ಸಿಡ್ನಿ ಟೆಸ್ಟ್ ಪಂದ್ಯಕ್ಕೆ ಮಂದ ಬೆಳಕು, ಮಳೆ ಅಡ್ಡಿ – ಫಾಲೋಆನ್ ಭೀತಿಯಲ್ಲಿ ಆಸೀಸ್

ಸಿಡ್ನಿ ಟೆಸ್ಟ್: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದ 3ನೇ ದಿನದಾಟದಲ್ಲಿ ಟೀಂ ಇಂಡಿಯಾ ಮೈಲುಗೈ ಸಾಧಿಸಿದ್ದು, ಆದರೆ ಮಂದ ಬೆಳಕು ಹಾಗೂ ಕೆಲ ಸಮಯದ ಹಂತದಲ್ಲಿ ಸುರಿದ ಮಳೆಯ ಪರಿಣಾಮ 3ನೇ ದಿನದಾಟ ರದ್ದಾಗಿದೆ.

ಭಾರತದ 622 ರನ್‍ಗಳ ಬೃಹತ್ ಮೊತ್ತಕ್ಕೆ ಉತ್ತರವಾಗಿ ಇನ್ನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ ನಲ್ಲಿ 83.3 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 236 ರನ್ ಗಳಿಸಿ ಫಾಲೋಆನ್ ಎದುರಿಸುವ ಆತಂಕದಲ್ಲಿದೆ.

10 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 28 ರನ್ ಗಳಿಸಿ 2ನೇ ದಿನದಾಟ ಅಂತ್ಯಗೊಳಿಸಿದ್ದ ಆಸೀಸ್‍ಗೆ 3ನೇ ದಿನದಾಟದಲ್ಲಿ ಉತ್ತಮ ಆರಂಭ ಲಭಿಸಿತ್ತು. ದಿನದ ಮೊದಲ ಅವಧಿಯಲ್ಲಿ ಟೀಂ ಇಂಡಿಯಾ ಬೌಲರ್ ಗಳು ವಿಕೆಟ್ ಪಡೆಯಲು ಪರಿಣಾಮಕಾರಿಯಾಗಲಿಲ್ಲ. ಆದರೆ 2ನೇ ಅವಧಿಯಲ್ಲಿ ಕುಲ್ದೀಪ್ ಯಾದವ್, ಜಡೇಜಾ ಉತ್ತಮ ಬೌಲಿಂಗ್ ನಡೆಸಿ ಆಸೀಸ್ ಬ್ಯಾಟ್ಸ್ ಮನ್‍ಗಳ ವಿಕೆಟ್ ಪಡೆದರು.

ಆಸೀಸ್ ಪರ ಹ್ಯಾರಿಸ್ 78 ರನ್, ಲ್ಯಾಬುಶಾನೆ 38 ರನ್, ಖುವಾಜಾ 27 ರನ್, ಹೇಡ್ 20 ರನ್ ಗಳಿಸಲಷ್ಟೇ ಶಕ್ತರಾದರು. ಆಸೀಸ್ ನೆಲದಲ್ಲಿ ಸರಣಿ ಗೆಲುವಿನ ಗುರಿ ಹೊಂದಿರುವ ಟೀಂ ಇಂಡಿಯಾ ಅಂತಿಮ ಟೆಸ್ಟ್ ಪಂದ್ಯವನ್ನು ಗೆಲ್ಲುವ ನಿರೀಕ್ಷೆಯಲ್ಲಿದೆ. ಆದರೆ ಮಳೆ ಹಾಗೂ ಮಂದ ಬೆಳಕು ಪಂದ್ಯದ ಫಲಿತಾಂಶ ಮೇಲೆ ಪ್ರಭಾವ ಬೀರುವ ಆತಂಕವನ್ನು ಎದುರಿಸಿದೆ.

3ನೇ ದಿನದಾಟದ ಅಂತ್ಯಕ್ಕೆ ಆಸೀಸ್ 386 ರನ್‍ಗಳ ಭಾರೀ ರನ್‍ಗಳ ಹಿನ್ನಡೆಯಲ್ಲಿದ್ದು, ಫಾಲೋಆನ್ ತಪ್ಪಿಸಿಕೊಳ್ಳಲು ಇನ್ನು 186 ರನ್ ಗಳಿಸಬೇಕಾದ ಅಗತ್ಯವಿದೆ. ಸದ್ಯ ಆಸೀಸ್‍ನ ಹ್ಯಾಂಡ್ಸ್ ಕೋಮ್ 28 ರನ್, ಕಮಿನ್ಸ್ 25 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಭಾರತದ ಪರ ಕುಲ್ದೀಪ್ ಯಾದವ್ 3 ವಿಕೆಟ್ ಪಡೆದರೆ, ರವೀಂದ್ರ ಜಡೇಜಾ 2 ವಿಕೆಟ್ ಹಾಗೂ ಮೊಹಮ್ಮದ್ ಶಮಿ 1 ವಿಕೆಟ್ ಪಡೆದಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *