Tag: ಅಂಕಿಅಂಶ

  • ಕೋವಿಡ್ ಸಾವಿನ ಸಂಖ್ಯೆಯನ್ನು ನಿಖರವಾಗಿ ನೀಡಲಾಗಿದೆ: ಕೇಂದ್ರ

    ಕೋವಿಡ್ ಸಾವಿನ ಸಂಖ್ಯೆಯನ್ನು ನಿಖರವಾಗಿ ನೀಡಲಾಗಿದೆ: ಕೇಂದ್ರ

    ನವದೆಹಲಿ: ಕೊರೊನಾ ಸಾವಿನ ಲೆಕ್ಕವನ್ನು ಕೇಂದ್ರ ಮುಚ್ಚಿಟ್ಟಿದೆ ಎಂಬ ಗಂಭೀರ ಆರೋಪದ ಬೆನ್ನಲ್ಲೆ, ಈ ಆರೋಪದಲ್ಲಿ ಹುರುಳಿಲ್ಲ ಎಂದು ಕೇಂದ್ರ ಸರ್ಕಾರ ತಳ್ಳಿ ಹಾಕಿದೆ.

    ರಾಜ್ಯಸಭೆಯಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಮನ್ಸುಖ್ ಮಾಂಡವೀಯ ಅವರು ಈ ಕುರಿತು ಉತ್ತರಿಸಿದ್ದು, ಕೋವಿಡ್-19 ಸಾವುಗಳನ್ನು ಮುಚ್ಚಿಡುವ ಆರೋಪಗಳನ್ನು ತಳ್ಳಿಹಾಕಿದರು. ಕೇಂದ್ರ ಸರ್ಕಾರ ರಾಜ್ಯಗಳು ಕಳುಹಿಸುವ ದತ್ತಾಂಶವನ್ನು ಸಂಗ್ರಹಿಸುತ್ತದೆ ಮತ್ತು ಪ್ರಕಟ ಮಾಡುತ್ತದೆ ಎಂದರು. ಇದನ್ನೂ ಓದಿ: ರಾಜ್ಯದಲ್ಲಿಂದು 1,653 ಕೊರೊನಾ ಕೇಸ್- 31 ಸಾವು, 2,572 ಡಿಸ್ಚಾರ್ಜ್

    ಭಾರತದಲ್ಲಿ ಕಾನೂನಾತ್ಮಕ ಮರಣ ನೋಂದಣಿ ವ್ಯವಸ್ಥೆಯನ್ನು ಹೊಂದಿದ್ದು, ಸಾಂಕ್ರಾಮಿಕ ರೋಗ ಮತ್ತು ಅದರ ನಿರ್ವಹಣೆಯ ತತ್ವಗಳ ಪ್ರಕಾರ ಕೆಲವು ಪ್ರಕರಣಗಳು ಪತ್ತೆಯಾಗುವುದಿಲ್ಲವಾದರೂ, ಸಾವುಗಳನ್ನು ತಪ್ಪಿಸಿಕೊಳ್ಳುವುದು ಅಸಂಭವವಾಗಿದೆ. ಇದರಲ್ಲಿ ಮರಣ ದರವನ್ನು ಸಹ ನಾವು ನೋಡಬಹುದಾಗಿದ್ದು, 2020ರ ಡಿಸೆಂಬರ್ 31 ರ ವರೆಗೆ ಮರಣದರ ಶೇ.1.45 ಇತ್ತು, 2021ರ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಅನಿರೀಕ್ಷಿತವಾಗಿ ಎರಡನೇ ಅಲೆ ಉತ್ತುಂಗಕ್ಕೆ ಏರಿಕೆಯಾಗಿದ್ದು, ಇದೀಗ ಮರಣ ದರ ಶೇ.1.34 ಇದೆ ಎಂದು ಸರ್ಕಾರ ಹೇಳಿದೆ.

    ತಳಮಟ್ಟದಿಂದಲೇ ದೈನಂದಿನ ಹೊಸ ಪ್ರಕರಣಗಳು ಮತ್ತು ಮರಣಗಳು ವರದಿಯಾಗುತ್ತಿದ್ದು, ಜಿಲ್ಲೆಗಳು ಒಟ್ಟು ಪ್ರಕರಣಗಳು ಮತ್ತು ಮರಣಗಳ ಸಂಖ್ಯೆಯನ್ನು ರಾಜ್ಯ ಸರ್ಕಾರಕ್ಕೆ ನೀಡುತ್ತಿವೆ. ಇದು ಕೇಂದ್ರ ಸರ್ಕಾರಕ್ಕೆ ನಿರಂತರವಾಗಿ ರವಾನೆಯಾಗುತ್ತದೆ. 2020ರ ಮೇ ಗೂ ಮೊದಲೇ ವರದಿಯಾದ ಸಾವುಗಳು ಮತ್ತು ಗೊಂದಲ ತಪ್ಪಿಸಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಭಾರತದಲ್ಲಿ ಕೋವಿಡ್-19 ಸಂಬಂಧಿತ ಸಾವುಗಳನ್ನು ಸೂಕ್ತ ರೀತಿಯಲ್ಲಿ ದಾಖಲಿಸಲು ಮಾರ್ಗಸೂಚಿ ಬಿಡುಗಡೆಮಾಡಿತ್ತು. ಎಲ್ಲಾ ಕೋವಿಡ್-19 ಮರಣಗಳನ್ನು ಸರಿಯಾಗಿ ದಾಖಲಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‍ಒ) ತನ್ನ ಐಸಿಡಿ-10 ಸಂಹಿತೆಯಡಿ ಮಾಡಿರುವ ಶಿಫಾರಸ್ಸಿನನ್ವಯ ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ ಐಸಿಎಂಆರ್ ಹೊರಡಿಸಿರುವ ಮಾರ್ಗಸೂಚಿಯನ್ನು ಭಾರತ ಅನುಸರಿಸುತ್ತಿದೆ ಎಂದು ಸ್ಪಷ್ಟಪಡಿಸಿದೆ.

  • ಕೊರೊನಾ ಅಂಕಿಅಂಶದಲ್ಲಿ ಚೀನಾವನ್ನೇ ಹಿಂದಿಕ್ಕಿದ ಮುಂಬೈ

    ಕೊರೊನಾ ಅಂಕಿಅಂಶದಲ್ಲಿ ಚೀನಾವನ್ನೇ ಹಿಂದಿಕ್ಕಿದ ಮುಂಬೈ

    ಮುಂಬೈ: ಕೊರೊನಾ ವೈರಸ್ ಸಾವಿನ ಸಂಖ್ಯೆ ಹಾಗೂ ಪಾಸಿಟಿವ್ ಪ್ರಕರಣಗಳಲ್ಲಿ ಮಹಾರಾಷ್ಟ್ರದ ರಾಜಧಾನಿ ಮುಂಬೈ ಕೊರೊನಾ ವೈರಸ್ ತವರು ಮನೆ ಚೀನಾವನ್ನೇ ಹಿಂದಿಕ್ಕಿದೆ.

    ಅಧಿಕೃತ ಮಾಹಿತಿಯ ಪ್ರಕಾರ, ಮಹಾರಾಷ್ಟ್ರದ ಮುಂಬೈನಲ್ಲಿ ಪ್ರಸ್ತುತ 85,724 ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಜೊತೆಗೆ ಸೋಂಕಿನಿಂದ 4,938 ಸಾವುಗಳು ಸಂಭವಿಸಿವೆ. ಹಾಗೇಯೆ ಚೀನಾದಲ್ಲಿ ಕೊರೊನಾ ಸೋಂಕಿನಿಂದ ಒಟ್ಟು 4,634 ಸಾವನ್ನಪ್ಪಿದರೆ, ಪ್ರಸ್ತುತ ಚೀನಾದಲ್ಲಿ 83,565 ಕೊರೊನಾ ಪಾಸಿಟಿವ್ ಪ್ರಕರಣಗಳು ಇವೆ. ಈ ಮೂಲಕ ಮುಂಬೈ ಚೀನಾವನ್ನೇ ಮೀರಿಸಿದೆ.

    ಸದ್ಯ ರಾಷ್ಟ್ರೀಯ ಮಾಧ್ಯಮಗಳ ವರದಿಯ ಪ್ರಕಾರ, ಚೀನಾದಲ್ಲಿ ಒಂದು ದಿನಕ್ಕೆ ಕೇವಲ ಒಂದಂಕಿ ಕೊರೊನಾ ಪ್ರಕರಣಗಳು ದಾಖಲಾಗುತ್ತಿವೆ. ಚೀನಾ ಸೋಂಕಿನಿಂದ ಬೇಗ ಗುಣಮುಖವಾಗುತ್ತಿದೆ. ಆದರೆ ಭಾರದಲ್ಲಿ ಸೋಂಕು ದಿನೇ ದಿನೇ ತನ್ನ ವ್ಯಾಪ್ತಿಯನ್ನು ವೃದ್ದಿಸಿಕೊಳ್ಳುತ್ತಿದ್ದು, ಮುಂಬೈನಲ್ಲಿ ಜುಲೈ 1ರಿಂದ ದಿನಾ ಸರಾಸರಿ 1,100 ಕೊರೊನಾ ಪ್ರಕರಣಗಳು ಬೆಳಕಿಗೆ ಬರುತ್ತಿವೆ.

    ಸದ್ಯ ಭಾರತದಲ್ಲಿ ಮಹಾರಾಷ್ಟ್ರ ಕೊರೊನಾ ಹಬ್ ಆಗಿ ಪರಿವರ್ತನೆಗೊಂಡಿದೆ. ದೇಶದಲ್ಲಿ ಇಲ್ಲೇ ಅತೀ ಹೆಚ್ಚು ಕೊರೊನಾ ಸೋಂಕು ದೃಢಪಟ್ಟಿದೆ. ಸದ್ಯ 2,11,987 ಪ್ರಕರಣಗಳೊಂದಿಗೆ, ಮಹಾರಾಷ್ಟ್ರ ಸೋಮವಾರ ಟರ್ಕಿ ದೇಶವನ್ನು ಮೀರಿಸಿದೆ. ಟರ್ಕಿಯಲ್ಲಿ 2,05,758 ಕೊರೊನಾ ಪ್ರಕರಣಗಳು ದಾಖಲಾಗಿದೆ. ಜೂನ್ 4ರಂದು ಮಹಾರಾಷ್ಟ್ರವು ಜರ್ಮನಿ (198,064) ಮತ್ತು ದಕ್ಷಿಣ ಆಫ್ರಿಕಾ (205,721)ವನ್ನು ಕೊರೊನಾ ಅಂಕಿ ಅಂಶದಲ್ಲಿ ಹಿಂದಿಕ್ಕಿತ್ತು.

    ಮಹಾರಾಷ್ಟ್ರದಲ್ಲಿ ಒಟ್ಟು ಕೊರೊನಾ ರೋಗಿಗಳ ಸಂಖ್ಯೆ 211,987 ಆಗಿದ್ದರೆ, ಸಾವಿನ ಸಂಖ್ಯೆ 9,026 ಆಗಿದೆ. ಇದರ ಜೊತೆಗೆ ಮಹಾರಾಷ್ಟ್ರದಲ್ಲಿ ಕೊರೊನಾದಿಂದ ಶೇ.67ರಷ್ಟು ಜನ ಗುಣಮುಖರಾಗಿದ್ದಾರೆ. ಸದ್ಯ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಕಾರಣ, ಮುಂಬೈನಲ್ಲಿ 3,520 ಹೊಸ ಬೆಡ್‍ಗಳ ವ್ಯವಸ್ಥೆ ಮಾಡಲಾಗಿದೆ. ಮಹಾಲಕ್ಷ್ಮಿ ಕುದುರೆ ಸವಾರಿ ಸ್ಥಳ, ದಹಿಸರ್, ಮುಲುಂಡ್ ಮತ್ತು ಬಾಂದ್ರಾ ಕುರ್ಲ ಕಾಂಪ್ಲೆಕ್ಸ್ ನಲ್ಲಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ಕೊಡಲು ಮಹಾರಾಷ್ಟ್ರದ ಸರ್ಕಾರ ಮುಂದಾಗಿದೆ.

  • ಆತ್ಮಹತ್ಯೆ ಮಾಡಿಕೊಳ್ಳೋದ್ರಲ್ಲಿ ಮಹಿಳೆಯರಿಗಿಂತ ಗಂಡಸರೇ ಮುಂದು

    ಆತ್ಮಹತ್ಯೆ ಮಾಡಿಕೊಳ್ಳೋದ್ರಲ್ಲಿ ಮಹಿಳೆಯರಿಗಿಂತ ಗಂಡಸರೇ ಮುಂದು

    – ನೇಣಿಗೆ ಮೊದಲ ಆದ್ಯತೆ, ವಿಷಕ್ಕೆ ಎರಡನೇ ಆದ್ಯತೆ
    – ಚಿಕ್ಕಬಳ್ಳಾಪುರದಲ್ಲಿ ಮೂರು ವರ್ಷದಿಂದ ಹೆಚ್ಚಿನ ಸಂಖ್ಯೆಯಲ್ಲಿ ಆತ್ಮಹತ್ಯೆ

    ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆ ಹೆಸರಿಗೆ ಮಾತ್ರ ಚಿಕ್ಕದಾದ್ರೂ ಆ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ.

    ಹೌದು ಕಳೆದ ಮೂರು ವರ್ಷದಿಂದ ಹೆಚ್ಚಿನ ಮಂದಿ ಆತ್ಮಹತ್ಯೆ ಮಾಡಿಕೊಳ್ತಿದ್ದು, ಇದು ಸ್ವತಃ ಜಿಲ್ಲಾಡಳಿತ, ಪೊಲೀಸ್ ಇಲಾಖೆಗೂ ಅಘಾತ ತಂದಿದೆ. ಅಂಕಿ ಅಂಶಗಳ ಪ್ರಕಾರ ಆತ್ಮಹತ್ಯೆ ಮಾಡಿಕೊಳ್ಳೋದ್ರಲ್ಲಿ ಗಂಡಸರು ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ರಾಜ್ಯ ರಾಜಧಾನಿ ಬೆಂಗಳೂರಿನಿಂದ ಕೂಗಳತೆ ದೂರದಲ್ಲಿರುವ ಚಿಕ್ಕಬಳ್ಳಾಪುರ ಜಿಲ್ಲೆ, ಅತಿವೇಗವಾಗಿ ಬೆಳೆಯುತ್ತಿರುವ ಜಿಲ್ಲೆಗಳಲ್ಲಿ ಒಂದು. ಸಿಲ್ಕ್ ಮಿಲ್ಕ್ ಹೂ ಹಣ್ಣು ತರಕಾರಿ ಬೆಳೆಗೆ ಖ್ಯಾತಿಯಾಗಿರು ಚಿಕ್ಕಬಳ್ಳಾಪುರದಲ್ಲಿ ಈಗ ಆತ್ಮಹತ್ಯೆ ವಿಚಾರಗಳಿಗೆ ಕುಖ್ಯಾತಿಯಾಗುತ್ತಿದೆ.

    ಕೇವಲ ಮೂರು ವರ್ಷಗಳಲ್ಲಿ ನೇಣು ಹಾಕಿಕೊಂಡು 287 ಮಂದಿ, ವಿಷ ಸೇವಿಸಿ 146 ಮಂದಿ, ನೀರಿನಲ್ಲಿ ಮುಳುಗಿ 19 ಮಂದಿ, ಬೆಂಕಿ ಹಚ್ಚಿಕೊಂಡು 27 ಮಂದಿ ಸೇರಿದಂತೆ ಒಟ್ಟು 489 ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 489 ಮಂದಿಯಲ್ಲಿ 159 ಮಹಿಳೆಯರಾದರೆ 330 ಮಂದಿ ಪುರುಷರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಸ್ವತಃ ಪೊಲೀಸ್ ಇಲಾಖೆಯ ಅಂಕಿ ಅಂಶಗಳು ತಿಳಿಸಿವೆ.

    ಆತ್ಮಹತ್ಯಗೆ ಹಲವು ಕಾರಣಗಳು!
    ಆತ್ಮಹತ್ಯೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದು ಸ್ವತಃ ಚಿಕ್ಕಬಳ್ಳಾಪುರ ಪೊಲೀಸ್ ಇಲಾಖೆಗೂ ಅಘಾತ ತಂದಿದೆ. ಇದರಿಂದ ತಂದೆ ತಾಯಿಗಳು ತಮ್ಮ ಮಕ್ಕಳ ಬಗ್ಗೆ ಉತ್ತಮ ಸಂಸ್ಕೃತಿಯನ್ನು ರೂಡಿಸುವಂತೆ ಸ್ವತಃ ಚಿಕ್ಕಬಳ್ಳಾಪುರ ಎಸ್ಪಿ ಅಭಿನವ್ ಖರೆ ಮನವಿ ಮಾಡಿದ್ದಾರೆ. ಜಿಲ್ಲೆಯಲ್ಲಿ ದಿನೇ ದಿನೇ ಹೆಚ್ಚಾಗಿ ಯುವ ಸಮುದಾಯದ ಕೆಲವರು ಆತ್ಮಹತ್ಯೆಗೆ ಶರಣಾಗುತ್ತಿರುವ ಹಿನ್ನಲೆ ಆತಂಕ ವ್ಯಕ್ತಪಡಿಸಿರುವ ಚಿಕ್ಕಬಳ್ಳಾಪುರದ ಖ್ಯಾತ ಮನೋರೋಗ ತಜ್ಞ ಹಾಗೂ ಸರ್ಕಾರಿ ವೈದ್ಯ ಕೀಶೋರ್ ಕುಮಾರ್, ಮಾನಸಿಕ ರೋಗದ ಲಕ್ಷಣಗಳು ಕಂಡು ಬಂದ ತಕ್ಷಣ ಸೂಕ್ತ ಚಿಕಿತ್ಸೆ ನೀಡಿದ್ರೆ ಆತ್ಮಹತ್ಯೆಯಂತಹ ಪ್ರಕರಣಗಳು ಹೆಚ್ಚಾಗಲ್ಲ ಅಂತಾರೆ. ಆತ್ಮಹತ್ಯೆಗೆ ಶಿಕ್ಷಣದ ಕೊರತೆ, ಬಡತನ, ಹಣಕಾಸಿನ ತೊಂದರೆ, ಮಾದಕ ವಸ್ತುಗಳ ಚಟ, ಅತಿಯಾದ ಮೊಬೈಲ್ ಬಳಕೆ ಸೇರಿದಂತೆ ಹಲವು ಕಾರಣಗಳು ಕಂಡು ಬರುತ್ತಿದ್ದು ಆರಂಭದಲ್ಲೆ ಖಿನ್ನತೆಗೆ ಒಳಗಾದವರಿಗೆ ಕೌನ್ಸಿಲಿಂಗ್ ನೀಡಿದರೆ ಆತ್ಮಹತ್ಯೆ ಪ್ರಯತ್ನಗಳಿಂದ ದೂರ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ.

  • ಉಪಚುನಾವಣೆ ಅಬ್ಬರದಲ್ಲಿ ಜಪ್ತಿಯಾದ ವಸ್ತುಗಳ ಅಂಕಿಅಂಶ

    ಉಪಚುನಾವಣೆ ಅಬ್ಬರದಲ್ಲಿ ಜಪ್ತಿಯಾದ ವಸ್ತುಗಳ ಅಂಕಿಅಂಶ

    ಬೆಂಗಳೂರು: ಗುರುವಾರದ ಮತದಾನಕ್ಕೆ ಚುನಾವಣಾ ಆಯೋಗ ಸಕಲ ರೀತಿಯಲ್ಲೂ ಸಜ್ಜಾಗಿದೆ. ಉಪಚುನಾವಣೆ ನಡೆಯೋ 15 ಕ್ಷೇತ್ರಗಳಲ್ಲಿ ರಜೆ ಘೋಷಿಸಲಾಗಿದೆ. ಚುನಾವಣಾ ಆಯೋಗದ ಮಾಹಿತಿ ಪ್ರಕಾರ 15 ಕ್ಷೇತ್ರಗಳ ಮತದಾರರು, ಭದ್ರತಾ ಸಿಬ್ಬಂದಿ, ಎಷ್ಟು ಕೋಟಿ ಹಣ ಸೀಜ್ ಮಾಡಲಾಗಿದೆ ಅನ್ನೋದರ ಮಾಹಿತಿ ಇಲ್ಲಿದೆ.

    15 ಕ್ಷೇತ್ರದ ಅಂಕಿಅಂಶಗಳು:
    ಉಪಚುನಾವಣೆ ನಡೆಯುತ್ತಿರುವ 15 ಕ್ಷೇತ್ರದಲ್ಲಿ ಒಟ್ಟು 165 ಮಂದಿ ಸ್ಪರ್ಧೆಯಲ್ಲಿದ್ದಾರೆ. ಇದರಲ್ಲಿ ಶಿವಾಜಿನಗರ ಕ್ಷೇತ್ರದಲ್ಲಿಯೇ 19 ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. 15 ಕ್ಷೇತ್ರಗಳಲ್ಲಿ ಒಟ್ಟು 37,82,681 ಮತದಾರರು ಇದ್ದಾರೆ. ಅದರಲ್ಲಿ 18,52,027 ಪುರುಷ ಮತದಾರರು, 19,25,529 ಮಹಿಳಾ ಮತದಾರರು ಇದ್ದಾರೆ. ಎಲ್ಲಾ ಕ್ಷೇತ್ರಗಳನ್ನು ಸೇರಿಸಿ ಒಟ್ಟು 4,185 ಮತಗಟ್ಟೆಗಳಿವೆ. ಸುಮಾರು 42,509 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅವರಲ್ಲಿ 11,241 ಪೊಲೀಸರು, 2,511 ಸಿಆರ್‌ಪಿಎಫ್‌ ಸಿಬ್ಬಂದಿ, 900 ಸೂಕ್ಷ್ಮ ವೀಕ್ಷಕರ ನಿಯೋಜನೆ ಮಾಡಲಾಗಿದೆ.

    ಜಪ್ತಿಯಾದ ವಸ್ತು, ನಗದು ಎಷ್ಟು?
    ಎಲ್ಲಾ ಕ್ಷೇತ್ರಗಳನ್ನು ಸೇರಿಸಿ ಒಟ್ಟು 10.70 ಕೋಟಿ ರೂ. ಮೌಲ್ಯದ ಅಕ್ರಮ ವಸ್ತುಗಳನ್ನು ಚುನಾವಣಾ ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಇದರೊಂದಿಗೆ 4.16 ಕೋಟಿ ರೂ. ನಗದು, 4.58 ಕೋಟಿ ಮೌಲ್ಯದ ಮದ್ಯ, 1.96 ಕೋಟಿ ಮೌಲ್ಯದ ಇತರೆ ವಸ್ತುಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಹಾಗೆಯೇ ಸುಮಾರು 4,950 ರೂ. ಮೌಲ್ಯದ ಡ್ರಗ್ಸ್ ಕೂಡ ಚುನಾವಣಾ ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಈ ಸಂಬಂಧ 197 ನೀತಿ ಸಂಹಿತೆ ಎಫ್‍ಐಆರ್ ದಾಖಲಿಸಲಾಗಿದೆ.

    ಕೆ.ಆರ್ ಪೇಟೆ, ರಾಣೇಬೆನ್ನೂರು, ಹಿರೇಕೆರೂರು, ಗೋಕಾಕ್, ವಿಜಯನಗರ, ಚಿಕ್ಕಬಳ್ಳಾಪುರ, ಶಿವಾಜಿನಗರ, ಮಹಾಲಕ್ಷ್ಮಿ ಲೇಔಟ್, ಯಶವಂತಪುರ, ಕೆ.ಆರ್ ಪುರಂ, ಹುಣಸೂರು, ಕಾಗವಾಡ, ಅಥಣಿ, ಯಲ್ಲಾಪುರ, ಹೊಸಕೋಟೆಯಲ್ಲಿ ಗುರುವಾರ ಈ 15 ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯಲಿದ್ದು, ಡಿ. 9ಕ್ಕೆ ಫಲಿತಾಂಶ ಹೊರಬೀಳಲಿದೆ.