರು ಪ್ರವಾಹದಿಂದ ಲಾಭ ಪಡೆದಿದ್ದಾರೆ. ಪ್ರವಾಹಕ್ಕೆ ಮುಳುಗಡೆಯಾಗಿದ್ದ ಅಂಗಡಿಗಳನ್ನು ಟಾರ್ಗೆಟ್ ಮಾಡಿದ ಕಳ್ಳರು, ಗೋಣಿಕೊಪ್ಪಲು ಭಾಗದ 10ಕ್ಕೂ ಹೆಚ್ಚು ಅಂಗಡಿಗಳನ್ನು ದೋಚಿ ಪರಾರಿಯಾಗಿದ್ದಾರೆ.

    ಒಂದು ವಾರದಿಂದ ಗೋಣಿಕೊಪ್ಪಲು ಭಾಗದಲ್ಲಿ ಪ್ರವಾಹ ಉಂಟಾಗಿದ್ದ ಕಾರಣಕ್ಕೆ ಮಾಲೀಕರು ಅಂಗಡಿ ಕಡೆ ಹೋಗಿರಲಿಲ್ಲ. ಇದನ್ನೇ ನೋಡಿಕೊಂಡು ಸ್ಕೆಚ್ ಹಾಕಿದ ಕಳ್ಳರು ಅಂಗಡಿಗಳಿಗೆ ಕನ್ನ ಹಾಕಲು ಉಪಾಯ ಮಾಡಿದ್ದಾರೆ. ಜಲಾವೃತಗೊಂಡಿದ್ದ ಅಂಗಡಿಗಳಿಗೆ ನುಗ್ಗಿ ಕೈಗೆಸಿಕ್ಕಿದ್ದನ್ನೆಲ್ಲಾ ದೋಚಿ ಎಸ್ಕೇಪ್ ಆಗಿದ್ದಾರೆ. ಅಂದಾಜು ಒಂದು ಲಕ್ಷಕ್ಕೂ ಅಧಿಕ ಬೆಲೆ ಬಾಳುವ ವಸ್ತುಗಳನ್ನು ಹಾಗೂ 20 ಸಾವಿರಕ್ಕೂ ಹೆಚ್ಚು ನಗದು ಹಣವನ್ನು ಕಳವು ಮಾಡಿದ್ದಾರೆ.

    ಸದ್ಯ ಮಳೆ ಕಡಿಮೆಯಾಗಿ ಪ್ರವಾಹ ಇಳಿದಿರುವ ಹಿನ್ನೆಲೆ ಮಾಲೀಕರು ತಮ್ಮ ಅಂಗಡಿಗಳಿಗೆ ಹೋಗಿದ್ದಾಗ ಕಳ್ಳರ ಕೈಚಳಕ ಬೆಳಕಿಗೆ ಬಂದಿದೆ. ಬಳಿಕ ಈ ಬಗ್ಗೆ ಅಂಗಡಿ ಮಾಲೀಕರು ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.